ಬಂಟ್ವಾಳದ ಭಗೀರಥ – 24 ಅಡಿ ಬಾವಿ ತೋಡಿದ 17ರ ಬಾಲಕ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ನಾಯಿಲ ಗ್ರಾಮದ 17ರ ಬಾಲಕ ಈಗ ಬಂಟ್ವಾಳದ ಭಗೀರಥ ಎಂಬ ಕೀರ್ತಿಗೆ ಭಾಜನನಾಗಿದ್ದಾನೆ. ಹೌದು.. ಆತ ಮಾಡಿದ ಸಾಧನೆ ಏನು? ಮುಂದೆ ಓದಿ…

ಆತನ ಹೆಸರು ಸೃಜನ್‍ ಪೂಜಾರಿ. ತಂದೆ ಲೋಕನಾಥ್ ಪೂಜಾರಿ, ತಾಯಿ ಮೋಹಿನಿ. ಬಂಟ್ವಾಳದ ಬಿ. ಮೂಡ ಸರಕಾರಿ ಪದವೀಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಕಾಮರ್ಸ್ ವಿದ್ಯಾರ್ಥಿ. ಮನೆಯಲ್ಲಿ ಸದಾ ಕುಡಿಯುವ ನೀರಿಗೆ ತತ್ವಾರ. ಇದೊಂದೇ ಈತನ ಚಿಂತೆಗೆ ಕಾರಣ. ಕಷ್ಟಗಳು ಬದುಕಿನ ಪಾಠವನ್ನು ಮಾಡಿಬಿಡುತ್ತವೆ ನೋಡಿ. ಅದುವೇ ಆಗಿದ್ದು ಸೃಜನ್‍ಗೂ.

ಬಹಳಷ್ಟು ಆಲೋಚಿಸಿದ ಸೃಜನ್‍ಗೆ ತಾನೇ ಬಾವಿ ತೋಡಿದರೆ ನೀರು ಸಿಗಬಹುದಲ್ಲವೇ ಎಂಬ ಐಡಿಯಾ ಮನಸಿನಲ್ಲಿ ಕೂತಿತು. ಮನೆಯ ಹಿತ್ತಿಲೆಲ್ಲ ಅಡ್ಡಾಡಿದ. ಒಂದೆಡೆ ನಿಂತ. ಅಲ್ಲಿಯೇ ಬಾವಿ ತೋಡುವುದು ಎಂಬ ನಿರ್ಧಾರಕ್ಕೆ ಬಂದ. 24 ಅಡಿ ಆಳಕ್ಕೆ ಬಾವಿ ಹೋಗಿದೆ. ನೀರು ಸಿಕ್ಕಿದ್ದು, ಈಗ ಸೊಂಟ ಮಟ್ಟದ ನೀರಿದೆ ಎಂಬ ವಿಚಾರ ಸುತ್ತಮುತ್ತಲಿನವರ ಗಮನಸೆಳೆದಿದೆ. ಇದು ಮಾಧ್ಯಮ ಪ್ರತಿನಿಧಿಗಳ ಗಮನಕ್ಕೂ ಬಂದಿದ್ದು, ಇಂದು ಇದು ದೇಶದ ಗಮನಸೆಳೆದ ಸುದ್ದಿಯಾಗಿದೆ. ಬಾಲಕನ ಭಗೀರಥ ಪ್ರಯತ್ನ ಪ್ರಶಂಸೆಗೆ ಒಳಗಾಗಿದೆ. ತಂದೆ ತಾಯಿ ಕೂಡ ಹೆಮ್ಮೆ ಪಡುತ್ತಿದ್ದು, ಮಗ ನಿರ್ಮಿಸಿದ ಬಾವಿಗೆ ಸಿಮೆಂಟ್ ರಿಂಗ್ ಇಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಸಾಮಾನ್ಯವಾಗಿ ಬಾವಿ ತೋಡುವಾಗ ನೀರಿನ ಸೆಲೆ ಹುಡುಕಲು ತಜ್ಞರ ನೆರವು ಪಡೆಯುತ್ತಾರೆ. ಈ ಕೇಸ್‍ನಲ್ಲಿ ಸೃಜನ್ ಸ್ವತಃ ಆ ಕೆಲಸ ಮಾಡಿದ್ದಾನೆ. ಸುದ್ದಿಗಾರರಿಗೆ ಆತ ಹೇಳಿರುವುದು ಇಷ್ಟು – ಹಲವು ಸಮಯಗಳಿಂದ ನಮಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಹೀಗಾಗಿ ನಮ್ಮದೇ ಜಾಗದಲ್ಲಿ ಬಾವಿ ತೋಡಿದರೆ ಹೇಗೆ ಎಂಬ ಆಲೋಚನೆಯಲ್ಲಿದ್ದೆ. ಈ ಜಾಗದಲ್ಲಿ ನೀರು ಸಿಗಬಹುದು ಎಂದು ಮನಸ್ಸಿಗೆ ಅನಿಸಿತು. ಹಿಂದಿನ ವರ್ಷ ಡಿಸೆಂಬರ್ ತಿಂಗಳು ಫ್ರೀ ಇದ್ದಾಗ ಬಾವಿ ತೋಡಲು ಆರಂಭಿಸಿದೆ. ರಜೆ ಮುಗಿದು ಕಾಲೇಜಿಗೆ ಹೋಗುವಾಗ ಕೆಲಸ ಮಾಡುವುದು ಆಗಲಿಲ್ಲ. ಪ್ರಥಮ ಪಿಯುಸಿ ರಜೆ ಸಿಕ್ಕಿದ ನಂತರ ಮತ್ತೆ ಕೆಲಸ ಶುರುಮಾಡಿದೆ. ಒಬ್ಬನೇ ಬಿಡುವಿದ್ದಾಗ ಎಲ್ಲ ಬಾವಿಯ ಮಣ್ಣು ತೆಗೆದು ಭಟ್ಟಿಯಲ್ಲಿ ತುಂಬಿಸಿ ಹಗ್ಗ ಹಾಕಿ ಮೇಲೆ ಎಳೆದು ಹೊರ ಹಾಕುತ್ತಿದ್ದೆ. ಬಿಸಿಲಿನ ತಾಪಕ್ಕೆ ಕೆಲಸ ಮಾಡುವುದು ಕಷ್ಟವಾಗುತ್ತಿತ್ತು. ಹೀಗಾಗಿ ಮಧ್ಯಾಹ್ನ ಕೆಲಸ ಮಾಡುತ್ತಿರಲಿಲ್ಲ. ಬೆಳಗ್ಗೆ ಮತ್ತು ಸಂಜೆ ವೇಳೆ ಕೆಲಸ ಮಾಡುತ್ತಿದ್ದೆ. ಬಾವಿ ಆಳವಾಗುತ್ತ ಹೋಯಿತು. ನೀರಿನ ಸೆಲೆ ಸಿಕ್ಕಿತು. ಈಗ ಸೊಂಟ ಮಟ್ಟದ ನೀರು ಸಂಗ್ರಹವಾಗಿದೆ. ಕಷ್ಟಪಟ್ಟದಕ್ಕೆ ಫಲ ಸಿಕ್ಕಿದೆ.


  • ಆಕೃತಿ ನ್ಯೂಸ್
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW