ಲೇಖಕರಾದ ಶಶಿಧರ ಹಾಲಾಡಿ ಅವರ ‘ನಾ ಸೆರೆ ಹಿಡಿದ ಕನ್ಯಾಸ್ತ್ರೀ’ ಪುಸ್ತಕದ ಕುರಿತು ಸಂದೇಶ್.ಎಚ್.ನಾಯ್ಕ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…
ಪುಸ್ತಕ : ನಾ ಸೆರೆ ಹಿಡಿದ ಕನ್ಯಾಸ್ತ್ರೀ
ಲೇಖಕರು : ಶಶಿಧರ ಹಾಲಾಡಿ
ಪ್ರಕಾರ : ಪ್ರಬಂಧ ಸಂಕಲನ
ಪ್ರಕಾಶನ : ವೀರಲೋಕ
ಪುಟ : ೧೬೦.೦೦
ಬೆಲೆ : ೨೦೦.೦೦
ನಮ್ಮ ಕುತೂಹಲದ ಕಣ್ಣು, ಅರಿವಿನ ಹಸಿವು ಇಂಗಿಸಬಲ್ಲ ಒಳಗಣ್ಣು ತೆರೆದಿದ್ದು, ಜೊತೆಗೊಂದಷ್ಟು ಸದಭಿರುಚಿ ಇದ್ದರೆ ಪ್ರಕೃತಿ ತನ್ನೊಡಲೊಳಗೆ ಹುದುಗಿಸಿಟ್ಟುಕೊಂಡ ಮೊಗೆದಷ್ಟೂ ಮುಗಿಯದ ವೈಶಿಷ್ಟ್ಯತೆಗಳು ತೆರೆದುಕೊಳ್ಳುತ್ತವೆ. ‘ನಾ ಸೆರೆ ಹಿಡಿದ ಕನ್ಯಾಸ್ತ್ರೀ’ ಎಂಬ ಪ್ರಬಂಧ ಸಂಕಲನದಲ್ಲಿ ಪತ್ರಕರ್ತ, ಲೇಖಕರಾದ ಶಶಿಧರ ಹಾಲಾಡಿಯವರು ಪ್ರಕೃತಿಯಲ್ಲಿ ಕಂಡುಬರುವ ಅಂಥ ಅಪರೂಪದ ಚಿತ್ರಗಳನ್ನು ತಮ್ಮ ಪ್ರಬಂಧಗಳಲ್ಲಿ ಮೂಡಿಸುವ ಅತ್ಯಂತ ಸಶಕ್ತ ಪ್ರಯತ್ನ ನಡೆಸಿದ್ದಾರೆ. ಇಲ್ಲಿ ಲೇಖಕರು ನಮ್ಮನ್ನು ಅವರ ಬಾಲ್ಯದ ದಿನಗಳಿಗೆ ಕರೆದೊಯ್ದರೂ ಅದದೇ ಹಳಸಲು ವಿಚಾರಗಳ ಸುತ್ತ ಸುತ್ತು ಹೊಡೆಸದೇ, ಅಲ್ಲಿನ ವಿಭಿನ್ನವಾದ, ಹೊಸತೊಂದು ಲೋಕವನ್ನು ನಮಗೆ ತೋರಿಸುತ್ತಾ ಹೋಗುತ್ತಾರೆ.
ಈ ಬರಹಗಳನ್ನು ಓದುತ್ತಾ ಹೋದಂತೆ ಅವು ನಮ್ಮ ಕೈ ಹಿಡಿದು ನಡೆಸಿಕೊಂಡು ಹೋದಂತೆ ಅನಿಸುತ್ತದೆ. ಕಾರಣ ದಾರಿಯ ಅಲ್ಲಿನ ದಾರಿಗಳ ವಿವರಣೆ. ಶಾಲೆ, ಪೇಟೆ, ಯಾವುದೋ ಗುಡ್ಡದಂಥ ಸ್ಥಳಗಳನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಅಲ್ಲಿಗೆ ತಲುಪುವ ಮಾರ್ಗವನ್ನೂ ಅಷ್ಟೇ ಚೆಂದವಾಗಿ ಹೇಳುತ್ತಾರೆ. ಓಣಿ ಇಳಿದು, ಕಾಡನ್ನು ಬಳಸಿ ಒಂದು ಪರ್ಲಾಂಗ್ ನಡೆದು, ಎಡಕ್ಕೆ ತಿರುಗಿ, ತುಸು ಮುಂದೆ ಸಾಗಿದರೆ… ಎನ್ನುವಾಗ ಓದುಗರೂ ಆ ದಾರಿಯಲ್ಲಿ ನಡೆದಂತೆ ಭಾಸವಾಗುತ್ತದೆ. ಅದರೊಂದಿಗೆ ಮನಸ್ಸಿನಲ್ಲಿ ಆ ಮಾರ್ಗದ ಚಿತ್ರವೂ ಮೂಡುತ್ತಾ ಹೋಗುತ್ತದೆ. ಇದು ನಾವು ಸಾಗಿದ ಇಂಥದ್ದೇ ದಾರಿಗಳೂ, ಆ ದಾರಿಯಲ್ಲಿ ಕಂಡ ಸಂಗತಿಗಳನ್ನೂ ಕೂಡಾ ಸ್ಮರಣೆಗೆ ತಂದು ಕೂರಿಸುತ್ತದೆ.
ಪ್ರಕೃತಿಯ ಜೊತೆಗಿನ ಲೇಖಕರ ಗಾಢ ಒಡನಾಟವೇ ಇಲ್ಲಿನ ಪ್ರಬಂಧಗಳ ಸ್ಥಾಯೀ ಭಾವವಾಗಿದೆ. ಈ ಬರಹಗಳು ಅತ್ತ ಕೇವಲ ಮೇಲ್ನೋಟಕ್ಕೆ ಸಿಕ್ಕಿದ್ದಷ್ಟನ್ನು ಹಾಗೆ ಹಾಗೇ ಹೇಳಿಕೊಂಡು ಹೋಗುವ ಅವಸರದ ಅಭಿವ್ಯಕ್ತಿಯೂ ಅಲ್ಲದ, ಇತ್ತ ಆಳವಾದ ತಿಳುವಳಿಕೆ, ಅಧ್ಯಯನ ಸಂಶೋಧನೆಯಿಂದ ಮೂಡಿದ ಸಂಕೀರ್ಣ ಪರಿಭಾಷೆಯಲ್ಲಿ ಹೇಳಲ್ಪಟ್ಟ ಕ್ಲಿಷ್ಟಕರ ಮಂಡನೆಯೂ ಆಗಿರದೇ ಇವೆರಡರ ನಡುವೆ ಒಂದು ಸಮತೋಲನವನ್ನು ಕಾಯ್ದುಕೊಂಡಂಥವು.
ಪ್ರಕೃತಿ ಅನುಭವಕ್ಕೆ ಸಿಗಬೇಕಾದರೆ ಮನಸ್ಸಿನ ಧ್ಯಾನಸ್ಥ ಸ್ಥಿತಿ ಅತ್ಯಂತ ಅವಶ್ಯ ಎಂದೆನ್ನುತ್ತೇವಲ್ಲ, ಲೇಖಕರ ಅಂಥ ಏಕಾಗ್ರತೆ ಇಲ್ಲಿನ ಪ್ರಬಂಧಗಳಲ್ಲಿ ಪ್ರತಿಫಲನಗೊಂಡಿದೆ. ಅದಕ್ಕೆ ಪೂರಕವೆಂಬಂತೆ ಏನನ್ನು ಹೇಳಬೇಕು ಎಂದುಕೊಂಡಿದ್ದಾರೋ ಅದನ್ನು ಹೇಳುವಲ್ಲಿ ಲೇಖಕರು ತೋರಿರುವ ಸಂಯಮ ಹಾಗೂ ಆಸ್ಥೆ, ಕುತೂಹಲದ ಕಣ್ಣು-ಕಿವಿ ತೆರೆದಿಟ್ಟ ಮಕ್ಕಳ ಮುಂದೆ ಕಥೆ ಹೇಳಲು ಸಜ್ಜಾಗಿ ಕುಳಿತ ಅಜ್ಜಿ ಆವಾಹಿಸಿಕೊಳ್ಳುವ ತಾಳ್ಮೆ, ಆಸಕ್ತಿಯನ್ನು ನೆನಪಿಸುತ್ತದೆ.
ಕಾಲದ ಜೊತೆ ಅದೆಷ್ಟೋ ಬದಲಾವಣೆಗಳು ಘಟಿಸುತ್ತಾ ಹೋಗುತ್ತವೆಯಲ್ಲವೇ? ಈಗ ನಮ್ಮ-ನಿಮ್ಮ ಊರ ಮಧ್ಯದಲ್ಲಿ ಇರುವ ಶಾಲೆಯೊಂದು ಹುಟ್ಟಿ ಬೆಳೆದುದರ ಹಿಂದಿನ ಕಥೆ ಈ
ತಲೆಮಾರಿನ ಅದೆಷ್ಟು ಜನರಿಗೆ ತಾನೇ ಗೊತ್ತಿರಲು ಸಾಧ್ಯ? ಆ ಬೆಳವಣಿಗೆಯ ಹಾದಿಯನ್ನು ಅತ್ಯಂತ ಆಕರ್ಷಕವಾಗಿ ಪರಿಚಯಿಸಿದ್ದಾರೆ. ಇದು ಅರೇ.. ನಮ್ಮೂರಿನ ಶಾಲೆಗಳ ಹಿಂದೆಯೂ ಇಂಥದ್ದೇ ಅಸಂಖ್ಯಾತ ಕಥೆಗಳು ಅಡಗಿರಬಹುದೇ ಎಂಬ ಕುತೂಹಲದ ಎಳೆ ಓದುಗರ ಮನದಲ್ಲೂ ಮೂಡಿಸುತ್ತದೆ.
ಅಳಿವಿನಂಚಿನಲ್ಲಿರುವ ಸಸ್ಯಗಳು, ಸ್ಥಳೀಯ ಪ್ರಾಣಿ ಪಕ್ಷಿಗಳು, ಸರ್ಪಗಂಧಿಯ ಬಗೆಗಿನ ಕುತೂಹಲ, ಬಿಳಿ ದಾಸವಾಳ ಬದುಕಿಗೆ ಬೆಸೆದುಕೊಂಡಿದ್ದ ರೀತಿಯಿಂದ ಹಿಡಿದು ಮನುಷ್ಯರ ಲೋಭದ ಫಲವಾಗಿ ನಡೆದ ಕಪ್ಪೆಗಳ ಬೇಟೆ, ಕಿಸ್ಕಾರ ಗಿಡ ಕಿತ್ತೊಯ್ದ ಕಥೆ, ಭಾರೀ ಬುಲ್ಡೋಜರ್‌ಗಳ ಆರ್ಭಟದವರೆಗೆ ಪ್ರಕೃತಿಯಲ್ಲಾಗುತ್ತಿರುವ ಬದಲಾವಣೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಗ್ರಹಿಸಿರುವುದು ಬರಹಗಳಲ್ಲಿ ಅತ್ಯಂತ ಆಪ್ತವಾಗಿ ಗೋಚರಿಸುತ್ತದೆ. ಪುಸ್ತಕದ ಹೆಸರಾದ ‘ನಾ ಸೆರೆ ಹಿಡಿದ ಕನ್ಯಾಸ್ತ್ರೀ’ ಪ್ರಬಂಧದಲ್ಲಿ ಬರುವ ‘ಕನ್ಯಾಸ್ತ್ರೀ’ ಎಂಬ ಅಪರೂಪದ ಅಣಬೆಯ ವಿವರ ಕುತೂಹಲ ಮೂಡಿಸುತ್ತದೆ.
ಕೆಲವೊಂದು ಅಂಶಗಳು ಬೇರೆ ಬೇರೆ ಪ್ರಬಂಧಗಳಲ್ಲಿ ಅಲ್ಲಲ್ಲಿ ಮತ್ತೆ ಮತ್ತೆ ಬಂದಿರುವುದರಿಂದ, ‘ಅಯ್ಯೋ ಇದು ಆಗಲೇ ಓದಿದ್ದೇನಲ್ಲ’ ಎಂಬ ಭಾವ ಮೂಡಿಸಿ ಕೆಲವೊಮ್ಮೆ ಓದಿನ ಸವಿಯನ್ನು ಕೊಂಚ ಪೇಲವಗೊಳಿಸುತ್ತದೆ. ಅಂಥವುಗಳನ್ನು ಮೊದಲೇ ಗುರುತಿಸಿ ಕತ್ತರಿ ಪ್ರಯೋಗ ಮಾಡಬಹುದಿತ್ತು. ಇನ್ನು ಒಂದು ನಿರ್ದಿಷ್ಟ ಪ್ರದೇಶದಲ್ಲಷ್ಟೇ ಬಳಕೆಯಾಗುವ ಹಕ್ಕಲು, ಹಾಡಿ, ಬ್ಯಾಣ, ಕೊಳ್ ಹೂವು, ಒಳ್ಳೆ ಹಾವು, ಸೋಣೆ ಹೂವು ಓಲಿ ಕೊಡೆ ಇತ್ಯಾದಿಗಳನ್ನು ಎಲ್ಲಾ ಓದುಗರಿಗೂ ಅರ್ಥೈಸುವಂತೆ ಒಂದಷ್ಟು ಪರಿಚಯಾತ್ಮಕ ವಿವರಣೆ ಸೇರಿಸುವ ಅಗತ್ಯವಿತ್ತು.
ನಮ್ಮ ಸುತ್ತಲಿನ ಪರಿಸರವನ್ನು, ಹೇಗೆ ಕಂಡರಷ್ಟೇ ಅದು ನಮಗೆ ದಕ್ಕೀತು ಎನ್ನುವುದಕ್ಕೆ ಅನುಕರಣೀಯ ಮಾದರಿ ಈ ಪ್ರಬಂಧಗಳಲ್ಲಿದೆ. ನಮ್ಮ ಕುತೂಹಲದ ಕಣ್ಣೋಟಗಳನ್ನು ಇನ್ನಷ್ಟು ಸೂಕ್ಷ್ಮಗೊಳಿಸುವ, ಅದರ ವ್ಯಾಪ್ತಿಯನ್ನು ಹಿಗ್ಗಿಸುವ ನಿಟ್ಟಿನಲ್ಲಿ ಇಲ್ಲಿನ ಬರಹಗಳು ಬಲು ಪರಿಣಾಮಕಾರಿ. ಈ ಬರಹಗಳ ಚುಂಗು ಹಿಡಿದು ಸಾಗಿದಂತೆ ಸುಂದರ ಪರಿಸರದ ಭಾಗವಾದ ನಾವು ನಮ್ಮ ಬದುಕಿನಲ್ಲಿ ಕಳೆದುಕೊಂಡಿದ್ದೇನು ಹಾಗೂ ಕಳೆದುಕೊಳ್ಳುತ್ತಿರುವುದೇನು ಎನ್ನುವುದು ನಮ್ಮ ಮುಂದೆ ತೆರೆದಿಡಲ್ಪಡುತ್ತದೆ. ಇವುಗಳಲ್ಲಿ ನಮ್ಮೊಳಗೆ ಇಳಿಯಬೇಕಾದ ಪರಿಸರದ ಬಗೆಗಿನ ಜಾಗೃತಿ ಹಾಗೂ ಕಳಕಳಿಯ ಒಸರೂ ಇದೆ.
- ಸಂದೇಶ್.ಎಚ್.ನಾಯ್ಕ್ , ಕುಂದಾಪುರ.