ಪಶುವೈದ್ಯ ಹೆಣ್ಣು ನೋಡೋಕೆ ಹೋದರೆ ಯಾವ ಹೆಣ್ಣು ಒಪ್ಪುತ್ತಿರಲಿಲ್ಲ, ದನದ ಡಾಕ್ಟರುಗಳು ಜಾನುವಾರಿನ ಗುದ ದ್ವಾರದಲ್ಲಿ ಕೈ ಹಾಕಿ ಅದರ ಮಲವೆಂಬ ಸಗಣಿಯನ್ನು ತೆಗೆದು ಪರೀಕ್ಷಿಸುವುದು ಕಾರಣವಾಗಿತ್ತು. ಪಶುವೈದ್ಯರು ಎದುರಿಸುವ ಸವಾಲುಗಳನ್ನು ಪಶು ಪ್ರಾಧ್ಯಾಪಕರಾದ ಡಾ.ಎನ್.ಬಿ.ಶ್ರೀಧರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪಶುವೈದ್ಯರಿಗೆ ಸೌಂದರ್ಯ ಪ್ರಜ್ಞೆ ಇರಬೇಕೋ ಬೇಡವೋ? ಅಥವಾ ಅದನ್ನು ಕಟ್ಟಿಕೊಂಡು ಅವರಿಗೇನಾಗಬೇಕು? ಎಂಬ ಸಿಲ್ಲಿಯಾದ ಗಂಭೀರ ಪ್ರಶ್ನೆ ಹುಟ್ಟಿಕೊಂಡಿದ್ದು ೧೯೯೫ ರ ಸಮಯದಲ್ಲಿ ಶಿವಮೊಗ್ಗದಲ್ಲಿ ಪ್ರತಿ ತಿಂಗಳು ನಡೆಯುವ ಜಿಲ್ಲೆಯ ಎಲ್ಲಾ ಪಶುವೈದ್ಯರ ಪ್ರಗತಿ ಪರಿಶೀಲನಾ ಸಭೆಯಲ್ಲಿ.
ಆಗ ಎಂತದೋ ಒಂದುಒಂದು ಹೊಸ ಸಿನಿಮಾ ಬಂದು ಭಾರೀ ಜನಪ್ರಿಯವಾಗಿತ್ತು. ಅದರಲ್ಲಿ ನಟಿಸಿದ ನಟ ನಟಿಯಿಬ್ಬರೂ ಮಾದಕವಾಗಿ ನಟಿಸಿ ತರುಣ ತರುಣಿಯರ ಮೈ ನವಿರೇಳಿಸಿದ್ದರು. ನಾವೇನು ಕಡಿಮೆ ಎಂದು ನಮ್ಮ ಪಶುವೈದ್ಯ ಮಿತ್ರರೂ ಸಹ ಆ ಸಿನಿಮಾವನ್ನು ನೋಡಿಕೊಂಡು ಅದರ ಕಥೆಯನ್ನು ರಸವತ್ತಾಗಿ ಹೇಳುತ್ತಿರುವಾಗಲೇ ಅನೇಕರು “ಗುಂಡು ತುಂಡು ಪಾರ್ಟಿ” ಯನ್ನು ಬೇಗ ಮುಗಿಸಿ ಸಿನಿಮಾಕ್ಕೆ ಹೋಗುವ ತೀರ್ಮಾನ ತೆಗೆದುಕೊಂಡ ಹಾಗಿತ್ತು. ಫಿಲ್ಟರ್ ಇಲ್ಲದ ಮಾತುಗಳಾಡುವ ಒಂದಷ್ಟು ಹಿರಿಯ ಪಶುವೈದ್ಯರಿಗೆ ಇದೇ ವಿಷಯ ಸಾಕಾಗುತ್ತಿತ್ತು. ನನ್ನ ಸ್ನೇಹಿತನೊಬ್ಬ “ನೋಡಕ್ಕೆ ಚೆನ್ನಾಗಿಲ್ಲ” ಎಂದು ಅನೇಕ ಹೆಣ್ಣುಗಳನ್ನು ನೋಡಿ ಬಿಟ್ಟ ವಿಷಯ ಆ ಹಿರಿಯರ ಕಿವಿಗೆ ಬಿತ್ತು ಅನ್ನಿಸುತ್ತೆ. ಅವರಿಗೂ ಬಾತ್ಮೀದಾರರು ಇರುತ್ತಾರಲ್ಲ?. ನನ್ನ ಸ್ನೇಹಿತ ಎದುರು ಬಂದೊಡನೆ “ ಅಲ್ರೀ .. ಕೋಣ ಯಾವಾಗಾದರೂ ಎಮ್ಮೆ ಮುಖ ನೀಡಿ ಲವ್ ನೋಡುತ್ತೇನ್ರಿ.. ಅದರ ಕೆಲಸವೇನಿದ್ದರೂ ಎಮ್ಮೆಯ ಹಿಂಬಾಗದಲ್ಲಿ ತಾನೇ? ಎಲ್ಲಾ ಎಮ್ಮೆ ದನಗಳು “ಸೌಂದರ್ಯ” ನೋಡುತ್ತಾ ಕುಳಿತಿದ್ದರೆ ನಾವೂ ಇಷ್ಟೊಂದು ಕರು ಹುಟ್ಸಕ್ಕೆ ಆಗ್ತಿತ್ತಾ?. ಸುಮ್ಮನೇ ಯಾವುದಾದರೊಂದು ನೋಡಿ ಕಟ್ಟಿಕೊಳ್ರೀ.. ಯೌವನ ಕಳೆದು ಹೋಗಿ ನಂತರಾ ಹಳೇ ಬುಲ್ಲಾಗಿ ಬಿಡ್ತೀರಿ. ವಯಸ್ಸಾಗಿ ಹೋದ್ರೆ ಸದಾ ಜಾನುವಾರಿನ ಮುಕಳಿಯಲ್ಲಿ ಕೈ ಹಾಕಿ ನಿಲ್ಲುವ ನಿಮ್ಮನ್ನ ಯಾವ ಹುಡುಗಿಯೂ ಮದ್ವೆ ಆಗ್ಲಿಕ್ಕಿಲ್ಲ. ಒಟ್ನಲ್ಲಿ ಒಂದು ಹುಡುಗಿ ಸಿಕ್ಕಿ ನಿಮ್ಮ ಘನ ವಂಶದ ಅಭಿವೃದ್ಧಿ ಆದರೆ ಆಯ್ತಲ್ಲ.. ಎಂದೆಲ್ಲಾ ಗಲ ಗಲನೆ ಮಾತಾಡಿ ಪಶುವೈದ್ಯ ಕುಲಕ್ಕೇ “ಸೌಂದರ್ಯ ಪ್ರಜ್ಞೆ” ಇರಬಾರದೆಂಬ ತೀರ್ಮಾನಕ್ಕೆ ತಂದಿಡುತ್ತಿದ್ದರು. ಅದಕ್ಕೂ ಕಾರಣವೊಂದಿತ್ತು. ಅವರು ಯೌವನದಲ್ಲಿದ್ದಾಗ ಅವರಪ್ಪ ಅವರಮ್ಮ ಹೆಣ್ಣು ಹುಡುಕುತ್ತಿದ್ದರಂತೆ. ಇವರಿಗೆ ಒಪ್ಪಿಗೆಯಾದ ಅನೇಕ ಹೆಣ್ಣು ಮಕ್ಕಳು “ಹುಡುಗ ವೆಟರ್ನರಿ ಡಾಕ್ಟ್ರು ನನಗೆ ಬೇಡ” ಎಂದು ಬಿಟ್ಟರಂತೆ.
ಫೋಟೋ ಕೃಪೆ : google
ಅದಕ್ಕೆ ಮುಖ್ಯ ಕಾರಣ ದನದ ಡಾಕ್ಟರುಗಳು ಜಾನುವಾರಿನ ಗುದ ದ್ವಾರದಲ್ಲಿ ಕೈ ಹಾಕಿ ಅದರ ಮಲವೆಂಬ ಸಗಣಿಯನ್ನು ತೆಗೆದು ಪರೀಕ್ಷಿಸುವುದೇ ಕಾರಣವಂತೆ. ಈ ಪಶುವೈದ್ಯರ ಹಣೆಬರಹವೇ ಸರಿ ಇಲ್ಲವೇನೋ? ಈ ಗುದ ಪರೀಕ್ಷೆಯನ್ನು ಯಾರು ಕಂಡು ಹಿಡಿದರೋ ನಾಕಾಣೆ. ಮನುಷ್ಯರಲ್ಲೂ ಗುದಧ್ವಾರದ ಮೂಲಕ ಬೆರಳು ತೂರಿಸಿ ಪ್ರೋಸ್ಟೇಟ್ ಗ್ರಂಥಿಯ ಊತ, ಸ್ತ್ರೀಯರ ಜನನಾಂಗದ ಪರೀಕ್ಷೆ ಎಲ್ಲಾ ಮಾಡುತ್ತಾರೆ. ಆದರೆ ಇದೆಲ್ಲಾ ಮುಚ್ಚಿದ ಎಸಿ ಕೋಣೆಯಲ್ಲಿ ನಡೆಯುವ ಗುಟ್ಟಾದ ಪ್ರಕ್ರಿಯೆ. ಪಶುವೈದ್ಯರು ಬಟಾಬಯಲಿನಲ್ಲಿ ನಿಂತು ಆಕಳು ಎಮ್ಮೆಗಳ ಗುದದ್ವಾರದಲ್ಲಿ ತೋಳಿನವರೆಗೂ ಕೈ ತೂರಿಸಿ ಮಾಡುವ ಪರೀಕ್ಷೆಯು ಅನೇಕ ಬಾರಿ ನೋಡುಗರ ಮುಜುಗರಕ್ಕೋ ಅಥವಾ ತಮಾಷೆಗೋ ಕಾರಣವಾಗುತ್ತದೆ. ಈ ಕಾರಣಕ್ಕೆ ಪಶು ಜನನಾಂಗವನ್ನು ಪರೀಕ್ಷಿಸುವ ಖರ್ಚಿಲ್ಲದ ಅತ್ಯಮೂಲ್ಯವಾದ ಸುಲಭದ ತಲಾತಲಾಂತರದ ನಡೆದುಕೊಂಡು ಬಂದ ಪರೀಕ್ಷಾ ಪದ್ಧತಿಯನ್ನು ಬಿಡಲಾದೀತೇ? ಹಸು ಮತ್ತು ಎಮ್ಮೆಗಳ ಜನನೇಂದ್ರಿಯಗಳ ಒಳ ಅಂಗಾಂಗಗಳ ಪರಿಸ್ಥಿತಿ, ಗಾತ್ರ, ಗರ್ಭದಲ್ಲಿನ ಕರುವಿನ ವಯಸ್ಸು, ಅದರ ಆರೋಗ್ಯ, ಜೀವಾಂಕುರಕ್ಕೆ ಕಾರಣವಾಗುವ ಅಂಡಾಶಯ, ಅದರ ಕಾರ್ಯಚಟುವಟಿಕೆ, ಅಂಡಾಣು ಬಿಡುಗಡೆಯಾಗುವ ಸಮಯ, ಕೃತಕವಾಗಿ ಗರ್ಭದಲ್ಲಿ ಹೋರಿಯ ವೀರ್ಯವನ್ನು ಹಾಕುವ ಸಮಯವನ್ನು ಪತ್ತೆ ಮಾಡಲು ಅಂಡಾಣು ಕೋಶ ಇತ್ಯಾದಿ ಸೂಕ್ಷ್ಮಾತಿಸೂಕ್ಷ್ಮ ಅಂಗಾಂಶಗಳನ್ನೆಲ್ಲಾ ಪಶುವೈದ್ಯ ಸ್ಪರ್ಶಿಸಿ ಅವುಗಳ ಸ್ವಾಭಾವಿಕ ಮತ್ತು ಅಸ್ವಾಭಾವಿಕ ಸ್ಥಿತಿಗಳನ್ನು ತಿಳಿಯಬಲ್ಲ. ಮೂತ್ರ ಪಿಂಡ, ಮೂತ್ರಕೋಶ, ದೊಡ್ದ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳ ಇರುವಿಕೆಯ ಪತ್ತೆಗೂ ಸಹ ಗುಧನಾಳದ ಮೂಲಕ ಮಾಡುವ ಪರೀಕ್ಷೆ ಅತ್ಯಂತ ಸಹಾಯಕಾರಿ. ಹಾಗಾಗಿ ಈ ಗುದನಾಳದ ಮೂಲಕ ಕೈಹಾಕಿ ಮಾಡುವ ಈ ಪರೀಕ್ಷೆಗೆ ಪಶುವೈದ್ಯಕೀಯ ರಂಗದಲ್ಲಿ ಎಲ್ಲಿಲ್ಲದ ಮಹತ್ವ. ಅದರಲ್ಲಿಯೂ ಅಲ್ಟ್ರಾಸೌಂಡಿನಂತ ದುಬಾರಿ ಉಪಕರಣಗಳಿದ್ದರೂ ಸಹ ಇಂದಿಗೂ ಈ ಗುದನಾಳದ ಮೂಲಕ ಕೈತೂರಿಸಿ ಮಾಡುವ ಪರೀಕ್ಷೆಗೆ ಪರ್ಯಾಯವೇ ಇಲ್ಲ. ಕೊಡಲಿಯ ಕಾವು ಕುಲಕ್ಕೇ ಮೃತ್ಯು ಎಂಬಂತೆ ಇದೇ ಪಶುವೈದ್ಯರ ಘನತೆ ಕುಂದಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಹಿರಿಯ ಪಶುವೈದ್ಯರಿಗೂ ಸಹ ಐದಾರು ಹುಡುಗಿಯರು “ದನದ ಮುಕಳಿಯಲ್ಲಿ ಕೈ ಹಾಕುವ ಹುಡುಗ ಬೇಡ” ಅಂದು ಕಂಗಾಲು ಮಾಡಿ ಅವರ ಮದುವೆಯಾಗಿ ವಂಶೋದ್ಧಾರ ಮಾಡುವ ಕನಸೇ ಕಮರಿ ಹೋಗಿತ್ತಂತೆ. ಅವರು ಮದುವೆಯಾಗುವಾಗ ಅವರಿಗೆ ೩೦ ವರ್ಷ ದಾಟಿ ವಂಶೋದ್ಧಾರ ಮಕ್ಕಳನ್ನು ಹೆರಬಲ್ಲ ಸಮರ್ಥ ಹುಡುಗಿ ಸಿಕ್ಕರೆ ಸಾಕು ಎಂದು ಅವರ ಹಿರಿಯರು ಮದುವೆ ಮಾಡಿದ್ದರಂತೆ. ಕಾರಣ ಆ ಹಿರಿಯ ಮತ್ತು “ಅನುಭವಿ” ಪಟ್ಟವಿರುವ ಪಶುವೈದ್ಯರು ಆ ರೀತಿ ಆ ರೀತಿ ಹೇಳಿದ್ದಕ್ಕೆ ಜಾಸ್ತಿ ವಿರೋಧವೇನೂ ವ್ಯಕ್ತವಾಗುತ್ತಿರಲಿಲ್ಲ. ಈಗಲೂ ಈ ರೀತಿ ಪರಿಸ್ಥಿತಿ ಇದೆಯೇ ಎಂಬುದನ್ನು ಯುವ ಅರ್ಹ ಇನ್ನೂ ಮದುವೆಯಾಗದ ಅಥವಾ ಇತ್ತೀಚೆಗೆ ಮದುವೆಯಾದ ಬ್ಯಾಚುಲರ್ ಪಶುವೈದ್ಯರೇ ಹೇಳಬೇಕು!!.
ಫೋಟೋ ಕೃಪೆ : google
ಜಿಲ್ಲಾ ಕೇಂದ್ರಕ್ಕೆ ತಿಂಗಳಿಗೊಮ್ಮೆ ಉಪನಿರ್ದೇಶಕರು ಕರೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಪಶುವೈದ್ಯರು ಪಾಲ್ಗೊಳ್ಳುತ್ತಿದ್ದೆವು. ಮೊಬೈಲು ಇಲ್ಲದ ಕಾಲದಲ್ಲಿ
ನಮ್ಮೆಲ್ಲಾ ಸಂವಹನ ಈ ಸಭೆಯ ನೆಪದಲ್ಲಿಯೇ ನಡೆಯುತ್ತು. ನಾನಂತೂ ಈ ಸಭೆಯನ್ನು ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ. ಅದರಲ್ಲೂ ಅದೇ ಹೀಟು, ಅದೇ ಇನ್ಸೆಮಿನೇಷನ್, ಅದೇ ಕರ ಅಡ್ಡ ಸಿಕ್ಕುವುದು ಈ ತರದ ಕರ ಕರೆಗಳ ಏಕತಾನತೆಯಿಂದ ಒಂದಿನ ದೂರವಿದ್ದು “ಆರಾಮ” ವಾಗಿರಲು ಬಹುತೇಕ ಪಶುವೈದ್ಯರು ಬಯಸುವುದು ಸಹಜವಾಗಿತ್ತು. ಅದರಲ್ಲೂ ಕೆಲವು “ಗುಂಡು ಪ್ರಿಯ” ಪಶುವೈದ್ಯರು ಒಟ್ಟಿಗೆ ಸೇರಿ ಅರೆಗತ್ತಲೆ ಬಾರಿನಲ್ಲಿ ಕುಳಿತು ಅದೇನೇನೋ “ಮೆಲುಕು” ಹಾಕಲು ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಅವರವರ ಕಂಫರ್ಟ್ ಝೋನಿಗೆ ತಕ್ಕ ಹಾಗೇ “ಗುಂಪುಗಾರಿಕೆ” ನಡೆಯುತ್ತಿತ್ತು. ಕೆಲವೊಮ್ಮೆ “ತಾಂತ್ರಿಕ” ವಿಚಾರ ಸಂಕಿರಣವೆಂಬ ನೆಪಮಾತ್ರದ ಸಭೆ ನಡೆದು ಇದು ಎಲ್ಲರ ಟಿಏ ಡಿಏ ಪಡೆಯುವ ಅಧೀಕೃತ ಸಭೆಯಾಗಿ ಮಾರ್ಪಡುತ್ತಿತ್ತು. ಪಶುವೈದ್ಯಕೀಯ ಮಹಾವಿದ್ಯಾಲಯಗಳಿಂದ ಬರುವ ಕೆಲವು ಪ್ರಾಧ್ಯಾಪಕರುಗಳು ಬಹಳ ಆಸ್ಥೆಯಿಂದ ಸಿದ್ಧರಾಗಿ ಬರುತ್ತಿದ್ದರು. ಕೆಲ ಹಳಬರಿಗೆ ಇದು ಕಾಟಾಚಾರಾದ ಟಿಏ ಡಿಏ ಸಭೆ ಎಂದು ಗೊತ್ತಾಗಿ ಹಳೆಯ ಪಾಠಕ್ಕೆ ತಲೆಬರಹ ಬದಲಾವಣೆ ಮಾಡಿಕೊಂಡು ಬರುತ್ತಿದ್ದರು. ಇನ್ನು ಹೊಸಬರಿಗೆ ಇದು ಅವರ ಬಯೋಡಾಟಾಗೆ ಒಂದು ಹೆಚ್ಚುವರಿ ಅಂಕ ತರುವ ದಿನವಾಗಿತ್ತು. ಇನ್ನು ಕೆಲವು ಮನೆಯಲ್ಲಿ ಮಹಾ ಮಡಿವಂತರಾಗಿರುವ “ತುಂಡು ಪ್ರಿಯ”ರು ಅವರ “ಗುಂಡು ಪ್ರಿಯ” ಗೆಳೆಯರ ಜೊತೆ ಕುಳಿತು ಹಾಳಾಗಲು ಬಹಳ ಖುಷಿಪಡುತ್ತಿದ್ದರು. ಅಲ್ಲದೇ ಬಹುತೇಕ ಹಳ್ಳಿ ಭಾಗದಲ್ಲೇ ಕೆಲಸ ಮಾಡುವ ಪಶುವೈದ್ಯರಿಗೆ ಹತ್ತಿಕ್ಕಿಕೊಂಡ ಈ “ಚಟುವಟಿಕೆ”ಗಳನ್ನೆಲ್ಲಾ ಆ ಸ್ಥಳದಲ್ಲೇ ಮಾಡಿದರೆ ಇವರ ಕಲ್ಯಾಣ ಗುಣಗಳೆಲ್ಲಾ ಊರವರಿಗೆ ಗೊತ್ತಾಗಿ ಅವರ ಇಮೇಜ್ ಕಡಿಮೆಯಾಗುವ ಎಲ್ಲಾ ಲಕ್ಷಣಗಳೂ ಇರುವುದರಿಂದ ಜಿಲ್ಲಾ ಕೇಂದ್ರಕ್ಕೆ ಬಂದು ಇಲ್ಲಿನ ಅವರ ನೆಚ್ಚಿನ ಬಾರುಗಳಲ್ಲಿ ಕತ್ತಲೆಯಾಗುವುದನ್ನು ಕಾಯುತ್ತಲೇ ಬೆಚ್ಚಗೇ ಸೇರಿಕೊಳ್ಳುತ್ತಿದ್ದರು. ಇದು ಬಹುತೇಕ ಇಲಾಖೆಗಳ ಎಲ್ಲಾ ವೃತ್ತಿಯವರಲ್ಲೂ ಸಾಮಾನ್ಯ.
ಇನ್ನು ಕೆಲವರಿಗೆ ಇದು ಹೊಸ ಸಿನಿಮಾ ನೋಡುವ ಅವಕಾಶವಾಗಿತ್ತು. ತಾಲೂಕಿನ ಯಾವುದೋ ಹಳ್ಳಿಯ ಪಶುಚಿಕಿತ್ಸಾಲಯದಲ್ಲಿ ದಿನಕ್ಕೆ ಒಂದೆರಡು ಗಂಟೆ ಮಾತ್ರ ವಿದ್ಯುತ್ ಇರುವುದರಿಂದ ತರ ತರದ ಅನೇಕ ಮನರಂಜನೆ ಭಾಗ್ಯಗಳಿಂದ ವಂಚಿತರಾದವರಿಗೆ ಇದೊಂದು ಹೊಸ ಜಗತ್ತಿಗೆ ತೆರೆದುಕೊಳ್ಳುವ ಮಹಾಭಾಗ್ಯವಾಗಿತ್ತು. ಅದರಲ್ಲೂ ದೊಡ್ಡ ಚಿತ್ರ ಮಂದಿರಗಳಲ್ಲಿ ಎಸಿಯಲ್ಲಿ ಕುಳಿತು ಒಳ್ಳೆ ಚಿತ್ರಗಳನ್ನು ಪಾಪ್ ಕಾರ್ನ್, ಸಮೋಸಾಗಳನ್ನು ಮೆಲ್ಲುತ್ತಾ ಸಂಗಡ ಕೂಲ್ ಡ್ರಿಂಕ್ಸುಗಳನ್ನು ಹೀರುತ್ತಾ ನೋಡುತ್ತಿದ್ದರೆ ಭೂಲೋಕಕ್ಕೆ ಸ್ವರ್ಗವೇ ಇಳಿದಂತೆ ಭಾಸವಾಗುತ್ತಿತ್ತು.

“ಹೆಣ್ಮಕ್ಕ್ಳೂ ದನದ ಡಾಕ್ಟ್ರಾಗ್ತಾರಾ!?” ಎಂದು ಪ್ರಶ್ನೆ ಹಾಕುವ ಕಾಲ ಅದು. ನಮ್ಮ ರೈತ ಬಾಂಧವರಿಗೆ ಆಶ್ಚರ್ಯ ತರುವ ವಿಷಯಗಳಲ್ಲೊಂದು. ಲೇಡಿ ಡಾಕ್ಟ್ರಮ್ಮಗಳು ದನಗಳಲ್ಲಿ ಅಡ್ಡ ಸಿಕ್ಕಿರುವ ಕರುವನ್ನು ಹೊರ ತೆಗೀತಾರಾ? ಒದ್ದು ಜಾಡಿಸುವ ಎಮ್ಮೆ ನಾಟಿ ದನ ಎತ್ತುಗಳಿಗೆ ಇಂಜೆಕ್ಷನ್ ಮಾಡ್ತಾರಾ?” ಎಂಬ ಚಿದಂಬರ ರಹಸ್ಯದಂತ ಭಯಂಕರ ಕುತೂಹಲಕಾರಿ ಪ್ರಶ್ನೆಗಳಿದ್ದವು. ಒಂದಿಷ್ಟು ಜನ ಲೇಡಿ ಪಶುವೈದ್ಯರು ದನಕ್ಕೆ ಕೃತಕ ಗರ್ಭಧಾರಣೆ ಮಾಡಿದರೆ ಕೇವಲ ಹೆಣ್ಣು ಕರುಗಳೇ ಹುಟ್ಟಬಹುದೇ? ಎಂಬ ಪ್ರಶ್ನೆ ಹೊಂದಿದ್ದರು. ಆದರೆ ಮಹಿಳಾ ಪುರುಷ ಪಶುವೈದ್ಯರಷ್ಟೇ ಅಥವಾ ಒಂದಿಷ್ಟು ಜಾಸ್ತಿಯೇ ಸಮರ್ಥರು ಎಂಬುದು ಆಗಿದ್ದ ನಮ್ಮ ಜಿಲ್ಲೆಯ ಮಹಿಳಾ ಪಶುವೈದ್ಯರ ಕೆಲಸದ ವಿಧಾನವನ್ನು ನೋಡಿದ ಮೇಲೆಯೇ.. ನಮ್ಮ ಜಿಲ್ಲಾ ಸಭೆಗೂ ಬರುವ ನಾಲ್ಕೈದು ಲೇಡಿ ಪಶುವೈದ್ಯರು ಅವರವರ ಹೊಸ ಸೀರೆಯ ಬಗ್ಗೋ ಅಥವಾ ಹೊಸ ಕುಕ್ಕರಿನ ಬಗ್ಗೋ ಚರ್ಚೆ ಮಾಡುತ್ತಿದ್ದರೇನೋ? ಪುರುಷ ಪ್ರಾಧಾನ್ಯವಾದ ಪಶುಪಾಲನಾ ಇಲಾಖೆಯಲ್ಲಿ ಅವರ ಆಸಕ್ತಿಯ ಟಾಪಿಕ್ಕು ಯಾವುದು ಎಂಬ ಬಗ್ಗೆ ತಿಳಿದು ಕೊಳ್ಳಲು ನಮಗಾರಿಗೂ ಹೆಚ್ಚಿನ ಆಸಕ್ತಿಯೂ ಇರಲಿಲ್ಲ, ಸಮಯವೂ ಇರಲಿಲ್ಲ ಅನ್ನಿ. ಅವರೂ ಸಹ ಸಾಮಾನ್ಯ ಮಹಿಳೆಯರ ಹಾಗೇ “ ರೀ.. ಕಾಂಚನ್ ಸಿಲ್ಕ್ ಸೆಂಟರಿನಲ್ಲಿ ಹೊಸ ಸೀರೆ ಬಂದಿದೆಯಂತಲ್ರೀ.. ನೀವ್ಯೆಷ್ಟು ಕೊಟ್ರೀ?… ಜಾಸ್ತಿಯಾಯ್ತಲ್ಲ. ನಮ್ಮೂರೇ ಬೆಟರಪ್ಪಾ. “ ಡಾಕ್ಟ್ರಮ್ಮಾ.. ನಿಮಗೆ ಜಾಸ್ತಿ ದುಡ್ಡು ತಗೊಳ್ಳುದುಂಟೇ?” ಎಂದು ಅಂಗಡಿಯವ ಕಡಿಮೆ ತಗಂಡ ಕಣ್ರೀ.. ಎಂದು ರಾಗವಾಗಿ ಕಣ್ಣರಳಿಸಿ ಹಾವಭಾವ ವ್ಯಕ್ತ ಪಡಿಸುತ್ತಾ ಜೋರು ಜೋರು ಧ್ವನಿಯಲ್ಲಿ ಹೇಳುತ್ತಿದ್ದರೆ ಯಾವ ಡಾಕ್ಟರಾದರೇನು? ಮೂಲತ: ಇವರೂ ಹೆಣ್ಣು ಮಕ್ಕಳೇ ಅಲ್ಲವೇ? ಎನ್ನುವುದು ಬಹುತೇಕ ಖಚಿತವಾಗುತ್ತಿತ್ತು.
ಚಿಕಿತ್ಸೆ ಮಾಡುವ ಪಶುಗಳಂತೇ ಮೂಕ ಮಾತುಗಳಲ್ಲಿ ವ್ಯವಹರಿಸುವ ಪಶುವೈದ್ಯರು ಒಂದಿಬ್ಬರಿದ್ದರು. ಯಾವಾಗಲೂ ಅರೆ ನಿಮೀಲಿತ ನೇತ್ರಗಳಲ್ಲಿ ಅವರ ಭಾವನೆಯನ್ನು ನಮ್ಮ ಪೇಷಂಟ್ ಜಾನುವಾರುಗಳಂತೇ ಮೂಕ ಮಾತುಗಳಲ್ಲಿ ಹೇಳುವಂತೇ ಕಾಣುವುದರಿಂದ ಅವರನ್ನು ಅನೇಕರು “ಮೂಗ ಡಾಕ್ಟರ್”ಗಳೆಂದೇ ಎಂದೇ ಕರೆಯುತ್ತಿದ್ದರು. ಅಪರೂಪಕ್ಕೊಮ್ಮೆ ಮಾತನಾಡುವುದರಿಂದ ವಾಚಾಳಿಯರಾದ ಇತರರಿಗಿಂತ ಅವರ ಮಾತಿಗೆ ಒಳ್ಳೇ ತೂಕವಿರುತ್ತಿತ್ತು. ಚರ್ಚೆಗಳೆಲ್ಲಾ ನಡೆದು ತೀರ್ಮಾನದ ಹಂತಕ್ಕೆ ಬಂದಾಗ ಈ “ಮೂಕ”ರ ತೀರ್ಮಾನವೇ ಅಂತಿಮವಾಗಿರುತ್ತಿತ್ತು. ಜಿಲ್ಲಾ ಸಭೆಯ ಮತ್ತೊಂದು ವಿಶೇಷವೆಂದರೆ ಸಂಘದ ಚಟುವಟಿಕೆಗಳು. ಸಂಘದ ಸದಸ್ಯರು ಅದ್ಯಾವುದೋ ಪ್ರೊಮೋಷನ್ನು, ವೇತನ ಬಡ್ತಿ, ಮಂತ್ರಿವರ್ಯರ ಮೇಜವಾನಿ ಖರ್ಚು ಇತ್ಯಾದಿ ತರ ತರದ ಚಟುವಟಿಕೆಗಳಿಗೆ ವಸೂಲಿ ಮಾಡಬೇಕಾಗಿರುವುದರಿಂದ ಎಲ್ಲಾ ಸದಸ್ಯರ ಹಿಂದೆ ಅವರ ಪಟ್ಟಿ ಹಿಡಿದು ಮಲೆನಾಡು ಗಿಡ್ಡ ಹೋರಿ ಆಕಳುಗಳ ಬೆನ್ನು ಹತ್ತಿದಂತೆ ಬೆನ್ನು ಹತ್ತುತ್ತಿದ್ದರು. ಸಂಘದ ವಸೂಲಿ ಕಾರ್ಯಕ್ಕೆ ಪದಾಧಿಕಾರಿಗಳು ಸದಸ್ಯರನ್ನು ಹುಡುಕಾಡಿಕೊಂಡಿದ್ದರೆ ಅವರ ಕೈಯಿಂದ ಚಾಣಾಕ್ಷರಾಗಿ ತಪ್ಪಿಸಿಕೊಳ್ಳುವದರಲ್ಲಿ ನಮ್ಮವರೇನೂ ಕಡಿಮೆಯಿರಲಿಲ್ಲ. “ಏ ಕೊಟ್ಟೆ ಕಣೋ, ಎಲ್ಲೊಗ್ತೀನಿ? ಹೋಗುವಾಗ ಕೊಟ್ಟೇ ಹೋಗ್ತೀನಿ” ಎಂದು ಎಸ್ಕೇಪ್ ಆಗುವುದಕ್ಕೆ ಸ್ಕೆಚ್ ಹಾಕುತ್ತಿದ್ದರು. ನಮ್ಮಲ್ಲಿ ಸಂಘದ ಖಜಾಂಚಿಯನ್ನು ಆರಿಸುವಾಗ ಆತನೆಷ್ಟು “ವಸೂಲಿ ವೀರ” ಎಂಬುದರ ಮೇಲೆ ಆತನ ಪದವಿ ಫಿಕ್ಸ್ ಆಗುತ್ತಿತ್ತು. ಕೇಂದ್ರ ಸಂಘದ ಬಾಕಿ ವಸೂಲಿ, ಸ್ಥಳೀಯವಾಗಿ ಗಣ್ಯರು ಬಂದಾಗ ಮಾಡಿದ ವಸೂಲಿ ಇವೆಲ್ಲಾ ಸೇರಿ ಸಂಘದ ಸದಸ್ಯರೆಂದರೆ “ವಸೂಲಿ ವೀರ” ರೆಂದು ಹೆಸರಾಗಿದ್ದರು. ಮೊದಲೆಲ್ಲಾ ಹೊಸ ಅಗಸ ಭಟ್ಟೆಗಳನ್ನು ಎತ್ತೆತ್ತಿ ಒಗೆದಂತೆ ತಾಂತ್ರಿಕ ವಿಚಾರ ಸಂಕಿರಣ, ರಕ್ತದಾನ ಎಂದೆಲ್ಲಾ ಸಂಘ ಕೊನೆ ಕೊನೆಗೆ ಕಾಟಾಚಾರದ ವಸೂಲಿ ಮೀಟಿಂಗುಗಳಿಗೆ ಸೀಮಿತವಾಗುತ್ತಿತ್ತು.
ಫೋಟೋ ಕೃಪೆ : google
ಜಿಲ್ಲೆಯ ಉಪನಿರ್ದೇಶಕರು ಮತ್ತು ಅವರ ಕಚೇರಿಯಲ್ಲಿರುವ ಸಹಾಯಕ ನಿರ್ದೇಶಕರು ಇಬ್ಬರೂ ಹೆಡ್ಮಾಸ್ಟರು ಮತ್ತು ಕ್ಲಾಸ್ ಟೀಚರುಗಳಂತೆ ಟಾರ್ಗೆಟ್ ಸಾಧಿಸದ ಸಹಾಯಕ ನಿರ್ದೇಶಕರುಗಳಿಗೆ, ಪಶುವೈದ್ಯರಿಗೆ ಸಮಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಉಪನಿರ್ದೇಶಕರ ಜೊತೆ ಕೇಂದ್ರಸ್ಥಾನದಲ್ಲಿ ಇರುವ ಸಹಾಯಕ ನಿರ್ದೇಶಕರು ಒಂಥರಾ “ಅಸಹಾಯಕ ನಿರ್ದೇಶಕ” ರಾಗಿ ಉಪನಿರ್ದೇಶಕರ ಕೈಗೊಂಬೆಯಂತೆ ಗೆಜೆಟಡ್ ಕ್ಲರ್ಕ್ ಆಗಿ ನಾಮಕಾವಾಸ್ತೆ ಕೆಲಸ ನಿರ್ವಹಿಸುತ್ತಿದ್ದರು. ಸಭೆ ನಡೆಯುವಾಗ ಗುಜು ಗುಜು ಮಾತನಾಡುವ ಅಧಿಕಾರಿಗಳನ್ನು “ಸೈಲೆನ್ಸ್” ಎಂದು ಸುಮ್ಮನಿರಿಸುವುದು ಮತ್ತು ಎಲ್ಲರೂ ತರುವ ಪ್ರಗತಿ ವರದಿ ಮತ್ತಿತರ ಅನೇಕಾನೇಕ ಬಣ್ಣ ಬಣ್ಣದ ಅಡ್ಡ ಉದ್ದದ ಫಾರ್ಮಾಟುಗಳನ್ನು ತೆಗೆದುಕೊಂಡು ತಾಲೂಕು ವೈಸ್ ಹೊಂದಿಸಿರಿಸಿಕೊಳ್ಳುವುದು ಅವರ ಕೆಲಸವಾಗಿತ್ತು. ಈ “ಅಸಹಾಯಕ ನಿರ್ದೇಶಕ”ರ ಹುದ್ದೆಗೆ ಬರುವವರು ಬಹುತೇಕ ಹಿರಿಯರು ಮತ್ತು ನಿವೃತ್ತಿ ಕೆಲವು ತಿಂಗಳು ಮಾತ್ರ ಇರುತ್ತಿದ್ದರಿಂದ ಅಥವಾ ಜಿಲ್ಲಾ ಕೇಂದ್ರದಲ್ಲಿ ಮನೆಯಿರುವುದರಿಂದ ಜಿಲ್ಲೆಯ ಉಪನಿರ್ದೇಶಕರುಗಳ ಜೊತೆ ಹೊಂದಾಣಿಕೆಯಿಂದಿರುವುದು ಅವರಿಗೆ ಅನಿವಾರ್ಯವಾಗಿತ್ತು.
ಪ್ರತಿ ತಾಲೂಕಿಗೆ ಮತ್ತು ಪಶುಚಿಕಿತ್ಸಾಲಯಗಳಿಗೆ ಔಷಧಿ ಹಂಚುವುದರಿಂದ ನಾವು ನಮ್ಮ ನಮ್ಮ ಡ ದರ್ಜೆ ನೌಕರರುಗಳನ್ನು,ವಾಹನಗಳನ್ನು ಮತ್ತೊಬ್ಬ ಪಶು ಪರೀಕ್ಷಕರುಗಳನ್ನು ಜೊತೆಯಲ್ಲೇ ಕರೆತರುವುದರಿಂದ ಇಡೀ ಜಿಲ್ಲಾ ಕೇಂದ್ರ ಕಚೇರಿ ಮೀಟಿಂಗ್ ದಿನ ಜನಮಯವಾಗಿ ಬಿಡುತ್ತಿತ್ತು. ಅವರವರ ಹುದ್ದೆಗೆ ತಕ್ಕಂತೆ ಅವರವರು ಬಹಳ ಕಾಲದ ನಂತರ ಸೇರುವ ಈ ಶುಭಾವಕಾಶವನ್ನು ಕ್ಷಣಮಾತ್ರವೂ ವ್ಯರ್ಥಮಾಡದೇ ಹರಟೆಯಲ್ಲಿ ಡೀಪಾಗಿ ತೊಡಗಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದರು. ಜಿಲ್ಲಾ ಕೇಂದ್ರದಲ್ಲಿರುವವರೇ ನಮ್ಮೆಲ್ಲಾ ಸಂಘಗಳ ಅಧ್ಯಕ್ಷರುಗಳಾಗಿರುವುದು ಒಂದು ವಿಶೇಷವಾಗಿತ್ತು. ಎಲ್ಲರೂ ಜವಾನರುಗಳು ಮತ್ತು ಡ್ರೈವರುಗಳಾಗಿದ್ದರೂ ಸಹ ಉಪನಿರ್ದೇಶಕರ ಡ್ರೈವರು ಮತ್ತು ಜವಾನರುಗಳಿಗೆ ವಿಶೇಷ ಸ್ಥಾನಮಾನವಿತ್ತು. ಅವರು ಇಡೀ ದಿನ ಸಾಹೇಬರ ಜೊತೆ ಇರುತ್ತಾರೆ ಇರುತ್ತಾರೆಂಬುದು ಒಂದಾದರೆ ಅವರ ಮೇಲಾಧಿಕಾರಿಗಳ ಮೇಲಿನ ದೂರನ್ನು ಉಪನಿರ್ದೇಶಕರಿಗೆ ತಿಳಿಸಿ ಅವರಿಗೆ ಬುದ್ಧಿ ಹೇಳಿಸುವ ಕೆಲಸವೂ ಈ ಡ್ರೈವರು ಮತ್ತು ಜವಾನರ ಮೂಲಕವೇ ಮೂಲಕ ಆಗುತ್ತಿತ್ತು. ಈ ವಿಷಯ ಗೊತ್ತಿರುವ ಅನೇಕ ಅಧಿಕಾರಿಗಳು ಈ ಜಿಲ್ಲಾ ಕೇಂದ್ರದ ಈ ಯಜಮಾನರುಗಳನ್ನು ಗೌರವದಿಂದಲೇ ನೋಡುತ್ತಿದ್ದರು.
ರೈತರ ಜಾನುವಾರುಗಳಿಗೆ ನೀಡಬೇಕಾದ ಮೆಡಿಸಿನ್ನುಗಳು, ಮೇವಿನ ಬೀಜಗಳು, ಅನೇಕಾನೇಕ ಫಾರಂಗಳು, ಒಮ್ಮೊಮ್ಮೆ ಗಿರಿರಾಜ, ಗಿರಿರಾಣಿ ಕೋಳಿಗಳು ಇವುಗಳನ್ನು ಆಯಾ ತಾಲೂಕುಗಳಿಗೆ ನೀಡಲು ಇದೇ ದಿನ ಮುಹೂರ್ತವಿಡುತ್ತಿದ್ದರು. ಮೆಡಿಸಿನ್ನುಗಳನ್ನು ಹಂಚುವಾಗ ಮಾತ್ರ ಎಲ್ಲ ಕುಚಿಕು ಸ್ನೇಹಿತರುಗಳು ಇದ್ದಕ್ಕಿದ್ದ ಹಾಗೇ ವ್ಯಗ್ರರಾಗಿ ಹಲಾಲುಕೋರ ದುಶ್ಮನುಗಳಾಗಿಬಿಡುತ್ತಿದ್ದರು. ಕಾರಣ ಇಷ್ಟೆ. ಅನೇಕ ಇಂಜೆಕ್ಷನ್ನುಗಳ ವಾಯಲ್ಲುಗಳು, ಬೇವಿನ ಎಣ್ಣೆ ಕ್ಯಾನುಗಳು, ಫಿನೈಲು, ಜಂತಿನ ಔಷಧಿ, ಉಣುಗು ನಿವಾರಕ ಔಷಧಿ ಇವುಗಳ ತರಹೇವಾರಿ ಕ್ಯಾನುಗಳು ಜಿಲ್ಲಾ ಗೋದಾಮಿನಲ್ಲಿ ಒಡೆದು ಹೋಗಿ ಕೀಟನಾಶಕದ ಫ್ಯಾಕ್ಟರಿಯಲ್ಲಿ ಬಂದಂತೆ ಸಮ್ಮಿಶ್ರ ವಾಸನೆ ಬೀರುತ್ತಿದ್ದವು. ಒಡೆದು ಹೋದ ಕ್ಯಾನುಗಳ ಲೆಕ್ಕವನ್ನು ಎಲ್ಲಾ ತಾಲೂಕಿನವರು ಸಮನಾಗಿ ಹಂಚಿಕೊಂಡು ಖರ್ಚು ಹಾಕಬೇಕೆಂದು ಗೋದಾಮಿನವರು ಹೇಳಿದರೆ ಇದನ್ನು ನಮ್ಮವರು ಬಿಲ್ ಕುಲ್ ಒಪ್ಪುತ್ತಿರಲಿಲ್ಲ. ಎಲ್ಲೋ ಒಂದೆರಡು ಒಡೆದು ಹೋದರೂ ಒಂದಕ್ಕೆ ಹತ್ತರಷೂ ಲೆಕ್ಕ ಹೇಳಿ ಅವುಗಳನ್ನು ಯಾರ್ಯಾರಿಗೀ ಮಾರಿಕೊಂಡು ಈ ರೀತಿ ಸುಳ್ಳು ಹೇಳುತ್ತಾರೆಂಬುದು ಇವರ ಗುಮಾನಿಯಾಗಿತ್ತು. ರೈತರಿಗೆ ಆಗುವ ಮಹಾ ಅನ್ಯಾಯದ ಬಗ್ಗೆ ತಕರಾರು ತೆಗೆದು ದೊಡ್ಡ ಜಗಳವೇ ಏರ್ಪಟ್ಟು ಅಧಿಕಾರಿಗಳಾದ ನಾವೆಲ್ಲಾ ಹೋಗಿ ಜಗಳ ಬಿಡಿಸಬೇಕಿತ್ತು. ಹಳ್ಳಿಯ ಪಶುಆಸ್ಪತ್ರೆಗೆ ಉಣ್ಣೆ ನಿವಾರಕ ಔಷಧಿ, ಕೆಮ್ಮಿನ ಔಷಧಿ, ಭೇದಿ ಔಷಧಿ ಇವೇ ಜೀವಾಳ. ಸ್ವಲ್ಪ ವರ್ಷಗಳಿಂದ ವಿವಿಧ ಕಾರಣಗಳಿಂದ ಈ ವಿವಿಧ ಕಾರಣಗಳಿಂದ ಈ ಔಷಧಿಗಳು ಸರಬರಾಜಾಗಿರದಿರುವುದರಿಂದ ರೈತರು ಬಾಟಲಿ ಹಿಡಿದು ಬಂದರು ಅಂದರೆ ಅವರಿಗೆ ಉತ್ತರ ಹೇಳಿ ಹೇಳಿ ನಮಗೆಲ್ಲ ಸಾಕಾಗಿ ತಲೆಬಿಸಿ ಹತ್ತಿ ಹೋಗಿತ್ತು. ನಮ್ಮಾಸ್ಪತ್ರೆ ಜವಾನ ಇದನ್ನು ಚೆನ್ನಾಗಿ ನಿಭಾಯಿಸುತ್ತಿದ್ದ. ಮ್ಯಾಗ್ನೇಸಿಯಂ ಸಲ್ಫೇಟ್ ಲವಣವನ್ನು ದಂಡಿಯಾಗಿ ೫೦ ಕಿಲೋ ಚೀಲದಲ್ಲಿ ಒಮ್ಮೆ ಹತ್ತಿಪ್ಪತ್ತು ಬ್ಯಾಗು ನೀಡುತ್ತಿದ್ದರು. ಆತ ಈ ಲವಣವನ್ನು ರಸ್ತೆ ಬದಿಯ ಗೂಡಂಗಡಿಯಲ್ಲಿ ದೊಡ್ಡ ದೊಡ್ಡ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಬಣ್ಣ ಬಣ್ಣದ ಪೆಪ್ಪರಮಿಂಟ್ ಇಡುವಂತೆ ಈ ಲವಣವನ್ನು ಒಳ್ಳೆಯ ಗೈರತ್ತಿನಲ್ಲಿಡುತ್ತಿದ್ದ. ಈ ಪುಡಿಗೆ ಒಂದಿಷ್ಟು ಅರಿಶಿಣ ಬೆರೆಸಿ ಅದು ಬೇಧಿ ಔಷಧಿ ಎಂದೂ, ಶನಿವಾರ ಸಂತೆಯಲ್ಲಿ ಹೋಗಿ ವ್ಯಾಪಾರಿಗಳು ಬಿಸಾಕಿದ ಶುಂಟಿಗಳನ್ನೆಲ್ಲಾ ಅರೆದು ಪುಡಿ ಮಾಡಿ ಕೆಮ್ಮಿನ ಔಷಧಿ ಎಂದೂ ರೈತರಿಗೆ ಹೇಳಿ ಸಾಗಹಾಕುತ್ತಿದ್ದ. ಪಶುವೈದ್ಯಾಧಿಕಾರಿಗಳು ಶಿವಮೊಗ್ಗಕ್ಕೆ ಹೋಗಿ ಉಪನಿರ್ದೇಶಕರಿಗೆ ಭಯಂಕರ ವಿನಂತಿಗಳ ಗುಡ್ಡೆ ಹಾಕಿ ನೂತನ ಔಷಧಿಗಳನ್ನು ತಂದಿದ್ದಾರೆ ಅಂತಲೂ, ಶಿವಮೊಗ್ಗ ಜಿಲ್ಲೆಯ ಯಾವುದೇ ತಾಲೂಕಿಗೆ ನೀಡದಿದ್ದರೂ ತಾಳಗುಪ್ಪಕ್ಕೆ ಮಂತ್ರಿಗಳ ವಿಶೇಷ ಶಿಪಾರಸ್ಸಿನಂತೆ ಬಂದಿದೆ ಎಂದೂ ಮಾಯದ ಮಾತನಾಡಿ ರೈತರನ್ನು ಖುಷಿಪಡಿಸುತ್ತಿದ್ದ. ಆಶ್ಚರ್ಯವೆಂದರೆ ಈ ಒಂದೇ ಮ್ಯಾಗ್ನೇಸಿಯಂ ಸಲ್ಫೇಟ್ ಔಷಧಿಯನ್ನು ಬೇಧಿಗೆ, ಕೆಮ್ಮಿಗೆ ಮತ್ತೆ ಸರ್ವ ರೋಗಕ್ಕೆ ತೆಗೆದುಕೊಂಡು ಹೋದ ರೈತರು ಪುನ: ಬಂದು ಆ ದಿನ ಕೆಮ್ಮಿಗೆ ಕೊಟ್ಟ “ಭಾರಿ” ಪರಿಣಾಮಕಾರಿ ಔಷಧಿಯನ್ನು ನೆನೆದು ಪದೇ ಪದೇ ತೆಗೆದುಕೊಂಡು ಹೋಗುತ್ತಿದ್ದರುವುದು ನನಗೆ ಸೋಜಿಗದ ವಿಷಯವಾಗಿತ್ತು. ಅದರಲ್ಲೂ ಕುರಿಗಾರರನ್ನು ಆತ ನೋಡಿಕೊಳ್ಳುತ್ತಿದ್ದ ರೀತಿ ಅತ್ಯದ್ಭುತವಾಗಿತ್ತು. ಈ ಹಳೆಯ ಜವಾನರುಗಳು ಆಸ್ಪತ್ರೆಗಳಲ್ಲಿ ಬರುವ ಜಂತುನಿವಾರಕೋಪಾದಿಯಾಗಿ ಅನೇಕ ಪುಡಿಗಳನ್ನು ನೀಟಾಗಿ ಕಟ್ಟಿ ಟಪ್ಪೆಂದು ಬಿಸಾಕಿದರೂ ಅದು ಒಡೆದು ಚಲ್ಲಿ ಹೋಗದಿರುವುದು ರೈತರಿಗೆ ಇವರ ಕಸುಬಿನ ಬಗ್ಗೆ ಗೌರವ ಮೂಡುವಂತೆ ಮಾಡುತ್ತಿತ್ತು.
ಫೋಟೋ ಕೃಪೆ : google
ಔಷಧಿಯನ್ನು ರುಚಿ ನೋಡಿ ಪಡೆಯುವ ಹತ್ತೂರುಗಳನ್ನು ಸುತ್ತಿ ಬರುವ ಕುರಿಗಾರರು ಆಗ ಬರುತ್ತಿದ್ದ “ನೀಲಿವರ್ಣ” (ನಿಲ್ ವರ್ಮ್) ಎಂಬ ಔಷಧಿಗೆ ಮತ್ತು ಆಗಷ್ಟೇ ಹೊಸದಾಗಿ ಬಂದಿದ್ದ “ಪ್ಯಾನಾಕ್ಯೂರ್” ಔಷಧಿಗೆ ಮುಗಿಬೀಳುತ್ತಿದ್ದರು. ಮಾತೆತ್ತಿದರೆ ಮಂತ್ರಿಗಳಿಗೇ ನೇರವಾಗಿ ಫೋನು ಮಾಡಿ ದೂರು ನೀಡುವ ಇವರಿಗೆ ಇಡೀ ವರ್ಷಕ್ಕೆ ನಮ್ಮಾಸ್ಪತ್ರೆಗೆ ಸರಬಾರಾಜಾಗುವ ಒಂದೇ ಕ್ಯಾನು ಔಷಧಿಯಲ್ಲಿ ಇಡೀ ವರ್ಷ ನಿಭಾಯಿಸಬೇಕಾದ ನಮ್ಮ ಅನಿವಾರ್ಯತೆ ಏನೇನೂ ಅರ್ಥವಾಗುತ್ತಿರಲಿಲ್ಲ. ಸರಬರಾಜಾಗುವ ಒಂದೇ ಔಷದಿ ಕ್ಯಾನಿಗೆ ನೀರು ಹಾಕಿ ಬೆಳ್ಳಗಿರುವ ದ್ರವವನ್ನೇ ಹಳೆಯ ಕ್ಯಾನಿಗೆ ಸುರಿದು ಅದನ್ನೇ ಅವರಿಗೆ ನೀಡಿ ಸಾಗ ಹಾಕಿ ನಮ್ಮನ್ನು “ರೈತರನ್ನು ಮ್ಯಾನೇಜ್ ಮಾಡಲು ಬರಲ್ಲ” ಎಂಬ ಉಪನಿರ್ದೇಶಕರ ಅವಕೃಪೆಯಿಂದ ಬಚಾವು ಮಾಡುತ್ತಿದ್ದ ಅಸ್ಖಲಿತ ವಾಗ್ಝರಿಯ ರೀತಿಯೂ ಸಹ ಅಮೋಘವಾಗಿತ್ತು. ಅದರಲ್ಲೂ ಕೆಲ ರೈತರು ಆತ ಔಷಧಿ ಮಾರಿ ಹೊಸ ಮನೆ ಕಟ್ಟಿಸಿದನೆಂದೂ, ಹೆಂಡತಿಗೆ ಕೆಜಿ ಗಟ್ಟಲೇ ಬಂಗಾರ ಕೊಡಿಸಿದನೆಂದೂ, ಮಗನನ್ನು ಕಾನ್ವೆಂಟಿಗೆ ಸೇರಿಸಿದನೆಂದೂ, ಹೊಸ ಸ್ಕೂಟರು ಖರೀದಿಸಿದನೆಂದೂ ಲೂಸಾಗಿ ಮಾತಾಡುವುದು ಆತನ ಕಿವಿಗೆ ಬಿದ್ದು ಕೆಂಡಾಮಂಡಲನಾಗಿ ಆ ರೀತಿ ಮಾತಾನಾಡುವರ ಸಕಲ ಕುಲಗಳನ್ನೂ ವಾಚಾಮಗೋಚರವಾಗಿ ವೆಟರ್ನರಿ ಭಾಷೆಯಲ್ಲಿ ಬೈದು ಸಿಟ್ಟು ತೀರಿಸಿಕೊಳ್ಳುತ್ತಿದ್ದ. ನಾನು ೧೯೯೬ ರಲ್ಲಿ ಜಿಲ್ಲೆಯ ಯಾವ ಪಶುವೈದ್ಯರ ಹತ್ತಿರ ಕಾರಿಲ್ಲದಾಗ ಕೆನರಾ ಬ್ಯಾಂಕಿನವರ ಸಾಲದಿಂದ ಪಡೆದು ಇಲಾಖೆಯ ಅನುಮತಿ ಪಡೆಯಬೇಕಾದಾಗ ಅವರು ಕೇಳುವ ಸಹಸ್ರಾರು ಪ್ರಶ್ನೆಗಳಿಗೆ ಉತ್ತರ ನೀಡಿ ತಲೆ ಚಿಟ್ಟು ಹಿಡಿದು ಕಾರು ಖರೀದಿಸಿದ್ದೆ. ಆದರೆ ನಾನು ಪತ್ನಿಯ ಜೊತೆ ಕಾರಲ್ಲಿ ಹೋಗುವಾಗ “ ನಮ್ ದುಡ್ಡಲ್ಲಿ ಹ್ಯಾಂಗ್ ಹೋಗ್ತಾ ಇದ್ದಾನೆ ನೋಡ್ರೀ” ಎನ್ನುವುದು ನನ್ನ ಕಿವಿಗೆ ಬಿದ್ದರೂ ಜಾಣ ಕಿವುಡು ಮೆರೆದಿದ್ದೆ. ಹಾಗೆಯೇ ನಮ್ಮ ಜವಾನ ಮನೆ ಕಟ್ಟಿಸಲು, ಸ್ಕೂಟರು ಖರೀದಿಸಲು ಮಾಡಿದ ಕೆಜಿಐಡಿ ಸಾಲ, ಎಲ್ಲೈಸಿ ಸಾಲ, ಬ್ಯಾಂಕ್ ಸಾಲ, ಇಲಾಖೆ ಸಾಲ ಇತ್ಯಾದಿ ಹಲವು ಹತ್ತಾರು ಸಕಲ ಸಾಲಗಳಲ್ಲೇ ಆತನ ಎಲ್ಲಾ ಸಂಬಳ ಕಟಾವಣೆಯಾಗಿ ಹೋಗುವುದು ಡ್ರಾಯಿಂಗ್ ಅಧಿಕಾರಿಯಾದ ನನಗೆ ಚೆನ್ನಾಗಿ ಗೊತ್ತಿದ್ದರೂ ಕೊಂಕು ಮಾತಾಡುವವರಿಗೆ ಏನೆಂದು ಹೇಳೋಣ?. ಅವನಿಗೆ ರೈತರು ಭಕ್ಷೀಸಾಗಿ ನೀಡುವ ೧೦-೨೦ ರೂಪಾಯಿಗಳು ಆತನ ಸಂಜೆ ಖರ್ಚಿಗೆ ಸಾಕಾಗುವುದಿಲ್ಲ ಎನ್ನುವುದು ನಮಗೆಲ್ಲಾ ಗೊತ್ತಿದ್ದ ಸತ್ಯವಾಗಿತ್ತು.
ಈ ಕಾರಣದಿಂದ ಆಸ್ಪತ್ರೆಯ ಜೀವಾಳವಾದ ಔಷಧಿಗಳ ಖೋತಾ ಎಂದಾಗ ಅವರೆಲ್ಲರ ಸಿಟ್ಟು ಭಯಂಕರವಾಗಿ ನೆತ್ತಿಗೇರುತ್ತಿತ್ತು. ಒಂದಷ್ಟು ಇಂಜೆಕ್ಷನ್ನುಗಳನ್ನು ಬೇಕಾದರೆ ಒಡೆದು ಹೋಗಿದೆ ಎಂದು ಬರೆದುಕೊಳ್ಳಿ.. ಆದರೆ ಜಂತು ಔಷಧಿ, ಉಣ್ಣೆ ಔಷಧಿ, ಇವುಗಳಿಗೆ ಮಾತ್ರ ಕತ್ತರಿ ಪ್ರಯೋಗ ಮಾಡಲೇ ಕೂಡದು ಎನ್ನುವುದು ಅವರ ವಾದವಾಗಿತ್ತು. ಆದರೆ ಇದೇ ಜನ ತಾಲೂಕು ಆಸ್ಪತ್ರೆಯಿಂದ ಸಣ್ಣ ಪುಟ್ಟ ಹಳ್ಳಿ ಆಸ್ಪತ್ರೆಗಳಿಗೆ ಈ ಔಷಧಿಯನ್ನು ಮರು ಹಂಚಿಕೆ ಮಾಡುವಾಗ ಕ್ಯಾನು ಒಡೆದು ಹೋಗಿದೆ ಎಂದು ನೆಪ ಮಾಡಿ ಒಂದಿಷ್ಟು ಉಳಿಸಿಕೊಳ್ಳುತ್ತಿದ್ದರು. ಅದಕ್ಕೆ ನಿಜವಾದ ಅರ್ಥವೂ ಇತ್ತು. ಕಾರಣ ನಾವೆಲ್ಲಾ ಅವರಿಗೆ ಸಪೋರ್ಟುಿ ಮಾಡುತ್ತಿದ್ದೆವು.
ಫೋಟೋ ಕೃಪೆ : google
ಆಗೆಲ್ಲಾ ಹಲವಾರು ಜಾತಿ ಪಂಗಡಗಳಿಗೆ ಸೇರಿದ್ದರೂ ಅದರ ಬಗ್ಗೆ ಯಾರಿಗೂ ಆಸಕ್ತಿಯಿರದೇ ಕೇವಲ ಪಶುವೈದ್ಯರೆಂಬ ಒಂದೇ ಭಾವನೆ ಇರುತ್ತಿದ್ದವು.ಹತ್ತಾರು ವರ್ಷ ಜೊತೆಗೇ ಕೆಲಸ ಮಾದಿದರೂ ನನಗಂತೂ ಯಾರ ಜಾತಿ ಯಾವುದು? ಎಂಬ ಬಗ್ಗೇ ಗೊತ್ತೇ ಇರಲಿಲ್ಲ. ಜಾತಿ ಏನಿದ್ದರೂ ಅದು ಅತ್ಯಂತ ಖಾಸಗಿಯಾಗಿ ಮನೆಯಲ್ಲಿ, ಮದುವೆ ಮುಂಜಿಗಳಲ್ಲಿಟ್ಟುಕೊಳ್ಳಬೇಕು ಎನ್ನುವುದು ಈಗಲೂ ನನ್ನ ಸ್ಪಷ್ಟ ಅಭಿಪ್ರಾಯ. ಶಿಕ್ಷಣ ಹೆಚ್ಚಾದಂತೆ ಜಾತಿ ಪ್ರಜ್ಞೆಯೂ ಜಾಸ್ತಿಯಾಗುವುದಂತೆ. ಅದರ ಅಕರಾಳ,ವಿಕರಾಳ ಅಸಹ್ಯ ರೂಪ ನಂತರ ಅನೇಕ ವರ್ಷಗಳ ನಂತರ ನನಗಾಯಿತು. ಈ ರೀತಿ ಸಕಲ ಕಲ ಕಲಗಳನ್ನು ಹೊಂದುವ ಜಿಲ್ಲಾ ಮೀಟಿಂಗ್ ಕ್ರಮೇಣ ತಾಲೂಕಿನ ಸಹಾಯಕ ನಿರ್ದೇಶಕರುಗಳಿಗೆ ಮಾತ್ರ ಸೀಮಿತವಾಯ್ತು. ಇದಕ್ಕೆ ಬಿಸಿರಕ್ತದ ಕೆಲ ಯುವ ಪಶುವೈದ್ಯರ ಹರಿತ ತಕರಾರುಗಳ ತರುವ ಪ್ರಶ್ನೆಗಳಿಗೆ ಉತ್ತರ ನೀಡುವ ಮುಜುಗರಗಳು, ಜಾತಿಯ ಹೆಸರಿನಲ್ಲಿ ಅಸಹ್ಯ ರೀತಿಯ ಗುಂಪುಗಾರಿಕೆ, ತಾಂತ್ರಿಕ ವಿಷಯಗಳಲ್ಲಿ ಒಂದಿಷ್ಟೂ ಆಸಕ್ತಿ ಇಲ್ಲದಿರುವುದು ಇತ್ಯಾದಿ ತಗಾದೆಗಳನ್ನು ನಿಭಾಯಿಸಲಾಗದೇ ಎಲ್ಲಾ ಪಶುವೈದ್ಯರ ಸಭೆ ತಿಂಗಳಿಗೊಮ್ಮೆ ನಡೆಯುವುದು ನಿಂತಿತೆಂದೂ, ಟಿಎ,ಡಿಎ ಗಳಿಗೆ ಹಣವಿಲ್ಲವೆಂದು ನಿಲ್ಲಿಸಲಾಯಿತೆಂದೂ ಅನೇಕ ತರದ ಮಾತು ಕೇಳಿಬಂದವು. ನಾನು ತಾಳಗುಪ್ಪದಿಂದ ಬೆಂಗಳೂರಿಗೆ ಉನ್ನತ ವಿಧ್ಯಾಭ್ಯಾಸಕ್ಕಾಗಿ ಹೋಗುವಾಗ ಈ ಜಿಲ್ಲಾ ಮೀಟಿಂಗುಗಳೆಲ್ಲಾ ಬಹುತೇಕ ನಿಂತು ವರ್ಷಕ್ಕೊಮ್ಮೆ ಸೀಮಿತವಾಗಿದ್ದವು.. ಈಗ ಈ ಪರಿಸ್ಥಿತಿ ಹೇಗಿದೆಯೋ ಗೊತ್ತಿಲ್ಲ…
- ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