ಆಕಳ ಹಾಲಿನ ದುರ್ವಾಸನೆಗೆ ಏನು ಪರಿಹಾರ? – ಡಾ. ಎನ್.ಬಿ.ಶ್ರೀಧರ



ಆಕಳ ಹಾಲಿನ ದುರ್ವಾಸನೆಗೆ ಕಾರಣಗಳೇನು? ಅದು ಏಕೆ ಬರುತ್ತದೆ ? ಮತ್ತು ಅದರ ಪರಿಹಾರಗಳೇನು? ಎಂಬುದರ ಬಗ್ಗೆ ಪಶುವೈದ್ಯ ಡಾ.ಶ್ರೀಧರ್ ಅವರು ತಿಳಿಸಿಕೊಟ್ಟಿದ್ದಾರೆ. ಮುಂದೆ ಓದಿ…

“ಅಯ್ಯೋ ನಿನ್ನೆಯಿಂದ ನಮ್ಮನೆ ಹಸಿನ ಹಾಲು ದುರ್ವಾಸನೆ ಹೊಡಿತೀದೆ. ಕುಡಿಯೋದು ಹೋಗ್ಲಿ. ಕಾಯ್ಸಕ್ಕೂ ಆಗಲ್ಲ. ಒಡೆದು ಹೋಗುತ್ತೆ. ಯಾರೂ ತಗಳ್ತಿಲ್ಲ.. ಕಾಸಿದರೆ ತಳ ಹಿಡಿಯುತ್ತೆ.. ಕುಡಿಯೋಕು ಆಗಲ್ಲ.. ಹಾಲು ಮಾರೋಕೂ ಆಗಲ್ಲ.. ಎನ್ಮಾಡೋದು.. ದನಕ್ಕೆ ಚುಚ್ಚುಮದ್ದಿನ ಔಷಧಿ ನೀಡಿ ಡಾಕ್ಟ್ರೇ.. ಏನಾದ್ರೂ ಒಳ್ಳೆ ಟ್ರೀಟ್‌ಮೆಂಟ್ ಮಾಡಿ..” ಇದು ಅನೇಕ ಗೋಪಾಲಕ ಗೃಹಿಣಿಯರ ಅಳಲು.

ಹೌದು, ಕೆಲವೊಮ್ಮೆ ಹಸು ಅಥವಾ ಎಮ್ಮೆಯ ಹಾಲು ದುರ್ವಾಸನೆ ಹೊಡೆಯುತ್ತದೆ. ಕುಡಿಯಲು ಸಾಧ್ಯವೇ ಇಲ್ಲ ಎಂಬ೦ತ ವಾಸನೆಯಿಂದ ಮೂಗುಮುಚ್ಚಿಕೊಳ್ಳುವಂತಾಗುತ್ತದೆ. ಇದಲ್ಲದೇ ಇದೊಂದು ಭೂತದ ಅಥವಾ ದುಷ್ಟ ಶಕ್ತಿಯ ತೊಂದರೆ ಎಂದು ಹಲವು ಜಾನುವಾರು ಪಾಲಕರು, ಮಾಂತ್ರಿಕರ ಮೊರೆ ಹೋಗಿ ಮೋಸ ಹೋಗುವುದೂ ಸಹ ಸಾಮಾನ್ಯ. ಹಾಲಿನ ದುರ್ವಾಸನೆ ಬಹಳ ಸಾಮಾನ್ಯವಾದ ಸಮಸ್ಯೆ.

ಫೋಟೋ ಕೃಪೆ : motherhood story

ಆಕಳುಗಳು ಮತ್ತು ಎಮ್ಮೆಗಳಲ್ಲಿ ಈ ಸಮಸ್ಯ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಇದರಿಂದ ಹಾಲು ಕುಡಿಯಲು ಮತ್ತು ಮಾರಲು ಸಾಧ್ಯವಿಲ್ಲ. ಅಲ್ಲದೇ ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪ ಮತ್ತು ಗಿಣ್ಣದಲ್ಲೂ ಸಹ ಈ ಸಮಸ್ಯೆ ತೊಂದರೆಯನ್ನುಂಟು ಮಾಡುತ್ತದೆ. ಈ ಸಮಸ್ಯೆಗೆ ಹಲವಾರು ಕಾರಣಗಳಿದ್ದರೂ ಸಹ ಮುಖ್ಯ ಕಾರಣ ಜಾನುವಾರುಗಳಿಗೆ ಅಹಾರ ನೀಡುವ ಪರಿಪಾಠ ಅಂದರೆ ತಪ್ಪಗಲಾರದು. ಅದರಲ್ಲೂ ಬೇಸಿಗೆಯ ಸಮಯದಲ್ಲಿ ಈ ಸಮಸ್ಯೆಯ ಪ್ರಮಾಣ ಜಾಸ್ತಿ. ಇದಕ್ಕೆ ಹಲವಾರು ಕಾರಣಗಳನ್ನು ಪಟ್ಟಿ ಮಾಡಬಹುದು. ಇದು ಮಂದ ಸ್ವರೂಪದ ಕೆಚ್ಚಲು ಬಾವಿನಿಂದಲೂ ಬರುತ್ತದೆ. ಆಹಾರದ ಬದಲಾವಣೆ, ವಾತಾವರಣದ ಬದಲಾವಣೆ, ಕಲುಷಿತ ನೀರು ಜಾನುವಾರು ಕುಡಿದಾಗ, ಮಂದ ಸ್ವರೂಪದ ಕೆಚ್ಚಲು ಬಾವು.

ಇದು ವಿವಿಧ ರೀತಿಯ ಬ್ಯಾಕ್ಟಿರಿಯಾಗಳಿಂದ ಬರುತ್ತದೆ. ತೀವ್ರ ಸ್ವರೂಪದ ಕೆಚ್ಚಲು ಬಾವು ಬರುವುದಕ್ಕೆ ಇದೇ ಮೂಲ ಕಾರಣ. ಆದರೆ ಇದನ್ನು ಬರಿಗಣ್ಣಿನಿಂದ ಪತ್ತೆ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಕೆಚ್ಚಲು ಗಟ್ಟಿಯಾಗುವುದು, ಹಾಲು ನೀರಿನಂತೆ ಬರುವುದು ಇತ್ಯಾದಿ ಇರುವುದಿಲ್ಲ. ಬದಲಾಗಿ ಹಾಲು ಉಪ್ಪಾಗುವುದು, ಹೆಪ್ಪು ಗಟ್ಟದೇ ಇರುವುದು, ದುರ್ವಾಸನಾಯುಕ್ತವಾಗಿರುವುದು, ಕೆಲವು ಸಲ ಕಾಯಿಸಿದರೆ ಒಡೆದು ಹೋಗಲೂಬಹುದು. ಈ ರೀತಿಯ ಕೆಚ್ಚಲು ಬಾವನ್ನು ಸರಳವಾದ “ಸರ್ಫ್ ಬಾವು ಪತ್ತೆ ಹಚ್ಚುವ ವಿಧಾನದ ಮೂಲಕ ಪತ್ತೆ ಮಾಡಿ ಚಿಕಿತ್ಸೆ ನೀಡಬಹುದು.
ಇದನ್ನು ರೈತರು ಸುಲಭವಾಗಿ ಮಾಡಬಹುದು. ಮಾರುಕಟ್ಟೆಯಲ್ಲಿ ರೂಪಾಯಿ ೨ ಕ್ಕೆ ದೊರಕುವ ೧೨ ಗ್ರಾಂ ಪುಡಿಯನ್ನು ೪೦೦ ಮಿಲಿ ಶುದ್ಧ ನೀರಿಗೆ ಬೆರೆಸಿ ಶೇ ೩ ರ ದ್ರಾವಣ ತಯಾರಿಸಬೇಕು. ನಂತರ ಒಂದು ಪ್ಲಾಸ್ಟಿಕ್ ಮುಚ್ಚಳದಲ್ಲಿ ೪ -೫ ಧಾರೆ ಹಾಲನ್ನು ಕರೆದು ಸಮಪ್ರಮಾಣದ ಸರ್ಫ್ ದ್ರಾವಣದ ಮಿಶ್ರಣ ಮಾಡಿದಾಗ ಹಾಲು ಲೋಳೆಯಾದಲ್ಲಿ ಅದಕ್ಕೆ ಮಂದ ರೂಪದ ಕೆಚ್ಚಲುಬಾವು ಇದೆ ಎನ್ನುವುದು ಖಚಿತವಾಗುತ್ತದೆ. ಅದಕ್ಕೆ ತಕ್ಕಂತೆ ಚಿಕಿತ್ಸೆಯನ್ನು ತಜ್ಞ ಪಶುವೈದ್ಯರಿಂದ ಕೊಡಿಸಬೇಕು.



ಕಳೆಗಳು, ದುರ್ವಾಸನಾ ಯುಕ್ತ ಮೇವು ಮತ್ತು ರಸಮೇವು :
ಬಹಳಷ್ಟು ಕಳೆಗಳನ್ನು ಜಾನುವಾರು ತಿಂದಾಗ, ಅವುಗಳಲ್ಲಿರುವ ವಾಸನಾಯುಕ್ತ ಪದಾರ್ಥ ಹಾಲಿನಲ್ಲಿ ಸೃವಿಸಿ,ಹಾಲನ್ನು ದುರ್ವಾಸನೆಗೆ ಈಡು ಮಾಡುತ್ತವೆ.ಅವುಗಳಲ್ಲಿಮುಖ್ಯವಾದವುಗಳೆಂದರೆ, ಪಾರ್ಥೇನಿಯಮ್, ಕಾಸರಕ, ಲಂಟಾನಾ ಇವುಗಳ ಮಿಶ್ರಣವು ಹುಲ್ಲಿನ ಜೊತೆ ಆದರೆ ಹಾಲಿನ ದುರ್ವಾಸನೆ ಖಚಿತ. ಈ ರೀತಿಯ ದುರ್ವಾಸನೆ ಖಚಿತವಾದಲ್ಲಿ, ಈ ರೀತಿಯ ಕಳೆಗಳು ಅಹಾರದಲ್ಲಿ ಮಿಶ್ರಗೋಳ್ಳುವುದನ್ನು ತಡೆಗಟ್ಟಬೇಕು. ಅಲ್ಲದೇ ರಾಸು ಸೇವಿಸುವ ಮೇವು ಮತ್ತು ರಸಮೇವು ಇವುಗಳು ಮುಗ್ಗುಲು ಹಿಡಿದಿದ್ದರೆ ಅಥವಾ ಹುಳಿ ಬಂದರೆ, ಅವುಗಳಿಂದ ಹಾಲಿಗೆ ದುರ್ವಾಸನೆ ಖಂಡಿತಾ ಬರುತ್ತದೆ.

ಸೂಕ್ಷ್ಮಾಣುಜೀವಿಗಳ ಉಪಟಳ :
ಹಾಲು ವಿವಿಧ ರೋಗ ಕಾರಕ ಸೂಕ್ಷ್ಮಾಣುಗಳ ಬೆಳವಣಿಗೆಗೆ ಪೂರಕವಾದ ಪರಿಸರವನ್ನು ಹೊಂದಿದ ಉತ್ತಮ ವಸ್ತುವಾಗಿದೆ. ಇದರಲ್ಲಿ ಹೈಡ್ರೋಜನ್ ಸಲ್ಫೈಡ್ ಎಂಬ ಅನಿಲವನ್ನು ತಯಾರಿಸಬಲ್ಲ ಹಲವಾರು ಸೂಕ್ಷ್ಮಾಣುಗಳು ಇದ್ದಾಗ, ಹಾಲಿಗೆ ಖಂಡಿತಾ ದುರ್ವಾಸನೆ ಬರುತ್ತದೆ. ಕಾರಣ ಇಂತಹ ಸಂದರ್ಭದಲ್ಲಿ, ಹಾಲಿನ ಮಾದರಿಯ ಪರೀಕ್ಷೆ ಮಾಡಿಸಿ, ಸೂಕ್ತ ಜೀವ ನಿರೋಧಕವನ್ನು ನೀಡುವುದು ಉತ್ತಮ. ಹಾಲಿನ ಪಾತ್ರೆಯನ್ನು ಸರಿಯಾಗಿ ತೊಳೆಯದಿದ್ದರೆ ಕ್ರಿಮಿಗಳು ಬೆಳೆದು ಹಾಲಿಗೆ ದುರ್ವಾಸನೆಯುನ್ನುಂಟು ಮಾಡಬಹುದು.

ಫೋಟೋ ಕೃಪೆ : formersjournal

ಜೀರ್ಣಕ್ರಿಯೆಯಲ್ಲಿ ಆಗುವ ವ್ಯತ್ಯಾಸ:
ಹಸುವಿನ ಜೀರ್ಣಕ್ರಿಯೆಯಲ್ಲಿ ಆಗುವ ವ್ಯತ್ಯಾಸ ಸಹ ಅನೇಕ ಅನಾವಶ್ಯಕ ಬ್ಯಾಕ್ಟಿರಿಯಾಗಳು ಬೆಳೆದು ಹೈಡ್ರೋಜನ್ ಸಲ್ಫೈಡ್ ಉತ್ಪನ್ನವಾಗಿ ಇದು ರಕ್ತ ನಂತರ ಹಾಲನ್ನು ಸೇರಿ ದುರ್ವಾಸನೆಯನ್ನುಂಟು ಮಾಡಬಹುದು. ಆಗ ಸೂಕ್ತ ಜೀವ ನಿರೋಧಕಗಳು ಅಥವಾ ಉತ್ತಮ ಬ್ಯಾಕ್ಟಿರಿಯಾಗಳನ್ನು ಬಳಸಬೇಕಾಗಬಹುದು.

ಪಶು ಅಹಾರಗಳ ವ್ಯತ್ಯಾಸ:
ಅನೇಕ ಸಲ ಹಲವು ಕಾರಣಗಳಿಂದ ಪಶು ಅಹಾರ ನೀಡುವಿಕೆಯಲ್ಲಿ ವ್ಯತ್ಯಾಸವಾದಾಗಲೂ ಸಹ ಹಾಲಿನಲ್ಲಿ ದುರ್ವಾಸನೆ ಉಂಟಾಗಬಹುದು. ಹೆಚ್ಚಿನ ಮೆಕ್ಕೆಜೋಳ ಹಿಂಡಿಯಲ್ಲಿ ಇದ್ದರೆ ಜಾನುವಾರಿಗೆ “ಅಸಿಡಿಟಿ” ಉಂಟಾಗುತ್ತದೆ. ದೊಡ್ಡ ಉದರದ ಆಮ್ಲತೆ ಹಾಲಿನ ಕ್ಷಾರತೆ ಹೆಚ್ಚಿಸಿ ಹಾಲಿನಲ್ಲಿ ಅನಗತ್ಯ ಬ್ಯಾಕ್ಟಿರಿಯಾ ಬೆಳೆಯಲು ಸಹಾಯ ಮಾಡುತ್ತದೆ. ಇದರಿಂದಲೂ ಸಹ ಹಾಲಿಗೆ ಕೆಟ್ಟ ವಾಸನೆ ಬರಬಹುದು. ದಿನವೂ ಎರಡು ಸಲ ಸುಮಾರು ೩೦ ಗ್ರಾಂ ನಷ್ಟು ಅಡಿಗೆ ಸೋಡಾವನ್ನು ಅಹಾರದ ಮೂಲಕ ನೀಡುವುದರ ಮೂಲಕ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಬಗೆಹರಿಸಬಹುದು.

ಖನಿಜಾಂಶಗಳ ಕೊರತೆ:
ಹಾಲು ಹಿಂಡುವ ಜಾನುವಾರುಗಳಿಗೆ ಅನೇಕ Sನಿಜಾಂಶಗಳ ಮತ್ತು ಪೌಷ್ಟಿಕಾಂಶಗಳ ಅವಶ್ಯಕತೆ ಇದೆ. ಇವುಗಳನ್ನು ಉತ್ತಮ ಖನಿಜ ಮಿಶ್ರಣ ನೀಡುವುದರ ಮೂಲಕ ಬಗೆಹರಿಸಬಹುದು.

ಪ್ರಥಮೋಪಚಾರ:
ಹಾಲಿಗೆ ಕೆಟ್ಟ ವಾಸನೆ ಅಥವಾ ದುರ್ವಾಸನೆ ಪ್ರಾರಂಭವಾಗಲು ಅನೇಕ ದಿನಗಳು ಬೇಕು. ಕಾರಣ ಅದು ಗೊತ್ತಾದ ಕೂಡಲೇ ಅದರ ಕಾರಣ ಪತ್ತೆ ಹಚ್ಚಿ ತಕ್ಕ ಚಿಕಿತ್ಸೆ ಮಾಡಬೇಕು. ಬಹುತೇಕ ಪ್ರಕರಣಗಳಲ್ಲಿ ಕೆಚ್ಚಲಿನಲ್ಲಿ ಕ್ಷಾರತೆ ಜಾಸ್ತಿಯಾಗಿ ಹಾಲಿಗೆ ವಾಸನೆ ಬರುತ್ತದೆ. ಕಾರಣ ಜಾನುವಾರಿಗೆ ಸೋಡಿಯಂ ಅಸಿಡ್ ಸಿಟ್ರೇಟ್ ೧೫  ಗ್ರಾಮ್ ಮುಂಜಾವು ಮತ್ತು ಸಂಜೆ ನೀಡಬಹುದು. ಇದು ಸಿಗದೇ ಇದ್ದ ಪಕ್ಷದಲ್ಲಿ೫-೬ ನಿಂಬೆ ಹಣ್ಣುಗಳನ್ನು ೪-೫ ದಿನ ಅಹಾರದಲ್ಲಿ ನೀಡಬಹುದು.

ಹಾಲಿಗೆ ದುರ್ವಾಸನೆ ಬರುವುದಕ್ಕೆ ಅನೇಕ ಕಾರಣಗಳಿವೆ. ಅವುಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಚಿಕಿತ್ಸೆ ಮಾಡಿ ಸರಿಪಡಿಸುವುದು ಜಾಣತನ.


  • ಡಾ. ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು)
    ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
    ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ- ೫೭೭೨೦೪

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW