‘ಎಲ್ಲಿ ಹೋದಳೀಕೆ? ಎಂದು ಕಣ್ಣಾಡಿಸಿದಾಗ ಆಕೆ ಅಲ್ಲೆಲ್ಲೂ ಕಾಣಲೇ ಇಲ್ಲ.ತೋಟದ ಮನೆಯ ಒಳಾಂಗಣದ ಗಡಿಯಾರದ ಟಿಕ್ ಟಿಕ್ ಕೇಳಿಸತೊಡಗಿತು. ಆಕೆ ತೋಟದ ಮನೆಯಿಂದ ಎರಡು-ಮೂರು ಫರ್ಲಾಂಗು ದೂರದಲ್ಲಿರುವ ದೈತ್ಯ ಮರದ ಕೆಳಗೆ ಹೋಗಿ, ಹೀಗೆ ಸದ್ದಾಗದಂತೆ ಕೂರುವ ಚಟ ಇತ್ತು, ಆಕೆಯನ್ನು ಹುಡುಕುತ್ತಾ ಆ ಕಡೆಗೆ ಹೆಜ್ಜೆ ಹಾಕಿದೆ, ಮುಂದೇನಾಯಿತು ರಂಜಿತ್ ಕವಲಪಾರ ಅವರ ಅಂಕಣ ತಪ್ಪದೆ ಮುಂದೆ ಓದಿ…
ಇದು ಆಗಿ ಸುಮಾರು ದಿನಗಳೇ ಕಳೆದಿವೆ. ದಿನಗಳಲ್ಲಾ ತಿಂಗಳುಗಳೇ ಆಗಿ ಹೋಗಿದೆ. ಹೀಗೆ ಹಲವು ತಿಂಗಳ ಹಿಂದೆ ಆ ಪ್ರದೇಶದಲ್ಲಿ ಅಕಾಲಿಕ ಮಳೆಯಾಗಿತ್ತು. ನಾನು ಆ ಕಿರಿದಾದ ರಸ್ತೆಯ ತಿರುವಿನಲ್ಲಿರುವ ಎಸ್ಟೇಟ್ ಗೇಟಿನ ಮುಂಭಾಗ ನನ್ನ ಬೈಕಿಗೆ ಸ್ಟಾಂಡ್ ಹಾಕಿ, ಆ ತೋಟದ ಮನೆಯ ದೊಡ್ಡ ಗೇಟಿನ ಪಕ್ಕದಲ್ಲಿರುವ ಸಣ್ಣ ಗೇಟಿನ ಮೂಲಕ ಆ ಎಸ್ಟೇಟಿನ ಒಳಾಂಗಣ ಪ್ರವೇಶಿಸಿದ್ದೆ. ಕಾಲಿಟ್ಟರೆ ಚಟ್ ಪಟ್ ಎಂದು ಮುರಿಯುವ ಒಣ ಎಲೆಗಳೆಲ್ಲವೂ ಅಂದು ಮಳೆಹೊಡೆತಕ್ಕೆ ತೊಯ್ದು ತಣ್ಣಗೆ ಮಲಗಿತ್ತು. ಹಾಗಾಗಿ ನಾನು ಹೆಜ್ಜೆಹಾಕುವಾಗ ಸದ್ದಾಗುತ್ತಿರಲಿಲ್ಲ. ತೋಟದ ಮನೆಯ ಸನಿಹ ನಡೆದು ನಾನು ಅವರಿಗಾಗಿ ಕಣ್ಣಾಡಿಸಿದೆ. ಎಲ್ಲೂ ಅವರು ಕಾಣಲಿಲ್ಲ.
ಫೋಟೋ ಕೃಪೆ : Tripaadvisor
ಅವರು ಎಂದರೆ ಅವರಿಗೀಗ ಸಾಕಷ್ಟು ವಯಸ್ಸಾಗಿದೆ. ಅವರೇ ಹೇಳುವಂತೆ ಅವರದ್ದು ಸಾಯುವ ವಯಸ್ಸು. ಆಕೆ ತುಂಬು ವೃದ್ಧೆ.
