ಬಾದಾಮಿ ಪ್ರವಾಸ ಕಥನ (ಭಾಗ – ೧)

ದೇಶ ಸುತ್ತಿ ನೋಡು ಕೋಶ ಓದಿ ನೋಡುವ ಜನ ನಾನು…ಕರ್ನಾಟಕದ ಇಂಚಿಂಚು ಸ್ಥಳಗಳನ್ನು ನೋಡುವ ಹಂಬಲ ನನ್ನಲಿದೆ. ಆ ನನ್ನ ಪುಟ್ಟ ಆಸೆಗೆ ನನ್ನ ಗಂಡ, ಮಕ್ಕಳು ಯಾವಾಗಲೂ ಜೊತೆಗಾರರು. ನಾನು ಇತ್ತೀಚಿಗೆ ಬಾದಾಮಿಗೆ ಭೇಟಿ ನೀಡಿದ್ದೆ, ಅದರ ಸೌಂದರ್ಯ ನನ್ನ ಪದಗಳಲ್ಲಿ ನಿಲುಕುವುದಿಲ್ಲ, ಆದರೆ ನನ್ನ ಅನುಭವವನ್ನು ಮಾತ್ರ ನನ್ನ ಪ್ರವಾಸ ಕಥನದಲ್ಲಿ ಹಂಚಿಕೊಳ್ಳುತ್ತಿದ್ದೇನೆ ತಪ್ಪದೆ ಓದಿ…

ಬಾದಾಮಿಯ ದೇವಾಲಯಗಳು ಚಾಲುಕ್ಯರ ಕಾಲದಲ್ಲಿ ನಿರ್ಮಿತವಾಯಿತು ಎಂದು ಅಲ್ಲಲ್ಲಿ ದಾಖಲೆಗಳಿವೆ. ಅದರ ಇತಿಹಾಸ ದೊಡ್ಡದಿದೆ. ಇದರ ಬಗ್ಗೆ ಇತಿಹಾಸಕಾರರು, ಸಂಶೋಧಕರು ಸಾಕಷ್ಟು ಪುಸ್ತಕಗಳನ್ನ ತಂದಿದ್ದಾರೆ.

ಬಾದಾಮಿಯನ್ನು ಕಣ್ಣಾರೆ ಹತ್ತಿರದಿಂದ ನೋಡಿದಾಗ ನನಗೆ ಅನಿಸಿದ್ದು ಬಾದಾಮಿಯನ್ನು ಬರಹದಲ್ಲಾಗಲಿ ಅಥವಾ ಛಾಯಾಚಿತ್ರದಲ್ಲಾಗಲಿ ಹಿಡಿದಿಡಲು ಸಾಧ್ಯವಿಲ್ಲ. ಅದರ ಸೌಂದರ್ಯ ಎಲ್ಲವನ್ನು ಮೀರಿದ್ದು. ಬಾದಾಮಿಯ ನನ್ನ ಪ್ರವಾಸ ಹೇಗಿತ್ತು ಅಂತ ಮಾತ್ರ ಇಲ್ಲಿ ಹಂಚಿಕೊಳ್ಳುವೆ.

****
ನಮ್ಮ ಪ್ರಯಾಣ ಎಂದಿನಂತೆ ಹೊರಡುವ ಹಿಂದಿನ ರಾತ್ರಿ ನಿಗದಿಯಾಯಿತು. ಬೆಂಗಳೂರಿನಿಂದ ಸೀದಾ ಬಾದಾಮಿ, ಪಟ್ಟದಕಲ್ಲು, ಐಹೊಳೆ ಅಂತ ನಮ್ಮ ಯಜಮಾನಪ್ಪ ನಮ್ಮ ಪ್ರಯಾಣದ ಮ್ಯಾಪ್ ರಾತ್ರಿಯೇ ರೆಡಿ ಮಾಡಿಟ್ಟ. ರಾತ್ರಿ ಬಟ್ಟೆಯನ್ನೆಲ್ಲ ಬ್ಯಾಗ್ ನೊಳಗೆ ತುಂಬಿಸಿಟ್ಟೆ. ಬೆಳಗ್ಗೆ ಐದು ಗಂಟೆಗೆ ನಮ್ಮ ಪ್ರಯಾಣ ಶುರುವಾಗಿ ಬಾದಾಮಿಯತ್ತ ಹೊರಟಿತು. ಹೈವೆ ನೋಡಿ ಸಾಕಾಗಿದೆ. ಈ ಸರಿ ಹಳ್ಳಿಗಳ ಮಧ್ಯೆ ಹೋಗೋಣ, ಆಗ ಹಳ್ಳಿಯ ಸೊಗಡು ಮಕ್ಕಳು ಸವಿಬಹುದು ಅಂತ ದೊಡ್ಡ ಆಲೋಚನೆ ಮಾಡಿ ಪದ್ದಣ್ಣ ಹರಿಹರದಿಂದ ಬಾದಾಮಿ ಹೋಗೋಣ ಅಂತ ಗೂಗಲ್ ಪ್ಪನ ಮೊರೆ ಹೋದ.

ಗೂಗಲಪ್ಪ ಗೊತ್ತಲ್ಲ… ಹಳ್ಳಿ ತೋರಸು ಅಂದ್ರೆ ಗದ್ದೆ, ನಾಲೆ, ಪೈರು ಎಲ್ಲ ಸುತ್ತಾಡಿಸಿ ಬಾದಾಮಿಯನ್ನ ಮೂರು ಗಂಟೆ ಮುಟ್ಟಸ್ತು. ಹಳ್ಳಿ ರಸ್ತೆ ಅಂದ್ರೆ ಬೆಂಗಳೂರು ಸುತ್ತಮುತ್ತಲಿನ ಹಳ್ಳಿ ತರ ಇರಲಿಲ್ಲ. ರಸ್ತೆಗೆ ಓಲಾಡಿ ಓಲಾಡಿ ಮೈಕೈ ಹಣ್ಣ ಹಾಣ್ಣಾಗಿ ಹೋಗಿತ್ತು. ಬಾದಾಮಿಯಲ್ಲಿ ಒಳ್ಳೆ ರೂಮ್ ಮಾಡಬೇಕು ಅಂತ ಪದ್ದಣ್ಣನಿಗೆ ಮೊದಲೇ ಷರತ್ತು ವಿಧಿಸಲಾಗಿತ್ತು. ಅದರಂತೆ ಪದ್ದಣ್ಣ ಒಳ್ಳೆ ಹೋಟೆಲ್ ನಲ್ಲಿ ರೂಮ್ ವ್ಯವಸ್ಥೆ ಮಾಡಿದ. ರೂಮ್ ಒಳಕ್ಕೆ ಹೋಗ್ತಿದ್ದ ಹಾಗೆ ಎಲ್ಲರೂ ದಬ್ಬಾಕೊಂಡು ಆರು ಗಂಟೆವರೆಗೂ ಏಳಲಿಲ್ಲ. ಆಮೇಲೆ ಬನಶಂಕರಮ್ಮನ ದರ್ಶನ ಮಾಡೋಕೆ ಎಲ್ರು ಹೊರಟ್ವಿ.

ಬಾದಾಮಿ ಬನಶಂಕರಮ್ಮ ನಮ್ಮ ಮನೆ ದೇವ್ರು. ಜಿಟಿ ಜಿಟಿ ಮಳೆಯ ಮಧ್ಯೆ ಯಾವ ಸದ್ದು ಗದ್ದಲವಿಲ್ಲದೆ ತಾಯಿ ದರ್ಶನ ಪಡೆದು ಹೊರಗೆ ಬಂದೆವು.

ಅಷ್ಟೋತ್ತಿಗೆ ಸಮಯ 7.30 ಆಗಿತ್ತು. ಹೊಟ್ಟೆ ಒಂದು ಇದೆಯಲ್ಲ, ನನ್ನ ಸಮಯ ಆಯ್ತು ಏನಾದ್ರೂ ಹಾಕ್ರಿ ಅಂತ ಬಡ್ಕೋತಿತ್ತು. ಹೊಟ್ಟೆ ಮಾತು ಕೇಳ್ಕೊಂಡು ಅಲ್ಲೇ ಇದ್ದ ಪುಟ್ಟದಾದ ಹೋಟೆಲ್ ಒಳಗೆ ತಿನ್ನೋಕೆ ಹೋದ್ವಿ. ಬೆಂಗಳೂರು ಬಿಡುವ ಮೊದಲೇ ಪದ್ದಣ್ಣನಿಗೆ ನಾನು ಉತ್ತರ ಕರ್ನಾಟಕದಲ್ಲಿ ಎಲ್ಲೇ ಹೋದ್ರು ರೊಟ್ಟಿ ಊಟ ಮಾಡಿಸಬೇಕು ಅಂತ ನನ್ನ ಬಯಕೆಯನ್ನು ಮುಂದಿಟ್ಟಿದ್ದೆ.

ಪದ್ದಣ್ಣ ಮಾತಿಗೆ ಬದ್ಧನಾಗಿ ನನಗೆ ರೊಟ್ಟಿ ಊಟ ಆರ್ಡರ್ ಮಾಡಿದ. ಪದ್ದಣ್ಣ, ಮಕ್ಕಳು ದೋಸೆ ಮಂದಿ. ಹಾಗಾಗಿ ತಮಗೆಲ್ಲ ದೋಸೆ ಆರ್ಡರ್ ಮಾಡಿದ್ರು.ನನ್ನ ರೊಟ್ಟಿ ಊಟ ಟೇಬಲ್ ಮೇಲೆ ಬಂದಾಗ…ರೊಟ್ಟಿ ನೋಡುತ್ತಿದ್ದಂತೆ ಬಾಯಲ್ಲಿ ಜುಳು ಜುಳು ನೀರು ಕಾರಂಜಿಯಂತೆ ಹರಿಯ ತೊಡಗಿತು. ಎರಡು ರೊಟ್ಟಿ ತಿನ್ನುವಷ್ಟರಲ್ಲಿ ಹೊಟ್ಟೆ ಭಾರ ಆಗೋಕೆ ಶುರು ಆಯ್ತು. ಹೊಟ್ಟೆಗೆ ಅನ್ನ ಸಾರು ತಿನ್ನೋಕೆ ಜಾಗ ಖಾಲಿ ಇರಲಿಲ್ಲ. ಆದ್ರೆ ಅನ್ನಮ್ ಪರಬ್ರಹ್ಮ ಸ್ವರೂಪಂ ಅಂತಾರೆ. ಅದನ್ನ ಹೇಗೆ ಬಿಡೋದು ಅಂತ ಉಪಾಯ ಮಾಡಿ ಮಕ್ಕಳಿಗೆ “ದೋಸೆ, ಹೊಟ್ಟೆಗೆ ಎಲ್ಲಿ ಸಾಕಾಗ್ಬೇಕು… ಸ್ವಲ್ಪ ಅನ್ನ ಸಾರು ತಿನ್ರಿ” ಅಂತ ಬೈದು ಬೈದು ಬಾಯಿಗೆ ತುರುಕ ತೊಡಗಿದೆ. ಎರಡು ತುತ್ತು ತಿನ್ನುತ್ತಿದ್ದಂತೆ ನೊಣವೊಂದು ಈಜಲು ನನ್ನ ಮೊಸರಿಗೆ ಹಾರಿತು. ಹಾರೋ ಮುಂಚೆ ಆಳ ನೋಡಿ ಹಾರಬೇಕು ಅಂತ ದೊಡ್ಡೋರು ಸುಮ್ನೆ ಹೇಳಿಲ್ಲ. ಬುದ್ದಿಗೇಡಿ ನೊಣ ಆತುರದಲ್ಲಿ ಆಳ ನೋಡದೆ ನನ್ನ ಮೊಸರಿಗೆ ಹಾರಿ ಪ್ರಾಣ ಬಿಟ್ಟಿತು. ಅಲ್ಲಿಗೆ ನನ್ನ ಊಟ ಸಮಾಪ್ತಿ ಆಯ್ತು. ಇನ್ನೂ ನನ್ನ ಮಗ ಸಕ್ಕರೆಯ ದೋಸೆ ಇನ್ನೂ ಅರ್ಧ ಭಾಗ ಇತ್ತು. ಅಷ್ಟೋತ್ತಿಗೆ ಸಕ್ಕರೆ “ಅಪ್ಪ್ಯಾ, ಅಮ್ಮ್ಯಾ”…. ಅಂತ ಕೂಗೋಕೆ ಶುರು ಮಾಡಿದ. ಯಾಕೋ ಬಾದಾಮಿಗೆ ಬರತಿದ್ದ ಹಾಗೆ ನನ್ನ ವಂಶೋದ್ದಾರಕರ ಭಾಷೇನೂ ಬದಲಾಗೋಕೆ ಶುರು ಆಗಿತ್ತು. ಭಾಷೆಯ ಶೈಲಿ ಯಾವುದಾದರೇನು ಕನ್ನಡವೇ ಅಲ್ಲವೇ ಅಂತ ತಲೆ ಕೆಡಿಸ್ಕೊಳ್ಳದೆ ಅವನು ಬೆರಳು ತೋರಿಸಿದ ದೋಸೆಯತ್ತ ಕಣ್ಣು ಹಾಯಿಸಿದೇವು. ನೋಡಿದ್ರೆ ದೊಡ್ಡ ಆಘಾತ… ಅದೇನು ಗೊತ್ತಾ…. ನೊಣ ಈಜು ಕಲಿಯೋಕೆ ನನ್ನ ಮೊಸರಿಗೆ ಹಾರಿದ್ರೆ, ಸೊಳ್ಳೆ ಈಜು ಕಲಿಯೋಕೆ ದೋಸೆ ಹಿಟ್ಟಿನೊಳಕ್ಕೆ ಹಾರಿತ್ತು. ಅದು ದೋಸೆ ಆಗಿ ತಟ್ಟೆಗೆ ಬಂದಿತು. ಇನ್ನೂ ನಾವು ಬಾಯಿ ತೆರೆದ್ರೆ ಈ ನೊಣ ಇಲ್ಲ ಸೊಳ್ಳೆ ನಮಗೆ ವಿಟಮಿನ್ ಆಗಿಯೇ ಬೀಳ್ತಾವೆ ಅಂತ .. ಎಲ್ರು ಬಾಯಿ ಮುಚ್ಚಕೊಂಡು ಕಣ್ಣಲ್ಲೇ “ಸಾಕು ಎದ್ದೇಳು” ಅಂತ ಸನ್ನೆ ಮಾಡಿ ದೋಸೆಗೆ ಇಂತಿಶ್ರೀ ಹಾಡಿದ್ವಿ. ಸಪ್ಲೈಯೆರ್ ಕರದು ನೋಡಪ್ಪಾ ಇದು ಅಂತ ತೋರಸಿದ್ರೆ ಹೀ… ಹೀ… ಅಂತ ನಗುತ್ತಾ… “ಇಲ್ಲಿ ನೊಣ, ಸೊಳ್ಳೆ ಬಾಳರೀ… ಅದನ್ನ ಸೈಡಿಟ್ಟು ತಿನ್ರಿ…. ಏನು ಆಗೋಲ್ಲ”…. ಅಂತ ಹೇಳ್ದಾಗ… ಪದ್ದಣ್ಣ, ಮಕ್ಕಳ ಮುಖ ಪೆಚ್ಚಾಗಿತ್ತು. ಅದನ್ನು ನೋಡಿ ನಾನು ನಗುತ್ತಾ ಹೊರಕ್ಕೆ ಬಂದೆ.

ಮುಂದೆವರೆಯುತ್ತದೆ …


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading