‘ಹೊತ್ತು ತಂದಿಹೆವಲ್ಲ ಪಾಪ ಪುಣ್ಯದ ಹೊರೆಯ, ಸುತ್ತೇಳು ಜನ್ಮಗಳ ಬಿಡದ ಗಂಟು’…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ಹರಿಯುತೋಡುವ ನದಿಯು ಬಿರುಸಿನಲಿ ಸಾಗುತಿರೆ
ಸರಸರನೆ ಶರಧಿಯನು ಸೇರೊ ತವಕ
ಸರಿಸುತ್ತಲೆದುರಾಗೊ ಕಷ್ಟಕಾರ್ಪಣ್ಯಗಳ
ಅರಗಿಸುತ ಹರಿಯುವುದು ಕೊನೆಯ ತನಕ
ಬಿಟ್ಟು ಬಿಡದಲೆ ಕಾಡೊ ನೂರಾರು ದುರಿತಗಳ
ಮೆಟ್ಟುತಲಿ ಬಾಳಿದರೆ ಬಾಳು ಸುಗಮ
ಗುಟ್ಟಾಗಿ ಸೇರುವವು ಮನೆ ಮನವನೊಳಗಿಂದ
ಅಟ್ಟುತಲಿ ಹೊರಗಟ್ಟು ದುಃಖ ದಮನ
ಹೊತ್ತು ತಂದಿಹೆವಲ್ಲ ಪಾಪ ಪುಣ್ಯದ ಹೊರೆಯ
ಸುತ್ತೇಳು ಜನ್ಮಗಳ ಬಿಡದ ಗಂಟು
ಬಿತ್ತಿದ್ದೆ ಬೆಳೆಯುವುದು ಸೃಷ್ಟಿಯೊಳಗಿನ ಗುಟ್ಟು
ಚಿತ್ತದೊಳಗೊಳಿತಿರಲು ನರಗೆ ನಂಟು
ತಮ್ಮ ಪಾಲಿನ ಬುತ್ತಿ ತಾವೆಯುಣ್ಣಲೆ ಬೇಕು
ನಮ್ಮ ನೋವಿಗೆ ಯಾರು ಹೆಗಲು ಕೊಡರು
ಬೊಮ್ಮ ಬರೆದಿಹನೇನೊ ಪ್ರಾರಬ್ಧವೇನಿಹುದು
ಸುಮ್ಮನೆಲ್ಲವನೀಜಿ ನಗೆಯ ಬೀರು.
- ಚನ್ನಕೇಶವ ಜಿ ಲಾಳನಕಟ್ಟೆ