ಒಂದು ವಿನೂತನ ಪ್ರವಾಸದ ಅನುಭವ

ಆಂಧ್ರಪ್ರದೇಶದ ಒಂದು ಮೂಲೆಯಿಂದ ಒಡಿಸ್ಸಾ ಗಡಿಯವರೆಗೂ ಒಂದು ಲಾಂಗ್ ಡ್ರೈವ್ ಅನುಭವವನ್ನು ಲೇಖಕರಾದ ಮಂಜುಳಾ ಪ್ರಸಾದ್ ಅವರು ಹಂಚಿಕೊಂಡಿದ್ದಾರೆ. ತಪ್ಪದೆ ಪೂರ್ತಿಯಾಗಿ ಓದಿ…

2026ರ ದಸರಾ ರಜೆ ಬಂದ ಮರುದಿನವೇ ನಮ್ಮ ಪ್ರವಾಸ ಪ್ರಾರಂಭವಾಗಿತ್ತು. ಯಾವಾಗಲೂ ಕುಟುಂಬದೊಂದಿಗೆ ಇಲ್ಲವೇ ಶಾಲಾ ಮಕ್ಕಳೊಂದಿಗೆ ಹೋಗುತ್ತಿದ್ದ ಪ್ರವಾಸಗಳು ಈ ಬಾರಿ ವೃತ್ತಿ ಭಾಂದವರೊಡನೆ ಹೊರಟಿದ್ದು ವಿನೂತನವಾಗಿತ್ತು. ಸಹೋದ್ಯೋಗಿ ಸಮಾನ-ಮನಸ್ಕರು ನಿತ್ಯದ ಜಂಜಾಟಗಳಿಗೆ, ಕಾರ್ಯದೊತ್ತಡಗಳಿಗೆ ಒಂದು ಪುಟ್ಟ ವಿರಾಮ ನೀಡಿ ಪರಸ್ಪರ ಒಟ್ಟಾಗಿ ಕಾಲ ಕಳೆಯಲು ಹುಡುಕಿಕೊಂಡ ಮಾರ್ಗವಿದು.

ಹುಟ್ಟಿ ಬೆಳೆದ ದಿನಗಳಿಂದಲೂ ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡೇ ಬೆಳೆದಿದ್ದೆ. ಆದ ಕಾರಣ ಆಂಧ್ರಪ್ರದೇಶ ಮತ್ತು ತೆಲುಗಿನ ಒಡನಾಟ ಜೀವನದ ಒಂದು ಭಾಗವೇ ಆಗಿತ್ತು. ಆದಾಗಿಯೂ ಈ ವಿಶಾಲ ಆಂಧ್ರಪ್ರದೇಶದ ಈ ಮೂಲೆಯಿಂದ ಮತ್ತೊಂದು ಮೂಲೆಗೆ ಅಂದರೆ ಒಡಿಸ್ಸಾ ಗಡಿಯವರೆಗೂ ಒಂದು ಲಾಂಗ್ ಡ್ರೈವ್ ನಲ್ಲಿ ಬರುವ ಪ್ರೇಕ್ಷಣೀಯ ಸ್ಥಳಗಳು ನಮ್ಮ ಪಯಣದ ನಿಲ್ದಾಣಗಳಾಗಿದ್ದವು.

This slideshow requires JavaScript.

 

ಬೆಂಗಳೂರಿಗೆ ಹೋಲಿಸಿದರೆ ವರ್ಷವಿಡೀ ಗರಿಷ್ಠ ತಾಪಮಾನ ಕಾಯ್ದುಕೊಳ್ಳುವ ಆಂಧ್ರಪ್ರದೇಶ ಎಂದರೆ ಮೊದಲಿಗೆ ಭಯವಾಗುವುದು ಅದೇ ಉಷ್ಣತೆಗೆ! ಆದರೆ ನಮ್ಮ ಹವಾನಿಯಂತ್ರಿತ ವಾಹನ ಈ ಬೇಗೆಯನ್ನು ಕಡಿಮೆ ಮಾಡಿ ಪಯಣವನ್ನು ಸುಗಮವಾಗಿಸಿತ್ತು. ಸಾವಿರಾರು ಮೈಲುಗಳ ಸುತ್ತಾಟದಲ್ಲಿ ಮೊದಲು ಸಿಕ್ಕಿದ್ದು ಶ್ರೀಶೈಲಂ ಕ್ಷೇತ್ರ. ಅಲ್ಲಿನ ಪಾತಾಳ ಗಂಗೆ ದೇಹವನ್ನು ಪುನೀತಳಾಗಿಸಿದ್ದರೆ ಮಲ್ಲಿಕಾರ್ಜುನನ ದರ್ಶನ ಭಾಗ್ಯ ಚೈತನ್ಯ ನೀಡಿತ್ತು.

ನಂತರ ವಿಜಯವಾಡದ ಕನಕದುರ್ಗಮ್ಮ ದೇವಿಯ ಅನುಗ್ರಹ ಪಡೆದು ಮಂಗಳಗಿರಿಯ ಪಾನಕಾಲ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ದರ್ಶನ ಮಾಡಿದೆವು. ಅಬ್ಬಾ! ಪುರಾಣ ಕಾಲದಲ್ಲಿ ನಮುಚಿ ರಾಕ್ಷಸನ ಸಂಹಾರ ಮಾಡಿದ್ದ ಉಗ್ರ ನರಸಿಂಹ ಸ್ವಾಮಿಯನ್ನು ಶಾಂತಗೊಳಿಸಲು ಅಂದಿನಿಂದ ಇಂದಿಗೂ ದೇವರ ತೆರೆದ ಬಾಯಿಗೆ ಬೆಲ್ಲದ ಪಾನಕ ಅರ್ಪಿಸಲಾಗುತ್ತಿದೆ ಎಂಬುದು ಒಂದು ರೋಚಕ ಸಂಗತಿ.

ನಂತರ ಕಲಿಯುಗದಲ್ಲೂ ಸತ್ಯ ದೇವರೆಂದೇ ಹೆಸರಾದ ಶ್ರೀ ಸತ್ಯನಾರಾಯಣ ಸ್ವಾಮಿಯ ದರ್ಶನಕ್ಕಾಗಿ ಅನ್ನಾವರಂಗೆ ಬಂದು ಶ್ರೀಮನ್ನಾರಾಯಣನ ಅನುಗ್ರಹ ಪಡೆದೆವು.
ಆಂಧ್ರಪ್ರದೇಶದ ಬಹುಮುಖ್ಯ ಆಕರ್ಷಣೀಯ ನಗರ ವೈಜಾಗ್ ನಲ್ಲಿ ದೇವಾಲಯಗಳು, ಪಾರ್ಕುಗಳು, ಮ್ಯೂಸಿಯಂಗಳು ಎಲ್ಲಕ್ಕೂ ಮುಖ್ಯವಾಗಿ ಬಂಗಾಳಕೊಲ್ಲಿಯ ಬೀಚ್ ಗಳು ತನುಮನಗಳನ್ನು ಚೇತೋಹಾರಿಯನ್ನಾಗಿಸಿದವು. ನಮ್ಮ ಕರಾವಳಿಯ ಅರಬ್ಬಿ ಸಮುದ್ರದ ಅಲೆಗಳಷ್ಟು ತೀವ್ರವಲ್ಲದೆ ಹೋದರೂ ಭಾರೀ ಗಾತ್ರದ ಅಲೆಗಳು ರಿಷಿಕೊಂಡ ಬೀಚಿನಲ್ಲಿ ಆರ್‌ ಕೆ ಬೀಚಿನಲ್ಲಿ ಕಂಡವು. ನೀರಿನೊಂದಿಗೆ ಆಡುವಾಗ ದಣಿವೆಂಬುದೇ ಕಾಣುವುದಿಲ್ಲ ಎಂಬುದು ಮತ್ತೆ ಸಾಬೀತಾಯಿತು.

ಮುಂದಿನ ನಿಲ್ದಾಣದಲ್ಲಿ ಸಿಂಹಾಚಲಂ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಕಣ್ತುಂಬಿಕೊಂಡೆವು. ಇದೀಗ ಆಂಧ್ರಪ್ರದೇಶದ ಕಾಶ್ಮೀರ ಎಂದೇ ಹೆಸರಾಗಿರುವ ಅರಕು ವ್ಯಾಲಿ ನಮ್ಮ ಗಮ್ಯದ ತಾಣ. ಮಲೆನಾಡಿನ ಹಸಿರ ಸೊಬಗು ಅಲ್ಲಿಯೂ ಜೀವ ತಳೆದಿದೆ. ಜೊತೆಗೆ ನೈಸರ್ಗಿಕ ಶಿಲಾಸುರಂಗ ಬೋರಾ ಗುಹೆಗಳು, ಅನಂತಗಿರಿ ವಾಟರ್ ಫಾಲ್ಸ್, ಅರಕು ವ್ಯಾಲಿ, ಸನ್ ರೈಸ್ ಪಾಯಿಂಟ್, ಕಾಫೀ ಮ್ಯೂಸಿಯಂ, ಟ್ರೈಬಲ್ ಮ್ಯೂಸಿಯಂ… ಇತ್ಯಾದಿಗಳು ಕಣ್ಮನಗಳನ್ನು ಸೆಳೆದವು. ಅಲ್ಲಿನ ಬುಡಕಟ್ಟು ಜನರ ಸಾಂಪ್ರದಾಯಿಕ ಉಡುಗೆಯಲ್ಲಿ ಅವರ ವಾದ್ಯಗಳ ತಾಳಕ್ಕೆ ಅವರೊಂದಿಗೆ ಹೆಜ್ಜೆ ಹಾಕಿದ್ದು ಬದುಕಿನಲ್ಲಿ ಮರೆಯಲಾಗದ ಅನುಭವ. ಕೂಗಳತೆಯ ದೂರದಲ್ಲಿ ಓಡಿಸಾ ಇರುವ ಕಾರಣ ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ಉಡುಗೆ ತೊಡುಗೆಗಳಲ್ಲಿ ಅದರ ಛಾಯೆ ಕಾಣುತ್ತದೆ ಹಾಗೂ ಅದರ ಫಲವತ್ತಾದ ಹಚ್ಚ ಹಸುರಿನ ಮೈದಾನ ಹೃದಯವನ್ನು ಪುಳಕಗೊಳಿಸಿತ್ತು.

ಒಟ್ಟಾರೆ ಆಂಧ್ರಪ್ರದೇಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಓಡಾಡಿ ಸಂಭ್ರಮಿಸಿದ್ದು ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿದ ದಾಖಲೆ. ಅದರ ಪುರಾವೆಗೆ ಆಗಾಗ ಕ್ಲಿಕ್ಕಿಸಿದ ಫೋಟೋ ಸಾಕ್ಷಿ ಹೇಳುತ್ತವೆ.


  • ಮಂಜುಳಾ ಪ್ರಸಾದ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading