ಯು ಸಿರಾಜ್ ಅಹಮದ್ ಸೊರಬ ಅವರ ‘ನವಿಲಿಗೆ ಸಾವಿರ ನಯನಗಳು’ ಗಜಲ್ ಸಂಕಲನದ ಕುರಿತು ನಾರಾಯಣಸ್ವಾಮಿ.ವಿ ಅವರು ಬರೆದಿರುವ ಪುಸ್ತಕ ಪರಿಚಯ, ತಪ್ಪದೆ ಮುಂದೆ ಓದಿ…
ಕೃತಿ : ನವಿಲಿಗೆ ಸಾವಿರ ನಯನಗಳು
ಲೇಖಕರು : ಯು ಸಿರಾಜ್ ಅಹಮದ್ ಸೊರಬ
ಪ್ರಕಾಶಕರು : ಉಡುತಡಿ ಪ್ರಕಾಶನ ಸೊರಬ
ಬೆಲೆ : ೧೨೦. ೦೦
ಮನಸ್ಸನ್ನು ಗಜಲ್ ಲೋಕಕ್ಕೆ ಸೆಳೆಯುವ ಷೇರ್ ಗಳು
ಪ್ರತಿಭೆ ಪ್ರಚಾರವನ್ನು ಬಯಸುವುದಿಲ್ಲ ಅವಕಾಶಗಳನ್ನು ಬೇಡುವುದಿಲ್ಲ ಮನಸ್ಸು ಧ್ಯಾನಿಸುತ್ತದೆ ಭೋದಿಸುತ್ತದೆ ತನ್ನಂತರಂಗದಲ್ಲಿ ಉರಿಯುವ ಹಣತೆಯು ಸಮಾಜವನ್ನು ತಿದ್ದಲಿ ನೊಂದವರ ಬದುಕಿಗೆ ಬೆಳಕಾಗಲಿ ಎಂದು ಬಯಸುತ್ತದೆ.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉದಯವಾದ ಕಾವ್ಯ ಗಜಲ್ ಇಂದು ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಮಹತ್ತರವಾದ ಕಾವ್ಯ ಶಕ್ತಿಯಾಗಿ ಇಂದೆಂದಿಗಿಂತಲೂ ಈಗ ಕನ್ನಡದ ಆಧುನಿಕ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಪಡೆಯುತಿದೆ ಕನ್ನಡದಲ್ಲೂ ಬಹಳಷ್ಟು ಗಜಲ್ ಕಾರರು ಬೆಳಕಿಗೆ ಬರುತ್ತಿರುವುದು ಹೆಮ್ಮೆಯ ಸಂಗತಿ.
ಬಹಳಷ್ಟು ಹಿರಿಯ ಸಾಹಿತಿಗಳು ಲೇಖಕರು ಗಜಲ್ ಕಾವ್ಯ ಕಾವ್ಯವೇ ಅಂತ ಮೂದಲಿಸಿದರು. ಬಹಳಷ್ಟು ಹಿರಿಯ ಗಜಲ್ ಕಾರರು ಇತ್ತೀಚೆಗೆ ಬರೆಯುತ್ತಿರುವ ಗಜಲ್ ಗಾರರು ಗಜಲ್ ನಿಯಮಗಳನ್ನು ಅನುಸರಿಸುತ್ತಿಲ್ಲವೆಂದು ದೂರಿದರು. ಮತ್ತಷ್ಟು ಹಿರಿಯ ಗಜಲ್ ಕವಿಗಳು ಗಜಲ್ ಕಾವ್ಯ ಬರೀ ಪ್ರೇಮ ಪ್ರೀತಿಗೆ ವಿರಹಕ್ಕೆ ಸಂಬಂಧಪಟ್ಟ ಕಾವ್ಯ ಮಾತ್ರ ಎಂದು ಹೇಳಿದರು. ಮತ್ತೆ ಕೆಲವರು ಗಜಲ್ ಕಾರರು ಗಜಲ್ ಕಾವ್ಯದಲ್ಲಿ ಬಂಡಾಯ ಸಾಮಾಜಿಕ ಶೋಷಣೆ ಚಿಂತನೆಗಳನ್ನು ಕಾವ್ಯವಾಗಿ ಹೊರಹೊಮ್ಮಿಸ ಬಹುದೆಂದು ತಿಳಿಸಿದರು ಒಂದು ಕಾವ್ಯದ ಬಗ್ಗೆ ಗಜಲ್ ಕಾರರಲ್ಲಿ ಇಷ್ಟೆಲ್ಲಾ ವೈರುಧ್ಯಗಳಿದ್ದರೂ ಸಹ ಬರಹಗಾರರನ್ನು ಒಂದು ಶಕ್ತಿಯಾಗಿ ಈ ಗಜಲ್ ಕಾವ್ಯ ಸೆಳೆಯುತಿದೆ. ವಷ೯ಕ್ಕೆ ನೂರಾರು ಗಜಲ್ ಕೃತಿಗಳು ಕನ್ನಡದ ಇತ್ತೀಚಿಗೆ ಬಿಡುಗಡೆಯಾಗುತ್ತಿವೆ.
ನನ್ನ ಓದಿನ ಪ್ರಕಾರ ಕನ್ನಡದ ಗಜಲ್ ಕಾವ್ಯ ಪರಂಪರೆಯನ್ನು ಮೊದಲಿಗೆ ಕನ್ನಡ ಸಾಹಿತ್ಯಲೋಕಕ್ಕೆ ತಂದು ಗಜಲ್ ನ್ನು ರಚನೆ ಮಾಡಿ ಪರಿಚಯಿಸಿದವರು ಶಾಂತರಸರು. ಅವರ ಗಜಲ್ ಕೃತಿಗಳು ಹೊರ ಬಂದಿದಿಯೋ ಇಲ್ಲವೋ ಗೊತ್ತಿಲ್ಲ ಅದರೆ ಶಾಂತರಸರ ಮಗಳಾದ ಶ್ರೀಮತಿ ಮುಕ್ತಾಯಕ್ಕನವರು ಕನ್ನಡ ಸಾಹಿತ್ಯದಲ್ಲಿ ಮೊದಲ ಗಜಲ್ ಗಾತಿ೯ಯೆಂದು ಗುರುತಿಸಿಕೊಂಡವರು ಮೊದಲ ಗಜಲ್ ಕೃತಿಯನ್ನು ಕನ್ನಡದಲ್ಲಿ ಹೊರತಂದು ಕನ್ನಡ ಮೊದಲ ಗಜಲ್ ಕಾರರೆಂದು ಗುರುತಿಸಿಕೊಂಡವರು ಮುಕ್ತಾಯಕ್ಕನವರೆಂದು ನನ್ನ ವೈಯಕ್ತಿಕ ಭಾವನೆ.
ನಂತರದಲ್ಲಿ ಕನ್ನಡ ಸಾಹಿತ್ಯದಲ್ಲಿ ಗಜಲ್ ಕಾವ್ಯ ಪರಂಪರೆ ಯಾನ ಮುಂದುವರಿಯಿತು. ಬಹಳಷ್ಟು ಜನರು ಗಜಲ್ ಕಾವ್ಯ ರಚಿಸಲು ಪ್ರಾರಂಭಿಸಿದರು ಅವರಲ್ಲಿ ಗಿರೀಶ್ ಜಕ್ಕಾಪುರೆ, ಶ್ರೀದೇವಿ ಕೆರೆಮನೆ, ಸಿದ್ದರಾಮ ಹೊನ್ಕಲ್, ಮಲ್ಲಿನಾಥ್ ತಳವಾರ್, ಅಲ್ಲಾ ಗಿರಿರಾಜ್ ಇನ್ನೂ ಅನೇಕ ಸಮಕಾಲೀನ ಗಜಲ್ ಕಾರರು ಗಜಲ್ ಕಾವ್ಯ ಬರೆಯುತ್ತಾ ಗಜಲ್ ಕಾರರಾಗಿ ಬೆಳಕಿಗೆ ಬಂದರು. ಇವರ ಜೊತೆಯಲ್ಲಿಯೇ ಗಜಲ್ ಸಾಹಿತ್ಯವನು ಹಿಂದಿ ಉದು೯ ಸಾಹಿತ್ಯದಲ್ಲಿ ಓದಿ ಅಥೈ೯ಸಿಕೊಂಡು ಆರಗಿಸಿಕೊಂಡವರು ಗಜಲ್ ಬರೆಯುತ್ತಾ ಬಂದವರು ಯು. ಸಿರಾಜ್ ಅಹಮದ್ ರವರು.
ಯು ಸಿರಾಜ್ ಅಹಮದ್ ರವರಿಗೆ ಗಜಲ್ ಕಾವ್ಯ ಬಹುಬೇಗ ಒಲಿಯಲು ಕಾರಣ ಅವರ ಮಾತೃಭಾಷೆ ಉದು೯. ಅವರ ಪ್ರಾಥಮಿಕ ಶಿಕ್ಷಣವೂ ಉದು೯ ಭಾಷೆಯಾಗಿದ್ದರಿಂದ ಉದು೯ಕಾವ್ಯವಾದ ಗಜಲ್ ಸಾಹಿತ್ಯವನ್ನು ಬಹುಬೇಗ ಅಥ೯ಮಾಡಿಕೊಂಡು ನಿಯಮಬದ್ದವಾಗಿ ಗಜಲ್ ಬರೆದು ಗಜಲ್ ಕಾರರೆಂದು ಗುತಿ೯ಸಿಕೊಂಡರು.
ಯು ಸಿರಾಜ್ ಅಹಮದ್ ರವರು ಕನ್ನಡ ನಾಡಿನ ಖ್ಯಾತ ಗಜಲ್ ಕಾರರು. ಇವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನವರು. ಓದಿದ್ದು ಕಡಿಮೆಯಾದರೂ ಕೂಡ ಗಜಲ್ ಸಾಹಿತ್ಯದಲ್ಲಿ ಅಪಾರವಾದ ಜ್ಞಾನವನ್ನು ಪಡೆದುಕೊಂಡು ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ತಮ್ಮ ವಿದ್ವತ್ಪೂರ್ಣ ಬರಹಗಳಿಂದ ಜನ ಮನ್ನಣೆಯನ್ನು ಪಡೆದಿದ್ದಾರೆ.
ತನ್ನ ಬದುಕನ್ನು ರೂಪಿಸಿಕೊಳ್ಳಲು ಯು ಸಿರಾಜ್ ಅಹಮದ್ ಆಯ್ದುಕೊಂಡಿದ್ದು ವ್ಯಾಪರದ ವೃತಿಯನ್ನು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನೆಲೆಸಿರುವ ಇವರು ತನ್ನ ವೃತಿಯೊಂದಿಗೆ ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು ಮನದ ಮಾತು ಎಂಬ ಕವನಸಂಕಲನ ಮತ್ತು ನವಿಲಿಗೆ ಸಾವಿರ ನಯನಗಳೆಂಬ ಎರಡು ಕೃತಿಗಳನ್ನು ಹೊರತಂದಿದ್ದಾರೆ.
ಯು ಸಿರಾಜ್ ಅಹಮದ್ ಸೊರಬ ಇವರು ಕವನ, ಲೇಖನ, ಚುಟುಕು, ಹೈಕು, ಶಾಯಿರಿ, ರುಬಾಯಿ ಪ್ರಬಂಧ, ಭಾವಗೀತೆ, ಗಜಲ್ ಈ ಎಲ್ಲಾ ಪ್ರಕಾರಗಳನ್ನು ಬರೆಯುತ್ತಾ ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳನ್ನು ತನ್ಮದಾಗಿಸಿಕೊಂಡಿದ್ದಾರೆ.
ಕನಾ೯ಟಕ ರಾಜ್ಯೋತ್ಸವ ಭೂಷಣ ಪ್ರಶಸ್ತಿ , ಕರುನಾಡು ಸೇವಾ ರತ್ನ ಪ್ರಶಸ್ತಿ, ಶರಣ ಗೌರವ ಪುರಸ್ಕಾರ ಹೀಗೆ ಹಲವು ಪ್ರಶಸ್ತಿಗಳು ಸಂದಿವೆ ಮತ್ತು ಕನಾ೯ಟಕದ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸಾಹಿತ್ಯದ ಪ್ರತಿಭೆಗಾಗಿ ಅಭಿನಂದಿಸಿ ಗೌರವಿಸಿವೆ.
ಯು ಸಿರಾಜ್ ಅಹಮದ್ ನನಗೆ ಪರಿಚಯವಾಗಿದ್ದು ಕವಿಗಳು, ಸಂಘಟಕರು, ರೇಖಾಚಿತ್ರ ಕಲಾವಿದರಾದ ಶಿವ ಪ್ರಸಾದ್ ಆರಾಧ್ಯ ನೆಲಮಂಗಲ ಇವರಿಂದ. ಇವರು ನನ್ನ ಅಂತರಂಗದ ಧ್ಯಾನ ಗಜಲ್ ಕೃತಿಗೆ ರೇಖಾಚಿತ್ರಗಳನ್ನು ಬರೆದುಕೊಟ್ಟವರು. ನನ್ನ ಅಂತರಂಗದ ಧ್ಯಾನ ಕೃತಿಯನ್ನು ಲೋಕಾರ್ಪಣೆಗೆ ದಿನಾಂಕ ನಿಗದಿಯಾದಾಗ ಆ ಕಾರ್ಯಕ್ರಮದಲ್ಲಿ ನನ್ನ ಕೃತಿಯನ್ನು ಪರಿಚಯ ಮಾಡಲು ಬಹಳಷ್ಟು ಗಜಲ್ ಕಾರರನ್ನು ನಾನು ಕೇಳಿಕೊಂಡಾಗ ಬಹಳಷ್ಟು ನೆವ ಹೇಳಿ ಜಾರಿಕೊಂಡರು. ಆಗ ಶಿವಪ್ರಸಾದ್ ಆರಾಧ್ಯ ಸರ್ ಯು ಸಿರಾಜ್ ಆಹಮದ್ ಸೊರಬ ಅಂತ ಗಜಲ್ ಕಾರರು ನಮ್ಮ ಸ್ನೇಹಿತರು ನೆಲಮಂಗಲದಲ್ಲಿ ಇದ್ದಾರೆ ಅವರನ್ನು ಕೇಳಿ ಒಳ್ಳೆಯ ಸಹೃದಯವಂತ ಮನುಷ್ಯ ಕಿರಿಯ ಬರಹಗಾರರಿಗೆ ಬಹಳಷ್ಟು ಪ್ರೋತ್ಸಾಹ ಕೊಡುತ್ತಾರೆ ಅಂದಾಗ, ನಾನು ಪೋನ್ ಕಾಲ್ ಮೂಲಕ ಅವರನ್ನು ಕೇಳಿಕೊಂಡಾಗ ಖುಷಿಯಾಗಿ ಒಪ್ಪಿಕೊಂಡರು ಮತ್ತು ಕಾರ್ಯಕ್ರಮಕ್ಕೆ ಬಂದು ಪುಸ್ತಕ ಪರಿಚಯ ಮಾಡಿ ನನಗೊಂದು ಗಜಲ್ ಸಂಕಲನ ನೀಡಿ ಈ ಪುಸ್ತಕ ಓದಿ ಗಜಲ್ ಗಳ ಬಗ್ಗೆ ಬಹಳಷ್ಟು ಮಾಹಿತಿ ಸಿಗುತ್ತದೆ ಬರವಣಿಗೆ ಮುಂದುವರಿಸಿ ಶುಭವಾಗಲಿ ಅಂತ ಹೇಳಿ ಹೋದರು.
ಯು ಸಿರಾಜ್ ಅಹಮದ್ ರವರು 2016 ರಲ್ಲಿ ಚೊಚ್ಚಲ ಕವನ ಸಂಕಲನ ಮನದ ಮಾತು ಎಂಬ ಕೃತಿಯನ್ನು ಪ್ರಕಟಿಸಿದರು ಆ ಕೃತಿಯು 2017 ರಲ್ಲಿ ಮತ್ತೆ ಮರುಮುದ್ರಣವಾಗಿ ಓದುಗರನ್ನು ಸೆಳೆಯಿತು.
ಇತ್ತೀಚೆಗೆ ಯು ಆರ್ ಸಿರಾಜ್ ಅಹಮದ್ ಅವರು ನವಿಲಿಗೆ ಸಾವಿರ ನಯನಗಳು ಅನ್ನುವ ಗಜಲ್ ಕೃತಿಯ ಪ್ರಕಟನೆಯನ್ನು ಕಂಡು ಓದಲೇಬೇಕೆಂಬ ಮನಸ್ಸಿನಿಂದ ಅವರಿಗೆ ಹಣ ಕಳುಹಿಸಿ ಪುಸ್ತಕ ಪಡೆದುಕೊಂಡೆ. ಅದರೆ ಆ ಪುಸ್ತಕವನ್ನು ಓದಲು ಸಮಯ ಸಿಗದ ಕಾರಣ ಇಂದು ಕೈಗೆತ್ತಿಕೊಂಡು ಪುಸ್ತಕವನ್ನು ಓದತೊಡಗಿದಾಗ ಪುಸ್ತಕದೊಳಗಿನ ಅದ್ಬುತವಾದ ಷೇರ್ ಗಳು ಮನವನ್ನು ತಾಕೀದವು.
ಈ ನವಿಲಿಗೆ ಸಾವಿರ ನಯನಗಳೆಂಬ ಗಜಲ್ ಕೃತಿಯನ್ನು ಉಡುತಡಿ ಪ್ರಕಾಶನ ನೆಲಮಂಗಲ ಇವರು ಹೊರತಂದಿದ್ದಾರೆ.
