ಡಾ. ಎಮ್.ಎಮ್. ಕಲಬುರ್ಗಿ : ದುಃಖದಾಯಕ ನೆನಪು

೨೦೧೫, ಅಗಷ್ಟ್ ೩೦, ಹೌದು… ಇಂದಿನ ದಿನವೇ ಕನ್ನಡದ ಮೇರು ಬರಹಗಾರ, ಮಹಾನ್ ಸಂಶೋಧಕ, ವಿಶೇಷವಾಗಿ ಕಲ್ಯಾಣದ ಶರಣರ ಕುರಿತು ಅಪಾರ ಕಾಳಜಿ ಮತ್ತು ಪ್ರೀತಿಯನ್ನು ಹೊಂದಿದ ದೊಡ್ಡ ವ್ಯಕ್ತಿ, ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ದಿನ. – ಡಾ. ಲಕ್ಷ್ಮಣ ಕೌಂಟೆ, ಮುಂದೆ ಓದಿ…

ಕನ್ನಡ ಸಾಹಿತ್ಯ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಅನೇಕ ಶಿಷ್ಯರನ್ನು ಸೃಷ್ಟಿಸಿ ಅವರೆಲ್ಲರಿಂದ ‘ಗುರುಗಳು’ ಎಂದೇ ಅನ್ವರ್ಥವಾಗಿ ಕರೆಯಿಸಿಕೊಳ್ಳುತ್ತಿದ್ದ ಡಾ. ಎಮ್.ಎಮ್. ಕಲಬುರ್ಗಿಯವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ದಿನ. ಆ ದಿನವನ್ನು ನನಗೆ ಮರೆಯುವುದು ಸಾಧ್ಯವೇ ಆಗುವುದಿಲ್ಲ. ಅಂದು ಬೀದರನಲ್ಲಿರುವ ಭಾಲ್ಕಿ ಹಿರೇಮಠದ ಶಾಖಾಮಠದ ಸಭಾ ಭವನದಲ್ಲಿ ಭಾಲ್ಕಿ ಹಿರೇಮಠದ ನಡೆದಾಡುವ ದೇವರೆಂದು ಖ್ಯಾತರಾಗಿರುವ ಲಿಂ. ಚನ್ನಬಸವ ಪಟ್ಟದ್ದೇವರ ಕುರಿತು ನಾನು ಬರೆದ “ಅವಿಶ್ರಾಂತ” ಕಾದಂಬರಿ ಲೋಕಾರ್ಪಣೆಗೊಳ್ಳಲಿತ್ತು. ಅದನ್ನು ಪ್ರಕಾಶನಗೊಳಿಸಿದವರು ನಾಡಿನ ಖ್ಯಾತ ಪ್ರಕಾಶಕರಾಗಿದ್ದ ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು. ಕೃತಿ ವಿಮೋಚನೆಗೆ ಬಂದವರು ಖ್ಯಾತ ಪತ್ರಕರ್ತ ಶರಣ ರಮಜಾನ್ ದರ್ಗಾ ಅವರು, ಜೊತೆಗೆ ಪುಸ್ತಕ ಪರಿಚಯಕ್ಕೆ ಆಗಮಿಸಿದವರು ಈಗ ಬುಕ್ ಬ್ರಹ್ಮದ ಮೂಲಕ ಪ್ರಸಿದ್ಧರಾಗಿರುವ ದೇವು ಪತ್ತಾರ್ ಅವರು. ಅಧ್ಯಕ್ಷತೆ ವಹಿಸಲು ಬಂದವರು ನಾಡಿನ ಶ್ರೇಷ್ಠ ಬರಹಗಾರರೆನ್ನಿಸಿದ ವೀರೇಂದ್ರ ಸಿಂಪಿಯವರು. ಸಾನಿಧ್ಯ ವಹಿಸಲು ಆಗಮಿಸಿದವರು ಭಾಲ್ಕಿ ಹಿರೇಮಠದ ಪೂಜ್ಯ ಬಸವಲಿಂಗ ಪಟ್ಟದ್ದೇವರು.

ನಾವು ಕಲಬುರ್ಗಿಯಿಂದ ಹೊರಟಿದ್ದೇವು, ಅದೂ ಬಸ್ ಮೂಲಕ.. ನನ್ನ ಜೊತೆಗೆ ನನ್ನ ಮಗಳು ಸೌಜನ್ಯ, ಬರಹಗಾರ್ತಿಯಾದ ಶಿಕ್ಷಕಿ ಮಂಗಲಾ ಕಪರೆ, ಎ.ಎಸ್.ಐ. ಸಾಹಿತಿ ಯಶೋಧಾ ಕಟಕೆ, ಜೊತೆಗೆ ಸ್ನೇಹಿತರಾದ ಸುರೇಶ ಬಡಿಗೇರ್, ಎಸ್.ಎಮ್. ಸ್ವಾಮಿ ಇದ್ದರು.

ನಮ್ಮ ಬಸ್ಸು ಬೀದರ ಬಸ್ ನಿಲ್ದಾಣ ತಲುಪಿತ್ತು. ಇಳಿದು ಇಲ್ಲಿಯೇ ಹೊಟ್ಟೆಗೆ ಒಂದಿಷ್ಟು ಆಧಾರ ಮಾಡಿಕೊಳ್ಳೋಣ ಎಂದು ಬಸ್ ಸ್ಟ್ಯಾಂಡ ಆವರಣದಲ್ಲಿರುವ ಉಡುಪಿ ಹೋಟೇಲ್ ಪ್ರವೇಶಿಸಿ ಬಿಸಿ ಬಿಸಿ ಇಡ್ಲಿ ವಡೆ ತಿನ್ನುತ್ತಿದ್ದೇವು. ಅದೇ ಸಮಯದಲ್ಲಿ ನನ್ನ ಆತ್ಮೀಯ ಸ್ನೇಹಿತ, ಅಂದು ಗುಲಬರ್ಗಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹಿಪಾಲ ರೆಡ್ಡಿ ಮುನ್ನೂರು ಅವರು ಮೊಬೈಲ್ ಮೂಲಕ ನನ್ನನ್ನು ಸಂಪರ್ಕಿಸಿ “ನಿಮ್ಮ ಅತ್ಯಂತ ಪ್ರೀತಿಯ ಗುರುಗಳಾದ ಎಮ್.ಎಮ್. ಕಲಬುರ್ಗಿಯವರ ಹತ್ಯೆಯಾಗಿದೆ, ಟಿವಿಯಲ್ಲಿ ಬರ್ತಾ ಇದೆ. ಪುಸ್ತಕ ವಿಮೋಚನೆಯ ಸಂದರ್ಭದಲ್ಲಿ ಅವರನ್ನು ಸ್ಮರಿಸಿಕೊಂಡು ಕಾರ್ಯಕ್ರಮ ನಡೆಸಿ” ಎಂದರು. ನಾನು, ನನ್ನೊಂದಿಗಿದ್ದ ಎಲ್ಲರೂ ಕೆಲವು ಕ್ಷಣಗಳ ಕಾಲ ದಂಗಾಗಿ ಹೋದೇವು. ಮಾತುಗಳು ಮೌನಗೊಂಡವು. ವಿಶೇಷವಾಗಿ ಕಲಬುರ್ಗಿ ಸರ್ ನನಗೆ ತೀರ ಆತ್ಮೀಯರು. ಅವರು ನನ್ನಿಂದ ಕೃಷ್ಣನ ಕೊನೆಯ ದಿನಗಳ ಕುರಿತ ಮಹತ್ವದ ಕಾದಂಬರಿ “ಯುಗಪುರುಷ” ಬರೆಸಿ ಅದನ್ನು ಓದಿ ಬಹಳ ಸಂಭ್ರಮ ಪಟ್ಟು ಮಹಾಭಾರತದ ಕಥೆಯನ್ನಿಟ್ಟುಕೊಂಡು ನೀನೊಂದು ಪುಸ್ತಕ ಬರೆ ಎಂದಿದ್ದರು. ನನದು ‘ಬರೆಯುತ್ತೇನೆ’ ಎಂದು ಹೇಳಿ ಬರೆಯುವ ಜಾಯಮಾನವಲ್ಲ. ಮೊದಲು “ಯುಗಪುರುಷ” ಸಹ ‘ಪ್ರಯತ್ನಿಸುತ್ತೇನೆ ಸರ್” ಎಂದಷ್ಟೇ ಹೇಳಿ ತದ ನಂತರದ ದಿನಗಳಲ್ಲಿ ಬರೆದು ಅದನ್ನು ಪ್ರಕಟಿಸಿ ಪೋಷ್ಟ್ ಮೂಲಕ ಕಲಬುರ್ಗಿ ಸರ್ ಅವರಿಗೆ ಮುಟ್ಟಿಸಿದ್ದೆ. ಅವರು ಚಕಿತಗೊಂಡು ಅದೇ ದಿನ ರಾತ್ರಿ ಮೊಬೈಲ್ ಮೂಲಕ ಸುಮಾರು ಅರ್ಧ ಗಂಟೆ ಮಾತನಾಡಿ ಖುಷಿ ಪಟ್ಟು ಮಹಾಭಾರತದ ಕುರಿತು, ವಿಶೇಷವಾಗಿ ಕರ್ಣನನ್ನೇ ಮುಖ್ಯವಾಗಿ ಗಮನದಲ್ಲಿ ಇರಿಸಿಕೊಂಡು ಬರೆಯಲು ಸೂಚಿಸಿದ್ದರು. ಯಥಾ ರೀತಿ ಅವರ ಗಮನಕ್ಕೂ ತಾರದೇ “ಅನುಪರ್ವ” ಎನ್ನುವ ಮಹಾಕಾದಂಬರಿ ಬರೆದು ಪ್ರಕಾಶಕರೊಬ್ಬರಿಂದ ಪ್ರಕಾಶನ ಪಡಿಸಿ ಪ್ರಥಮ ಪ್ರತಿಯನ್ನು ಕಲಬುರ್ಗಿ ಸರ್ ಅವರಿಗೆ ಪೋಷ್ಟ್ ಮೂಲಕ ಕಳುಹಿಸಿದ್ದೆ. ಅವರು ಅದೇ ದಿನ ರಾತ್ರಿ ಫೋನ್ ಮಾಡಿ ಬೆರಗುಗೊಂಡು ಆಡದೆ ಮಾಡಿ ತೋರಿಸುವ ನನ್ನ ಗುಣ ಬಹುವಾಗಿ ಮೆಚ್ಚಿ “ಉತ್ತಮ ಪ್ರಕಾಶಕರನ್ನು ಹುಡುಕಿಕೊಡುವೆ, ನೀನು ಕಲಬುರ್ಗಿ ನಗರದಲ್ಲಿ ಇರಬಾರದಿತ್ತು, ಬೆಂಗಳೂರು ಅಥವಾ ಧಾರವಾಡದಲ್ಲಿ ಇರಬೇಕಿತ್ತು. ನೀನೊಬ್ಬ ಉತ್ತಮ ಬರಹಗಾರ. ನಗಣ್ಯ ಸ್ಥಳದಲ್ಲಿದ್ದು ಎಲ್ಲಿ ಕಳೆದು ಹೋಗುತ್ತೀಯೇನೋ ಎನ್ನುವ ಭಯ ನನಗೆ” ಎಂದಿದ್ದರು.

ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದೆವು. ಅಲ್ಲಿ ಪೂಜ್ಯ ಬಸವಲಿಂಗ ಪಟ್ಟದ್ದೇವರು ಮತ್ತು ಚನ್ನಬಸವಣ್ಣ ಕಣ್ಣತುಂಬ ನೀರು ತುಂಬಿಕೊಂಡು ನಿಂತಿದ್ದರು. ಕಾರ್ಯಕ್ರಮ ಮುಂದೂಡುವ ಹಾಗಿರಲಿಲ್ಲ. “ಕಲಬುರ್ಗಿ ವೇದಿಕೆ” ನಿರ್ಮಾಣವಾಯಿತು. ಅವರ ಭಾವಚಿತ್ರವನ್ನಿತ್ತು ಶ್ರದ್ಧಾಂಜಲಿ ಸಮರ್ಪಿಸಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮ ನಡೆಯುವ ಮೂರು ದಿನಗಳ ಮುಂಚೆಯೇ ಕಲಬುರ್ಗಿ ಸರ್ ಫೋನ್ ಮಾಡಿ “ಏನ್ ಮಾಡಾಕತಿಯೋ ಲಕ್ಷ್ಮಣ?” ಎಂದು ಕೇಳಿದ್ದರು. ಅವರ ಕೈಗೆ ನನ್ನ “ಅವಿಶ್ರಾಂತ” ಸೇರಿತ್ತು. ಆ ಪುಸ್ತಕದ ಕುರಿತು ಅಂದು ಅವರು ಬಹಳ ಮಾತನಾಡಿದರು. ಕಾರ್ಯಕ್ರಮದ ಮುನ್ನಾ ದಿನವೇ ಸರ್ ಅವರು ಬಸವಲಿಂಗ ಪಟ್ಟದ್ದೇವರಿಗೆ ಫೋನ್ ಮಾಡಿ ನನ್ನ ಕುರಿತು ಹೇಳಿ “ಬಿಡಬ್ಯಾಡ್ರಿ ಅವನ್ನ. ಶ್ಯಾಣ್ಯಾ ಅದಾನವಾ, ಛಂದ್ ಓದಿಕೊಂಡಾನ. ಕಲ್ಯಾಣ ಶರಣರ ಕುರಿತು ಪುಸ್ತಕ ಬರೆಸಿಕೊಳ್ರಿ” ಎಂದು ಹೇಳಿದ್ದರು. ಅಪ್ಪಾ ಅವರು ವೇದಿಕೆಯ ಮೇಲೆ ಆ ಮಾತನ್ನು ಆಡಿ ತೋರಿಸಿದರು. ಮುಂದೆ ಧಾರವಾಡದಿಂದ ಅವರ ಸಾವಿನ ಕುರಿತು ತನಿಖೆ ಮಾಡುತ್ತಿದ್ದ Dy SP ಮಹಾಂತೇಶ್ವರ ಅವರು ಫೋನ್ ಮಾಡಿ “ಕಲಬುರ್ಗಿ ಅವರಿಗೂ ನಿಮಗೂ ಏನ್ ಸಂಬಂಧ?” ಎಂದು ಕೇಳಿದ್ದರು(ಅವರ ಮೊಬೈಲ್ ನಿಂದಲೇ ಮರಣದ ಮೂರು ದಿವಸ ಮುಂಚೆ ಅವರು ನನಗೆ ಕರೆ ಮಾಡಿದ್ದು, ನನ್ನ ಮೊಬೈಲ್ ಸಂಖ್ಯೆ ಅದರೊಳಗೆ ದಾಖಲಾಗಿತ್ತು). ಸರ್, ನಾನವರ ವಿದ್ಯಾರ್ಥಿ ಎಂದಿದ್ದೆ.

ಹಾಗೆ ನೋಡಿದರೆ ನಾನು ಕಲಬುರ್ಗಿ ಸರ್ ಅವರ ನೇರ ಶಿಷ್ಯನಲ್ಲ. ಬಿಎ ಮುಗಿದ ಮೇಲೆ ಎಮ್.ಎ. ಓದಲು ಧಾರವಾಡಕ್ಕೆ ಹೋಗುವ ಇಚ್ಛೆಯಿಂದ ನನ್ನ ಪದವಿ ಕಾಲೇಜಿನ ಪ್ರಾಚಾರ್ಯರಾಗಿದ್ದ ಸಿ.ಆರ್. ಬಡಾ ಸರ್ ಅವರ ಪತ್ರ ಹಿಡಿದು ಅಲ್ಲಿಗೆ ಹೋಗಿ ಕಲಬುರ್ಗಿ ಅವರ ಕೈಗೆ ಆ ಪತ್ರವನ್ನಿತ್ತಿದ್ದೆ. ಅವರ ಮನೆಯಲ್ಲಿ ಬಿಸಿ ಬಿಸಿ ಜೋಳದ ರೊಟ್ಟಿ ಊಟ ಮಾಡಿ ಅವರೊಂದಿಗೆ ಅವರೆ ಕಾಳು ಮಾರಲು ಧಾರವಾಡದ ಸಂತೆಗೂ, ತದ ನಂತರ ಮುರುಘಾ ಮಠಕ್ಕೂ ಹೋಗಿದ್ದೆ. ಅವರ ಸೂಚನೆಯಂತೆ ಆಳಂದದ ಏಕಾಂತ ರಾಮಯ್ಯನ ಫೋಟೋ ತಗೆದು ಪೋಷ್ಟ್ ಮೂಲಕ ಅವರಿಗೆ ಕಳುಹಿಸಿದ್ದೆ. ಆದರೂ ಪಿಜಿ ಓದಲು ಧಾರವಾಡಕ್ಕೆ ಹೋಗುವುದು ನನಗೆ ಸಾಧ್ಯವಾಗಲಿಲ್ಲ; ಬದಲು ಮೈಸೂರು ವಿ.ವಿ. ಪಿಜಿ ಸೆಂಟರ್ ಬಿಆರ್ ಪಿ(ಈಗ ಕುವೆಂಪು ವಿ.ವಿ.)ಗೆ ಹೋಗಿದ್ದೆ.

ಕಲಬುರ್ಗಿ ಸರ್ ಅವರನ್ನು ನಾನು ಎರಡನೆಯ ಬಾರಿಗೆ, ಅದೂ ಬಹಳ ವರ್ಷಗಳ ನಂತರ ನೇರವಾಗಿ ಕಂಡಿದ್ದು ಬೆಂಗಳೂರಿನ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ, ಅದೂ ೨೦೦೮(೨೭ಜೂನ್)ರಲ್ಲಿ. ನನಗೆ ಆ ವರ್ಷ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನನ್ನ “ಆಹುತಿ” ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ನೀಡಿತ್ತು. ಅವರು ನನ್ನ ನೋಡಿ ಬಹಳ ಖುಷಿ ಪಟ್ಟರು. ಮುಂಚೆಯಾದರೋ ಮೊಬೈಲ್ ಮೂಲಕವೇ ನಮ್ಮಿಬ್ಬರ ಮಧ್ಯ ಸಂಭಾಷಣಗಳು ನಡೆದಿದ್ದವು. ಈಗ ನನ್ನ ಆತ್ಮೀಯ ಓದುಗರು ಮತ್ತು ನನ್ನ ಹಿತೈಸಿಗಳಾಗಿರುವ ವೆಂಕಟೇಶ ಮಾಚಕನೂರು ಆಗ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿಯಾಗಿದ್ದರು. ಅವರ ಪರಿಚಯವೂ ನನಗೆ ಹಲವು ಬಗೆಯ ಲಾಭವನ್ನು ತಂದುಕೊಟ್ಟಿತು.

ಕಲಬುರ್ಗಿ ಸರ್ ಹತ್ಯೆಯ ಮೊದಲು ಧಾರವಾಡದಲ್ಲಿ ಜನೇವರಿ ಮಾಸದ ೧೬, ೧೭, ೧೮(೨೦೧೫)ರಂದು ನಡೆದ “ಧಾರವಾಡ ಸಾಹಿತ್ಯ ಸಂಭ್ರಮ”ಕ್ಕೆ ಹೋಗಿದ್ದೆ. ಅಲ್ಲಿ ಕಲಬುರ್ಗಿ ಸರ್ ಅವರೊಂದಿಗೆ ಮೂರು ದಿವಸಗಳ ಕಾಲ ಇದ್ದೆ. ನನ್ನ ಕುರಿತು ಅವರು ಧಾರವಾಡ ಸಾಹಿತ್ಯ ದಿಗ್ಗಜರೊಂದಿಗೆ ಬಹಳ ಸಲ ಮಾತನಾಡಿದ್ದರು. ಕಲಬುರ್ಗಿಗೆ, ಈ ಭಾಗಕ್ಕೆ ಬಂದಾಗಲೂ ಅವರು ಇಲ್ಲಿನ ಸಾಹಿತಿ ಮತ್ತು ಪ್ರಕಾಶಕರ ಎದುರು ನನ್ನ ಗೈರು ಹಾಜರಿಯಲ್ಲೇ ನನ್ನ ಕುರಿತು ಅದೆಷ್ಟೋ ಹೇಳಿ “ಅವನ್ನನ್ನು ಬೆಳೆಸಿ ಉಳಿಸಿ” ಅಂತ ಅಂದಿದ್ದುಂಟು.
ಕಲಬುರ್ಗಿ ಭಾಗದ ಖ್ಯಾತ ಪುಸ್ತಕ ಪ್ರಕಾಶನ ಸಂಸ್ಥೆ ಸಿದ್ಧಲಿಂಗೇಶ್ವರ ಪ್ರಕಾಶನದ ಒಡೆಯ ಬಸವರಾಜ ಕೊನೆಕ್ ಅವರ ಷಷ್ಟ್ಯಾಬ್ಧಿ ಸಮಾರಂಭಕ್ಕೆ ಕಲಬುರ್ಗಿ ಸರ್ ಆಗಮಿಸಿದ್ದರು. ನಾನು ಅಂದು ಕಬ್ಬು ಕಟಾವ್ ನಿಮಿತ್ಯ ನನ್ನ ಊರೊಳಗಿದ್ದೆ.. ಕಲಬುರ್ಗಿ ಸರ್ ಅವರು ವೇದಿಕೆಯ ಮೂಲಕ ಮಾತನಾಡುತ್ತ “ಕನ್ನಡ ಬೆಳೆಸಿದ ನೃಪತುಂಗ, ಶ್ರೀ ವಿಜಯರ ನಾಡಿದು, ಕವಿಗಳಿಗೆ ರಾಜಮಾರ್ಗ ತೋರಿದ “ಕವಿರಾಜ ಮಾರ್ಗ” ರಚನೆಯಾದದ್ದು ಇಲ್ಲಿಯೇ. ಕಲ್ಯಾಣದ ಶರಣರು ಸಮಾನತೆಯ ದೀಪ ಬೆಳಗಿಸಿದ್ದು ಇದೇ ನೆಲದಿಂದ. ತತ್ತ್ವಪದ ರಚನೆಗೆ ನಾಂದಿ ಹಾಡಿದ ಕಡಕೋಳ ಮಡಿವಾಳಪ್ಪ ಇದೇ ನೆಲದವನು. ಈ ನೆಲದಲ್ಲಿ ಅದ್ಭುತ ಶಕ್ತಿ ಇದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಇಲ್ಲಿಯವರು ಕಡಿಮೇ ಏನಲ್ಲ. ಇಂದು ಕನ್ನಡದಲ್ಲಿ ಬಹುವೇಗವಾಗಿ ಮಹತ್ವದ ಕೃತಿ ಬರೆಯುವವರು ಒಬ್ಬರು ಇಲ್ಲಿದ್ದಾರೆ. ಅವರೇ ಲಕ್ಷ್ಮಣ ಕೌಂಟೆ. ಇನ್ನಿಬ್ಬರು ಡಾ. ಎಸ್.ಎಲ್. ಭೈರಪ್ಪ ಮತ್ತು ಕುಂ. ವೀರಭದ್ರಪ್ಪ. ಲಕ್ಷ್ಮಣನ ನಿರ್ಲಕ್ಷ್ಯ ಮಾಡಬ್ಯಾಡ್ರಿ. ಪ್ರಕಾಶಕರು ಅವನಿಗೆ ಸಹಾಯ ಮಾಡಬೇಕು” ಎಂದರು. ಈ ಮಾತುಗಳು ಮಾರನೆಯ ದಿನ ಪತ್ರಿಕೆಗಳಲ್ಲೂ ಕಾಣಿಸಿಕೊಂಡವು.

ಎಂದಿದ್ದರೂ ದೊಡ್ಡವರು ದೊಡ್ಡವರೇ, ಸಣ್ಣವರು ಸಣ್ಣವರೇ. ಅಂಥವರ ಹತ್ಯೆ ಮಾಡಿದ್ದು ಜಘನ್ಯ ಅಪರಾಧ. ನನ್ನಂಥವರು ಅಂತಹವರನ್ನು ಕಳೆದುಕೊಂಡು ಅನಾಥರಾಗಿದ್ದಂತೂ ನಿಜ.. ಆದರೆ ಅವರು ಮೃತರಾಗಿಲ್ಲ, ಅವರು ಬರೆದ ಕೃತಿಗಳಲ್ಲಿ, ನನ್ನಂಥವರ ಎದೆಯಲ್ಲಿ ಜೀವಂತವಾಗಿದ್ದಾರೆ.


  • ಡಾ. ಲಕ್ಷ್ಮಣ ಕೌಂಟೆ   (ಕವಿ, ಲೇಖಕರು, ಉಪನ್ಯಾಸಕರು)  ಕಲಬುರಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW