ಅನೇಕ ಜನ ಇತ್ತೀಚೆಗೆ ಉಪವಾಸ ಪ್ರಾರಂಭಿಸಿದ್ದಾರೆ. ಉಪವಾಸ ಮಾಡುವುದು ಹೊಸದೇನೂ ಅಲ್ಲ. ಆದರೆ ಈ ಆಧುನಿಕ ಕಾಲದಲ್ಲಿ ಇದೆಷ್ಟು ಪ್ರಸ್ತುತ ಎನ್ನುವುದು ಬಂದೊದಗಿದ ಪ್ರಶ್ನೆ. ಇದರ ಹಿಂದಿರುವ ವಿಜ್ಞಾನವೇನು? ವೈದ್ಯರು ಏನು ಹೇಳುತ್ತಾರೆ? ಇದರಿಂದ ಲಾಭ ಮತ್ತು ನಷ್ಟಗಳೇನು? ಎಂಬೆಲ್ಲಾ ಪ್ರಶ್ನೆಗಳಿರಬಹುದು. ಹಾಗಿದ್ದರೆ ತಪ್ಪದೆ ಮುಂದೆ ಓದಿ – ಡಾ.ಎನ್.ಬಿ.ಶ್ರೀಧರ…
ಉಪವಾಸದ ಹಿಂದೆ ಇರುವ ಆರೋಗ್ಯಪೂರಕ ಅಂಶಗಳನ್ನು ತಿಳಿಯಲು ಪ್ರಕೃತಿಯತ್ತ ಮುಖ ಮಾಡಿದರೆ ಬೇಕಾದಷ್ಟು ಮಾಹಿತಿ ಸಿಗುತ್ತದೆ.ಉದಾಹರಣೆಗೆ ಹಿಮಕರಡಿಗಳು ಸುಮಾರು ಮೂರು ತಿಂಗಳುಗಳ ಕಾಲ ಏನನ್ನೂ ತಿನ್ನದೆ ಹಿಮಪ್ರದೇಶಗಳಲ್ಲಿ ಹಿಮದಲ್ಲಿನ ಅಡಗುತಾಣಗಳಲ್ಲಿ ಆರೋಗ್ಯದಿಂದ ಬದುಕಿ ಹಿಮಕರಗುವ ಸಮಯಕ್ಕೆ ಕಾಯುತ್ತವೆ.ಅಷ್ಟು ದೀರ್ಘ ಉಪವಾಸದ ಸಮಯಕ್ಕೆ ದೇಹಕ್ಕೆ ಬೇಕಾದ ಇಂಧನಕ್ಕಾಗಿ ಕೊಬ್ಬನ್ನು ಶೇಖರಣೆ ಮಾಡಿಟ್ಟುಕೊಳ್ಳಲು ಕೆಜಿ ಗಟ್ಟಲೆ ಸಾಲ್ಮನ್ ಮೀನುಗಳನ್ನು ದಿನಾ ತಿನ್ನುತ್ತವೆ.ಹಿಮ ಪೂರ್ತಿ ಮಂಜುಗಡ್ಡೆ ಆದಮೇಲೆ ಏನೂ ತಿನ್ನಲು ಸಿಗುವುದಿಲ್ಲ ಅನ್ನುವ ಕಾರಣಕ್ಕೆ ಈ ತಯಾರಿ.ಅದೇ ರೀತಿ ಪ್ರಾಣಿ ಪಕ್ಷಿಗಳ ಲೋಕದಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.ಕಾಡಿನಲ್ಲಿ ಇರುವ ಕ್ರೂರ ಮೃಗಗಳಿಂದ ಹಿಡಿದು ನಾವು ಮನೆಯಲ್ಲಿ ಸಾಕುವ ಬೆಕ್ಕು ನಾಯಿಗಳಿಗೂ ಕಾಯಿಲೆ ಬಂದಾಗ ಆಹಾರ ತ್ಯಜಿಸುವುದರ ಹಿಂದೆ ತುಂಬಾ ಜ್ಞಾನ,ತಿಳುವಳಿಕೆ ಇದೆ.ನೀವೇ ಗಮನಿಸಿ ಮನೆಯಲ್ಲಿ ಸಾಕಿದ ಬೆಕ್ಕು ನಾಯಿಗಳಿಗೆ ಜ್ವರ ಬಂದರೆ ಎಷ್ಟೇ ಪ್ರೀತಿಯಿಂದ ಆಹಾರ ಹಾಕಿದರೂ ತಿನ್ನದೆ ಮೂಲೆ ಸೇರಿ ಬಿಡುತ್ತವೆ.ಮನೆಯಲ್ಲಿ ಗಾರ್ಡನ್ ಇದ್ದರೆ ಹೋಗಿ ಒಂದು ವಿಧದ ಹುಲ್ಲನ್ನು ಮಾತ್ರ ತಿಂದು ಮಲಗುತ್ತವೆ! ಇದನ್ನು ಅವುಗಳ ತಂದೆ ತಾಯಂದಿರು ಕಲಿಸಿಕೊಟ್ಟಿದ್ದು ಅಲ್ಲ.ವಂಶಾವಳಿಯಿಂದ ಬಂದ ಬುದ್ಧಿವಂತಿಕೆ.ನಮಗಾದರೂ ಅಷ್ಟೇ,ಒಂದು ಫ್ಲೂ ಜ್ವರ ಬಂದರೆ ಊಟ ಸೇರದೆ ಇರುವಂತೆ ಮಾಡುವುದು ಪ್ರಕೃತಿ ಮತ್ತು ಸೃಷ್ಟಿಯ ನಿಯಮಗಳೇ.ಸೇರದೆ ಇದ್ದಾಗ ಒತ್ತಾಯ ಪೂರ್ವಕ ಆಹಾರ ತಿಂದರೆ ವಾಂತಿಯೋ ಬೇಧಿಯೋ ಆಗುವುದು ಎಚ್ಚರಿಕೆಯ ಘಂಟೆ.
ಉಪವಾಸ ಅಂದರೆ ಏನು ? :
ಆರೋಗ್ಯ,ಧಾರ್ಮಿಕ,ನೈತಿಕ ಉದ್ದೇಶಗಳಿಗಾಗಿ ಸ್ವಇಚ್ಛೆ ಇಂದ ಆಹಾರ ಮತ್ತು ಅಥವಾ ಪಾನೀಯಗಳಿಂದ ದೂರವಿರುವುದು.
ಉಪವಾಸಗಳಲ್ಲಿ ಸಾಮಾನ್ಯವಾದ ವಿಧಗಳು:
೧.ಸಂಪೂರ್ಣ
೨.ಭಾಗಷಃ
೩.ದೀರ್ಘಾವಧಿ
೪.ಅಲ್ಪಾವಧಿ
೫.ಮಧ್ಯಂತರ
ಚರಿತ್ರೆಯಲ್ಲಿ ಹುಡುಕಾಟ ಮಾಡಿದರೆ ತುಂಬಾ ಕುತೂಹಲಕಾರೀ ವಿಷಯಗಳು ಉಪವಾಸದ ಬಗ್ಗೆ ಸಿಗುತ್ತವೆ.
ವೈದ್ಯಕೀಯ ಜಗತ್ತಿನಲ್ಲಿ ಉಪವಾಸ :ಗ್ರೀಕ್ ವೈದ್ಯ ಹಿಪ್ಪೋಕ್ರೆಟಿಸ್ ಕ್ರಿಸ್ತ ಪೂರ್ವ ಐದನೇ ಶತಮಾನದಲ್ಲಿಯೇ ಕೆಲವು ರೋಗಲಕ್ಷಣಗಳಿಗೆ ಶಿಫಾರಸು ಮಾಡಿದ್ದರು. ಅವರೂ ಸಹಾ ಉಪವಾಸ ಮಾಡುತ್ತಿದ್ದರು.ಅಧುನಿಕ ಪದ್ದತಿಯಲ್ಲಿ ಇನ್ನೂ ಸಲಹೆ ರೂಪದಲ್ಲಿ ಇದು ಇಲ್ಲ.ಹತ್ತೊಂಭತ್ತನೆ ಶತಮಾನದಿಂದಲೂ ಪ್ರಯೋಗಗಳು ನಡೆದರೂ ಇಪ್ಪತ್ತನೆ ಶತಮಾನದಲ್ಲಿ ಬೊಜ್ಜಿನ ಕಾಯಿಲೆಯ ಅವಾಂತರಗಳಿಂದ ಮತ್ತೆ ಸಂಶೋಧನೆಗಳು ಚುರುಕಾದವು.
ಫೋಟೋ ಕೃಪೆ : google
ಧರ್ಮ/ನಂಬಿಕೆ/ದೇವರು ಮತ್ತು ಉಪವಾಸ :
ಪ್ರಾಚೀನ ನಾಗರಿಕತೆ,ಬುಡಕಟ್ಟು ಜನಾಂಗ, ಧರ್ಮಗಳಲ್ಲಿ ಎರಡು ಸಾವಿರ ವರ್ಷಗಳಿಂದನೂ ಉಪವಾಸದ ಕ್ರಮ ಮತ್ತು ನೀತಿ ರೀತಿಗಳಲ್ಲಿ ಉಲ್ಲೇಖಗಳಿವೆ.
ಬೌದ್ಧ ಮತ್ತು ಜೈನ ಸಂಪ್ರದಾಯದಲ್ಲಿ,ಹಿಂದೂ ಸಾಧುಗಳು ಮಾಡುತ್ತಿದ್ದ ಉಪವಾಸ ಕ್ರಮ ಇಂದಿಗೂ ಇದೆ.ಜುಡಾಯಿಸಮ್ ನಲ್ಲಿ ತುಂಬಾ ಕಠಿಣ ಉಪವಾಸ ಕ್ರಮಗಳು ಇವೆ.ಕ್ರಿಸ್ಚಿಯನ್ ಮತದಲ್ಲಿ ಈಸ್ಟರ್ ಸಮಯದ ಉಪವಾಸಕ್ಕೆ ತುಂಬಾ ಮಹತ್ವ ಇದೆ.
ಇಸ್ಲಾಂ ಧರ್ಮದಲ್ಲಿ ರಂಜಾನ್ ಸಮಯದ ಒಂದು ತಿಂಗಳ ಉಪವಾಸ ಕ್ರಮವಲ್ಲದೆ ಇನ್ನೂ ಏಳೆಂಟು ರೀತಿಯ ಉಪವಾಸ ರೀತಿಗಳಿವೆ. ಜೊರಾಸ್ತ್ರಿಯನ್ (ಪಾರ್ಸಿ) ಧರ್ಮದಲ್ಲಿ ಉಪವಾಸ ನಿಷೇಧ ಇದ್ದರೆ ಪ್ರೊಟೆಸ್ಟೆಂಟ್ ಚರ್ಚ್ ಗಳು ಉಪವಾಸವನ್ನು ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟು ಬಿಡುತ್ತವೆ.
ಪ್ರತಿಭಟನೆಯ ಉಪವಾಸ :
ಮಹಾತ್ಮಾ ಗಾಂಧಿ ೧೮ ಬಾರಿ ಉಪವಾಸ ಮಾಡಿರುವುದು ಭಾರತೀಯರಿಗೆ ಒಂದು ದೊಡ್ಡ ಬಲ. ಗಾಂಧೀಜಿ ಮಾಡಿದ ಅತಿ ದೀರ್ಘವಾದ ಉಪವಾಸ ೨೧ ದಿನಗಳ ಅವಧಿ,೧೯೪೩ರಲ್ಲಿ. ಡಿಕ್ ಗ್ರೆಗರಿ ಅನ್ನುವ ಹಾಸ್ಯಗಾರ ಅಮೆರಿಕಾದ ನೀಗ್ರೋ ೧೯೬೭ರಲ್ಲಿ ೪೦ ದಿನ ಉಪವಾಸ ಮಾಡಿ ನೀರು ಮಾತ್ರ ಸೇವಿಸಿದರು.ಆ ಸಮಯದಲ್ಲಿ ಅವರು ದೇಶದಾದ್ಯಂತ ಸಂಚರಿಸಿ ಮೂಲಭೂತ ಹಕ್ಕುಗಳ ಉಲ್ಲಂಘನೆ ಮತ್ತು ವಿಯೆಟ್ನಾಂ ಯುದ್ಧದ ವಿರುದ್ಧ 67 ಭಾಷಣಗಳನ್ನು ಮಾಡಿದರು.ಮತ್ತೆ ೧೯೮೧ ರಲ್ಲಿ ೭೦ ದಿನಗಳ ಉಪವಾಸ ಮಾಡಿದರು.ಅವರು ೮೪ ವರ್ಷ ಬದುಕಿದರು.
1981ರಲ್ಲಿ 10 ಐರಿಶ್ ರಾಷ್ಟ್ರೀಯತಾ ವಾದಿಗಳು ಬೆಲ್ಫಾಸ್ಟ್ ಜೈಲಿನಲ್ಲಿ ಉಪವಾಸ ಮುಷ್ಕರದಿಂದ ಸಾವನ್ನು ಅನುಭವಿಸಬೇಕಾಯ್ತು. ಅತೀ ದೀರ್ಘ ಉಪವಾಸ: ಅಂದರೆ ೩೮೨ ದಿನಗಳ ವರೆಗೆ ಸ್ಕಾಟ್ಲ್ಯಾಂಡ್ ನ ಆಂಗಸ್ ಬರ್ಬೇರಿ ಅವರು ಮಾಡಿದ್ದು ಇಂದಿಗೂ ವಿಶ್ವದಾಖಲೆ.ಆ ಸಮಯದಲ್ಲಿ ಅವರು 125 ಕೆಜಿ ತೂಕ ಕಳೆದುಕೊಂಡರು.
ಫೋಟೋ ಕೃಪೆ : google
ಉಪವಾಸದ ಪ್ರಯೋಜನಗಳು :
• ತೂಕ ಕಡಿಮೆ ಮಾಡಿಕೊಳ್ಳುವುದು.
• ರಕ್ತದೊತ್ತಡ ಕಡಿಮೆ ಮಾಡುವುದು.
• ಉರಿಯೂತದ ತೀವ್ರತೆ ಕಡಿಮೆ.
• ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಆಗುವ ಸಾಧ್ಯತೆ.
• ಮೆದುಳಿನ ಕಾರ್ಯಕ್ಷಮತೆ ಜಾಸ್ತಿ ಆಗುವ ಸಾಧ್ಯತೆ.
• ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯ ಮೇಲೆ,ಕೀಮೋಥೆರಪಿಯ ಕಾರ್ಯಕ್ಷಮತೆ ಬಗ್ಗೆ ಧನಾತ್ಮಕ ಫಲಿತಾಂಶಗಳು ಬರುತ್ತಿವೆ.
• ಇನ್ಸುಲಿನ್ ಪ್ರತಿರೋಧ ಮತ್ತು ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
• ರಾತ್ರಿ ಗುಣಮಟ್ಟದ ನಿದ್ರೆ,ಹಗಲು ಚುರುಕಾಗಿರಲು ಸಹಾಯ ಮಾಡುತ್ತದೆ.
• ಅಯುಷ್ಯಕ್ಕೆ ವರ್ಷಗಳ ಸೇರ್ಪಡೆ, ಬಹಳಷ್ಟು ವರ್ಷ ಉಪವಾಸ ಮಾಡಿ ಶಿಸ್ತಿನ ಬದುಕಿನಿಂದ ದೀರ್ಘಾಯುಷ್ಯ ಹೊಂದುವುದನ್ನು ಕಣ್ಣಾರೆ ನೋಡುತ್ತಿದ್ದೇವೆ.
• ರೋಗ ನಿರೋಧಕ ವ್ಯವಸ್ಥೆ ಉತ್ತಮಗೊಳ್ಳುವ ಸಾಧ್ಯತೆ.
ಕರುಳಿನ ಪ್ರೊಬಯೋಟಿಕ್,ಸ್ನೇಹಪರ ಬ್ಯಾಕ್ಟೀರಿಯಾಗಳ ಅರೋಗ್ಯವರ್ಧನೆಯಿಂದ ಕರುಳಿನ ಉರಿ ಊತದಂತಹ ಕಾಯಿಲೆಯ ಚಿಕಿತ್ಸೆಯಲ್ಲಿ ಉಪವಾಸದ ಮಹತ್ವದ ಬಗ್ಗೆ ಅರಿವು ಸಿಗುತ್ತಿದೆ.
ಮಧ್ಯಂತರ ಉಪವಾಸ :ಕಳೆದ ಎರಡು ವರ್ಷಗಳಿಂದ ಇಡೀ ಪ್ರಪಂಚದಲ್ಲಿ ಸುದ್ದಿ ಮಾಡುತ್ತ ಸೆಲೆಬ್ರಿಟಿಗಳಿಂದಾಗಿ ಅತ್ಯಂತ ಜನಪ್ರಿಯವಾಗುತ್ತಿರುವ ಮತ್ತು ಬಹಳ ಮಂದಿ ಮಾಡಬಹುದಾದ ಉಪವಾಸ ಪದ್ಧತಿ ಅಂದರೆ ಮಧ್ಯಂತರ ಉಪವಾಸ.
ದೀರ್ಘ ಕಾಲದ ಹಸಿವು ಅನುಭವಿಸದೆ ಕ್ಯಾಲೋರಿ ಅಂಶವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುವ ಪದ್ಧತಿ.ಒಂದು ನಿರ್ಧಿಷ್ಟಾವಧಿ ಆಹಾರ ತಿನ್ನುವ ನಿರ್ಬಂಧ ಅಭ್ಯಾಸ ಆದ ಹಾಗೆ ಜಂಕ್ ಅಹಾರದತ್ತ ಒಲವೂ ಕಡಿಮೆ ಆಗುತ್ತದೆ. ಮಧ್ಯಂತರ ಉಪವಾಸ ಮಾಡಬೇಕಾದ ಸಮಯದ ಬಹು ಭಾಗ ರಾತ್ರಿಯೇ ಆಗಿರುವುದರಿಂದ ತಿನ್ನುವ ಹಂಬಲ,ಚಪಲಕ್ಕೆ ಕಡಿವಾಣ ಸುಲಭ.
ರಾತ್ರಿ ಮಲಗುವ ತನಕವೂ ತಿನ್ನುವ ಅಭ್ಯಾಸದವರಿಗೆ ಇದನ್ನು ಅಭ್ಯಾಸ ಮಾಡಲು ದೀರ್ಘ ಸಮಯ ಬೇಕಾಗಬಹುದು.
ಮಧ್ಯಂತರ ಉಪವಾಸ
ಕ್ರಮ 1 :
• 16/8 ವಿಧಾನ :ಬೆಳಿಗ್ಗೆ 10 ರಿಂದ ಸಂಜೆ 6ವರೆಗೆ ತಿನ್ನುವುದು.16 ಘಂಟೆ ಉಪವಾಸ,8 ಘಂಟೆ ಕಾಲಾವಧಿಯಲ್ಲಿ ಮಾತ್ರ ತಿನ್ನುವುದು.
• 14/10 ವಿಧಾನ : ಬೆಳಿಗ್ಗೆ 9 ರಿಂದ ಸಂಜೆ 7ರವರೆಗೆ ತಿನ್ನುವುದು. 14 ಘಂಟೆ ಉಪವಾಸ,10 ಘಂಟೆ ಕಾಲಾವಧಿಯಲ್ಲಿ ತಿನ್ನುವುದು.
•ಈ ವಿಧಾನಗಳನ್ನು ಬಯಸಿದಷ್ಟು ಬಾರಿ ಪುನರಾವರ್ತಿಸಬಹುದು.
•ವಾರಕ್ಕೆ ಒಮ್ಮೆಯೋ ಅಥವಾ ಎರಡು ಬಾರಿ ಮಾಡಬಹುದು.
ಕ್ರಮ 2:
5:2 ವಿಧಾನ ಅಂದರೆ ವಾರದಲ್ಲಿ 5 ದಿನ ಮಾಮೂಲಿ ಅರೋಗ್ಯ ಪೂರಕ ಆಹಾರ ತಿನ್ನುವುದು,ಇನ್ನೆರಡು ದಿನ.ಒಟ್ಟು ೫೦೦ ಕ್ಯಾಲೋರಿಗಳಿಗೆ ಸೀಮಿತ ಆಹಾರ, ಒಂದು ದಿನ ೨೦೦ ಕ್ಯಾಲೋರಿ,ಇನ್ನೊಂದು ದಿನ ೩೦೦ ಕ್ಯಾಲೋರಿ ಮಾತ್ರ ಆಹಾರ. ಉಪವಾಸದ ನೆಪಕ್ಕೆ ಉಳಿದೈದು ದಿನ ಬೇಕಾ ಬಿಟ್ಟಿ ತಿನ್ನುವಂತಿಲ್ಲ.ಉಪವಾಸದ ದಿನದಲ್ಲಿ ಝೀರೋ ಕ್ಯಾಲೋರಿಯ ನಾರಿನಂಶ ಮತ್ತು ಪ್ರೋಟೀನ್ ಜಾಸ್ತಿ ಇರುವ ಆಹಾರ ಸೇವಿಸಿದರೆ ಹೊಟ್ಟೆ ತುಂಬಿದ ಅನುಭವವೂ ಇರುತ್ತದೆ.ಒಟ್ಟು ಇಡೀ ದಿನದ ಕ್ಯಾಲೋರಿ 2೦೦ ಅಥವಾ 300ಕ್ಕೆ ಸೀಮಿತ.ವಾರದ ಯಾವುದೇ ಎರಡು ದಿನಗಳನ್ನು ಆಯ್ಕೆ ಮಾಡಬಹುದು.ಆದರೆ ಎರಡು ಉಪವಾಸದ ದಿನಗಳ ಮಧ್ಯೆ ಒಂದು ಉಪವಾಸ ಇಲ್ಲದ ದಿನ ಇರಬೇಕು.
ಕ್ರಮ 3:
ದಿನ ಬಿಟ್ಟು ದಿನ ಉಪವಾಸ.
• ಉಪವಾಸ ಇರುವ ದಿನ ಒಂದು ಕ್ರಮದಲ್ಲಿ ಶೂನ್ಯ ಕ್ಯಾಲೋರಿ ಅಂದರೆ ನಿಟ್ಟು ಪವಾಸ ಮಾಡುವುದು ಅಥವಾ ಇಡೀ ದಿನ ೫೦೦ ಕ್ಯಾಲೋರಿಗಳ ಆಹಾರ ತೆಗೆದುಕೊಳ್ಳುವುದು.
ಕ್ರಮ 4 :
24 ಘಂಟೆಗಳ ಕಾಲ ಪೂರ್ತಿ ಉಪವಾಸ
•ಬೆಳಗಿನ ಉಪಹಾರದಿಂದ ಮಾರನೆ ದಿನ ಬೆಳಗಿನ ಉಪಹಾರದ ವರೆಗೆ ಉಪವಾಸ.
•ಅಥವಾ ಮಧ್ಯಾನ್ಹ ಊಟದಿಂದ ಮಾರನೆ ದಿನ ಮಧ್ಯಾನ್ಹ ಊಟದವರೆಗೆ ಉಪವಾಸ.
•ತುಂಬಾ ಕಠಿಣವಾದದ್ದು.
•ಅಡ್ಡ ಪರಿಣಾಮಗಳು : ತುಂಬಾ ಆಯಾಸ,ತಲೆನೋವು,ತುಂಬಾ ಹಸಿವು,ನಿಶ್ಯಕ್ತಿ ಮಾನಸಿಕ ಕಿರಿಕಿರಿ
ಉಪವಾಸದ ಸುರಕ್ಷತೆ ಮತ್ತು ಅಗತ್ಯತೆ :
•ಬೆಳವಣಿಗೆಯ ಹಂತ ಆಗಿರುವುದರಿಂದ ಹದಿಹರೆಯದವರಿಗೆ,೧೮ ವಯಸ್ಸಿಗಿಂತ ಕಡಿಮೆ ವಯಸ್ಸಿನವರಿಗೆ ಅವಶ್ಯಕತೆ ಇಲ್ಲ.
•ಗರ್ಭಿಣಿಯರು ಮತ್ತು ಮಗುವಿಗೆ ಹಾಲುಣಿಸುವವರು ಮಾಡಲು ಸಲಹೆ ಇಲ್ಲ.
•ದೀರ್ಘ ಕಾಲದ ಮಧುಮೇಹ ಮತ್ತು ಬಹಳ ಔಷಧಿ ಇರುವವರು,ಔಷಧಿಗೆ ಆಹಾರದ ಅವಶ್ಯಕತೆ ಬೇಕೇ ಬೇಕು ಎನ್ನುವವರಿಗೆ ಸಾಧ್ಯವಿಲ್ಲ.
•ತೀವ್ರ ತರದ ಅಂಗಾಂಗ ಕಾಯಿಲೆಗಳಿರುವವರು ಅಂದರೆ ಹೃದಯ ವೈಫಲ್ಯ,ಕಿಡ್ನಿ ಸಮಸ್ಯೆ,ಲಿವರ್ ತೊಂದರೆ ಇರುವವರಿಗೆ ಕಷ್ಟ, ವೈದ್ಯಕೀಯ ಸಲಹೆ ಇಲ್ಲದೆ ಮಾಡುವುದು ಸುರಕ್ಷಿತ ಅಲ್ಲ.
•ತಿನ್ನುವ ಕಾಯಿಲೆಯ ಮಾನಸಿಕ ಅಸ್ವಸ್ಥತೆ ಇರುವವರು ಮಾಡಬಾರದು.
•ದಿನನಿತ್ಯದ ಚಟುವಟಿಕೆಗಳಿಗೆ ತುಂಬಾ ತೊಂದರೆ ಮಾಡುವ ಅಡ್ಡ ಪರಿಣಾಮಗಳು ಕಾಲ ಕ್ರಮೇಣವೂ ಹೊಂದಾಣಿಕೆಯೇ ಆಗದೆ ಇದ್ದರೆ ನಿಲ್ಲಿಸುವುದು ಒಳಿತು.
ಫೋಟೋ ಕೃಪೆ : google
ಪ್ರಾರಂಭಿಸುವ ಮೊದಲು ಕೆಲವು ಸೂಚನೆ:
• ತಿನ್ನುವ ಆಹಾರದ ಪ್ರಮಾಣ ಕಡಿಮೆ ಮಾದುವುದಲ್ಲದೆ ಆಹಾರದ ಮಧ್ಯೆ ಮೆಲ್ಲುವ ಅಭ್ಯಾಸ ಬಿಡಬೇಕು.
• ಶರ್ಕರ ಪಿಷ್ಟ ಆಹಾರದ ಹಂಬಲ ಇಂದ ಆಚೆ ಬರಲು ಶರ್ಕರ ಪಿಷ್ಟದ ಪ್ರಮಾಣ ಮತ್ತು ಗುಣಮಟ್ಟದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.
• ನೇರವಾಗಿ 16 ಘಂಟೆಗಳ ಉಪವಾಸದ ಬದಲು 10-12 ಘಂಟೆಗಳ ಕಾಲಾವಧಿಯಲ್ಲಿ ಆಹಾರ ತ್ಯಜಿಸುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಉಪವಾಸ ಸಮಯ ಮುಗಿದ ನಂತರ ಪ್ರತಿಕಾರದ,ಸ್ವೇಚ್ಚೆಯ ಆಹಾರ ಕ್ರಮ ತಪ್ಪು.
• ಉಪವಾಸದ ಸಮಯದಲ್ಲಿ ಸಾಕಷ್ಟು ನೀರು ಕುಡಿಯಬೇಕು.ಕಪ್ಪು ಚಹಾ, ಕಪ್ಪು ಕಾಫಿ, ಹಸಿರು ಚಹಾ, ಹರ್ಬಲ್ ಟೀ, ಕಷಾಯಗಳಲ್ಲಿ ಕ್ಯಾಲೋರಿ ಇರಕೂಡದು. (ಝೀರೋ ಕ್ಯಾಲೋರಿ ಆಗಿರಬೇಕು).
• ಉಪವಾಸ ಮುಗಿದ ನಂತರ ಉಪಯೋಗಿಸುವ ಆಹಾರದಲ್ಲಿ ಸಂಕೀರ್ಣ ಶರ್ಕರಪಿಷ್ಟ ಮತ್ತು ಮಾಂಸಾಹಾರಿಗಳು ಕೊಬ್ಬಿಲ್ಲದ ಮಾಂಸ ಬಳಕೆ ಮಾಡುವುದು ಸೂಕ್ತ,ಉಪವಾಸದಿಂದ ವಿಶ್ರಾಂತಿ ಮಾಡಿದ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಮತ್ತೆ ಚುರುಕಾಗಲು ಸುಲಭ ಸಾಧ್ಯ.
• ಬೇಕಾ ಬಿಟ್ಟಿತಿನ್ನುವುದು ಹೇಗೆ ಅಭ್ಯಾಸ ಸುಲಭವಾಗಿ ಆಗುತ್ತದೋ ಉಪವಾಸ ಮಾಡುವುದಕ್ಕೆ ತಿನ್ನುವುದನ್ನು ನಿಯಂತ್ರಿಸುವುದೂ ಅಭ್ಯಾಸ ಆಗಬೇಕು.
• ವೈದ್ಯಕೀಯ ಸಲಹೆ, ಮಾರ್ಗದರ್ಶನ, ಡಯಟೀಶಿಯನ್ ಸಲಹೆ ತೆಗೆದುಕೊಳ್ಳುವುದು ತುಂಬಾ ಕ್ಷೇಮ.ಕೆಲವೊಂದು ಅನಾರೋಗ್ಯದ ಪರಿಸ್ಥಿತಿ ಇದ್ದಾಗ ಈ ಮಾರ್ಗದರ್ಶನ ಇಲ್ಲದೆ ಮಾಡುವುದು ಸೂಕ್ತ ಅಲ್ಲ.
ಒಂದೆರಡು ದಶಕಗಳಿಂದ ಪ್ರಾಣಿಗಳ ಮೇಲೆ,ಪ್ರಯೋಗಾಲಯದಲ್ಲಿ,ಮಾನವ ಅಭ್ಯರ್ಥಿಗಳ ಮೇಲೆ ಸಂಶೋಧನೆ ನಡೆಯುತ್ತಿದ್ದರೂ ಕೆಲವೊಂದು
ಉತ್ತರವಿಲ್ಲದ ಪ್ರಶ್ನೆಗಳು ಉಳಿದಿವೆ.
• ಮಧ್ಯಂತರ ಉಪವಾಸದಿಂದ ಪ್ರಯೋಜನವನ್ನು ಕಾಣಲು ಎಷ್ಟು ಬಾರಿ,ಎಷ್ಟು ಸಮಯದವರೆಗೆ ಮಾಡಬೇಕು?
•ಎಲ್ಲರಿಗೂ ಸುರಕ್ಷಿತವೋ ?
•ದೀರ್ಘಕಾಲದ ಪರಿಣಾಮಗಳೇನು ಮತ್ತು ಅಡ್ಡ ಪರಿಣಾಮಗಳೇನು ?
•ಕೂಡು ಕುಟುಂಬದಲ್ಲಿ ಒಬ್ಬಿಬ್ಬರ ಆಹಾರ ನಡವಳಿಕೆ ಅದರಲ್ಲೂ ಪೋಷಕರು ಆಹಾರದಿಂದ ದೂರ ಇರುವುದು,ಊಟ ಬಿಡುವುದನ್ನು ಗಮನಿಸುವ ಬೆಳೆಯುವ ಮಕ್ಕಳ ಮೇಲೆ ಏನು ಪರಿಣಾಮ ಮಾಡಬಹುದು ?
•ಪ್ರಾಣಿಗಳ ಮೇಲೆ ನಡೆದ,ನಡೆಯುತ್ತಿರುವ ಪ್ರಯೋಗಗಳಿಂದ ಸಿಕ್ಕ ಮಾಹಿತಿ ಮನುಷ್ಯನಿಗೆ ಎಷ್ಟು ಅನ್ವಯ ?
•ಮಧ್ಯಂತರ ಉಪವಾಸ ಮತ್ತು ಕ್ಯಾಲೋರಿ ನಿರ್ಬಂಧಪಥ್ಯಗಳ ಪ್ರಯೋಜನಗಳಲ್ಲಿ ಬಹಳ ವ್ಯತ್ಯಾಸ ಕಾಣಲಿಲ್ಲ.
•ಮನುಷ್ಯನ ಮೇಲೆ ನಡೆದ,ನಡೆಯುತ್ತಿರುವ ಪ್ರಯೋಗಗಳು ದೀರ್ಘಾವಧಿ ಅಲ್ಲದೆ ಇರುವುದು ಮತ್ತು ಸಣ್ಣ ಸಂಖ್ಯೆಯ ಫಲಾನುಭವಿಗಳಾದುದರಿಂದ ನಿಖರ ಮಾಹಿತಿಗೆ ಇನ್ನೂ ಸಮಯ ಬೇಕು.
•ಕೇವಲ ತೂಕ ಇಳಿಸುವ ಉದ್ದೇಶಕ್ಕೆ ಮಧ್ಯಂತರ ಉಪವಾಸದಿಂದ ವಿಶೇಷ ಉಪಯೋಗ ಇಲ್ಲ ಅನ್ನುವುದು ಸದ್ಯದ ಮಾಹಿತಿ.
(ಆಧಾರ: ಡಾ:ರತ್ನಾಕರ್, ವೈದ್ಯಕೀಯ ತಜ್ಞರು, ಶಿವಮೊಗ್ಗ ಇವರು ಪ್ರತಿಲಿಪಿ ಕನ್ನಡದಲ್ಲಿ ಬರೆದ ಲೇಖನ)
- ಡಾ.ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