ಸಣ್ಣಕತೆ : ಭವಾನಿ ದಿವಾಕರ್
ಪರಿಚಯ : ಭವಾನಿ ದಿವಾಕರ್ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಇಂಜಿನಿಯರ್. ಬರವಣಿಗೆ, ಅಡುಗೆ ಅವರ ಹವ್ಯಾಸದಲ್ಲಿ ಒಂದಾಗಿದೆ. ಈಗಾಗಲೇ ಹಲವಾರು ಅಡುಗೆಗಳನ್ನು ಓದುಗರಿಗೆ ಪರಿಚಯಿಸಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಅಥವಾ aakrutikannada@gmail.com ನಿಮ್ಮ ಲೇಖನಗಳನ್ನು ಇ-ಮೇಲ್ ಮಾಡಿ.
“ಅಮ್ಮ ಎಂದರೆ ಮೈ ಮನವೆಲ್ಲ ಹೂವಾಗುವುದಮ್ಮಾ, ಎರಡಕ್ಷರದಲಿ ಏನಿದೆ ಶಕ್ತಿ ಹೇಳುವರಾರಮ್ಮ” ಎಂತ ಮನಮುಟ್ಟುವ ಸಾಲು. ಹುಡುಗಿಯಾಗಿ ಆಟವಾಡಿಕೊಂಡು ಇದ್ಧವಳು. ಮದುವೆಯಾದ ಮೇಲೆ ಹೆಣ್ಣು ಎಂಬ ಪಟ್ಟ ಪಡೆಯುತ್ತಾಳೆ. ಮಕ್ಕಳು ಆದಮೇಲೆ ತಾಯಿ ಎಂಬ ಅದ್ಬುತ ಶಕ್ತಿ ಪಡೆದುಕೊಳ್ಳುತ್ತಾಳೆ. ಅದರಲ್ಲಿ ತನ್ನ ಸಾರ್ಥಕತೆ ಕಾಣುತ್ತಾಳೆ.
ಬಸರಿ, ಹೆರಿಗೆ, ಬಾಣಂತನವೆಲ್ಲ ಹೆಣ್ಣಿನ ಜೀವನದ ಬಲು ಮುಖ್ಯವಾದ ಘಟ್ಟಗಳು. ಮರುಜೀವ ಪಡೆದಂತೆ. ಅದನ್ನು ನಗುನಗುತಾ ಸ್ವೀಕರಿಸುತ್ತಾಳೆ. ಆನಂದವಾಗಿ ಅನುಭವಿಸಲು ಸಾಧ್ಯವಿರುವುದು ಹೆಣ್ಣಾಗಿ ಮಾತ್ರ. ಅದಕ್ಕೆ ಈ ಭಗವಂತ ಹೆಣ್ಣಿಗೆ ಈ ಅದ್ಬುತವಾದ ಶಕ್ತಿಯನ್ನು ಕರುಣಿಸಿದನೋ ಏನೋ.
Mother’s Day ಪ್ರಯುಕ್ತ ನಾನು ಒಂದು ಹುಡುಗಿಯ ತಾಯಿತನದ ಕಥೆ ಹೇಳುತ್ತೀನಿ ಕೇಳಿ.
ಸುಮಾ ಮದುವೆಯಾಗಿ ಒಂದೂವರೆ ವರ್ಷಕ್ಕೆ ಬಸರಿಯಾಗುತ್ತಾಳೆ. ಮನೆಯಲ್ಲಿ ಸಂಭ್ರಮದ ವಾತಾವರಣ. ಇತ್ತ ಕಡೆ ಗಂಡ ಸುರೇಶ ಹೆಂಡತಿಯನ್ನು ಡಾಕ್ಟರ್ ಬಳಿ ಆಗಾಗ ಚೆಕ್ ಅಪ್ ಗಾಗಿ ಕರೆದೊಯ್ಯುತ್ತಿರುತ್ತಾನೆ. ಪುಷ್ಟಿ ಆಹಾರ, ಸರಿಯಾದ ಸಮಯಕ್ಕೆ ನಿದ್ದೆ, ವಿಶ್ರಾಂತಿಯನ್ನು ಪಡೆಯುವಂತೆ ಸಲಹೆಯನ್ನು ನೀಡಿರುತ್ತಾರೆ.
ಆದರೆ ಈ ಸುಮಾಳಿಗೆ ಸಿಕ್ಕಾಪಟ್ಟೆ ವಾಂತಿ, ಸುಸ್ತು, ಎಲ್ಲಿ ಕೂತರು ಅಲ್ಲಿ ನಿದ್ದೆ, ರಾತ್ರಿಯೆಲ್ಲಾ ನಿದ್ದೆ ಇಲ್ಲ. ಈ ಎಲ್ಲ ಸಂಕಟಗಳ ಮಧ್ಯೆ ಆಕೆ ಆಫೀಸ್ ಕೆಲಸವನ್ನು ನೋಡಿಕೊಳ್ಳಬೇಕಿತ್ತು. ಆರು ತಿಂಗಳು ತುಂಬುತ್ತಿದ್ದಂತೆ ಅಪ್ತರೆಲ್ಲ ಆಫೀಸ್ ಬಿಟ್ಟು ಮನೆಯಲ್ಲಿಯೇ ವಿಶ್ರಾಂತಿ ತಗೆದುಕೋ ಎಂದು ಸಲಹೆ ನೀಡಿದರು. ಆದರೆ ಆಫೀಸ್ ಕೆಲಸದಲ್ಲಿ ತನ್ನೆಲ್ಲ ಸಂಕಟವನ್ನೆಲ್ಲಾ ಮರೆಯುತ್ತಿದ್ದಳು. ಹಾಗಾಗಿ ಎಷ್ಟು ದಿನ ತನ್ನಿಂದ ಆಫೀಸ್ ಹೋಗಲು ಸಾಧ್ಯವೋ ಅಷ್ಟು ದಿನ ತಾನು ಹೋಗುವುದಾಗಿ ಹೇಳಿದ್ದಳು. ಹಾಗೂ- ಹೀಗೂ ಸುಮಾ ಎಂಟುವರೆ ತಿಂಗಳು ಆಫೀಸ್ ಗೆ ಹೋದಳು. ತಾಯಿ ಮನೆಯಲ್ಲಿ ಶ್ರೀಮಂತ ಮಾಡಿ ಎಲ್ಲರು ಸಂಭ್ರಮಿಸಿದರು. ಹೆರಿಗೆಗಾಗಿ ದಿನಗಣನೆ ಶುರುವಾಯಿತು.
ಒಂಬತ್ತು ತಿಂಗಳು ತುಂಬಿದ ಮೇಲೆ ಯಾವಾಗ ಬೇಕಾದರೂ ಹೆರಿಗೆ ನೋವು ಕಾಣಿಸಿಕೊಳ್ಳಬಹುದು. ಮಗು ಹೊರಗೆ ಬರಲು ಸಿದ್ಧವಾಗಿದೆ ಎಂದರು ಡಾಕ್ಟರ್. ಅಂದು ವೈಕುಂಠ ಏಕಾದಶಿ. ಇದ್ದಕ್ಕಿದಂತೆ ಸುಮಾರು ಬೆಳಿಗ್ಗೆ 3.30ಕ್ಕೆ ನೀರು ಹೋಗಲು (ವಾಟರ್ ಡಿಸ್ಚಾರ್ಜ್) ಶುರುವಾಯಿತು. ಮೊದಲ ಹೆರಿಗೆಯಲ್ಲಿ ಎಷ್ಟೋ ಹೆಣ್ಣು ಮಕ್ಕಳಿಗೆ ನೀರು ಹೋಗುವುದು ಎಂದರೆ ತಿಳಿದಿರುವುದಿಲ್ಲ. ಒಂದು ಸಾರಿ ಗರ್ಭದಿಂದ ನೀರು ಹೊರಗೆ ಬರಲು ಶುರುವಾದರೆ ಅದು ಹೆರಿಗೆಯಾಗುವ ಲಕ್ಷಣ ಎಂದರ್ಥ. ಆದರೆ ಅದು ಸುಮಾಳಿಗೆ ತಿಳಿದಿರಲಿಲ್ಲ. ಆಕೆಯ ಅಮ್ಮ- ಅಪ್ಪ ಗಾಢವಾದ ನಿದ್ರೆಯಲ್ಲಿದ್ದರು. ಅವರಿಗೆ ಎಬ್ಬಿಸಲು ಮನಸ್ಸಾಗಲಿಲ್ಲ. ಸ್ವಲ್ಪ ಹೊತ್ತು ನೋಡಿ ಆಮೇಲೆ ಎಬ್ಬಿಸೋಣವೆಂದು ಟಿವಿ ನೋಡುತ್ತಾ ಕೂತಳು .
– ಸಾಂದರ್ಭಿಕ ಚಿತ್ರ
ಆಕೆ ಸುಮ್ಮಳಿದ್ದ ಮಾತ್ರಕ್ಕೆ ನೀರು ಹೋಗುವುದು ನಿಲ್ಲಬೇಕಲ್ಲ. ಆಗ ಸುಮಾ ಅಮ್ಮನನ್ನು ಎಬ್ಬಿಸಿದಳು. ಆಗ ಅಮ್ಮ ಗಾಬರಿ ಬೇಡವೆಂದು ಜೀರಿಗೆ ಕಷಾಯ ಮಾಡಿ ತಂದಳು. ಪಕ್ಕದ ಮನೆಯವರ ಸಹಾಯ ಪಡೆದು ಆಸ್ಪತ್ರೆಗೆ ಹೊರಟರು. ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸಿದಳು.
ಆಸ್ಪತ್ರೆ ತಲುಪುವಷ್ಟರಲ್ಲಿ ಗಂಡ-ಅತ್ತೆ ಕಾದು ಕೂತಿದ್ದರು. ಡಾಕ್ಟರ್ ಪರೀಕ್ಷೆ ಮಾಡಿ ಇನ್ನು ಹೆರಿಗೆಗೆ ಸಮಯವಿದೆ ಎಂದು ಹೇಳಿ ವಾರ್ಡ ಗೆ ಶಿಫ್ಟ್ ಮಾಡಿದರು. ಗಂಡ ಬಂದು ಧೈರ್ಯ ಹೇಳಿದ. ಸಿಸ್ಟೆರ್ ಕೈಗೆ ಐವಿ ಚುಚ್ಚಿದರು. ಹೆರಿಗೆ ನೋವಿನ ಮೇಲೆ ಇದೊಂದು ನೋವು ಫ್ರೀ ಎನ್ನುವಂತಿತ್ತು. ನೋವಿನಲ್ಲಿ ಮಧ್ಯಾಹ್ನವೂ ಕಳೆಯಿತು- ಸಂಜೆಯೂ ಕಳೆಯಿತು. ಆದರೆ ಹೆರಿಗೆ ಆಗಲಿಲ್ಲ. ಇನ್ನು ಸಮಯ ಬೇಕು ಅನ್ನುವುದೊಂದೇ ಡಾಕ್ಟರ್ ಹೇಳಿಕೆಯಾಗಿತ್ತು.
ರಾತ್ರಿ ಸರಿ ಸುಮಾರು 7.30 ಗಂಟೆಗೆ ಸುಮಾಳ ಬಿಪಿ ಜಾಸ್ತಿಯಾಗಿದೆ. ಗರ್ಭದಲ್ಲಿ ಮಗೂನೂ ಸುಸ್ತು ಆಗೋ ಅವಕಾಶಗಳು ಹೆಚ್ಚಿದೆ. ‘ಸಿ’ ಸೆಕ್ಷನ್ ಮಾಡೋಣ. ಆಪರೇಷನ್ ಥಿಯೇಟರ್ ಗೆ ಶಿಫ್ಟ್ ಮಾಡಿ ಎಂದು ಡಾಕ್ಟರ್ ಹೇಳಿದರು.
ಭಯದ ನಡುವೆ ನಿಂತಿದ್ದ ಮನೆಯವರಿಗೆ ‘ಭಯವಿಲ್ಲವೆಂದರೆ ಆಪರೇಷನ್ ಥಿಯೇಟರ್ ನ ಒಳಗೆ ಸುಮಾಳ ಗಂಡ ಬರಬಹುದು’ ಎಂದು ಡಾಕ್ಟರ್ ಹೇಳಿದರು. ಭಯ ಆ ಮೇಲೆ. ಮೊದಲು ತನ್ನ ಹೆಂಡತಿಗೆ ಈ ಸಮಯದಲ್ಲಿ ಧೈರ್ಯ ಕೊಡುವುದು ಮುಖ್ಯವೆನಿಸಿ ಸುರೇಶ ಒಳಗೆ ನಡೆದ. ಹೆರಿಗೆ ಆಯಿತು. ಮುದ್ದಾದ ಗಂಡು ಮಗುವಿಗೆ ಜನ್ಮನೀಡಿದಳು.
ಸುಮಾಗೆ ಮಗುವಿನ ಮುಖವನ್ನು ನೋಡುತ್ತಿದ್ದಂತೆ ತಾನು ಅನುಭವಿಸಿದ ನೋವುಗಳೆಲ್ಲ ಮರೆತು ಹೋದವು. ಹೆರಿಗೆಯಾದ ಎರಡು ಮೂರು ಗಂಟೆಗಳ ಕಾಲ ICU ನಲ್ಲಿ ಮಲಗಿಸಿ ವಾರ್ಡ್ ಗೆ ಶಿಫ್ಟ್ ಮಾಡಿದರು..anesthesia ಇರುವ ತನಕ ಏನೂ ಗೊತ್ತಾಗಲಿಲ್ಲ. ಆ ಮೇಲೆ ನೋವೂ, ಉರಿ ಬೇಡ ಬೇಡವೆನ್ನಿಸುವಷ್ಟು ಸಂಕಟ ಅವಳಿಗೆ. ತಕ್ಷಣಕ್ಕೆ ಎದೆ ಹಾಲು ಬರದಿದ್ದರಿಂದ ಮಗುವಿಗೆ lactogen ಹಾಲೇ ಅಮೃತವಾಯಿತು. ಮಗನಿಗೆ ಆಯುಷ್ ಎಂದು ಹೆಸರನ್ನಿಟ್ಟು, ಹಾಗೂ ಹೀಗೂ ಮಾಡಿ ಎಲ್ಲ ನೋವು- ಸಂಕಟಗಳನ್ನು ಗೆದ್ದು, ಬಾಣಂತನ ಮುಗಿಸಿ ಗಂಡ ಮನೆಗೆ ಸುಮಾ ಹಿಂದಿರುಗುತ್ತಾಳೆ. ನಿಧಾನಕ್ಕೆ ಮತ್ತೆ ಆಫೀಸಿಗೂ ಹೋಗಲು ಶುರು ಮಾಡುತ್ತಾಳೆ. ಮಗುವನ್ನು ಅತ್ತೆ ನೋಡಿ ಕೊಳ್ಳುತ್ತಾರೆ.
ಇವುಗಳ ಮಧ್ಯೆ ಆಯುಷನಿಗೆ ಆರು ವರ್ಷ ತುಂಬುತ್ತದೆ.
ಎರಡನೇ ಮಗುವಿನ ಜನನ :
ಸುಮಾಳಿಗೆ ಮತ್ತೆ ತಾಯಿಯಾಗುವ ಬಯಕೆ ಹುಟ್ಟಿದರೂ ಹಿಂದೆ ಪಟ್ಟ ಸಂಕಟಗಳನ್ನು ನೆನೆದು ಒಂದು ಕ್ಷಣ ಬೇಡವೆನ್ನಿಸಿತು. ಆದರೆ ಮತ್ತೊಂದು ಕ್ಷಣ ಆಕೆಯ ಅಜ್ಜಿ ಹತ್ತು ಮಕ್ಕಳನ್ನು ಹೆತ್ತದ್ದು ನೆನಪಾಗಿ, ಇಲ್ಲ… ತಾನು ಕೂಡ ಎರಡನೇ ಮಗುವನ್ನು ಪಡೆಯಲೇಬೇಕು ಎಂದು ಧೈರ್ಯ ಮಾಡಿ ನಿಂತಳು. ಎರಡನೇ ಮಗುವಿನ ಜನನಕ್ಕೆ ಅಜ್ಜಿಯೇ ಸ್ಫೂರ್ತಿಯಾದಳು ಎಂದರೆ ತಪ್ಪಲ್ಲ.
ಒಂದು ಗಂಡು ಮಗುವಾಗಿದೆ. ಎರಡನೇಯದು ಹೆಣ್ಣು ಮಗುವನ್ನು ದಯಪಾಲಿಸು ದೇವರೇ ಎಂದು ಸುಮಾ ದೇವರಲ್ಲಿ ಪ್ರಾರ್ಥಿಸುತ್ತಾಳೆ. ಮತ್ತೆ ಬಸರಿಯಾಗುತ್ತಾಳೆ.ಈ ಸಾಲ ಅವಳಿಗೆ ಏನೂ ಹೊಸದಲ್ಲ. ಎಲ್ಲವನ್ನು ಧೈರ್ಯವಾಗಿ ಸಹಿಸಿಕೊಳ್ಳುತ್ತಾಳೆ. ಆಫೀಸ್, ಮನೆ ಎರಡು ಕೆಲಸವನ್ನು ಮಾಡಿ ತನ್ನ ದೇಹ- ಮನುಸ್ಸನ್ನು ಸದೃಢವಾಗಿ ಇಟ್ಟು ಕೊಡುತ್ತಾಳೆ.
ಸಾಂದರ್ಭಿಕ ಚಿತ್ರ
ತನ್ನ ಐದನೇಯ ತಿಂಗಳು ಸುಖವಾಗಿ ನಡೆಯುವಾಗ ಅವಳಿಗೆ ಗರ್ಭಾವಸ್ಥೆಯಲ್ಲಿ ಮಧುಮೇಹ ಸೇರಿಕೊಳ್ಳುತ್ತದೆ. ಆದರೆ ಆಕೆ ಮಾತ್ರ ಧೈರ್ಯ ಕೆಡುವುದಿಲ್ಲ.
ಗರ್ಭವಾಸ್ಥೆಯಲ್ಲಿ ಬಯಕೆ ಈಡೇರಿಸಿ ಕೊಳ್ಳಬೇಕಾದ ಸುಮಾ ಡಯಟ್ ಶುರು ಮಾಡಿಕೊಳ್ಳುತ್ತಾಳೆ. ಶುಗರ್ ನಿಯಂತ್ರಿಸಲು ದಿನಕ್ಕೆಎಣ್ಣೆಯಿಲ್ಲದ ಚಪಾತಿ, ದಿನ್ನಕ್ಕೆ ಮೂರು ಬಾರಿ insulin ಇಂಜೆಕ್ಷನ್ ತಗೆದುಕೊಳ್ಳುತ್ತಾಳೆ.
ಹೆರಿಗೆಯ ದಿನದವರೆಗೂ ಆಫೀಸ್ ಹೋಗುತ್ತಾಳೆ. ಇನ್ನು ಹೆರಿಗೆಗೆ ಎರಡು ದಿನಗಳ ಮುಂಚೆಯೇ ಆಫೀಸನಲ್ಲಿದ್ದಾಗ ಗರ್ಭಾಶಯದಿಂದ ನೀರು ಹೊರಗೆ ಹೋಗ ತೊಡಗುತ್ತದೆ.ಅದಕ್ಕೆಲ್ಲ ಸುಮಾ ಗಾಬರಿಯಾಗದೆ ಗಂಡನನ್ನು ಕರೆ ಮಾಡಿ ಆಫೀಸಿಗೆ ಕರೆಯಿಸಿ ಕೊಳ್ಳುತ್ತಾಳೆ. ಗಂಡ ಸುರೇಶನ ಕಾರಿನಲ್ಲಿ ಆಸ್ಪತ್ರೆಗೆ ಹೋಗಿ ದಾಖಲಾಗುತ್ತಾಳೆ.
ಆಸ್ಪತ್ರೆಯಲ್ಲಿ ಸುಮಾಳ ಹೆರಿಗೆ ನೋವು ಮುಗಿಲು ಮುಟ್ಟಿತು. ಆದರೆ ಡಾಕ್ಟರ್ ಮಾತ್ರ ಡೆಲಿವರಿ ನಾಳೇಯೇ ಆಗುವುದು ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ. ಒಂದುವರೆ ದಿನ ಹೆರಿಗೆ ನೋವು ತಿಂದ ಮೇಲೆ ಸುಮಾಳಿಗೆ ಮುದ್ದಾದ ಹೆಣ್ಣು ಮಗುವಾಗುತ್ತದೆ. ಇಲ್ಲಿ ಆಶ್ಚರ್ಯವೆಂದರೆ ಮೊದಲನೇಯ ಹೆರಿಗೆ ‘ಸಿ’ ಸೆಕ್ಷನ್ ನಲ್ಲಿಯಾದರೆ, ಎರಡನೇ ಮಗು ನಾರ್ಮಲ್ ಡೆಲಿವರಿಯಾಗುತ್ತದೆ.
ಸುಮಾಳ ಧೈರ್ಯವನ್ನು ಡಾಕ್ಟರ್ ಮೆಚ್ಚಿಕೂಡ ಮೆಚ್ಚುತ್ತಾರೆ. ಅವಳನ್ನು ತಬ್ಬಿಕೊಂಡು ನಿನ್ನ ತರಹ ಎಲ್ಲ ಹೆಣ್ಣು ಮಕ್ಕಳು ಧೈರ್ಯ ಮಾಡಿ ನಾರ್ಮಲ್ ಡೆಲಿವರಿಗೆ ಮುಂದಾಗಬೇಕು. ಒಳ್ಳೆ ಪೌಷ್ಟಿಕಾಂಶವಿರುವ ಆಹಾರ ಸೇವಿಸಬೇಕು. ಡಾಕ್ಟರ್ ಸಲಹೆಯನ್ನು ಚಾಚು ತಪ್ಪದೆ ಪಾಲಿಸಿದರೆ ಖಂಡಿತ ನಾರ್ಮಲ್ ಡೆಲಿವರಿ ಆಗುತ್ತೆ ಅನ್ನುವುದಕ್ಕೆ ನೀನೇ ಉತ್ತಮ ಉದಾಹರಣೆ ಎಂದು ಖುಷಿ ಪಟ್ಟರು.
ಸುಮಾ ಹೀಗೆ ‘ಸಿ’ ಸೆಕ್ಷನ್ ಹೆರಿಗೆಯ ನೋವು ಮತ್ತು ನಾರ್ಮಲ್ ಹೆರಿಗೆ ಎರಡರ ನೋವನ್ನು ಅನುಭವಿಸಿದಳು. ಮೊದಲ ಹೆರಿಗೆ ಸಿ ಸೆಕ್ಷನ್ ಆದರೆ ಎರಡನೇಯದು ನಾರ್ಮಲ್ ಹೆರಿಗೆಯಾಗುವುದು ಸಾಧ್ಯವಿಲ್ಲ ಎಂದುಕೊಳ್ಳುವವರಿಗೆ ಸುಮಾ ಮಾದರಿಯಾಗಿ ನಿಂತಳು.
ತಾಯಿತನವ ಅನುಭವಿಸಿದವರಿಗೆ ಗೊತ್ತು ಅದರ ಮಹತ್ವ. ಹಾಗೆಂದ ಮಾತ್ರಕ್ಕೆ ಮಗುವನ್ನು ಹೇರದವಳೂ ಕೂಡ ಮಗುವನ್ನು ದತ್ತು ಪಡೆದು ತಾಯಿ ಆಗಬಲ್ಲಳು. ಪ್ರೀತಿ ಮಮತೆಯಿಂದ ಬೆಳೆಸಬಲ್ಲಳು. ಹೆತ್ತ ತಾಯಿಗಿಂತ ಸಾಕಿದ ತಾಯಿಗೆ ಪ್ರೀತಿ ಜಾಸ್ತಿಯೆಂಬ ಮಾತಿದೆ. ಹಾಗಾಗಿ ಎಲ್ಲ ತಾಯಂದಿರಿಗೆ ನನ್ನಂದು ಸಲಾಂ. 👏👏
!! ಜೈ ಮಾತೃದೇವೋಭವ !!