ಬಸವರಾಜ ಕಟ್ಟಿಮನಿ ಅವರ ಜನ್ಮದಿನ

‘ಕತ್ತಿಮನಿ’ ಎಂದೇ ಖ್ಯಾತರಾದ ಕ್ರಾಂತಿಕಾರಿ ಕಾದಂಬರಿಕಾರ ಬಸವರಾಜ ಕಟ್ಟಿಮನಿ ಅವರ ಜನ್ಮದಿನದ ಕುರಿತು ಲೇಖಕರಾದ ಡಿ ಪದ್ಮನಾಭ ಅವರು ಬರೆದ ವಿಶೇಷ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿ…

ಇಂದು ಖ್ಯಾತ ಸಾಹಿತಿ ಶ್ರೀ ಬಸವರಾಜ ಕಟ್ಟಿಮನಿಯವರ ಜನ್ಮದಿನ. ಉತ್ತರ ಕರ್ನಾಟಕದ ಗೋಕಾಕ್ ನಲ್ಲಿ  ಅಕ್ಟೋಬರ್ 05, 1919 ರಂದು ಜನಿಸಿದ ಶ್ರೀಯುತರು, ಉನ್ನತ ವ್ಯಾಸಂಗ ಮಾಡದಿದ್ದರೂ ತಮ್ಮ ಜೀವನಾನುಭವ ಗ್ರಹಣಶಕ್ತಿ, ಸ್ಮರಣಶಕ್ತಿ ಹಾಗೂ ಭಾಷಾ ಪ್ರೌಢಿಮೆಯಿಂದ ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.

ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸುಮಾರು ಹತ್ತು ಕಥಾಸಂಕಲನಗಳು, ನಾನು ಕಂಡ ರಷ್ಯಾ ಎಂಬ ಪ್ರವಾಸ ಕಥನ, 30ಕ್ಕೂ ಹೆಚ್ಚು ಕಾದಂಬರಿಗಳು ಇವರ ಲೇಖನಿಯಿಂದ ಹೊರಬಂದಿವೆ.

ಸ್ವಾತಂತ್ರ್ಯದೆಡೆಗೆ, ಜ್ವಾಲಾಮುಖಿಯ ಮೇಲೆ, ಮಾಡಿ ಮಡಿದವರು ಕೃತಿಗಳು ದೇಶಭಕ್ತಿಯ ಕಿಚ್ಚನ್ನು ಹೆಚ್ಚಿಸುವ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕಥೆಗಳು. ಬೀದಿಯಲ್ಲಿ ಬಿದ್ದವರು, ಸಾಕ್ಷಾತ್ಕಾರ, ಜರತಾರೀ ಜಗದ್ಗುರು, ಬೀದಿಯಲ್ಲಿ ಬಿದ್ದವರು, ಮಣ್ಣು ಮತ್ತು ಹೆಣ್ಣು ಇವರ ಇನ್ನಿತರ ಪ್ರಸಿದ್ಧ ಕೃತಿಗಳು.

ಮಾಡಿ ಮಡಿದವರು ಒಂದು ವಿಶೇಷ ಕೃತಿ.ಇದು ಚಲನಚಿತ್ರವಾಗಿಯೂ ಹೆಸರಾಗಿದೆ.. 1950ರಲ್ಲಿ ಲೋಕಾರ್ಪಣೆಯಾದ ಈ ಕೃತಿ ಸ್ವಾತಂತ್ರ್ಯಸಮರದಲ್ಲಿ ಕೇವಲ ನಾಯಕರ ಬಲಿದಾನವಾಗಿಲ್ಲ. ಸಾಮಾನ್ಯ ಜನರೂ ಅಸಂಖ್ಯಾತ ವಿದ್ಯಾರ್ಥಿಗಳೂ, ತಮ್ಮ ಜೀವ ಜೀವನವನ್ನು ಮುಡಿಪಾಗಿಟ್ಟು ಹೋರಾಡಿದ್ದಾರೆ. ಮಹಿಳೆಯರೂ ಈ ಹೋರಾಟದಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಸೂಚಿಸುತ್ತದೆ.

ಈ ಕಥೆಯ ನಾಯಕಿ ಹೇಮ ಕಾಲೇಜು ವಿದ್ಯಾರ್ಥಿನಿ. ಸುತ್ತ ನಡೆಯುವ ಘಟನೆಗಳನ್ನು ನೋಡಿ ಕೇಳಿ, ಕರಪತ್ರಗಳನ್ನು ಓದಿ ಆಕೆಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲೇಬೇಕೆಂದು ನಿರ್ಧರಿಸುತ್ತಾಳೆ. ಕಾಲೇಜಿಗೆ ರಜಾ ಇದ್ದಾಗ ಪುಣೆಯಿಂದ ಬೆಂಗಳೂರಿಗೆ ಸಂಚರಿಸುವ ರೈಲಿನಲ್ಲಿ ಪ್ರಯಾಣ ಮಾಡುವಾಗ ಸ್ವಾತಂತ್ರ್ಯ ಹೋರಾಟಗಾರರನ್ನು, ಭೇಟಿಯಾಗುತ್ತಾಳೆ. ಈ ಹೋರಾಟದಲ್ಲಿ ಹೆಣ್ಣಾದ ತಾನೂ ಭಾಗವಹಿಸಬಹುದೇ ತನ್ನ ಪಾಲ್ಗೊಳ್ಳುವಿಕೆಯಿಂದ ಎನಾದರೂ ಉಪಯೋಗ ಆಗುತ್ತದೆಯೇ ಎಂದು ಪ್ರಶ್ನಿಸುತ್ತಾಳೆ. ಆಗ ದೊರೆತ ಉತ್ತರದಿಂದ ಆಕೆಯ ಹೃದಯದಲ್ಲಿ ಮೊಳಕೆಯೊಡೆದಿದ್ದ ದೇಶಭಕ್ತಿ ದೇಶಕ್ಕಾಗಿ ಹೋರಾಡುವ ಹಂಬಲ ಮತ್ತಷ್ಟು ಗಟ್ಟಿಯಾಗುತ್ತದೆ. ಆದರೆ ತಂದೆ ಇದಕ್ಕೆ ಸಮ್ಭತಿಸುವುದಿಲ್ಲ.

ಆಕೆಯ ಓದು ಮುಗಿದ ನಂತರ ಆಕೆಯ ವಿವಾಹ ಮಾಡಬೇಕೆಂದು ಅವರ ಆಸೆ. ಅವರೂ ಸಹ ದೇಶಭಕ್ತರೂ ಕಾಂಗ್ರೇಸ್ ಸದಸ್ಯರು ಮತ್ತು ಗಾಂಧೀಜಿಯವರ ಅನುಯಾಯಿ ಹಾಗಿದ್ದೂ. ಈ ವಿರೋಧವೇಕೆ ಎಂಬುದು ಮಗಳ ಪ್ರಶ್ನೆ. ತಂದೆಯಾಗಿ ಮಗಳ ಸುಖ ಸಂತೋಷ ಬಯಸುವುದು ನನ್ನ ಕರ್ತವ್ಯ ಎಂದು ಅವರ ಉತ್ತರ.

ಹೆಣ್ಣು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಬಾರದೇ ಸ್ವಾರ್ಥದ ಪರಿಧಿಯಲ್ಲಿ ಇರಬೇಕೇ ಎನ್ನುವುದು ಮಗಳ ಪ್ರಶ್ನೆ. ಕೊನೆಗೆ ತಂದೆಯ ಆಶಯವನ್ನು ಖಡಾಖಂಡಿತವಾಗಿ ನಿರಾಕರಿಸಿ ಆಕೆ ಸ್ವಾತಂತ್ರ್ಯ ಚಳುವಳಿಗೆ ಧುಮುಕುತ್ತಾಳೆ.

“ಮಾಡು ಇಲ್ಲವೇ ಮಡಿ” do or die ಎಂಬ ಕರೆಗೆ ಎಲ್ಲೆಡೆಯೂ ಬೆಂಬಲ ವ್ಯಕ್ತವಾಗುತ್ತದೆ. ಅದನ್ನು ಹತ್ತಿಕ್ಕಲು ಬ್ರಿಟಿಷ್ ಸರ್ಕಾರ ನೇತಾರರನ್ನು ಬಂಧಿಸುತ್ತದೆ. ಜನರ ಮೇಲೆ ಲಾಠಿ ಪ್ರಹಾರ ಗುಂಡೇಟಿನ ಪ್ರಯೋಗ ಮಾಡುತ್ತದೆ. ಇಂತಹ ಸಮಯದಲ್ಲಿ ಹೇಮ ಚಳುವಳಿಯನ್ನು ಪ್ರವೇಶಿಸುತ್ತಾಳೆ. ಕರಪತ್ರಗಳನ್ನು ಸಿದ್ಧಪಡಿಸುವುದು, ಜನರಿಗೆ ಹಂಚುವುದು, ಇವಳ ಮುಖ್ಯ ಕೆಲಸ. ಇದಕ್ಕಾಗಿ ಕಟ್ಟಿಗೆಗಳನ್ನು ಕಟ್ಟಿ ಅವುಗಳ ಮಧ್ಯದಲ್ಲಿ ಕರಪತ್ರಗಳನ್ನು ಅವಿತಿಟ್ಟು ಮನೆಮನೆಗೆ ತಲುಪಿಸುತ್ತಾಳೆ. ಸಮಾನ ಮನಸ್ರ ತಂಡವನ್ನು ಕಟ್ಟುತ್ತಾಳೆ. ಇದಕ್ಕೆ ನೆರವಾದವರು ಶೇಖರ, ವಿಶ್ವನಾಥ ದೇಸಾಯಿ ಇನ್ನೂ ಹಲವರು. ಇವರ ಕಥೆಯೂ ಬೇರೆಯಲ್ಲ. ಮಾಡು ಇಲ್ಲವೇ ಮಡಿ ಎಂಬ ಮಂತ್ರವನ್ನೇ ಅಳವಡಿಸಿಕೊಂಡು ದೇಶಕ್ಕಾಗಿ ತಮ್ಮ ಸ್ವಾರ್ಥವನ್ನು ತ್ಯಾಗ ಮಾಡಿದವರು. ಕೊನೆಗೆ ಹೋರಾಟದ ಹಾದಿಯಲ್ಲೇ ಇವರ ಅಂತ್ಯವಾಗುತ್ತದೆ. ಸಾರ್ಥಕಸೇವೆ ಮಾಡಿ ಮಡಿದವರು. ಎಂದು ಓದುಗರು ಭಾವುಕರಾಗುವುದು ಖಚಿತ.

ತಂದೆ ಮಗಳ ನಡುವೆ ನಡೆಯುವ ಸಂಭಾಷಣೆ,  ರೈಲಿನಲ್ಲಿ ನಡೆಯುವ ಸಂಭಾಷಣೆ ಓದುಗರ ಮನಸ್ಸಿನ ಮೇಲೆ ಗಾಢ ಪರಿಣಾಮವನ್ನು ಉಂಟು ಮಾಡುತ್ತವೆ. ಇಂತಹ ಕಾದಂಬರಿಯನ್ನು ಒಮ್ಮೆ ಮರೆಯದೇ ಓದಿ.


  • ಡಿ ಪದ್ಮನಾಭ – ಕವಿಗಳು, ಲೇಖಕರು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading