‘ಪ್ರಮೇಯ’ ನಾ ಕಂಡಂತೆ – ಎನ್.ವಿ.ರಘುರಾಂ

ಡಾ.ಗಜಾನನ ಶರ್ಮರವರ ಹೊಸ ಪುಸ್ತಕ ‘ಪ್ರಮೇಯ’ ಅಂಗಡಿಯಲ್ಲಿ ಕಾದಂಬರಿಗಳ ಸಾಲಿನಿಂದ ಕೈಗೆತ್ತಿಕೊಂಡೆ. ಮುಖಪುಟದಲ್ಲಿ ಭಾರತದ ಭೂಪಟದ ಮೇಲೆ ಒಂದಿಷ್ಟು ರೇಖಾಗಣಿತದ ಚಿತ್ರಗಳನ್ನು ಹೊಂದಿ ‘ಪ್ರಮೇಯ’ ಎಂಬ ಹೆಸರು ಜೊತೆಗೆ ‘ಮಹಾಮಾಪನದ ಅಪೂರ್ವ ಕಥನ’ ಎಂಬ ಟ್ಯಾಗ್ ಲೈನ್ ಬರೆದಿರುವಾಗ ಇದೊಂದು ಗಣಿತದ ಪುಸ್ತಕವಿರಬಹುದೇ? ಎಂದು ಮನಸ್ಸಿನಲ್ಲಿ ಸಣ್ಣ ಸಂಶಯ ಬಂದಿದ್ದು ನಿಜ. – ಎನ್.ವಿ.ರಘುರಾಂ, ‘ಪ್ರಮೇಯದ ಬಗ್ಗೆ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ ಮುಂದೆ ಓದಿ…

ಪುಸ್ತಕ – ಪ್ರಮೇಯ.
ಸಾಹಿತಿ – ಡಾ.ಗಜಾನನ ಶರ್ಮ
ಕಾವ್ಯ ಪ್ರಕಾರ – ಕಾದಂಬರಿ
ಪ್ರಕಾಶನ – ಅಂಕಿತ ಪುಸ್ತಕ
ಪ್ರಥಮ ಮುದ್ರಣ – 2023.
ಬಿಡುಗಡೆ – 22.1.2023.

ಡಾ.ಗಜಾನನ ಶರ್ಮರವರ ಹೊಸ ಪುಸ್ತಕ ‘ಪ್ರಮೇಯ’ ಅಂಗಡಿಯಲ್ಲಿ ಕಾದಂಬರಿಗಳ ಸಾಲಿನಿಂದ ಕೈಗೆತ್ತಿಕೊಂಡೆ. ಮುಖಪುಟದಲ್ಲಿ ಭಾರತದ ಭೂಪಟದ ಮೇಲೆ ಒಂದಿಷ್ಟು ರೇಖಾಗಣಿತದ ಚಿತ್ರಗಳನ್ನು ಹೊಂದಿ ‘ಪ್ರಮೇಯ’ ಎಂಬ ಹೆಸರು ಜೊತೆಗೆ ‘ಮಹಾಮಾಪನದ ಅಪೂರ್ವ ಕಥನ’ ಎಂಬ ಟ್ಯಾಗ್ ಲೈನ್ ಬರೆದಿರುವಾಗ ಇದೊಂದು ಗಣಿತದ ಪುಸ್ತಕವಿರಬಹುದೇ? ಎಂದು ಮನಸ್ಸಿನಲ್ಲಿ ಸಣ್ಣ ಸಂಶಯ ಬಂದಿದ್ದು ನಿಜ.ಆದರೆ ಈ ಪುಸ್ತಕದ ಇನ್ನೊಂದು ತಲೆಬರಹ ‘ಇದು ಆಳಿದವರ ಕಥೆಯಲ್ಲ, ಅಳೆದವರ ಕಥೆ’, ಎಂದಿರುವಾಗ ಇದೊಂದು ಗಣಿತದ ಪುಸ್ತಕವೂ ಅಲ್ಲ, ರಾಜನ ಕಥೆಯೂ ಅಲ್ಲ, ಹೆಸರಿನ ಪಕ್ಕ ಬರೆದಿರುವಂತೆ ಇದೊಂದು ಏನೋ ‘ಶ್ರಮ’ ಪಟ್ಟವರ ಬಗ್ಗೆ ಬರೆದ ‘ಕಾದಂಬರಿ’ಯೇ ಎಂದು ಧೃಡಪಡಿಸಿತು. ಬೆನ್ನುಡಿ ನೋಡಿದಾಗ ‘ಇದೊಂದು ಹಿಮಾಲಯವನ್ನು ಅಳೆದ ಕಥೆ’ ಎಂದು ಅದು ಮತ್ತೊಮ್ಮೆ ತಿಳಿಸಿತು. ಹಾಗಾಗಿ ಕುತೂಹಲ ಮೂಡಿ ಈ ಪುಸ್ತಕ ತೆಗೆದುಕೊಂಡೆ.

ಪ್ರಮೇಯ:

ಈಗ ಎಲ್ಲಿಗೆ ಹೋಗಬೇಕಾದರೂ ಗೂಗಲ್ ಮ್ಯಾಪ್ ನಲ್ಲಿ ಹೆಸರು ಹಾಕಿ ದಾರಿ ತೋರಿಸಲು ಕೇಳಿದರೆ ಅದು ಕ್ಷಣಾರ್ಧದಲ್ಲಿ ದಾರಿ ತೋರಿಸುತ್ತದೆ. ಈಗ ಅದು ಕರಾರುವಕ್ಕಾಗಿ ತೋರಿಸುವ ರೀತಿಗೆ ಸುಮಾರು ಎರಡು ನೂರ ವರ್ಷಗಳ ಹಿಂದೆಯೇ ಕೆಲಸ ಪ್ರಾರಂಭವಾಗಿತ್ತು ಎಂದು ಬಹುಶಃ ಹೆಚ್ಚಿನ ಜನರಿಗೆ ತಿಳಿದಿರಲಿಕ್ಕೆ ಇಲ್ಲ. ಹಾಗೆ ನೋಡಿದರೆ ಪ್ರತಿಯೊಂದು ಸ್ಥಳವನ್ನು ನಿರ್ಧಿಷ್ಟವಾಗಿ ಗುರುತಿಸುವುದಕ್ಕೆ ಅನೇಕ ರೀತಿಯ ಅಳತೆಗಳನ್ನು ಬಹುಶಃ ಸಾವಿರಾರು ವರ್ಷಗಳಿಂದಲೇ ಮಾಡಿಕೊಂಡು ಬಂದಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅತ್ಯಂತ ಕರಾರುವಕ್ಕಾಗಿ ಇಡೀ ದೇಶವನ್ನೇ ಅಳೆದು ಸ್ಥಳ ನಿಗದಿಪಡಿಸುವ ಕೆಲಸ ಮಾಡಲು ಭಾರತದಲ್ಲಿ ಸುಮಾರು ಏಳು ದಶಕಗಳ ಕಾಲವೇ ಹತ್ತೊಂಬತ್ತನೇಯ ಶತಮಾನದಲ್ಲಿ ಹಿಡಿಯಿತು. ಆದು ಇಡೀ ದೇಶವನ್ನೇ ಅಳೆದ ವಿಷಯವಾದ್ದರಿಂದ ‘ಮಹಾಮಾಪನ’ ಎಂದು ಹೆಸರಿಟ್ಟರು. ಯಾವುದೇ ರೀತಿಯ ಈಗಿನ ಮೂಲ ಸೌಕರ್ಯಗಳು ಇಲ್ಲದೇ ಇರುವಾಗ ಈ ಕೆಲಸ ಮಾಡಿದವರ ಕಷ್ಟ ಸುಖಗಳ ಸುತ್ತ ಹೆಣೆದಿರುವ ಕಥೆ ಇದೆಂದು ಅರ್ಥವಾದಾಗ ಇದೊಂದು ಅಪರೂಪದ ವಸ್ತುವಿನ ವಿಷಯವೆಂದು ಮನದಟ್ಟಾಗಿ ಕುತೂಹಲ ಮೂಡಿತು.

ಹಿಮಾಲಯದ ತಪ್ಪಲಿನಲ್ಲಿ ಹವಾಮಾನದ ವೈಪರೀತ್ಯದಿಂದ ಉಂಟಾದ ಸಂಕಷ್ಟದ ಸಮಯದಲ್ಲಿ ಅಲ್ಲಿ ಸರ್ವೆ ಮಾಡುತ್ತಾ ಇದ್ದ ತಂಡವೊಂದರ ಹತ್ತಿರ ಭಾರೀ ಮಿಂಚೊಂದು ಅಪ್ಪಳಿಸಿ ಅವಘಡವೊಂದು ಸಂಭವಿಸುವ ಘಟನೆಯಿಂದ ಪ್ರಾರಂಭವಾಗುವ ಕಾದಂಬರಿ, ಆ ಹಿಮಾಲಯದ ಹರ್ಮುಖ ಶಿಖರದ ಒಳಗೆ ಓದುಗನನ್ನು ಒಳೆದೊಯ್ಯುತ್ತದೆ. ಆ ಸರ್ವೇ ತಂಡದ ಮುಖ್ಯಸ್ಥ ಬ್ರಿಟಿಷ್ ಪ್ರಜೆ ಮಾಂಟ್ಗೊಮರಿಗೆ ಬಲವಾದ ಪೆಟ್ಟು ಬೀಳುವುದರ ಜೊತೆಗೆ ತಂಡದವರೆಲ್ಲ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ನಂತರ ಸಮೀಪದಲ್ಲಿ ಇನ್ನೊಂದು ತಂಡದಲ್ಲಿದ್ದ ಉಪನಾಯಕ ಜಾನ್ಸನ್ ಇವರ ಸಹಾಯಕ್ಕೆ ಧಾವಿಸಿ ಬಂದು ಅವರನ್ನು ನಂದಕೋಲ್ ಕ್ಯಾಂಪಿಗೆ ಸಾಗಸಿ ಚಿಕಿತ್ಸೆಗೆ ಎರ್ಪಾಡು ಮಾಡುತ್ತಾನೆ. ತೀವ್ರವಾದ ತೊಂದರೆಯಿಂದ ಬಳಲುತ್ತಿದ್ದ ಮಾಂಟ್ಗೊಮರಿ ವೈದ್ಯರ ಸಲಹೆ ಮೇರೆಗೆ ಗಂಗಾಚರಣ ಮಟ್ಟೂ ಮನೆಯಲ್ಲಿ ಬಂದು ಉಳಿದುಕೊಳ್ಳುವುದರಿಂದ ಕಥೆ ಪ್ರಾರಂಭವಾಗುತ್ತದೆ.

ಸರಿ ಸುಮಾರು ಹತ್ತೊಂಬತ್ತನೇಯ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾಗುವ ಈ ಕಥೆ, ಅಲ್ಲಿಂದ ನಿಧಾನವಾಗಿ ಈ ಟ್ರಿಗ್ನಾಮೆಟ್ರಿಕ್ ಸರ್ವೆ ಪ್ರಾರಂಭವಾದ ಬಗೆ, ಕಳೆದ ಹಿಂದಿನ ಐದು ದಶಕಗಳಿಂದ ಈ ಸರ್ವೇ ನಡೆದ ಬಂದ ಬಗ್ಗೆ ಒಂದು ಕಡೆ ಬೆಳಕು ಚೆಲ್ಲುತ್ತಾ ಸಾಗಿದರೆ ಇನ್ನೊಂದೆಡೆ ಅದರ ಹಿಂದೆ ಬ್ರಿಟಿಷರಿಗೆ ಇರುವ ನಿಜವಾದ ಉದ್ದೇಶದ ಬಗ್ಗೆ ತಿಳಿಸುತ್ತಾ ಸಾಗುತ್ತದೆ. ಅದರ ಜೊತೆಗೆ ಹತ್ತೊಂಬತ್ತನೇ ಶತಮಾನದಲ್ಲಿದ್ದ ಜನರ ನಂಬಿಕೆ, ಶ್ರದ್ಧೆಯ ಕಥೆ ಇಲ್ಲಿ ಅನಾವರಣವಾಗುತ್ತಾ ಹೋಗುತ್ತದೆ.

ಏಳು ದಶಕಗಳು ಕಾಲ ಈ ಸರ್ವೇ ನಡೆದಿರುವುದರಿಂದ ಅನೇಕರು ಈ ಕೆಲಸದ ನೇತೃತ್ವವನ್ನು ಬೇರೆ ಬೇರೆ ಸಮಯದಲ್ಲಿ ವಹಿಸಿಕೊಂಡಿದ್ದರು. ಅವರಲ್ಲಿ ಕರ್ನಲ್ ಲ್ಯಾಂಬ್ಟನ್, ಜಾರ್ಜ್ ಎವರೆಸ್ಟ್, ಅಂಡ್ರ್ಯೂ ವಾ, ಥಾಮಸ್ ಜಾರ್ಜ್ ಮಾಂಟ್ಗೊಮರಿ ಪ್ರಮುಖಕರು. ಇವರಲ್ಲಿ ಲೇಖಕರು ಕಥೆ ಹೇಳಲು ಆರಿಸಿಕೊಂಡಿದ್ದು ಮಾಂಟ್ಗೊಮರಿಯವರನ್ನು. ಇದಕ್ಕೆ ಆತ ಬಂದಿರುವ ಕುಟುಂಬದ ಹಿನ್ನಲೆ ಕೂಡ ಬಹುಶಃ ಕಾರಣ. ಅತನ ಅಜ್ಜಿ ಎಲಿಜಬೆತ್, ಭಾಸ್ಕರಾಚಾರ್ಯರ ‘ಲೀಲಾವತಿ’ ಗಣಿತ ಕೃತಿಯನ್ನು ಇಂಗ್ಲೀಷಿಗೆ ಭಾಷಾಂತರಿಸಿದ ಡಾ.ಜಾನ್ ಟೇಯ್ಲರ್ ರವರ ಮಗಳು. ಟೇಯ್ಲರ್ ಸುದೀರ್ಘ ಕಾಲ ಭಾರತದಲ್ಲಿ ವೈದ್ಯನಾಗಿ ನಿಸ್ಪೃಹ ಸೇವೆ ಸಲ್ಲಿಸಿ ಖ್ಯಾತರಾಗಿದ್ದವರು. ತಂದೆಯಂತೆ ಮಗಳು ಎಲಿಜಬೆತ್ತಳಿಗೂ, ಅವರ ಮಗಳು ಮಾಂಟ್ಗೊಮರಿಯ ತಾಯಿ, ಸೂಸನ್ನಾ ಫ್ರೇಸರಳಿಗೂ ಭಾರತ ಕುರಿತು ಅಕ್ಕರೆ ಅಭಿಮಾನಗಳಿದ್ದವು. ಎಳೆಯ ಮಾಂಟ್ಗೊಮರಿಗೆ ತನ್ನ ಅಜ್ಜಿ ಮತ್ತು ತಾಯಿ ‘ಭಾರತ ಗಣಿತದ ತವರು’ ಎಂದು ಹೇಳುತ್ತಿದ್ದುದು ಅತನಿಗೆ ಭಾರತ ಕುರಿತು ಆಸಕ್ತಿ ಹುಟ್ಟಲು ಕಾರಣವಾಗಿತ್ತು. ಗಣಿತದಲ್ಲಿ ಆಸಕ್ತಿಯಿದ್ದ ಮಾಂಟ್ಗೊಮರಿ ಮುಂದೆ ಸೈನಿಕ ತರಬೇತಿ ಪಡೆದು ಭಾರತಕ್ಕೆ ಸೆಕೆಂಡ್ ಲೆಫ್ಟಿನೆಂಟ್ ಆಗಿ ಹೊರಟು ನಿಂತಾಗ ತಾಯಿ ‘…ಆ ನೆಲವನ್ನು ತಿಳಿಯುವ ಉದ್ದೇಶದಿಂದ ತುಳಿ, ಮರೆಯ ಬೇಡ, ಆ ನೆಲದಲ್ಲಿ ನಿನ್ನ ಮುತ್ತಜ್ಜನ ಆತ್ಮವಿದೆ’ ಎಂದು ಹೇಳಿ ಕಳುಹಿಸಿದ್ದರು. ತಾಯಿಯ ಮಾತಿನಂತೆ ಭಾರತದಲ್ಲಿ ಒಂದು ವರ್ಷದ ತರಬೇತಿಯ ನಂತರ ಸಿವಿಲ್ ಹುದ್ದೆಯಾದ ಟ್ರಿಗ್ನಾಮೆಟ್ರಿಕ್ ಸರ್ವೇ ತಂಡಕ್ಕೆ ವರ್ಗಾವಣೆ ತೆಗೆದುಕೊಂಡು ವರದಿ ಮಾಡಿಕೊಂಡಿದ್ದ. ಭಾರತದ ಬಗ್ಗೆ ಆದರ ಇಟ್ಟುಕೊಂಡ ಕುಟುಂಬವೊಂದರ ಕುಡಿಯನ್ನು, ಎಲ್ಲರಲ್ಲೂ ರಾಮನನ್ನು ಹುಡುಕುವ ಲೇಖಕರು, ಈ ಕಥೆಯನ್ನು ಹೇಳಲು ಆರಸಿಕೊಂಡಿದ್ದು ಆಶ್ಚರ್ಯವಲ್ಲ.

ಹಾಗೆ ನೋಡಿದರೆ ಪ್ರಥಮ ಬಾರಿಗೆ ಕಂಪನಿ ಸರ್ಕಾರಕ್ಕೆ ಈ ಸರ್ವೇ ಅಗತ್ಯ ಕಂಡು ಬರುವುದು ಟಿಪ್ಪು ಸುಲ್ತಾನನ್ನು 1799ರಲ್ಲಿ ಯುದ್ಧದಲ್ಲಿ ಸೋಲಿಸಿದಾಗ. ಆಗ ರಾಜ್ಯವನ್ನು ಭಾಗಮಾಡಿ ನಿಜಾಮರು, ಒಡೆಯರ್ ಇತ್ಯಾದಿಯಾಗಿ ಹಂಚುವಾಗ ಗಡಿಗಳನ್ನು ಗುರುತಿಸುವುದು ಸುಲಭವಾಗಿರಲಿಲ್ಲ. ಅಲ್ಲಿಂದ ಪ್ರಾರಂಭವಾಗುವ ಕಥೆ ಮುಂದಿನ ಎಂಟು ದಶಕಗಳ ಕಾಲ ನಡೆಯುವ ಅನೇಕ ಘಟನೆ ಮತ್ತು ಸಂಗತಿಗಳ ಮೂಲಕ ಎಳೆ ಎಳೆಯಾಗಿ ತೆರೆದಿಡುತ್ತಾ ಹೋಗುತ್ತಾರೆ ಲೇಖಕರು.

ಬ್ರಿಟಿಷರ ಕಾಲದ ಕಥೆಯೆಂದ ಮೇಲೆ ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯ, ಭಾರತೀಯರನ್ನು ನಿಷ್ಕೃಷ್ಟವಾಗಿ ಕಾಣುವ ಗುಣಗಳ ವರ್ಣನೆಗಳು ಇರಬಹುದಲ್ಲವೇ? ಈ ಸರ್ವೇಯಲ್ಲಿ ಭಾರತೀಯರ ಪಾತ್ರವಿರಲಿಲ್ಲವೇ? ಸರ್ವೇ ಉಪಕರಣಗಳ ಹೆಸರು ಹಾಕಿರಲೇ ಬೇಕಲ್ಲ, ಅವೆಲ್ಲಾ ನಮಗೆ ಅರ್ಥವಾಗುತ್ತಾ? ಬ್ರಿಟಿಷರ ಕಾಲದ ಸರ್ವೇ ಕಥೆಯೆಂದರೆ ಮನಸ್ಸಿನಲ್ಲಿ ಈ ಪ್ರಶ್ನೆಗಳು ಹುಟ್ಟುವುದು ಸಾಮಾನ್ಯ. ಹೌದು ನನಗೂ ಈ ಪ್ರಶ್ನೆಗಳಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಕಾದಂಬರಿಯಲ್ಲಿ ಉತ್ತರವಿದೆ. ಲೇಖಕರು ಈ ವಿಷಯಗಳನ್ನು ಹೇಳಲು ಆರಿಸಿಕೊಂಡಿರುವ ವಿಧಾನ ಸಂವಾದ. ವಿಷಯಗಳು ಚರ್ಚಾಸ್ಪರ್ಧೆಯ ರೂಪ ತಳೆಯಲು ಬಿಡದೆ ಮಂಡಿಸಿದ ರೀತಿ ಗಮನಾರ್ಹ.

ಒಂದು ಕಡೆ ಬ್ರಿಟೀಷರ ಕಾಠಿಣ್ಯ, ಸರ್ವಾಧಿಕಾರೀ ಧೋರಣೆ ಜೊತೆಗೆ ಭಾರತೀಯರನ್ನು ದೈಹಿಕ ಶ್ರಮದ ಕೆಲಸದ ಹೊರತಾಗಿ ಭೌದ್ಧಿಕ ಮತ್ತು ವೈಜ್ಞಾನಿಕ ಕೆಲಸಕ್ಕೆ ನೇಮಿಸಿಕೊಳ್ಳುವ ಮನಸ್ಸಿರಲಿಲ್ಲ . ಕೆಲವು ದಶಕಗಳ ಕಾಲದ ಕೆಲಸದ ನಂತರ ವೆಚ್ಚದ ಖಡಿತಕ್ಕಾಗಿ ಭಾರತೀಯ ಗಣಿತಜ್ಞ ರಾಧಾನಾಥ ಸಿಕ್ಧರ್ ನನ್ನು 1831ರ ಕೊನೆಯಲ್ಲಿ ನೇಮಕ ಮಾಡಿಕೊಳ್ಳುವ ಅನಿವಾರ್ಯತೆ ಆಗಿನ ಸರ್ವೇಯರ್ ಜನರಲ್ ಜಾರ್ಜ ಎವರೆಷ್ಟ್ ಗೆ ಉಂಟಾಯಿತು. ಮುಂದೆ ಸರ್ವೇಯಿಂದ ಬಂದ ಎಲ್ಲಾ ದತ್ತಾಂಶಗಳನ್ನು (ಡಾಟ) ಬಳಸಿ ಹಿಮಾಲಯ ಶ್ರೇಣಿಯ ಪೀಕ್ ಹದಿನೈದು ಪ್ರಪಂಚದ ಅತಿ ಎತ್ತರದ ಶಿಖರ ಎಂದು ಸಾಬೀತು ಮಾಡಿದ್ದು ಈ ಸಿಕ್ಧರ್ ಮಾಡಿದ ಲೆಕ್ಕಾಚಾರದಿಂದ. ನಂತರ ಆ ಶಿಖರಕ್ಕೆ ಅದನ್ನು ನೋಡಿರದ ಎವರೆಸ್ಟ್ ನ ಹೆಸರು ಕೊಡಲಾಯಿತು ಕೂಡ. ಹಾಗೆ ನೋಡಿದರೆ ಅವರಿಗೆ ಉಪಯೋಗವಿಲ್ಲದ ಯಾವುದೇ ಕಾರ್ಯ ಬ್ರಿಟಿಷರು ಮಾಡುತ್ತಿರಲಿಲ್ಲ. ಆದರೆ ಅವರು ಕೆಲಸ ಮಾಡಲು ಒಮ್ಮೆ ಪ್ರಾರಂಭ ಮಾಡಿದ ಮೇಲೆ ಅತಿ ಶ್ರದ್ಧೆಯಿಂದ ಆ ಕೆಲಸ ಮಾಡುತ್ತಿದ್ದರು. ಕೆಲಸ ಮಾಡಲು ಖಗೋಳ ಜ್ಞಾನ, ಗಣಿತದ ಅರಿವಿನೊಂದಿಗೆ ಸರ್ವೇ ಪರಿಕರಗಳ ಅರಿವಿರಬೇಕು. ಜೊತೆಗೆ 50ಕಿಲೋ ಭಾರದ ಉಪಕರಣಗಳನ್ನು ಗುಡ್ಡ ಬೆಟ್ಟಗಳ ಮೇಲೆ ಹೊತ್ತು ಸಾಗಿಸಬೇಕು. ಮಳೆ, ಬಿಸಿಲು, ಚಳಿ, ಗಾಳಿ, ಕಾಡು ಪ್ರಾಣಿಗಳು, ರೋಗರುಜಿನಗಳನ್ನು ಎದುರಿಸಿ ಅಳೆಯಲು ಛಲ, ಹುಚ್ಚು ಉಮೇದು ಇದ್ದವರು ಮಾತ್ರ ಕೈಗೊಳ್ಳುವ ಕೆಲಸ. ಇದು ಎ.ಕೆ.ರಾಮಾನುಜನ್ ಅವರ ಅಂಗಲಹುಳದಂತೆ ಎಂದು ಶ್ರೀಯುತ ನಾಗೇಶ್ ಹೆಗೆಡೆಯವರು ಮುನ್ನಡಿಯಲ್ಲಿ ಹೇಳಿರುವುದು ಸರಿಯಾಗಿದೆ.

ಸರ್ವೇ ಕೆಲಸದ ಕಷ್ಟಗಳ ನಡುವೆ ಗಂಗಾಚರಣ ಮಟ್ಟೂರವರ ಮೂಲಕ ಅಂದಿನ ಭಾರತೀಯರ ವಿಧಾನ, ನಂಬಿಕೆ, ಶೃದ್ಧೆ, ಮಾನವೀಯ ಸಂಬಂಧಗಳ ಅನಾವರಣ ಆಗುತ್ತದೆ. ಅದರ ಜೊತೆಗೆ ಅವರ ತಮ್ಮ ಮತ್ತು ಮೊಮ್ಮಗನ ಮೂಲಕ ಬ್ರಿಟೀಷರ ಬಗ್ಗೆ ಭಾರತೀಯರಲ್ಲಿದ್ದ ಕೋಪ, ತಾಪಗಳು ಪ್ರಕಟಕೂಡ ಆಗುತ್ತದೆ. ಹೀಗೆ ಎರಡೂ ವಿಷಯಗಳ ಬಗ್ಗೆ ಸಮತೋಲನ ಕಾಪಾಡಿಕೊಂಡು, ಸರ್ವೇಯ ಕೆಲಸದಲ್ಲಿ ಈ ವಿಷಯಗಳು ಕೂಡ ಪ್ರಭಾವ ಬೀರಿರುವುದನ್ನು ಕಥೆಯಲ್ಲಿ ಕಾಣುತ್ತೇವೆ. ಬೆಂಗಳೂರಿನ ಲಿಂಗರಾಜಪುರದಿಂದ ಹಿಮಾಲಯದವರೆಗೆ ಮಾಡುವ ಸಂಚಾರ ದೃಶ್ಯ ಕಥಾನಕವಾಗಿ ಕಣ್ಣು ಮುಂದೆ ಹೋಗುತ್ತಿರುವ ಅನುಭವ ಉಂಟು ಮಾಡುವ ಭಾಷೆ, ಸರ್ವೇ ಜನರು ಪ್ರಾಣಾಪಾಯಗಳಿಂದ ಹಿಡಿದು ಅನೇಕ ಕಷ್ಟಗಳನ್ನು ಎದುರಿಸಿ ಕೊನೆಗೆ ಯಶಸ್ವಿಯಾಗಿ ಅಳೆದುಕೊಂಡು ತಮ್ಮ ಬೇಸ್ ಕ್ಯಾಂಪ್ ಗಳಿಗೆ ಹಿಂತಿರುಗಿದಾಗ ಬಹುಶಃ ಅವರಿಗಿಂತ ನಮಗೆ ಹೆಚ್ಚು ಸಮಾಧಾನವಾಗುತ್ತದೆ.

ಎಲ್ಲ ಬ್ರಿಟೀಷರ ಅಸೆ, ಅಣತಿ ಪ್ರಕಾರ ನಡೆದರೂ ಕೊನೆಯಲ್ಲಿ ಈ ಕಾದಂಬರಿ ಓದಿ ಮುಗಿದ ಮೇಲೆ ಬಹುಕಾಲ ಮನಸ್ಸಿನಲ್ಲಿ ಸ್ಥಿರಸ್ಥಾಯಿಯಾಗಿ ಉಳಿಯುವುದು ಈ ಕೆಲಸದಲ್ಲಿ ಭಾಗಿಯಾಗಿದ್ದ ಭಾರತೀಯ ನೈನ್ ಸಿಂಗ್ ಹೆಸರು. ಒಂದು ಅತ್ಯಂತ ಪ್ರಾಣಪಾಯವಾದ ಕೆಲಸ ಎದುರಾದಾಗ ಬ್ರಿಟೀಷರು ಭಾರತೀಯನೊಬ್ಬ ಸತ್ತರೆ, ಈಗಾಗಲೇ ಪ್ರಾಣ ತೆತ್ತಿರುವ ಐನೂರಕ್ಕೂ ಹೆಚ್ಚಿನ ಮಂದಿಯ ಜೊತೆ ಇನ್ನೊಬ್ಬ ಅಷ್ಟೇ ಮತ್ತು ಹೆಚ್ಚಿನ ಪರಿಹಾರ ಕೊಡದೆ ತಪ್ಪಿಸಿಕೊಳ್ಳಬಹುದೆಂಬ ಕಾರಣಕ್ಕೆ ಈ ಭಾರತೀಯ ನೈನ್ ಸಿಂಗ್ ನನ್ನು ಬ್ರಿಟೀಷರು ಆಯ್ಕೆ ಮಾಡಿದ್ದು. ಆತ ಮಾಡಿದ ಕೆಲಸವೇನು? ಅತನ ಹಿನ್ನಲೆಯೇನು? ಹಿಡಿದ ಕೆಲಸ ಮಾಡಿದನೆ? ಎದುರಿಸಿದ ಕಷ್ಟಗಳೇನು? ಆತ ಪ್ರಾಣ ಸಹಿತ ಹಿಂತಿರುಗಿ ಬಂದನೆ?…….. ಈ ಭಾಗವನ್ನು ಕಾದಂಬರಿಯಲ್ಲಿ ಓದಿಯೇ ಆನಂದಿಸಬೇಕು. ಇದೊಂದು ರೀತಿಯಲ್ಲಿ ‘ಕಾಂತಾರ’ದ ಕೈಮಾಕ್ಸ್ ತರಹ.(ಕಾಂತಾರ ಸಿನಿಮಾ ಕಥೆಗೂ ಈ ಕಥೆಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಓಳ್ಳೆಯದನ್ನು ಈಗ ಕಾಂತಾರದ ಜೊತೆಗೆ ಸಮೀಕರಿಸಿ ನೋಡುವ ಮನೋಭಾವ ಈಗ ಎಲ್ಲ ಕಡೆ ಇರುವುದರಿಂದ ನಾನು ಈ ಮಾತು ಬರೆದೆ ಅಷ್ಟೆ).

ಪ್ರಮೇಯದಲ್ಲಿ ಸರ್ವೇಯರ್ಸ ಮೂಲಕ ಅಳೆಯಲು ಸೂಕ್ತ ಬಿಂದುಗಳ ಹುಡುಕಾಟದ ಜೊತೆಗೆ ನಮಗೆ ನಮ್ಮ ಮೂಲ ತತ್ವಗಳ ಹುಡುಕಾಟದಲ್ಲೂ ಲೇಖಕರು ತೊಡಗುತ್ತಾರೆ. ಬ್ರಿಟೀಷರ ಕೈಲಿ ಸಿಕ್ಕಿ ‘ಹರಮುಖಟ’ ಶಿಖರ ಹರ್ಮುಖ, ‘ನಂದಿಕ್ಷೇತ್ರ’ ನಂದಕೋಲ್ ವೆಂಬ ಅರ್ಥವಿಲ್ಲದ ಹೆಸರಾಗುವ ಪರಿ ಒಂದೆಡೆಯಾದರೆ, ‘ಪ್ರಮೇಯ’ದಲ್ಲಿ ಲೇಖಕರು ‘ಅಪ್ರಮೇಯನ’ ಕಾಣಲು ಪ್ರಯತ್ನ ಪಡುವ ಎಳೆಗಳು ಕೂಡ ಇವೆ. ಬ್ರಿಟೀಷರು ಆಳೆಯಲು ಉಪಯೋಗಿಸುವ ಮೂರು ಬಿಂದು, ಮೂರು ಬಾಹು ಮತ್ತು ಮೂರು ಕೋನಗಳುಳ್ಳ ತ್ರಿಕೋನಕ್ಕೆ ನಮ್ಮ ಆರಾಧನೆ ಅದರ ಹಿಂದಿರುವ ‘ತ್ರಿಕಾಲಾಭಾಧಿತವಾದ ತತ್ವ’ಕ್ಕೆ ಎನ್ನುವ ಮೂಲಕ ಮಾಂಟ್ಗೋಮರಿಗೆ ಸಂಸ್ಕೃತಿಯ ಪರಿಚಯ ಮಾಡುವ ಪ್ರಯತ್ನವಿದೆ. ಭಾರತದ ಬಗ್ಗೆ ಆದರ ಇಟ್ಟುಕೊಂಡು ಬಂದ ವ್ಯಕ್ತಿ ಇಲ್ಲಿ ಬಂದು ಮತ್ತೊಬ್ಬ ಬ್ರಿಟೀಷ್ ಆಗಿ ಬದಲಾದರೆ ಅಥವ ಬ್ರಿಟೀಷರ ಸರ್ವಾಧಿಕಾರೀ ಧೋರಣೆ ವಿರುದ್ಧ ಧ್ವನಿ ಎತ್ತಿದರೆ ಅಥವ ಕನಿಷ್ಠ ಪಕ್ಷ ತಳಮಳವಾದರೂ ಪಟ್ಟರೆ? ಎಂದು ಪುಸ್ತಕದಲ್ಲಿ ಓದಿ ತಿಳಿದರೆ ಚೆನ್ನ. ತಾಯಿಯ ಮಾತಿನಂತೆ ಅವರು ಭಾರತವನ್ನು ತಿಳಿಯಲು ಪ್ರಯತ್ನ ಪಟ್ಟರೆ? ಮಗುವೊಂದು ತಾಯಿಯ ಮುಖದ ಮೇಲೆ ಕೈಯಾಡಿಸಿ ಉದ್ದ ಅಗಲ ತಿಳಿಯುವ ಪ್ರಯತ್ನದಂತೆ ಈ ನೆಲದ ಮಹತ್ವ ಕೇವಲ ಭೌತಿಕ ಅಳತೆಯಲ್ಲಿ ಕಂಡಷ್ಟೆ ಅಲ್ಲ. ತಾಯಿಯ ಅಂತರಾಳ ತಿಳಿದಾಗ ಮಾತ್ರ ಶೂನ್ಯ ಮತ್ತು ಅನಂತಗಳೆಂಬ ಮೌಲ್ಯಗಳನ್ನು ಗಣಿತ ಲೋಕಕ್ಕೆ ಕೊಟ್ಟ ಈ ನೆಲದ ಮಹತ್ವ ಗೊತ್ತಾಗುತ್ತದೆ ಎಂಬ ಅನಿಸಿಕೆ ಓದಿದ, ಹೆಸರಾಂತ ವಂಶದಿಂದ ಬಂದ, ಬ್ರಿಟೀಷ್ ಮಾಂಟ್ಗೊಮರಿಗೆ ಕೊನೆಗೆ ತಿಳಿಯಿತೆ? ಪುಸ್ತಕದಲ್ಲಿ ಓದಿನೋಡಿ.

 

ಬ್ರಿಟೀಷರು ಆಳಲು ಉಪಯೋಗಿಸಿದ್ದು ‘ಸರಪಳಿ’, ಅಳೆಯಲು ಉಪಯೋಗಿಸಿದ್ದು ‘ಸರಪಳಿ’ ಎಂದು ಹೇಳುತ್ತಾ ನಮ್ಮನ್ನು ಭಾವನಾಲೋಕದಲ್ಲಿ ಲೇಖಕರು ಬಂಧಿಯಾಗಿಸುತ್ತಾರೆ. ಓದಿ ಮುಗಿದ ಮೇಲೆ ಬ್ರಹ್ಮಪುತ್ರ ನದಿ, ಹರ್ಮುಖ, ಹಿಮಾಲಯ, ಕಾಂಚನ್ ಜುಂಗಾ, ಗಂಗಾಚರಣ, ಸಿಕ್ಧರ್, ಮಹಮ್ಮದ್ ಪಹಾ, ಟಿಬೆಟ್, ಕಾಲಿಗೆ ಕಟ್ಟಿರುವ ಪಟ್ಟಿ, ಬೀದರ್ ಬೇಸ್ಲನ್, ಭೂ ಮೇಲ್ಮೈಗೆ ಸುತ್ತಿದ ಅಕ್ಷಾಂಶ ಮತ್ತು ರೇಖಾಂಶಗಳೆಂಬ ಚಾಪೆ,…… ಎಲ್ಲ ದೃಶ್ಯಗಳನ್ನು ಮತ್ತೆ, ಮತ್ತೆ ಮನೋಪಟಲದ ಮುಂದೆ ಹಾದು ಹೋಗುತ್ತಿರುವಂತೆ ಭಾಸವಾಗುತ್ತದೆ.

ಪುನರ್ವಸು ಕಾದಂಬರಿ ಮೂಲಕ ಇಪ್ಪತ್ತನೇಯ ಶತಮಾನದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಶರಾವತಿಯ ಕಣಿವೆಯಲ್ಲಿ ಮುಳುಗಿದ ಮನೆ, ಮನಗಳ ಪರಿಚಯ ಮಾಡಿದ್ದ ಲೇಖಕರು ನಂತರ ಹದಿನೈದನೇ ಶತಮಾನದ ಇತಿಹಾಸದ ಪುಟಗಳಿಂದ ಕಣ್ಮರೆಯಾಗಿದ್ದ ಶುದ್ಧಮನಸಿನ ರಾಣಿ ಚೆನ್ನಾಭೈರಾದೇವಿಯ ಅನಾವರಣಮಾಡಿದ್ದರು. ಈಗ ಹತ್ತೊಂಬತ್ತನೇಯ ಶತಮಾನದಲ್ಲಿ ಹಿಮಾಲಯದಿಂದ ಹಿಡದು ದಕ್ಷಿಣದ ತುದಿಯವರೆಗೆ ಮಾಡಿದ ಮಹಾಮಾಪನದ ಹೆಸರಿನಲ್ಲಿ ಬಂದಿರುವ ಪ್ರಮೇಯದಲ್ಲಿ ಕೆಲಸದಲ್ಲಿ ಶ್ರದ್ಧೆಯ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ ಮತ್ತು ಇತ್ತೀಚೆಗೆ ಉತ್ತರಕಾಶಿಯ ಸಮೀಪ ಹಿಮಪಾತದಲ್ಲಿ ಸಿಲುಕಿ ದುರಂತ ಅಂತ್ಯ ಕಂಡ ಯುವಕ ಕೆ.ರಕ್ಷಿತ್ ಗೌಡರಿಗೆ ಅರ್ಪಿಸುವ ಮೂಲಕ ಎಲ್ಲಾ ಶ್ರದ್ಧಾವಂತ ಕೆಲಸಗಾರರಿಗೆ ಅರ್ಪಣೆ ಮಾಡಿದ್ದಾರೆ.

‘ಈ ಕಾದಂಬರಿಯ ಓದು ನನ್ನನ್ನು ಜ್ಞಾನವಂತವನ್ನಾಗಿಯೂ ಮತ್ತು ಹೃದಯವಂತವನ್ನಾಗಿಯೂ ಮಾಡಿದೆ’ ಎಂದು ಶ್ರೀಯುತ ಜೋಗಿಯವರು ಬೆನ್ನುಡಿಯಲ್ಲಿ ಹೇಳಿದ ಮಾತು ಅತಿಶಯೋಕ್ತಿಯಲ್ಲ ಎಂದು ಅನಿಸುತ್ತದೆ.

ಉತ್ತಮ ಕಾದಂಬರಿ ಕೊಟ್ಟ ಶ್ರೀಯುತ ಗಜಾನನ ಶರ್ಮರವರ ಅಭಿನಂದಿಸುತ್ತಾ, ಇನ್ನಷ್ಟು ಕಾದಂಬರಿಗಳಿಗೆ ಅವರಿಂದ ಬರಲಿ ಎಂದು ಅವರು ನಂಬಿರುವ ರಾಮನಲ್ಲಿ ಪ್ರಾರ್ಥಿಸುತ್ತೇನೆ.


  • ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW