ತಣ್ಣನೆ ಗಾಳಿಯು ಬೀಸಲು ಗಿಡ ಮರಗಳು ತಲೆದೂಗುತಿವೆ…ಕವಿ ಅರುಣಾ.ಜಿ.ಭಟ್ ಅವರು ಬೆಳಗಿನ ಸೊಬಗಿನ ಕುರಿತು ಬರೆದ ಕವನವನ್ನು ತಪ್ಪದೆ ಪೂರ್ತಿಯಾಗಿ ಓದಿ…
ಎಳೆ ಬಿಸಿಲಿನ ಕಚಗುಳಿಗೆ
ಎಚ್ಚರಗೊಂಡಿತು ಇಳೆಯು
ಮೊಗದಲಿ ಮಿಂಚಿದ ನಗುವಿಗೆ
ಬಳುವಳಿ ನೀಡಿದ ರವಿಯು
ಹಸಿರೆಲೆ ಚಿಗುರೆಲೆಗಳ ನಡುವಿನಲಿ
ಅರಳಿದೆ ಹೊಸ ಹೂವು
ಹರುಷದಲಿ ನೋಡುತ್ತಿದೆ
ಸುತ್ತಲು ಹೊಮ್ಮಿದ ಚೆಲುವು
ಹೂವಿನ ಕೆನ್ನೆಯ ನುಣುಪಿಗೆ
ಮಂಜಿನ ಮಣಿಯು ಸೋಲುತಿದೆ
ಸುಗಂಧವನು ಸೆಳೆಯುತ ಜೊತೆಗೆ
ಬಲು ಮೆಲ್ಲಗೆ ಜಾರುತಿದೆ
ರೆಕ್ಕೆಯ ಹೊದಿಕೆಯ ತೆಗೆದು
ಹಕ್ಕಿಯು ಮೇಲಕ್ಕೆ ಹಾರುತಿದೆ
ಮರಿ ಹಕ್ಕಿಗಳೆರಡು ಕಣ್ತೆರೆದು
ತುತ್ತಿನ ಹೊತ್ತಿಗೆ ಕಾಯುತಿವೆ
ಮೀನುಗಳಾಟವ ನೋಡುತ
ನದಿಯ ನೀರು ನಗುತಲಿದೆ
ಉಲ್ಲಾಸದ ಗೀತೆಯ ಹಾಡುತ
ಬಾಗುತ ಬಳುಕುತ ಸಾಗುತಿದೆ
ತಣ್ಣನೆ ಗಾಳಿಯು ಬೀಸಲು
ಗಿಡ ಮರಗಳು ತಲೆದೂಗುತಿವೆ
ಹಸಿರಿನ ಹಂದರ ಹಾಸುತ
ಕಣ್ಮನಕೆ ಬೆರಗನು ತುಂಬುತಿವೆ
- ಅರುಣಾ.ಜಿ.ಭಟ್ – ಕವಿಗಳು, ಬದಿಕೋಡಿ.
