ಕವಿಯತ್ರಿ ಶೋಭಾ ನಾರಾಯಣ ಹೆಗಡೆ ಅವರು ಮನೆಯಲ್ಲಿಯೇ ಮಾಡಿ, ಮಾಡುವ ವಿಧಾನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಒಂದಿಷ್ಟು ಹೊಸ ಹೊಸ ಕಲಿಕೆಗಳು, ಮನಕ್ಕೊಂದಿಷ್ಟು ಉತ್ಸಾಹ ಭರಿತ ಮುದವನ್ನು ನೀಡುತ್ತವೆ.
ರೊಕ್ಕ ಕೊಟ್ಟು ತಂದ ಧೂಪ ಯಾಕೋ ಅಷ್ಟು ಚೆನ್ನಾಗಿ ಸುವಾಸನೆಯನ್ನು ಬೀರುತ್ತಿರಲಿಲ್ಲ. ಹೇಗೆ ಮಾಡ್ತಾರೆ ಅಂತ ನೋಡುವ ಸಲುವಾಗಿ, ಯೂಟ್ಯೂಬ್ ನ ಕದ ತೆರೆದು ನೋಡಿದೆ. ಹತ್ತು ಹಲವಾರು ತರಹ ಧೂಪ ತಯಾರಿಕೆ ಸಮಾಚಾರ ತಿಳಿಯಿತು. ಆದರೆ ತುಂಬಾ ಮನಸ್ಸಿಗೆ ತಟ್ಟಿದ್ದು, ಕಸದಿಂದ ರಸ ಮಾಡುವಂತಹ ಒಣಗಿದ ಹೂವುಗಳಿಂದ ತಯಾರಾಗುವ ಧೂಪ.
ಬೇಕಾಗುವ ಸಾಮಗ್ರಿಗಳು :
- ಒಂದಿಷ್ಟು ಕರ್ಪೂರ
- ಹೂವಿನ ಎಸಳು
- ನಾಲ್ಕಾರು ಏಲಕ್ಕಿ
- ಐದಾರು ಲವಂಗ
- ಸ್ವಲ್ಪ ಅಂಗಡಿಯಲ್ಲಿ ಸಿಗುವ ಧೂಪದ ಪೌಡರ್.
ಮಾಡುವ ವಿಧಾನ :
ಹೌದು, ದೇವರ ಪೂಜೆಗೆ ಬಳಸಿದ ಹೂವುಗಳನ್ನು ಹಾಗೇ ಎಸೆದು ಬಿಡುತ್ತೇವೆ. ಅದನ್ನು ಎಸೆಯುವ ಬದಲು, ಚೂರು ಒಣಗಿಸಿ, ಒಂದು ಬಟ್ಟಲು ಹೂವಿನ ಎಸಳಿಗೆ ಒಂದಿಷ್ಟು ಕರ್ಪೂರ, ನಾಲ್ಕಾರು ಏಲಕ್ಕಿ, ಐದಾರು ಲವಂಗ, ಸ್ವಲ್ಪ ಅಂಗಡಿಯಲ್ಲಿ ಸಿಗುವ ಧೂಪದ ಪೌಡರ್, ಹಾಕಿ ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಈ ಪೌಡರ್ ಗೆ ಚೂರು ತುಪ್ಪ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಚೂರು ಚೂರೇ ನೀರು ಚಿಮುಕಿಸಿ, ಚಪಾತಿ ಹಿಟ್ಟಿನ ಹದದಲ್ಲಿ ಕಲಸಿ, ನಾದಿಕೊಳ್ಳಬೇಕು. ಇದನ್ನು ಧೂಪದ ಕಡ್ಡಿ ತರಹ, ಚಿತ್ರದಲ್ಲಿ ತೋರಿಸಿದಂತೆ, ಚಿಕ್ಕ ಚಿಕ್ಕ ಕಡ್ಡಿ ಮಾಡಿ, ಒಂದು ನಾಲ್ಕು ಬಿಸಿಲು ಒಣಗಿಸಿದರೆ, ಮನೆಯಲ್ಲಿ ತಯಾರಿಸಿದ, ಘಮ ಘಮ, ಸುವಾಸನೆ ಭರಿತ ಧೂಪ ರೆಡಿ.
ಹಚ್ಚಿ ಇಟ್ಟರೆ ಮನಕ್ಕೂ ಉಲ್ಲಾಸ…ಮನೆಯೂ ಘಮ ಘಮ, ಸೊಳ್ಳೆ ಕೂಡ ಬಾರದು.
- ಶೋಭಾ ನಾರಾಯಣ ಹೆಗಡೆ