ಕವಿ ಲಕ್ಷ್ಮಣ್ ವಿ ಎ ಅವರ ‘ಮಿಲ್ಟ್ರಿ ಟ್ರಂಕು’ ಕಾದಂಬರಿ ಕುರಿತು ಶಿಕ್ಷಕರಾದ ಮಾರುತಿ ಗೋಪಿಕುಂಟೆ ಅವರು ಪುಸ್ತಕ ಪರಿಚಯ ಮಾಡಿದ್ದಾರೆ ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ಪುಸ್ತಕ : ಮಿಲ್ಟ್ರಿ ಟ್ರಂಕು
ಲೇಖಕ : ಲಕ್ಷ್ಮಣ್ ವಿ ಎ
ಪ್ರಕಾಶಕರು : ಅಮೂಲ್ಯ ಪುಸ್ತಕ, ಚಂದ್ರಾ ಲೇಔಟ್, ಬೆಂಗಳೂರು
ಪ್ರಕಾರ : ಕಾದಂಬರಿ
ಖರೀದಿಗಾಗಿ : ೯೪೪೮೬೭೬೭೭೦ / ೯೬೨೦೭೯೬೭೭೦
ಈ ಹಿಂದೆ ಕವಿ ಲಕ್ಷ್ಮಣ್ ವಿ ಎ ಯವರು ಕವಿತ ಸಂಕಲನವನ್ನು ಓದಿದ್ದೆ. ಅನುಭವದ ಆಂತರ್ಯದ ಅಕ್ಷರಗಳನ್ನು ಪದಗಳಾಗಿ ಕವನದ ಸಾಲುಗಳಾಗಿ ಪಡಿಮೂಡಿಸುವಲ್ಲಿ ಸಿದ್ದಹಸ್ತರು. ಹೀಗಾಗಲೆ ಒಂದೆರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇಲ್ಲಿ ವಿಶೇಷವೆಂದರೆ ಮೂಲತಃ ವೃತ್ತಿಯಲ್ಲಿ ವೈದ್ಯರಾದ ಲಕ್ಷಣ್ ವಿ ಎ ಯವರು ಮನುಷ್ಯನ ಕಾಯಿಲೆಗೆ ಚಿಕಿತ್ಸೆ ನೀಡುವಷ್ಟೆ ಅಕ್ಷರದ ಚಿಕಿತ್ಸೆಯನ್ನು ಭಾವುಕವಾಗಿ ಸಮಾಜಕ್ಕೆ ಕಟ್ಟಿಕೊಡಬಲ್ಲರು. ಬಹುಶಃ ಅದು ಸ್ವತಃ ಅನುಭವಿಸಿದ ವ್ಯಕ್ತಿಯಿಂದ ಮಾತ್ರ ಸಾಧ್ಯ. ನಾನು ಬಯಲು ಸೀಮೆಯ ನೆಲದವನಾದ್ದರಿಂದ ನನ್ನಂಥವರಿಗೆ ಇವರ ಬರಹಗಳು ಬಹುಬೇಗ ಮನಸ್ಸನ್ನು ತಟ್ಟಿ ಬಿಡುತ್ತವೆ. ‘ಗುಬ್ಬಿ ಕಾಯುವುದೆಂದರೆ’ ಎಂಬ ಪ್ರಶ್ನೆಗೆ ಉತ್ತರವಾಗಿ ಪ್ರಾರಂಭವಾಗುವ ಬಯಲು ಸೀಮೆಯ ಬದುಕು ಶಾಲೆಯ ಗೆಳೆಯರೊಂದಿನ ಹಾಸ್ಯಗಳೊಂದಿಗೆ ಶ್ರಮಿಕರ ಬದುಕಿನ ಬವಣೆಯನ್ನು ನವರಸಗಳಲ್ಲಿ ಕಬ್ಬಿನ ರಸವನ್ನೆ ಉತ್ತರವನ್ನಾಗಿಸುವ ಮೂಲಕ ಬದುಕಿನ ಅಗತ್ಯವನ್ನು ಹೇಳುತ್ತಾರೆ. ಚಪ್ಪಲೀಕತೆ, ನಮ್ಮದೆ ಅನಿಸುವಷ್ಟು ಆಪ್ತ, ದೇವರ ಮೇಲಿನ ಅಮ್ಮನ ಪ್ರೀತಿ ಹೆಳವ ಹೇಳುವ ವಂಶವೃಕ್ಷವನ್ನೆ ಮತ್ತೆ ಮತ್ತೆ ನೆನೆದು ಹಿಂದಿನ ಪೂರ್ವದ ತಲೆಮಾರಿನೊಂದಿಗೆ ಭ್ರಮಿಸಿ ಸಂಭ್ರಮಪಡುವುದು ಓದುಗರನ್ನು ಭಾವುಕತೆಯ ನೀರಿನಲ್ಲಿ ಕಣ್ಣೀರಾಗುವಂತೆ ಮಾಡುತ್ತದೆ.
ಅಪ್ಪನ ಮನೆ ತೊರೆಯುವ ದಿನಗಳ ಬಗ್ಗೆ ಪ್ರಾಮಾಣಿಕವಾಗಿ ಹೇಳುವ ಲೇಖಕರು ಊರಿನ ಹಿನ್ನೆಲೆಯನ್ನು ತಿಳಿಸುತ್ತ ಕುಟುಂಬದಲ್ಲಿ ನಡೆದ ದುರಂತಗಳ ಬಗ್ಗೆಯೆ ತಿಳಿಸುತ್ತ ಬದುಕೆಂಬುದು ಹರಿಯುತ್ತಿರುವ ನದಿ ಹೆಣ್ಣು ನದಿಯಂತೆ ಎನ್ನುತ್ತ ಹೆಣ್ಣಿನ ಭಾವಾಕೋಶದ ಪರಿಧಿ ವಿಸ್ತಾರಗೊಳ್ಳುವ ಪರಿಯನ್ನು ತವರು ಮತ್ತು ಗಂಡನ ಮನೆಯನ್ನು ಉದಾಹರಿಸುತ್ತ ಹೇಳುತ್ತಾರೆ.
ಬಡತನಕ್ಕೊಂದು ದಾರಿಯಾಗಿಯೆ ಮಿಲ್ಟ್ರಿ ಸೇರುವ ಅಣ್ಣ. ಬಿಟ್ಟು ಬಿಡಲಾಗದ ಅಮ್ಮನ ದುಃಖ, ಗುಡಿಸಲಿನಿಂದ ಹೆಂಚಿನ ಮನೆಯ ಕನಸಿಗೆ ಸಿಪ್ಟ್ ಆಗುವ ಅಪ್ಪ ಇವೆಲ್ಲವು ಬಯಲು ಸೀಮೆಯ ಬವಣೆಗಳು, ಕನಸುಗಳು ಓದುತ್ತಾ ಓದುತ್ತಾ ನಮ್ಮದೆ ಕತೆಗಳೆನಿಸಿಬಿಡುತ್ತವೆ.ಕೆಲವು ಆರ್ದ್ರ ಸನ್ನಿವೇಶಗಳು ನಮ್ಮ ಮನಸ್ಸನ್ನು ತಟ್ಟಿಬಿಡುತ್ತವೆ. ತಾಜ್ಮಹಲ್ ಕಾಣುವ ಕನಸು ಇನ್ನೇನು ಈಡೇರಿತು ಅನ್ನುವಾಗಲೆ ಎದುರಾಗುವ ಸಂಕಷ್ಟ, ಆಗಾಗ ಊರಿಗೆ ಬರುವಾಗೆಲ್ಲ ಮಣಭಾರದ ಮಿಲ್ಟ್ರಿ ಟಂಕಿನ ತುಂಬಾ ಇಡೀ ಕುಟುಂಬದ ಪೂರೈಕೆಯ ಅಬೀಷ್ಟೆಗಳಿದ್ದವು. ಅದನ್ನು ಅವರವರಿಗೆ ಹಂಚಿದ ಮೇಲೂ ತಾಯಿ ಟ್ರಂಕಿನೊಳಗೆ ಬದುಕಿನ ಅಗತ್ಯಗಳನ್ನು ಕಾಪಿಟ್ಟುಕೊಳ್ಳುವುದು ಬದುಕಿನ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡುತ್ತದೆ. ಅದು ಅಮ್ಮನಿಂದ ಮಾತ್ರ ಸಾಧ್ಯ ಎಂಬುದನ್ನು ಬೇರೆ ಬೇರೆ ಪ್ರಸಂಗಗಳಲ್ಲಿ ವಿವರಿಸಿದ್ದಾರೆ. ಅಪ್ಪನೊಂದಿಗೆ ಜಗಳವಾಡಿದ ಮೇಲು ತನ್ನೊಳಗೊಂದು ಅನೂಹ್ಯವಾದ ಅಗಾಧವಾದ ಪ್ರೀತಿಯನ್ನು ಇಟ್ಟುಕೊಳ್ಳುವ ಅಮ್ಮ ಮೂರುದಿನ ಕಾಣದೆ ಇದ್ದಾಗ ಪರಿತಪಿಸುವ ಪರಿ ಓದುಗರಿಗೆ ನಮ್ಮ ತಾಯಿಯು ಹೀಗೆ ಅಲ್ಲವೆ ಅನಿಸಿಬಿಡುತ್ತದೆ. ಪಂಡರಪುರದ ಯಾತ್ರೆ ಬದುಕಿನ ಇನ್ನೊಂದು ಮಗ್ಗುಲನ್ನೆ ಪರಿಚಯಿಸುತ್ತದೆ. ಬಾಲ್ಯದ ಅಷ್ಟು ಬರಹಗಳು ತನ್ನ ಕತೆಯನ್ನು ಹೇಳುತ್ತಲೇ ಸಮಾಜದ ಬೇರೆ ಬೇರೆ ಕತೆಯನ್ನು ಪರಿಚಯಿಸುತ್ತದೆ. ಊರು ಕಾಯುವ ದೇವರನ್ನೆ ಕಳ್ಳತನ ಮಾಡುವುದು., ನೀರಿಲ್ಲದ ಊರಿಗೆ ಹೆಣ್ಣು ಕೊಡದೆ ಇರುವುದು. ಸಾಮಾಜಿಕ ಸ್ಥಿತಿಯನ್ನು ತಿಳಿಸುತ್ತದೆ.
ಹುಟ್ಟಿದ ಊರೆಂಬುದು ಬರಿ ನೆಲವಲ್ಲ ಅದು ನಮ್ಮೊಂದಿಗೆ ಬೆರೆತ ನೆನಪುಗಳ ಆಗರ. ಆದರು ಎಲ್ಲಿದ್ದರೆ ಅದೆ ಊರು ಅದೆ ಬದುಕು ಎನ್ನುವುದು. ಬದುಕಿನ ಪ್ರೀತಿಯನ್ನು ತೋರಿಸುತ್ತದೆ. ಹರೆಯದ ಕತೆಗಳು ದಾರಾವಾಡದ ಕಾಲೇಜಿನ ನೆನಪುಗಳು ಭೂಕಂಪನದ ಸನ್ನಿವೇಶ ಮದುವೆ ಮನೆಯ ಆಚಾರಗಳು ತನ್ನ ಬಗ್ಗೆ ಇರುವ ಕೀಳರಿಮೆ ಅದಕ್ಕಾಗಿ ನೀರಾ ಕುಡಿಯುವುದು ಹಾಸ್ಯ ಅನಿಸಿದರೂ ಲೇಖಕರಿಗದು ಆಕರ್ಷಕವಾಗಿ ಕಾಣಬೇಕೆಂಬ ಹಂಬಲ. ಅಪ್ಪನ ಸಾವಿನ ದಿನ. ಎಲ್ಲರೂ ಹಣ ಸಂಪಾದನೆಯ ಮಾರ್ಗ ಹಿಡಿದರೂ ತಮ್ಮೊಂದಿಗೆ ಅಕ್ಷರ ಪ್ರೀತಿಯನ್ನು ಬೆಳೆಸಿಕೊಂಡು ಲೇಖಕರು ಸ್ವಾರಸ್ಯವಾಗಿ ಪ್ರಬಂಧಗಳನ್ನು ಕಟ್ಟಿಕೊಡುತ್ತಲೆ ಇಡೀ ಊರಿನ ಕಥನವನ್ನು ಬಿಚ್ಚಿಟ್ಟಿದ್ದಾರೆ.
ಆನಂದ್ ಋಗ್ವೇದಿಯವರು ಹೇಳುವ ಹಾಗೆ ಇದು ‘ಮೋಳೆ ‘ಎಂಬ ಊರಿನ ಕಥನವು ಹೌದು. ಮೋಳೆ ಬರಿಯೆ ಊರಲ್ಲ ನಮ್ಮ ಗ್ರಾಮ ಭಾರತವನ್ನು ಅದರ ಬಹುತ್ವ ವನ್ನು ಅರಿಯುವಂತೆ ಮಾಡುವ ಒಂದು ಸಜೀವ ಪ್ರಯೋಗಶಾಲೆ. ಎಂದಿದ್ದಾರೆ.’ ಮರೆಯುವ ಮುನ್ನ’ ಬರಹವು ಮರೆಯದೆ “ಮಿಲ್ಟ್ರಿ ಟ್ರಂಕಿ” ನಲ್ಲಿ ಸೇರಿದೆ. ಅದು ನಮ್ಮೊಳಗೊಂದು ನೆನಪನ್ನು ಬದುಕಿನ ಭಾವುಕ ಕ್ಷಣಗಳನ್ನು ಬಯಲ ಬವಣೆಗಳನ್ನು ಜೀವನಪ್ರೀತಿಯನ್ನು ಹುಟ್ಟು ಹಾಕುವುದು ಖಂಡಿತ. ಮತ್ಯಾಕೆ ನೀವು ಒಮ್ಮೆ ಮಿಲ್ಟ್ರಿ ಟ್ರಂಕ್ ಓದಿ ಬಿಡಿ.
ಡಾ. ಲಕ್ಷ್ಮಣ್ ವಿ ಎ ಯವರ ಲೇಖನಿಯಲ್ಲಿ ಇನ್ನಷ್ಟು ಬರಹಗಳು ಬರಲಿ. ಸಾಹಿತ್ಯಕ್ಕೆ ಕೊಡುಗೆಯಾಗಲಿ.
- ಮಾರುತಿ ಗೋಪಿಕುಂಟೆ