‘ನಿನ್ನ ಸಾಂಗತ್ಯ ಬೇಕೆನಗೆ’ ಕವನ – ಪೀರಸಾಬ ನದಾಫ

ನನ್ನಜ್ಜನ ಹೆಗಲ ಕೂಸುಮರಿಯಾಗಿ ನಿನ್ನ ಸೌಂದರ್ಯ ಲಹರಿಯ ಗುಣಗಾನ ಕೇಳಿದ್ದು ಇನ್ನೂ ನೆನಪಿದೆ ಎನಗೆ !….ಕವಿ ಪೀರಸಾಬ ನದಾಫ ಅವರ ಸುಂದರ ಸಾಲುಗಳು ಓದುಗರ ಮುಂದೆ, ತಪ್ಪದೆ ಓದಿ…

ನಿನ್ನ ಸಾಂಗತ್ಯ ಬೇಕೆನಗೆ
ಕೋಟಿ ಕೋಟಿ ವರುಷಗಳಿಂದ
ಹೊಳೆಯುವ ನಿರಾಭರಣ
ನಿರ್ಮಲ ನಿತ್ಯ ಸತ್ಯವೇ ಸುಂದರನೇ
ನಿನ್ನ ಮುಖದಲಿ ಮಂದಹಾಸವೇ ಹೊರತು
ಸುಕ್ಕುಗಳನಲ್ಲಿ ನಾ ಕಾಣಲಾರೆ
ಹೇಳಿಬಿಡು ಪ್ರಿಯಾ ನಿನ್ನ ನಿಜದ ಗುಟ್ಟೇನು?

ಅಜ್ಜ, ಅವರಜ್ಜ, ಅವರಜ್ಜ, ಮತ್ತವರಜ್ಜ
ನಿನ್ನ ನೋಡುತ್ತಲೇ ಬೆಳದು ಬಂದಿದ್ದರಂತೆ
ನಿನ್ನ ಬಣ್ಣ ಬದಲಾಯಿಸದ ತಂಪು ತಂಪು
ವರ್ಣನಾತೀತ ಆನಂದದ ಉನ್ಮಾದವನ್ನು
ಮುಂದಿನ ತಲೆಮಾರುಗಳಿಗೆ ರವಾನಿಸುತ್ತಲೇ
ಇಹಲೋಕವನ್ನು ತೊರೆದು ಹೋಗಿದ್ದಾರಂತೆ

ನನ್ನಜ್ಜನ ಹೆಗಲ ಕೂಸುಮರಿಯಾಗಿ
ನಿನ್ನ ಸೌಂದರ್ಯ ಲಹರಿಯ ಗುಣಗಾನ ಕೇಳಿದ್ದು
ಇನ್ನೂ ನೆನಪಿದೆ ಎನಗೆ…!
ನಾನಾಗ ಐದರ ಪೋರ
ಅಜ್ಜನ ದೊಗಳೆ ಅಂಗಿಯ ಜಗ್ಗಿ ಜಗ್ಗಿ
ತೊದಲು ನುಡಿಯಲ್ಲಿ ಕೇಳಿದ್ದೆ
ಅವನು! ಅದೋ ಅವನು….!
ಆ ಹೊಳೆವ ಸುರಸಂದರಾಂಗ ಹುಟ್ಟಿದ್ದು ಹೇಗೆ?
ಅಜ್ಜ ತಡವರಿಸಿದ್ದ….!
ಕಂದಾ ಅವನೊಂದು ಮೇರು ಪ್ರತಿಮೆ…!

ಅವಾಗಾವಾಗ ಕತ್ತು ಕೊಂಕಿಸದೇ
ನಿನ್ನಲ್ಲಿ ದೃಷ್ಟಿ ನಟ್ಟು ತುಂಬಿಕೊಳ್ಳುತ್ತೇನೆ
ನಿನ್ನ ಬೆಳ್ಳಿ ಕಿರಣಗಳ ಹೃದಯದೊಳಗೆ…!
ಮಟ್ಟಸಮ ದೇಹ ನಿಡಿದಾಗುತ್ತದೆ
ನಿನ್ನ ಕಿರಣಗಳ ಆಲಿಂಗನದಲಿ…!

ನಿನ್ನ ಅಮೃತದಂತ ಕಿರಣಗಳನು
ಎರಡು ಕೈಯೊಡ್ಡಿ ಬೊಗಸೆಗೆ ತುಂಬಿಕೊಂಡು
ಮೈಗೆಲ್ಲ ಲೇಪಿಸಿಕೊಳ್ಳುವ ಹುಚ್ಚೆನಗೆ…!
ಅದೆಂಥ ಮಾಂತ್ರಿಕತೆ ನಿನ್ನದು
ಮಾನವ ನಿನ್ನ ಮೇಲೆ ಹೆಜ್ಜೆಯನುರಿದರು
ಮೊದಲಿನ ಹಾಗೇ ಇರುವೆ…!

ಓ ನನ್ನ ಪ್ರಿಯತಮಾ
ನಿನ್ನ ತದ್ರೂಪವ ನನ್ನೊಳಗಿಳಿಸು
ನಿನ್ನ ಕರುಳ ಕಂದಮ್ಮನಿಗೆ ಅಮ್ಮನಾಗುವಾಸೆ
ಗೊತ್ತೆನಗೆ ನಾ ಹೆರಲಾರೆ…!
ನನ್ನ ಉದರದೊಳಗೆ ನಿನ್ನ ಜೀವವಾಗಿಸಿಕೊಳ್ಳುವೆ

ಯಾಕೆ ? ಎನ್ನುವೆಯಾ…!
ಈ ಮನುಜರು ತುಂಬಾ ಸ್ವಾರ್ಥಿಗಳು
ಅಳುನಗುಗಳ ಅರ್ಥವ ಕಳೆದುಕೊಂಡವರು
ಗಾಳಿಯ ನುಂಗಿ ಸವೆದವರು
ಅದಕೆ ಚಂದಿರ ನಿನ್ನ ಸಾಂಗತ್ಯ ಬೇಕೆನಗೆ


  • ಪೀರಸಾಬ ನದಾಫ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading