ನಾ ನೋಡಿದ ಸಿನಿಮಾ ‘ಪ್ರೇಮದ ಊರಲಿ’

ಸಿನಿಮಾದ ಕಥಾವಸ್ತು ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುತ್ತದೆ. ನಾಯಕ ಊರಲ್ಲೇ ಇರುವ ತರುಣ ರೈತ. ಒಬ್ಬ ನಾಯಕ ಇದ್ದ ಮೇಲೆ ಇಬ್ಬರು ನಾಯಕಿಯರು ಇರಬೇಕೆನ್ನುವುದು ಎಷ್ಟೋ ವರ್ಷಗಳಿಂದ ಬಂದ ಸಿದ್ಧ ಸೂತ್ರ.ಈ ಸಿನಿಮಾದಲ್ಲಿ ಮಳೆ ಕೂಡ ಒಂದು ಪಾತ್ರವೇ ಆಗಿ ವಿಜೃಂಭವಿಸಿದೆ. ‘ಪ್ರೀತಿಯ ಊರಲಿ’ ಈ ಸಿನಿಮಾದ ಕುರಿತು ಲೇಖಕರಾದ ಎನ್.ವಿ.ರಘುರಾಮ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸಿನಿಮಾ : ಪ್ರೇಮದ ಊರಲಿ
ನಿರ್ದೇಶಕರು : ಮನೋಜ್ ಕುಮಾರ್
ನಿರ್ಮಾಣ : ‘ವೆನಿಲ್ಲಾ ಎಂಟರ್‌ಟೈನ್‌ಮೆಂಟ್ಸ್’ ಮತ್ತು ‘ಜನಕಮ್ಮ ಪ್ರೊಡಕ್ಷನ್ಸ್’ ಬ್ಯಾನರ್
ತಾರಾಗಣ : ರಂಗಾಯಣ ರಘು, ಶ್ರೀ ರಾಮ್, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ
ಸಂಗೀತ : ಸುನಾದ್ ಗೌತಮ್

ಪ್ರೀತಿ, ಪ್ರೇಮದ ವಿಷಯದ ಬಗ್ಗೆ ಬಂದಿರುವಷ್ಟು ಸಿನಿಮಾಗಳು ಬಹುಶಃ ಬೇರೆ ಯಾವುದೇ ವಿಷಯಗಳ ಬಗ್ಗೆ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ಪ್ರೀತಿ, ಪ್ರೇಮ ಪ್ರತಿ ನಿತ್ಯ ಅರಳುವ ಹೊಸ ಗುಲಾಬಿಯಂತೆ. ಪ್ರತಿ ಬಾರಿ ಗುಲಾಬಿ ಅರಳಿದಾಗಲೂ ಹೊಸತನವನ್ನು ತೋರಿಸುತ್ತದೆ. ಒಮ್ಮೆ ಯೋಚಿಸಿ ನೋಡಿ ಇಡೀ ಊರಿನಲ್ಲಿ ಪ್ರೇಮದ ಗುಲಾಬಿ ಅರಳಿದರೆ ಹೇಗಿರಬಹುದು? ‘ಪ್ರೇಮದ ಊರಲಿ’ ಸಿನಿಮಾ ಈ ಪ್ರಯತ್ನ ಮಾಡಿ, ಅದರ ಪ್ರಯತ್ನದಲ್ಲಿ ಸಾಕಷ್ಟು ಯಶಸ್ವಿಯಾಗಿದೆ.

ಸಿನಿಮಾದ ಕಥಾವಸ್ತು ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುತ್ತದೆ. ನಾಯಕ ಊರಲ್ಲೇ ಇರುವ ತರುಣ ರೈತ. ಒಬ್ಬ ನಾಯಕ ಇದ್ದ ಮೇಲೆ ಇಬ್ಬರು ನಾಯಕಿಯರು ಇರಬೇಕೆನ್ನುವುದು ಎಷ್ಟೋ ವರ್ಷಗಳಿಂದ ಬಂದ ಸಿದ್ಧ ಸೂತ್ರ. ಇಲ್ಲಿ ಕೂಡ ಇಬ್ಬರು ನಾಯಕಿಯರು ಇದ್ದಾರೆ. ಒಬ್ಬಳು ಎಲ್ಲರನ್ನೂ ಗೋಳುಹೊಯ್ದುಕೊಳ್ಳುವ ತರ್ಲೆ ಹುಡುಗಿ, ಇನ್ನೊಬ್ಬಳು ಮೌನವೇ ಆಭರಣದಂತಿರುವ ತರುಣಿ. ಹಾಗೆಂದ ಮಾತ್ರಕ್ಕೆ ಇದೊಂದು ಕೇವಲ ತ್ರಿಕೋನ ಪ್ರೇಮ ಕಥೆ ಮಾತ್ರವಲ್ಲ. ಇಲ್ಲಿ , ಅಮ್ಮನ ನೆನಪು ಬಾರದಂತೆ ಮಗನನ್ನು ನೋಡಿಕೊಳ್ಳುವ ಶಪಥ ಮಾಡಿರುವ ಮುಗ್ಧ ತಂದೆಯ ಪಾತ್ರವಿದೆ. ಇವರೆಲ್ಲರ ನಡುವೆ ಆಪ್ತವಾದ ಪ್ರಪಂಚವನ್ನು ನಿರ್ಮಿಸಿ ಭಾವನಾತ್ಮಕವಾಗಿ ಕಟ್ಟಿಕೊಟ್ಟಿರುವ ಚಲನಚಿತ್ರವೇ “ಪ್ರೇಮದ ಊರಲಿ”.

ಸಣ್ಣ ಮಗುವಿರುವಾಗಲೇ ತಾಯಿಯನ್ನು ಕಳೆದುಕೊಂಡ ಮಗುವಿಗೆ ಮಲತಾಯಿಯ ಕಷ್ಟ ಬರಬಾರದೆಂದು ಮರು ಮದುವೆ ಆಗದೇ ಉಳಿದ ಅಪ್ಪನ ಪಾತ್ರದಲ್ಲಿ ರಂಗಾಯಣ ರಘು ಜೀವಿಸಿದ್ದಾರೆ. ನಾಯಕ ನಟನಾಗಿ ಶ್ರೀರಾಮ್ ಉತ್ತಮ ಅಭಿನಯ ನೀಡಿದ್ದಾರೆ. ನಾಯಕಿಯರಾಗಿ ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಸಹಜ ಅಭಿನಯ ನೀಡಿದ್ದಾರೆ. ರಾಜ್‌ಕಾಂತ್ ಅವರ ಛಾಯಾಗ್ರಹಣ ದೃಶ್ಯಗಳನ್ನು ಆಕರ್ಷಕವಾಗಿ ಸೆರೆಹಿಡಿದಿದೆ. ಸುನಾದ್ ಗೌತಮ್ ಅವರ ಸಂಗೀತ ಚಿತ್ರವನ್ನು ಸಂಗೀತಮಯವಾಗಿ ಮಾರ್ಪಡಿಸಿದ್ದಾರೆ.

ಈ ಸಿನಿಮಾದಲ್ಲಿ ಮಳೆ ಕೂಡ ಒಂದು ಪಾತ್ರವೇ ಆಗಿ ವಿಜೃಂಭವಿಸಿದೆ. ಬಹುಶಃ “ಮುಂಗಾರು ಮಳೆ” ಸಿನಿಮಾ ಬಂದ ನಂತರ ಸಿನಿಮಾವೊಂದರಲ್ಲಿ ಮಳೆಯನ್ನು ಇಷ್ಟೊಂದು ಸುಂದರವಾಗಿ ಮತ್ತು ಅರ್ಥ ಪೂರ್ಣವಾಗಿ ಚಿತ್ರಿಸಿರುವ ಸಿನಿಮಾ ನನಗೆ ಗೊತ್ತಿರುವ ಹಾಗೆ ಬಂದಿಲ್ಲ. ಮೊದಲನೇ ದೃಶ್ಯದಿಂದ ಹಿಡಿದು ಕೊನೆಯ ದೃಶ್ಯದವರೆಗೆ ಮಳೆಯ ಜೊತೆಗೆ ಸಂಭಾಷಣೆಗಳು ಧ್ವನಿಗೂಡಿಸಿ ಬಂದಿವೆ. ಇದರ ಜೊತೆಗೆ ನಾಯಕಿಯೊಬ್ಬಳ ಜಡೆ ಕೂಡ ಚಿತ್ರದ ಉದ್ದಕ್ಕೂ ಆ ಕಡೆ, ಈ ಕಡೆ ಓಲಾಡುತ್ತಾ ತನ್ನ ಇರುವನ್ನು ತೋರಿಸುತ್ತಾ, ಕೊನೆಗೆ ಒಂದು ಅನಿರೀಕ್ಷಿತ ತಿರುವು ಕೊಡುತ್ತದೆ. ಅದೇನೆಂದು ಚಿತ್ರದಲ್ಲಿ ನೋಡಿ ತಿಳಿದರೆ ಚೆಂದ. ಇದೆಲ್ಲವೂ ನಿರ್ದೇಶಕರಿಗೆ ಚಿತ್ರ ಮಾಧ್ಯಮದ ಮೇಲಿರುವ ಹಿಡಿತವನ್ನು ತೋರಿಸುತ್ತದೆ. ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಮನೋಜ್ ಕುಮಾರ್ ವಿಶೇಷವಾಗಿ ಅಭಿನಂದನಾರ್ಹರು.

ಗುಲಾಬಿ ಇದ್ದಲ್ಲಿ ಮುಳ್ಳು ಇರಲೇ ಬೇಕಲ್ಲ. ಆದರೆ ಮುಳ್ಳುಗಳನ್ನು ತೆಗೆಯಲು ಬಳಸಿರುವ ವಿಧಾನದಲ್ಲಿ ಹೊಸತನವಿದೆ. ಅದೇನೆಂದು ತಿಳಿಯಲು ಸಿನಿಮಾ ನೋಡಬೇಕು.

ಹಳ್ಳಿಯ ಹುಡುಗಿ ಅಮೇರಿಕಾದ ಹುಡುಗನನ್ನು ಮದುವೆ ಮಾಡಿಕೊಂಡು ಹೋದರೆ, ಜನ ಸಂತೋಷ ಪಡುತ್ತಾರೆ. ಅದೇ ಜನ ವಿದೇಶದಲ್ಲಿ ಓದಿದ ಹುಡುಗಿ ಇಲ್ಲಿಯ ಹಳ್ಳಿ ಹುಡುಗನನ್ನು ಮದುವೆಯಾದರೆ “ಆಕೆ ಅಡ್ಜಸ್ಟ್ ಆಗಲ್ಲ, ಬಿಡು” ಎಂದು ಮೊದಲೇ ತೀರ್ಪು ಕೊಟ್ಟು ಬಿಡುತ್ತಾರೆ ಎನ್ನುವ ಸಂಭಾಷಣೆಯ ಮಧ್ಯೆ, ಓದದೆ ರೈತನಾಗಿ ಹಳ್ಳಿಯಲ್ಲೇ ಉಳಿದ ಮಗನಿಗೆ “ಗ್ರಾಜ್ಯುಯೇಟ್” ಹುಡುಗಿ ಜೊತೆ ಮದುವೆ ಮಾಡಬೇಕು ಎನ್ನುವ ಅಪ್ಪನ ಆಸೆ ಕೈಗೂಡಿತೆ? ಅಸಲಿಗೆ ನಾಯಕ ಯಾರನ್ನು ಪ್ರೀತಿಸಿದ? ಆತನಿಗೆ ಪ್ರೀತಿ ದಕ್ಕಿತೇ? ಇವೆಲ್ಲವನ್ನೂ ತಿಳಿಯಲು ಸಿನಿಮಾ ನೋಡಬೇಕು.

“ಅಪ್ಪ ಎಂದರೆ ಆಕಾಶ” ಎಂದು ಮೊದಲ ಬಾರಿ ಯಾರು ಹೇಳಿದರೋ ನನಗೆ ಗೊತ್ತಿಲ್ಲ. ಆದರೆ ತಂದೆ ಮಗನ ಸಂಬಂಧವನ್ನು ಅತ್ಯಂತ ಸುಂದರವಾಗಿ ಚಿತ್ರಿಸಿರುವ ಚಿತ್ರಗಳಲ್ಲಿ ಇದು ಮೊದಲನೇ ಸಾಲಿನಲ್ಲಿ ನಿಲ್ಲುವುದೆಂದು ಹೇಳಬಹುದು.

ಒಟ್ಟಾರೆಯಾಗಿ, ‘ಪ್ರೀತಿಯ ಊರಲಿ’ ಒಂದು ‘ಫೀಲ್-ಗುಡ್’ ಸಿನಿಮಾ. ಇದು ಹಳ್ಳಿ ಜನರ ಮುಗ್ಧತೆ, ಭಾವನೆಗಳ ಪಯಣ ಮತ್ತು ಸಂಬಂಧಗಳ ಸುಂದರ ದೃಶ್ಯಕಾವ್ಯವನ್ನು ಬೆಳ್ಳಿತೆರೆಯ ಮೇಲೆ ಮೂಡಿಸುತ್ತದೆ. ಬಹುಶಃ ಕಡಿಮೆ ಬಜೆಟ್‌ನ ಚಿತ್ರವಾಗಿದ್ದರೂ, ಪ್ರೇಕ್ಷಕರಿಂದ ಒಳ್ಳೆಯ ಪ್ರೋತ್ಸಾಹ ಪಡೆದುಕೊಳ್ಳುತ್ತಿದೆ. ಒಳ್ಳೆಯ ಸಿನಿಮಾ ತನ್ನ ಪ್ರೇಕ್ಷಕರನ್ನು ತಾನೇ ಚಿತ್ರಮಂದಿರಕ್ಕೆ ಕರೆಸಿಕೊಳ್ಳುತ್ತದೆ ಎಂಬುದಕ್ಕೆ ಈ ಚಿತ್ರ ಉದಾಹರಣೆಯಾಗಿದೆ. ಉತ್ತಮ ಚಿತ್ರ ನಿರ್ಮಾಣ ಮಾಡಿದವರು ಕೂಡ ಅಭಿನಂದನಾರ್ಹರು.

ಸಾಧ್ಯವಾದರೆ ಒಮ್ಮೆ ಚಲನಚಿತ್ರ ಮಂದಿರಕ್ಕೆ ಹೋಗಿ ನೋಡಿ.


  • ಎನ್.ವಿ.ರಘುರಾಮ್ – ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading