ಭಾವನೆಗಳನ್ನು ಧ್ವಂಸಗೊಳಿಸಲಾಗದು!

ಕಲ್ಲುಗಳನ್ನು ಕೆಡವಬಹುದು; ಭಾವನೆಗಳನ್ನಲ್ಲ … ಕವಿ ಧನಪಾಲ‌ ನಾಗರಾಜಪ್ಪ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ತೆಲುಗು ಮೂಲ : ರಾಜಾಬಾಬು ಕಂಚರ್ಲ

ಒಂದು ಪ್ರತಿಮೆಯನ್ನು ಕೆಡವಿದಷ್ಟು ಮಾತ್ರಕ್ಕೆ
ಇತಿಹಾಸ ಮಂಡಿಯೂರುವುದಿಲ್ಲ
ಒಂದು ಕಲ್ಲಿನ ಶರೀರವನ್ನು ಒಡೆದಷ್ಟು ಮಾತ್ರಕ್ಕೆ
ಆಲೋಚನೆಗಳ ಉಸಿರು ನಿಲ್ಲುವುದಿಲ್ಲ

ಕತ್ತಲೆಯ ಕೈಯಲ್ಲಿ ಸುತ್ತಿಗೆಯಿರಬಹುದು
ಆದರೆ…
ಬೆಳಕನ್ನು ಹೊಡೆಯುವ ಆಯುಧ
ಇನ್ನೂ ಈ ಭೂಮಿಯ ಮೇಲೆ ಹುಟ್ಟಿಲ್ಲ

ಅವರು ಕಲ್ಲುಗಳನ್ನು ಕಾಣುವರು
ನಾವು ಕುದಿಯುವ ಭಾವನೆಗಳನ್ನು ಕಾಣುವೆವು
ಅವರು ಶಿಲ್ಪಗಳನ್ನು ಕೆಡವುತ್ತಾರೆ
ನಾವು ಚೈತನ್ಯವನ್ನು ಎತ್ತಿಹಿಡಿಯೋಣ

ಸಾಕ್ರಟೀಸ್‌ನನ್ನು ವಿಷವಿಕ್ಕಿ ಕೊಂದರು
ಪ್ರಶ್ನೆಗಳನ್ನು ಕೊಲ್ಲಲು ಸಾಧ್ಯವೆ?
ಗೆಲಿಲಿಯೋನನ್ನು ಬಾಯಿ ಮುಚ್ಚಿಸಲೆತ್ನಿಸಿದರು
ಸತ್ಯವನ್ನು ಮುಚ್ಚಿಹಾಕಲು ಸಾಧ್ಯವೆ?
ಭಗತ್‌ಸಿಂಗ್‌ನನ್ನು ಗಲ್ಲಿಗೇರಿಸಿದರು
ಕ್ರಾಂತಿಯ ಕಿಡಿಯನ್ನು ಆರಿಸಲು ಸಾಧ್ಯವೆ?
ಗಾಂಧಿಯ ಎದೆಯನ್ನು ಸೀಳಿದರು
ಅಹಿಂಸೆಯನ್ನು ಅಲುಗಾಡಿಸಲು ಸಾಧ್ಯವೆ?
ಅಂಬೇಡ್ಕರರನ್ನು ಅವಮಾನಿಸಿದರು
ಸಮಾನತೆಯ ಕನಸನ್ನು ಸಮಾಧಿ ಮಾಡಲು ಸಾಧ್ಯವೆ?

ರಾಹುಲ್ ಸಾಂಕೃತ್ಯಾಯನ್‌ರ ಪ್ರತಿಮೆಯನ್ನು ಧ್ವಂಸಗೊಳಿಸಿದರು
ವಿಚಾರವಾದವನ್ನು ವಿಚ್ಛಿನ್ನ ಮಾಡಲು ಸಾಧ್ಯವೆ?
ಏಕೆಂದರೆ…
ಭಾವನೆಗಳಿಗೆ ಎಲುಬುಗಳಿರುವುದಿಲ್ಲ
ಆದರೆ ಅವೇ ಇತಿಹಾಸದ ಬೆನ್ನೆಲುಬುಗಳು
ಆಲೋಚನೆಗಳಿಗೆ ರಕ್ತವಿರುವುದಿಲ್ಲ
ಆದರೆ ಅವೇ ತಲೆಮಾರುಗಳ ರಕ್ತನಾಳಗಳಲ್ಲಿ ಪ್ರಶ್ನೆಗಳಾಗಿ ಹರಿಯುವವು

ಪುಸ್ತಕಗಳನ್ನು ಸುಡಬಹುದು; ಅಕ್ಷರಗಳನ್ನಲ್ಲ
ಹೆಸರುಗಳನ್ನು ಅಳಿಸಬಹುದು; ನೆನಪುಗಳನ್ನಲ್ಲ
ಪ್ರತಿಮೆಗಳನ್ನು ಕೆಡವಬಹುದು; ಮೌಲ್ಯಗಳನ್ನಲ್ಲ

ಭಯಪಡುವವರು ಯಾರು?
ಸತ್ಯ ಹೇಳುವವನಲ್ಲ;
ಸತ್ಯವನ್ನು ಸಹಿಸಲಾಗದವನೇ
ಭಯಪಡುವವರು ಯಾರು?
ಪ್ರಶ್ನೆ ಮಾಡುವವನಲ್ಲ;
ಪ್ರಶ್ನೆಗಳಿಗೆ ಉತ್ತರಿಸಲಾಗದವನೇ

ಅದಕ್ಕೇ…
ಇತಿಹಾಸವನ್ನು ಒಡೆಯಲು ಹವಣಿಸುತ್ತಿಹರು
ಪ್ರತಿಮೆಗಳನ್ನು ಕೆಡವುತ್ತಿಹರು
ನೆನಪುಗಳನ್ನು ಅಳಿಸಲೆತ್ನಿಸುತ್ತಿಹರು

ಆದರೆ…
ಧ್ವಂಸಗೊಂಡ ಪ್ರತಿಯೊಂದು ಪ್ರತಿಮೆಯೂ
ಸಾವಿರಾರು ಹೊಸ ಪ್ರಶ್ನೆಗಳಿಗೆ ಬುನಾದಿಯಾಗುವುದು
ಒಡೆದ ಪ್ರತಿಯೊಂದು ಕಲ್ಲೂ
ಹೊಸ ಚಳವಳಿಗೆ ನಾಂದಿಯಾಗುವುದು
ಕಲ್ಲುಗಳು ನೆಲದ ಮೇಲೆ ನಿಲ್ಲುವವು
ಭಾವನೆಗಳು ಮನಸ್ಸಿನಲ್ಲಿ ಉಳಿಯುವವು
ಶಿಲ್ಪಗಳು ಕಾಲದೊಂದಿಗೆ ಕಣ್ಮರೆಯಾಗಬಹುದು
ಆದರೆ ಸತ್ಯ ಮಾತ್ರ
ತಲೆತಲಾಂತರಗಳ ಧ್ವನಿಗಳಲ್ಲಿ
ಹಾಡಾಗಿ ಹರಿದಾಡುವುದು

ಕಲ್ಲುಗಳನ್ನು ಕೆಡವಬಹುದು; ಭಾವನೆಗಳನ್ನಲ್ಲ
ಪ್ರತಿಮೆಗಳನ್ನು ಧ್ವಂಸಗೊಳಿಸಬಹುದು; ವಿಜ್ಞಾನವನ್ನಲ್ಲ
ಚರಿತ್ರೆಯನ್ನು ಮುಚ್ಚಿಡಬಹುದು; ಸತ್ಯವನ್ನಲ್ಲ
ಮನುಷ್ಯನನ್ನು ಕೊಲ್ಲಬಹುದು;
ಆದರೆ ಅವನು ಬೆಳಗಿಸಿದ ಆಲೋಚನೆಗಳ ಜ್ಯೋತಿಯನ್ನು
ಯಾವ ಶಕ್ತಿಯೂ ಎಂದಿಗೂ ಆರಿಸಲಾಗದು!!


  • ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading