“ಇದು ಅನುದಿನದ ಶುಭಾಶಯ ಸಂದೇಶಗಳ ಮೇಲೊಂದು ಕವಿತೆ. ಶುಭಕಾಮನೆಗಳ ಆಶಯ ಆಂತರ್ಯಗಳ ಭಾವಗೀತೆ. ಓದಿ ನೋಡಿ.. ಆಳಕ್ಕಿಳಿದಷ್ಟೂ ಒಲವಿನ ಅಂತಃಕರಣದ ಅನಾವರಣವಿದೆ. ಅನುಭಾವಿಸಿದಷ್ಟೂ ಅನುರಾಗ ಸ್ವರಗಳ ಅನುರಣನವಿದೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಹಗಲು ಇರುಳು
ಶುಭ ಮುಂಜಾನೆ
ಶುಭರಾತ್ರಿ ಸಿಹಿಗನಸು
ಶುಭಾಶಯಗಳು..
ಹಬ್ಬ-ಹರಿದಿನದ
ಕೋರಿಕೆ ಹಾರೈಕೆಗಳು
ವಿಶೇಷ ದಿನಾಚರಣೆ
ಸಂದೇಶಗಳು..
ನಿನ್ನ ನೆನಪಿಸಿಕೊಳ್ಳಲು
ನೆಪವಲ್ಲ ಗೆಳತಿ.!
ಮರೆತಿದ್ದರಲ್ಲವೇ..
ನೆನೆಯುವ ಮಾತು.!!
ಸತತ ಸಂದೇಶ
ಅದರ ಉದ್ದೇಶ
ನಿತ್ಯ ನನ್ನಿರುವ
ನಿನಗೆ ನೆನಪಿಸಲೆಂದು.!
ನಿನ್ನ ಮನದಂಗಳದಿ
ನೆನಪಮಳೆ ಸುರಿಸಿ
ನನ್ನೀ ಹೆಸರನು
ಹಚ್ಚ ಹಸಿರಾಗಿಸಲೆಂದು.!
ಉಸಿರು ಉಸಿರಲೂ
ನಿನ್ನದೇ ಹೆಸರ
ಅನುಕ್ಷಣ ಉಸಿರಾಡುತ್ತಾ..
ಸಂಭ್ರಮಿಸಲೆಂದು.!!
- ಎ.ಎನ್.ರಮೇಶ್. ಗುಬ್ಬಿ