ಕವಿನಿನಿಯಲ್ಲಿನ ಸವಿ ಸವಿ ನೆನಪು (ಭಾಗ ೮)- ಶಿವಕುಮಾರ್ ಬಾಣಾವರಈ ಮಾಣಿ ಆಣೆಕಟ್ಟೆಯ ಹಿನ್ನೀರಿನಿಂದ ಮುಳುಗಡೆ ಆಗಲಿರುವ ಪ್ರದೇಶದ ಜನರಿಗೆ ಕೊನೆಯದಾಗಿ ನೋಟೀಸು ಜಾರಿ ಮಾಡುವ ಕೆಲಸವನ್ನು ನನಗೆ ವಹಿಸಿದಾಗ ನನ್ನಲ್ಲಿಯಾದ ನೋವು,ಬೇಸರ ಒಬ್ಬಂಟಿಯಾಗಿಯೇ ಅನುಭವಿಸಿದ್ದ ತಮ್ಮ ಅನುಭವದ ಬುತ್ತಿಯನ್ನು ಲೇಖಕ ಶಿವಕುಮಾರ್ ಬಾಣಾವರ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ಮುಂದೆ ಓದಿ…

ವಾರಾಹಿ ಯೋಜನೆಯ ಅಣೆಕಟ್ಟು ವಿಭಾಗದಲ್ಲಿ ಮುಖ್ಯ ಕೆಲಸ ಕಾರ್ಯಗಳೆಲ್ಲಾ ಮುಗಿಯುತ್ತಾ ಬಂದಿದ್ದವು. ಹಾಗಾಗಿ ಕಛೇರಿಯಲ್ಲಿ ಅಂಥಾ ಕೆಲಸದ ಒತ್ತಡವೇನೂ ಇರಲಿಲ್ಲ. ಈ ಮಧ್ಯೆ ಮಾಣಿ ಅಣೆಕಟ್ಟೆಯ ನಿರ್ಮಾಣ ಕಾರ್ಯ ಪೂರ್ತಿಯಾಗಿದ್ದರಿಂದ ಮಾಣಿ ಜಲಾಶಯದಲ್ಲಿ ನೀರನ್ನು ಹಂತ ಹಂತವಾಗಿ ಸಂಗ್ರಹಿಸುವ ಕಾರ್ಯಕ್ಕೆ ಒತ್ತು ಕೊಡಲಾಗಿತ್ತು. ಈ ಅಣೆಕಟ್ಟೆಯ ಹಿನ್ನೀರಿನಿಂದ ಮುಳುಗಡೆ ಆಗಲಿರುವ ಪ್ರದೇಶದ ಜನರಿಗೆ ಕೊನೆಯದಾಗಿ ನೋಟೀಸು ಜಾರಿ ಮಾಡುವ ಕೆಲಸವನ್ನು ನನಗೂ ಸ್ವಲ್ಪ ದಿನ ವಹಿಸಲಾಗಿತ್ತು. ಆದ್ದರಿಂದ ಅವರ ಊರು, ಮತ್ತವರ ಹೆಸರು ಹಿಡಿದು ಜೀಪಿನಲ್ಲಿ ಹೋದಾಗ:

“ಹೋ… ಹೋ… ಬನ್ನೀ ಸಾಹೇಬ್ರೇ… ಬನ್ನಿ… ಮತ್ತೇನ್ ಸುದ್ದಿ ತಂದ್ರಿ?”

“ಏನಿಲ್ಲ… ನೋಡಿ ಇವ್ರೇ… ಈ ವರ್ಷದ ಮಳೆಗಾಲಕ್ಕೆ ಮಾಣಿ ಜಲಾಶಯದಲ್ಲಿ ನೀರು ನಿಲ್ಸೋರಿದೀವಿ. ಅದಕ್ಕೆ…”

“ಎಚ್ಚರಿಸಿ ಹೋಗಲಿಕ್ಕೆ ಬಂದಿದ್ದಾ?”

“ಹೌದು… ಈ ನೋಟೀಸು ತಗೊಂಡು, ಇಲ್ಲೊಂದು ಸಹಿ ಹಾಕಿ”

“ನಾನು ಸಹಿ ಹಾಕೋದಿಲ್ಲ. ಇಲ್ಲಿ ಕೊಡಿ ಆ ನೋಟೀಸು”. ಎಂದು ಕೈಗೆ ತೆಗೆದುಕೊಂಡು, “ಎಲ್ಲಾ ಮುಳುಗಿಸಿ ಆಯ್ತಲ್ಲ. ಇನ್ನೆಂಥಾ ಉಳಿದಿದೆ ನಮಗೆ. ನೋಡಿ ಸಾಹೇಬ್ರೇ… ಇಂಥಾ ಇನ್ನೂ ಹತ್ತು ನೋಟೀಸು ಕೊಟ್ರೂ, ನಾ ಮಾತ್ರ ಈ ಜಾಗ ಖಾಲಿ ಮಾಡಲ್ಲ. ನನ್ನೀ ಜುಟ್ಟು ಅಣೆಕಟ್ಟೆ ನೀರಿನಲ್ಲೇ ಮುಳುಗೋವರೆಗೂ ಸೈ… ನಾನು ಇಲ್ಲೇ ಇರ್ತೆ”.

“ನೋಡಿ, ನೀವು ತಿಳಿದೋರು, ಹಾಗೆಲ್ಲಾ ಮಾತಡಬಾರ್ದು”.

“ಯಾಕ್ ಮಾತಾಡಬಾರದು ಸಾಹೇಬ್ರೇ? ನಾವು ವಂಶ ಪಾರಂಪರ್ಯವಾಗಿ ಹುಟ್ಟಿ ಬೆಳೆದು ಬಾಳಿದ ಮನೆ ಮಠ ತೊರೆದು ಹೋಗ್ರಿ ಅಂದ್ರೆ ಹೇಗ್ರೀ ಸಾಹೇಬ್ರೇ ಹೋಗೋದು?” ಅಂತ ಅಳಲಿಕ್ಕೇ ಪ್ರಾರಂಭಿಸಿದರು. ಅವರನ್ನು ಸಮಾಧಾನ ಮಾಡಿ ಹೊರಡಬೇಕಾದರೆ ಅರ್ಧ ಗಂಟೆ ಹಿಡೀತು.

ಫೋಟೋ ಕೃಪೆ : Bangalore Mirror

ಇನ್ನೊಂದು ಮನೆ ಮುಂದೆ ಹೋಗಿ ನಿಂತೆ. ವಯಸ್ಸಾದ ಅಜ್ಜಿಯೊಬ್ಬರು ಹೊರಬಂದು ನಮ್ಮನ್ನು ಸ್ವಾಗತಿಸಿ ಕೂರೋದಕ್ಕೆ ಹೇಳಿ “ನಿಮಗೆ ತಣ್ಣಗಿರೋದು ಅಗುತ್ತಾ? ಬಿಸಿ ಇರೋದು ಆಗುತ್ತಾ?” ಅಂತ ಕೇಳಿದರು. ನನಗೆ ಅದರ ತಲೆಬುಡ ಅರ್ಥ ಆಗ್ಲಿಲ್ಲ. ನಮ್ಮ ಡ್ರೈವರ್ ನನ್ನ ಅನುಮಾನ ಪರಿಹರಿಸಿದ. “ನೀವು ಕಾಫಿ ಟೀ ತೊಗೋತೀರೋ? ಅಥವಾ ಶರಬತ್ತು ಅಂಥದ್ದೇನಾದರೂ ತೊಗೋತೀರೋ?” ಅಂದ. ಏಪ್ರಿಲ್ – ಮೇ ತಿಂಗಳ ಬಿಸಿಲು ಇದ್ದಿದ್ದರಿಂದ “ತಣ್ಣಗಿರೋದನ್ನೇ ಕೊಡೀಯಮ್ಮಾ” ಅಂದೆ. ಒಳ ಹೋದವರು ಎರಡೇ ನಿಮಿಷದಲ್ಲಿ ಲೋಟಗಳ ಸಮೇತ ಹೊರಬಂದರು. ಮಾವಿನ ಹಣ್ಣಿನ ಶರಬತ್ತು ತುಂಬಾ ಚೆನ್ನಾಗಿತ್ತು.

ಶರಬತ್ತು ಖಾಲಿ ಮಾಡಿ ನೋಟೀಸೊಂದನ್ನು ಅವರ ಕೈಗಿತ್ತು “ಇದು ಕೊನೇ ಎಚ್ಚರಿಕೆ. ಇಲ್ಲಿಂದ ನೀವು ಜಾಗ ಖಾಲಿ ಮಾಡಲೇಬೇಕು. ದಯವಿಟ್ಟು ನಿಮ್ಮ ಮಕ್ಕಳಿಗೆ ಹೇಳಿಬಿಡಿ” ಅಂದೆ. “ಸಾಹೇಬ್ರೆ ಆ ಪರಿಹಾರದ ಹಣ ಕೈಗೆ ಬರ್ತಿದ್ಹಾಗೆ, ಒಂದಾಗಿದ್ದ ಮಕ್ಕಳೆಲ್ಲ ದಾಯಾದಿಗಳಾಗಿ ಬಿಟ್ರು. ಈಗ ಯಾರಿಗೂ ಬೇಡವಾದ ವಸ್ತು ಅಂದ್ರೆ ನಾನೇ. ಆದ್ರೆ ಕೊನೇ ಮಗ ಈ ವಾರದಲ್ಲಿ ಬಂದು ಕರ್ಕೊಂಡು ಹೋಗ್ತೇನೆ ಅಂದಿದ್ದಾನೆ. ಅವನ ಭರವಸೆ ಮೇಲೆ ಇನ್ನೂ ಉಸಿರು ಹಿಡ್ಕೊಂಡು ಇದೇನೆ”. ಅಂತ ಅಳೋದಕ್ಕೆ ಶುರುಮಾಡಿದರು. ಸಮಾಧಾನ ಮಾಡಿ ಹೊರಬಂದೆ. ಹಿಂದೆಯೇ ಹೊರಬಂದ ಅಜ್ಜಿ “ನಾನು ಹೆಚ್ಚಿಗೆ ಓದಿಲ್ಲ. ಆದರೂ ಮನಸ್ಸಿಗೆ ಬಂದದ್ದನ್ನ ಮಾತ್ರ ಹೇಳಿಬಿಡ್ತೇನೆ. ನಾವು ಮನುಷ್ಯರು, ಇವತ್ತು ಇರ್ತೇವೆ. ನಾಳೆ ಸಾಯ್ತೇವೆ. ಆದ್ರೆ ಆ ಹಲಸಿನ ಮರ, ಈ ಮಾವಿನ ಮರ, ಆ ನೇರಳೆ ಮರ ಇವೆಲ್ಲಾ ಐದಾರು ತಲೆಮಾರನ್ನ ಕಾಪಾಡ್ತಾವೆ. ಇವನ್ನೆಲ್ಲ ಮುಳುಗಿಸಿ ಹೋಗೋದಿದೆಯಲ್ಲಾ, ಇದೇ ಸಂಕಟದ ಮಾತು”. ಅಂತ್ಹೇಳಿ ಸೆರಗನ್ನು ಬಾಯಿ ಹತ್ತಿರ ತಂದುಕೊಂಡರು. ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗದೆ ಮುಂದಿನ ಮನೆಯತ್ತ ಹೊರಟೆವು.

ಫೋಟೋ ಕೃಪೆ : theatlantic

ಹೀಗೆ ಒಬ್ಬೊಬ್ಬರ ಮನೆಯಲ್ಲೂ ಒಂದೊಂದು ತರನಾದ ಸಂಗತಿಗಳು. ಒಂದು ಕಡೆ ವೃತ್ತಿ ಇನ್ನೊಂದು ಕಡೆ ಮಾನವ ಸಂಬಂಧಿ ಭಾವನೆಗಳು. ಒಮ್ಮೊಮ್ಮೆ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಮೌನ ವಹಿಸುತ್ತಿದ್ದೆ.

ಅಣೆಕಟ್ಟೆಯ ನಿರ್ಮಾಣ ಮಳೆಯನ್ನು ಕಡಿಮೆ ಮಾಡಿತು. ಇಲ್ಲಿಂದ ಹಳ್ಳಿ ತೊರೆದು ಹೋದ ಜನ ಹೊಸ ಸ್ಥಳಕ್ಕೆ ಹೊಂದಿಕೊಳ್ಳಲಾರದೆ ಪಾಡು ಪಡುವ ಸುದ್ದಿ ಬಂದು ನಮ್ಮನ್ನು ಘಾಸಿಗೊಳಿಸಿತು. ಈ ಪ್ರದೇಶದಲ್ಲಿ ಮುಳುಗಡೆ ಆಗದೆ ಉಳಿದ ಸಹಸ್ರ ಜನ ಯಾವ ಸೌಲಭ್ಯವೂ ಇಲ್ಲದೆ ಇಲ್ಲಿ ಕಷ್ಟ ಪಡುವುದನ್ನು ನಾನು ಕಂಡೆ. ಯೋಜನೆಯಲ್ಲಿ ಒಂದಲ್ಲಾ ಒಂದು ಕಾಮಗಾರಿಯಲ್ಲಿ ತೊಡಗಿ ಕೊಂಡವರು ನೆಮ್ಮದಿಯಿಂದ ಇದ್ದರೆ, ಇಲ್ಲಿಂದ ಹೊರಟು ಹೋದ ಜನ ಹಲವು ಜಂಜಡಗಳಿಗೆ ಬಲಿಯಾದರು. ಅವರ ಸಾಂಸಾರಿಕ ಬದುಕು ಹಳಿ ತಪ್ಪಿತು. ಸಂಬಂಧಗಳು ಛಿದ್ರವಾದವು. ಹೊಸ ಸಮಸ್ಯೆಗಳು ತಲೆ ಎತ್ತಿದವು. ಈ ಯೋಜನೆ ಹೊರಗಿನಿಂದ ನೋಡಲು ಸುಂದರ ಎನಿಸಿದರೂ, ಒಳಗೆ ಇದು ಕಿತ್ತು ತಿನ್ನುವ ಒಂದು ಕೆಂಪು ಕುರುವಾಗಿ ಪರಿಣಮಿಸಿದ್ದನ್ನು ನಾನು ಗಮನಿಸಿದೆ.

ಉಡುಪಿ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಕುಂದಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಸುಮಾರು ಹದಿನೈದು ಮೈಲಿದೂರಲ್ಲಿ ಇರುವ ಹೊಸಂಗಡಿ ಪಟ್ಟಣದಿಂದ ಎರಡು ಮೈಲಿಗಳಷ್ಟು ದೂರದಲ್ಲಿದೆ. ಮೆಟ್ಕಲ್ ಗುಡ್ಡ. ಪ್ರಕೃತಿಯ ಮಡಿಲೊಳಗೆ ಒಯ್ಯಾರದಲ್ಲಿ ಅಡಗಿ ಕುಳಿತಿದೆ . ನೂರಾರು ವರ್ಷದ ಇತಿಹಾಸವಿರುವ ಸೊಬಗಿನ ‘ಮೆಟ್ಕಲ್ ಗುಡ್ಡ’.

ಪಶ್ಚಿಮಘಟ್ಟದ ಮೇರು ಸ್ಥಳದಲ್ಲಿ ಸುಮಾರು ಎರಡು ಸಾವಿರ ಅಡಿಗೂ ಎತ್ತರದಲ್ಲಿರುವ ಇಲ್ಲಿಗೆ ಬರಲು ಯಾವುದೇ ದಾರಿಯ ವ್ಯವಸ್ಥೆ ಇಲ್ಲ. ಎತ್ತರದ ಮೆಟ್ಟಿಲುಗಳಿಂದ ಕೂಡಿದ ಈ ಜಾಗಕ್ಕೆ ಆಡು ಮಾತಿನಂತೆ ಪ್ರಕೃತಿ ನಿರ್ಮಿತ ಮೆಟ್ಟಿಲುಗಳ ಮೇಲೆ ಬರುವುದರಿಂದಲೋ ಏನೋ ಮೆಟ್ಕಲ್ ಗುಡ್ಡ ಎನ್ನುವ ಹೆಸರು ಬಂದಿರಲೂ ಸಾಕು.

ಕುಂದಾಪುರ ತಾಲೂಕಿನ ‘ಗೆರ್ಸಿಕಲ್ಲು’ ಎಂಬ ಪುಟ್ಟ ಗ್ರಾಮದಿಂದ ಈ ಗುಡ್ಡವೇರಲು ಕಡಿದಾದ ಮೆಟ್ಟಿಲುಗಳಿವೆ. ಬಾಗಿಮನೆಯಿಂದ ಕಚ್ಚಾ ರಸ್ತೆಯಿಂದ ಸಣ್ಣ ವಾಹನಗಳು ಸಂಚರಿಸಬಹುದು.
ಇದೇ ಗುಡ್ಡದ ಮೇಲೆ ಪಡುವಣ ದಿಕ್ಕಿನಲ್ಲಿ ಉದ್ಬವ ಶ್ರೀ ಮಹಾ ಗಣಪತಿ ಇದೆ. ಹಾಗೆಯೇ ನಾಗ ದೇವರ ವಿಗ್ರಹವಿದೆ. ಪರ್ವತದ ಮೇಲಿನ ಈ ದೇಗುಲಗಳಿಗೆ ಗ್ರಾಮೀಣ ಭಾಗದ ಜನ ನಡೆದುಕೊಳ್ಳುತ್ತಾರೆ.
ದೇವಸ್ಥಾನದ ದಕ್ಷಿಣ ಭಾಗದ ಬಾವಿಯಲ್ಲಿ ಕೈಗೆ ಸಿಗುವಷ್ಟು ಎತ್ತರದಲ್ಲಿ ನೀರಿದೆ. ಎಷ್ಟೇ ನೀರು ತೆಗೆದರೂ ನೀರು ಖಾಲಿ ಆಗುವುದಿಲ್ಲ. ಇಂತಹ ಗುಡ್ಡದ ಪ್ರದೇಶದಲ್ಲಿಯೂ ಸದಾ ಕಾಲವೂ ನೀರಿರುವುದು ವಿಶೇಷ .

ದಕ್ಷಿಣ ಭಾರತವನ್ನಾಳಿದ ರಾಜರುಗಳಲ್ಲಿ ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸನಾದ ಮೂರನೇ ಶ್ರೀರಂಗರಾಯರು ವೆಲ್ಲೊರಿನಿಂದ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಜಾಪುರದ ಸುಲ್ತಾನರಿಂದ ಪರಾಭಗೊಂಡು ಶಿವಪ್ಪ ನಾಯಕರಲ್ಲಿ ಆಶ್ರಯವನ್ನು ಬಯಸಿದ್ದರು, ಸಮರ್ಥ ಆಡಳಿತಗಾರನಾದ ಕೆಳದಿಯ ಶಿವಪ್ಪ ನಾಯಕರು ೧೬೪೫ ರಲ್ಲಿ ಸಿಂಹಾಸನವನ್ನೇರಿದ್ದರು , ೧೬೪೫ ರಿಂದ ೧೬೬೦ ರ ವರೆಗೆ ಸುಭದ್ರವಾದ ಆಡಳಿತ ನಡೆಸಿದ ಕೆಳದಿಯ ಶಿವಪ್ಪ ನಾಯಕರು, ೧೬೫೩ ರಲ್ಲಿ ಪೋರ್ಚುಗೀಸರ ಹುಟ್ಟಡಗಿಸಿ ಮಂಗಳೂರು, ಕುಂದಾಪುರ ಮತ್ತು ಹೊನ್ನಾವರ ಬಂದರುಗಳನ್ನು ವಶಪಡಿಸಿಕೊಂಡು ಉತ್ತರದ ತುಂಗ ಭದ್ರೆಯಿಂದ, ದಕ್ಷಿಣದ ಕಾಸರಗೋಡಿನವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಬೆಕಲ ಕೋಟೆ, ಚಂದ್ರಗಿರಿ ಕೋಟೆ, ಮೆಟ್ಕಲ್ ಗುಡ್ಡದ ಕೋಟೆ, ಹೊಸಂಗಡಿಯ ಕೋಟೆ ಕೆರೆ ಆನೆ ಕುದುರೆಗಳ ಕಲ್ಲಿನ ಅರವಟ್ಟಿಗೆಗಳು, ಅವುಗಳನ್ನು ಕಟ್ಟುವ ಕಂಬಗಳನ್ನು ಈಗಲೂ ಕಾಣಬಹುದು. ಹೀಗೆ ಹಲವಾರು ವಿಜಯದ ಸಂಕೆತಗಳನ್ನು, ಸಂಸ್ಕ್ರತಿಗಳನ್ನು ಹುಟ್ಟುಹಾಕಿದರು.ಕೆಳದಿಯ ಶಿವಪ್ಪ ನಾಯಕರು. ಕರಾವಳಿಯ ಬಂದರುಗಳನ್ನು ವಶಪಡಿಸಿಕೊಂಡಾಗ ಹೊಸಂಗಡಿಯು ಕೆಳದಿ ಮತ್ತು ಕರಾವಳಿಯ ಮಧ್ಯಂತರ ಸ್ಥಳವಾಗಿ, ಸೇನಾ ನೆಲೆ, ಸರಕು ಸಾಮಾಗ್ರಿಗಳ ದಾಸ್ತಾನು ಇನ್ನಿತರ ಕಾರಣಗಳಿಂದಾಗಿ ಪ್ರಾಮುಖ್ಯತೆ ಪಡೆಯಿತು, ಹೀಗಾಗಿ ವೈರಿಗಳ ಸುಳಿವನ್ನು ಅರಿಯಲು ಸಮೀಪವಿರುವ ಒಂದು ಎತ್ತರದ ಗುಡ್ಡದ ಮೇಲೆ ಕೋಟೆಯನ್ನು ಕಟ್ಟಿ, ಸಕಲ ವಿಘ್ನ ನಿವಾರಕ ವಿಘ್ನೇಶ್ವರನನ್ನು ಪ್ರತಿಷ್ಟಾಪಿಸಿದರು, ಉತ್ತಮ ಕಾವಲುಗಾರರನ್ನು ನೇಮಿಸಿ ಶತೃಗಳ ಸುಳಿವನ್ನು ಶಬ್ದ ಸನ್ನೆಗಳಿಂದ ರವಾನಿಸುವ ಕಲೆ ತಿಳಿದಿದ್ದರು.

ಈ ಮೆಟ್ಕಲ್ ಗುಡ್ಡಕ್ಕೆ ಬರುವ ಮಾರ್ಗ ಕುಂದಾಪುರ-ಶಿವಮೊಗ್ಗ ನಡುವೆ ಸಂಚರಿಸುವ ಬಸ್ಸಿನ ಮೂಲಕ ಹೊಸಂಗಡಿ ತಲುಪಿ ಅಲ್ಲಿನ ನಾಲ್ಕು ಕಿ.ಮೀ. ಸಾಗಿದರೆ ಮೆಟ್ಕಲ್ ಗುಡ್ಡವನ್ನು ತಲುಪಬಹುದಾಗಿದೆ. ಹೊಸಂಗಡಿಗೆ ಸಾಕಷ್ಟು ಬಸ್ಸಿನ ವ್ಯವಸ್ಥೆ ಇದೆ.


  • ಬಾಣಾವರ ಶಿವಕುಮಾರ್ (ಲೇಖಕರು, ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )

0 0 votes
Article Rating

Leave a Reply

1 Comment
Inline Feedbacks
View all comments
devarajachar

ಮುಳುಗಡೆ ಜನರ ಪರಿಸ್ಥಿತಿಯನ್ನು ತುಂಬಾ ಹೃದಯಪೂರ್ವಕವಾಗಿ ನಿರೂಪಿಸಿದ್ದೀರಿ

1
0
Would love your thoughts, please comment.x
()
x
%d bloggers like this:
Aakruti Kannada

FREE
VIEW