ಅವ್ವ ಕಟ್ಟಿದ ರೊಟ್ಟಿ ಜೊತೆ ಬದನೇಕಾಯಿ ಎಣಗಾಯಿ ನುಚ್ಚಿನಂಬಲಿ ಕಲ್ಲಿನ್ಯಾಗ ಅರದ ಕಾರಾ, ಶೇಂಗಾಹಿಂಡಿ ನವಣಕ್ಕಿ ಅನ್ನಂ ಇದ್ದರೇ ಎಷ್ಟು ಚಂದ….ಕವಿ ಪೀರಸಾಬ ನದಾಫ ಅವರ ಲೇಖನಿಯಲ್ಲಿ ಮೂಡಿಬಂದ ಸುಂದರ ಕವನ ತಪ್ಪದೆ ಮುಂದೆ ಓದಿ ಮತ್ತು ಶೇರ್ ಮಾಡಿ…
ದನ ಕಾಯಲು ಹೋದಾಗ
ಗುಡ್ಡದ್ವಾರಿಯಲ್ಲಿ ನಿಂತ ನೀರಿನ ಮೇಲಾಡುತ್ತಿದ್ದ
ಹುಳಾ, ಕಸ – ಕಡ್ಡಿಗಳನ್ನು ಕೈಯಲ್ಲಿ ಸರಿಸುತ್ತ
ಗಟಗಟನೇ ಬೊಗಸೆ ಎತ್ತಿ ಕುಡಿದು
ಮತ್ತೆ ಡುರ್…ಅನ್ನತ್ತಿದ್ದೀವಿ
ಗುಡ್ಡದ ತುತ್ತ ತುದಿ ಮರದ ಹರಿಕೊಂಬಿ ಮ್ಯಾಲ ಮಂಗ್ಯಾನ್ಹಾಂಗ್ ಜಿಗಿದಾಡತಿದ್ದೀವಿ
ಆ ಕೊಂಬಿ,ಈ ಕೊಂಬಿ ಹತ್ತಿ, ತುತ್ತ ತುದಿಗ್ಹೋಗಿ
ಕೇಕೆ ಹೋಡಿತಿದ್ದೀವಿ
ದಾರಿಯಲ್ಲಿ ಹೋಗುವಾಗ
ಶೇಂಗಾ ಹೊಲ ಕಂಡರೆ ಸಾಕು!
ತುಡುಗ ದನ ನುಗ್ಗಿದಂತೆ ನುಗ್ಗಿ ಕಿತ್ತು ಹತ್ತಾರು ಗಿಡ
ಅದೇ ಗುಡ್ಡದ್ವಾರಿ ನೀರಾಗ ಗಲಬಲ ಕೈಯಾಡಿಸಿ
ತುಸು ಮಣ್ಣ ಇದ್ದರು ಸುಲಿದು ತಿನ್ನತ್ತಿದ್ದೀವಿ
ಹೊಲದ ಮಾಲಿಕ್ನ ಕೈಯಾಗ ಏನಾದರೂ ಸಿಕ್ಕರ
ಬಡತಾನು ಅದರ ಜೊತೆ ತಿನ್ನತಿದ್ದೀವಿ
ಸ್ವಲ್ಪ ಹೊತ್ತ ತೆಪ್ಪಗಿರತಿದ್ದೀವಿ
ಅವ್ವ ಕಟ್ಟಿದ ರೊಟ್ಟಿ ಜೊತೆ
ಅಲ್ಲೆ ಹೊಲದಲ್ಲಿ ಬೆಳೆದ ಮೂಲಂಗಿ, ಬದನೆಕಾಯಿ, ಸಬ್ಬಸಗಿ ಕಿತ್ತು ಗಬಗಬನೇ ರೊಟ್ಟಿಯ ಜೊತೆ ಚಪ್ಪರಿಸುತ್ತಿದ್ದೀವಿ
ಮತ್ತೆ ಮತ್ತೆ ಸಿಗುವ ಪೇರಲ,ನೀರಲ,ಬಾರಿ, ಕಾರಿ ಸವಿಯುತ್ತಿದ್ದೀವಿ
ಹಾಗೆ ಜೊಬಿನಲ್ಲಿ ತುಂಬಿಕೊಂಡು ಮನೆಗೂ ತರತ್ತಿದ್ದೀವಿ
ಕಂಡ ಕಂಡವರಗೆಲ್ಲಾ ಹಂಚಿ ಕುಂಡಿ ಕೆರಕೊಂಡ ಓಡತಿದ್ದೀವಿ
ಅಗ ನಮಗ್ಯಾವ ರೋಗಾನು ಇರಲಿಲ್ಲ
ಬಂದರ ಒಂದಿಷ್ಟ ನೆಗಡಿ ಜ್ವರಾ ಅದು ಬಿಟ್ಟರ
ಬೇಸಿಗೆಯಲ್ಲಿ ಗೊಬ್ಬರ ಏಳತಿದ್ದವು
ಸುತ್ತ ಬೇವಿನೆಲೆ ಹಾಸಿ, ಹಾಸಿಗೆ ಬಿಟ್ಟೆಳದಂತೆ
ಮೆತ್ತಗೆ ದೀಪಾ ಕೊಡುತನ ಹಿರಿಯರು ಕಾಯಿತಿದ್ದಿರು
ಅಷ್ಟಾದ ಮೇಲೆ, ಅದೇ ಹಳೇ ತುಂಟಾಟ
ಕಬಡ್ಡಿ, ಚಿನ್ನಿದಾಂಡು, ಲಗೋರಿ, ಕುಂಟಾಟ
ಕಣ್ಣು ಮುಚ್ಚಾಲೆಯಾಟ, ಕಡಿದಾಟ, ಬಡಿದಾಟ
ಮತ್ತೆ ಒಂದಾಗುವಾಟ, ಒರುಗೆಯ ಸಲಿಗೆಯಾಟ
ಇಂದೇನಾಗೈತಿ
ನನಗ ನನ್ನಲ್ಲಿ ಸೊಜಿಗಾಗೈತಿ
ಸಾರಾಸಗಟು ನಮ್ಮನ್ನೇ ನಾವು
ಬಂಧನದೊಳಗ ಕಟ್ಟಿ ಹಾಕಿಕೊಂಡಂಗಾಗೈತಿ
ಮಕ್ಕಳು ಆಡತೇವೂ ಅಂದರು ಬಿಡವಲ್ಲವಾಗೈತಿ ರೊಟ್ಟಿಗಿಟ್ಟಿ ತಿನಿಸೋದ ಬಿಟ್ಟು
ಪಿಜ್ಜಾ ಬರ್ಗರ್ ಬೆನ್ನ ಹತ್ತಂಗಾಗೈತಿ
ಹಳಸಿದ್ದ ಕೊಳಸಿದ್ದ ಪರಮಾನ್ನ ಎನ್ನುತ್ತ
ಮಕ್ಕಳ ಜೊತೆ ಸವಿಯಂಗಾಗೈತಿ
ಮುಚ್ಚಿದ ಬಾಕಲಾ ಮುಚ್ಚಿದಂಗ್ ಇರತಾವು
ಹೊರಗ ಕಣ್ಣ ಹಾಸಿದರ ಬಿಕೋ ಅಂತಾವು
ಒಳಗ ಏನ ಹೆಣಾ ಅದಾವೋ ಏನೋ ಅನಸಾಕಹತ್ತೆತಿ
ಒಬ್ಬರ ಕೂಡಾ ಒಬ್ಬರು ಮಾತಿಗಿಳಿದಂಗಾಗೈತಿ
ಮೊಬೈಲ್ನ್ಯಾಗ ಮಾತನಾಡೋದ ಮಾತ್ರ ಜೋರ ಆಗೇತಿ
ಮನೆ ಅಂಗಳಾ ನೋಡಿದರ ಹೇಸಿಕಿ ಬರುವಂಗದಾವು
ಫಿಲ್ಟರ್ ನೀರ ಕುಡಿದು
ಫ್ರಿಜ್ಜ ತಂಪು ಪಾನಿಯಾ ಸೇವಿಸಿ
ಅದನ್ ಕಾಸಿ, ಇದನ್ ಸೋಸಿ, ಮತ್ತ ಮತ್ತ ಬಿಸಿ ಮಾಡಿ
ಗ್ಯಾಸ ಒಲಿ ಗಯ್ಯಾಳಿಹಂಗ್ ಸದಾ ತೆರದ ಇರತೈತಿ
ಕಟಕ್ ರೊಟ್ಟಿ, ಬದನೇಕಾಯಿ ಎಣಗಾಯಿ ನುಚ್ಚಿನಂಬಲಿ
ಕಲ್ಲಿನ್ಯಾಗ ಅರದ ಕಾರಾ, ಶೇಂಗಾಹಿಂಡಿ
ನವಣಕ್ಕಿ ಅನ್ನಂದರೇನು!
ಹುಬ್ಬೇರಿಸಿ ನೆಟ್ ಒಪನ್ ಮಾಡಿ ತಿಳಕೊಳ್ಳಂಗಾಗೈತಿ!
ಹಿಂಗಾದಮ್ಯಾಲ ಇನ್ನ್ಹೆಂಗ್ ಬರತದದು ಆ ಕಾಲ
ರೈತರೆಲ್ಲಾ ಬರೀ ಹತ್ತಿ ಗೊಂಜಾಳಾ
ಬೆನ್ನ ಹತ್ತಿ ಕುಂತೈತಿ
ಸಾವಿ, ನವಣಿ, ಹುರಳಿ, ತೊಗರಿ, ಉದ್ದು, ಹೆಸರು ಅಲಸಂದಿ ಬೆಳೆಯೋದು ಕಡಿಮಿ ಆಗೈತಿ
ಮನೆ ಮುಂದಿನ ನೂರ್ಹೆರಿನ ಹಗೆ ಮುಚ್ಚಿ ಹೊಗಿ
ರೈತರ ಕಚ್ಚಿ ಸಡಿಲಾಗ್ಯಾವು
ಬೀಜಾನ ಕಾಯ್ದಕೊಳ್ಳದ ಈ ಕಾಲ
ಕಂಪನಿವರಿಗೆ ಕೈಯೊಡ್ಡಿ ನಿಲ್ಲುವಂಗಾಗೈತಿ
ಯಪ್ಪೋ! ಗೊಬ್ಬರಾ ಬೀಜಕ್ಕ ಪಾಳಿ ಹಚ್ಚಿ ಕಾಯುವಂಗಾಗೈತಿ, ಕಾಯುವಂಗಾಗೈತಿ.
- ಪೀರಸಾಬ ನದಾಫ