ಮಹಿಳೆ ಒಂದು ಭೋಗದ ವಸ್ತುವೇ?

‘ಐಟಂ ಸಾಂಗ್’ ಎಂಬ ಹೆಸರಿನಲ್ಲಿ ಹರಾಜಿಗಿಡುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಐಟಂ ಸಾಂಗ್‌ಗಳ ಮೂಲಕ ಮಹಿಳೆಯನ್ನು ಕೇವಲ ಲೈಂಗಿಕ ವಸ್ತುವಾಗಿ ಬಿಂಬಿಸಿದರೆ, ಅದನ್ನೇ ನೋಡುವ ಯುವ ಪೀಳಿಗೆ ನಿಜ ಜೀವನದಲ್ಲೂ ಮಹಿಳೆಯರನ್ನು ಗೌರವದಿಂದ ಕಾಣಲು ಹೇಗೆ ಸಾಧ್ಯ?…ಲೇಖಕಿ ಆಶಾ ಎನ್ ಎಂ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

‘ಐಟಂ’ ಎಂದರೆ ವಸ್ತು, ಇಲ್ಲಿ ಮಹಿಳೆ ಒಂದು ಭೋಗದ ವಸ್ತು, ಇಲ್ಲಿ ಮಹಿಳೆಯನ್ನು ಮನುಷ್ಯಳಾಗಿ ನೋಡುವ ಬದಲು ‘ಪದಾರ್ಥ’, ‘ಬಾಟಲಿ’, ‘ಮಾಲು’ ಅಥವಾ ತಿನ್ನುವ ಪದಾರ್ಥಗಳ ಹೆಸರಿನಿಂದ ಕರೆಯಲಾಗುತ್ತದೆ. ಈ ಹಾಡುಗಳು ಮೇಲ್ನೋಟಕ್ಕೆ ಸಾಮಾನ್ಯ ಎನಿಸಿದರೂ, ಆಳದಲ್ಲಿ ಲೈಂಗಿಕ ಅರ್ಥ ಕೊಡುವ ಪದಗಳನ್ನು ಬಳಸಿ ಕೆಳಮಟ್ಟದ ಮನರಂಜನೆ ನೀಡುತ್ತವೆ. ಕಥೆಗೂ ಸಾಹಿತ್ಯಕ್ಕೂ ಸಂಬಂಧವಿಲ್ಲದಿದ್ದರೂ ಅಲ್ಲಿ ಒಂದು ಹಾಡನ್ನು ಸೃಷ್ಟಿಸಲಾಗುತ್ತದೆ. ಜನರನ್ನು ಸೆಳೆಯಲು ಅದರಲ್ಲಿ ಕೇವಲ ದೈಹಿಕ ಅಂಗಾಂಗಗಳನ್ನು ಅತಿಶಯವಾಗಿ ಮತ್ತು ಅಸಭ್ಯವಾಗಿ ವರ್ಣಿಸಲಾಗುತ್ತದೆ, ಮಹಿಳೆಯನ್ನು ಒಬ್ಬ ಚುಡಾಯಿಸುವ ವಸ್ತುವಿನಂತೆ ಬಿಂಬಿಸುತ್ತಾರೆ.

ಸಿನಿಮಾ ಎನ್ನುವುದು ಕೇವಲ ಮೂರು ಗಂಟೆಯ ಮನರಂಜನೆಯಲ್ಲ, ಅದು ಕೋಟ್ಯಂತರ ಮನಸ್ಸುಗಳನ್ನು ಆಳುವ ಶಕ್ತಿಶಾಲಿ ಮಾಧ್ಯಮ. ಇಂದು ಶಿಕ್ಷಣ ಸಂಸ್ಥೆಗಳು ನೀಡುವ ಮೌಲ್ಯಗಳಿಗಿಂತಲೂ ಸಿನೆಮಾ ಬಿಂಬಿಸುವ ವಿಚಾರಗಳು ಯುವ ಸಮೂಹದ ಮೇಲೆ ಗಾಢವಾದ ಪ್ರಭಾವ ಬೀರುತ್ತಿವೆ. ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಚಿತ್ರರಂಗ, ಮಹಿಳೆಯ ಘನತೆಯನ್ನು ‘ಐಟಂ ಸಾಂಗ್’ ಎಂಬ ಹೆಸರಿನಲ್ಲಿ ಹರಾಜಿಗಿಡುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ.

ಒಬ್ಬ ಶಿಕ್ಷಕ ತರಗತಿಯಲ್ಲಿ ಹೇಳುವ ಮೌಲ್ಯಶಿಕ್ಷಣದ ಪಾಠಕ್ಕಿಂತ, ಬೆಳ್ಳಿತೆರೆಯ ಮೇಲೆ ಒಬ್ಬ ಸ್ಟಾರ್ ನಟ ಮಾಡುವ ಕಿಡಿಗೇಡಿತನ ಯುವಜನರ ಮೇಲೆ ಬೇಗ ಪ್ರಭಾವ ಬೀರುತ್ತದೆ. ಐಟಂ ಸಾಂಗ್‌ಗಳ ಮೂಲಕ ಮಹಿಳೆಯನ್ನು ಕೇವಲ ಲೈಂಗಿಕ ವಸ್ತುವಾಗಿ ಬಿಂಬಿಸಿದರೆ, ಅದನ್ನೇ ನೋಡುವ ಯುವ ಪೀಳಿಗೆ ನಿಜ ಜೀವನದಲ್ಲೂ ಮಹಿಳೆಯರನ್ನು ಗೌರವದಿಂದ ಕಾಣಲು ಹೇಗೆ ಸಾಧ್ಯ?

ಫೋಟೋ ಕೃಪೆ : google

ತೆರೆಯ ಮೇಲೆ ನೂರಾರು ಜನರನ್ನು ಹೊಡೆದು ಉರುಳಿಸಿ ಅನ್ಯಾಯದ ವಿರುದ್ಧ ಹೋರಾಡುವ ‘ಹೀರೋ’ ಗಳು, ಅದೇ ಸಿನಿಮಾದಲ್ಲಿ ಮಹಿಳೆಯನ್ನು ಕೀಳಾಗಿ ಚಿತ್ರಿಸುವ ಅಸಹ್ಯಕರ ಪದಬಳಕೆಯ ಹಾಡುಗಳಿಗೆ ಮೌನವಾಗಿ ಕುಣಿಯುತ್ತಾರೆ. ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಇಂತಹ ದೃಶ್ಯಗಳಲ್ಲಿ ನಟಿಸುವವರು ನಿಜವಾದ ಅರ್ಥದಲ್ಲಿ ‘ನಾಯಕ’ರಾಗಲು ಹೇಗೆ ಸಾಧ್ಯ? ಸಮಾಜಕ್ಕೆ ಮಾದರಿಯಾಗಬೇಕಾದವರು ಕೇವಲ ಹಣ ಮತ್ತು ಜನಪ್ರಿಯತೆಗಾಗಿ ಸ್ತ್ರೀ ಸಂಕುಲವನ್ನು ಅವಮಾನಿಸುವ ಕಲೆಗೆ ಸಾಥ್ ನೀಡುತ್ತಿರುವುದು ಅವರ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ.

ನಿರ್ದೇಶಕರು, ಗಾಯಕರು ಮತ್ತು ಸಾಹಿತಿಗಳು ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ ಎಂದರೆ ಅಲ್ಲಿ ಕಲೆಯ ಆರಾಧನೆಗಿಂತ ಹಣದ ದಾಹವೇ ಹೆಚ್ಚಾಗಿದೆ ಎಂದರ್ಥ. “Money can’t speak, it screams” ಎಂಬ ಮಾತಿನಂತೆ, ಕೋಟಿ ಕೋಟಿ ಲಾಭದ ಮುಂದೆ ಹೆಣ್ಣಿನ ಘನತೆಯ ಕೂಗು ಯಾರಿಗೂ ಕೇಳಿಸುತ್ತಿಲ್ಲ. ಸಿನಿಮಾ ಎನ್ನುವುದು ಜನಾಭಿಪ್ರಾಯವನ್ನು ರೂಪಿಸುವ ಪ್ರಮುಖ ಅಂಶವಾಗಿರುವಾಗ, ಅದರಲ್ಲಿ ಮಹಿಳೆಯನ್ನು ಕೇವಲ ಭೋಗದ ವಸ್ತುವಾಗಿ ಅಥವಾ ‘ಐಟಂ’ ಆಗಿ ಬಿಂಬಿಸಿದರೆ, ನಮ್ಮ ಯುವ ಪೀಳಿಗೆಗೆ ನಾವು ನೀಡುತ್ತಿರುವ ಸಂದೇಶವೇನು?

ಐಟಂ ಹಾಡಿನ ಸಾಹಿತಿಗಳೇ. ಕನ್ನಡ ಭಾಷೆಗೆ ಮತ್ತು ಸಾಹಿತ್ಯಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ. ಶ್ರೇಷ್ಠ ಕವಿಗಳನ್ನು ಕಂಡ ನಾಡಿದು. ಕೇವಲ ಹಣದ ಆಸೆಗಾಗಿ ಹೆಣ್ಣನ್ನು ಹೀಗಳೆಯುವ ಪದಗಳನ್ನು ಬಳಸಿ ಭಾಷೆಯ ಸೊಗಡನ್ನು ಮತ್ತು ಮಹಿಳೆಯ ಗೌರವವನ್ನು ಯಾಕೆ ಹಾಳು ಮಾಡುತ್ತಿದ್ದೀರಿ?”

ಸಿನಿಮಾ ರಂಗವು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತು ಸಂಸ್ಕೃತಿಯ ಹೆಸರಿನಲ್ಲಿ ವಿಕೃತಿಯನ್ನು ಹರಡಬಾರದು. ಸೃಜನಶೀಲತೆಯು ಮಹಿಳೆಯನ್ನು ಗೌರವಿಸುವಂತಿರಬೇಕೇ ಹೊರತು, ಆಕೆಯ ಅಸ್ತಿತ್ವವನ್ನು ಕೇವಲ ಪ್ರದರ್ಶನದ ವಸ್ತುವಾಗಿಸಬಾರದು. ಈ ಕಿರುಚುವ ಹಣದ ಅಬ್ಬರದ ನಡುವೆ ಮಾನವೀಯ ಮೌಲ್ಯಗಳು ಮತ್ತು ಸ್ತ್ರೀ ಗೌರವದ ಧ್ವನಿ ಅಡಗಬಾರದು. ಇಡೀ ಕನ್ನಡ ಚಿತ್ರರಂಗ ಯೋಚಿಸಲಿ..ನಿರ್ಧರಿಸಲಿ! ಸಿನಿಮಾ ಇತಿಹಾಸದಲ್ಲೇ ಕರ್ನಾಟಕದಲ್ಲಿ ಈ ಅಭಿಯಾನ ಮೊದಲು ಪ್ರಾರಂಭವಾಗಲಿ.

“ನಾವು ನಮ್ಮ ಸಿನಿಮಾದಲ್ಲಿ ಐಟಂ ಸಾಂಗ್ ಮಾಡುವುದಿಲ್ಲ”


  • ಆಶಾ ಎನ್ ಎಂ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading