‘ಸಾಮಗಾನ’ ಪುಸ್ತಕ ಪರಿಚಯ – ಸುಮಾ ಭಟ್

ಲೇಖಕಿ ಸುಮಾ ಭಟ್ ಅವರು ಕಾದಂಬರಿಗಾರ್ತಿ ಸಾಯಿಸುತೆ ಅವರ ‘ಸಾಮಗಾನ’ ಕಾದಂಬರಿಯಲ್ಲಿ ಕಂಡಂತಹ ವಿಷಯವನ್ನು ಹೀಗೆ ಹೇಳುತ್ತಾ ಹೋಗುತ್ತಾರೆ ದೇಹದ ಖಾಯಿಲೆಗೆ ಮದ್ದುಂಟು ಆದರೆ ಮನಸಿನ ಖಾಯಿಲೆಗೆ ಮದ್ದೆಲ್ಲಿ?..ಅತ್ಯಾಚಾರದಿಂದ ಮೊದಲೇ ನೊಂದ ಹೆಣ್ಣಿಗೆ ಸಮಾಜದ ಎಲ್ಲ ರೀತಿಯ ಕುಹಕ ನೋಟಗಳು, ಅರ್ಥವಿಲ್ಲದ ಪ್ರಶ್ನೆಗಳು, ಮಾನಸಿಕ ಒತ್ತಡಗಳು ಉಚಿತವಾಗಿ ಸಿಗುತ್ತದೆ ಎನ್ನುತ್ತಾರೆ.ಇನ್ನಷ್ಟು ವಿಷಯವನ್ನು ಪುಸ್ತಕದ ಕುರಿತು ಸುಮಾ ಅವರು ಓದುಗರ ಮುಂದಿಟ್ಟಿದ್ದಾರೆ ತಪ್ಪದೆ ಓದಿ…

ಪುಸ್ತಕ – ಸಾಮಗಾನ
ಲೇಖಕಿ – ಸಾಯಿಸುತೆ
ಪ್ರಥಮ ಮುದ್ರಣ – ೨೦೦೪
ಪ್ರಕಾಶಕರು – ಸುಧಾ ಎಂಟರ್ ಪ್ರೈಸಸ್
ಬೆಲೆ – ೧೫೦
ಪುಟಗಳು –
೨೪೬

ಪ್ರಸ್ತಾವನೆ

ಶೀಲ ಎಂದರೇನು?

ಈ ಮಾನದಂಡ ಹೆಣ್ಣು ಮತ್ತು ಗಂಡು ಇಬ್ಬರಿಗೂ ಇದೆಯಾ ಅಥವಾ ಹೆಣ್ಣಿಗೆ ಮಾತ್ರವೇ?ಈ ಪ್ರಶ್ನೆ ಅನಾದಿಕಾಲದಿಂದ ಇಂದಿಗೂ ಕಾಡುತ್ತಲೇ ಇದೆ. ಪುರಾಣವನ್ನು ಬೆದಕಿದರೆ ಅಲ್ಲಿಯೂ ಸಹ ಇಂದ್ರನ ಕಪಟತನದಿಂದ ಶೀಲ ಕಳೆದುಕೊಂಡ ಅಹಲ್ಯೆಗೆ ಮಾತ್ರವೇ ಕಲ್ಲಾಗುವ ಕಠೋರ ಶಿಕ್ಷೆಯನ್ನು ಶಾಪದ ರೂಪದಲ್ಲಿ ಗೌತಮ ಮುನಿಗಳು ನೀಡಿದ್ದರು.ಆದರೆ ಅದೇ ಆ ಕೃತ್ಯದಲ್ಲಿ ಸಮಭಾಗಿಯಾಗಿದ್ದು ಜಾಲ ಮಾಡಿ ತಪ್ಪು ಎಸಗಿದ ಇಂದ್ರನಿಗೆ ಯಾವ ಶಿಕ್ಷೆಯಾಗಲಿಲ್ಲ. ಪರಶುರಾಮರ ವಂಶ ಭೃಗು ವಂಶದ ಜಮದಗ್ನಿಯ ಪತ್ನಿಯಾದ ರೇಣುಕಾದೇವಿ ಗಂಧರ್ವರ ಸಲ್ಲಾಪ ಕಂಡು ಮೈ ಮರೆತಾಗಲು ಗಂಡ ಜಮದಗ್ನಿಗಳ ಕೋಪಕ್ಕೆ ಗುರಿಯಾದ್ದು ರೇಣುಕೆಯೇ. ಯಾಕೀ ಬೇಧ? ಪ್ರಕೃತಿ ಪುರುಷ ಇಬ್ಬರೂ ದೈವದ ಸೃಷ್ಟಿಯೇ ಆದರೂ ಈ ಪರಿಬೇಧವೇಕೆ? ಹೆಣ್ಣು ಮನುಸ್ಮೃತಿಯ ಪ್ರಕಾರ ಪುರುಷನ ನಂತರ ಜನ್ಮ ತಾಳಿದಳೆಂದು ಈ ಬೇಧವಾ, ಇಲ್ಲವಾ ಅವಳಲ್ಲಿ ಶಕ್ತಿ ಕಡಿಮೆ ಇದೆ ಎಂದಾ ಎಂಬುದು ಎಲ್ಲಾ ಹೆಣ್ಣುಮಕ್ಕಳನ್ನು ಇಂದಿಗೂ ಕಾಡುತ್ತಲೇ ಇರುವ ಪ್ರಶ್ನೆ.ಅದೇ ಪ್ರಕೃತಿ ಮತ್ತು ಪುರುಷರ ಮಿಲನ ಸಮಾಜದ ಮನ್ನಣೆಯಿಲ್ಲದೆ ನಡೆದರೆ ಅಲ್ಲಿ ಶೀಲ ಕಳೆದುಕೊಳ್ಳುವುದು ಹೆಣ್ಣೇ. ಹೆಣ್ಣನ್ನು ಕಾಮದಿಂದ ಭೋಗಿಸಿ ತನ್ನ ತೃಷೆ ತೀರಿಸಿಕೊಂಡು ಅವಳಿಗೆ ಕಳಂಕಿನಿಯ ಪಟ್ಟ ಕಟ್ಟಿ ಶೀಲಗೆಟ್ಟವಳು ಎನ್ನುವ ಪುರುಷ ಪ್ರಧಾನ ಸಮಾಜ ಆ ಕ್ರಿಯೆಯಲ್ಲಿ ಸಮಭಾಗಿಯಾದ ಪುರುಷನನ್ನು ಮಾತ್ರ ಶೀಲ ಕಳೆದುಕೊಂಡವನು ಎಂದು ಬೆಟ್ಟು ಮಾಡಿ ತೋರಿಸುವುದಿಲ್ಲವೇಕೆ?….

ಸಾವು ಎನ್ನುವುದು ದೇಹವನ್ನು ಮಾತ್ರವೇ ಸುಟ್ಟರೆ, ದೈಹಿಕ ಅತ್ಯಾಚಾರವೆಂಬುದು ಹೆಣ್ಣನ್ನು ಮಾನಸಿಕವಾಗಿ ಜರ್ಜರಿತವಾಗುವಂತೆ ಮಾಡಿ ಸತ್ತು ಸತ್ತು ಬದುಕುವ ಜೀವನ ನೀಡುತ್ತದೆ.ದೇಹದ ಖಾಯಿಲೆಗೆ ಮದ್ದುಂಟು ಆದರೆ ಮನಸಿನ ಖಾಯಿಲೆಗೆ ಮದ್ದೆಲ್ಲಿ?..ಅತ್ಯಾಚಾರದಿಂದ ಮೊದಲೇ ನೊಂದ ಹೆಣ್ಣಿಗೆ ಸಮಾಜದ ಎಲ್ಲ ರೀತಿಯ ಕುಹಕ ನೋಟಗಳು, ಅರ್ಥವಿಲ್ಲದ ಪ್ರಶ್ನೆಗಳು, ಮಾನಸಿಕ ಒತ್ತಡಗಳು ಉಚಿತವಾಗಿ ಸಿಗುತ್ತದೆ. ಇನ್ನು ಅತ್ಯಾಚಾರ ನಡೆದ ನಂತರ ಕಾನೂನಿನಲ್ಲಿ ನ್ಯಾಯ ಕೇಳಲು ಹೋದರೆ ಅದೇ ಪುನರಾವರ್ತನೆ. ಮತ್ತೆ ಮತ್ತೆ ನಡೆದ ಅತ್ಯಾಚಾರದ ಬಗ್ಗೆ ಅರ್ಥವಿಲ್ಲದ ಪ್ರಶ್ನೆಗಳು, ವ್ಯಂಗ್ಯ ನೋಟಗಳು ಮುಗ್ಧ ಹೆಣ್ಣಿನ ಮನಸ್ಸನ್ನು ಆಘಾತಗೊಳಿಸುತ್ತದೆ.ಆದರೆ ಅತ್ಯಾಚಾರವಾಗಿ ಆಘಾತ ತಡೆಯಲಾಗದೇ ಹುಚ್ಚು ಹಿಡಿದರೂ ಸಹ, ತನ್ನ ನಲ್ಮೆಯ ತಂದೆ ಮತ್ತು ಜವಾಬ್ದಾರಿಯುತ ಅಣ್ಣನಿಂದಾಗಿ ಮರುಜನ್ಮ ಪಡೆಯುವ, ಅತ್ಯಾಚಾರಕ್ಕೊಳಗಾದರೂ ಕಲ್ಲಾಗದೆ ಉಳಿದ ಆಧುನಿಕ ಅಹಲ್ಯೆಯೊಬ್ಬಳ ಜೀವನದ ಏಳು ಬೀಳುಗಳ ಸಮ್ಮಿಶ್ರಣವೇ ಸಾಯಿಸುತೆಯವರ ಬರವಣಿಗೆ, ಆಲೋಚನೆಗೆ,ವಿಭಿನ್ನತೆಗೆ ದರ್ಪಣ ಹಿಡಿದಂತಿರುವ ಈ ಕಾದಂಬರಿ. ಯಾವುದೆಂದು ಆಲೋಚನೆ ಮಾಡುತ್ತಿದ್ದೀರಾ!!!!ಅದೇ ಹೊಸೂರು ಹೊಸಳ್ಳಿಯ

ಮಧ್ಯೆ ಸಾಮಗಾನ ಹಾಡುತ್ತಾ ಬೆಳೆದ ಅಹಲ್ಯೆ ಮತ್ತು ಕ್ಷಿತಿಜನೆಂಬ ಅಪರೂಪದ ಅಣ್ಣ ತಂಗಿಯರ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದ ಸಾಯಿಸುತೆಯವರ ಕಾದಂಬರಿ “ಸಾಮಗಾನ”.

ಫೋಟೋ ಕೃಪೆ : google

ಲೇಖಕಿಯ ಕಿರು ಪರಿಚಯ:

ರತ್ನ ನಿಜ ನಾಮವಾದರೂ ಸಾಹಿತ್ಯ ಲೋಕದಲ್ಲಿ ಸಾಯಿಸುತೆ ಎಂಬ ಹೆಸರಿನಿಂದ ಚಿರಪರಿಚಿತರಾದ ಇವರು ಸರಿ ಸುಮಾರು ೧೫೦ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಭಾರತೀಯ ಸನಾತನ ಸಂಸ್ಕೃತಿ, ಸಂಪ್ರದಾಯ ಆಚರಣೆಗಳ ಮಹತ್ವವನ್ನು ಸಾರುವ ಕಥಾ ಹಂದರ, ಆದರ್ಶ ಬದುಕಿಗೆ ಮಾರ್ಗದರ್ಶನ ನೀಡುವ ವಿವೇಕಾನಂದರ ವಾಣಿಗಳು, ಬಸವಳಿದ ಬದುಕಿಗೆ ಸಾಂತ್ವನ ನೀಡುವ ಮಂಕುತಿಮ್ಮನ ಕಗ್ಗ, ಬದುಕಲ್ಲಿ ನೋವುಂಡರೂ ಕಾವ್ಯದಲ್ಲಿ ನಲಿವಿನ ನಾಕುತಂತಿ ಮೀಟಿದ ಬೇಂದ್ರೆಯವರ ಕವನಗಳು, ದೇಶಭಕ್ತಿಗೆ ಮತ್ತೊಂದು ಹೆಸರಾದ ಸುಭಾಷರ ದೇಶಾಭಿಮಾನ, ಪ್ರೇಮಕವಿಕೆ.ಎಸ್.ನರಸಿಂಹಸ್ವಾಮಿಯವರ ಜೇನಿನಂತಾ ಕವನಗಳು…ಈ ವಿಚಾರಧಾರೆಗಳು ಸಾಯಿಸುತೆಯವರ ಕಾದಂಬರಿಯ ಜೀವಾಳವೆಂದು ಹೇಳಬಹುದು.ಇವರ ಕಾದಂಬರಿಯ ಪಾತ್ರಗಳು ಭಾರತ ಸನಾತನ ಸಂಸ್ಕೃತಿಯನ್ನು ಅನುಸರಿಸಿದರೂ ಕೂಡ ಮೂಡನಂಬಿಕೆಗೆ ಬಲಿಯಾದವಲ್ಲಾ ಮತ್ತು ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಹಿಂದೆ ಬಿದ್ದವೂ ಅಲ್ಲಾ ಎಂಬುದೇ ವಿಶೇಷವಾದದ್ದು.

ಕೃತಿ ಪರಿಚಯ :

ಅಮೇರಿಕಾದಿಂದ ಮೂರು ವರುಷಗಳ ನಂತರ ಊರಿಗೆ ಬಂದ ಕ್ಷಿತಿಜ ವರುಷಗಳ ಹಿಂದೆ ಅವನು ವಿದೇಶಕ್ಕೆ ತೆರಳಲು ಬಹಳ ಕಠೋರವಾಗಿ ವಿರೋಧಿಸಿದ ತಂದೆ ಮತ್ತು ಅವನು ವಿದೇಶಕ್ಕೆ ಹೋಗಲು ಅವನ ಪರವಾಗಿ ನಿಂತ ಮುದ್ದು ತಂಗಿ ಅಹಲ್ಯೆ ಇಬ್ಬರನ್ನೂ ಹೊಸೂರಿನ ತಮ್ಮ ಮನೆಯಲ್ಲಿ ಕಾಣದೆ ಕಂಗಾಲಾಗುತ್ತಾನೆ.ಅಷ್ಟಕ್ಕೇ ನಿಲ್ಲದೇ ಊರಿನ ಜನರು ಮದುವೆಗೆಂದು ಅಹಲ್ಯೆಯನ್ನು ತಂದೆ ಎರಡು ವರ್ಷದ ಹಿಂದೆ ಕೊಂಡೊಯ್ದು, ಇಂದಿಗೂ ಕರೆತರದೆ

ಇದ್ದದ್ದು ಯಾಕೆ ಎಂದು ಪ್ರಶ್ನಿಸುತ್ತಿರುತ್ತಾರೆ.ಹಲವು ಗೊಂದಲಗಳಲ್ಲಿ ಒದ್ದಾಡುವಾಗ ತಂದೆಯ ಆತ್ಮೀಯ ಗೆಳೆಯ ಶೇಷು ಅವಧಾನಿಗಳು ಧೈರ್ಯ ನೀಡಿ ಸಾಂತ್ವಾನಿಸಿ ತಂದೆ ತಿರುನಾರಾಯಣನ ಆಗಮನದವರೆಗೂ ಸಂಯಮದಿಂದ ಕಾಯಲು ಹೇಳುತ್ತಾರೆ. ಹಿರಿಯಅವಧಾನಿಗಳ ಮಗಳು ಸುಕನ್ಯ ಅಮೇರಿಕಾ ಜೀವನದ ಹೊಂಗನಸಿನೊಂದಿಗೆ ಕ್ಷಿತಿಜನನ್ನು ಮದುವೆ ಆಗುವ ಬಾಲ್ಯದ ಕನಸಿಗೆ ಯೌವ್ವನದಲ್ಲಿ ನೀರು ಹಾಕಿ ಪೋಷಿಸುತ್ತಿರುತ್ತಾರೆ ಅವಳ ಹೆತ್ತವರು.ಊರಿನಲ್ಲಿ ನಡೆಯುವ ತಿರುನಾರಾಯಣ ದೇವರ ಜಾತ್ರೆಯ ತೇರಿಗೆ ಬಂದ ತಂದೆಯನ್ನು ಕಂಡ ಕ್ಷಿತಿಜ, ಅವರ ಕೃಶವಾದ ದೇಹ ಸ್ಥಿತಿ, ಸೋತು ಬಸವಳಿದ ಮುಖ ಕಂಡು ಗಾಬರಿಯಾಗುತ್ತಾನೆ.

ತಿರುನಾರಾಯಣನ ಜಾತ್ರೆಯ ನಂತರ ಹಿರಿಯ ಅವಧಾನಿಗಳು ಮತ್ತು ಅನಸೂಯಮ್ಮನವರು ಸುಕನ್ಯ ಮತ್ತು ಕ್ಷಿತಿಜನ ಮದುವೆ ಪ್ರಸ್ತಾಪ ಮಾಡುತ್ತಾರೆ.ತನ್ನ ತಂಗಿಯನ್ನು ಕಾಣದೆ ಕಂಗಾಲಾದ ಕ್ಷಿತಿಜ,ಯಾವುದೋ ಅವ್ಯಕ್ತ ಭಯದಿಂದ ಮುಕ್ತರಾಗದ ತಿರುನಾರಾಯಣ ಯಾವುದೇ ಉತ್ತರ ಸರಿಯಾಗಿ ನೀಡುವುದಿಲ್ಲಾ. ತನ್ನ ತಂದೆಯ ಬಳಿ ಅಹಲ್ಯೆಯ ಬಗ್ಗೆ ವಿಚಾರಿಸಿದಾಗ ಊರಿನಲ್ಲಿ ಮೌನವಾಗಿದ್ದು ನಂತರ ಒಂದು ದಿನ ಮನೋನಂದನ ಎಂಬ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿರುವ ಮಗಳು ಅಹಲ್ಯೆಯನ್ನು ತೋರಿಸುತ್ತಾರೆ.ಎರಡು ವರ್ಷಕ್ಕೂ ಮುಂಚೆ ಮದುವೆಗೆಂದು ಅಹಲ್ಯೆಯೊಂದಿಗೆ ತಿರುನಾರಾಯಣರು ರೈಲಿನಲ್ಲಿ ಪ್ರಯಾಣಿಸುವಾಗ…ತನಗೆ ಜ್ಞಾನ ತಪ್ಪಿಸಿದ ದುರುಳರು ಸಾಮೂಹಿಕವಾಗಿ ಅಹಲ್ಯೆಯ ಮೇಲೆ ಅತ್ಯಾಚಾರ ನಡೆಸಿದ್ದು…ಈ ಆಘಾತದಿಂದ ನೊಂದು ಜರ್ಜರಿತಳಾದ ಅಹಲ್ಯೆ ಮಾನಸಿಕ ರೋಗಿಯಾಗಿ ಈ ರೀತಿಯ ದುರ್ಬರ ಬಾಳು ಬಾಳುವಂತಾಗಿದ್ದು, ಎಲ್ಲವನ್ನೂ ಮಗನಲ್ಲಿ ತಿರುನಾರಾಯಣರು ಹೇಳಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾರೆ.

ಉತ್ಸಾಹದ ಚಿಲುಮೆಯಾಗಿ, ಅರಳು ಹುರಿದಂತೆ ಮಾತನಾಡುತ್ತಾ ,ಹೊಸುರು ಮತ್ತು ಹೊಸಳ್ಳಿಯನ್ನು ಬೇರ್ಪಡಿಸುತ್ತಿದ್ದ ತುಂಗೆ ಹೊಳೆಯನ್ನು ತಾನೇ ಹುಟ್ಟುಹಾಕಿ ನಡೆಸುತ್ತಿದ್ದ ಅಹಲ್ಯೆಯ ಈ ಶೋಚನೀಯ ಪರಿಸ್ಥಿತಿ ಅಣ್ಣ ಕ್ಷಿತಿಜನ ಚಿತ್ತಸ್ವಾಸ್ಥ್ಯವನ್ನೇ ಕೆಡಿಸಿಬಿಟ್ಟಿತು.ಛಲ ಬಿಡದ ಕ್ಷಿತಿಜ, ಎರಡು ವರುಷದಿಂದ ತೋಟ ಮನೆಯ ಬಗ್ಗೆ ತಲೆ ಕೆಡಿಸಿಕೊಳ್ಳದ ತಂದೆಯನ್ನು ಊರಿಗೆ ಕರೆ ತಂದು ಧೈರ್ಯ ಹೇಳಿ, ಕೇಳಿದವರಿಗೆ ಕ್ಷಿತಿಜ ಅಮೇರಿಕೆಗೆ ಅಹಲ್ಯೆಯನ್ನು ಕರೆದೊಯ್ಯದಿದ್ದಾನೆಂದು ಹೇಳಿ, ನಡೆದ ವಿಷಯವನ್ನು ಶೇಷು ಅವಧಾನಿಗಳಿಗೆ ಸೂಕ್ಷ್ಮವಾಗಿ ಹೇಳಿ ತಂದೆಯ ಜವಾಬ್ದಾರಿ ವಹಿಸಿ ಹೋಗುತ್ತಾನೆ.ಈ ಕಾದಂಬರಿಯ ಕ್ಷಿತಿಜನಂತಾ ನಿಸ್ವಾರ್ಥ ಪ್ರೀತಿ ತೋರಿಸುವ ಅಣ್ಣ ಎಲ್ಲಾ ಹೆಣ್ಣು ಮಕ್ಕಳಿಗೂ ಸಿಗಲಿ ಎಂದೆನಿಸುವಂತೆಯೇ ಭರ್ತೃಹರಿ ತನ್ನ ನೀತಿ ಶತಕದಲ್ಲಿ ಹೇಳಿದಂತೆ “ಸನ್ಮಿತ್ರ ಲಕ್ಷಣ ಮಿದಮ್” ಎಂಬ ವಾಕ್ಯಕ್ಕೆ ಅನ್ವರ್ಥವಾಗಿರುವಂತಿರುವ ಶೇಷು ಅವಧಾನಿಗಳಂತಾ ನಿಷ್ಕಲ್ಮಷ ಮನಸಿನ, ವಿಶಾಲ ಮನೋಭಾವದ ಹಿರಿಯ, ಗೆಳೆಯ ಎಲ್ಲರ ಬಾಳಲ್ಲೂ ಇದ್ದರೆ ಅವರ ಜೀವನ ಎಷ್ಟು ಸುಭದ್ರ ಎನಿಸಿಬಿಡುತ್ತದೆ. ಕಡೆಗೊಮ್ಮೆ ಮಗನ ಬಾಯಲ್ಲಿ ಅಹಲ್ಯೆಯಲ್ಲಿ ಚೇತರಿಕೆ ಕಂಡ ವಿಷಯ ತಿಳಿದಾಗ ತಿರುನಾರಾಯಣ ಸಂತಸ ಹಂಚಲು ಹೋಗುವುದು ಸ್ನೇಹಿತ ಶೇಷುವಿನ ಬಳಿಯೇ.ಅದಕ್ಕೆ ಲೇಖಕಿ ಇಲ್ಲಿ ಹೇಳುವಾಗ ಸ್ನೇಹದ ಆಳವನ್ನು “ಸಂಬಂಧ ಆಕಸ್ಮಿಕವಾದದ್ದು, ಅನುವಂಶಿಕವಾಗಿ ಬರತಕ್ಕದ್ದು, ಸ್ನೇಹ ಹಾಗಲ್ಲಾ, ರಕ್ತ ಸಂಬಂಧಕ್ಕಿಂತ ದೊಡ್ಡದು, ಸ್ನೇಹ ಆಯ್ಕೆಯದು” ಎಂದು ವ್ಯಾಖ್ಯಾನಿಸಿದ್ದಾರೆ.

ಅಹಲ್ಯೆಯಲ್ಲಿ ಚೇತರಿಕೆ ಕಂಡು ಹೊಸೂರಿಗೆ ಮರಳಿದ ನಂತರ ಕ್ಷಿತಿಜನ ಮದುವೆಗೆ ಸುಕನ್ಯಳಿಂದ ಒತ್ತಾಯ ಅಧಿಕವಾದಾಗ ಕ್ಷಿತಿಜ ತಂಗಿಯ ಜೀವನ ಸುಭದ್ರವಾಗಿಸೋ ನಿಟ್ಟಿನಲ್ಲಿಯೋಚಿಸುತ್ತಿದ್ದ. ತನಗಿಷ್ಟವಿಲ್ಲದಿದ್ದರೂ ಕೊನೆಗೆ ತಂಗಿ ಅಹಲ್ಯೆಯ ಒತ್ತಾಯಕ್ಕೆ ಮಣಿದು ಅಮೇರಿಕದ ಕನಸು ಹೊತ್ತ ಸುಕನ್ಯಳನ್ನು ವರಿಸಲು ಸಮ್ಮತಿಸುತ್ತಾನೆ. ತಿರುನಾರಾಯಣರು ಹೆಂಡತಿ ನರ್ಮದೆಯ ಹಳೇ ಕಾಲದ ಒಡವೆ ನೀಡಿದಾಗ ಎಲ್ಲವನ್ನು ಕರಗಿಸಿದ ಅನೂಸಯಮ್ಮ ಸುಕನ್ಯ ಇಬ್ಬರಿಗೂ ಅದರಲ್ಲಿ ಮಗಳು ಅಹಲ್ಯೆಯದು ಪಾಲಿತ್ತೆಂದು ಏಕೆ ಅನ್ನಿಸುವುದಿಲ್ಲಾ ಅಥವಾ ಇದು ಸ್ವಾರ್ಥದ ಪರಮಾವಧಿಯೇ ವಿಶ್ಲೇಷಿಸಲು ಸಾಧ್ಯವಾಗೋಲ್ಲ. ಅಹಲ್ಯೆಯ ಸಂಪೂರ್ಣ ಚೇತರಿಕೆಯಲ್ಲಿ ಪುಟ್ಟ ಮಾತಿನ ಮಲ್ಲಿ ಪಾರ್ವತಿ ಎಂಬ ನಂಜುಡಯ್ಯನವರ ಮಗಳ ಪಾತ್ರ ತುಂಬಾ ಹೆಚ್ಚಾಗಿರುತ್ತದೆ. ಸುಕನ್ಯಳ ಕೆಲ ರಹಸ್ಯಗಳನ್ನಿಟ್ಟುಕೊಂಡು ಭಯಂಕರವಾದ ಅನಸೂಯ ಮತ್ತು ಸುಕನ್ಯಳನ್ನು ಆ ಪುಟ್ಟ ಪಾರ್ವತಿ ಕೆಣಕಿ, ರೇಗಿಸಿ,ಅಣಕಿಸಿ ಗೋಳು ಹೊಯ್ದು ಕೊಳ್ಳುವುದು ಎಲ್ಲವೂ ಚಂದವಾಗಿ ಕಾದಂಬರಿಯಲ್ಲಿ ಮೂಡಿಬಂದಿದೆ.

ಆದರೆ ವಿಧಿಲಿಖಿತವೇ ಬೇರೆ ಎಂಬಂತೆ ತಿರುನಾರಾಯಣರ ಸಾವಿನಿಂದಾಗಿ ಸುಕನ್ಯ ಮತ್ತು ಕ್ಷಿತಿಜನ ಮದುವೆ ನಿಂತು ಹೋಗುತ್ತದೆ. ಸುಕನ್ಯ ತಾಯಿ ಅನಸೂಯಮ್ಮನವರ ನಂಬಿಕೆಯಂತೆ ಮತ್ತೆ ಮೂರು ವರುಷ ತನ್ನ ಮಗಳ ಮದುವೆ ಅಸಾಧ್ಯ ಎಂಬ ಭವಿಷ್ಯವನ್ನು ನಂಬಿದ್ದರಿಂದ, ಅಲ್ಲದೇ ವಧುವಾದ ಸುಕನ್ಯ ಕ್ಷಿತಿಜನೊಂದಿಗೆ ಅಮೇರಿಕೆಗೆ ಹೋಗುವ ಉದ್ದೇಶದಿಂದ ಮಾತ್ರ ಅವನನ್ನು ವರಿಸಲು ಮುಂದಾಗಿದ್ದರಿಂದ ಪ್ರಹ್ಲಾದನೆಂಬ ಇನ್ನೊಬ್ಬ ಅನಿವಾಸಿ ಭಾರತೀಯನೊಂದಿಗೆ ಮದುವೆಗೆ ಸಮ್ಮತಿಸಿ ಬಿಡುತ್ತಾಳೆ.ಅವಳ ಮದುವೆಗೆ ಅಮೇರಿಕದಿಂದ ಬಂದ ಅವಳ ಅಣ್ಣ ಶ್ರೀನಿವಾಸ ಅಹಲ್ಯೆಯ ಮುಗ್ಧ ಸೌಂದರ್ಯ ಮೆಚ್ಚಿ ತನಗೆ ಅವಳೊಂದಿಗೆ ಮದುವೆ ಮಾಡಿಸಲು ಚಿಕ್ಕಪ್ಪ ಶೇಷು ಅವಧಾನಿಗಳಿಗೆ ದುಂಬಾಲು ಬೀಳುತ್ತಾನೆ.ಅಹಲ್ಯೆಯು “ತಾನು ಅಪವಿತ್ರಳು ಮದುವೆಗೆ ಯೋಗ್ಯಳಲ್ಲಾ ತನಗೆ ಮದುವೆ ಬೇಡ ಎಂದು ನಿರಾಕರಿಸಿದಾಗ, ನೀನು ಗಂಗೆಯಷ್ಟೇ ಪವಿತ್ರಳು ಎಂಬ ಶೇಷು ಅವಧಾನಿಗಳ ಮಾತು ಅವರ ವಿಶಾಲ ದೃಷ್ಟಿಕೋನದ ಮತ್ತು ಸ್ನೇಹಿತನ ಮಗಳ ಮೇಲಿರುವ ವಾತ್ಸಲ್ಯವನ್ನು ತೋರಿಸುತ್ತದೆ.ಇನ್ನು ಅಣ್ಣ ಕ್ಷಿತಿಜನ ಭವಿಷ್ಯದ ಬಗ್ಗೆ ಯೋಚಿಸಿಯೋ ಇಲ್ಲಾ ಅವಧಾನಿಗಳ ಅನುನಯದ ಮಾತಿನಿಂದ ಪ್ರಭಾವಿತಳಾಗಿ ಅಹಲ್ಯೆ ಶ್ರೀನಿವಾಸನೊಂದಿಗೆ ಮದುವೆಗೆ ಸಮ್ಮತಿಸುತ್ತಾಳೆ.ಆದರೆ ಅನಸೂಯಮ್ಮನವರ ಅಸಮ್ಮತಿ ಈ ಮದುವೆಗೆ ಬಂದಾಗ ಶ್ರೀನಿವಾಸ ತಾಯನ್ನೇ ಪ್ರತಿಭಟಿಸುತ್ತಾನೆ.ಆದರೆ ಫಲವತ್ತಾದ ಹೊಸಳ್ಳಿಯ ತೋಟ ತಮ್ಮದಾಗುತ್ತದೆ, ಕ್ಷಿತಿಜನ ಧಾರಾಳತನದಿಂದ ತಮಗೆ ಲಾಭವಿದೆ ಎಂಬುದರಿತುಕೊಂಡು ಅಮ್ಮ ಮಗ ಈ ಮದುವೆಗೆ ಸಮ್ಮತಿಸುವುದು ಕಾದಂಬರಿಯಲ್ಲಿ ಚಿತ್ರಿತವಾಗಿರುವುದನ್ನು, ಇಂದಿಗೂ ಹೆಣ್ಣಿನ ಮನೆಯವರ ಹಣದಲ್ಲಿ ಬದುಕಬೇಕೆಂಬ ಅಭಿಲಾಷೆ ಹೊಂದಿರುವ ಮನಃಸ್ಥಿತಿಗಳಿಗೆ ದರ್ಪಣ ಹಿಡಿದು ಲೇಖಕಿ ತೋರಿಸಿದ್ದಾರೆ ಎಂದರೆ ತಪ್ಪಿಲ್ಲಾ.

ಅತ್ಯಾಚಾರಕ್ಕೆ ಬಲಿಯಾಗಿ ಮನೋರೋಗಿಯಾಗಿದ್ದ ಅಹಲ್ಯೆಯನ್ನು ಮನುಷ್ಯಳಾಗಿ ಮಾಡುವಲ್ಲಿ ಅಣ್ಣ ಕ್ಷಿತಿಜನ ಪಾತ್ರವೆಷ್ಟು? ಸುಕನ್ಯ ಬಯಸಿದ ವಿದೇಶದ ಸ್ವಚ್ಛಂದದ ಬದುಕು ಅವಳಿಗೆ ಪ್ರಹ್ಲಾದನೊಂದಿಗೆ ಆದ ಮದುವೆಯಿಂದ ದೊರೆಯಿತೇ?ಎಲ್ಲವನ್ನೂ ಚಾಣಾಕ್ಷತನದಿಂದ ವಶಪಡಿಸಿಕೊಳ್ಳೋ ಅನಸೂಯಮ್ಮ ಮತ್ತು ಸುಕನ್ಯ ಪುಟ್ಟ ಪಾರ್ವತಿ ಚುರುಕು ಮಾತುಗಳಿಗೆ ಹೆದರುತ್ತಿದ್ದದ್ದೇಕೆ? ಕ್ಷಿತಿಜನೊಡನೆ ಆಡಿ ಬೆಳೆದಿರುವುದರಿಂದಅನಸೂಯಮ್ಮ ಸುಕನ್ಯಳ ಮದುವೆ ಮಾಡಲು ಹೊರಟರಾ ಇಲ್ಲಾ ವರೋಪಚಾರ ಇಲ್ಲದೇ ಕ್ಷಿತಿಜನಂತಾ ಅಮೆರಿಕದ ಗಂಡು ಲೀಲಾಜಾಲವಾಗಿ ಸಿಗುತ್ತಾನೆಂಬ ದುರಾಲೋಚನೆಯಿಂದಲಾ? ಕ್ಷಿತಿಜ ತಂಗಿಯ ಅತ್ಯಾಚಾರದ ವಿಷಯ ಶ್ರೀನಿಗೆ ತಿಳಿಸಿ ಮದುವೆ ಮಾಡಲು ಹೊರಟಾಗ ಶೇಷು ಅವಧಾನಿಗಳು ತಡೆದದ್ದೇಕೆ? ಅಹಲ್ಯಳ ಚೇತರಿಕೆಗೆ ಕಾರಣವಾದ ಪಾರ್ವತಿಯ ಬಳಿ ವಿದೇಶದಲ್ಲಿರುವ ಅಣ್ಣ ರಾಮನಾಥ ಕೊಡಿಸಿದ ಮೊಬೈಲ್ ಕಾದಂಬರಿಯ ಯಾವ

ಮುಖ್ಯ ತಿರುವಿಗೆ ಕಾರಣವಾಯಿತು? ಯಾವ ವಿಷಯ ಬಚ್ಚಿಟ್ಟು ಹಿರಿಯ ಅವಧಾನಿಗಳ ಮಗ ಶ್ರೀನಿವಾಸ ಅಹಲ್ಯೆಯನ್ನು ಮದುವೆಯಾಗಲು ಹೊರಟಿದ್ದ? ಅದನ್ನು ಬಯಲಿಗೆಳೆದದ್ದಾದರೂ ಯಾರು? ಯಾವ ವಿಷಯದ ಅರಿವಾಗಿ ಅಹಲ್ಯೆಯ ಲಗ್ನಪತ್ರಿಕೆಯ ಪೂಜೆಗೆ ದೇವಸ್ಥಾನಕ್ಕೆಹೊರಟಿದ್ದ ದಿಬ್ಬಣವನ್ನು ಕ್ಷಿತಿಜ ತಡೆದು ನಿಲ್ಲಿಸಿದ? ಶೇಷು ಅವಧಾನಿಗಳು ಅಣ್ಣನ ಮಗ ಶ್ರೀನಿವಾಸನಿಗೆ ನೀಡಿದ ವಾಗ್ಧಾನವಾದರೂ ಏನು ಮತ್ತದಕ್ಕೆ ಅವರು ತೆತ್ತ ಬೆಲೆ ಏನು? ಹಿರಿಯ ಅವಧಾನಿಗಳು ತಮ್ಮ ಶೇಷು ಅವಧಾನಿಯನ್ನು ಊರು ಬಿಟ್ಟು ಹೋಗಲು ಹೇಳಿದ್ದೇಕೆ ಹಾಗೆ ಅವರು ಹೋಗಿದ್ದಾದರೂ ಯಾಕೆ? ಆಧುನಿಕ ಅಹಲ್ಯೆಯ ಶಾಪವಿಮೋಚನೆಯಾಯಿತೇ ಇಲ್ಲವೇ? ಅಹಲ್ಯೆಯ ಮದುವೆ ಯಾರೊಂದಿಗಾಯಿತು? ಈ ಕುತೂಹಲ ಸಾಮಗಾನ ಕಾದಂಬರಿಯ ಓದು ತಣಿಸುತ್ತದೆ.

ಇದನ್ನು ಓದಿದಾಗ ಕಾದಂಬರಿಯ ಅಂತ್ಯ ಒಂದೆಡೆಯ ಮನಕ್ಕೊಂದು ಸಂತೃಪ್ತಿ,ಸಂತಸ ಮೂಡಿಸಿತು…ಆದರೆ ಕಾದಂಬರಿಯಲ್ಲಿ ಅಹಲ್ಯೆಯ ಪಾತ್ರ ಅತ್ಯಾಚಾರವೆಂಬ ಕ್ರೂರತೆಗೆ ಬಲಿಯಾದರೆ ಇಂದು ನೈಜ ಬದುಕಿನಲ್ಲಿ ಈ ಕಾಮಪಿಪಾಸುಗಳ ಸಂತತಿ ಮುಗಿಯುವುದೇ ಇಲ್ಲವೇ ಎಂಬ ಪ್ರಶ್ನೆ ಪ್ರತಿಯೊಬ್ಬ ಪ್ರಜ್ಞಾವಂತ ಮನುಜನಲ್ಲಿ ಹುಟ್ಟುತ್ತದೆ ಆದರೆ ಪರಿಹಾರ ಎಂದಿಗೋ?….ಆದರೆ ಇಲ್ಲಿ ಕಾದಂಬರಿಯಲ್ಲಿ ಓದಿದ ಹಾಗೆ ಯಾವುದೋ ಒಬ್ಬ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಮನೆಯವರು ಈ ರೀತಿ ತಾಳ್ಮೆಯಿಂದ ವರ್ತಿಸಿದರೆ, ಮಾನಸಿಕವಾಗಿ ಆಸರೆಯಾದರೆ ಅಚಾತುರ್ಯದಿಂದ ನಡೆದ ಈ ಘೋರ ಅತ್ಯಾಚಾರದಿಂದ ಪ್ರತಿಯೊಬ್ಬ ಹೆಣ್ಣು ತನ್ನ ಅಸ್ತಿತ್ವ ಮತ್ತೆ ಪಡೆದುಕೊಳ್ಳಲು ಸಾಧ್ಯವೇನೋ….ಈ ಕಾದಂಬರಿ ಪೂರ್ತಿಯಾಗಿ ಓದಿ ಮುಗಿಸಿದಾಗ ಸವಾಲೊಡ್ಡುವ ಬದುಕಿಗೆ ಸಡ್ಡು ಹೊಡೆದು ನಿಂತು, ಜೀವನ ಪಯಣಕ್ಕೆ ಹೊಸ ಹಾದಿ ಹಿಡಿದು ಹೊರಟಾಗ, ಕಡೆಗೊಮ್ಮೆ ಧರ್ಮಕ್ಕೇ ಜಯ ಸಿಗುವುದೆಂದು ನಿರೂಪಿಸಿತು.ಅತ್ಯಾಚಾರದಂತಾ ಕಠೋರತೆಗೆ ಗುರಿಯಾದರೂ ಈ ಆಧುನಿಕ ಅಹಲ್ಯೆ ಕಲ್ಲಾಗಲಿಲ್ಲಾ ಅದೇ ಸಮಾಧಾನದ ವಿಷಯ.ಜೀವನದಲ್ಲಿ ತನ್ನದಲ್ಲದ ತಪ್ಪಿಗೆ ಬಸವಳಿದ ಹೆಣ್ಣು, ಮನೋವಿಕೃತಿಗೆ ಬಲಿಯಾದರೂ, ಕಡೆಗೊಮ್ಮೆ ಆ ನೊಂದ ಜೀವಕ್ಕೆ ಸಾಂತ್ವನ ನೀಡಿ ಅವಳ ಮುಂದಿನ ಬದುಕಿಗೆ ಹೂವಿನ ಹಾದಿಯನ್ನು ಹಾಸುವಂತಾ ಕ್ಷಿತಿಜನಂತಾ ಅಣ್ಣನೊಬ್ಬನಿಂದ ಒಂದು ಹೆಣ್ಣಿಗೆ ನ್ಯಾಯ ಒದಗಿಸಿದ ಕಾದಂಬರಿ ಇದೆನಿಸಿತು .ಈ ಹೃದಯಸ್ಪರ್ಶಿ ಕಾದಂಬರಿ ನೀವೂ ಓದಿ ಬಿಡಿ ಆಯ್ತಾ….

ನಲ್ಮೆಯಿಂದ


  • ಸುಮಾ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW