ಅಂಗೈಯಲ್ಲಿ ಪ್ರಪಂಚ (ಭಾಗ- ೪೭)

ಕಷ್ಟ ಸುಖಕ್ಕೆ ಸ್ಪಂದಿಸುವುದು, ಎಲ್ಲರ ಜೊತೆ ಹೊಂದಾಣಿಕೆಯ ಬದುಕು ಖಂಡಿತಾ ತಪ್ಪಲ್ಲ. ಆದರೆ ಎಲ್ಲಾ ವಿಷಯದಲ್ಲೂ, ಯಾವಾಗಲೂ ಮನೆಯವರಿಗಿಂತ ಹೆಚ್ಚಿನ ಆದ್ಯತೆ ಬೇರೆಯವರಿಗೆ ನೀಡುವುದು, ಅವರಿಗೋಸ್ಕರ ಮನೆಯವರೊಡನೆ ಜಗಳ ಮಾಡುವುದು ತಪ್ಪು. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಪರ ವಿರೋಧದ ನಡುವೆಯೂ ಜಟಾಪಟಿಗಳು’ ತಪ್ಪದೆ ಮುಂದೆ ಓದಿ…

ಏನಪ್ಪಾ ಅಂತ ಆಶ್ಚರ್ಯ ಆಗ್ತಿದ್ಯಾ, ನಿಜ ಕಣ್ರೀ. ಎಷ್ಟೋ ಜನರ ಮನೆಯಲ್ಲಿ ಬೇರೆಯವರ ವಿಷಯದಿಂದ ಜಗಳವಾಗಿ ಅದರ ಕೊನೆ ಊಹಿಸಲಾರದ ಮಟ್ಟಿಗೆ ಮುಟ್ಟಿದ್ದೂ ಇದೆ.
ಅವರ ಮನೆಯಲ್ಲಿ ಹಾಗಂತೆ-ಹೀಗಂತೆ. ಅದರ ಪರವಾಗಿ ಒಬ್ಬರು ಮಾತನಾಡಿದರೆ, ಇನ್ನೊಬ್ಬರಿಗೆ ಅದು ಸರಿ ಎನಿಸದೇ ತಪ್ಪೆಂದು ಹೇಳಿದಾಗ ಇವರಿವರಲ್ಲೇ ಜಗಳ ಶುರು. ಇದಕ್ಕೆ ಇಬ್ಬರ ಮನಸ್ಥಿತಿ ಬೇರೆ ಬೇರೆ ಇರುವುದು ಒಂದು ಕಾರಣವಾದರೆ, ತಮ್ಮವರು, ತಮಗೆ ಬೇಕಾದವರು ಎಂದು ಅವರು ಮಾಡಿದ್ದು ತಪ್ಪಾಗಿದ್ದರೂ ಅದನ್ನು ಸಮರ್ಥಿಸಿಕೊಳ್ಳುವುದೂ ಸಹ ಇನ್ನೊಂದು ಕಾರಣ.

ಫೋಟೋ ಕೃಪೆ : ಅಂತರ್ಜಾಲ

ಯಾರಾದರೂ ಸಮಾರಂಭಕ್ಕೆ ಕರೆದಾಗ ಅನಿವಾರ್ಯ ಕಾರಣದಿಂದ ಹೋಗಲಾಗದಿದ್ದರೆ ಅವರು ಕೇಳಿದರೆಂದು ಅದಕ್ಕೆ ಜಗಳ, ಇನ್ನು ಮಕ್ಕಳ ಓದಿನ ವಿಷಯಕ್ಕೆ ಸಂಬಂಧಪಡದವರೂ ಸಹ ಮೂಗು ತೂರಿಸಿ ಇಲ್ಲಸಲ್ಲದ ಪುಕ್ಕಟೆ ಸಲಹೆ ಕೊಟ್ಟರೆ ಆ ವಿಷಯದಿಂದ ಅವರ ಪರವಾಗಿ ಮಾತನಾಡಿಯೋ, ಅವರನ್ನು ಸಮರ್ಥಿಸಿಕೊಂಡೋ ಶುರುವಾದ ಮಾತು ಮನೆಯಲ್ಲಿನ ನೆಮ್ಮದಿ ಕೆಡಿಸುತ್ತದೆ. ಮಕ್ಕಳ ಮದುವೆ ವಿಷಯ, ಅವರು ಮಕ್ಕಳು ಮಾಡಿಕೊಳ್ಳುವ ವಿಷಯ, ಅಬ್ಬಾ ಹೀಗೆ ಹೇಳುತ್ತಾ ಹೋದರೆ ಬೇರೆಯವರ ವೈಯಕ್ತಿಕ ಜೀವನದಲ್ಲಿ ಸಂಬಂಧಿಕರೋ, ಅಕ್ಕಪಕ್ಕದವರೋ, ಸ್ನೇಹಿತರೋ ಆಡುವ ಮಾತುಗಳು, ಕೇಳುವ ಪ್ರಶ್ನೆಗಳು ಎಲ್ಲವೂ ಇವರ ಮನೆಯಲ್ಲಿನ ಜಗಳಕ್ಕೆ ಕಾರಣವಾಗಬಹುದು. ಇನ್ನು ಕೆಲವರು ಮನೆಗೆ ಬಂದು ಹೋದರೆ ಏನೋ ಒಂದು ಕೊಂಕು ನುಡಿದು, ಅವರು ಹೊರಟ ನಂತರ ಮನೆಯವರಲ್ಲಿ ಗಲಾಟೆ ಆಗಲೂಬಹುದು. ಅಥವಾ ಮೂರನೆಯವರ ಬಳಿ ಇವರ ಬಗ್ಗೆ , ಅವರಿಗೆ ಸರಿಯಾಗಿ ಅಡುಗೆ ಮಾಡೋಕೆ ಬರಲ್ಲ, ಅದೇನ್ ಡ್ರೆಸ್ಸೂಂತ ಹಾಕ್ಕಂಡಿದ್ರೋ, ಅವ್ಳ್ ಗಂಡ ಅಂತೂ ಏನೂ ಹೇಳಲ್ಲ, ಮನೆಗ್ಹೋದ್ರೆ ಸರ್ಯಾಗ್ ಟ್ರೀಟ್ ಮಾಡ್ಳಿಲ್ಲ, ಹಾಗೆ-ಹೀಗೆ ಇನ್ನೂ ಏನೇನೋ. ಇವೆಲ್ಲಾ ಇವರ ಕಿವಿಗೆ ಬಿದ್ದಾಗ, ನೀನ್ಯಾಕೆ ಹಾಗ್ಮಾಡ್ದ್ಯ ಎಂದು ಅವರವರಲ್ಲೇ ಮಾತಿಗೆ ಮಾತು ಬೆಳೆದು ಬಿರುಕು ಮೂಡುವುದಂತೂ ಸತ್ಯ. ಅಥವಾ ಮನೆಗೆ ಬಂದವರನ್ನು ಎಷ್ಟೇ ಚೆನ್ನಾಗಿ ನೋಡಿಕೊಂಡರೂ, ನೀನು ಸರಿಯಾಗಿ ನೋಡ್ಕೊಳ್ಲಿಲ್ಲ, ಕೊಟ್ಟಿದ್ದು ಕಡಿಮೆ ಆಯ್ತು ಹೀಗೆ ಏನೋ ಒಂದು.

ಕೆಲವರಿಗೆ ಎಲ್ಲಾ ವಿಷಯದಲ್ಲೂ ತಾವು ಮಾಡುವುದೇ ಸರಿ ಎಂಬ ಧೋರಣೆ ಇರುವುದರಿಂದ ಬೇರೆಯವರ ಮೇಲೂ ಅದನ್ನೇ ಹೇರಲು ಪ್ರಯತ್ನಿಸುತ್ತಾರೆ. ಅಂಥವರು ಬೇರೆಯವರ ಯಾವುದೇ ಒಳ್ಳೆಯ ಗುಣವನ್ನು ಸಹ ಒಪ್ಪಿಕೊಳ್ಳುವುದಿಲ್ಲ. ನಾವಂತೂ ಟಿವಿ ನೋಡಲ್ಲ, ನಾವಂತೂ ಎಲ್ಲಿಗೂ ಹೋಗಲ್ಲ, ನಾವಷ್ಟು ಖರ್ಚು ಮಾಡಲ್ಲ, ಅದೆಲ್ಲಾ ಯಾಕೆ ? ದುಂದುವೆಚ್ಚ, ನಮ್ಮಕ್ಳಿಗೆ ಅದೆಲ್ಲಾ ಮಾಡಿರ್ಲಿಲ್ಲ , ಇದೆಲ್ಲಾ ಕೊಡ್ಸಿರ್ಲಿಲ್ಲ, ಹೀಗೇ ಹೇಳುತ್ತಾ ಹೋದರೆ ಪಟ್ಟಿ ಮುಗಿಯುವುದಿಲ್ಲ. ಸಂಬಂಧಿಕರದೋ, ಒಡಹುಟ್ಟಿದವರದೋ ಇಂತಹ ಮಾತುಗಳು ಮನೆಯಲ್ಲಿನ ಒಬ್ಬರ ಮೇಲೆ ಇನ್ಫ್ಲುಯೆನ್ಸ್ ಆದರೂ ಅದು ಅವರ ಮನೆಯಲ್ಲಿನ ಜಗಳಕ್ಕೆ ಕಾರಣವಾಗಬಹುದು. ನೀನು ಅವರು ಮಾಡಿದ ಹಾಗೆ ಅಡುಗೆ ಮಾಡು, ಇವರಂತೆ ನಡೆದುಕೋ, ಇಂತಹ ಹೋಲಿಕೆಗಳು, ಏನು ಮಾಡಬೇಕಾದರೂ ಬೇರೆಯವರನ್ನು ಕೇಳಿ ಅವರು ಹೇಳಿದಂತೆ ಮಾಡುವುದು, ಮನೆಯವರ ಇಷ್ಟ ಕಷ್ಟ ಕೇಳದೇ, ಅದಕ್ಕೆ ಸ್ಪಂದಿಸದೇ, ಮನೆಯವರಿಗಿಂತ ಹೊರಗಡೆಯವರಿಗೆ ಹೆಚ್ಚಿನ ಆದ್ಯತೆ ನೀಡುವುದು, ಇವೆಲ್ಲವೂ ಮನೆಯವರ ಮಧ್ಯೆ ಅಂತರ ಹೆಚ್ಚಲು ಕಾರಣವಾಗುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಎಷ್ಟೋ ವರ್ಷಗಳಿಂದ ತಮ್ಮ ಮನೆಯವರೊಂದಿಗೆ ಬದುಕುತ್ತಿದ್ದು, ಅವರ ಬಗ್ಗೆ ಚೆನ್ನಾಗಿ ಅರಿತಿದ್ದರೂ ಸಹ ಬೇರೆಯವರ ಮಾತಿಗೆ ಕಿವಿಗೊಟ್ಟು ಮನೆಯಲ್ಲಿ ಜಗಳವಾಡುವವರಿಗೇನೂ ಕಡಿಮೆಯಿಲ್ಲ.

ಫೋಟೋ ಕೃಪೆ : ಅಂತರ್ಜಾಲ

ತಮ್ಮ ಕೆಲಸ ಆಗುವವರೆಗೆ ಹೊಗಳೀ ಹೊಗಳೀ ಅಟ್ಟಕ್ಕೇರಿಸುವವರು ಇವರ ಜೀವನದಲ್ಲಿ ಇವರನ್ನು ತಮ್ಮಷ್ಟು ಕಾಳಜಿ ಮಾಡುವವರು ಯಾರೂ ಇಲ್ಲ ಎಂಬ ಭಾವನೆಯನ್ನು ಇವರಿಗೆ ಬರಿಸಿ ಬಿಟ್ಟಿರುತ್ತಾರೆ. ನಿಜವಾಗಿ ಯಾರು ಏನು ಎಂದು ತಿಳಿಯುವುದು ಅವರು ಏನನ್ನಾದರೂ ಮಾಡಬೇಕಾದ ಸಂದರ್ಭ ಬಂದಾಗ. ಆಗ ಅವರಿಗೆ ನೂರಾಯೆಂಟು ಕಾರಣಗಳು ಸಿಗುತ್ತವೆ. ಕೊನೆಗೆ ಅವರ ಮನೆಯ ಉಳಿದ ಸದಸ್ಯರ ಮೇಲಾದರೂ ಕಾರಣ ಹಾಕಿ ತಮ್ಮ ಮನೆಯವರ ಜೊತೆ ಆರಾಮವಾಗಿರುತ್ತಾರೆ. ಹಾಗಾಗಿ ಯಾರಾದರೂ ಅಷ್ಟೇ, ಒಂದು ದಿನ, ಎರಡು ದಿನ ನಿಮ್ಮ ಕಷ್ಟಕ್ಕೆ ಬರಬಹುದು, ಸಾಂತ್ವನ ಹೇಳಬಹುದು. ನಮ್ಮವರು ಎಂದು ಎಲ್ಲಾ ಸಮಯದಲ್ಲೂ ಜೊತೆಯಾಗಿರುವವರು ನಮ್ಮೊಡನೆ ಬದುಕುತ್ತಿರುವವರು. ಇದನ್ನೇ ಹಿಂದಿನವರು ಹೇಳಿರುವುದು “ಮನೆ ಗೆದ್ದು ಮಂದಿ ಗೆಲ್ಲು” ಅಂತ. ಯಾರದೋ ಮಾತಿನಿಂದನೋ ಯಾರಿಗೋಸ್ಕರನೋ ಮನೆಯವರೊಡನೆ ಸದಾ ವಾದ, ವಿವಾದ, ಜಗಳ ಮಾಡುತ್ತಿದ್ದರೆ ನಿಮ್ಮ ಕುಟುಂಬದೊಡನೆ ಕಳೆಯಬೇಕಾದ ಸುಂದರ ಕ್ಷಣಗಳನ್ನು ನೀವೇ ಕೈಯ್ಯಾರೆ ಹಾಳು ಮಾಡಿಕೊಂಡಂತೆ. ಮುಂದಿನ ಕಾಲಕ್ಕೆ ಯಾರಿಗೋಸ್ಕರ ನೀವು ಹೊಡೆದಾಡಿರುತ್ತೀರೋ ಅವರೂ ನಿಮ್ಮ ಪಾಲಿಗಿರುವುದಿಲ್ಲ. ಇತ್ತ ಮನೆಯವರೂ ಸರಿಪಡಿಸಲಾಗದ ನಿಮ್ಮ ಸ್ವಭಾವಕ್ಕೆ ಬೇಸತ್ತು ತಮ್ಮ ದಾರಿ ನೋಡಿಕೊಂಡಿರುತ್ತಾರೆ. ಜೀವನದಲ್ಲಿ ಕೊನೆಗೆ ಉಳಿಯುವುದು ಕಳೆದ ದಿನಗಳ ಕಹಿ ನೆನಪಷ್ಟೆ.

ಕಷ್ಟ ಸುಖಕ್ಕೆ ಸ್ಪಂದಿಸುವುದು, ಎಲ್ಲರ ಜೊತೆ ಹೊಂದಾಣಿಕೆಯ ಬದುಕು ಖಂಡಿತಾ ತಪ್ಪಲ್ಲ. ಆದರೆ ಎಲ್ಲಾ ವಿಷಯದಲ್ಲೂ, ಯಾವಾಗಲೂ ಮನೆಯವರಿಗಿಂತ ಹೆಚ್ಚಿನ ಆದ್ಯತೆ ಬೇರೆಯವರಿಗೆ ನೀಡುವುದು, ಅವರಿಗೋಸ್ಕರ ಮನೆಯವರೊಡನೆ ಜಗಳ ಮಾಡುವುದು ತಪ್ಪು. ನಿಮ್ಮ ಜೊತೆಗಿರುವವರಿಗೆ, ನಿಮ್ಮನ್ನು ನಂಬಿದವರಿಗೆ ಮೊದಲ ಆದ್ಯತೆ ನೀಡಬೇಕಾಗಿರುವುದು ನಿಮ್ಮ ಕರ್ತವ್ಯವೂ ಹೌದು. ಏಕೆಂದರೆ, ಬೇರೆಯವರಿಗೆ ಆದ್ಯತೆ ನೀಡಲು ಅವರವರ ಮನೆಯವರು ಇರುತ್ತಾರೆ. ಯಾರದೋ ವಿಷಯಕ್ಕೆ ಇನ್ಯಾರದೋ ಮನೆಯ ಶಾಂತಿ, ನೆಮ್ಮದಿ ಹಾಳಾಗದಿರಲಿ. ಸಂಸಾರವೆಂಬ ಸುಮಧುರ ಬಾಂಧವ್ಯ ಸವಿಯಾಗಿರಲಿ.


  • ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಕವಿಗಳು, ಬೆಂಗಳೂರು.

Leave a Reply

Home
Search
Menu
Recent
About
×