‘ಪ್ರೀತಿ’ ಕವನ ಕವಿ ಸಿದ್ಧರಾಮ ಕೂಡ್ಲಿಗಿ ಅವರ ಸುಂದರ ಕವನ, ತಪ್ಪದೆ ಓದಿ…
ಪ್ರೀತಿಸುವೆನು ನಾನು
ಎದೆ ಎದೆಗಳಲಿ ದ್ವೇಷ ಆರುವ ತನಕ
ಪ್ರೀತಿಸುವೆನು ನಾನು
ಹಗೆತನಗಳು ಕೊನೆಗಾಣುವ ತನಕ
–
ಪ್ರೀತಿಸುವೆನು ನಾನು
ಬಿತ್ತಿದ ಬೀಜ ಮೊಳಕೆಯೊಡೆಯುವ ತನಕ
ಪ್ರೀತಿಸುವೆನು ನಾನು
ಬುವಿ ಬಸಿರ ಸಸಿ ಮರವಾಗುವ ತನಕ
–
ಪ್ರೀತಿಸುವೆನು ನಾನು
ಕಣ್ಣ ಸ್ಫೋಟಕಗಳು ಕಂಬನಿಯಾಗುವ ತನಕ
ಪ್ರೀತಿಸುವೆನು ನಾನು
ಉರಿಗಾರುವ ಮಾತು ಹೆಪ್ಪಾಗುವ ತನಕ
–
ಪ್ರೀತಿಸುವೆನು ನಾನು
ಅಗಲಿದ ಹೆಗಲುಗಳು ಒಂದಾಗುವ ತನಕ
ಪ್ರೀತಿಸುವೆನು ನಾನು
ವೈರತ್ವದ ಚೂರಿ ಹೂವಾಗುವ ತನಕ
–
ಪ್ರೀತಿಸುವೆನು ನಾನು
ಗುಡುಗು ಸಿಡಿಲುಗಳು ಜೀವದಾಯಿನಿಯಾಗುವ ತನಕ
ಪ್ರೀತಿಸುವೆನು ನಾನು
ಕುದಿವ ಎದೆಗಳು ತಣ್ಣಗಾಗುವ ತನಕ
–
ಪ್ರೀತಿಸುವೆನು ನಾನು
ಅಕ್ಷರಗಳೆಲ್ಲ ಪದ್ಯವಾಗುವ ತನಕ
ಪ್ರೀತಿಸುವೆನು ನಾನು
ನನ್ನೊಳಗಿನ ನಾನು ಇಲ್ಲವಾಗುವ ತನಕ
- ಸಿದ್ಧರಾಮ ಕೂಡ್ಲಿಗಿ