ಸಣ್ಣ ಶರೀರದ, ಅಗಲ ಕಂಗಳ, ಚಿಕ್ಕ ಮೂಗಿನ, ತೆಳ್ಳನೆಯ ದೇಹದ, ಸುಕ್ಕುಗಟ್ಟಿರುವ ಮುಖದ ಆಕೆಯದು ಹೊಳೆಯುವ ಬಂಗಾರದ ಬಣ್ಣ.
ಬಂಗಾರದ ಬಣ್ಣದ ಆಕೆಯ ಬಲಗೈಯ ಮೇಲೊಂದು ಚಕ್ರಾಕಾರದ ಹಚ್ಚೆಯೊಂದಿದೆ. ಅದನ್ನು ನೋಡಿ ಇದು ವಿಚಿತ್ರವಾಗಿದೆಯಲ್ಲಾ ಎಂದು ನನಗೆ ಮೊದಲು ಅನ್ನಿಸಿತು ನಂತರ ನೋಡಿ ನೋಡಿ ನನಗೆ ಅಭ್ಯಾಸ ಆಗಿ ಹೋಯಿತು.
ಅದು ಕಾಡುದೇವತೆಯೊಂದರ ಚಿಹ್ನೆಯೆಂದು. ನನಗೆ ನಂತರ ಅರ್ಥವಾಯಿತು.
ವೃದ್ಧಾಪ್ಯದ ಹೊಡೆತಕ್ಕೆ ಆಕೆಯ ಸೊಂಟ ಸಣ್ಣಗೆ ಬಾಗಿದೆಯಾದರೂ ಆಕೆ ಊರುಗೋಲಿಲ್ಲದೆ ಸರಸರನೆ ನಡೆದು, ಅವಳ ಕಾಫಿತೋಟವನ್ನೆಲ್ಲಾ ಸುತ್ತಾಡಿ ಬರುತ್ತಾಳೆ. ‘ಇಷ್ಟು ಗಟ್ಟಿ ಇರುವ ನೀನು ಬೇಗ ಸಾಯುವುದಿಲ್ಲ. ನಿನ್ನದಿದು ಸಾಯುವ ವಯಸ್ಸಲ್ಲ’ ಎಂದು ಆಕೆ ಮಾತು ಮಾತಿಗೂ ಸಾಯುವ ಮಾತಾಡುವಾಗ ನನಗೆ ಹೇಳಬೇಕು ಅನ್ನಿಸಿದರೂ ನಾನು ಹಾಗೆ ಹೇಳಲು ಹೋಗುವುದಿಲ್ಲ. ನಾನು ಹಾಗೆ ಹೇಳಿದರೂ ಆಕೆಯ ನಿಲುವುಗಳಲ್ಲಿ, ನಿರ್ಧಾರಗಳಲ್ಲಿ, ನಂಬಿಕೆಗಳಲ್ಲಿ ಯಾವುದೇ ಬದಲಾವಣೆಯೂ ಆಗುವುದಿಲ್ಲ.
***
ಹಾಗೆ ಯೋಚಿಸುತ್ತಾ ನಿಂತು, ‘ಎಲ್ಲಿ ಹೋದಳೀಕೆ? ಎಂದು ಕಣ್ಣಾಡಿಸಿದಾಗ ಆಕೆ ಅಲ್ಲೆಲ್ಲೂ ಕಾಣಲೇ ಇಲ್ಲ. ಕಿವಿಗೊಟ್ಟು ಏನಾದರೂ ಗೊತ್ತು ಮಾಡಬಹುದೇ ಎಂದು ಏಕಾಗ್ರತೆಯಲ್ಲಿ ಆಲಿಸತೊಡಗಿದೆ. ತೋಟದ ಮನೆಯ ಒಳಾಂಗಣದ ಗಡಿಯಾರದ ಟಿಕ್ ಟಿಕ್ ಕೇಳಿಸತೊಡಗಿತು. ದೂರದಲ್ಲೆಲ್ಲೋ ಹಕ್ಕಿಯೊಂದು ಎಡೆಬಿಡದೆ ಹಾಡುತ್ತಿರುವುದು ಗಮನಕ್ಕೆ ಬಂತು. ನನ್ನ ಗಾಡಿಗೆ ಸ್ಟಾಂಡ್ ಹಾಕಿದ್ದ ರಸ್ತೆಯಿಂದಲೂ ಬಹಳಾ ದೂರದಲ್ಲೆಲ್ಲೋ ಭಾರಿ ವಾಹನವೊಂದು ಗುಡ್ಡ ಹತ್ತುವ ಸದ್ದು ಸ್ಪಷ್ಟವಾಗುತ್ತಾ ಹೋಯಿತು. ಆದರೇ ನಾನು ನಿರೀಕ್ಷೆ ಮಾಡಿದ ಆಕೆಯ ಇರುವಿಕೆ ನನಗೆ ಕೇಳಿಸಲಿಲ್ಲ. ಆಕೆ ತೋಟದ ಮನೆಯಿಂದ ಎರಡು-ಮೂರು ಫರ್ಲಾಂಗು ದೂರದಲ್ಲಿರುವ ದೈತ್ಯ ಮರದ ಕೆಳಗೆ ಹೋಗಿ, ಹೀಗೆ ಸದ್ದಾಗದಂತೆ ಕೂರುವ ಚಟ ಇರುವವಳಾಗಿದ್ದಳು, ಅದು ನನಗೆ ತಿಳಿದಿತ್ತು ಕೂಡ. ಅಲ್ಲೇನಾದರೂ ಕುಳಿತು ಧ್ಯಾನಿಸುತ್ತಿದ್ದಾಳ? ಎಂದು ನೋಡಲು ಆ ಕಡೆಗೆ ಹೆಜ್ಜೆ ಹಾಕಿದೆ.
ಅಷ್ಟರಲ್ಲಾಗಲೇ ಒಂದೆರಡು ಜಿಗಣೆಗಳು ನನ್ನ ಮಳೆ ಶೂವಿನ ಮೇಲಿಂದ, ಕಾಲಿನೊಳಗಿಳಿದು ಕೆಲಸ ಶುರು ಮಾಡಿತ್ತು. ಅದನ್ನು ಕಿತ್ತೆಸೆದು ಆ ಕಡೆ ಹೆಜ್ಜೆ ಹಾಕತೊಡಗಿದೆ. ಅಲ್ಲೂ ಆಕೆ ಕಾಣಿಸದಾಗ ನನ್ನ ಹುಬ್ಬು ಇನ್ನೆಲ್ಲಿ? ಎನ್ನುವಂತೆ ಏರಿತು.
ಅಲ್ಲೇ ನಿಂತು ಹೀಗೆ ಯೋಚಿಸುತ್ತಿರುವಾಗಲೇ ಮರದ ಹಿಂಭಾಗದಿಂದ ಸಣ್ಣಗೆ ಯಾರೋ ಪಿಸುಗುಟ್ಟುವ ಸದ್ದು! ಏನೋ ಬಹಳ ಗಂಭೀರ ಮಾತೊಂದನ್ನು ಗುಟ್ಟಾಗಿ ಪರಸ್ಪರ ಮಾತನಾಡುತ್ತಿರುವಂತೆ.

ನನಗೆ ಆ ವಿಚಾರ ಮೊದಲೇ ತಿಳಿದಿತ್ತು. ನನಗೆ ಮಾತ್ರ ಆ ಅಸಾಮಾನ್ಯ ವಿಚಾರದ ಅಸಲಿಯತ್ತೂ ಗೊತ್ತಿತ್ತು. ಆದರೆ ಊರವರಿಗೆ ಆಕೆಯ ಈ ನಡತೆ ಮೊದಮೊದಲು ಸ್ವಲ್ಪ ಗೊಂದಲ ಉಂಟು ಮಾಡಿತ್ತು. ಮತ್ತೆ ಆಕೆಗೆ ಭ್ರಾಂತು ಎಂದು ಅವರೆಲ್ಲರೂ ನಿರ್ಧರಿಸಿ ಸುಮ್ಮನಾಗಿದ್ದರು.
ಆಕೆ ಒಬ್ಬಳೆ ಏಕಾಂತದಲ್ಲಿ ಹೀಗೆ ಮಾತನಾಡಿಕೊಳ್ಳುವುದು ನನಗೂ ಮೊದ ಮೊದಲು ಭ್ರಾಂತು ಎಂದೇ ಅನ್ನಿಸುತ್ತಿತ್ತು. ಆಕೆ ತನ್ನ ಮರಣಿಸಿದ ಪತಿಯೊಂದಿಗೆ ಹೀಗೆ ಮನಸ್ಸಾದಾಗಲೆಲ್ಲಾ ಮಾತನಾಡುತ್ತಾ ತನ್ನ ತೋಟದ ಕೆಲಸದಲ್ಲಿ ಕಳೆದು ಹೋಗುವ ವಿಚಾರ ನನಗೂ ಅಭ್ಯಾಸ ಆಗಿ ಹೋಗಿತ್ತು. ನಾನು ಅವಳ ಆ ನಡವಳಿಕೆಯನ್ನು ನಂಬಿದಂತೆ, ‘ಅವರು ಹೇಗಿದ್ದಾರೆ? ಏನು ಹೇಳಿದರು, ಏನಂತೆ ?’ ಎಂದೆಲ್ಲಾ ವಿಚಾರಿಸಲು ತೊಡಗಿದ್ದೆ.
ಹಾಗೆ ಅವಳ ತೀರಿ ಹೋಗಿರುವ ಗಂಡನೊಂದಿಗೆ ಮಣಮಣ ಎಂದು ಏನನ್ನೋ ಮಾತನಾಡುವಾಗ ಆಕೆಗೆ ತನ್ನ ಬೆನ್ನ ಹಿಂದೆ ನಡೆಯುತ್ತಿರುವುದೂ ಸ್ಪಷ್ಟವಾಗಿ ತಿಳಿಯುತ್ತಿತ್ತು.
ನಾನು ಹೋಗಿ ಅವರ ಮಾತುಗಳನ್ನು ಆಲಿಸುತ್ತಾ ನಿಂತ ವಿಚಾರವೂ ಆಕೆಗೆ ಗೊತ್ತಾಗಿತ್ತು. ಮಾತು ನಿಲ್ಲಿಸಿ, ನನ್ನೆಡೆಗೆ ಬಂದ ಆಕೆಯ ಕಂಗಳು ಹೊಳೆಯಿತು. ‘ಹೋ ಬಂದ್ರಾ…. ನಾನು ಅವರೊಂದಿಗೆ ಮಾತಾಡ್ತಿದ್ದೆ. ಆಗಲೇ ಬಂದ್ರಾ.. ಕರೆಯೋದಲ್ವ?’ ಎಂದು ಆತ್ಮೀಯವಾಗಿ ಹತ್ತಿರ ಸುಳಿದರು. ನಾನು ‘ಹೇಗಿದ್ದೀರಾ?’ಕೇಳಿದೆ ‘ನನ್ನದು ಸಾಯುವ ವಯಸ್ಸು ಆದರೂ ಸಾಯದೇ ಉಳಿದಿದ್ದೇನೆ ನೋಡು’ ಎಂದು ಎಂದಿನಂತೆ ಅಂದಳು .ಹಾಗೆ ಹೇಳಿದ ಈಕೆಯ ಜೀವನಯಾನ ರೋಚಕವೂ, ದುರಂತವೂ, ಬೇಸರವೂ ಹೌದು. ಅಂದ್ಹಾಗೆ ಈಕೆ ಈ ಊರಿನವಳಲ್ಲಾ. ಆಕೆ ದೈವೀಕ ಅಂಶಗಳಿದ್ದ ಬಾಬಾ ಒಬ್ಬರು ಬದುಕಿ ಸ್ವರ್ಗಸ್ಥರಾದ ಬೆಟ್ಟದ ಬುಡದ ಊರಿನವಳು. ಹಾಗಾಗಿ ಅವಳಿಗೆ ಹಲವು ಪವಾಡವೂ ಗೊತ್ತು ಎಂದು ಊರವರು ನಂಬಿದ್ದರು. ಆ ಊರಿಗೂ ಈಗ ಅವಳು ಇರುವ ಊರಿಗೂ ಸಾವಿರಾರು ಮೈಲುಗಳ ಅಂತರವಿದೆ. ಈ ಊರಿಗೆ ಅವಳು ಮದುವೆ ಆಗಿ ಬಂದು ನೆಲೆಸಿದ್ದಳು. ಇತ್ತೀಚೆಗೆ ಆಕೆಯ ಪ್ರಾಣದಂತೆ ಇದ್ದ ಆಕೆಯ ಗಂಡ ದಿಢೀರನೆ ತೀರಿ ಹೋಗಿದ್ದರು. ಅವರು ದೇಹ ತ್ಯಜಿಸಿದ್ದರಾದರೂ ತನ್ನ ಪ್ರೀತಿಯ ಮಡದಿಯಿಂದ ದೂರವಾಗಲು ಸಾಧ್ಯವಾಗದೇ ಈಗ ಆತ್ಮವಾಗಿ ಇವರೊಂದಿಗೆ ಬದುಕುತ್ತಿದ್ದರು.
ಮಕ್ಕಳಿಲ್ಲದ ಈಕೆಗೆ ಒಬ್ಬಾತ ಸಾಕುಮಗನಿದ್ದ. ಕಾಲೊಂದು ಊನವಾಗಿದ್ದ ಆತ,’ಊರವರು ಕುಂಟ ಎಂದು ನೋಯಿಸಿದರು’ ಎಂಬ ಕಾರಣಕ್ಕೆ ಹಲವು ವರ್ಷಗಳ ಹಿಂದೆ ಊರು ಬಿಟ್ಟು , ಹೇಳದೇ ಕೇಳದೇ ಹೋಗಿ, ಮರಳಿರಲಿಲ್ಲ.
ನನ್ನ ಕಂಡಾಗಲೆಲ್ಲಾ ಈಕೆ ಸುಮಾರು ವರ್ಷಗಳ ಹಿಂದಿನ ಹಳೆಯ ಬಾಲಕನೊಬ್ಬನ ಕಪ್ಪುಬಿಳುವು ಪಾಸ್ ಪೊರ್ಟ್ ಸೈಝ್ ಫೋಟೋ ತೋರಿಸಿ, ‘ಈತನನ್ನು ಹುಡುಕಲು ನೀನು ಸಹಾಯ ಮಾಡು’ ಎಂದು ಕೇಳಿಕೊಳ್ಳುತ್ತಿದ್ದಳು. ನಾನೂ ಆ ಫೋಟೋವನ್ನು ಗಮನಿಸಿ, ‘ಹುಡುಕುವ ಪ್ರಯತ್ನ ಮಾಡುತ್ತೇನೆ’ ಎಂದು ನಾಟಕ ಆಡುತ್ತಾ ಅವರಿಗೆ ಸಮಾಧಾನ ಮಾಡುತ್ತಿದ್ದೆ. ಈ ನಡುವೆ ಪ್ರಸಿದ್ಧ ಜ್ಯೋತಿಷಿಯೊಬ್ಬರು ಇವರ ಮಗ ಬದುಕಿದ್ದಾನೆ ಎಂದು ಇವರಿಗೆ ಹೇಳಿದ್ದನ್ನೇ ಇವರು ನಂಬಿಕೊಂಡು,’ ಆತ ಮರಳುತ್ತಾನೆ ಆತ ಬಂದೇ ಬರುತ್ತಾನೆ ಹಾಗೆ ಮರಳುವಾಗ ಆತನಿಗಾಗಿ ಈ ತೋಟವನ್ನು ಒಪ್ಪಿಸಿ ನಾನೂ ಸಾಯುತ್ತೇನೆ’ ಎಂದು ಹೇಳುತ್ತಿದ್ದಳು. ಹಾಗೆ ಅವರು ಹೇಳುವಾಗ ಆತನೂ ಸತ್ತು ಹೋಗಿರಬಹುದು ಎಂದು ಹೇಳಿ, ಅವರಿಗೆ ಬೇಸರ ಮಾಡದೆ ‘ಹಾಗೇ ಆಗಲಿ, ಆತ ಬಂದೇ ಬರುತ್ತಾನೆ ‘ ಎಂದು ಧ್ವನಿಗೂಡಿಸುತ್ತಿದ್ದೆ.
‘ಹಾಗೇ ಆಗಲೀ ಆತ ಬಂದಾಗ ನಾನೂ ನಿಮ್ಮೊಂದಿಗೆ ಇರುತ್ತೇನೆ, ಮತ್ತು ಊರವರು ನೂರು ಹೇಳುತ್ತಾರೆ, ಹಾಗಂತ ಈ ದೇವತೆಯಂತಹಾ ಅಮ್ಮನನ್ನು, ಆತ್ಮವಾಗಿ ಇವರ ಜೊತೆಗೇ ಇರುವ ತಂದೆಯನ್ನು ಬಿಟ್ಟು ಹೋಗಿದ್ದು ಸರಿಯಾದ ಕ್ರಮ ಅಲ್ಲ ಎಂದು ಮುಲಾಜಿಲ್ಲದೆ ಕೇಳುತ್ತೇನೆ ‘ಎಂದಿದ್ದೆ.
ಅದಕ್ಕವರು ,’ನೀವು ಹಾಗೆಲ್ಲಾ ಕೇಳುವುದು ಬೇಡ. ಆತ ನೀವು ಹಾಗೆ ಕೇಳಿದರೆ ಮತ್ತೆ ಬೇಸರ ಮಾಡಿಕೊಳ್ಳುತ್ತಾನೆ ಹಾಗಾಗಿ ಆತ ಬರುವಾಗ ನೀವು ಇಲ್ಲಿ ಇರುವುದೇ ಬೇಡ ‘ಎಂದು ಕಳುಹಿಸಿಬಿಟ್ಟಿದ್ದಳು. ಹಾಗೆ ಅವಳು ಕಳುಹಿಸಿ ಈಗ ತಿಂಗಳುಗಳೇ ಆಗಿ ಹೋಗಿದೆ. ಮೊನ್ನೆ ಕರೆ ಮಾಡಿದ್ದ ಅವಳು, ‘ಇವರೇ ನೀವು ನಮ್ಮ ಊರಿನ ಕೆರೆ ನೋಡಲು ಬರುವುದಿಲ್ಲವಾ? ಈಗ ತುಂಬಿದೆ, ಬಹಳಾ ಚೆನ್ನಾಗಿ ಆಗಿದೆ ಬನ್ನಿ’. ಎಂದು ಕರೆದಳು. ‘ನಾನು ಬರುತ್ತೆನೆ ಎಷ್ಟು ನೀರಿದೆ? ಈಗ?’ ಎಂದು ಕೇಳಿದ್ದೆ. ನೀವು ಮುಳುಗಿದರೆ ಸಾಯುವಷ್ಟು ಈಗ ನೀರಿದೆ ಎಂದು ಹೇಳಿ ಫೋನಿಟ್ಟಳು.
ಫೋಟೋ ಕೃಪೆ : Fine art america
ನಾನು ಅವಳನ್ನು ಮೊದಲು ಭೇಟಿಯಾದಾಗ ಸುಡು ಬೇಸಿಗೆ ಮತ್ತು ನಾನು ಅದೇ ಕೆರೆಯ ಬಳಿ ಏಕಾಂಗಿಯಾಗಿ ನಿಂತಿದ್ದೆ. ಆಗ ಆ ದಾರಿಯಲ್ಲೇ ಬಂದಿದ್ದ ಆಕೆ, ನಾನು ಹಾಗೆ ಏಕಾಂಗಿಯಾಗಿ ನಿಂತಿರುವುದನ್ನು ನೋಡಿ.. ನಾನು ಆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿರುವವನು ಎಂದು ತಿಳಿದು ನನ್ನನ್ನು ಅಲ್ಲಿಂದ ಓಡಿಸಲು ನೋಡಿದ್ದಳು. ನಾನು ತಮಾಷೆಗೆ ನಿಮ್ಮ ಊಹೆ ಸರಿಯಿದೆ ಎಂದೂ ಹೇಳಿದ್ದೆ.
‘ಈಗ ನೀನು ಕೆರೆಗೆ ಹಾರಿದರೆ ಸಾಯುವುದಿಲ್ಲ ಸೊಂಟ ಮುರಿದುಕೊಳ್ಳುತ್ತೀಯಷ್ಟೇ ಅದರಲ್ಲಿ ಸಾಯುವಷ್ಟು ನೀರಿಲ್ಲ. ಸಾಯುವಷ್ಟು ನೀರು ಮಳೆಗಾಲದಲ್ಲಿ ಇರುತ್ತದೆ, ನಿನ್ನ ನಂಬರ್ ಕೊಟ್ಟಿರು, ಆಗ ಕಾಲ್ ಮಾಡುತ್ತೇನೆ. ಆಗ ಬಂದು ಹಾರು’ ಎಂದು ನನಗೆ ಹೇಳಿ, ಸಮಾಧಾನ ಮಾಡಿ ಕಳುಹಿಸಿದ್ದಳು.
ಇದ್ಹಾಗಿ ಎರಡು ಮೂರು ಮಳೆಗಾಲ ಆಗಿದ್ದರೂ ಆಕೆ ನನ್ನನ್ನು ಮಳೆಗಾಲದಲ್ಲಿ ಕೆರೆಯಬಳಿ ಹೋಗದಂತೆ ನೋಡಿಕೊಂಡಿದ್ದಳು. ಈಗ ಯಾಕೋ ನನ್ನನ್ನು ಕರೆಮಾಡಿ ಕರೆದು, ಕೆರೆಗೆ ಹಾರು ಎಂದು ಹೇಳುತ್ತಿದ್ದಾಳೆ.
ನಾನು,’ ಆಯ್ತು ಬರುತ್ತೇನೆ’ ಎಂದು ಫೋನಿಟ್ಟಿದ್ದೇನೆ.
‘ನಾನು ಅಂದೇನೂ ಅಲ್ಲಿ ಸಾಯಲು ನಿಂತಿದ್ದು ಅಲ್ಲಾ’ ಎಂದು ಆಕೆಗೆ ಹೇಳಿ ನಿರಾಸೆ ಮಾಡಲೂ ಮನಸ್ಸಾಗಲಿಲ್ಲಾ.
*******
‘ಸಣ್ಣ ಪುಟ್ಟ ಸಂಗತಿಗಳು’ ಅಂಕಣದ ಹಳೆಯ ಸಂಚಿಕೆಗಳು :
- ಸಣ್ಣ ಪುಟ್ಟ ಸಂಗತಿಗಳು (ಭಾಗ ೧) – ‘ಕ್ರಾಂತಿಕಾರಿ’
- ಸಣ್ಣ ಪುಟ್ಟ ಸಂಗತಿಗಳು (ಭಾಗ ೨) – ಅವರು ಹಾಗೆ ಹೋದವರ ಪತ್ತೆಯೇ ಇಲ್ಲ
- ರಂಜಿತ್ ಕವಲಪಾರ