ಹಾಲಿಗೆ ಮಹಾಬಲ ಮತ್ತು ಹಲಸಿನ ಹಳ್ಳಿ ಶೇಷಯ್ಯ ಗೌಡರು.

1982 ರ ಮಹಾನೆರೆ,  ಅವಗಡ, ಅಪಘಾತ, ಅತೀವೃಷ್ಟಿ, ಅನಾವೃಷ್ಟಿಗಳಲ್ಲಿ ಧಾವಿಸಿ ಬಂದು ರಾತ್ರಿ ಹಗಲೆನ್ನದೆ ಸೇವೆಗೆ ನಿಲ್ಲುತ್ತಿದ್ದ ಹಾಲಿಗೆ ಮಹಾಬಲರವರು  ಹಾಲಿಗೆ ಮಹಾಬಲ ಮತ್ತು ಹಲಸಿನ ಹಳ್ಳಿ ಶೇಷಯ್ಯ ಗೌಡರು ಇಂದು ನೆನಪು ಮಾತ್ರ.. – ನೆಂಪೆ ದೇವರಾಜ್, ಮುಂದೆ ಓದಿ…

ಸಾವಿರದ ಒಂಬೈ ನೂರಾ ಎಂಬತ್ತೆರಡರ ಪುನರ್ವಸು ಮಳೆ ಆ ಹಗಲು ರಾತ್ರಿ ಹೊಡೆದ ಹೊಡೆತಕ್ಕೆ ಕುರುವಳ್ಳಿ ರಾತ್ರೋನು ರಾತ್ರಿ ಜಲಾವೃತಗೊಂಡು ಅರೆ ನಿದ್ದೆಯಲ್ಲೆ ಎದ್ದು ಹೋಗಬೇಕಾದ ಅನಿವಾರ್ಯತೆಯನ್ನು ಯಾರೂ ಊಹಿಸಿರಲಿಲ್ಲ. ಬಾದಾಳ, ಅವಲಕ್ಕಿ ಮಿಲ್ಲು, ಪುತ್ತಿಗೆ ಮಠ, ಅರಳೀ ಕಟ್ಟೆ ಎಲ್ಲೆಂದರಲ್ಲಿ ತುಂಗೆ ಉಕ್ಕಿದ ರಭಸಕ್ಕೆ ರಸ್ತೆಯ ಮೇಲೆ ನಾಲ್ಕೈದು ಅಡಿ ನೀರು ನಿಂತಿತ್ತು. ಮನೆಗಳು ಮುಳುಗೇಳುತ್ತಿದ್ದವು. ಈ ಮಹಾ ನೆರೆಯ ಸುದ್ದಿ ನನ್ನೂರಿಗೆ ಫೋನು, ಬೈಕು ಬಸ್ಸುಗಳಿಲ್ಲದ ಅ ಕಾಲದಲ್ಲಿ ಅದಾವ ಮಾಯಕದಲ್ಲಿ ಅ ಬೆಳಿಗ್ಗೆ ಊರಿಗೆಲ್ಲ ಗೊತ್ತಾಯಿತು ಎಂಬುದರ ಬೆಂಬತ್ತಿದರೂ ಗೊತ್ತಾಗದ ರಹಸ್ಯವಾಗಿಯೇ ಕಾಡುತಿದೆ.ಹನ್ನೊಂದು ಕಿಲೋಮೀಟರ್ ದೂರವಿದ್ದ ನಮ್ಮೂರಿಗೆ ತಿಳಿಸಿದವರಾರು?

ಇಂದು ಬೆಳಿಗ್ಗೆ ತುಂಗೆಯ ಹತ್ತಿರ ಹೋದಾಗ ತನ್ನ ಭೋರ್ಗರೆತವನ್ನು ಮತ್ತಷ್ಟು ಮಗದಷ್ಟು ಎಂಬಂತೆ ಇಮ್ಮಡಿಗೊಳಿಸುತ್ತಿದ್ದಳು.ತುಂಗೆ ತನ್ನಗಲವನ್ನು ಕಣ್ಣರಳಿಸಿದಷ್ಟು ವಿಸ್ತರಿಸಿಕೊಳ್ಳುತ್ತಿದ್ದಳು. ಇಂತಹ ಸಂದರ್ಭದಲ್ಲಿ ನನಗೆ ನೆನಪಾದವರು ದಿವಂಗತ ಹಾಲಿಗೆ ಮಹಾಬಲರವರು. ೧೯೮೨ ರ ಆ ದಿನದ ದೃಷ್ಯ ಮತ್ತೊಮ್ಮೆ ಕಣ್ಣೆದುರು ಚಾಚತೊಡಗಿತು.ಎರಡನೇ ಪಿಯುಸಿಯಲ್ಲಿದ್ದ ನಾನು ಮತ್ತು ನಮ್ಮೂರಿನ ಯುವ ಮನಸ್ಸುಗಳು ಕಾಲ್ನಡಿಗೆಯಲ್ಲಿ ತೀರ್ಥಹಳ್ಳಿಯ ತುಂಗೆಯ ಅಬ್ಬರ ನೊಡಲು ಬೆಳಿಗ್ಗೆಯೇ ಹೊರಟು ಬಿಟ್ಟೆವು. ನಿಧಾನವಾಗಿ ರಸ್ತೆಯಲ್ಲಿದ್ದ ನೆರೆಯ ನೀರ ಮೇಲೆ ನಡೆದುಕೊಂಡು ಹೋಗುತ್ತಿದ್ದಂತೆಯೇ ಬಿಳಿಯ ಅಂಗಿ ದಪ್ಪ ಮೀಸೆಯ ವ್ಯಕ್ತಿ ಕೋಲು ಹಿಡಿದುಕೊಂಡು ಬಂದೇ ಬಿಟ್ಟಿತು. ಕುರುವಳ್ಳಿಯ ಮಾಂಸದ ಅಂಗಡಿಯತ್ತ ಹೋದಂತೆಯೇ ಕೆನ್ನೀರೆಂಬುದು ಇಡೀ ಪಟ್ಟಣವನ್ನು ಅವರಿಸಿಕೊಂಡಿದೆ. ಮುಂದೆ ಮುಂದೆ ಹೋಗುವ ತವಕ. ಅದರೆ ಈ ಬಿಳಿ ಅಂಗಿಯ ದಪ್ಪ ಮೀಸೆಯ ವ್ಯಕ್ತಿ ಮುಂದೆ ಹೋಗಲು ಬಿಡುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ನೀರು ಏರುತ್ತಲೇ ಹೋಗಿತ್ತಿತ್ತು. ಅದರೆ ಇವರ ಕೂಗಾಟದಿಂದ ಮುಂದೆ ನಾವೆಲ್ಲ ಹೋಗಲಾಗಲೇ ಇಲ್ಲ.

ಇಂದಿನಂತೆ ಕ್ಷಣ ಕ್ಷಣಕ್ಕೂ ನೀರಿನ ಏರಿಕೆಯನ್ನೂ ,ಅಪಾಯದ ಮಟ್ಟವನ್ನೂ ತಿಳಿಸುವ ವ್ಯವಸ್ಥೆ ಇಲ್ಲದಿದ್ದ ಕಾಲದಲ್ಲೂ ಒಂದೇ ಒಂದು ಮನುಷ್ಯ ಅಥವಾ ಪ್ರಾಣಿಗಳ ಜೀವ ಹಾನಿಗೂ ಅವಕಾಶ ಕೊಡದೆ ಅ ಭೀಭತ್ಸ ಮಳೆಯಲ್ಲು ಮಧ್ಯರಾತ್ರಿಯಿಂದಲೇ ಕಾರ್ಯಾಚರಣೆ ಗಿಳಿಯುತ್ತಿದ್ದ ಹಾಲಿಗೆ ಮಹಾಬಲ ತರದವರು ಈಗಿಲ್ಲ. ಅದರೆ ಅವರ ನೆನಪು ಪ್ರತಿ ವರುಷದ ನೆರೆಯಲ್ಲೂ ಬಾರದಿರುವುದಿಲ್ಲ.

ಇಂದು ಬೆಳಿಗ್ಗೆ ಸೀದಾ ಅವರ ಪತ್ನಿ ಗಾಯತ್ರಿಯವರ ಮನೆಗೆ ಹೋದಾಗ ಹಳೆಯ ನನ್ನ ನೆನಪನ್ನೆಲ್ಲ ಹೇಳತೊಡಗಿದೆ. ಗಾಯತ್ರಿ ಅಕ್ಕನವರು ತಮ್ಮ ಒಂದೊಂದೇ ನೆನಪುಗಳನ್ನು ಹೇಳಲವಕಾಶ ನೀಡದೆ ದುಃಖ ಅವರತ್ತ ಧಾವಿಸಿ ಬರತೊಡಗಿತು. ಪುರ ಪಂಚಾಯ್ತಿಯ ಸದಸ್ಯರಾಗಿದ್ದ ಅವರು ಅವಗಡ, ಅಪಘಾತ, ಅತೀವೃಷ್ಟಿ ಅನಾವೃಷ್ಟಿಗಳಲ್ಲಿ ಧಾವಿಸಿ ಬಂದು ರಾತ್ರಿ ಹಗಲೆನ್ನದೆ ಸೇವೆಗೆ ನಿಲ್ಲುತ್ತಿದ್ದ ಹಾಲಿಗೆ ಮಹಾಬಲರವರು ಇಂದು ನೆನಪು ಮಾತ್ರ.

ರಾತ್ರೋನು ರಾತ್ರಿಯ ನೆರೆಯ ಸಂದರ್ಭದಲ್ಲಿ ಇಡೀ ಕುರುವಳ್ಳಿಯವರನ್ನು ಎಬ್ಬಿಸಿ ಸಂತ್ರಸ್ತ ಕೇಂದ್ರಗಳತ್ತ ಕಳುಹಿಸಿದರೂ ಆಗಲೆ ಶತಮಾನದಂಚಿನಲ್ಲಿದ್ದ ವ್ಯಕ್ತಿ ಯೋರ್ವರು ಜಪ್ಪಯ್ಯ ಎಂದರೂ ಮಹಾಬಲ ಮತ್ತು ಪೋಲೀಸರ ಒತ್ತಾಯಕ್ಕೇ ಏಳುವುದೇ ಇಲ್ಲವಂತೆ.ಅವರೇ ಹಲಸಿನ ಹಳ್ಳಿ ಶೇಷಯ್ಯಗೌಡರು!ಈ ಹೊತ್ತಿಗೆ ಗಾಯತ್ರಕ್ಕನವರ ದುಃಖ ಮತ್ತೊಮ್ಮೆ ಉಮ್ಮಳಿಸಿತು.

ಅಲ್ಲಿಂದ ಸೀದಾ ಕುತೂಹಲ ತಡೆಯದವನಾಗಿ ಕುರುವಳ್ಳಿ ಅನಿಲ್ ರವರ ಮನೆಗೆ ಬಂದೆ.”ಇಡೀ ಕುರುವಳ್ಳಿ ಖಾಲಿಯಾಗಿದ್ದರೂ ನಿಮ್ಮಜ್ಜನನ್ನು ಹೊರ ಹೊರಡಿಸಲು ಸಾಧ್ಯವಾಗಿರಲಿಲ್ಲವಂತೆ ಹೌದೆ”ಎಂದು ಕೇಳಿದಾಗ ಹತ್ತು ಹಲವು ಮಾಹಿತಿಗಳು ಅವರಿಂದ ಅತ್ಯುತ್ಸಾಹದಿಂದಲೇ ಬರತೊಡಗಿದವು.”ನಾನು 1924 ರ ನೆರೆ ನೋಡಿದ್ದೇನೆ. ನನ್ನ ಮನೆಯ ಬೆಂಗಟೆಯ ಮೇಲೆ ನೀರು ಬಂದಿತ್ತು. ನಾಗಂದಿಗೆಗಳೆಲ್ಲ ಮುಚ್ಚಿದ್ದವು. ಆ ಮೇಲೆ ನಾವೆಲ್ಲ ಕುರುವಳ್ಳಿ ಬಂಡೆ ಹತ್ತಿ ಕೂತಿದ್ದೆವು. ಇವತ್ತಿನ್ನೂ ರಸ್ತೆ ಮೇಲೆಯೆ ನೀರು ಬಂದಿಲ್ಲ.ಇಷ್ಟಕ್ಕೆ ನೀವೆಲ್ಲ ಹೆದರಿ ಕಂಗಾಲಾಗಿದ್ದೀರಲ್ಲ.ನಾನು ಇಲ್ಲಿಂದ ಏಳುವುದೇ ಇಲ್ಲ” ಎಂದು ಮತ್ತಷ್ಟು ಹೊದ್ದು ಮಲಗೇ ಬಿಟ್ಟರಂತೆ. ಅದರೆ ನೀರು ಭಯಂಕರವಾಗಿ ಏರುತ್ತಲೇ ಹೋಗುತ್ತಿದ್ದುದನ್ನು ನೋಡುತ್ತಾ ಇಡೀ ಕುಟುಂಬ ಹೆದರಿಕೊಂಡಿದೆ. ತಾಲೂಕು ಅಡಳಿತ ಕೂಡಾ…ಆದರೆ ಶತಮಾನ ಪೂರೈಸಲು ಕೆಲವೇ ದಿನಗಳಲ್ಲಿದ್ದ ಯೂರೋಪಿಯನ್ ತರಹವಿದ್ದ ಶೇಷಯ್ಯ ಗೌಡರನ್ನು ಕದಲಿಸುವುದು ಅಸಾಧ್ಯದ ಮಾತಾಯಿತು. ಮನೆಯವರ ಭಯಭೀತತೆಯ ಕಣ್ಣುಗಳಿಗೆ ವಯೋವೃದ್ದ ಶೆಷಯ್ಯಗೌಡರು ಕರಗಲೇ ಬೇಕಾಯಿತು ಎಂದು ಹೇಳಿದ ಮೊಮ್ಮಗ ಅನಿಲ್ ರವರು ಅಗಿನ್ನೂ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದರಂತೆ.

ಅನಿಲ್ ರವರ ಮನೆಯ ಹಿಂದಿನ ಅನಿಲ್ ರವರ ಜಾಗದಲ್ಲಿ ಮನೆ ಮಾಡಿದ್ದ ಸುಮಾರು ಅರವತ್ತು ಕಲ್ಲು ಕುಟಿಕರ ಮನೆಗಳ ಗೋಡೆಗಳು ಸಂಪೂರ್ಣ ಕುಸಿದು ಹೋಗಿದ್ದವಂತೆ.ಅವರುಗಳೆಲ್ಲ ಈ ನೆರೆಯ ಕಾರಣದಿಂದಲೆ ಮೇಲಿನ ಕುರುವಳ್ಳಿಯಲ್ಲಿ ಮನೆ ಮಾಡಿದ್ದಂತೆ

ಈ ಮಹಾ ನೆರೆಯ ಸಂದರ್ಭದಲ್ಲೇ ತಾವು ಹುಟ್ಟಿ ಬೆಳೆದು ಬಾಳಿದ ಮನೆಯನ್ನು ಅನಾಥಗೊಳಿಸಬಾರದೆಂಬ ಹಟ ಹೊತ್ತ ಇನ್ನೆರಡು ಜೀವಗಳೂ ಈ ಕುರುವಳ್ಳಿಯಲ್ಲಿ ಇದ್ದವು.ಒಬ್ಬರು ಮೂರ್ತಿ (ಬಾದಾಳ ) ಭಟ್ಟರು. ಮತ್ತೊಬ್ಬರು ನಾರಾಯಣ ಹೊಳ್ಳರು. ಬಾದಾಳ ಭಟ್ಟರು ಮತ್ತು ಶೇಷಯ್ಯಗೌಡರು ಈಗಿಲ್ಲ. ನಾರಾಯಣ ಹೊಳ್ಳರು ಇದ್ದಾರೆ. ೧೯೮೨ ರ ನೆರೆಯ ಆ ಅಪತ್ತಿನ ದಿನದ ಬಗ್ಗೆ ನಾರಾಯಣ ಹೊಳ್ಳರ ಬಾಯಿ ಬಿಡಿಸುವುದು ಅಷ್ಟು ಸಲೀಸಲ್ಲ.ಅಂಗಡಿಯೊಂದರ ಮಾಲೀಕರಾಗಿ ತಮ್ಮ ವಿಶಿಷ್ಟ ಶ್ರಮ ಮತ್ತು ಪ್ರಾಮಾಣಿಕತೆಯ ಮೂಲಕವೆ ಅಂಗಡಿ ನಡೆಸುತ್ತಿರುವ ಹೊಳ್ಳರ ಈ ಆಧುನಿಕ ಉದಾರೀಕರಣವೆಂಬ ಕ್ಷಿಪ್ರಾನು ಕ್ಷಿಪ್ರ ಬದಲಾವಣೆಯ ಕಾಲ ಘಟ್ಟದಲ್ಲಿ ಇವರ ಅಪರೂಪದ ಗುಣಗಳ ಬಗ್ಗೆ ಮತ್ತೊಮ್ಮೆ ಮಾತಾಡೋಣ.ಇವರ ಜೀವನ ಶೈಲಿಯ ಬಗ್ಗೆ ಹತ್ತು ಹಲವು ಕತೆಗಳಿವೆ. ಈ ಹೊತ್ತಲ್ಲಿ ತುಂಗೆಯ ಏರುಗತಿಯ ಬಗ್ಗೆಯೇ ಹಲವು ವರದಿಗಳು ಬರುತ್ತಿವೆ. ಕುರುವಳ್ಳಿಯ ಎಲ್ಲರೂ ಕ್ಷೇಮವಾಗಿ ತುಂಗೆಯ ಅರ್ಭಟದಿಂದ ಹೊರಬರಲಿ.ತುಂಗೆಯ ತಟದ ಜನರ ಅತಂಕಗಳು ದೂರಾಗಲಿ.ಆದರೀಗ (ದಿನಾಂಕ ೧೦-೮-೨೦೧೯ ರಂದು) ಎಂಭತ್ತೆಂಟಿದ್ದವಳು ಇದೀಗ ೮೫ ಅಡಿಗೆ ರಭಸದಿಂದ ಇಳಿಯುತ್ತಿದ್ದಾಳೆ.ಬಹುಷಃ ಎಂಭತ್ತೆರಡರ ಮಹಾ ನೆರೆಯ ನಿರೀಕ್ಷೆಯ ಅರ್ಭಟಕ್ಕೆ ಸ್ವಲ್ಪ ತಡೆ ಬಿದ್ದಿದೆ. ಶೃಂಗೇರಿ ಕಡೆ ಏನೋ ಎಂತದೋ? ಫೋನು ಮತ್ತು ಕರೆಂಟು ಕೈಕೊಟ್ಟು ಐದು ದಿನಗಳಾಗಿವೆ. ರಾಮ ಮಂಟಪ ಮುಚ್ಚಿಕೊಂಡೇ ಇದೆ.


  • ನೆಂಪೆ ದೇವರಾಜ್ (ಲೇಖಕರು, ಪತ್ರಕರ್ತರು), ತೀರ್ಥಹಳ್ಳಿ.

5 1 vote
Article Rating

Leave a Reply

1 Comment
Inline Feedbacks
View all comments
ರಘುರಾಂ

ಶ್ರೀಯುತ ಮಹಾಬಲರ ಮನಸ್ಸು ಅವರು ಸದಾ ತೊಡುತ್ತಿದ್ದ ಬಿಳಿ ವಸ್ತ್ರದ ತರಹ ಶುದ್ಧವಾಗಿತ್ತು. 🙏.

Home
Search
All Articles
Buy
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW