ಭಾರತೀಯರಿಗೆ ಕರ್ಪೂರವನ್ನೇನೂ ಪರಿಚಯಿಸಬೇಕಿಲ್ಲ. ಕರ್ಪೂರದ ಮರವನ್ನು ಖಂಡಿತಾ ಪರಿಚಯಿಸಬೇಕಿದೆ. ಏಕೆಂದರೆ ಕರ್ಪೂರ ಸಿಗುವುದು ಮರದಿಂದ, ಕೆಲವರಿಗೆ ಅಚ್ಚರಿ ಅನ್ನಿಸಬಹುದು, ಕರ್ಪೂರ ಸಿಗುವುದು ಮರದಿಂದನಾ?. ಈ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ.ಮುಂದೆ ಓದಿ…
ಇದೊಂದು ೫೦-೬೦ ಅಡಿಗಳಿಂದ ನೂರಾರು ಅಡಿಗಳವರೆಗೂ ಬೆಳೆಯುವ ಹೆಮ್ಮರ . ನಮ್ಮದಲ್ಲದ ಈ ಮರ, ಮೂಲತಃ ಪೂರ್ವ ಏಶಿಯಾದ್ದು. ಚೀನಾ, ಜಪಾನ್, ತೈವಾನ್‌ಗಳಲ್ಲಿ ಇದರ ಬೆಳವಣಿಗೆ ಜನಪ್ರಿಯವಾದುದು. ಆದರೆ “ಕರ್ಪೂರ”ದ ಪರಿಮಳ ಮಾತ್ರ ಬಹು ಪಾಲು ಭಾರತೀಯರಿಗೆ ಅದರಲ್ಲೂ ತಿನಿಸುಗಳಲ್ಲಿಯೂ ಪರಿಚಿತ. (ತಿರುಪತಿ ತಿಮ್ಮಪ್ಪನ ಲಾಡುವಿನಲ್ಲಿ ಪಚ್ಚ ಕರ್ಪೂರ ವನ್ನೇ ಬಳಸಿ ತಯಾರಿಸುತ್ತಾರೆ ) ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ವಾತಾವರಣದಲ್ಲಿ ಸಾಮಾನ್ಯವಾಗಿ ಬೆಳೆವ “ಚಕ್ಕೆ”-ಸಿನ್ನಮೊಮಂ- (Cinnamomum ) ಕುಲಕ್ಕೆ ಸೇರಿದ ಕರ್ಪೂರದ ಮರ. ಹಲವಾರು ಪ್ರಭೇದಗಳುಳ್ಳ ಸಿನ್ನಮೊಮಂ, ಸಂಕುಲವು ಲರೇಸಿಯೆ (Lauraceae ) ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ.

ಫೋಟೋ ಕೃಪೆ: Pinterest
ಕರ್ಪೂರದ ಬೊಂಬೆ ನಾನು… ಮಿಂಚಂತೆ ಬಳಿ ಬಂದೆ ನೀನು, ನಿನ್ನ ಪ್ರೇಮ ಜ್ವಾಲೆ, ಸೋಕೆ ನನ್ನ ಮೇಲೆ, ಕರಗಿ ಕರಗಿ ನೀರಾದೆ ನಾನು … ಎನ್ನುವ ಜನಪ್ರಿಯ ಕನ್ನಡ ಚಿತ್ರಗೀತೆಯೊಂದಿದೆ. ಅದರಲ್ಲಿಕಾವ್ಯದ ನಾಯಕಿಯು ಪ್ರೇಮಿಯ ಜ್ವಾಲೆಯಲ್ಲಿ ಕರಗಿ ಕರಗಿ ನೀರಾದೆಳೆಂದು ಹಾಡುತ್ತಾಳೆ. ಆದರೆ ನಿಜವಾದ ಕರ್ಪೂರವು ಜ್ವಾಲೆಗೆ ಕರಗಿ ನೀರಾಗದೆ ನೇರವಾಗಿ ಆವಿಯಾಗುತ್ತದೆ. ಇದು ಕರ್ಪೂರದ ವಿಶೇಷವೂ ಹೌದು! ಅದನ್ನು ರಸಾಯನ ವಿಜ್ಞಾನದ “ಉತ್ಪತನ-(Sublimation)”ಕ್ರಿಯೆ ಎಂದು ಕರೆಯುತ್ತಾರೆ . ಇದು ಕರ್ಪೂರದ ವೈಜ್ಞಾನಿಕ ಸತ್ಯ. ಕಾವ್ಯದ ಸತ್ಯದ ಕರಗುವಿಕೆಯು ಪ್ರೇಮಿಯ ಪ್ರೀತಿಗೆ ಪರವಶಳಾಗುವ ರೂಪಕ! ಹಾಗಾದರೂ ಪ್ರಿಯಕರನು ಪ್ರೇಮಿಯನ್ನು ಕರ್ಪೂರದ ಬೊಂಬೆಯಾಗಿಸಿ ಪಡೆಯುವ ಪರಿಮಳ ಅವಳ ಪ್ರೀತಿಗೆ ಕೂಡ ಇದ್ದೀತು!
ಅರೆರೆ…… ಕ್ಷಮಿಸಿ ಇದೇಕೋ ಪ್ರೇಮ ಕಾವ್ಯದ ಕಡೆಗೆ ತಿರುಗುವ ಹಾಗೆ ಕಾಣುತ್ತಿದೆ ಬದಲಿಸೋಣ,
ಈಗ ಕರ್ಪೂರದ ಬಗ್ಗೆ ಇನ್ನೂ ವಿವರಗಳನ್ನು ತಿಳಿಯೋಣ :

ಫೋಟೋ ಕೃಪೆ: Pinterest
ಕರ್ಪೂರದ ಮರದ ತೊಗಟೆಯೂ ನಮ್ಮ ಸಾಂಬಾರಿನ ಚಕ್ಕೆಯಂತೆಯೇ ಪರಿಮಳಯುತವಾಗಿದ್ದು, ಜೊತೆಗೆ ಎಲೆಗಳೂ ಕೂಡ ಪರಿಮಳವನ್ನು ಹೊಂದಿದೆ. ಶತಮಾನಗಳಿಂದ ಕರ್ಪೂರವನ್ನು ಮಾನವ ಕುಲವು ಬಳಸುತ್ತಾ ಬಂದಿದೆ. ರಸಾಯನಿಕವಾಗಿ ಕರ್ಪೂರವು ಒಂದು ಇಂಗಾಲದ ವಸ್ತುವಾಗಿದ್ದು ಹತ್ತು ಇಂಗಾಲದ, ಹದಿನಾರು ಜಲಜನಕದ ಅಣುಗಳಿರುವ ಒಂದೇ ಆಮ್ಲಜಕವುಳ್ಳ (C10H16O) ರಸಾಯನಿಕ ಸೂತ್ರವನ್ನು ಹೊಂದಿದೆ. ಹಾಗಾಗಿ ಆಮ್ಲಜನಕವನ್ನು ಬೇಗ ಸೆಳೆದುಕೊಂಡು ಜ್ವಾಲೆಯಲ್ಲಿ ಕರಗಿ ಉತ್ಕರ್ಷಣವಾಗಿ ಹಾಗೇ ಆವಿಯೂ ಆಗುತ್ತದೆ. Camphor ಪದವು ಫ್ರೆಂಚ್ ಪದ ಕಾಫ್‌ಹ್ರ್ (Camphre) ದಿಂದ ವಿಕಾಸ ಹೊಂದಿದೆ. ಫ್ರೆಂಚ್ ಪದವು ಮಧ್ಯಕಾಲೀನ ಲ್ಯಾಟಿನ್ ನಿಂದಲೂ, ಲ್ಯಾಟಿನ್ ಪದವು ಅರಬಿಕ್ ನಿಂದಲೂ, ಅರಾಬಿಕ್‌ನಿಂದ ತಮಿಳಿನ ʼಕರ್ಪೂರಂʼ ದು ಎಂದೂ ಅಂದಾಜಿಸಲಾಗಿದೆ. ನಮ್ಮ ದೇಶದ ಮುಂಬೈ ನಗರ ಕರ್ಪೂರದ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದೆ.

ಫೋಟೋ ಕೃಪೆ: Pinterest
ಸುವಾಸನೆಯ ಭಾಗಗಳನ್ನು ಹೊಂದಿರುವ ಮರ. ಎಲೆಗಳನ್ನು ಕೈಯಲ್ಲಿ ಕಿತ್ತು ಉಜ್ಜಿದರೆ ಸಾಕು, ಅಂಗೈಯೆಲ್ಲಾ ಕರ್ಪೂರದ ಪರಿಮಳ. ಎಲೆಗಳು ಮೇಲ್ಮೈಯು ಎಣ್ಣೆಯನ್ನು ಹಚ್ಚಿದಂತೆ ಹೊಳೆಯುತ್ತಿರುತ್ತವೆ. ತಳ ಭಾಗವು ತುಸು ಮಾಸಲು ಬಿಳಿಯದಾದ ಹಸಿರು ಬಣ್ಣವನ್ನು ಹೊಂದಿರುತ್ತವೆ. ಎಲೆಗಳಲ್ಲೂ ಕರ್ಪೂರದ ಎಣ್ಣೆಯು ಇದ್ದರೂ, ಅದರ ಒಳಗಿನ ಕಾಂಡ (Inner Wood) ಸಾಕಷ್ಟು ಕರ್ಪೂರದ ಇಳುವರಿಯನ್ನು ಕೊಡುತ್ತದೆ. ಮರವನ್ನು ಹೊರ ತೊಗಟೆಯನ್ನು ಚೆನ್ನಾಗಿ ತೊಳೆದು, ಇಲ್ಲವೇ ತೆಳುವಾಗಿ ಸುಲಿದು, ಒಳ-ಮರವನ್ನು ಸಣ್ಣ ಸಣ್ಣ ತುಂಡುಗಳಾಗಿಸಿ ಶುದ್ಧವಾದ ನೀರಿನಲ್ಲಿ ಭಟ್ಟಿ ಇಳಿಸಲಾಗುತ್ತದೆ. ಅದರಿಂದ ಪಡೆದ ಎಣ್ಣೆಯನ್ನು ನೀರಲ್ಲಿಯೇ ಘನೀಕರಿಸಿ ತೇಲಿಸಿದಾಗ ಶುದ್ಧ ಕರ್ಪೂರ ದೊರೆಯುತ್ತದೆ. ಬಹು ಪಾಲು ತಿನಿಸುಗಳಿಗೆ ಸುಗಂಧವಾಗಿ ಬಳಸುವ ಕರ್ಪೂರವನ್ನು “ಪಚ್ಚ ಕರ್ಪೂರ” ಎಂದು ಕರೆಯುತ್ತೇವೆ. ಅದನ್ನು ಸಾಮಾನ್ಯವಾಗಿ ಹೀಗೆ ಕರ್ಪೂರದ ಮರದಿಂದಲೇ ಪಡೆಯಲಾಗುತ್ತದೆ. ಆದರೆ ಪೂಜೆಯ ಆರತಿಯಲ್ಲಿ ಬಳಸುವ ಕರ್ಪೂರವನ್ನು ಕೃತಕವಾಗಿಯೂ ತಯಾರಿಸಲಾಗುತ್ತದೆ. ಅಲ್ಲದೆ ಇತರೇ ಕೆಲವು ಮರಗಳ ಒಳಗಿನ ಕಾಂಡದ ಮೂಲಕ ಪಡೆಯಲಾಗುತ್ತದೆ.
ಕರ್ಪೂರವನ್ನು ಭಟ್ಟಿ ಇಳಿಸಿ ಪಡೆಯುವ ಬಿಳಿಯ ಘನೀಕೃತವಾದ ವಸ್ತು. ಕರ್ಪೂರದ ಮರವನ್ನು ಬೆಂಕಿಯಲ್ಲಿ ಹುರಿದು, ಅದರಿಂದ ಆವಿಯಾಗುವ ಎಣ್ಣೆಯನ್ನು (ಮೂಲತಃ ರಾಳ-ರೆಸಿನ್), ಅದರ ಮೇಲೆಯೆ ಹಬೆಯನ್ನು ಹಾಯಿಸಿ ಘನೀಕರಿಸಿ, ನಂತರ ಪಡೆಯಲಾಗುತ್ತಿತ್ತು. ಇದನ್ನು ಜಪಾನಿಯರು ಶತಮಾನಗಳ ಕಾಲ ಪ್ರಭುತ್ವ ಹೊಂದಿದ್ದರು. 20ನೆಯ ಶತಮಾನದ ಆದಿಯಲ್ಲಿ ಕೃತಕವಾಗಿ ಸಂಸ್ಕರಿಸುವ ವಿಧಾನವನ್ನು ಕಂಡುಹಿಡಿದ ಮೇಲೆ ಬಗೆ ಬಗೆಯ ಕಾರ್ಖಾನೆಗಳು ತಲೆಯೆತ್ತಿವೆ. ಆದರೂ ನೈಸರ್ಗಿಕವಾದ ಪಚ್ಚ ಕರ್ಪೂರ ಎಂದೂ ಈಗಲೂ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕರ್ಪೂರವನ್ನು ತಿನ್ನಲು ಬಳಸುವಲ್ಲಿ ಇಂಡಿಯಾ ಮೇಲುಗೈ. ಅನೇಕ ಸಿಹಿಗಳಲ್ಲಿ, ಕುಡಿಯುವ ನೀರಿನಲ್ಲೂ ಪರಿಮಳಕ್ಕೆ ಬಳಸುತ್ತಾರೆ. ಅಲ್ಲದೆ ಔಷಧಗಳಲ್ಲಿ ಮುಖ್ಯವಾಗಿ “ಉರಿ” ತರಿಸುವಂತಹಾ ವಿಕ್ಸ್ ವೆಪೊರಬ್ ಮುಂತಾದ ಔಷಧಗಳಲ್ಲಿ ಬಳಸುತ್ತಾರೆ. ಗಂಟಲಿನ ಶುದ್ಧೀಕರಣಕ್ಕೆ ಕರ್ಪೂರದ ಹಬೆಯನ್ನು ಉಸಿರಾಡುವುದೂ ಕೂಡ ಬಳಕೆಯಲ್ಲಿದೆ.

ಫೋಟೋ ಕೃಪೆ: khalihaan.
ಕರ್ಪೂರವು ಒಂದು ಬಗೆಯ ಮೇಣದಂತಹಾ ವಸ್ತು. ಅದರ ಗಾಢವಾದ ವಾಸನೆಯು ಟರ್ಪಿನಾಯ್ಡ್ ಗಳೆಂಬ ಇಂಗಾಲಯುತ ರಾಸಾಯನಿಕ. ಶೀತ, ನೆಗಡಿ, ಕೆಮ್ಮು ನಿವಾರಕವಾಗಿ ನೂರಾರು ವರ್ಷಗಳಿಂದ ಬಳಕೆಯಲ್ಲಿದೆ. ಪಾರಂಪರಿಕವಾಗಿ ಕರ್ಪೂರವನ್ನು ಹಾಲುಣಿಸುವ ಹೆಣ್ಣು ಮಕ್ಕಳ ಎದೆಯ ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡಲೂ ಕೂಡ ಬಳಸುತ್ತಾರೆ. ಕರ್ಪೂರವು ಕೃತಕ ಅಬಾರ್ಶನ್ ಅನ್ನು ಉಂಟು ಮಾಡಲೂ ಸಹಾ ಪಾರಂಪರಿಕ ಪದ್ಧತಿಗಳಲ್ಲಿ ಬಳಸುವ ರೂಢಿ ಇದೆ. ಇತ್ತೀಚೆಗೆ ಕರ್ಪೂರದ ಅನೇಕ ಔಷಧೀಯ ಗುಣಗಳ ವೈದ್ಯಕೀಯ ಅಧ್ಯಯನಗಳೂ ನಡೆದಿವೆ. ಚರ್ಮ ಹಾಗೂ ಗಂಟಲಿನ ಕಾಯಿಲೆಗಳ ಸಂಬಂಧದವು ಅಲ್ಲದೆ ಇತರೇ ಜೀವಿವೈಜ್ಞಾನಿಕ ಅಧ್ಯಯನಗಳೂ ಪ್ರಮುಖವಾಗಿವೆ. ಹೆಚ್ಚು ಪ್ರಮಾಣದ ಕರ್ಪೂರವನ್ನು ನೇರವಾಗಿ ನುಂಗುವುದು ಅಪಾಯಕಾರಿ ! ಕರ್ಪೂರವು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದು ನರಮಂಡಲಕ್ಕೆ ವಿಷಕಾರಿ. ವಿಕ್ಸ್, ಝoಡುಬಾಮ್, ಅಮೃತಾಂಜನ್ ಹಾಗೂ ಇತರೆ ನೋವು ನಿವಾರಕ ಔಷಧಿಗಳನ್ನು ತಯಾರು ಮಾಡುವ ಕಂಪನಿಗಳು, ಒಂದು ವರ್ಷಕ್ಕೆ ಒಂದು ಮರದಿಂದ ನೂರಾರು ಕೋಟಿ ಹಣ ಸಂಪಾದಿಸುತ್ತವೆ.
- ಚನ್ನೇಶ್ ನ್ಯಾಮತಿ
