ರಸ್ತೆಯಲ್ಲಿ ವಯಸ್ಸಾದವರನ್ನು ನೋಡಿದಾಗ ಒಂದು ದಿನ ಊಟ, ತಿಂಡಿ ಕೊಡಬಹುದು, ಎರಡು ದಿನ ಕೊಡಬಹುದು, ಹೋಗಲಿ ಒಂದು ವಾರವೇ ಕೊಡಬಹುದು. ಆದರೆ ಅದು ಎಷ್ಟು ದಿನ ನಡೆಯುತ್ತದೆ. ಅವರಿಗೂ ಒಂದು ನೆಲೆ ಬೇಕಲ್ಲವೇ?ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಕಾಡುವ ಶಾಪ’ ತಪ್ಪದೆ ಮುಂದೆ ಓದಿ…
ಅದೊಂದು ಅಂಗಡಿ ಮುಗಟ್ಟು. ರಾತ್ರಿ ಎಂಟರ ಸಮಯ. ಅಂಗಡಿ ಬಾಗಿಲು ಮುಚ್ಚಿತ್ತು. ಅಲ್ಲಿ ವಯಸ್ಸಾದ ಮಹಿಳೆಯೊಬ್ಬರು ತನ್ನ ಒಂದೆರಡು ಗಂಟುಗಳೊಂದಿಗೆ ಬಂದು ಕುಳಿತಿದ್ದರು. ಮನೆಗೆ ಬೇಕಿದ್ದ ತರಕಾರಿ ತರಲು ಹೋಗಿದ್ದ ತ್ರಿಶಾ ಹಿಂದಿರುವಾಗ ಇದನ್ನು ಗಮನಿಸಿದಳು. ಚಳಿಯಿಂದ ನಡುಗುತ್ತಾ ಕೂತಿದ್ದ ಆಕೆಯ ಬಳಿ ಹೋಗಿ ಏನಜ್ಜಿ, ಇಲ್ಲಿ ಯಾಕೆ ಕೂತಿದ್ದೀರಾ? ಮನೆಗೆ ಹೋಗಲ್ವಾ ಎಂದಳು. ಮನೆ ಇಲ್ಲ, ಎಂಬ ಉತ್ತರ ಬಂತು. ಹಾಗಾದ್ರೆ ಇಷ್ಟ್ ದಿನ ಎಲ್ಲಿದ್ರಿ ಅಂದಿದ್ದಕ್ಕೆ, ಮನೆ ಇತ್ತು, ನನ್ಗಂಡ ಸತ್ತೋದ್ರು. ನನ್ಮಗ ಕುಡ್ಯಕೇಂತ ಸಾಲ ಮಾಡಿ, ಮಾಡಿ ಮನೆ ಮಾರ್ದ. ಇಲ್ಲೇ ಇರ್ತೀನಿ, ಜಾತ್ರೆ ಮುಗುಸ್ಗಂಡ್ ಹೋಗ್ತೀನಿ ಅಂದ್ರು. ಅವರು ಹೇಳಿದ ಜಾತ್ರೆಗೆ ಇನ್ನೂ ಎರಡು ತಿಂಗಳಿತ್ತು. ಸರಿ, ಊಟ ಮಾಡಿದ್ರಾ ಅಂದಿದ್ದಕ್ಕೆ ಎದುರುಗಡೆ ಇದ್ದ ಚಾಟ್ಸ್ ಸೆಂಟರ್ ತೋರಿಸಿ ಅಲ್ಲಿ ಸಾಂಬಾರ್ ಕೊಟ್ರು ಅದ್ನೇ ತಿಂತಿದೀನಿ ಎಂದು ಒಂದು ಪ್ಲಾಸ್ಟಿಕ್ ಕವರ್ ನಲ್ಲಿದ್ದ ಸಾಂಬಾರ್ ತೋರ್ಸಿದ್ರು. ಅನ್ನ ಕೊಡ್ತೀನಿ ಅಂತ ಮನೆಗೆ ಬಂದವಳು ಒಂದು ಡಬ್ಬಿಯಲ್ಲಿ ಬಿಸಿ ಬಿಸಿ ಅನ್ನ , ಹಾಸಲು, ಹೊದೆಯಲೆಂದು ಒಂದೆರಡು ಬೆಡ್ಶೀಟ್ ತೆಗೆದುಕೊಂಡು ಹೋಗಿ ಕೊಟ್ಟು, ಯಾವ್ದಾದ್ರೂ ಅನಾಥಾಶ್ರಮ ಸೇರ್ಕೊಳ್ತೀರಾ, ವಿಚಾರ್ಸದಾ ಎಂದದ್ದಕ್ಕೆ, ನಾನ್ಯಾಕ್ ಅಲ್ ಸೇರ್ಕಂಡ್ಳಿ ಊರಲ್ಲಿ ನಮ್ ನೆಂಟ್ರು ಇದ್ದಾರೆ, ಜಾತ್ರೆ ಮುಗುಸ್ಕಂಡ್ ಹೋಗ್ತೀನಿ ಎಂದು ತುಸು ಜೋರಾಗೇ ಹೇಳಿದರು. ಅನ್ನದ ಡಬ್ಬಿ ಮುಚ್ಚಳ ತೆಗೆಯುವಾಗ ಅವರಿಗೆ ಸರಿಯಾಗಿ ಕಣ್ಣೂ ಕಾಣಿಸುವುದಿಲ್ಲವೆಂಬುದು ತ್ರಿಶಾಳ ಗಮನಕ್ಕೆ ಬಂತು. ಆಮೇಲೆ ಎಷ್ಟೋ ದಿನದ ನಂತರ ಅಲ್ಲಿಂದ ಹೋದವರು ಅದೇ ಏರಿಯಾದ ಬೇರೆ ಬೇರೆ ಸಿಗ್ನಲ್ಗಳಲ್ಲಿ ಆಗೀಗ ಕಣ್ಣಿಗೆ ಬೀಳುತ್ತಿದ್ದರು.
ರಾಗಾ ಕಾಲೇಜ್ಗೆ ಹೋಗಿ ಬರುವಾಗ ದಿನಾ ಗಮನಿಸುತ್ತಿದ್ದಳು. ಚಿಕ್ಕದೊಂದು ಹೋಟೆಲ್ ಮುಂದೆ ಒಬ್ಬರು ಅಜ್ಜಿ ಕುಳಿತು ಭಿಕ್ಷೆ ಬೇಡುತ್ತಿದ್ದರು. ಆ ಹೋಟೆಲ್ನವರೇ ಅಜ್ಜಿಗೆ ಆಗಾಗ ತಿಂಡಿ, ಊಟ ಕೊಡ್ತಿದ್ರು. ಒಮ್ಮೆ ಅವಳು ತನ್ನ ತಾಯಿಗೆ ಈ ವಿಷಯ ತಿಳಿಸಿದಾಗ ಅವಳ ಅಮ್ಮನೂ ಅಲ್ಲಿ ಹೋಗಿ ಗಮನಿಸಿ, ಯಾಕೆ ಇಲ್ಲಿದೀರಾ ಎಂದದ್ದಕ್ಕೆ , ಮನೆ ಇಲ್ಲ ಎಂಬ ಉತ್ತರ ಬಂತು. ಯಾವುದಾದರೂ ಅನಾಥಾಶ್ರಮಕ್ಕೆ ಹೋರ್ತೀರಾ ಎಂದದ್ದಕ್ಕೆ, ನನ್ನ ತಂಗಿ, ಅವ್ಳ ಮಕ್ಳುನ್ನ ಕೇಳ್ಬೇಕು ಅಂದ್ರು. ಅವರೆಲ್ಲಿದ್ದಾರೆ ಎಂದಾಗ ಯಾವುದೋ ಊರಿನ ಹೆಸರು ಹೇಳಿ, ಅಲ್ಲಿಗೆ ಹೋದಾಗ ಕೇಳ್ಬೇಕು ಅಂದ್ರು. ಕೈಲಾದಷ್ಟು ಹಣ ಕೊಟ್ಟು ಮತ್ತೆ ಬರ್ತೀನಿ ಅಂದವಳು, ಮತ್ತೊಂದು ದಿನ ಹೋಗಿ ನೋಡುವಾಗ ಆ ಹೋಟೆಲ್ ಇದ್ದ ಬಿಲ್ಡಿಂಗ್ ಒಡೆದಿದ್ದರು. ಅಲ್ಲೆಲ್ಲೂ ಸುತ್ತಮುತ್ತ ಆ ಅಜ್ಜಿ ಕಾಣಿಸಲಿಲ್ಲ.

ಈ ರೀತಿ ಅಂಗಡಿ ಮುಂಗಟ್ಟುಗಳ ಮುಂದೆ, ಸಣ್ಣ ಪುಟ್ಟ ಹೋಟೆಲ್ಗಳ ಮುಂದೆ, ದೇವಸ್ಥಾನಗಳ ಮುಂದೆ, ಸಿಗ್ನಲ್ಗಳಲ್ಲಿ ಹೀಗೆ ವಯಸ್ಸಾದವರನೇಕರು ಭಿಕ್ಷೆ ಬೇಡುವುದನ್ನು ದಿನಬೆಳಗಾದರೆ ನೋಡುತ್ತೇವೆ. ಮೈಯ್ಯಲ್ಲಿ ಕಸುವಿಲ್ಲ , ಬಿಸಿಲು/ ಮಳೆ /ಚಳಿ ಲೆಕ್ಕಕ್ಕಿಲ್ಲ. ಕೆದರಿದ ಕೂದಲು, ಮಾಸಿದ ಬಟ್ಟೆ, ಕೆಲವರಿಗೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ, ಇನ್ನು ಕೆಲವರಿಗೆ ಕಿವಿ ಅಷ್ಟಾಗಿ ಕೇಳಿಸುವುದಿಲ್ಲ, ಮತ್ತೆ ಹಲವರಿಗೆ ಊರುಗೋಲಿನ ಆಸರೆ. ವಿಚಾರಿಸಿದರೆ ಮೇಲಿನ ಒಂದೆರಡು ಉದಾಹರಣೆಗಳಂತೆ ಕೆಲವರು ತಮ್ಮವರು ಇದ್ದಾರೆನ್ನುತ್ತಾರೆ. ಎಲ್ಲಿಯಾದರೂ ನೆಲೆಗಾಣಲು ಅವರನ್ನು ಕೇಳಬೇಕೆನ್ನುತ್ತಾರೆ. ಎಲ್ಲರೂ ಇದ್ದು ಇಂಥಾ ಬದುಕು….?
ಸರ್ಕಾರದ ಅನೇಕ ಯೋಜನೆಗಳಿವೆ. ಮನೆ, ವೃದ್ಧ್ಯಾಪ್ಯ ವೇತನ, ರೇಷನ್, ಚಿಕಿತ್ಸೆ, ನಿರ್ಗತಿಕರಿಗೆಂದೇ ಇರುವ ವೃದ್ಧಾಶ್ರಮಗಳು ಅಲ್ಲದೇ ಭಿಕ್ಷೆ ಬೇಡುವವರನ್ನೆಲ್ಲಾ ಕರೆದುಕೊಂಡು ಹೋಗಿ ವಸತಿ ನಿಲಯಗಳಲ್ಲಿ ಇರಿಸುತ್ತಾರೆ. ಆದರೂ ಇವರ ಸಂಖ್ಯೆಯಂತೂ ಕಡಿಮೆಯಿಲ್ಲ. ನಾವು ಜನ ಸಾಮಾನ್ಯರು ಕೈಲಾದಷ್ಟು ಮಾಡಬಹುದು. ಅವರ ಒಪ್ಪಿಗೆಯಿದ್ದರೆ ಎಲ್ಲಿಗಾದರೂ ವಿಚಾರಿಸಿ ಸೇರಿಸಬಹುದು. ಇಲ್ಲದಿದ್ದರೆ ಆಗಾಗ ಊಟ, ತಿಂಡಿ, ಬಟ್ಟೆ ಕೊಡಬಹುದು. ಆದರೆ ಎಷ್ಟು ದಿನ ಹೀಗೆ? ಎಷ್ಟು ವರ್ಷ ಹೀಗೆ? ವಯಸ್ಸಾದ ಅವರಿಗೂ ಒಂದು ನೆಲೆ ಬೇಕಲ್ಲವೇ.
ಕಾರಣ ಹಲವು ಇರಬಹುದು :
- ಮನೆಯವರ ನಿರ್ಲಕ್ಷ್ಯ
- ಅನಾಥರು
- ದುಷ್ಟರ ದಬ್ಬಾಳಿಕೆಗೆ ನಲುಗಿ ಸಿಲುಕಿದವರು
- ಅಸಹಾಯಕತೆ
- ಮೋಸ ಹೋಗಿ ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಂದವರು
- ಹೆದರಿಸಿ, ಬೆದರಿಸಿ ಆಸ್ತಿ, ಹಣ ಕಿತ್ತುಕೊಂಡು ಬೀದಿಗೆ ತಳ್ಳಿದ ಘಟನೆ.
- ಹೆತ್ತ ಮಕ್ಕಳೇ ಬೇರೆಲ್ಲಿಗೋ ಕರೆದುಕೊಂಡು ಹೋಗುತ್ತೇವೆಂದು ಹೇಳಿ ದೇವಸ್ಥಾನ, ಬಸ್ ಸ್ಟ್ಯಾಂಡ್ಗಳಲ್ಲಿ ಬಿಟ್ಟು ಹೋಗಿರುವ ಘಟನೆ.
- ದಂಧೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವವರು.
- ಮರೆವು, ಮುಂತಾದ ಮಾನಸಿಕ ಸಮಸ್ಯೆಗಳಿಂದ ಮನೆಗೆ ಹೋಗಲು ತಿಳಿಯದೇ ಅಸಹಾಯಕ ಪರಿಸ್ಥಿತಿಯಲ್ಲಿರುವವರು. ಒಟ್ಟಿನಲ್ಲಿ ವಯಸ್ಸಾದ ಕಾಲದಲ್ಲಿ ಇವರಿಗೆ ಇದೊಂದು ಕಾಡುವ ಶಾಪ ಅಂದರೆ ತಪ್ಪಲ್ಲ.
ಇಡೀ ಪ್ರಪಂಚವೇ ಹೆಮ್ಮೆಯಿಂದ ನಮ್ಮತ್ತ ತಿರುಗಿ ನೋಡುತ್ತಿರುವಾಗ, ಪ್ರವಾಸೋದ್ಯಮ, ಉದ್ಯೋಗಕ್ಕಾಗಿ ನಮ್ಮಲ್ಲಿಗೆ ಬರುತ್ತಿರುವಾಗ, ವಿದೇಶಿಗರೂ ಸಹ ನಮ್ಮ ಸನಾತನ ಸಂಸ್ಕೃತಿಯ ಮಹತ್ವ ಅರಿತು ಈ ಕಡೆ ಮುಖ ಮಾಡುತ್ತಿರುವಾಗ ಇದೊಂದು ಕಪ್ಪು ಚುಕ್ಕೆಯಾಗಿ ಉಳಿಯಬಾರದಲ್ಲ. ಹಾಗಾಗಿ ಸರ್ಕಾರದವರು, ಎನ್ ಜಿ ಓ ಗಳು, ಯಾರ್ಯಾರು ಈ ವಿಷಯವಾಗಿ ಕಾರ್ಯಪ್ರವೃತ್ತರಾಗುವ ಅವಕಾಶವಿದೆಯೋ ಅವರೆಲ್ಲಾ ಇತ್ತಕಡೆ ಒಮ್ಮೆ ಗಮನ ಹರಿಸಲಿ. ಅದೇನು ಕಾರಣವೋ ಅರಿತು ಸ್ಪಂದಿಸಿ ಇಂಥವರ ಬದುಕಿಗೆ ಒಂದು ನೆಲೆಯಾಗಲಿ. ವೃದ್ಧಾಪ್ಯದಲ್ಲಿ ಬದುಕು ಅನಾಥವಾಗದೆ, ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆಗೆ ಇನ್ನಷ್ಟು ಮೆರುಗು ತರುವಂತಾಗಲಿ ಎಂಬ ಆಶಯದೊಂದಿಗೆ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಮಂಗಳ ಎಂ ನಾಡಿಗ್
