‘ಅಲ್ಲಮ ಕಥನ’ ಕೃತಿ ಪರಿಚಯ

ಸಿದ್ಧರು, ಬೌದ್ಧರು ಮತ್ತು ಅವಧೂತರ ಮೇಲೆ ತನ್ನ ಜೀವಿತಾವಧಿಯಲ್ಲಿ ಪ್ರಭಾವ ಬೀರಿದ್ದ ಶ್ರೀ ಅಲ್ಲಮ ಪ್ರಭುಗಳ ಆಧ್ಯಾತ್ಮಿಕ ಯಾನವೇ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಅವರು ಬರೆದಿರುವ “ಅಲ್ಲಮ ಕಥನ”. ಈ ಕೃತಿಯ ಕುರಿತು ಆತ್ಮ ಜಿ ಎಸ್‌ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ : ಅಲ್ಲಮ ಕಥನ
ಲೇಖಕರು : ಪ್ರೊ.ಮಲ್ಲೇಪುರಂ ಜಿ ವೆಂಕಟೇಶ
ಪ್ರಕಾಶನ : ಅಂಕಿತ ಪ್ರಕಾಶನ
ಪುಟ : ೪೪೫
ಬೆಲೆ : 595
ಖರೀದಿಗಾಗಿ : 080 –  26617100

ಭಾರತೀಯರಿಗೆ ಆಧ್ಯಾತ್ಮ ಎನ್ನುವುದು ತಲೆತಲಾಂತರಗಳಿಂದ ಬಂದಂತಹ ಧಾರ್ಮಿಕ ಆಚರಣೆಯಲ್ಲ , ಬದಲಾಗಿ ತನ್ನೊಳಗೆ ಅರಿವು ಮೂಡಿಸಿಕೊಂಡು ಸ್ವ ಪರಿವರ್ತನೆಯ ಮೂಲಕ ಸಾರ್ಥಕತೆಯನ್ನು ಗಳಿಸುವುದು. ಹಲವಾರು ದಾರ್ಶನಿಕರು ಇತರರನ್ನು ಬದಲಾಯಿಸಿದ್ದನ್ನು ಕಂಡ ನಾಡು ನಮ್ಮದು.12 ನೇ ಶತಮಾನದ ವಚನಕಾರರಲ್ಲಿ ಅಲ್ಲಮಪ್ರಭು ಇಂತಹ ದಾರ್ಶನಿಕರಾಗಿದ್ದು ,ಅನೇಕರಿಗೆ ಭಕ್ತಿ ವೈರಾಗ್ಯವನ್ನು ಬೋಧಿಸಿದರು. ಸಿದ್ಧರು, ಬೌದ್ಧರು ಮತ್ತು ಅವಧೂತರ ಮೇಲೆ ತನ್ನ ಜೀವಿತಾವಧಿಯಲ್ಲಿ ಪ್ರಭಾವ ಬೀರಿದ್ದ ಶ್ರೀ ಅಲ್ಲಮ ಪ್ರಭುಗಳ ಆಧ್ಯಾತ್ಮಿಕ ಯಾನವೇ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಅವರು ಬರೆದಿರುವ “ಅಲ್ಲಮ ಕಥನ”.


ಅಲ್ಲಮ ಒಬ್ಬ ಯೋಗಿ, ಮಹಾಸಂತ, ಸಿದ್ದ ಪುರುಷ ಎಂದೇ ಗುರುತಿಸಿರುವ ಲೇಖಕರು ಈ ಮೊದಲು ಅಲ್ಲಮನ ಕುರಿತು ಅಲ್ಲಮ ಕಥನ ಎಂಬ ಅಂಕಣ ಬರಹವನ್ನು ವಿಜಯವಾಣಿಯ ಲ್ಲಿ ಪ್ರಕಟ ಮಾಡಿದ್ದರು.ಈ ಅಂಕಣ ಬರಹದ ಪುಸ್ತಕ ರೂಪ ಇದಾಗಿದ್ದು ಅಂಕಿತ ಪುಸ್ತಕದಿಂದ ಪ್ರಕಟವಾಗಿದೆ. ಇದು 445 ಪುಟಗಳನ್ನೊಳಗೊಂಡಿದ್ದು ಅಲ್ಲಮನ ಕಥನವನ್ನು ಮೂರು ನೆಲೆಯಲ್ಲಿ ಲೇಖಕರು ವಿವರಿಸಿ ,ಓದುಗರಿಗೆ ಆಧ್ಯಾತ್ಮದ ಯಾನವನ್ನು ಸರಳವಾಗಿ ಅರ್ಥೈಸುವಂತೆ ಬರೆದಿದ್ದಾರೆ.. ಹಾಗಾಗಿಯೇ ಅಲ್ಲಮನ ವಚನಗಳನ್ನು ಅರ್ಥಮಾಡಿಕೊಳ್ಳಲು ಬೇಕಾಗುವ ಅಗತ್ಯ ಭೂಮಿಕೆಯನ್ನು ಲೇಖಕರು ತಿಳಿಸುತ್ತಾರೆ. ಪೂರ್ವ, ಮದ್ಯ, ಉತ್ತರ ಕಥನ ಎಂದು ಮೂರು ಭಾಗದಲ್ಲಿ ಅಲ್ಲಮನ ಕಥನವಿದೆ. ಪೂರ್ವ ಕಥನದಲ್ಲಿ ಅಲ್ಲಮನ ಅನುಸಂಧಾನಕ್ಕೆ ಅಗತ್ಯ ಬುನಾದಿ ಹಾಕಿದ್ದಾರೆ. ಶೂನ್ಯ ಸಂಪಾದನೆಯಲ್ಲಿ ಬರುವ ಅಲ್ಲಮನ ಚಿತ್ರಣವನ್ನು ಗಮನಿಸಿದರೆ ಅಲ್ಲಮನೆಂದರೆ “ಬೆಳೆಯುತ್ತಿರುವ ಇಲ್ಲವೆ ಬಿದ್ದು ಎದ್ದ ವ್ಯಕ್ತಿಯನ್ನಲ್ಲ; ಬೆಳೆದ ಮತ್ತು ಸಿದ್ಧನಾದ ವ್ಯಕ್ತಿಯನ್ನು ಎಂದು ಹೇಳುವ ರಂ.ಶ್ರೀ ಮುಗುಳಿ ಅವರ ಮಾತುಗಳು ಕಥನವನ್ನು ಓದಿ ಮುಗಿಸುವಾಗ ಓದುಗರ ಗಮನಕ್ಕೆ ಬರುತ್ತದೆ.

ಈ ಕಥನದ ಆರಂಭದಲ್ಲಿ ಚಾಮರಸ ಕವಿ, ಮುಗುಳಿ ಮೊದಲಾದವರ ಮಾತುಗಳನ್ನು ಉಲ್ಲೇಖಿಸುವುದರಿಂದ ಓದುಗರಿಗೆ ಒಮ್ಮೆಲೇ ಗ್ರಹಿಸಿ, ಮನನ ಮಾಡಿಕೊಳ್ಳಲು ಕಷ್ಟವೇನೋ ಎಂಬ ಭಾವ ಬಂದರೂ ಓದುತ್ತಾ ಹೋದಂತೆ ಕಥನ ರೂಪ ಕುತೂಹಲ ಮೂಡಿಸುತ್ತದೆ. ಮಧ್ಯ ಕಥನದಲ್ಲಿ ಅಲ್ಲಮ ಮತ್ತು ಮಾಯಾದೇವಿಯ ಬಾಲ್ಯ, ಯೌವನ ಬನವಾಸಿಯ ಮದುಕೇಶ್ವರನ ಸನ್ನಿಧಾನದಲ್ಲಿ ನೆರವೇರಿದಂತೆ ಚಿತ್ರಣವನ್ನು ಚಾಮರಸ ಕಟ್ಟಿ ಕೊಟ್ಟಿದ್ದಾರೆ. ಮಾಯೆ ಎಂಬುದು ಹೆಣ್ಣು ಮಾಯೆ ಮಾತ್ರವಲ್ಲ, ಭ್ರಮೆಗೆ ಒಳಗಾಗುವ ಭಾವವೂ ಮಾಯೆಯೇ  ಈ ಅಂಶ ಮನದಲ್ಲಿದ್ದರೆ ಅಲ್ಲಮನ ಕಥನದ ಅನುಸಂಧಾನಕ್ಕೆ ಸುಲಭವಾಗುತ್ತದೆ.

ಉತ್ತರ ಕಥನದಲ್ಲಿ ಅಲ್ಲಮ ಮಹಾಮನೆಗೆ ಆಗಮಿಸಿದ ನಂತರದ ಆಗುಹೋಗುಗಳ ದಾಖಲೆಯಿದೆ. ಬಸವಣ್ಣನವರ ಅನುಭವ ಮಂಟಪದ ವಿವಿಧ ಶರಣರ ಒಡನಾಟ ಅವರ ನಡುವಿನ ಸಂವಾದ ನಮ್ಮಲ್ಲಿ ಅರಿವು ಮೂಡಿಸುತ್ತದೆ.

ವ್ಯೋಮರೂಪಿ ಅಲ್ಲಮನು ಕಂಡವರಿಗೆ ಮೂರ್ತ,ಕಾಣದವರಿಗೆ ಅಮೂರ್ತ.ಈತನ ಮಾರ್ಗದಲ್ಲಿ ಪ್ರಶ್ನೆ ಮಾಡುವ ತರ್ಕಕ್ಕಿಂತ ಪರಸ್ಪರ ಸತ್ಯದ ಹುಡುಕಾಟ ಮಾಡುವ ಸಂವಾದ ಮಾರ್ಗಕ್ಕೆ ಪ್ರಾಶಸ್ತ್ಯ. ಹಾಗಾಗಿಯೇ ಚಾಮರಸ ಸಲ್ಲಲಿತ ಸನ್ಮಾರ್ಗ ಅಲ್ಲಮನದ್ದು ಎಂದಿದ್ದಾರೆ. ಇಂತಹ ಸಲ್ಲಲಿತ ಸನ್ಮಾರ್ಗ ಅರಿಯಲು ಅಲ್ಲಮನ ಅನುಭವ ಕಥನ ಪುಸ್ತಕ ಸಹಕಾರಿಯಾಗಿದೆ.


  • ಆತ್ಮ ಜಿ ಎಸ್‌

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading