ವೀಕೆಂಡ್ ವಿತ್ ರಮೇಶ್” ಕುರ್ಚಿಯೇ ಎಲ್ಲದಕ್ಕೂ “ಎಂಡ್ ” ಅಲ್ಲ..!!

ವೀಕೆಂಡ್ ವಿತ್ ರಮೇಶ್ ಎಂಬುದು ಒಂದು ಟೆಲಿವಿಷನ್ ಕಾರ್ಯಕ್ರಮವಷ್ಟೇ !! ಟಿವಿ ಚಾನೆಲ್‌ರವರು ಅವರ ಕಾರ್ಯಕ್ರಮದ ಬ್ಲೂ ಪ್ರಿಂಟನ್ನು ಈ‌ ಮೊದಲೇ ಹಾಕಿ, ಯಾರನ್ನು ಕರೆಸಬೇಕು, ಹೇಗಿರಬೇಕು, ಇಂಥವರು‌ ಬಂದರೆ ಟಿ.ಆರ್.ಪಿ. ಎಷ್ಟು ಬರಬಹುದು , ಅದರ ಲಾಭ- ನಷ್ಟ ಎಲ್ಲವನ್ನೂ ಅಳೆದು ತೂಗಿ ‌ಲೆಕ್ಕ ಹಾಕಿಯೇ ನಿರ್ಧರಿಸಿರುತ್ತಾರೆ. ಲೇಖಕ ಹಿರಿಯೂರು ಪ್ರಕಾಶ್ ಅವರ ಒಂದು ಲೇಖನ ತಪ್ಪದೆ ಮುಂದೆ ಓದಿ…

ದೂರದರ್ಶನಗಳಲ್ಲಿ ಪ್ರಸಾರವಾಗುತ್ತಿರುವ ಕೆಲವೇ ಗುಣಮಟ್ಟದ ಕಾರ್ಯಕ್ರಮಗಳಲ್ಲಿ ವೀಕೆಂಡ್ ವಿತ್ ರಮೇಶ್ ಕೂಡ ಒಂದು. ಪ್ರಸ್ತುತ Zee ಕನ್ನಡ ವಾಹಿನಿಯಲ್ಲಿ ಸೀಸನ್ 5 ರ ಆವೃತ್ತಿಯಲ್ಲಿ ಮೂಡಿಬರುತ್ತಿರುವ ಈ ಷೋನಲ್ಲಿ‌ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿ, ಏನಾದರೂ ವಿಶಿಷ್ಟವಾದದ್ದನ್ನು ಸಾಧಿಸಿ ಜನಪ್ರಿಯ ವ್ಯಕ್ತಿ, ಸಾಧಕ ಅಥವಾ ಸೆಲೆಬ್ರಿಟಿಯಾಗಿರುವವರನ್ನು ಸಾಧಕನ ಕುರ್ಚಿಯಲ್ಲಿ ಕೂರಿಸಲು ಕರೆಸಲಾಗುತ್ತಿದೆ. ಅವರ ಬಾಲ್ಯ,ಯೌವ್ವನ, ವೃತ್ತಿಯ ಮಹತ್ತರ‌ ಘಟನೆಗಳು, ಸಾಧನೆ, ವೈಯಕ್ತಿಕ ಜೀವನದ ಅವಿಸ್ಮರಣೀಯ ಪ್ರಸಂಗಗಳು, ಸ್ನೇಹಿತರು, ಬಂಧು ಬಳಗದವರ ಅನಿಸಿಕೆ- ಅಭಿಪ್ರಾಯ ಹಾಗೂ ಬದುಕಿನ ಏರುಪೇರುಗಳ ಚಿಂತನ ಮಂಥನ..ಇವೆಲ್ಲದರ ಜೊತೆಗೆ ಅವರ ತಪ್ಪು- ಒಪ್ಪುಗಳ ಮುಕ್ತ ಅನಾವರಣ ಈ‌ ಎಲ್ಲಾ ಅಂಶಗಳಿಂದ, ಮುಖ್ಯವಾಗಿ ನಟ ರಮೇಶ್ ರವರ ಸೊಗಸಾದ ಲವಲವಿಕೆಯ ನಿರೂಪಣೆಯಿಂದಾಗಿ ಈ ಕಾರ್ಯಕ್ರಮ ತನ್ನದೇ ಆದ ವೀಕ್ಷಕ ಬಳಗವನ್ನು‌ ಹೊಂದಿದೆ.

ಈಗಾಗಲೇ ಸೀಸನ್ 5 ರ ಷೋ ಗೆ ನಟಿ ರಮ್ಯ ಸಾಧಕರ ಕುರ್ಚಿಯಲ್ಲಿ ಕೂರುವ ಮೂಲಕ ಆರಂಭ ಒದಗಿಸಿದ್ದು , ಖ್ಯಾತ ಹೃದಯ ತಜ್ಞರಾದ ಡಾ. ಸಿ.ಎನ್.‌ಮಂಜುನಾಥ್ ಹಾಗೂ ಹಿರಿಯ‌ ನಟ ದತ್ತಣ್ಣ, ಉದಯೋನ್ಮುಖ ಸ್ಟಾರ್ ಡಾಲಿ ಧನಂಜಯ ನಂತರದ ಮೂರು ವಾರ ಆ ಸೀಟಿನಲ್ಲಿ‌ ಕೂತು ತಮ್ಮ ತಮ್ಮ‌ ಜೀವನಾನುಭವವನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಷ್ಟೂ ಈ ಕಾರ್ಯಕ್ರಮದ ಕುರಿತಾದ‌ ಅನಿಸಿಕೆ, ಅಭಿಮತ ವಿಮರ್ಶೆ, ನಿರೀಕ್ಷೆ ಹೆಚ್ಚಾಗುತ್ತಲೇ ಹೋಗುತ್ತಿವೆ. ಹೀಗಾಗಿ ಪ್ರತೀ ವಾರವೂ ಹಲವರು ” ತಮ್ಮ ನೆಚ್ಚಿನ ಸೆಲೆಬ್ರಿಟಿಯನ್ನು ಇಲ್ಲಿಗೆ ಕರೆಸಿ, ಇಂಥವರನ್ನು ಸಾಧಕನ‌ ಕುರ್ಚಿಯಲ್ಲಿ ಕೂರಿಸಿದ್ದು ಸರಿಯಲ್ಲ, ಇವರ ಆಯ್ಕೆ ಸಮಂಜಸವಲ್ಲ, ಅವರು ಇತ್ತೀಚೆಗೆ ಬಂದವರು ; ಅವರಿಗಿಂತ ಹೆಚ್ಚಿಗೆ ಸಾಧನೆ ಮಾಡಿರುವ ಸಾಕಷ್ಟು ಜನ ರಾಜ್ಯದಲ್ಲಿ ಇದ್ದಾರೆ, ಇವರಿಗೆ ಬರೀ ಸಿನಿಮಾದವರು ಮಾತ್ರವೇ ಕಣ್ಣಿಗೆ ಬೀಳೋದಾ ಅಥವಾ ಸಿನಿಮಾದವರು ಮಾತ್ರವೇ ಸಾಧಕರಾ ? ಇತರೆ ಕ್ಷೇತ್ರಗಳರವರು ಕಣ್ಣಿಗೆ ಬೀಳೋಲ್ಲವಾ ? ಕನ್ನಡದವಳಾಗಿ ಬರೀ ಇಂಗ್ಲೀಷ್ ನಲ್ಲೇ ಮಾತನಾಡಿದವರದ್ದೂ‌ ಒಂದು ಸಾಧನೆಯಾ ? ವಿದೇಶಗಳಲ್ಲಿ ಕನ್ನಡದ ಕಂಪನ್ನು ಹರಡುವವ ನಿಮ್ಮ ಕಣ್ಣಿಗೆ ಬೀಳೋಲ್ಲವಾ, ನಿಮ್ಮ ಅಜ್ಜಿಗೆ ಕನ್ನಡ ಬರುತ್ತಾ …..ಹೀಗೆ ಹತ್ತು ಹಲವು ಚೇತೋಹಾರಿ ಕಾಮೆಂಟುಗಳೊಂದಿಗೆ ಇಂಥವರನ್ನೇ ಯಾಕೆ ಕರೆಸಬಾರದೆಂಬ ಅವರದ್ದೇ ಆದ ಸಮರ್ಥನೆಯೊಂದಿಗೆ ವಾದಕ್ಕಿಳಿಯುವ ಅಸಂಖ್ಯಾತರೂ ಇದ್ದಾರೆ. ಈ ಎಲ್ಲಾ ಮಸಾಲೆಯುತ ಚರ್ಚೆಗಳಿಂದಾಗಿ ವೀಕೆಂಡ್ ವಿತ್ ರಮೇಶ್ ತನ್ನದೇ ಆದ ಶೈಲಿಯಿಂದಾಗಿ ಹೆಚ್ಚು ವೀಕ್ಷಕರನ್ನು ಆಕರ್ಷಿಸುತ್ತಾ ಸಾಗಿದೆ.

ಒಂದು ಟೆಲಿವಿಷನ್ ನ ಕಾರ್ಯಕ್ರಮ ದ ಬಗೆಗೆ ವೀಕ್ಷಕರು ಈ ಮಟ್ಟದ ಕ್ರಿಯಾಶೀಲತೆಯಿಂದ ಸ್ಪಂದಿಸುವ ಪ್ರಕ್ರಿಯೆ ಜನತಂತ್ರದ, ಮುಕ್ತ ವಾತಾವರಣದ ಸೊಗಸಾದ ಅನಾವರಣ. ಯಾವುದೇ‌ ಒಂದು ಕ್ರಿಯೆಗೆ ಪರಿಪೂರ್ಣವಾದ ಪ್ರತಿಕ್ರಿಯೆ ಇದ್ದಾಗಲಷ್ಟೇ ಆ ಕ್ರಿಯೆಯ ಸಾಧಕ- ಬಾಧಕಗಳ ಬಗೆಗೆ ಬೆಳಕು ಚೆಲ್ಲಲು ಸಾಧ್ಯ. ಈ ನಿಟ್ಟಿನಲ್ಲಿ ವೀಕ್ಷಕರಿಂದ ಬರುವ ಕಾಮೆಂಟುಗಳು ಕಾರ್ಯಕ್ರಮದ ಗುಣಮಟ್ಟವನ್ನು ಹೆಚ್ಚಿಸಲಿಕ್ಕೆ ಅಥವಾ ಅದರ ಓರೆ ಕೋರೆಗಳನ್ನು ತಿದ್ದಿಕೊಳ್ಳಲಿಕ್ಕೆ ಹೆಚ್ಚೆಚ್ಚು ಸಹಕಾರಿಯಾಗಬಲ್ಲದು. ನೋ.ಡೌಟ್ !!
ಆದರೆ ಅದೇ ಸಮಯದಲ್ಲಿ ನಾವು ಒಂದು ವಿಷಯವನ್ನು‌ ಸಹ ಪ್ರಾಕ್ಟಿಕಲ್ಲಾಗಿ ಅರ್ಥ ಮಾಡಿಕೊಳ್ಳಬೇಕು . ರಾಜ್ಯದ‌ ಕೋಟ್ಯಾಂತರ ಜನರ ಅಭಿಪ್ರಾಯ,ಅನಿಸಿಕೆ, ನಿರೀಕ್ಷೆಗಳು ವಿಭಿನ್ನವಾಗಿರುವುದರ ಜೊತೆಗೆ, ಒಬ್ಬರಿಗೆ ಸರಿ‌ ಅನಿಸಿದ್ದು ಮತ್ತೊಬ್ಬರಿಗೆ ತಪ್ಪಾಗಿ ಕಾಣುತ್ತದೆ. ಈ ಸೆಲೆಬ್ರಿಟಿ ಆಯ್ಕೆ ಮಾಡಿದ್ದು ಓಕೆ ಎಂದು ಒಂದು ವರ್ಗ ಹೇಳಿದರೆ, ಅವರದ್ದೇನು ಮಹಾ ಸಾಧನೆಯೆಂದು ಕರೆಸಿದ್ದಾರೆ… ಎನ್ನುವುದು ಮತ್ತೊಂದು ವಲಯದ ವಾದ . ಹೀಗಾಗಿ ಎಲ್ಲಾ ವರ್ಗದವರನ್ನೂ ಎಲ್ಲಾ ಕಾಲಕ್ಕೂ ತೃಪ್ತಿ ಪಡಿಸುವುದು ಕಷ್ಟ.

ಮುಖ್ಯವಾಗಿ ಈ ಕಾರ್ಯಕ್ರಮದ ಬಗೆಗೆ ಕೆಲವರ ಕಾಮೆಂಟುಗಳಲ್ಲಿ ಧ್ವನಿಸುವ ಅಸಹನೆಯ ಭರಾಟೆಯನ್ನು ಗಮನಿಸಿದಾಗ‌ ನನಗನಿಸಿದ್ದು ಇಷ್ಟು …..;

ವೀಕೆಂಡ್ ವಿತ್ ರಮೇಶ್ ಎಂಬುದು ಒಂದು ಟೆಲಿವಿಷನ್ ಕಾರ್ಯಕ್ರಮವಷ್ಟೇ ! ಟೀವಿ ಚಾನೆಲ್‌ರವರು ಅವರ ಕಾರ್ಯಕ್ರಮದ ಬ್ಲೂ ಪ್ರಿಂಟನ್ನು ಈ‌ ಮೊದಲೇ ಹಾಕಿ, ಯಾರನ್ನು ಕರೆಸಬೇಕು, ಹೇಗಿರಬೇಕು, ಇಂಥವರು‌ ಬಂದರೆ ಟಿ.ಆರ್.ಪಿ. ಎಷ್ಟು ಬರಬಹುದು , ಅದರ ಲಾಭ- ನಷ್ಟ ಎಲ್ಲವನ್ನೂ ಅಳೆದು ತೂಗಿ ‌ಲೆಕ್ಕ ಹಾಕಿಯೇ ನಿರ್ಧರಿಸಿರುತ್ತಾರೆ. ಏಕೆಂದರೆ‌ ನೀವೇನೇ ಗುಣಮಟ್ಟದ ಕಾರ್ಯಕ್ರಮ, ಹಾಗೆ ಹೀಗೆ ಎಂದರೂ ಅಂತಿಮವಾಗಿ ಕಮರ್ಷಿಯಲ್ ಥಾಟ್ಸ್ ಗಳೇ ಅಲ್ಲಿನ ಮೂಲ ಬೇರು, ಕಾಂಡ, ರಂಬೆ‌ -ಕೊಂಬೆ ಎಲ್ಲವೂ ! ಏನೆಲ್ಲಾ ವೈಚಾರಿಕ ಚಿಂತನ‌-ಮಂಥನಗಳು ನಡೆದರೂ ಅವರಿಗೆ ಮ್ಯಾಟರ್ ಆಗೋದು ಟಿ.ಆರ್.ಪಿ ಯೇ ! ಹಾಗಂತ ಇತರೆ ಅಂಶಗಳು ಗೌಣ ಎಂದು ಹೇಳಿದಲ್ಲಿ ಅದು ಸಿನಿಕತನವಾದೀತು. ಆದರೆ ಜನಪ್ರಿಯತೆಯ ಅಂಶಗಳನ್ನುಳಿಸಿಕೊಂಡೂ ಗುಣಮಟ್ಟವನ್ನು ಕಾಪಾಡಿಕೊಂಡು‌ ಬರುವುದಿದೆಯಲ್ಲಾ…ಅದು ಸಕತ್ ಚಾಲೆಂಜಿಂಗ್ !

ಈ ಹಿನ್ನೆಲೆಯಲ್ಲಿ, ಎಲ್ಲಕ್ಕಿಂತ ಮಿಗಿಲಾಗಿ ಒಂದು ಅಂಶವನ್ನು ನಾವೆಲ್ಲರೂ ಅರ್ಥಮಾಡಿ ಕೊಳ್ಳಬೇಕು. ವೀಕೆಂಡ್ ವಿತ್ ರಮೇಶ್ ಒಂದು ಸದಭಿರುಚಿಯ ದೂರದರ್ಶನದ ಕಾರ್ಯಕ್ರಮವಷ್ಟೆ. ” ಅಲ್ಲಿನ‌ ಸಾಧಕರ ಕುರ್ಚಿಯಲ್ಲಿ‌ ಕೂತವರಷ್ಟೇ ಸಾಧನೆ ಮಾಡಿದವರು, ಮಿಕ್ಕವರು ಅಲ್ಲ”…. ಎಂಬ ಸಾಮಾನ್ಯ ಭಾವನೆಯಿಂದ ನಾವು ಮೊದಲು ಹೊರಬರಬೇಕು. ನಿಜ ಹೇಳಬೇಕೆಂದರೆ ಆ ಷೋನಲ್ಲಿ ಬಂದು ಹೋದ ಹಲವು ಸಾಧಕರಿಗಿಂತಲೂ ಹೆಚ್ಚಿನ ಪ್ರತಿಭಾವಂತರು, ಅರ್ಹತೆಯುಳ್ಳವರು, ಹೆಚ್ಚಿಗೆ ಸಾಧಿಸಿದವರು ನೂರಾರು ಮಂದಿ‌ ನಮ್ಮ ನಡುವೆ ಇದ್ದಾರೆ. “ಅಲ್ಲಿ ಕೂತವರಷ್ಟೇ ಗ್ರೇಟು ಮಿಕ್ಕವರು ವೇಸ್ಟೊ” ಎಂಬ ಅಸಹನೆಯ ಭಾವ ಬಹಳಷ್ಟು ಮಂದಿಯ ಕಾಮೆಂಟುಗಳಲ್ಲಿ ಅನುರಣಿಸುವುದನ್ನು ನೋಡಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಅಂತಹ ಯೋಚನೆಯ ಕನ್ನಡಕ ಧರಿಸಿ ಈ ಕಾರ್ಯಕ್ರಮವನ್ನು ನೋಡಿದಾಗ ಅಥವಾ ವಿಮರ್ಶಿಸಿದಾಗ ನಮಗೆ ಹೀಗನ್ನಿಸುವುದು ಸಹಜ. ಆದರೆ ಎಲ್ಲಾ ಸಾಧಕರ ಅರ್ಹತೆ, ಯೋಗ್ಯತೆ, ತೂಕ ಹಾಗೂ ಅವರ ಕ್ಷೇತ್ರದ ಮೂಲಕ ಈ ನಾಡಿಗೆ ಅವರು ಸಲ್ಲಿಸಿದ ಸೇವೆಯ ತೃಪ್ತಿ ಹಾಗೂ ಮನ್ನಣೆ ಅವರಿಗೆ ಇದ್ದೇ ಇರುತ್ತದೆ . ಮೇಲಾಗಿ ಅಂಥವರ ಸಾಧನೆಗಳನ್ನು ಮೆರೆಸುವ ಸಮಯವೂ ತಾನಾಗಿಯೇ ಬರುತ್ತದೆ. ಏಕೆಂದರೆ ಹೂವಿನ ಸುವಾಸನೆಯನ್ನು, ಗಂಧದ ಪರಿಮಳವನ್ನು‌ ಹೇಗೆ ಮುಚ್ಚಿಡಲಾಗಲಾರದೋ ಹಾಗೆಯೇ ನೈಜ ಪ್ರತಿಭೆಗಳನ್ನು ಬಚ್ಚಿಡಲೂ ಆಗದು.

ಹೀಗಾಗಿ ಷೋ ನಡೆಸುವವರ ತರ್ಕಗಳ ಆಧಾರದ ಮೇಲೆ ಆಯ್ಕೆಯಾಗುವ ವ್ಯಕ್ತಿಗಳಷ್ಟೇ ಅರ್ಹತೆಯುಳ್ಳವರು ಅಥವಾ ಈ ಕಾರ್ಯಕ್ರಮಕ್ಕೆ ಆಯ್ಕೆಯಾದವರಷ್ಟೇ ನಿಜವಾದ ಸಾಧನೆ ಮಾಡಿರುವವರು ಎಂಬ‌ ಭ್ರಮೆಯಿಂದ ಹೊರ ಬಂದು ಅನಿಸಿಕೆ ಅಭಿಪ್ರಾಯಗಳನ್ನು ಕಾರ್ಯಕ್ರಮದ ಗುಣಮಟ್ಟ ಕುರಿತಂತೆ ಮಾತ್ರ ಹಂಚಿಕೊಂಡಲ್ಲಿ , ಈ ಷೋ ಗೆ ಸಂಬಂಧಿಸಿದಂತಹ ಅನೇಕ ಸಮಸ್ಯೆಗಳಿಗೆ ಉತ್ತರ ತಾನಾಗಿಯೇ ಕಂಡುಕೊಳ್ಳಬಹುದು….!

ಜಸ್ಟ್….ಥಿಂಕ್ !!

** ಮರೆಯುವ ಮುನ್ನ **

ಯಾವುದೇ‌ ಒಂದು‌ ಘಟನೆ ಅಥವಾ ವಸ್ತು‌-ವಿಷಯಗಳು‌ ವಿವಾದಕ್ಕೊಳಗಾಗುವುದರ ಮೂಲ‌ ನಮ್ಮ ನಿಮ್ಮೆಲ್ಲರ ಯೋಚನೆಗಳಲ್ಲೇ ಅಡಗಿದೆ. ನಾವೆಲ್ಲಾ ಮಾಡುವ ಬಹು ಸಹಜವಾದ ಕ್ರಿಯೆಯೆಂದರೆ ಎಲ್ಲ ವಿದ್ಯಮಾನಗಳೂ ನಮ್ಮ ಯೋಚನೆಗಳಂತೆ ಇರಬೇಕು, ನಮ್ಮ ಅನಿಸಿಕೆ‌, ಅಭಿಪ್ರಾಯಗಳೇ ಹೆಚ್ಚು ಸರಿ, ನಾವು ನೋಡುವ ದೃಷ್ಟಿಯೇ ಪರ್ಫ಼ೆಕ್ಟ್, ನಾವಂದುಕೊಂಡಿದ್ದೇ ಕರೆಕ್ಟ್, ಎಂದೆಲ್ಲಾ ಪ್ರತಿಯೊಂದನ್ನೂ ನಮ್ಮ ಮೂಗಿನ ನೇರಕ್ಕೆ‌ ವಿಶ್ಲೇಶಿಸುವ ಗುಣ ಬೈ ಡೀಫ಼ಾಲ್ಟ್ ಬೆಳೆಸಿಕೊಂಡಿರುತ್ತೇವೆ. ಅಲ್ಲದೇ, ಅದೇ ಸಮಯದಲ್ಲಿ ಇತರೆಯವರ ಜಾಗದಲ್ಲಿ ನಿಂತು ಕೆಲ ಕಾಲ ಯೋಚಿಸುವ ತಾಳ್ಮೆಯಾಗಲೀ ಸಮಯವಾಗಲೀ ನಮ್ಮಲ್ಲಿರುವುದಿಲ್ಲ. ಹೀಗಾಗಿಯೇ ಸಮಾಜದಲ್ಲಿಂದು ಅನೇಕ ವೈಚಾರಿಕ ಸಂಘರ್ಷಗಳು, ವರ್ಗಭೇಧಗಳು, ಸೈದ್ಧಾಂತಿಕ ಹೋರಾಟಗಳು, ಅಹಂ‌‌ ಬ್ರಹ್ಮಾಸ್ಮಿಯ ಅಪರಾವತಾರಗಳು, ಶ್ರೇಷ್ಠತೆಯ ವ್ಯಸನಗಳು, ಎಡ- ಬಲಗಳ ಮುಗಿಯದ ವಾದ- ವಿವಾದಗಳು ಮಾನವೀಯತೆಯನ್ನು ಉರಿದು ಮುಕ್ಕಿ ರುದ್ರತಾಂಡವವಾಡುತ್ತಿರುವುದು.

ತೆರೆದ ಕಣ್ಣುಗಳು, ಮಿಡಿವ ಹೃದಯ , ಕ್ಷಣಕಾಲವಾದರೂ ನಾನು -ನನ್ನದು- ನನ್ನಿಂದ… ಎನ್ನುವ ಭಾವದಿಂದ ಆಚೆ ನಿಂತು ನೋಡುವ ವೈಶಾಲ್ಯತೆ‌ಯ ಎದೆಗೂಡು ನಮ್ಮದಾದಲ್ಲಿ ಜಗತ್ತು ಅಷ್ಟು ಕೆಟ್ಟದಾಗಿ ಕಾಣಲಾರದು.

ಥಾಟ್ಸ್…ಅಪಾರ್ಟ್……, ವೀಕೆಂಡ್ ವಿತ್ ರಮೇಶ್ ಅಥವಾ ‌ಅದೇ ರೀತಿಯ ಅನೇಕ ಲೆಕ್ಕಾಚಾರಗಳಿಂದ ಪ್ರಸ್ತುತ ಪಡಿಸಿದ ಮತ್ತಾವುದೇ ಜನಪ್ರಿಯ ಟೀವಿ ಕಾರ್ಯಕ್ರಮಗಳನ್ನು ಮುಕ್ತ ಮನಸಿನಿಂದ , ಕೇವಲ ಅದರ ಪರಿಧಿಯ ವ್ಯಾಪ್ತಿಯೊಳಗಿನ ಪರಿಭಾಷೆಯಲ್ಲೇ ನೋಡುವ, ಅನುಭವಿಸುವ ಹಾಗೂ ಆನಂದಿಸುವ ಮನಸ್ಥಿತಿಯಿರಬೇಕೆ ವಿನಃ ಅದರಿಂದಾಚೆ ಅದನ್ನು ಕೇವಲ ನಮ್ಮದೇ ಆದ ದೃಷ್ಟಿಕೋನದಿಂದ‌, ನಮ್ಮ ಸೈದ್ಧಾಂತಿಕ‌ ಅಭಿರುಚಿಗಳ ನೇರಕ್ಕೆ, ತರ್ಕಗಳ ತಾಳಕ್ಕೆ ವಿಮರ್ಶಿಸುವ , ವಿಶ್ಲೇಸಿಸುವ, ತರ್ಕಿಸುವ ತವಕವಾಗಲೀ ಅಥವಾ ವೈಯಕ್ತಿಕವಾಗಿ , ಕುಹಕವಾಗಿ ಚರ್ಚಿಸುವ ಭಾವುಕವಾಗಲೀ ಯಾರಿಗೂ, ಎಂದಿಗೂ ಸಂಪೂರ್ಣ ತೃಪ್ತಿ ತಂದುಕೊಡದು. ಸಾಮಾಜಿಕ ಜಾಲತಾಣಗಳಲ್ಲಿ ಈಗ ಆಗುತ್ತಿರುವುದು ಇದೇನೇ.!

# ಲಾಸ್ಟ್ ಪಂಚ್ #

ಯಾವುದೇ ವಿಷಯದ ಮೇಲೆ ನಮ್ಮ ಯಾವುದೇ ತರಹದ ಅನಿಸಿಕೆ, ಅಭಿಪ್ರಾಯ, ಟೀಕೆ, ಟಿಪ್ಪಣಿ‌, ವಿಮರ್ಶೆ, ಸಲಹೆ, ಸೂಚನೆ…ಇತ್ಯಾದಿಗಳು ಅದರ ಗುಣಮಟ್ಟ ಹೆಚ್ಚಿಸುವಂತಹ ಟಾನಿಕ್ ಗಳಂತಿರಬೇಕೇ ವಿನಃ, ಅದನ್ನೇ ಮುಚ್ಚುವಂತಹ ಟ್ರೋಲ್ ಗಳಾಗಬಾರದು.
ಪ್ರೀತಿಯಿಂದ…..


  • ಹಿರಿಯೂರು ಪ್ರಕಾಶ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW