ಸಿನಿಮಾ ಚಿತ್ರಗಳೆಲ್ಲವನ್ನು ಪತ್ರಿಕೆಗಳಿಂದ ಕತ್ತರಿಸಿ, ಕತ್ತರಿಸಿ ರಫ್ ನೋಟ್ ಪುಸ್ತಕಕ್ಕೆ ಅಂಟಿಸಿಕೊಂಡಿದ್ದೇ ಅಂಟಿಸಿಕೊಂಡಿದ್ದು. ಅದೇ ನೋಟ್ ಬುಕ್ ನಲ್ಲಿ ಕವಿತೆಗಳು ಹೇಗೆ ಹುಟ್ಟಿಕೊಂಡಿತೋ ಕಾಣೆ ಎನ್ನುತ್ತಾರೆ ತಮ್ಮ ಮಧುರ ನೆನಪಿನ್ನು ಹಂಚಿಕೊಂಡಿದ್ದಾರೆ ಲೇಖಕಿ ಎಂ ಆರ್ ಕಮಲಾ ಅವರು. ಮುಂದೆ ಓದಿ…
ಚಿಕ್ಕವಳಿದ್ದಾಗ ನನ್ನದೊಂದು ನೋಟ್ ಬುಕ್ ತಾನೇತಕ್ಕೆ ಇದ್ದೇನೆ ಎನ್ನುವುದನ್ನೇ ಮರೆತುಬಿಟ್ಟಿತ್ತು. `ರಫ್ ನೋಟ್ ಬುಕ್ ‘ ಎಂದು ಮೇಷ್ಟ್ರುಗಳು ಕರೆಯುತ್ತಿದ್ದರು. ಅದರಲ್ಲಿಯೇ ಗಣಿತದ ಲೆಕ್ಕವನ್ನು ಬಿಡಿಸಬಹುದಿತ್ತು. ಬೋರ್ಡಿನಲ್ಲಿ ಬರೆದಿದ್ದ ಇಂಗ್ಲಿಷ್ ಕವಿತೆಯ ಭಾವಾರ್ಥವನ್ನು ತಪ್ಪಿಲ್ಲದೆ ಬರೆದುಕೊಳ್ಳಬಹುದಿತ್ತು. ಪೌರ ನೀತಿ, ಭೂಗೋಳ, ಜೀವಶಾಸ್ತ್ರ, ಪ್ರಾಣಿಶಾಸ್ತ್ರ ಎಲ್ಲ ಅದರಲ್ಲಿಯೇ. `ನೀಟ್ ನೋಟ್ ಬುಕ್’ ಎಂಬ ಹೆಸರನ್ನು ಆಗಾಗ್ಗೆ ಕೇಳುತ್ತಿದ್ದರೂ ಅದೇನು ನಮ್ಮ ಬಳಿ ಇರುತ್ತಿರಲಿಲ್ಲ. ಒಂದು ರಫ್ ನೋಟ್ ಮುಗಿದರೆ ಮತ್ತೊಂದು! ಅದೂ ಇಲ್ಲವಾದರೆ ಮನೆಯಲ್ಲಿ ತೂಗುತ್ತಿದ್ದ ಕ್ಯಾಲೆಂಡರಿನ ಹಿಂಭಾಗದಲ್ಲಿದ್ದ ಜಾಗದಲ್ಲಿ ಬರೆಯಲು ಅನುಕೂಲವಾಗುವಂತೆ ಅಜ್ಜ ಹೊಲಿದುಕೊಡುತ್ತಿದ್ದ `ನೋಟ್ ಬುಕ್!’ ಪರೀಕ್ಷೆ ಮುಗಿದ ಮೇಲೆ ಅದೊಂದು `ಸಿನಿಮಾ ಚಿತ್ರಗಳ ಪುಸ್ತಕವೋ’ `ಆಟದ ಚಿತ್ರಗಳ ಪುಸ್ತಕವೋ’ ಆಗಿಬಿಡುತ್ತಿತ್ತು. ಜಿ. ಆರ್.ವಿಶ್ವನಾಥ್ ಸ್ಕ್ವೇರ್ ಕಟ್ ಮಾಡಿದ ಭಂಗಿ, ಇ ಎ ಎಸ್ ಪ್ರಸನ್ನ ನಿಧಾನಗತಿಯಲ್ಲಿ ಓಡುತ್ತ ಬಂದು ಚೆಂಡನ್ನು ಸ್ಪಿನ್ ಮಾಡಿ ಎಸೆದ ಚಿತ್ರ, ವಿಕೆಟ್ ಕೀಪರ್ ಫರೂಕ್ ಇಂಜಿನಿಯರ್ ಬಾಗಿ ಕ್ಯಾಚ್ ಹಿಡಿದು ಯಾರನ್ನೋ ಔಟ್ ಮಾಡಿದ ಚಿತ್ರ..ಹೀಗೆ. ಈ ಚಿತ್ರಗಳೆಲ್ಲವನ್ನು ಪತ್ರಿಕೆಗಳಿಂದ ಕತ್ತರಿಸಿ, ಕತ್ತರಿಸಿ ರಫ್ ನೋಟ್ ಪುಸ್ತಕಕ್ಕೆ ಅಂಟಿಸಿಕೊಂಡಿದ್ದೇ ಅಂಟಿಸಿಕೊಂಡಿದ್ದು.
ಫೋಟೋ ಕೃಪೆ : youtube
ಇನ್ನು ನಮ್ಮ ಕಾಲದ ಹೀರೊ ಎಂದರೆ ರಾಜಕುಮಾರ್ ಒಬ್ಬರೇ! ಮನೆಯಲ್ಲಿ ಒಮ್ಮೊಮ್ಮೆ ಭಾರಿ ಭಾರಿ ಜಗಳವಾಗುತ್ತಿತ್ತು. ಕೆಲವರು `ಉದಯಕುಮಾರ್’ ನಿಜವಾದ ಹೀರೊ ಎಂದು ವಾದಿಸುತ್ತಿದ್ದರು. ಹೆಚ್ಚಿನವರ ಮತ ರಾಜಕುಮಾರ್ ಗೆ ಬೀಳುತ್ತಿದ್ದುದ್ದರಿಂದ ಅವರ ದನಿ ಕ್ಷೀಣಿಸುತ್ತಿತ್ತು. ಹಿಂದಿ ಸಿನಿಮಾಗಳನ್ನು ಹದಿನಾರು ವರ್ಷಗಳವರೆಗೆ ನೋಡಿಯೇ ಇರಲಿಲ್ಲ. ಒಮ್ಮೊಮ್ಮೆ ಕನ್ನಡದ ಯಾವುದೇ ಚಿತ್ರಗಳ ರೀಲುಗಳನ್ನು ಹೊತ್ತ ತಗಡಿನ ಬಾಕ್ಸ್ ಸರಿಯಾದ ಸಮಯಕ್ಕೆ ಬಾರದಿದ್ದರೆ, ಕಡಿಮೆ ದುಡ್ಡಿಗೆ ತರುತ್ತಿದ್ದ ಹಿಂದಿ ಚಲನಚಿತ್ರ ಟೆಂಟಿನಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಕನ್ನಡದ ಸಿನೆಮಾ ಹಾಕಿದಾಗ ಹಾಡು ಬಂದ ಸಮಯದಲ್ಲಿ ಬೀಡಿ ಸೇದಲು ಹೋಗುತ್ತಿದ್ದ ಜನರು, ಹಿಂದಿ ಸಿನೆಮಾ ಹಾಕಿದಾಗ ಬೇಕೆಂದಾಗೆಲ್ಲ ಎದ್ದು ಹೊರಗೆ ಹೋಗುತ್ತಿದ್ದರು.
ನನ್ನ ಎರಡನೇ ರಫ್ ನೋಟ್ ತುಂಬಾ ರಾಜಕುಮಾರ್ ನಟಿಸಿದ್ದ ನೂರಾರು ಚಲನಚಿತ್ರಗಳು ಇದ್ದವು. ಕತ್ತಿಗೆ ಸ್ಕಾರ್ಫ್ ಕಟ್ಟಿಕೊಂಡಿದ್ದ ರಾಜಕುಮಾರನ ನೂರನೇ ಚಿತ್ರ ‘ಭಾಗ್ಯದ ಬಾಗಿಲು’ವರೆಗೂ! ಒಟ್ಟಿನಲ್ಲಿ ಏನೋ ಹೇಳಲು ಹೋಗಿ ಏನೋ ಹೇಳಿದೆ! ನನ್ನ ರಫ್ ನೋಟ್ ಬುಕ್ಕಿಗೆ ಮೇಷ್ಟ್ರುಗಳು ಹೇಳುವ ಯಾವ ಲಕ್ಷಣವೂ ಇರಲಿಲ್ಲ. ಅದು ನನ್ನ ಮರ್ಜಿಗೆ ಅನುಸಾರವಾಗಿತ್ತಷ್ಟೆ ಹಾಗೆ ನೋಡಿದರೆ ನಮ್ಮ ಬದುಕೇ ಒಂದು ರಫ್ ನೋಟಿನಂತೆ ಅನ್ನಿಸುತ್ತಿರುತ್ತದೆ.
ಯಾವಾಗ ಇಲ್ಲಿ ಕವಿತೆ ಹುಟ್ಟುವುದೋ, ಯಾವಾಗ ಬಿಡಿಸಲೇ ಬಾರದ ಗಣಿತದ ಲೆಕ್ಕವೊಂದು ಎದುರಾಗುತ್ತದೋ, ಹೃದಯದ ಚಿತ್ರ ಬರೆದುಕೊಂಡು ಅಪಧಮನಿ, ಅಭಿ ಧಮನಿ, ಬಲ ಹೃತ್ಕುಕ್ಷಿ, ಎಡ ಹೃತ್ಕುಕ್ಷಿ ಎಂದು ನಮ್ಮದೇ ಅಂಗಾಂಗಗಳನ್ನು ಅಧ್ಯಯನ ಮಾಡಬೇಕಾಗುವ ಸ್ಥಿತಿ ಬರುತ್ತದೋ, ಒಂದು ಸುಂದರವಾದ ಹಕ್ಕಿಯ ಚಿತ್ರ ಕಣ್ಣಿಗೆ ಬೀಳುತ್ತದೋ, ಪ್ರೀತಿಸಿದವರ ಹೆಸರನ್ನು ನೂರು ಸಲ ಬರೆದ ಪುಟ ಎದುರಾಗುತ್ತದೋ ಯಾರಿಗೆ ಗೊತ್ತು? ನಮ್ಮ ಮನೆಯ ರಸ್ತೆ ಕೂಡ ನನ್ನ ರಫ್ ನೋಟನ್ನು ಪ್ರತಿ ಕ್ಷಣ ನೆನಪಿಸುತ್ತದೆ. ಇಲ್ಲೊಂದು ಪಾನಿ ಪೂರಿ ಗಾಡಿಯನ್ನು ನೋಡಿ ಖುಷಿಗೊಳ್ಳುವಷ್ಟರಲ್ಲಿ, ನಡೆಯಲಾರದೆ ನಡೆದು ಬರುವ ಮುದುಕನೊಬ್ಬ ದುಗುಡವನ್ನು ಹೆಚ್ಚಿಸುತ್ತಾನೆ. ಇವನನ್ನು ಯಾವ ಅಧ್ಯಾಯದಲ್ಲಿ ಕಾಣಬಹುದು? ಕಂಡವರನ್ನೆಲ್ಲ ಹತ್ತು ರೂಪಾಯಿಗೆ ಕಾಡುತ್ತ, ಯಾರಾದರೂ ಕೊಟ್ಟ ತಕ್ಷಣ ಕಾಲೆಳೆದುಕೊಂಡು ದರ್ಶಿನಿಗೆ ಓಡುವ ಹಸಿವಿನ ಸಂಕಟದ ಮುದುಕ.
ಹತ್ತಾರು ನಾಯಿಗಳು ಕಚ್ಚಾಡುತ್ತಿರುವಾಗಲೇ, ರಸ್ತೆ ಬದಿ ಕಣ್ಣಿನಂಚಿನಲ್ಲಿ ಮಾತನಾಡುವ ಯುವ ಜೋಡಿ! ಯಾರನ್ನೋ ಫೋನಿನಲ್ಲಿ ಕೆಟ್ಟದಾಗಿ ಬೈದುಕೊಂಡು ಹೋಗುವವನೊಬ್ಬ ಗಮನ ಸೆಳೆವಾಗ ಹಾದು ಬರುವ ಬಣ್ಣಬಣ್ಣದ ಹೂಗಳನ್ನು ಮಾರುವ ಗಾಡಿ. ಚಿಕ್ಕವಳಿದ್ದಾಗ ನನ್ನ ರಫ್ ನೋಟ್ ಬುಕ್ ತೆರೆದರೆ ಯಾವ ಅಧ್ಯಾಯವನ್ನು ಓದುತ್ತಿದ್ದೇನೆ ಎಂದು ಕೆಲವೊಮ್ಮೆ ಅರ್ಥವಾಗುತ್ತಿರಲಿಲ್ಲ. ಯಾವ ವಿಷಯವೆಂದೂ ಸಹ! ಯಾವ ವಿಷಯ ಯಾವುದರಲ್ಲಿ ಕಲಸಿ ಹೋಗಿದೆ ಎಂದು ಕಂಡು ಹಿಡಿಯಬೇಕಿತ್ತು!
ಈಗ ರಸ್ತೆಯಲ್ಲಿ ನಾಯಿಯನ್ನು ಹಿಡಿದು ಹೋಗುವಾಗಲೂ ಇಂಥದ್ದೇ ಅಯೋಮಯ ಸ್ಥಿತಿ. ಯಾವ ವಿಷಯ ಯಾವುದರಲ್ಲಿ ಸೇರಿದೆ? ವಾಸ್ತವದಲ್ಲಿ ಕನಸೋ, ಕನಸಿನಲ್ಲಿ ವಾಸ್ತವವೋ? `ನೀಟ್’ ಎನ್ನುವ ಅರ್ಥವನ್ನು ರಸ್ತೆ ಕಳೆದುಕೊಂಡಿದೆ ಅಥವಾ ಅದಕ್ಕೆ ಹಾಗಿದ್ದೂ ಸಾಕಾಗಿದೆ! ಈ ಮಾತನ್ನು ರಸ್ತೆಯ ಬಗ್ಗೆ ಹೇಳುತ್ತಿದ್ದೇನೆಯೇ?
ಎಂ ಆರ್ ಕಮಲಾ (ನಿವೃತ್ತ ಪ್ರಾಂಶುಪಾಲರು, ಬರಹಗಾರರು), ಬೆಂಗಳೂರು