”ಶಾಂತಿ ಪ್ರಿಯ ಭಾರತ ಅಣು ಬಾಂಬ್ ತಯಾರಿಸುವುದು ಬೇಕೆ ಅಥವ ಬೇಡವೇ?”- ನಾನು ಏಳನೇಯ ತರಗತಿಯಲ್ಲಿ ಇದ್ದಾಗ ಭಾಗವಹಿಸಿದ ಒಂದು ಚರ್ಚಾಸ್ಪರ್ಧೆಯ ನೆನಪು. – ಎನ್.ವಿ.ರಘುರಾಂ, ತಪ್ಪದೆ ಮುಂದೆ ಓದಿ…
ಸಂದರ್ಭ : ಆಕ್ಟೋಬರ್ ೨, ೧೯೬೯ – ಗಾಂಧೀಜಿಯವರ ಜನ್ಮ ಶತಮಾನೋತ್ಸವದ ಆಚರಣೆ.
ಸ್ಥಳ: ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ತೀರ್ಥಹಳ್ಳಿ
‘ನೋಡಿ, ಈ ಸಾರಿ ಗಾಂಧೀಜಿಯವರ ಜನ್ಮ ಶತಮಾನೋತ್ಸವ ಆಚರಣೆ ಅಂಗವಾಗಿ ಅನೇಕ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತಿದೆ. ನಿಮಗೆಲ್ಲ ದೇಶಭಕ್ತಿ ಗೀತೆ, ಗಾಯನ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಈ ವಾರ ಮಾಡುತ್ತೇವೆ. ಮುಂದಿನವಾರ ಅಕ್ಟೋಬರ್ ಎರಡರಂದು ನಡೆಯುವ ಸಮಾರಂಭದಲ್ಲಿ ಗೆದ್ದವರಿಗೆ ಬಹುಮಾನ ಕೊಡಲಾಗುವುದು’ ಎಂದು ಮೇಷ್ಟ್ರು ಹೇಳಿ, ‘ಈಗ ನೀವೆಲ್ಲಾ ಯಾವ ಸ್ಪರ್ಧೆಗಳಿಗೆ ಹೆಸರು ಕೊಡುತ್ತೀರಿ, ಹೇಳಿ’ ಎಂದಾಗ ಎಲ್ಲರಿಗೂ ಖುಷಿಯಾಯಿತು.
ನಾನು ಹಾಡು ಹೇಳಲಾರೆ, ನಾಟಕ ಮಾಡುವುದು ದೂರವೇ ಉಳಿಯಿತು. ನನಗೆ ಇಷ್ಟವಾದದ್ದು ಪ್ರಬಂಧ ಸ್ಪರ್ಧೆ. ಪ್ರತಿ ವರ್ಷ ನಡೆಯುವ ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಮೂರು ಬಹುಮಾನಗಳಲ್ಲಿ ಒಂದಂತು ಖಾತರಿಯಾಗಿ ತೆಗೆದುಕೊಳ್ಳುತ್ತಿದ್ದೆ. ‘ಈ ಸಾರಿಯ ಪ್ರಬಂಧ ಸ್ಪರ್ಧೆಯ ವಿಷಯ ‘ಗಾಂಧೀಜಿಯವರ ಬಾಲ್ಯ ಮತ್ತು ಸ್ವಾತಂತ್ರ್ಯ ಹೋರಾಟ’ ಎಂದು ಮೇಷ್ಟ್ರು ಹೇಳಿದಾಗ ನಾನು ಮೊದಲು ಕೈ ಎತ್ತಿದೆ. ಅವರು ನನ್ನ ಹೆಸರು ಬರೆದುಕೊಂಡರು.
ಇನ್ನು ಉಳಿದಿದ್ದು ಚರ್ಚಾಸ್ಪರ್ಧೆ ಮಾತ್ರ. ನನಗೆ ಮಾತನಾಡಲೇನೋ ಇಷ್ಟ. ಆದರೆ ಸಭೆಯಲ್ಲಿ ಮಾತನಾಡುವಾಗ ಹೆದರಿಕೆ ಆಗುತ್ತೆ. ಹಾಗಾಗಿ ಹೆಸರು ಕೊಡುವುದೋ ಅಥವ ಬೇಡವೋ ಎಂದು ಯೋಚಿಸುತ್ತಾ ಇದ್ದೆ. ಅದೇ ಸಮಯದಲ್ಲಿ ಈ ಸಾರಿಯ ಚರ್ಚಾಸ್ಪರ್ಧೆಯ ವಿಷಯ ‘ಶಾಂತಿ ಪ್ರಿಯ ಭಾರತ ಅಣು ಬಾಂಬ್ ತಯಾರಿಸುವುದು ಬೇಕೆ ಅಥವ ಬೇಡವೇ?’ ಎನ್ನುತ್ತಾ ‘ಅಣುಬಾಂಬು ಬೇಡವೆನ್ನುವವರು ಪರವಾಗಿ, ಬೇಕು ಎನ್ನುವವರು ವಿರೋಧವಾಗಿ ಮಾತನಾಡಬೇಕು’ ಎಂದು ಪ್ರಕಟಿಸಿದರು. ‘ಈಗ ಪರವಾಗಿ ಮಾತನಾಡುವವರು ಹೆಸರು ಕೊಡಿ’ ಎಂದಾಗ ಪ್ರಥಮಬಾರಿ ಧೈರ್ಯ ಮಾಡಿ ನಾನು ಕೈ ಎತ್ತುವುದರೊಳಗೆ ನನಗಿಂತ ಮೊದಲು ನನ್ನ ಸ್ನೇಹಿತ ರಾಘವೇಂದ್ರ ಕೈ ಎತ್ತಿದ್ದ. ನಂತರ ಇನ್ನೂ ಎಳೆಂಟು ಹುಡುಗರು ಕೈ ಎತ್ತಿದರು. ನಾನು ಮೊದಲು ಮಾತನಾಡುವ ಅವಕಾಶವಿಲ್ಲವೆಂದು ಗೊತ್ತಾಗಿ ಕೈ ಎತ್ತಲಿಲ್ಲ. ಈಗ ‘ಬೇಕು’ ಎನ್ನುವವರು ಕೈ ಎತ್ತಿ ಎಂದಾಗ ನಾನು ಧೈರ್ಯ ಮಾಡಿ ಮೊದಲಿಗೆ ಕೈ ಎತ್ತಿಯೇ ಬಿಟ್ಟೆ. ಆದರೆ ನನ್ನ ಜೊತೆಗೆ ಇನ್ನಿಬ್ಬರು ಮಾತ್ರ ನನ್ನ ನಂತರ ಕೈ ಎತ್ತಿದರು. ಕೊನೆಗೆ ಉಪಾಧ್ಯಾಯರು ಹೆಸರು ಕೊಟ್ಟಿರುವವರಲ್ಲಿ ಕೆಲವರನ್ನು ಆ ಕಡೆಯಿಂದ ಈ ಕಡೆಗೆ ಹಾಕಿ, ಎರಡೂ ಕಡೆ ಐದು ಹುಡುಗರು ಆಗುವಂತೆ ಮಾಡಿದರು. ‘ಬೇಕು’ ಎನ್ನುವವರ ಸಾಲಿನಲ್ಲಿ ನನ್ನ ಹೆಸರೇ ಮೊದಲಿತ್ತು.

ಫೋಟೋ ಕೃಪೆ : GOOGLE ಸಾಂದರ್ಭಿಕ ಚಿತ್ರ
ಸರಿ, ಆ ದಿನದಿಂದಲೇ ನನ್ನ ತಯಾರಿ ಪ್ರಾರಂಭವಾಯಿತು. ಪ್ರಬಂಧ ಸ್ಪರ್ಧೆಗೆ ತಯಾರಿ ಮಾಡಿಕೊಳ್ಳುವುದು ಕಷ್ಟದ ಕೆಲಸವಾಗಿರಲಿಲ್ಲ. ನಮ್ಮ ಮನೆಗೆ ಸುಧಾ, ಕಸ್ತೂರಿ, ಪ್ರಜಾವಾಣಿ ಬರುತ್ತಿತ್ತು. ಕಳೆದ ಒಂದು ತಿಂಗಳಿನಿಂದ ಶತಮಾನೋತ್ಸವ ಅಂಗವಾಗಿ ಅನೇಕ ವಿಷಯಗಳು ಅವುಗಳಲ್ಲಿ ಬರುತ್ತಿತ್ತು. ಅವೆಲ್ಲಾವನ್ನು ಗುಡ್ಡೆ ಹಾಕಿ ಇಟ್ಟುಕೊಂಡು ಒಂದುಕಡೆ ಬರೆದುಕೊಂಡೆ. ಉಪ್ಪಿನ ಸತ್ಯಾಗ್ರಹ, ದುಂಡು ಮೇಜಿನ ಪರಿಷತ್ತು, ಚಲೇಜಾವ್ ಚಳುವಳಿ, ಮಾಡು ಇಲ್ಲವೇ ಮಡಿ’ ಹೀಗೆ ಬಾರಿ ಇತಿಹಾಸವೇ ಸಿಕ್ಕಿತು. ಅದನ್ನು ಮೂರು ಪುಟಗಳಿಗೆ ಇಳಿಸಲು ಕಷ್ಟಪಡ ಬೇಕಾಯಿತು. ಅಂತೂ ಎರಡು ಸಾರಿ ತಿದ್ದಿ, ತಿದ್ದಿ ಮೂರು ಪುಟಕ್ಕೆ ಇಳಿಸಿದೆ.
ಇನ್ನು ಚರ್ಚಾಸ್ಪರ್ಧೆಗೆ ತಯಾರಿ ಮಾಡಿಕೊಳ್ಳಬೇಕಿತ್ತು. ಎರಡನೇಯ ಮಹಾಯುದ್ಧದಲ್ಲಿ ಅಮೇರಿಕಾದವರು ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದರು. ಆಗ ಅಪಾರ ಪ್ರಮಾಣದ ಸಾವು, ನೋವು ಸಂಭವಿಸಿತು. ಆಗ ಜಪಾನ್ ಶರಣಾಯಿತು. ಅಣುಬಾಂಬ್ ವಿಕಿರಣದ ದೆಸೆಯಿಂದ ಈಗಲೂ ಅಲ್ಲಿ ಬಹಳ ಜನ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಪಾಠದಲ್ಲಿ ಬಂದಿರುವುದು ಬಿಟ್ಟರೆ ಇನ್ನೇನು ಗೊತ್ತಿರಲಿಲ್ಲ. ಅದರಲ್ಲೂ ನಾನು ಅಣುಬಾಂಬ್ ಬೇಕು ಎಂದು ಹೇಳ ಬೇಕು. ಹಾಗಾಗಿ ಇದನ್ನು ಹೇಳಲು ಆಗುತ್ತದೆಯೇ? ಯಾರನ್ನು ಕೇಳುವುದು. ನನ್ನ ಮೂರು ಅಣ್ಣಂದಿರು ಮೂರು ಬೇರೆ ಊರುಗಳಲ್ಲಿ ಓದುತ್ತಿದ್ದರು. ಯೋಚನೆಯಲ್ಲೇ ದಿನಗಳು ಕಳೆದವು. ಇನ್ನು ನಾಳೆಯೇ ಸ್ಪರ್ಧೆ ಎನ್ನುವಾಗ ಪಕ್ಕದ ಮನೆಯಲ್ಲಿ ವಾಸವಾಗಿದ್ದ ನಮ್ಮ ಮಾವನವರ ಮನೆಗೆ ಅವರ ಮಗ ವಿಜಿ ಬೆಂಗಳೂರಿನ ಹಾಸ್ಟೆಲ್ ನಿಂದ ಮೂರು ದಿವಸ ರಜಕ್ಕೆ ಊರಿಗೆ ಬಂದಿದ್ದಾನೆ ಎಂದು ಅಮ್ಮ ಹೇಳಿದರು. ಅವರ ಮನೆಗೆ ಓಡಿದೆ. ವಿಷಯ ತಿಳಿಸಿದಾಗ, ಅವನು ನಸು ನಕ್ಕು ತನ್ನ ರೂಮಿಗೆ ಕರೆದುಕೊಂಡು ಹೋದ. ಅತ್ತೆ ಅಲ್ಲಿಗೇ ಕೋಡುಬಳೆ ತಂದು ಕೊಟ್ಟರು.
‘ಈಗ ಹೇಳು ಮಾರಾಯ’ ಎಂದ. ನಾನು ಪ್ರಬಂಧ ಸ್ಪರ್ಧೆಯ ವಿಷಯ ಹೇಳಿ, ಮಾಡಿಕೊಂಡಿರುವ ತಯಾರಿ ಎಲ್ಲಾ ತೋರಿಸಿದೆ. ‘ಪರವಾಗಿಲ್ಲ, ಜೋರಾಗೇ ತಯಾರಿ ನಡೆಸಿದ್ದೀಯಾ, ಹಾಗಾದರೆ ಈ ಸಾರಿ ಬಹುಮಾನ ಸಿಗುತ್ತದೆ ಬಿಡು’ ಎಂದ. ನನಗೆ ಖುಷಿಯಾಯಿತು. ‘ಈಗ ನೋಡು ಪ್ರಬಂಧ ಸ್ಪರ್ಧೆಯಲ್ಲಿ ಕೊಟ್ಟಿರುವ ವಿಷಯದಲ್ಲಿ ಗಾಂಧಿಯವರ ಬಾಲ್ಯ ಒಂದು ವಿಷಯವಾದರೆ ಇನ್ನೊಂದು ವಿಷಯ ಸ್ವಾತಂತ್ರ್ಯ ಹೋರಾಟ. ಅದಕ್ಕೆ ಈ ಎರಡೂ ವಿಷಯಗಳ ಬಗ್ಗೆ ಸಮನಾಗಿ ಬರೆಯಬೇಕು. ಬಾಲ್ಯದ ವಿಷಯ ಎಲ್ಲರೂ ಸರಿಯಾಗಿ ಬರೆಯಲ್ಲ. ಗಾಂಧೀಜಿ ಸುಳ್ಳು ಹೇಳಿದ ಘಟನೆ ಬಗ್ಗೆ ಕೂಡ ಸೇರಿಸು. ಆದರೆ ಕೊನೆಯಲ್ಲಿ ‘ಅವರ ಜೀವಮಾನದಲ್ಲಿ ಮುಂದೆ ಎಂದೂ ಸುಳ್ಳು ಹೇಳಲಿಲ್ಲ’ ಎಂದು ಮರೆಯದೇ ಬರೆಯಬೇಕು ಎಂದ. ನಾನು ಗುರುತು ಹಾಕಿಕೊಂಡೆ.
ಈಗ ಚರ್ಚಾಸ್ಪರ್ಧೆ ಕಡೆಗೆ ವಿಷಯ ತಿರುಗಿತು. ನಾನು ‘ಅಣು ಬಾಂಬ್ ಮಾಡಬೇಕೆಂದು ವಾದ ಮಾಡಬೇಕು’ ಎಂದಾಗ ಅವನು ಸಣ್ಣದಾಗಿ ನಗುತ್ತಾ ‘ಅದನ್ನು ಏಕೆ ಆರಿಸಿಕೊಂಡೆ?’ ಎಂದು ಕೇಳಿದ. ‘ಯಾವುದೇ ವಿಷಯವಾಗಲಿ ನಾನೇ ಮೊದಲು ಮಾತನಾಡಬೇಕು ಎಂಬ ಆಸೆಯಿತ್ತು. ಆದರೆ ನಾನು ಕೈ ಎತ್ತುವುದರೊಳಗೆ ನನ್ನ ಸ್ನೇಹಿತ ಕೈ ಎತ್ತಿ ಬಿಟ್ಟಿದ್ದ. ವಿರೋಧವಾಗಿ ಆದರೂ ಪರವಾಗಿಲ್ಲ, ಮೊದಲು ಮಾತನಾಡ ಬೇಕು ಎಂದು ಇದಕ್ಕೆ ಹೆಸರು ಕೊಟ್ಟೆ’ ಎಂದು ಹೇಳಿದಾಗ, ನನ್ನ ಬುದ್ಧಿ ಗೊತ್ತಿದ್ದ ಅವನಿಗೆ ಆಶ್ಚರ್ಯವಾಗಲಿಲ್ಲ. ಅವನು ಮತ್ತೋಮ್ಮೆ ನಕ್ಕ. ಅಷ್ಟು ಹೊತ್ತಿಗೆ ಅತ್ತೆ ಕಾಫೀ ತಂದು ಕೊಟ್ಟರು. ಕಾಫೀ ಕುಡಿಯುತ್ತಾ ‘ನಾನು ನಿನಗೆ ಸ್ಪರ್ಧೆಯಲ್ಲಿ ಚಪ್ಪಾಳೆ ಶಬ್ದ ಕೇಳುವ ರೀತಿಯಲ್ಲಿ ಹೇಳಿ ಕೊಡುತ್ತೇನೆ, ಆಗ ನನಗೆ ಏನ್ ಕೊಡುತ್ತೀಯಾ?’ ಎಂದ. ಪ್ರತಿಸಾರಿ ಗಾಂಧೀ ಜಯಂತಿ ದಿನ ನಮ್ಮ ಮನೆಯಲ್ಲಿ ಸಿಹಿ ಮಾಡಿ ಮನೆಗೆ ಬಂದವರಿಗೆ ಕೊಡುತ್ತಿದ್ದುದು ನನಗೆ ಗೊತ್ತಿತ್ತು. ಅದನ್ನೇ ಕೊಡುತ್ತೇನೆ ಎಂದೆ. ಅವನು ನಕ್ಕು ಖಾಲಿಯಾದ ಕಾಫೀ ಲೋಟ ಒಳಗೆ ಇಟ್ಟು ಬಂದ.

‘ಈ ಅಣುಬಾಂಬ್ ಹಾಕಿದರೆ ಲಕ್ಷಾಂತರ ಜನರು ಸಾಯುತ್ತಾರೆ. ಊರಿಗೆ ಊರೇ ಭಸ್ಮವಾಗುತ್ತದೆ. ಅದರಿಂದ ಬರುವ ವಿಕರಣದಿಂದ ಬದುಕುಳಿದ ಜನರು ಜೀವಮಾನ ಪೂರ ನರಕ ಅನುಭವಿಸುತ್ತಾರೆ…’ ಎಂದು ಹೇಳ ತೊಡಗಿದ. ಇದೇನಿದು? ವಿರೋಧವಾಗಿ ಮಾತನಾಡ ಬೇಕೆಂದರೆ, ಪರವಾಗಿ ಮಾತನಾಡುತ್ತಿದ್ದಾನಲ್ಲ. ನನಗೆ ಸಂಶಯ ಬಂದು ಕೇಳಿಯೇ ಬಿಟ್ಟೆ. ‘ಅಲ್ಲ, ನಾನು ವಿರೋಧವಾಗಿ ಮಾತನಾಡಬೇಕೆಂದರೆ ನೀನು ಪರವಾಗಿ ಹೇಳುತ್ತಿದ್ದಿಯಲ್ಲ!’ ಎಂದೆ. ಅಗ ಅವನು ನಕ್ಕು ‘ನೋಡು ಇವೆಲ್ಲ ಬಾಂಬ್ ಬೇಡ ಎನ್ನುವವರು ಹೇಳುತ್ತಾರೆ. ನೀನು ಅವರು ಹೀಗೆಲ್ಲಾ ಹೇಳುತ್ತಾರೆ ಎಂದು ಹೇಳಿ, ಇಲ್ಲಿ ವಿಷಯವಿರುವುದು ಬಾಂಬ್ ಹಾಕಬೇಕೆ ಅಥವ ಬೇಡವೇ ಎಂದಲ್ಲ, ವಿಷಯವಿರುವುದು ಬಾಂಬ್ ತಯಾರಿಸಬೇಕೆ ಅಥವ ಬೇಡವೇ ಎಂದು, ಹಾಗಾಗಿ ಅವರ ವಾದ ನಾನು ಒಪ್ಪುವುದಿಲ್ಲ ಎಂದು ಹೇಳಿ ನಿನ್ನ ಭಾಷಣ ಪ್ರಾರಂಭ ಮಾಡು. ಆಗ ಅವರೂ ಒಂದು ಕ್ಷಣ ಗಲಿಬಿಲಿಯಾಗುತ್ತಾರೆ, ನಂತರ ನಿನಗೆ ಚಪ್ಪಾಳೆ ಬೀಳುತ್ತದೆ’ ಎಂದ. ನನಗೆ ಈಗ ಖುಷಿಯಾಯಿತು. ಅತ್ತೆ ಬಂದು ‘ಏನಾದ್ರು ಬೇಕಾ’ ಎಂದು ಕೇಳಿಕೊಂಡು ಹೋದರು. ‘ಬಾಂಬು, ಗೀಂಬು ಎಂಬ ಪದಗಳನ್ನು ಕೇಳಿಸಿಕೊಂಡು ಹೆದರಿಕೆಗೊಂಡು ಬಂದರೇನೋ ಪಾಪ’ ಎಂದ. ಇಬ್ಬರಿಗೂ ನಗು ಬಂತು.
‘ನೋಡು, ನಿನಗೆ ಪರೀಕ್ಷೆಯೆಂದರೆ ಹೆದರಿಕೆ ಇದೆಯಾ?’ ಎಂದು ಕೇಳಿದ. ನಾನು ಯಾವತ್ತು ಪರೀಕ್ಷೆಗಳಿಗೆ ಹೆದರಿಕೊಂಡು ಹೋಗಿರುವ ಸಂದರ್ಭವೇ ಇರಲಿಲ್ಲ. ನನ್ನ ಉತ್ತರಕ್ಕೆ ಕಾಯದೇ ‘ನೀನು ಎಲ್ಲಾ ಓದಿರುತ್ತಿದ್ದೆ, ಅದಕ್ಕೆ ನಿನಗೆ ಹೆದರಿಕೆ ಆಗಲ್ಲ’ ಎಂದ. ನಾನು ಹೌದು ಎಂಬಂತೆ ತಲೆ ಅಲ್ಲಾಡಿಸಿದೆ. ‘ನಿನ್ನ ಕ್ಲಾಸಿನಲ್ಲಿ ಗಟ್ಟಿಮಟ್ಟಾದ ಹುಡುಗ ಯಾರು?’ ಎಂದ. ಇದೇನಿದು, ಇದಕ್ಕೂ ಸ್ಪರ್ಧೆಯ ವಿಷಯಕ್ಕೂ ಏನು ಸಂಬಂಧ ಅರ್ಥವಾಗಲಿಲ್ಲ. ಆದರೂ ಯೋಚಿಸಿದೆ. ನನ್ನ ಪ್ರಕಾರ ಶಾಟ್ ಪುಟ್ ನಲ್ಲಿ ಕಬ್ಬಿಣದ ಭಾರವಾದ ಬಾಲ್ ಎಲ್ಲರಿಗಿಂತ ದೂರಕ್ಕೆ ಎಸೆಯುತ್ತಿದ್ದ ಗೋಪಾಲನೇ ಗಟ್ಟಿಮುಟ್ಟಾದ ಹುಡುಗ. ಹಾಗಾಗಿ ಅವನ ಹೆಸರು ಹೇಳಿದೆ. ‘ಅವನಿಗೆ ಯಾರದ್ರು ರೇಗಿಸಿದ್ದು ಅಥವ ಅವನ ಜೊತೆ ಜಗಳ ಮಾಡಲು ಹೋಗಿದ್ದು ನೋಡಿದ್ದೀಯಾ?’ ಎಂದು ಕೇಳಿದ. ಒಂದು ನಿಮಿಷ ನೆನಪು ಮಾಡಿಕೊಳ್ಳಲು ಪ್ರಯತ್ನಪಟ್ಟೆ. ಉದ್ದಕ್ಕೆ, ಸಣ್ಣಕ್ಕೆ ಇದ್ದ ನನಗೆ ‘ಸಣಕಲಕಡ್ಡಿ’, ‘ಲಂಬೂ ಲಟಕ್’, …. ಹೀಗೆಲ್ಲಾ ಹೇಳುವುದು ಗೊತ್ತಿತ್ತು. ಶಾಲೆಯಲ್ಲೇ ದಪ್ಪಕ್ಕಿರುವ ಶಂಕರನಿಗೆ ‘ಅಲೂ ಬೋಂಡ’ ಎನ್ನುತ್ತಿದ್ದರು. ಆದರೆ ಗೋಪಾಲನನ್ನು ಯಾರು ಏನೂ ಹೇಳುತ್ತಿರಲಿಲ್ಲ. ಅದನ್ನೇ ಹೇಳಿದೆ. ‘ನೋಡು ನೀನು ಒಳ್ಳೆಯವನು. ಆದರೂ ನಿನಗೆ ರೇಗಿಸುತ್ತಾರೆ. ಗೋಪಾಲ ಒಳ್ಳೆಯವನು ಮಾತ್ರವಲ್ಲ ಶಕ್ತಿವಂತ ಕೂಡ. ಹಾಗಾಗಿ ಅವನ ತಂಟೆಗೆ ಯಾರೂ ಹೋಗಲ್ಲ. ನೋಡು ನಮಗೆ ಗಾಂಧೀಜಿಯವರು ಅಹಿಂಸೆಯ ಪಾಠ ಮಾಡಿದ್ದಾರೆ. ಅಹಿಂಸೆಯೇ ಅವರ ಅಸ್ತ್ರವಾಗಿತ್ತು. ಅಹಿಂಸಾತ್ಮಕ ಹೋರಾಟದಿಂದ ಅವರು ಸ್ವಾತಂತ್ರ್ಯ ತಂದುಕೊಟ್ಟರು ಎನ್ನುವುದು ನಿಜ ಕೂಡ. ಆದರೆ ಈ ಕಾಲದಲ್ಲಿ ಒಳ್ಳೆಯರಾಗಿರುವುದರ ಜೊತೆಗೆ ಸ್ವಲ್ಪನಾದರೂ ಶಕ್ತಿವಂತನಾಗಿರಬೇಕು. ಅಣುಬಾಂಬ್ ದೇಶಕ್ಕೆ ಆ ಶಕ್ತಿ ಕೊಡುತ್ತದೆ. ನೋಡು, ಗೋಪಾಲನಿಗೆ ಶಕ್ತಿಯಿದೆ ಎಂದು ಯಾರ ಮೇಲಾದರೂ ತಾನೇ ಹೋಗಿ ಜಗಳಮಾಡಲ್ಲವಲ್ಲ. ಹಾಗೆ ನಾವು ಬಾಂಬ್ ಇದೆಯೆಂದು ಯಾರ ಮೇಲೂ ಕಾಲು ಕೆರೆದುಕೊಂಡು ಜಗಳ ಮಾಡಲು ಹೋಗ ಬೇಕಾಗಿಲ್ಲ. ಆದರೆ ಅದರಿಂದ ಬರುವ ಶಕ್ತಿ ನಮ್ಮ ತಂಟೆಗೆ ಯಾರೂ ಬರದಂತೆ ಇರಲೂ ಕೂಡ ಸಹಾಯ ಮಾಡುತ್ತದೆ. ಇಂಗ್ಲಿಷಿನಲ್ಲಿ ಇದಕ್ಕೆ ‘ಡಿಟರೆಂಟ್’ ಎನ್ನುತ್ತಾರೆ’ ಎಂದ. ‘ನಮಗೆ ಅಹಿಂಸೆಯ ಅಸ್ತ್ರ ಮಾನಸಿಕ ಶಕ್ತಿ ತುಂಬಿದರೆ, ದೈಹಿಕ ಶಕ್ತಿ ಅಣುಬಾಂಬ್ ಕೊಡುತ್ತದೆ’ ಎಂದ.
ಈಗ ನನಗೆ ಅವನೇನು ಮಾತನಾಡುತ್ತಿದ್ದಾನೆ ಎಂದು ನಿಧಾನವಾಗಿ ಅರ್ಥವಾಯಿತು. ‘ನೋಡು ಚರ್ಚಾಸ್ಪರ್ಧೆಯಲ್ಲಿ ಮೊದಲು ಮಾತನಾಡುವವರಿಗೆ ಕೊನೆಯಲ್ಲಿ ಮತ್ತೆ ಎರಡು ನಿಮಿಷ ಕೊಡುತ್ತಾರೆ. ಆಗ ಎದುರಾಳಿಗಳು ಹೇಳಿದ ವಿಷಯಗಳನ್ನು ಪಟ್ಟಿಮಾಡಿಕೊಂಡು ಅಲ್ಲಗೆಳೆಯ ಬೇಕು. ಆಗ ಕೈ ಹೀಗೆ ಆಡಿಸಬೇಕು. ಪಕ್ಕದ ಮೇಜನ್ನು ಹೀಗೆ ಗುದ್ದಬೇಕು. ಆದರೆ ಕೊನೆಯಲ್ಲಿ ಮುಗಿಸುವಾಗ ವಿನೀತನಂತೆ ಕೈ ಮುಗಿಯಬೇಕು…..’ ಈಗ ನನಗೂ ಧೈರ್ಯ ಬಂತು. ಮನೆಗೆ ಹೊರಟೆ. ಅತ್ತೆ, ‘ಎನೋ ಬಾಂಬ್ ಮಾಡಿ ಆಯಿತಾ?’ ಎನ್ನುತ್ತಾ ನಕ್ಕರು. ನನಗೂ ನಗುಬಂತು. ”ಇದರಲ್ಲಿ ಕೋಡುಬಳೆ ಇದೆ, ಅಮ್ಮನಿಗೆ ಕೊಡು’ ಎನ್ನುತ್ತಾ ತಿಂಡಿ ಡಬ್ಬಿ ಕೊಟ್ಟರು.
ಮಾರನೇಯ ದಿನ ಬೆಳಿಗ್ಗೆಯೇ ಪ್ರಬಂಧ ಸ್ಪರ್ಧೆ. ಎಲ್ಲವನ್ನೂ ಸರಿಯಾಗಿ ಬರೆದೆ. ಬಾಯಿಪಾಠ ಮಾಡಿದ್ದ ಇಸವಿಗಳೂ ಕೈ ಕೊಡಲಿಲ್ಲ. ಮಧ್ಯಾಹ್ನ ಐದು, ಆರು ಮತ್ತು ಏಳನೇಯ ತರಗತಿಯ ಹುಡುಗರನ್ನು ಒಂದು ಕಡೆ ಕೂರಿಸಿ ಉಳಿದ ಸ್ಪರ್ಧೆಗಳನ್ನು ಪ್ರಾರಂಭ ಮಾಡಿದರು. ಮೊದಲಿಗೆ ಚರ್ಚಾಸ್ಪರ್ಧೆ. ನಾನು ವಿಜಿ ಹೇಳಿದ ಹಾಗೇ ಮಾತನಾಡಿದೆ. ಇಷ್ಟೊಂದು ಅವೇಶ ಬರಿತನಾಗಿ ಭಾಷಣ ಮಾಡಬಲ್ಲೇ ಎಂದು ನನಗೇ ಗೊತ್ತಿರಲಿಲ್ಲ. ಮೂರು ಬಾರಿ ಚಪ್ಪಾಳೆ ಕೂಡ ಬಂತು. ಬಹಳ ಸಂತೋಷದಿಂದ ಮನೆಗೆ ಹೋದೆ.

ಒಂದು ವಾರದಿಂದ ಕಾದಿದ್ದ ಆಕ್ಟೋಬರ್ ಎರಡನೇಯ ತಾರೀಖು ಬಂದೇ ಬಿಟ್ಟಿತು. ಇಸ್ತ್ರೀ ಮಾಡಿದ ಸ್ಕೌಟ್ ಬಟ್ಟೆಗಳನ್ನು ಹಾಕಿಕೊಂಡು ಹೋದೆ. ಬಾವುಟ ಹಾರಿಸಿ, ಮುಖ್ಯ ಅತಿಥಿಗಳ ಭಾಷಣ ಮುಗಿಯಿತು. ಈಗ ಬಹುಮಾನ ವಿತರಣೆ ಎಂದಾಗ ಎಲ್ಲ ಹುಡುಗರ ಮುಖ ಅರಳಿತು. ಮೊದಲಿಗೆ ಪ್ರಬಂಧ ಸ್ಪರ್ಧೆಯಲ್ಲಿ ಮೊದಲನೇಯ ಬಹುಮಾನಕ್ಕೆ ನನ್ನ ಹೆಸರು ಕರೆದಾಗ ಸಂತೋಷವಾಯಿತು. ಹೆಮ್ಮೆಯಿಂದ ಡಯಾಸ್ ಮೇಲೆ ಹೋಗಿ ತೆಗೆದುಕೊಂಡು ಬಂದೆ. ನಂತರ ಬೇರೆ ಎಲ್ಲಾ ಸ್ಪರ್ಧೆಗಳ ಫಲಿತಾಂಶ ಬಂದು ಹುಡುಗರು ಚಪ್ಪಾಳೆ ತಟ್ಟುತ್ತಿದ್ದರು. ಆದರೆ ನನ್ನ ಮನಸ್ಸು ಚರ್ಚಾಸ್ಪರ್ಧೆಯ ಫಲಿತಾಂಶಕ್ಕೆ ಕಾಯುತ್ತಿತ್ತು. ಕೊನೆಯಲ್ಲಿ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ‘ಪರವಾಗಿ’ ಮಾತನಾಡಿದ ರಾಘವೇಂದ್ರನಿಗೆ ಬಂದಿತ್ತು. ನನಗೆ ಬಹುಮಾನ ಬರಲಿಲ್ಲ. ನಿರಾಶೆಯಾಯಿತು.
ಸಮಾರಂಭ ಮುಗಿಸಿ ಮನೆಗೆ ಹೊರಟಾಗ, ನಮ್ಮ ಕ್ಲಾಸ್ ಟೀಚರ್ ಕರೆದರು. ಅವರು ನಮ್ಮ ಮನೆಯ ಹತ್ತಿರವೇ ಇದ್ದರು. ಹಾಗಾಗಿ ಚೆನ್ನಾಗಿಯೇ ಗೊತ್ತಿತ್ತು. ‘ಪ್ರಬಂಧ ಸ್ಪರ್ಧೆಯಲ್ಲಿ ಚೆನ್ನಾಗಿ ಬರೆದಿದ್ದೆ. ಫಸ್ಟ್ ಪ್ರೈಸ್ ಬಂತಲ್ಲ’ ಎಂದರು. ನಾನು ಸುಮ್ಮನೆ ನಿಂತಿದ್ದೆ. ‘ನೀನು ಚರ್ಚಾಸ್ಪರ್ಧೆಯಲ್ಲೂ ಚೆನ್ನಾಗಿಯೇ ಮಾತನಾಡಿದ್ದೆ. ಆದರೆ ರಾಘವೇಂದ್ರ ಕೂಡ ಚೆನ್ನಾಗಿಯೇ ಮಾತನಾಡಿದ್ದ. ನೋಡು ಅಷ್ಟೆಲ್ಲಾ ಶಕ್ತಿಯಿದ್ದ ಬ್ರಿಟೀಷರು ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಕ್ಕೆ ತಲೆಬಾಗ ಬೇಕಾಯಿತು. ಹಾಗಾಗಿ ಅಹಿಂಸೆಯೇ ಅಸ್ತ್ರ ಎಂದು ಚೆನ್ನಾಗಿ ನಿರೂಪಣೆ ಮಾಡಿದ. ಅಲ್ಲವೇ?’ ಎಂದರು. ಹೌದು, ರಾಘವೇಂದ್ರ ಚೆನ್ನಾಗಿಯೇ ಮಾತನಾಡಿದ್ದ. ‘ಹೌದು ಸರ್’ ಎಂದೆ. ‘ಈಗ ಸ್ಪರ್ಧೆಯ ವಿಷಯ ಬಿಡು. ನೀನು ಇದರಿಂದ ಏನು ಕಲಿತೆ ಹೇಳು’ ಎಂದರು. ನನಗೇನು ಗೊತ್ತಾಗಲಿಲ್ಲ. ನನ್ನ ಉತ್ತರಕ್ಕೆ ಕಾಯದೇ ‘ನೋಡು, ಯಾವುದೇ ಕೆಲಸ ಮಾಡಲಿ, ಆ ಕೆಲಸ ಮಾಡಲು ಅಯ್ಕೆ ಮಾಡಿಕೊಳ್ಳುವ ಮಾರ್ಗ ಕೂಡ ಮುಖ್ಯ. ಯಾವುದೇ ಗುರಿ ಸಾಧಿಸಲು ಒಳ್ಳೆಯದಾರಿಯಲ್ಲಿ ನಡೆಯುವುದು ಕೂಡ ಮುಖ್ಯ. ಬಾಂಬಿನಿಂದ ಶಕ್ತಿ ವ್ಯಯವಾಗುತ್ತದೆ. ಆದರೆ ಅಹಿಂಸೆಯ ಅಸ್ತ್ರದಿಂದ ಬರುವ ಶಕ್ತಿ ವೃದ್ಧಿಯಾಗುತ್ತಾ ಹೋಗುತ್ತದೆ, ಕಾಲತೀತವಾಗಿ ಇರುತ್ತದೆ’ ಎಂದರು. ‘ಹಾಗೆ ಮಾತನಾಡುವಾಗ ಆವೇಶಕ್ಕೆ ಒಳಗಾದರೆ, ಹೇಳುವ ವಿಷಯ ಗೌಣವಾಗಿ ಬಿಡುವ ಸಾಧ್ಯತೆ ಇರುತ್ತದೆ. ಆವೇಶ ಬೇಡ’ ಎಂದು ಹೇಳುತ್ತಾ ಮುಂದೆ ಹೋದರು………. ಆ ದಿನ ‘ಕಾಲತೀತ’ ಎಂದರೆ ಏನು ಎಂದು ಕೂಡ ನನಗೆ ಗೊತ್ತಿರಲಿಲ್ಲ…… ಆ ವಿಷಯಗಳು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯವೇ ತೆಗೆದುಕೊಂಡಿತು ನಂತರ ನಿಧಾನವಾಗಿ, ಆಳವಾಗಿ ಮನಸ್ಸಿನೊಳಗೆ ಇಳಿಯಿತು.
- ಎನ್.ವಿ.ರಘುರಾಂ
