ಕಾಡಲ್ಲಿ ರೇಡ್ಕರ್ ಅರಳಿಸಿದ ಆರೋಗ್ಯ ಭಾಗ್ಯ

ರವಿ ರೇಡ್ಕರ್ ಅವರು ಫಾರ್ಮಸಿ ವಿಷಯದಲ್ಲಿ ಡಿಪ್ಲೋಮಾ ಮುಗಿಸಿ, 1992 ರಲ್ಲಿ ಜೋಯಿಡಾದಲ್ಲಿ ಆದಿ ನಾರಾಯಣ ಔಷಧಿ ಅಂಗಡಿಯನ್ನು ಸ್ಥಾಪಿಸಿದ್ದಾರೆ. ಹೀಗೆ ಪ್ರಾರಂಭವಾದ ಅವರ ಆರೋಗ್ಯ ಸೇವೆಯನ್ನು ವಿಸ್ತರಿಸಿದ್ದಾರೆ. ಅವರ ಸಾಧನೆಯ ಕುರಿತು ಲೇಖಕರಾದ ರಾಜು ಅಡಕಳ್ಳಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ರವಿ ರೇಡ್ಕರ್… ಜೋಯಿಡಾದ ಸೋನಾರವಾಡದ ರೇಣುಕಾ ಅವರ ಪಾಲಿಗೆ ಮುದ್ದಿನ ಗಂಡ. ಸುತ್ತಮುತ್ತಲ ಊರಿನ ರೋಗಿಗಳ ಪಾಲಿಗೆ ಇವರು ಆರೋಗ್ಯ ಬಂಧು. ಕಾಡು ಮೇಡು ಪ್ರೀತಿಸುವವರಿಗೆ ಇವರು ಪರಿಸರವಾದಿ. ಊರಮಂದಿಗೆಲ್ಲ ಇವರು ಸಮಾಜ ಸೇವಕರು. ಈ ನೆಲ, ನದಿ, ಪ್ರಾಣಿ ಪಕ್ಷಿಗಳ ಕಾಳಜಿಯಿರುವವರಿಗೆ ಇವರು ಹೋರಾಟಗಾರರು. ರಾಜಕೀಯದವರ ಕಣ್ಣಿಗೆ ಇವರು ಕಾಂಗ್ರೆಸ್ ಮುಖಂಡರು. ಒಟ್ಟಾರೆ ಒಂದು ವ್ಯಕ್ತಿ. ಹಲವು ಶಕ್ತಿ.

ಜೋಯಿಡಾದ ಕಾಡು ಇವರಿಗೆ ಪಾಡು. ಆದರೆ ಅಲ್ಲಿಯ ಕಾಡನ್ನು ನಾಡಿಗಿಂತ ಹೆಚ್ಚು ಜೋಪಾನ ಮಾಡುತ್ತಾ, ಈ ಪಾಡನ್ನೇ ಹಾಡು ಮಾಡಿಕೊಂಡ ಅಪರೂಪದ ವ್ಯಕ್ತಿ ಈ ರವಿ ರೇಡ್ಕರ್. ಒಂಥರಾ ಇವರಿಗೆ ಕಾಡು ಎಂದರೆ ಲಾಡು ಇದ್ದಂತೆ.

ರವಿಯವರು ಒಮ್ಮೆ ಪಕ್ಕದ ಊರಾದ ಖಾನಗಾವಿಗೆ ಹೋದಾಗ ಅಲ್ಲಿ ಡೀಹೈಡ್ರೇಶನ್ ಸಮಸ್ಯೆಯಿಂದ ಒಂದು ಮಗು ತೀರಿಕೊಂಡಿದ್ದನ್ನು ನೋಡಿ ಇವರ ಮನ ಕಲಕಿ ಹೋಯಿತು. ಒಂದು ಸಣ್ಣ ಒ.ಆರ್.ಎಸ್. ಪ್ಯಾಕೆಟ್ಟು ಇದ್ದರೆ ಆ ಮಗುವನ್ನು ಬದುಕಿಸಬಹುದಿತ್ತು ಎಂದು ಆಗ ಇವರಿಗೆ ಅನಿಸಿತ್ತಂತೆ. ಆದರೆ ಏನು ಮಾಡೋಣ? ಜೋಯಿಡಾ ತಾಲೂಕಿನಲ್ಲಿ ಸತ್ತೆ ಎಂದರೂ ಬದುಕಿಸಲು ಆಗ ಒಂದೇ ಒಂದು ಔಷಧದ ಅಂಗಡಿಯೂ ಇರಲಿಲ್ಲವಂತೆ.

ಹೀಗಾಗಿ ಅಂದೇ ರವಿ ರೇಡ್ಕರ್ ತಾವು ಮೊದಲು ಔಷಧ ಅಂಗಡಿ ತೆರೆಯಬೇಕೆಂದು ಶಪಥ ಮಾಡಿ ಮುಂದೆ, ಫಾರ್ಮಸಿ ವಿಷಯದಲ್ಲಿ ಡಿಪ್ಲೋಮಾ ಮುಗಿಸಿ, 1992 ರಲ್ಲಿ ಜೋಯಿಡಾದಲ್ಲಿ ಆದಿ ನಾರಾಯಣ ಔಷಧಿ ಅಂಗಡಿಯನ್ನು ಸ್ಥಾಪಿಸಿಯೇಬಿಟ್ಟರು. ಹೀಗೆ ಪ್ರಾರಂಭವಾದ ಇವರ ಆರೋಗ್ಯ ಸೇವೆಯ ಕಾರ್ಯಕ್ಷೇತ್ರ ಇಂದು ಬಹುವಿಧವಾಗಿ ವಿಸ್ತರಿಸಿದೆ.

ಸುಮಾರು 18 ವರ್ಷಗಳ ಹಿಂದೆ ಜೋಯಿಡಾ ಮಂಗನ ಕಾಯಿಲೆಗೆ ತತ್ತರಿಸಿತ್ತು. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಆಗ ಸೂಕ್ತ ಔಷಧಿಯೂ ಇರಲಿಲ್ಲ. ವೈದ್ಯರೂ ಸಿಗಲಿಲ್ಲ. ಒಳ್ಳೆ ಗರುಡಗಂಬದಂತೆ ಆಸ್ಪತ್ರೆ ಕಟ್ಟಡ ಮಾತ್ರ ಸೊಂಪಾಗಿ ಅಲ್ಲಿ ನಿಂತಿತ್ತು. ಹೀಗಾಗಿ ಮಂಗನ ಕಾಯಿಲೆಗೆ ಈಡಾದ ಮೂವರು ಮಂದಿ ಕೊನೆಯುಸಿರೆಳೆಯಬೇಕಾಯಿತು.

ಆರೋಗ್ಯ ವ್ಯವಸ್ಥೆ ಉದ್ಧಾರವಾಗದಿದ್ದರೆ ಮಂಗನ ಕಾಯಿಲೆಯಿಂದ ಇನ್ನಷ್ಟು ಮಂದಿಯೂ ಮಂಗನಂತಾಗಬೇಕಾದೀತು. ಜೋಯಿಡಾ, ಅಣಶಿ ಭಾಗದವರಿಗೆ ಡಿಸೆಂಟ್ರಿಯಾದರೆ ಅವರು ತಂಬಿಗೆ ಹಿಡಿದುಕೊಂಡು ದಾಂಡೇಲಿ ಅಥವಾ ಕಾರವಾರದ ಆಸ್ಪತ್ರೆಗೆ ಹೋಗುವಂಥ ವಿಪರೀತ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಈ ರವಿಯವರು ತಾವೇ ಮುಂದಾಗಿ ಮೂರು ದಿನ ನಿರಂತರ ಉಪವಾಸ ಸತ್ಯಾಗ್ರಹ ಕೈಗೊಂಡು ಸರ್ಕಾರಿ ಆಸ್ಪತ್ರೆ ಸೌಲಭ್ಯಕ್ಕಾಗಿ ಆಗ್ರಹಿಸುತ್ತಾ ಆರೋಗ್ಯ ಇಲಾಖೆಗೆ ಬಾರುಕೋಲಿನ ರುಚಿ ತೋರಿಸಿದರು.

ಇವರು ಸತ್ಯಾಗ್ರಹಕ್ಕೆ ಕುಳಿತಾಗ ಇವರನ್ನು ನೋಡಲು ಸುಪ್ರೀಂ ಕೋರ್ಟಿನ ಖ್ಯಾತ ವಕೀಲರಾದ ಕಾರವಾರದ ದೇವದತ್ ಕಾಮತರು ಬಂದಿದ್ದರಂತೆ. ಇವರ ಸಾಮಾಜಿಕ ಕಾಳಜಿ ನೋಡಿದ ಕಾಮತರು, ಆ ಭಾಗದ ಕಾಡಿನಲ್ಲಿರುವ ಜನರಿಗೆ ಆರೋಗ್ಯ ಸೇವೆ ಕಲ್ಪಿಸಲು ಅಂಬ್ಯುಲೆನ್ಸ್ ವಾಹನವನ್ನೇ ಕೊಡುಗೆಯಾಗಿ ನೀಡಿದರಂತೆ.

ಇದರ ಕಾರ್ಯನಿರ್ವಹಣೆಗಾಗಿ ಸಂಜೀವಿನಿ ಸೇವಾ ಟ್ರಸ್ಟ್ ಎಂಬ ಸ್ವಯಂಸೇವಾ ಸಂಸ್ಥೆಯನ್ನು ರವಿ ರೇಡ್ಕರ್ ಅವರ ಅಧ್ಯಕ್ಷತೆಯಲ್ಲಿ, ನ್ಯಾಯವಾದಿ ಸುನಿಲ್ ದೇಸಾಯಿ ಮತ್ತು ಜಯಾನಂದ ಡೇರೆಕರರ ಸಹಭಾಗಿತ್ವದಲ್ಲಿ ಪ್ರಾರಂಭಿಸಬೇಕಾಯಿತು. ಈಗ ಈ ಟ್ರಸ್ಟ್ ತನ್ನ ಸಮರ್ಪಕ ಕಾರ್ಯ ಚಟುವಟಿಕೆಗಳಿಂದ ಜೋಯಿಡಾ ತಾಲೂಕಿನ ಕಾಡು ಮೇಡುಗಳಲ್ಲಿ ಆರೋಗ್ಯ ಸಮಸ್ಯೆಯಲ್ಲಿರುವವರಿಗೆ ಆಪದ್ಬಾಂಧವನಾಗಿ ಜನಪ್ರೀತಿ ಗಳಿಸಿರುವುದು ವಿಶೇಷ. ಒಂದುವರೆ ಲಕ್ಷಕ್ಕೂ ಹೆಚ್ಚು ಮಂದಿಗೆ ಇದರಿಂದ ಪ್ರಯೋಜನ ಸಿಕ್ಕಿದೆ. ಇದಕ್ಕೆ ಕಾರವಾರದ ಎಸ್. ಪಿ. ಕಾಮತ್ ಅವರ ನೇತೃತ್ವದ ಕ್ರೂಗರ್ ಪ್ರತಿಷ್ಠಾನವು ಅಗತ್ಯ ನೆರವು ನೀಡಿ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹ.

ರವಿ ರೇಡ್ಕರರು ಈ ಸಂಚಾರಿ ಆಸ್ಪತ್ರೆಯ ಕಾರ್ಯ ಚಟುವಟಿಕೆಗಳನ್ನು ದೇವರ ಪೂಜೆಯಂತೆ ಅತ್ಯಂತ ಭಕ್ತಿಯಿಂದ ನಿರ್ವಹಿಸುತ್ತಿದ್ದಾರೆ. ಸಂಜೀವಿನಿ ಟ್ರಸ್ಟಿನ ಈ ಆರೋಗ್ಯ ಸೇವಾ ವಾಹನದಲ್ಲಿ ಡಾ. ಬಿ. ವಿ. ಗಣೇಶ್ ಎಂಬ ವೈದ್ಯರು ಮತ್ತು ಮತ್ತೊಬ್ಬ ಸಹಾಯಕರು ಇರುತ್ತಾರೆ. ಅಗತ್ಯ ಔಷಧಗಳ ದಾಸ್ತಾನು ಕೂಡ ಇದರಲ್ಲಿ ಲಭ್ಯ. ಈ ವಾಹನವು ಜೋಯಿಡಾದ ಗುಡ್ಡಗಾಡು ಪ್ರದೇಶಗಳ ಎಪ್ಪತ್ತು ಕಡೆಗಳಿಗೆ ನಿಗದಿತ ದಿನಗಳಂದು ತೆರಳಿ, ಅಲ್ಲಿ ನಾನಾ ರೋಗಗಳಿಂದ ಬಳಲುತ್ತಿರುವ ಮಂದಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.

ಕಡುಗಾಳಿ, ಅಂಬೋಲಿ, ಮಾಲಾಂಗಿನಿ, ಅಂಬೋರ್ಡೆ, ನಗರಿ ಚಾವುರ್ಲಿ, ಅಣಶಿ, ನುಜ್ಜಿ ಮುಂತಾದ ದಟ್ಟಡವಿಯಲ್ಲಿಯ ಎಪ್ಪತ್ತು ಹಳ್ಳಿಗಳಿಗೆ ಪ್ರತಿ ವಾರವೂ ತೆರಳಿ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುವ ಏರ್ಪಾಡು ಮಾಡಲಾಗಿದೆ. ಹೀಗಾಗಿ ಈ ಸಂಜೀವಿನಿ ಟ್ರಸ್ಟ್ ನಿಜ ಅರ್ಥದಲ್ಲಿ ಸ್ಥಳೀಯರಿಗೆ ಆರೋಗ್ಯ ಸಂಜೀವಿನಿಯಾಗಿದೆ. ಕಾರವಾರದ ಅಶ್ವಿನ್ ದೇಸಾಯಿ ಎಂಬ ಮಹಾನುಭಾವರು ಇದಕ್ಕೆ ಅಗತ್ಯ ಔಷಧಗಳನ್ನು ಉಚಿತವಾಗಿ ಪೂರೈಸುತ್ತಾ, ಪುಣ್ಯ ಕಟ್ಟಿಕೊಳ್ಳುತ್ತಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಮತ್ತೊಂದು ಆಂಬ್ಯುಲೆನ್ಸ್ ವಾಹನವನ್ನು ಆರೋಗ್ಯ ಸೇವೆಗೆ ತೊಡಗಿಸಿದ್ದು, ಭಾರಿ ಸಂಖ್ಯೆಯಲ್ಲಿ ಉಚಿತ ಮಾಸ್ಕ್ ಗಳನ್ನು ಸಾರ್ವಜನಿಕರಿಗೆ ಹಂಚಿದ್ದು ಈ ಟ್ರಸ್ಟಿನ ಸಾಧನೆ. ಆಗ ತುರ್ತು ಸೇವೆಗಾಗಿ ಇನ್ನೂರಕ್ಕೂ ಹೆಚ್ಚು ಆಕ್ಸಿಜನ್ ಸಿಲೆಂಡರುಗಳನ್ನು ದಾಂಡೇಲಿ, ಜೋಯಿಡಾ, ಕಾರವಾರ ಮುಂತಾದ ಕಡೆಗಳಿಗೆ ವಿತರಿಸುವ ಕಾರ್ಯವನ್ನು ಈ ಟ್ರಸ್ಟ್ ಯಶಸ್ವಿಯಾಗಿ ನಿರ್ವಹಿಸಿತ್ತು.

ಈಗಲೂ ಪ್ರತಿ ತಿಂಗಳು ಜೋಯಿಡಾ ತಾಲೂಕಿನ ವಿವಿಧ ಕಡೆಗಳಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸುತ್ತ ಹೊಸ ಸಂಚಲನ ಮೂಡಿಸಲಾಗುತ್ತಿದೆ. ನೂರಕ್ಕೂ ಇಂಥ ಹೆಚ್ಚು ಶಿಬಿರಗಳು ಈಗಾಗಲೇ ನಡೆದಿವೆ. ಇನ್ನೂರಕ್ಕೂ ಹೆಚ್ಚು ಕಡುಬಡವರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ಅವರ ಬಾಳಿಗೆ ಬೆಳಕಾದ ಕೆಲಸವೂ ಈ ಸಂಜೀವಿನಿ ಟ್ರಸ್ಟಿನಿಂದ ನಡೆದಿದೆ. ಬೆಳಗಾವಿಯ ಏಕಲ್ ಅಭಿಯಾನ್, ಕೆ.ಎಲ್.ಇ. ಆಸ್ಪತ್ರೆ, ಹುಬ್ಬಳ್ಳಿಯ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ, ಅಶೋಕ ಆಸ್ಪತ್ರೆಗಳ ಸಹಕಾರವೂ ಸಿಕ್ಕಿರುವುದರಿಂದ, ಈ ಎಲ್ಲಾ ಸೇವಾ ಕಾರ್ಯಗಳು ಯಶಸ್ವಿಯಾಗಲು ಸಾಧ್ಯವಾಗಿದೆ.

ಹೀಗೆ ಈ ಟ್ರಸ್ಟಿನ ಕೆಲಸ ಕಾರ್ಯಗಳು ಹೆಚ್ಚುತ್ತಾ ಹೋದಂತೆ ರೇಡ್ಕರರು ಈಗ ತಮ್ಮನ್ನು ಸಂಪೂರ್ಣವಾಗಿ ಇಂಥ ಸೇವಾ ಕಾರ್ಯಗಳಿಗೇ ಸಮರ್ಪಿಸಿಕೊಂಡಿದ್ದಾರೆ. ಇದರಿಂದಾಗಿ ಹೆಂಡ್ತಿ ಜತೆ ಪಕ್ಕದ ಹುಬ್ಬಳ್ಳಿಗೆ ಹೋಗಿ ಇವರಿಗೆ “ಪ್ರೇಮದ ಊರಲ್ಲಿ” ಸಿನಿಮಾ ನೋಡುವುದಕ್ಕೂ ಪುರುಸೊತ್ತೇ ಇಲ್ಲದಂತಾಗಿದೆ. ಇದರ ಬದಲು ತಮ್ಮ ಜೋಯಿಡಾವನ್ನೇ ಇವರು ಪ್ರೇಮದ ಊರನ್ನಾಗಿ ಮಾಡಿಕೊಂಡುಬಿಟ್ಟಿದ್ದಾರೆ.

ಸುಮ್ಮನೆ ರಾಜಕೀಯ ಹಾರಾಟಕ್ಕಾಗಿ ಇವರು ಹೋರಾಟ ಮಾಡುವವರಲ್ಲ. ವರ್ಷಕ್ಕೊಮ್ಮೆ ದೀಪಾವಳಿಯಲ್ಲಿ ಬಲಿವೇಂದ್ರನಿಗೆ ಮೀಸೆ ಬಿಡಿಸಿದಂತೆ, ಇವರು ಅಪರೂಪಕ್ಕೆ ತೋರುಗಾಣಿಕೆಯ ಪರಿಸರ ಪ್ರೀತಿ ತೋರುವ ವ್ಯಕ್ತಿಯಲ್ಲ. ಇವರದ್ದೇನಿದ್ದರೂ ನೈಜ ಕಳಕಳಿಯ ಹೋರಾಟ. 1994 ರಲ್ಲಿ ಕಾಳಿ ಉಳಿಸಿ ಆಂದೋಲನದ ಅಂಗವಾಗಿ, ಮಾವಳಂಗಿ ವಿದ್ಯುತ್ ಯೋಜನೆಯನ್ನು ವಿರೋಧಿಸಿ ಇವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆದು, ಕಾಳಿಗೆ ಕಳಂಕ ತರುವ ಆ ಮಾರಕ ಯೋಜನೆಯನ್ನು ನಿಲ್ಲಿಸಿರುವುದು ಮತ್ತು ರಾಮನಗರದಲ್ಲಿ ಕಲ್ಯಾಣಿ ಸ್ಟೀಲ್ ಘಟಕವು ಪ್ರಾರಂಭಿಸಬೇಕಿದ್ದ ಯೋಜನೆಯನ್ನು ಪರಿಸರದ ಹಿತದೃಷ್ಟಿಯಿಂದ ತಡೆದು ನಿಲ್ಲಿಸಿದ್ದು ಇದಕ್ಕೆ ಸೂಕ್ತ ನಿದರ್ಶನ. ಹೀಗಾಗಿ ಕಾಳಿಹೊಳೆ ಉಳಿಸಿ ಎಂಬ ರೇಡ್ಕರರ ಕೂಗು ಹೊಳೆಯಲ್ಲಿ ಹೋಮ ಮಾಡಿದಂತಾಗಿಲ್ಲ ಎಂದು ಖಚಿತವಾಗಿ ಹೇಳಬಹುದು.

ಅಣಶಿ ಸಂರಕ್ಷಿತ ಅರಣ್ಯ ಧಾಮದಲ್ಲಿ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸದಂತೆ ನಡೆದ ಹೋರಾಟದಲ್ಲಿ ಇವರು ಮುಂಚೂಣಿಯಲ್ಲಿದ್ದರು. ಅರಣ್ಯ ವಾಸಿಗಳ ಹಿತ ರಕ್ಷಣೆಗೆ ಸಂಬಂಧಪಟ್ಟಂತೆ ಕಸ್ತೂರಿ ರಂಗನ್ ಸಮಿತಿ ವರದಿ ಸರಿ ಇಲ್ಲ ಎಂದು ಸೊಲ್ಲೆತ್ತಿ, ಮೂರು ಬಾರಿ ಜೋಯಿಡಾ ತಾಲೂಕು ಬಂದ್ ಚಳವಳಿ ನಡೆಸಿದ್ದು, ಸಾರ್ವಜನಿಕರಿಂದ ಈ ಬಗ್ಗೆ ಪ್ರತಿಭಟನೆ ಪೂರಿತ ಸಹಿ ಸಂಗ್ರಹಿಸಿ, ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಅದನ್ನು ಸಲ್ಲಿಸಿ ಬಂದಿದ್ದು ರೇಡ್ಕರ್ ಅವರ ಪರಿಸರ ಕಾಳಜಿಗೆ ನಿದರ್ಶನ.

ಕೆಲವೊಮ್ಮೆ ಕಾಡುಗಳ್ಳರನ್ನು ಹಿಡಿಯಲು ತಮ್ಮ ಪಡೆ ಕಟ್ಟಿಕೊಂಡು ಈ ರೇಡ್ಕರ್ ರೇಡಿಗೆ ಹೋದಾಗ, ಅಲ್ಲಿ ಅರಣ್ಯ ಇಲಾಖೆಯವರೇ ಇವರ ಕೈಗೆ ಸಿಕ್ಕಿ ಬಿದ್ದ ಪ್ರಕರಣಗಳು ನಡೆದಿವೆಯಂತೆ. ಗಿಡ ಮರಗಳನ್ನು ರಕ್ಷಿಸಬೇಕಿದ್ದ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿಗಳೇ ಅವುಗಳನ್ನು ಭಕ್ಷಿಸಿದ್ದು ಮತ್ತು ಬೇಲಿ ಗೂಟವೇ ಎದ್ದು ಅರಣ್ಯ ಮೇಯುವಂತೆ, ಅಭಿವೃದ್ಧಿಯ ಹೆಸರಿನಲ್ಲಿ ಅನಗತ್ಯವಾಗಿ ಮರ ಕಡಿಯುವುದಕ್ಕೆ ಮುಂದಾಗಿದ್ದ ಅರಣ್ಯ ಇಲಾಖೆಯವರೇ ಇವರ ಕನ್ನಡಕದ ನದರಿಗೆ ಸಿಕ್ಕಿ ಬಿದ್ದಂಥ ಅನೇಕ ಪ್ರಕರಣಗಳಿವೆ.

ಇದರಿಂದಾಗಿ ಅರಣ್ಯ ಇಲಾಖೆಯವರಿಗೆ ರೇಡ್ಕರ್ ಅವರನ್ನು ಕಂಡರೆ ದೂರ್ವಾಸರನ್ನು ಕಂಡಂತೆ ಭಾರೀ ಭಯವಂತೆ. ಹಿಂದೆ ಕಾಡಿನ ಸಿಂಹದಂತೆ ಇವರು ಘರ್ಜಿಸಿ ಪೋಲಿಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರ ಬಯಲಿಗೆಳೆದು ಕೆಲವರನ್ನು ಮನೆಗೂ ಕಳಿಸಿದ್ದರು.

ಅರಣ್ಯದ ಉಪಾಸನೆ ನಡೆಸಬೇಕಾದವರು ಅರಣ್ಯದಲ್ಲೇ ಉಪ-ವಾಸನೆ ಮಾಡುವ ಉಪದ್ಯಾಪಿ ಕೆಲಸ ಶುರು ಹಚ್ಚಿಕೊಂಡರೆ ಸಹಿಸುವುದಾದರೂ ಹೇಗೆ ಎಂಬುದು ರೇಡ್ಕರರ ಪ್ರಶ್ನೆ. ಕನ್ನಡಕ್ಕಾಗಿ ಕೈ ಎತ್ತು – ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕುವೆಂಪು ಹೇಳಿದ್ದರು. ಕಾಡಿಗಾಗಿ ಕೈ ಎತ್ತು… ನಿನ್ನ ಕೈ ಕುಂಬಳಕಾಯಿಯಂತಾಗುತ್ತದೆ ಎಂದು ನಂಬಿ ಸಕ್ರಿಯವಾಗಿರುವವರು ಈ ರವಿ ರೇಡ್ಕರರು.

ಜೋಯಿಡಾ ಜಂಗಲ್ಲನ್ನು ನೋಯಡಾದಂತೆ ಕಾಂಕ್ರೀಟ್ ಜಂಗಲ್ಲನ್ನಾಗಿ ಮಾಡಲು ಬಿಡಬಾರದು. ಜೋಯಿಡಾಕ್ಕೆ ಗರುಡನೇ ಬರಲಿ, ಕವಿ ನೆರುಡನೇ ಮತ್ತೊಮ್ಮೆ ಅವತರಿಸಿ ಬರಲಿ, ಅವರೆಲ್ಲ ಖುಷಿಯಿಂದ ಜೋಗುಳ ಹಾಡುವಂತಿರಬೇಕು ಈ ಜೋಯಿಡಾ ಎಂಬ ಬಯಕೆ ಈ ರೇಡ್ಕರ್ ಅವರದ್ದು. ರೆಡ್ ಕಾರಿಗಿಂತಲೂ ರೇಡ್ಕರರಿಗೆ ಗ್ರೀನ್ ಕಾಡೇ ಹೆಚ್ಚು ಇಷ್ಟವಂತೆ. ಕಾರಣ ಕಾಡೇ ಇವರಿಗೆ ಗೂಡು. ಬದುಕು ಕಟ್ಟಿಕೊಟ್ಟ ಬೀಡು.

ಬೊಂಡೇಲಿ, ವೀರಲ್ ಮತ್ತು ಬಾಮನೆ ಈ ಮೂರು ಗ್ರಾಮಗಳಲ್ಲಿ ಸೌರಶಕ್ತಿಯ ಕ್ರಾಂತಿ ನಡೆದು, ಅಲ್ಲಿಯ ಕಾಡಿನ ನಡುವೆ ಹೊಸ ಬೆಳಕು ಮೂಡುವಲ್ಲಿಯೂ ರೇಡ್ಕರರ ಸಹಾಯ ಹಸ್ತವಿದೆ. ಇವುಗಳಿಂದ ಒಟ್ಟು ಸುಮಾರು 140 ಕುಟುಂಬಗಳಿಗೆ ಅನುಕೂಲವಾಗಿದೆ. ಜೋಯಿಡಾದಲ್ಲಿ ವ್ಯಾಪಾರಸ್ಥರ ಸಂಘಟನೆ ಕಟ್ಟಿ ಅವರ ಹಿತ ರಕ್ಷಣೆಗೆ ದುಡಿದ ಸಾರ್ಥಕತೆಯೂ ಇವರದ್ದು. ಅಲ್ಲಿ ನಡೆದ ಗೆಡ್ಡೆ ಗೆಣಸುಗಳ ಮೇಳ, ಕಬ್ಬಿನ ಮೇ, ಹಲಸಿನ ಮೇಳಗಳ ಯಶಸ್ಸಿನಲ್ಲಿಯೂ ಇವರ ಸಹಭಾಗಿತ್ವವಿದೆ.

ಹಿಂದೆ ಇವರು ಬಿಜೆಪಿಯಲ್ಲಿದ್ದರೂ, ಈಗ ಕಾಂಗ್ರೆಸ್ಸಿನಲ್ಲಿ ರಾಜ್ಯ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಆದರೆ ವಾಸ್ತವವಾಗಿ ರಾಜಕೀಯಕ್ಕಿಂತ ಇವರಿಗೆ ಸಮಾಜ ಸೇವೆಯಲ್ಲಿಯೇ ಹೆಚ್ಚು ಆಸಕ್ತಿ. ಹಾಗಂತ ರಾಜಕೀಯಕ್ಕಾಗಿ ಸಮಾಜ ಸೇವೆಯನ್ನು ಬಳಸಿಕೊಳ್ಳುವ ಎಂಟೆಂಟ್ಲೆ 64 ಎನ್ನುತ್ತಾ ಲೆಕ್ಕಾಚಾರ ಹಾಕುವ ಅಸಾಮಿಯೂ ಇವರಲ್ಲ.

1986 ರಲ್ಲಿ ಸಿದ್ದೇಶ್ವರ ಯುವಕ ಮಂಡಲವನ್ನು ಸ್ಥಳಿಯವಾಗಿ ಕಟ್ಟಿ ಬೆಳೆಸಿ, ಇದರ ಅಧ್ಯಕ್ಷರಾಗಿ, ಕ್ರೀಡೆ ಮತ್ತು ಯುವಜನ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಜಿಲ್ಲಾ ಯುವ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು, ಕಾಳಿ ಬ್ರಿಗೇಡ್ ಸಂಘಟನೆಯ ಮುಂಚೂಣಿಯಲ್ಲಿದ್ದು, ಅರಣ್ಯದಂಚಿನಲ್ಲಿ ವಾಸವಿರುವ ಹಳ್ಳಿಗರ ಸಮಸ್ಯೆಗಳಿಗೆ ಧ್ವನಿಯಾಗಿದ್ದು, ಸ್ವಚ್ಛತಾ ಆಂದೋಲನ, ಮಕ್ಕಳ ಪೌಷ್ಠಿಕ ಆಹಾರಗಳ ಬಗ್ಗೆ ಅಭಿಯಾನ ಕೈಗೊಂಡಿದ್ದು, ಆರ್ಗ್ಯಾನಿಕ್ ಸೊಸೈಟಿ ಪ್ರಾರಂಭಿಸಿ ರೈತ ಕುಟುಂಬಗಳಲ್ಲಿ ಸಾವಯವ ಜಾಗೃತಿ ಮೂಡಿಸಿದ್ದು, ಮರಾಠಿ ಪತ್ರಿಕೆಗಳಿಗೆ ಜನೋಪಯೋಗಿ ಲೇಖನ ಬರೆಯುತ್ತಿದ್ದುದು … ಹೀಗೆ ರೇಡ್ಕರರ ಕೊಡುಗೆಗಳು ಅನನ್ಯ.

ಕಾಳಿ ಟೂರಿಸಂ ಸಂಸ್ಥೆ ಪ್ರಾರಂಭಿಸಿ ಆ ಭಾಗದ ಅನೇಕ ಹೋಂ ಸ್ಟೇ ಮತ್ತು ರೆಸಾರ್ಟಗಳಿಗೆ ಪರಿಸರ ಸ್ನೇಹಿ ಚಟುವಟಿಕೆಗಳ ಕುರಿತು ತರಬೇತಿ ನೀಡುತ್ತಿರುವುದು ಇವರ ನಿರಂತರ ಹವ್ಯಾಸ. ಜೋಯಿಡಾದ ಕಾಲೇಜುಗಳ ಆಡಳಿತ ಮಂಡಳಿಯಲ್ಲಿ ಸಕ್ರಿಯರಾಗಿ ಇವರು ತಮ್ಮ ಶಿಕ್ಷಣ ಕಾಳಜಿ ತೋರಿದ್ದಾರೆ. ರೇಡ್ಕರ್ ಈಗ ವಯಸ್ಸು ಅರವತ್ತನ್ನು ದಾಟಿದ್ದಾರೆ.

ತಮ್ಮ ಜೀವನದಲ್ಲಿ ಈ ಅರವತ್ತು ಶರಬತ್ತು ಕುಡಿದಂತೆ ದಾಟಿ ಹೋಗಿದೆ. ಆದರೆ ಮುಂದೆ ಇನ್ನೂ ಸಾಧಿಸುವುದು ಸಾಕಷ್ಟಿದೆ ಎಂಬುದು ಅವರ ಅಭಿಪ್ರಾಯ. ದಾಂಡೇಲಿಯ ದಾಂಡೇಲಪ್ಪನಂತೆ ಸದಾ ಗಂಭೀರ ವದನರಾಗಿರುವ ರವಿಯವರ ಪುತ್ರ ಆದಿತ್ಯ, ಪರಿಸರ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರು. ಸೇವಂತಿಗೆ ಹೂವಿನಂಥ ಮುದ್ದು ಕೋಳಿಯಾಗಿರುವ ಪುತ್ರಿ ರಶ್ಮಿ ಇಂಗ್ಲಿಷ್ ಸಾಹಿತ್ಯದಲ್ಲಿ ಡಿಗ್ರಿ ಓದುತ್ತಿದ್ದಾಳೆ.

ಕೊನೆಗೊಂದು ಜೋಕ್: ರೇಡ್ಕರರು ಪ್ರಾಣಿ, ಪಕ್ಷಿಗಳ ಬಗ್ಗೆ ಅಪಾರ ಪ್ರೀತಿ ಬೆಳೆಸಿಕೊಂಡವರು. ಎಷ್ಟಿದ್ದರೂ ಮನುಷ್ಯರಷ್ಟೇನೂ ಈ ಪ್ರಾಣಿ, ಪಕ್ಷಿಗಳು ಡೇಂಜರ್ ಅಲ್ಲವಲ್ಲ. ರೇಡ್ಕರ್ ಎದುರು ಮಂಗಣ್ಣ ಮರದಿಂದಿಳಿದು ಬಂದರೆ, ತನ್ನ ಜಿಗ್ರಿ ದೋಸ್ತನನ್ನು ಮಾತನಾಡಿಸುವಷ್ಟೇ ಆತ್ಮೀಯವಾಗಿ ಇವರು “ಬೆಳಗ್ಗೆ ತಿಂಡಿ ತಿಂದ್ಯನೋ? ಮಧ್ಯಾಹ್ನ ಊಟಕ್ಕೆ ಚಪಾತಿ ಬೇಕಾ ? ರೈಸ್ ಬೇಕಾ? ಐಸ್ ಕ್ರೀಮ್ ಬೇಕಿದ್ದರೆ ಹೇಳು, ಸಂಕೋಚ ಪಟ್ಟುಕೊಳ್ಳಬೇಡ” ಎಂದು ಆ ಮಂಗಣ್ಣನನ್ನೂ ಮೈ ದಡವುತ್ತಾ ವಿಚಾರಿಸಿಕೊಳ್ಳುತ್ತಾರೆ.

ಆ ಅಭಯಾರಣ್ಯದಲ್ಲಿ ಹುಲಿ ಏನಾದರೂ ಇವರತ್ತ ಬಂದರೆ, ಆ ಹುಲಿಯನ್ನೂ ಮುನ್ನಾರ್ ಸಾಬಣ್ಣನ ಚಹಾ ದುಖಾನಿಗೆ ಕರೆದೊಯ್ದು, ಅದಕ್ಕೆ ಬೈಟು ಚಹಾ ಕುಡಿಸಿ, ಬೇಕಿದ್ದರೆ ಬೀಡಾವನ್ನೂ ತಿನ್ನಿಸಿ, ಖುಷಿಯಿಂದ ಕಳಿಸಿಕೊಡುತ್ತಾರೆ.


  • ರಾಜು ಅಡಕಳ್ಳಿ – ಪತ್ರಕರ್ತರು, ಲೇಖಕರು, ಬೆಂಗಳೂರು.

Leave a Reply

Home
Search
Menu
Recent
About
×