ಈ ನವಿಲಿಗೆ ಸಾವಿರ ನಯನಗಳು ಗಜಲ್ ಕೃತಿಗೆ ಸಾವನ್ ಕೆ ಸಿಂಧನೂರು ಇವರು ಬಹು ವಿಸ್ತಾರವಾಗಿ ಮುನ್ನುಡಿಯನ್ನು ಬರೆದು ಗಜಲ್ ಗಳನ್ನು ಮೂಲ ಛಂದಸ್ಸಗಳ ಶಾಸ್ತ್ರೀಯ ಅಧ್ಯಯನ ಚೌಕಟ್ಟಿನಲ್ಲಿ ಬರೆಯುವ ಕೆಲವೇ ಕನ್ನಡದ ಗಜಲ್ ಕಾರರಲ್ಲಿ ಯು ಸಿರಾಜ್ ಅಹಮದ್ ಸೊರಬ ಒಬ್ಬರು. ಕೃತಿಯಲ್ಲಿರುವ ಸುಮಾರು ಅರವತ್ತೇಳು ಗಜಲ್ ಗಳಲ್ಲಿ ಎಲ್ಲವೂ ಕೂಡ ಮೊದಲನೇಯ ಚರಣದಿಂದ ಕೊನೆಯ ಚರಣದ ವರೆಗೂ ಸಮಾನ ಮಾತ್ರೆ ಅಕ್ಷರಗಳು ಇರುವುದನ್ನು ಕಾಣಬಹುದು ಇದೊಂದು ಉತ್ತಮ ಕೃತಿಯೆಂದು ಹೇಳಿ ಶುಭ ಹಾರೈಸಿದ್ದಾರೆ.
ನವಿಲಿಗೆ ಸಾವಿರ ನಯನಗಳು ಕೃತಿಗೆ ಖ್ಯಾತ ಗಜಲ್ ಕಾರರಾದ ಅಬ್ದುಲ್ ಹೈ ತೋರಣಗಲ್ಲು ಬೆನ್ನುಡಿಯನ್ನು ಬರೆದು ಕನ್ನಡದ ಗಜಲ್ ಬರವಣಿಗೆಯ ಇತಿಹಾಸದಲ್ಲಿ ಸಂಪೂರ್ಣ ಮಾತ್ರಗಣದ ಪ್ರಯೋಗ ಹೊಂದಿದ ಮೊದಲ ಗಜಲ್ ಸಂಕಲನ ಇದೆದೆಂದು ಹೇಳಲು ಹೆಮ್ಮೆಯಾಗುತ್ತದೆ. ಮಾನವೀಯತೆಗೆ ಒತ್ತು ಕೊಡುವ ಇವರ ಗಜಲ್ ಗಳು ದ್ವೇಷದುರಿ ಬೇಗೆಯಲಿ ದಯೆಯ ತಂಪು ಹುಡುಕುತ್ತಾ ಬಸವಿಳಿದ ಭಾವಗಳ ಜೀವಕೆ ಹೂ ನಗೆ ಚೆಲ್ಲಿ ಎದೆಯ ಗಾಯ ಒರೆಸುತ್ತಾ ಮನುಜನ ಪ್ರೀತಿಗೆ ಹಾತೊರೆಯುವುದನ್ನು ಕಾಣುತ್ತವೆ. ಇಂತಹ ಅದ್ಬುತವಾದ ಕೃತಿಯನ್ನು ಕೊಂಡು ಓದಿ ಎಂದು ಹೇಳುತ್ತಾ ಶುಭ ಹಾರೈಸಿದ್ದಾರೆ.
ಹೊಸದಾಗಿ ಗಜಲ್ ಬರೆಯುವ ಕಲಿಕಾಥಿ೯ಗಳಿಗೆ ಗಜಲ್ ನಿಯಮಗಳೇನು? ಗಜಲ್ ಕಾವ್ಯವನ್ನು ಯಾವ ರೀತಿಯಾಗಿ ಬರೆಯಬೇಕು? ಸಂಖ್ಯಾ ಗಣದ ಮೂಲಕ ಗಜಲ್ ಬರೆಯುವ ರೀತಿ ಯಾವ ಯಾವ ಮಾದರಿಯಲ್ಲಿ ಗಜಲ್ ಕಾವ್ಯವನ್ನು ಬರೆಯಬಹುದು ಅಂತ ಈ ನವಿಲಿಗೆ ಸಾವಿರ ನಯನಗಳು ಗಜಲ್ ಕೃತಿಯಲ್ಲಿ ನಾವು ಕಾಣಬಹುದಾಗಿದೆ.
ಮಾತೃಭಾಷೆ ಉದು೯ ಆಗಿರುವುದರಿಂದ ಗಜಲ್ ಕಾರರು ಬಹಳಷ್ಟು ಹಿಂದಿ ಮತ್ತು ಉದು೯ ಗಜಲ್ ಸಾಹಿತ್ಯವನ್ನು ಓದುವ ಮೂಲಕ ಆ ಸಾಹಿತ್ಯವನ್ನು ಅಥೈ೯ಸಿಕೊಂಡು ಪದಗಣದ ಗಜಲ್ ಕೃತಿಯನ್ನು ಬರೆದಿದ್ದಾರೆ. ಈ ಕೃತಿಯನ್ನು ಬರೆಯಲು ಬಹಳಷ್ಟು ವರುಷಗಳನ್ನೆ ಇವರು ತೆಗೆದುಕೊಂಡಿದ್ದಾರೆ. ಯಾಕೆ ಈ ಕೃತಿಯಲ್ಲಿನ ಗಜಲ್ ಪ್ರತಿಯೊಂದು ಷೇರ್ ಕೂಡ ಸಮಾನ ಪದಗಳ ಮಾತ್ರ ಗಣದಲ್ಲಿ ಇವೆ.
ನವಿಲಿಗೆ ಸಾವಿರ ನಯನಗಳು ಕೃತಿಯಲ್ಲಿ ಸುಮಾರು ಅರವತ್ತೇಳು ಗಜಲ್ಗಳಿವೆ. ಒಂದೊಂದು ಗಜಲ್ ಪ್ರತಿ ಷೇರ್ ನ ಕಾಫಿಯಾ ರದೀಪ್ ಗಳನ್ನು ಬಲಿಷ್ಠವಾದ ಪದಗಳಿಂದ ಕಟ್ಟಿದ್ದಾರೆ ಈ ಕೃತಿಯಲ್ಲಿರುವ ಕೆಲವು ಷೇರ್ ಗಳನ್ನು ಇಲ್ಲಿ ಪರಿಚಯಿಸುವೆ.
ನೇಸರನುಸಿರಿಗೆ ಸೋಲದೇ ಬೆವರ ಜಳಕ ಮಾಡಿದವ
ಬಿರುಗಾಳಿಯಲಿ ತನುಮನವ ಧೃಡವಾಗಿಸಿದ ಜನಕ
ಈ ಗಜಲ್ ನ ಷೇರ್ ಗಳನ್ನು ಎಷ್ಟು ಅದ್ಬುತವಾಗಿ ಬರೆದಿದ್ದಾರೆ ಅಂದರೆ ಈ ಪದಗಳನ್ನು ಸೇರಿಸಲು ಬಹಳಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ. ಬಹಳಷ್ಟು ಶ್ರಮವನ್ನು ಹಾಕಿ ಈ ಗಜಲ್ ಕೃತಿಯ ಷೇರ್ ನ್ನು ಬರೆದಿದ್ದಾರೆ. ಈ ಮೇಲಿನ ಷೇರ್ ನ್ನು ತಂದೆಯ ಗಟ್ಟಿತನ ಜೀವನದ ಬಗ್ಗೆ ಬರೆದಿದ್ದಾರೆ.
ತಂದೆಯದು ಆಗಸದಷ್ಟು ವಿಶಾಲವಾದ ಮನಸ್ಸು ಮತ್ತು ಬೆಟ್ಟದಷ್ಟು ಗಟ್ಟಿಯಾದ ಹೃದಯ ತನ್ನ ಸಂಸಾರಕ್ಕಾಗಿ, ಮಕ್ಕಳಿಗಾಗಿ ಇಡೀ ಸಮಾಜವನ್ನೆ ಅಲ್ಲ ಉರಿಯುವ ಸೂರ್ಯನ ಉಸಿರಿಗೂ ಕೂಡ ಅಪ್ಪ ಸೋಲಲಾರನು.
ಆ ಭಯಂಕರವಾದ ಬಿಸಿನಲ್ಲಿ ಬೆವರಿನಿಂದಲೇ ಜಳಕವನು ಮಾಡಿದವನು. ಬೀಸುವ ಬಿರುಗಾಳಿಯೂ ಬಂದರು ಕೂಡ ಆ ಕಷ್ಟಗಳೆಂಬ ಬಿರುಗಾಳಿಯ ಹೊಡೆತಕ್ಕೆ ಸಿಕ್ಕರೂ ಧೃತಿಗೆಡದೆ ತನ್ನ ಮನಸ್ಸು ಹೃದಯವನ್ನು ಬಲಿಷ್ಠವಾಗಿ ಧೃತಿಗೆಡದೆ ಸಂಸಾರದ ನೊಗವನ್ನು ಎಳೆಯುತ್ತಾ ಗುರಿ ಮುಟ್ಟಿದವನು ಅಪ್ಪ ಅಂತ ಬಹು ಅಥ೯ಪೂಣ೯ವಾಗಿ ಗಜಲ್ ಬರೆದಿದ್ದಾರೆ.
ಪಾಳು ಮನೆಯ ಕಿಟಕಿಯಿಂದ ಒಂಟಿತನದ ನೋವು ಕೇಳಿ
ಬಾಳು ಮರೆತ ವಿರಹಿಯಿಂದ ಒಂಟಿತನದ ನೋವು ಕೇಳಿ
ಈ ಮೇಲಿನ ಗಜಲ್ ಷೇರ್ ಗಳಲ್ಲಿ ಒಬ್ಬ ಮನುಷ್ಯ ಒಂಟಿತನದಿಂದ ಎಷ್ಟು ಯಾತನೆಯನ್ನು ಅನುಭವಿಸುತ್ತಾನೆ. ಆ ಒಂಟಿತನದ ನೋವು ಎಷ್ಟು ಘೋರವಾಗಿರುತ್ತದೆ ಎಂಬುದನ್ನು ಬಹು ಮನೋಜ್ಞವಾಗಿ ಬರೆದಿದ್ದಾರೆ.
ಮನಸ್ಸನ್ನು ಪಾಳು ಬಿದ್ದಿರುವ ಮನೆಗೆ ಹೋಲಿಸಿರುವ ಗಜಲ್ ಕಾರರು ಯಾರು ಕೂಡ ಆ ಮನೆಯಲ್ಲಿ ವಾಸಿಸದೇ ಕಸದ ಗೂಡಾಗಿ ಗಿಡಗಂಟೆಗಳು ಹಾವು ಹುಳು ಉಪ್ಪಟೆಗಳ ತಾಣವಾದ ಪಾಳು ಬಿದ್ದ ಮನೆಯ ಒಂಟಿತನ ನೋಡಿದರೆ ಮರುಕವಾಗುತ್ತದೆ ಅದೇ ರೀತಿ ಪ್ರೀತಿಸಿದ ವ್ಯಕ್ತಿ ಮೋಸ ಹೋಗಿಯೋ ಪ್ರೀತಿ ಸಿಗದೇ ವಿರಹಿಯಾದಾಗ ಅವನು ತನ್ನ ಮುಂದಿನ ಬದುಕನ್ನೆ ಮರೆತು ಹೋಗುತ್ತಾನೆ. ಈ ಜೀವನವೇ ನಶ್ವರ ಎಂಬ ತಿಳಿಯುತ್ತಾನೆ. ಈ ಜೀವನದಲ್ಲಿ ಎನೋ ಕಳೆದುಕೊಂಡ ಭಾವದಲ್ಲಿ ಅವನ ಮನಸ್ಸು ಹುಚ್ಚನಂತೆ ಇರುತ್ತದೆ ಆ ಸ್ಥಿತಿಯಲ್ಲಿ ಅವನ ಒಂಟಿತನದ ನೋವು ಕೇಳಿ ಅವನ ನೋವು ಎಷ್ಟು ದುಸ್ತರವಾಗಿರಬಹುದೆಂದು ಅದೇ ರೀತಿಯಲ್ಲಿ ಗಂಡನನ್ನು ಕಳೆದುಕೊಂಡ ಹೆಂಡತಿಯ ಅಥಾವ ವಿಧವೆಯ ಒಂಟಿತನ ನೋವು ಎಷ್ಟು ಕರುಣಾಜನಿಕವಾಗಿರುತ್ತದೆ ಎಂದು ಗಜಲ್ ಕಾರ ಊಹಿಸಿ ಈ ಗಜಲ್ ಬರೆದಿದ್ದಾರೆ.
ಎಷ್ಟು ಸುಲಭವಾಗಿ ನೀನು ಧಿಕ್ಕರಿಸಿಬಿಟ್ಟೆ
ನಡು ದಾರಿಯಲಿ ಕೆಂಡಗಳ ಸುರಿದು ಹೋದೆಯಾ
ಆಹಾ ಎಂತ ಅದ್ಬುತ ಷೇರ್ ಇದು ಇಂತಹ ಷೇರ್ ಗಳನ್ನು ಗಜಲ್ ನಲ್ಲಿ ಓದುವುದೇ ಒಂದು ರೋಮಾಂಚಕ. ತನ್ನನ್ನು ಪ್ರೀತಿಸಿದ ಹೃದಯವನ್ನು ಒಂದು ಹೆಣ್ಣು ಆವನ ಪ್ರೀತಿಸಿ ಧಿಕ್ಕರಿಸಿ ಹೋದಾಗ ನೊಂದ ಆ ಹೃದಯ ತಾನು ಉಸಿರಿನಂತೆ ಪ್ರೀತಿಸಿದ ಹೃದಯವನ್ನು ಕೇಳುತ್ತದೆ. ನನ್ನ ಹೃದಯ ಜಾತ್ರೆಯಲ್ಲಿ ಮಾರುವ ಆಟದ ವಸ್ತು ಗಿಲಿಯೆಂದು ನೀನು ಮುರಿದು ಹೋದೆಯಾ ನಾನು ಬಡವ ಅಂತ ತಿಳಿದು ನನ್ನ ಬದುಕಿನಿಂದ ದೂರ ಸರಿದು ಹೋದೆಯಾ, ಅದೆಷ್ಟು ಸುಲಭವಾಗಿ ನೀನು ಜೀವವಾಗಿ ಪ್ರೀತಿಸಿದ ನನ್ನನ್ನು ಧಿಕ್ಕರಿಸಿಬಿಟ್ಟೆ. ಎಂತಹ ಕಠೋರ ಮನಸ್ಸು ನಿನ್ನದು ನೀನು ನನ್ನ ಧಿಕ್ಕರಿಸಿ ಹೋದಾಗ ಹಾಗೇ ಹೋಗಲಿಲ್ಲ ನಡುದಾರಿಯಲ್ಲಿ ಬೆಂಕಿಯ ಕೆಂಡಗಳನ್ನು ಸುರಿದು ಹೋದೆಯಾ? ಗೆಳತಿ ನಾನು ಬಣ್ಣದಲ್ಲಿ ಕರಿಯಾ ನಿರಬಹುದು ಅಷ್ಟೇ ನೀನು ಚಮ೯ಕ್ಕೆ ಬೆಲೆಕೊಟ್ಟೆ ನನ್ನದು ಬಿಳಿ ಚಮ೯ವೆಂದು ಗವ೯ಪಟ್ಟು ನನ್ನ ತೊರೆದು ಹೋದೆ.
ಕೇಳು ಇಲ್ಲಿ ಕಂಡ ಕಂಡ ಸೆರಗಿನ ದಾಸನಲ್ಲ ನಿನ್ನನ್ನು ಪ್ರೀತಿಸಿದ ಜೀವ ನಿನ್ನನ್ನು ಉಸಿರಾಗಿ ಪ್ರೀತಿಸಿದೆ ಅದರೆ ನೀನು ನನ್ನ ಬುಗುರಿಯಂತೆ ಭಾವಿಸಿ ಅದರೊಂದಿಗೆ ಆಟವಾಡಿ ಜರಿದು ಹೋದೆ ಅಂತ ಮನೋಜ್ಞವಾಗಿ ಷೇರ್ ಗಳನ್ನು ರಚಿಸುವಲ್ಲಿ ಗಜಲ್ ಕಾರರು ಯಶಸ್ವಿಯಾಗಿದ್ಫಾರೆ.
ಈ ಗಜಲ್ ಸಂಕಲನ ಎಲ್ಲಾ ಗಜಲ್ ಗಳನ್ನು ವಿವರಿಸುತ್ತಾ ಹೋದರೆ ಓದುಗ ಮನದಲ್ಲಿ ಈ ಕೃತಿಯ ಬಗ್ಗೆ ಕುತೂಹಲ ಕಳೆದು ಹೋಗಬಹುದು ಅದರಿಂದ ಕೆಲವೊಂದು ಸಾಲುಗಳನ್ನು ಅಷ್ಟೇ ಪರಿಚಯಿಸಿದೆ. ದಯವಿಟ್ಟು ಗಜಲ್ ಕಲಿಯುವಂತಹ ಗಜಲ್ ಬರೆಯುತ್ತಿರುವಂತಹ ಬರಹಗಾರರು ಓದುಗ ಪ್ರಿಯರು ಎಲ್ಲಾರೂ ನವಿಲಿಗೆ ಸಾವಿರ ನಯನಗಳು ಈ ಗಜಲ್ ಸಂಕಲನವನ್ನು ಕೊಂಡು ಓದಿ ಗಜಲ್ ಕಾರರಿಗೆ ಪ್ರೋತ್ಸಾಹ ಮಾಡುವಿರೆಂದು ಬಯಸುವೆ.
ಆತ್ಮೀಯವಾಗಿ ಪುಸ್ತಕವನ್ನು ಕೊಟ್ಟು, ನಿಮ್ಮ ಕೃತಿಯನ್ನು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ತಂದುಕೊಡಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ.
- ನಾರಾಯಣಸ್ವಾಮಿ.ವಿ , ಮಾಸ್ತಿ ಕೋಲಾರ ಜಿಲ್ಲೆ