ಪಾರಿಜಾತ ಹೂವಿನ ಜೊತೆಗೆ ಚಕ್ಕೆ ಅಥವಾ ಎಲೆಯ ರಸವನ್ನು ಜೇನು ತುಪ್ಪದೊಂದಿಗೆ ಸೇರಿಸಿ ಸೇವಿಸುವುದರಿಂದ ಜ್ವರ ಗುಣವಾಗುತ್ತದೆ. ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಪಾರಿಜಾತ ಹೂವಿನ ಮಹತ್ವದ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….
ಸಾಧಾರಣವಾಗಿ ದೇವಸ್ಥಾನ ಮತ್ತು ಹೂವಿನ ಬನಗಳಲ್ಲಿ ಕಾಣಸಿಗುವ ಪಾರಿಜಾತ ಹೆಚ್ಚಿನ ಹೂವುಗಳು ಸಂಜೆ ಅರಳುವುದು ಕಾಣಬಹುದು. ಕೇಸರಿ ತೊಟ್ಟು ಬಿಳಿಯ ಹೂವು ನೋಡಲು ಚಂದ ಒಳ್ಳೆಯ ಪರಿಮಳ ದೇವಲೋಕದ ಪುಷ್ಪ ಎಂದೇ ಹೆಸರಾದ ಇದು ವಿಷ್ಣುಪ್ರಿಯ. ಕರೋನಾದಲ್ಲಿ ಇದರ ಕಷಾಯ ತುಂಬಾ ಹೆಸರುವಾಸಿಯಾಗಿದೆ. ಇದರ ಎಲೆ ಹೂವು ಕಾಂಡ ಬೇರು ಬೀಜ ಎಲ್ಲದರಲ್ಲೂ ಔಷಧೀಯ ಗುಣ ಹೊಂದಿದೆ.
1) ಮಕ್ಕಳ ಹೊಟ್ಟೆಯ ಕ್ರಿಮಿಗೆ ಎಲೆಯ ರಸವನ್ನು ಕಲ್ಲು ಸಕ್ಕರೆಯೊಂದಿಗೆ ಸೇರಿಸಿ ಕೊಡುವುದು.
2) ಚಕ್ಕೆ ಅಥವಾ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುವುದರಿಂದ ಜ್ವರ ಗುಣವಾಗುತ್ತದೆ.
3) ಸೊಪ್ಪಿನ ಕಷಾಯದೊಂದಿಗೆ ಜೀರಿಗೆ ಪುಡಿ ಸೇರಿಸಿ ಸೇವಿಸುವುದರಿಂದ ಕಫ ನೀರಾಗಿ ದಮ್ಮು ಗುಣವಾಗುತ್ತದೆ.
4) ಏಳೆಂಟು ಎಲೆಯನ್ನು ಜೀರಿಗೆ ,ಕಾಳು ಮೆಣಸು ಸೇರಿಸಿ ಕಷಾಯ ಮಾಡಿ ಸೇವಿಸುವುದರಿಂದ ಮಂಡಿ ನೋವು ಗುಣವಾಗುತ್ತದೆ.
5) ಬೀಜವನ್ನು ಅರೆದು ಎಣ್ಣೆಯೊಂದಿಗೆ ಕುದಿಸಿ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.
6) ಹೂಗಳನ್ನು ಅರೆದು ಮುಖಕ್ಕೆ ಹಚ್ಚುವುದರಿಂದ ನಿಧಾನವಾಗಿ ಬಂಗು ಗುಣವಾಗುತ್ತದೆ.
7) ಎಲೆ ಅಥವಾ ತೊಗಟೆಯನ್ನು ಅರೆದು ಹಚ್ಚುವುದರಿಂದ ಚರ್ಮರೋಗ ಗುಣವಾಗುತ್ತದೆ.
8) ಎಲೆಯ ರಸವನ್ನು ಕಷಾಯ ಮಾಡಿ ಕುಡಿಯುವುದರಿಂದ ಮೂತ್ರ ಸಲೀಸಾಗಿ ವಿಸರ್ಜನೆಯಾಗುತ್ತದೆ.
9) ಚಕ್ಕೆಯನ್ನು ನಿಂಬೆರಸದಲ್ಲಿ ತೇಯಿದು ನೆಕ್ಕುವುದರಿಂದ ನಾಲಿಗೆಯ ಮೇಲಿರುವ ಬಿಳಿಯ ಅಗ್ರ ಗುಣವಾಗುತ್ತದೆ ಮತ್ತು ಬಾಯಿ ರುಚಿ ಹೆಚ್ಚಿಸುತ್ತದೆ.
10) ಹೂವಿನಿಂದ ಮಾಡುವ ಕಾಡಿಗೆ ಕಣ್ಣಿಗೆ ತಂಪು.
- ಸುಮನಾ ಮಳಲಗದ್ದೆ – ನಾಟಿವೈದ್ಯರು