ಪ್ರಾಧ್ಯಾಪಕರಾದ ಪ್ರಸನ್ನಮೂರ್ತಿ ಗುರುವಿನಪುರ “ತೆಂಕಣಸೀಮೆಯ ಕತೆಗಳು” ಇದರಲ್ಲಿ ಹತ್ತು ಕತೆಗಳಿದ್ದು, ಗ್ರಾಮೀಣ ಭಾಷೆಯ ಕತೆಯುಳ್ಳ ಈ ಕೃತಿಯನ್ನು ಓದುವಾಗ ಹಳ್ಳಿಯ ಸೊಗಡನ್ನು ಸವಿದ ಅನುಭವ ಕೊಡುತ್ತದೆ, ಈ ಕೃತಿಯ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೀನಿ…
ಪುಸ್ತಕ : ತೆಂಕಣ ಸೀಮೆಯ ಕತೆಗಳು
ಲೇಖಕರು : ಪ್ರಸನ್ನಮೂರ್ತಿ ಗುರುವಿನಪುರ
ಪ್ರಕಾಶನ : ಸಂವಹನ ಪ್ರಕಾಶನ, ಮೈಸೂರು
ಬೆಲೆ :175.00
ಪ್ರಚಾರಕ್ಕೆ ಸಿಕ್ಕ ಪುಸ್ತಕಗಳು ಓದುಗರ ಬೇಡಿಕೆಯನ್ನು ಹೆಚ್ಚಿಸುತ್ತದೆ. ಕೆಲವು ಪುಸ್ತಕಗಳು ಪ್ರಚಾರವನ್ನೇ ಪಡೆಯದೇ ತನ್ನ ಕಥಾವಸ್ತುವಿನಿಂದ ಓದುಗರ ಮನ ಗೆಲ್ಲುತ್ತದೆ. ಅಂತಹ ಪುಸ್ತಕಗಳಲ್ಲಿ ಕತೆಗಾರ ಪ್ರಸನ್ನಮೂರ್ತಿ ಗುರುವಿನಪುರ ಅವರ “ತೆಂಕಣ ಸೀಮೆಯ ಕತೆಗಳು “.
ಈ ಪುಸ್ತಕ ಓದುವುದು ತಡವಾದರೂ ಓದಲೇಬೇಕೆಂದು ನಾನು ಆಯ್ಕೆ ಮಾಡಿಟ್ಟುಕೊಂಡ ಪುಸ್ತಕದಲ್ಲಿ ಇದೊಂದಾಗಿತ್ತು. ಓದುವಾಗ ಗ್ರಾಮ್ಯ ಭಾಗದ ಕತೆಗಾರರು ಸೌಮ್ಯ, ಸಂಕೋಚ ಸ್ವಭಾವದವರು ಅನ್ನಿಸಿದುಂಟು. ಯಾಕೆಂದರೆ ಪ್ರತಿ ಕತೆಗಳಲ್ಲಿ ನಾಜೂಕುತನವಿದೆ. ಇದು ಕಥೆಗಾರರ ಮೊದಲ ಕಥಾ ಸಂಕಲನವಾದರೂ ಇದರಲ್ಲಿನ ಒಂದೊಂದು ಕತೆಗಳು ಓದುಗನ ಮನದಲ್ಲಿ ಆಳವಾಗಿ ಕೂತು ಬಿಡುತ್ತದೆ. ಅಷ್ಟು ಪ್ರಭುದ್ದ ಆಡು ಭಾಷೆಯನ್ನು ಪ್ರಸನ್ನ ಅವರು ಬಳಿಸಿದ್ದಾರೆ.

“ತೆಂಕಣಸೀಮೆಯ ಕತೆಗಳು” ಇದರಲ್ಲಿ ಹತ್ತು ನೀಲ್ಗತೆಗಳಿವೆ. ಚಾಮರಾಜನಗರ ಜಿಲ್ಲೆಯ ದಕ್ಷಿಣದ ತುದಿಯಲ್ಲಿ ತಮಿಳುನಾಡು ಹಾಗೂ ಕೇರಳ ಗಡಿಗೆ ಹೊಂದಿಕೊಂಡಿರುವ ಹಳ್ಳಿಗಳನ್ನು ತೆಂಕಣ ಸೀಮೆ ಎನ್ನುತ್ತಾರೆ ಎಂದು ಲೇಖಕರ ಮಾತಿನಲ್ಲಿ ಲೇಖಕರು ಪರಿಚಯಿಸಿದ್ದಾರೆ. ಈ ಕತೆಯಲ್ಲಿ ಅಲ್ಲಿನ ಗ್ರಾಮೀಣ ಭಾಷೆ , ಆಚಾರ ವಿಚಾರವನ್ನು ಕತೆಗಾರರು ಸೊಗಸಾಗಿ ಕಟ್ಟಿಕೊಟ್ಟಿರುವುದು ಮೊದಲನೆಯ ಆಕರ್ಷಣಾ ಬಿಂದುವಾಗಿದೆ.
ಒಬ್ಬ ಕತೆಗಾರ ತನ್ನ ಕತೆಯಲ್ಲಿ ಒಂದು ವಾಸ್ತವ ಬದುಕಿನ ಚಿತ್ರಣ ಹೇಳಬಹುದು ಅಥವಾ ಕಾಲ್ಪನಿಕ ಕತೆಯನ್ನು ಹೇಳಬಹುದು. ಆದರೆ ಪ್ರಸನ್ನ ಅವರ ಕತೆಗಳನ್ನು ಓದುವಾಗ ಒಮ್ಮೆ ಕಾಲ್ಪನಿಕ ಲೋಕಕ್ಕೆ ಜಾರಿದರೆ, ಮತ್ತೊಮ್ಮೆ ಕಾಲ್ಪನಿಕ ಲೋಕದಿಂದ ವಾಸ್ತವಕ್ಕೆ ಜಾರುತ್ತೇವೆ. ಕಾಲ್ಪನಿಕ ಹಾಗೂ ವಾಸ್ತವ ಎರಡರ ಅನುಭವವನ್ನು ಈ ಕತೆಗಳು ಕೊಡುತ್ತವೆ.
*
ಹೆಣ್ಣಿಗೆ ಭದ್ರವಾದ ಒಂದು ಸೂರು ಮತ್ತು ಬೆಂಗಾವಲಿಗೆ ಅಪ್ಪ, ಅಣ್ಣ, ಗಂಡ ಯಾರಾದರೂ ಇರಬೇಕು. ಇಲ್ಲದೇ ಹೋದರೆ ಅನಾಥ ಹೆಣ್ಣನ್ನು ಈ ಸಮಾಜ ಹೇಗೆಲ್ಲ ಕಿತ್ತು ತಿನ್ನುತ್ತದೆ ಎನ್ನುವುದನ್ನು ಮೊದಲ ಕತೆ “ನಾಗಿ” ಯಲ್ಲಿ ನೋಡಬಹುದು.
ಕತೆಗಾರನಿಗೆ ನಿಲುಕದ ವಿಷಯಗಳಿಲ್ಲ ಎನ್ನುವುದು “ಮೈಕ್ ಮಾದೇವ”ನ ಕತೆ ಓದುವಾಗ ಅನಿಸುತ್ತೆ. ಮೈಕ್ ಹಿಂದೆ ಓಡುವ ಒಬ್ಬ ಹುಚ್ಚು ಯುವಕನ ಕುರಿತು ಬರೆದಂತಹ ಕತೆಯಿದು. ಮೈಕ್ ನಿಂದಲೇ ಬದುಕು ಕಟ್ಟಿಕೊಳ್ಳುವ ಮಾದೇವನ ಪಾತ್ರದ ಬಗ್ಗೆ ಕತೆಗಾರ ಯೋಚಿಸಿದ ರೀತಿ ಇಷ್ಟವಾಯಿತು.
ಪ್ರೇಯಸಿಯ ಪತ್ರಕ್ಕಾಗಿ ಕಾಯುವ ಪ್ರೇಮಿಯೊಬ್ಬನ ಕತೆಯೇ “ಪತ್ರ”. ಪ್ರೇಮಿಗಳ ಪ್ರೀತಿ ಅಂತ್ಯವಾಯಿತು ಎನ್ನುವಾಗಲೇ ಸಾಹಿತ್ಯದ ಮೂಲಕ ಮನಸ್ಸನ್ನು ಒಂದಾಗಿಸುವ “ಪತ್ರ” ದ ಕತೆ ಕೂಡಾ ಭಿನ್ನವಾಗಿದೆ.

ಜೊತೆಗೆ ಹುಟ್ಟಿ, ಬೆಳೆದು ಕೊನೆಗೆ ರಾಜಕೀಯದಿಂದ ಒಬ್ಬರನೊಬ್ಬರು ಹಲ್ಲು ಮಸೆಯುವ ಅಣ್ಣ ತಮ್ಮನ ಬದುಕಿನ ಚಿತ್ರಣವೇ ‘ಎಲ್ಲೆ ‘. ಹಣ, ಅಧಿಕಾರ, ಅಂತಸ್ತಿನ ಹುಚ್ಚು ಯಾರನ್ನು ಬಿಡುವುದಿಲ್ಲ. ಕೊನೆಗೆ ಒಡಹುಟ್ಟಿದವರನ್ನು ರಕ್ತದ ಮಡುವಿನಲ್ಲಿ ಹಾಕಿಯೇ ತಿರುತ್ತದೆ. ‘ಎಲೆ’ ಇದೊಂದು ಭಾವನಾತ್ಮಕವಾಗಿ ನಮ್ಮನ್ನು ಕೆದಕುತ್ತದೆ.
ಹೀಗೆ “ತೆಂಕಣ ಸೀಮೆಯ ಕತೆಗಳು” ಓದುಗನ ಗಮನ ಸೆಳೆಯುವುದರ ಜೊತೆಗೆ ಗ್ರಾಮ್ಯಕ್ಕೆ ಕರೆದೋಯ್ಯುತ್ತದೆ. ವೃತ್ತಿಯಲ್ಲಿ ಅಧ್ಯಾಪಕರಾಗಿರುವ ಪ್ರಸನ್ನಮೂರ್ತಿಯವರು ಮೊದಲ ಕತೆಯಾದರೂ ಭಾಷೆಯಲ್ಲಿ ಒಳ್ಳೆ ಹಿಡಿತವಿದೆ.
ಪ್ರಸನ್ನಮೂರ್ತಿ ಗುರುವಿನಪುರ ಅವರು ತೆಂಕಣ ಸೀಮೆಯಿಂದ ನಗರದತ್ತ ಅವರ ಸಾಹಿತ್ಯ ಪಸರಿಸಿದರೆ ನಗರದ ಜನತೆಗೂ ಅವರ ಕತೆಯ ರುಚಿ ಸವಿಯಬಹುದು.
ಇವರು ಕೇವಲ ಒಂದೇ ಕಡೆ ಸೀಮಿತವಾಗದೆ ಎಲ್ಲೆಡೆ ಬೆಳೆಯಬೇಕಾದಂತಹ ಕತೆಗಾರ. ಶುಭವಾಗಲಿ…
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ, ಬೆಂಗಳೂರು.
