ಪೂರಿ, ಚಪಾತಿ ಅಥವಾ ಹಾಗೆ ತಿನ್ನಲು ಶ್ರೀಖಂಡಾ ಸ್ವಾದಿಷ್ಟವಾಗಿರುತ್ತೆ, ಆ ರುಚಿಯನ್ನು ಹೇಗೆ ತಯಾರಿಸುವುದು ಗೊತ್ತಾ? ತುಂಬಾ ಸರಳ ಅಂತ ಹೇಳುತ್ತಾರೆ ಅರುಣ ಪ್ರಸಾದ್ ಅವರು, ಎಷ್ಟು ಸರಳ ಅಂದ್ರೆ ಇಷ್ಟೇ …ಮಾಡಿ ನೋಡಿ…
ಪೂನಾದಿಂದ ಇನ್ನೋವಾ ಕಾರ್ ನಿಂದ ಬರುತ್ತಿದ್ದ ಗೆಳೆಯರು, ತಮ್ಮ ಡ್ರೈವಿಂಗ್ ನಲ್ಲಿ ಹಸಿವಾದಾಗ ತಿನ್ನಲು ಪೂನಾದ ಪ್ರಸಿದ್ಧ ಹೋಟೆಲ್ ನಿಂದ ಶ್ರೀಖಂಡ್ ಸವರಿದ ಚಪಾತಿ ರೋಲ್ ಗಳನ್ನು ತರುತ್ತಿದ್ದರು. ಆ ಮೂಲಕ ನನಗೆ ಶ್ರೀಖಂಡ್ ರುಚಿ ಗೊತ್ತಾಗಿದ್ದು.
ಮಾವಿನ ಹಣ್ಣಿನ ಸೀಸನ್ ನಲ್ಲಿ ಮಾವಿನ ಹಣ್ಣು ಸೇರಿಸಿದರೆ ಅಮ್ರಖಂಡ್ ಆಗುತ್ತದೆ. ಅಷ್ಟೇ ಅಲ್ಲ ಇದಕ್ಕೆ ಕೇಸರಿ, ಪಿಸ್ತಾ , ಬಾದಾಮಿ ಸೇರಿಸುವ ವಿವಿಧ ಸ್ವಾದದ ಶ್ರೀಖಂಡ್ ಮಾಡಬಹುದು.
ಇದು ಗುಜರಾತಿ ಮತ್ತು ಮರಾಠಿ ಪ್ರದೇಶದ ಜನರ ಇಷ್ಟದ ಸಿಹಿ ಆಗಿದೆ. ಅಮುಲ್ ಸಂಸ್ಥೆ ಇದನ್ನು ವಿವಿಧ ಸ್ವಾದದಲ್ಲಿ ಅತ್ಯಾಕರ್ಷ ಪ್ಯಾಕಿಂಗ್ ನಲ್ಲಿ ದೊಡ್ಡ ಪ್ರಮಾಣದ ಮಾರುಕಟ್ಟೆ ಪಡೆದಿದೆ. ಶಿವಮೊಗ್ಗ ಜಿಲ್ಲೆಯ ಆನಂದಪುರಂನಲ್ಲಿ ಇರುವ ನಮ್ಮ ಮಲ್ಲಿಕಾ ವೆಜ್ ನಲ್ಲಿ ಇಂತಹ ಅನೇಕ ರೆಸಿಪಿ ಪ್ರಯೋಗ ಮತ್ತು ಅದನ್ನು ನಿತ್ಯ ಗ್ರಾಹಕರಿಗೆ ಸಿಗುವಂತೆ ಮಾಡುವ ನನ್ನ ಪ್ರಯತ್ನದಲ್ಲಿ ಶ್ರೀಖಂಡ್ ಚಪಾತಿ ರೋಲ್ ಸದ್ಯದಲ್ಲೇ ವರ್ಷ ಪೂರ್ತಿ ಸಿಗಲಿದೆ ಈಗಾಗಲೇ ಹಲಸಿನ ಎಲೆ ಕಡಬು, ಪೋಡಿ ಇಡ್ಲಿ ಎರಡು ವರ್ಷದಿಂದ ನಿತ್ಯ ಗ್ರಾಹಕರಿಗೆ ಸಿಗುತ್ತಿದೆ.
ಶ್ರೀಖಂಡ್ ಕ್ಕೆ ಬೇಕಾಗುವ ಸಾಮಗ್ರಿಗಳು :
(ಅಂದಾಜು ಒಂದು ಕಿಲೋ ಶ್ರೀಖಂಡ್ ತಯಾರಿಸಲು)
- ಮೊಸರು – 2 ಲೀಟರ್
- ಸಕ್ಕರೆಪುಡಿ – 200 ಗ್ರಾಂ.
- ಏಲಕ್ಕಿ – 4
- ಜಾಯಿಕಾಯಿ ಪುಡಿ – ಕಾಲು ಚಮಚ.
ತಯಾರಿಸುವ ವಿಧಾನ :
ಹಿಂದಿನ ರಾತ್ರಿ 2 ಲೀಟರ್ ಮೊಸರಿಗೆ ನೀರು ಬಸಿಯುವ ಬಟ್ಟೆಯಲ್ಲಿ ಕಟ್ಟಿ ಇಡಿ. ಬೆಳಿಗ್ಗೆ ಅದನ್ನು ಬಟ್ಟೆಯಿಂದ ಬೇರ್ಪಡಿಸಿ ಗಟ್ಟಿಯಾದ ಮೊಸರನ್ನು ಚೆನ್ನಾಗಿ ಮಿಕ್ಸರ್ ಮಾಡಿ, ಬೆಣ್ಣೆಯಂತೆ ರೂಪಾಂತರ ಆಗುತ್ತದೆ. ಅದಕ್ಕೆ ಪುಡಿ ಮಾಡಿದ 200 ಗ್ರಾಂ ಸಕ್ಕರೆ, ಏಲಕ್ಕಿ ಮತ್ತು ಜಾಯಿಕಾಯಿ ಪುಡಿ ಸೇರಿಸಿ. ಮತ್ತೊಮ್ಮೆ ಮಿಕ್ಸರ್ ನಿಂದ ಚೆನ್ನಾಗಿ ಕಲೆಸಿ. ನಿಮ್ಮ ಶ್ರೀಖಂಡ್ ತಯಾರು.
ಇದಕ್ಕೆ ನಿಮ್ಮ ಇಷ್ಟದ ಕೇಸರಿ, ಪಿಸ್ತಾ , ಬಾದಾಮಿ ಸೇರಿಸಬಹುದು ಅಥವಾ ಮಾವಿನ ಹಣ್ಣು ಸೇರಿಸಿ (ಅಮ್ರ ಖಂಡ್) ರೊಟ್ಟಿ ಚಪಾತಿಗೆ ಸವರಿ ರೋಲ್ ಮಾಡಿದರೆ ಈಗಿನ ಜಮಾನದ ಮಕ್ಕಳು ಇಷ್ಟ ಪಡುತ್ತಾರೆ.
ಬ್ರೆಡ್ ಸ್ಲೈಸ್ ಗೆ ಸವರಿ ಕೂಡ ತಿನ್ನಬಹುದು ಅಥವಾ ಹಾಗೇ ಫ್ರಿಡ್ಜ್ ನಲ್ಲಿಟ್ಟು ಬೇಕಾದಾಗ ಐಸ್ ಕ್ರೀಮ್ ನಂತೆ ಸವಿಯಬಹುದು.
- ಅರುಣ ಪ್ರಸಾದ್