ಅಂಗೈಯಲ್ಲಿ ಪ್ರಪಂಚ (ಭಾಗ-೨)

ಚಿಕ್ಕ ಹೆಣ್ಣುಮಕ್ಕಳಿಗೆ ಮನೆಯ ವಾತಾವರಣದಲ್ಲಿ ಉಂಟಾಗುವ ಲೈಂಗಿಕ ಕಿರುಕುಳ ಕುರಿತು ಲೇಖಕಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣವನ್ನು ತಪ್ಪದೆ ಮುಂದೆ ಓದಿ… 

ಘಟನೆ -೧

ಅಮ್ಮಾ, ನಾನು ಮಾವನ ಕಾಲಮೇಲೆ ಕುಳಿತುಕೊಳ್ಳುವುದಿಲ್ಲ, ನಂಗೆ ಇಷ್ಟ ಆಗಲ್ಲ ಎಂದು ಮಾವನ ತೊಡೆಯ ಮೇಲೆ ಕುಳಿತಿದ್ದ ವಿಂದ್ಯಾ ಅವಳನ್ನು ಹಿಡಿದುಕೊಂಡಿದ್ದ ಅವನ ಕೈ ಕಿತ್ತೆಸೆದು ಬಂದು ಅಮ್ಮನ ಬಳಿ ಹೇಳಿದ್ದಳು. ಯಾಕೆ, ಏನಾಯ್ತು? ಅವನು ನಿನ್ನ ಮಾವ ಕಣೆ, ಹಂಗೆಲ್ಲಾ ಹೇಳಿದ್ರೆ ಅವ್ನಿಗೆ ಬೇಜಾರಾಗುತ್ತೆ. ಎಷ್ಟು ಪ್ರೀತಿಂದ ಕೂರುಸ್ಗೊಂಡಿದಾನೆ ಇದು ತಾಯಿ ಮಾಲತಿಯ ಮಾತು. ಇಲ್ಲ ಅಮ್ಮಾ, ನಂಗೆ ಸರಿ ಆಗ್ತಿಲ್ಲ. ನಾನು ಆಟ ಆಡಕ್ಕೆ ಹೋಗ್ತೀನಿ ಎಂದು ಅಮ್ಮನ ಉತ್ತರಕ್ಕೂ ಕಾಯದೇ ವಿಂದ್ಯಾ ಹೊರಗೆ ಓಡಿದ್ದಳು.

ಘಟನೆ -೨

ಅಂದು ಪೂಜಾ ಶಾಲಾ ವಾಹನದಲ್ಲಿ ಮನೆಗೆ ಬಂದಿದ್ದಳು. ಮನೆಯಲ್ಲಿ ತಾತ ಮಾತ್ರ. ಅಜ್ಜಿ ಮಗಳ ಮನೆಗೆಂದು ಹೋಗಿದ್ದರು. ತಂದೆ-ತಾಯಿ ಕೆಲಸಕ್ಕೆ. ಬಾಗಿಲು ತೆಗೆದ ತಾತ ಮೊಮ್ಮಗಳನ್ನು ಪ್ರೀತಿಯಿಂದ ಮಾತನಾಡಿಸಿ ಬೇಕರಿಯ ತಿಂಡಿಯನ್ನೂ ಕೊಟ್ಟು ಮುದ್ದು ಮಾಡಿದ್ದರು. ಪ್ರತಿದಿನ ಅಜ್ಜಿಯ ಜೊತೆ ಮಲಗಿಕೊಂಡು ಶಾಲೆಯಲ್ಲಿ ನಡೆದ ಘಟನೆಗಳನ್ನು ಹೇಳಿಕೊಂಡು ಹಾಗೆಯೇ ನಿದ್ದೆ ಹೋಗುತ್ತಿದ್ದಳು ಪೂಜಾ. ಅಂದು ತಾತ ನಿದ್ದೆ ಮಾಡುಸ್ತೀನಿ ಬಾ ಎಂದು ತಮ್ಮ ಜೊತೆ ಮಲಗಿಸಿಕೊಂಡವರು ಅವಳ ಮೈಯನ್ನೆಲ್ಲ ಸ್ಪರ್ಶಿಸಿದ್ದರು. ಪೂಜಾಳಿಗೆ ಯಾಕೋ ಮುಜುಗರವಾದಂತಾಯಿತು. ತಾತ ಅಲ್ಲವೇ? ಹೇಳಲೂ ಆಗುತ್ತಿಲ್ಲ. ರಾತ್ರಿ ಅಮ್ಮ ಜೊತೆಯಲ್ಲಿ ಮಲಗಿಸಿಕೊಂಡಾಗ ಅಮ್ಮಾ, ನಾನು ತಾತನ ಜೊತೆ ಇರಲ್ಲ ಎಂದವಳ ಮಾತಿಗೆ ತಾಯಿ ಯಾಕೆ, ಏನ್ಮಾಡಿದ್ರು ತಾತ? ಎಂದಿದ್ದಳು. ಇರಲ್ಲ ಅಂದ್ರೆ ಇರಲ್ಲ ಅಷ್ಟೇ ಎಂದು ತಿರುಗಿ ಮಲಗಿ ಜೋರಾಗಿ ಅತ್ತಿದ್ದಳು ಪೂಜಾ. ತಾಯಿಗೋ ಯಾಕೋ ಗಾಬರಿ. ಮಾವನನ್ನು ಏನೆಂದು ಕೇಳುವುದು? ಮಗಳೂ ಹೇಳುತ್ತಿಲ್ಲ. ಆದರೆ ಏನೋ ನಡೆದಿರುವುದಂತೂ ಸತ್ಯ ಎಂದು ತಾಯಿಯ ಸೂಕ್ಷ್ಮ ಮನಸ್ಸಿಗೆ ಅರ್ಥವಾಗಿತ್ತು.

ಇದು ಒಂದೆರಡು ಉದಾಹರಣೆಯಷ್ಟೆ. ಇಲ್ಲಿ ನಾನು ಹೇಳಲು ಹೊರಟಿರುವುದು ಚಿಕ್ಕ ಹೆಣ್ಣುಮಕ್ಕಳಿಗೆ ಮನೆಯ ವಾತಾವರಣದಲ್ಲಿ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ.

ಲೈಂಗಿಕ ಕಿರುಕುಳ ಎಂದರೆ, “ಮುತ್ತು ಕೊಡುವುದು, ಖಾಸಗಿ ಅಂಗಗಳನ್ನು ಸ್ಪರ್ಶಿಸುವುದು, ಉಜ್ಜುವುದು, ಅಶ್ಲೀಲ ವಿಡಿಯೋ ತೋರಿಸುವುದು, ಅದರಂತೆ ನಡೆದುಕೊಳ್ಳಲು ಪ್ರಚೋದಿಸುವುದು, ಬಲಾತ್ಕಾರ ಮಾಡುವುದು, ಹೆಣ್ಣುಮಕ್ಕಳು ಒಬ್ಬರೇ ಇದ್ದಾಗ ಇಂತಹ ದುರ್ವರ್ತನೆ ತೋರುವುದು.”ಇದು ಬರೀ ದೊಡ್ಡವರಿಂದ ಮಾತ್ರವಲ್ಲ, ಚಿಕ್ಕ ಹುಡುಗರಿಂದ, ಮಹಿಳೆಯರಿಂದನೂ ಸಂಭವಿಸಬಹುದು. ಅಲ್ಲದೇ ಅಣ್ಣ-ತಮ್ಮ, ಅಕ್ಕ-ತಂಗಿ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವ ಈ ತರಹದ ಸಂಬಂಧಗಳಿಂದಲ್ಲದೇ ಮಲತಂದೆ, ಮಲತಾಯಿ, ಕುಟುಂಬದ ಸ್ನೇಹಿತರು, ಪರಿಚಯದವರು, ಮಕ್ಕಳನ್ನು ನೋಡಿಕೊಳ್ಳಲೆಂದು ನೇಮಕಗೊಂಡವರು, ಕಾವಲುಗಾರರು, ಅಕ್ಕಪಕ್ಕದ ಮನೆಯವರು, ನಿಯಮಿಸಿಕೊಂಡ ವಾಹನ ಚಾಲಕರು ಹೀಗೇ ಇವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

  • ಮಕ್ಕಳಲ್ಲಿ ಹಿಂಜರಿಕೆ ಉಂಟಾಗುತ್ತದೆ, ಶೀಘ್ರವಾಗಿ ಅತಿಯಾದ ಸಿಟ್ಟು ಬರುತ್ತದೆ, ಆತಂಕ, ಖಿನ್ನತೆ, ಕೆಲವರಲ್ಲಿ ಆಕ್ರಮಣಕಾರಿ ವರ್ತನೆಯೂ ಕಂಡುಬರುತ್ತದೆ.
  • ಬೆಳೆಯುವ ಮಕ್ಕಳ ಭಾವನೆಗಳ ಮೇಲೆ ಇದು ಸುದೀರ್ಘಕಾಲದ ಪರಿಣಾಮವನ್ನು ಬೀರುತ್ತದೆ.
  • ಅವರ ವಿದ್ಯಾಭ್ಯಾಸಕ್ಕೆ, ಅವರು ಮುಕ್ತವಾಗಿ ಸಮಾಜದಲ್ಲಿ ತೊಡಗಿಕೊಳ್ಳಲು ಇದು ಕಂಟಕವಾಗಿ ಪರಿಣಮಿಸುತ್ತದೆ.
  • ಅವರು ಮಾನಸಿಕವಾಗಿ ಕುಗ್ಗುವುದರಿಂದ ಅವರ ಮುಂದಿನ ಎಲ್ಲಾ ಬೆಳವಣಿಗೆಗಳ ಮೇಲೂ ಇದು ಪರಿಣಾಮ ಬೀರುತ್ತದೆ.
  • ಇದು ಮನೆಯಲ್ಲಿ ಹತ್ತಿರದವರಿಂದಲೇ ನಡೆಯುವುದರಿಂದ ನಾಲ್ಕು ಜನರ ಮುಂದೆ ಹೇಳಿಕೊಳ್ಳಲಾಗದೆ ಅವರೇ ಸ್ವತಃ ಅನುಭವಿಸುವಂತಾಗುತ್ತದೆ. ಇದು ಅಣ್ಣ-ತಮ್ಮಂದಿರಿಂದ ನಡೆದಾಗಲಂತೂ ಅನೇಕ ಹೆಣ್ಣುಮಕ್ಕಳಿಗೆ ತಾವು ಈ ತರಹದ ತೊಂದರೆಗೆ ಗುರಿಯಾಗುತ್ತಿದ್ದೇವೆಂಬ (ಏನಾಗುತ್ತಿದೆಯೆಂಬ) ಅರಿವು ಸಹ ಇರುವುದಿಲ್ಲ.
  • ಕಿರುಕುಳ ನೀಡಿದವರು ಯಾರ ಬಳಿಯೂ ಹೇಳುವಂತಿಲ್ಲ ಎಂದು ಹೆದರಿಸಿದ್ದರಂತೂ, ಮಕ್ಕಳು ಎಲ್ಲೂ ಹೇಳಿಕೊಳ್ಳಲಾಗದೇ ಒದ್ದಾಡಬಹುದು. ಒಂದು
    ವೇಳೆ ಅವರು ಹೇಳಿದರೂ ಸಹ ಅದನ್ನು ನಂಬದಂತಹ ಪರಿಸ್ಥಿತಿಯನ್ನು ಆ ವ್ಯಕ್ತಿ ಮೊದಲೇ ನಿರ್ಮಾಣ ಮಾಡಿರುವ ಸಾಧ್ಯತೆಯೂ ಇರುತ್ತದೆ.

ಇನ್ನು ಲೈಂಗಿಕ ಕಿರುಕುಳ ಆಗಿದೆ ಎಂದು ಪತ್ತೆ ಹಚ್ಚುವುದು ಹೇಗೆಂದರೆ, ಲೈಂಗಿಕ ಕಿರುಕುಳ ಆದ ಮಕ್ಕಳಲ್ಲಿ ಅನೇಕ ಬದಲಾವಣೆಗಳನ್ನು ನೋಡಬಹುದು. ಮಕ್ಕಳ ಮೇಲೆ ಆಗಿರುವ ಗಾಯ, ಗೀರುವಿಕೆ, ಹಲ್ಲಿನಿಂದಾದ ಗುರುತುಗಳು ಇವೆಲ್ಲ ಅವರು ಲೈಂಗಿಕ ಕಿರುಕುಳಕ್ಕೆ ಒಳಗಾದುದರ ವೈಜ್ಞಾನಿಕ ಸೂಚನೆಗಳಾಗಿವೆ.

ಇನ್ನೂ ಕೆಲವರಲ್ಲಿ ವಿಪರೀತ ರಕ್ತಸ್ರಾವ ಕಂಡುಬರುತ್ತದೆ. ಮಕ್ಕಳ ವರ್ತನೆ ಇದ್ದಕ್ಕಿದ್ದಂತೆ ಬದಲಾಗುತ್ತದೆ. ಯಾರೊಂದಿಗೂ ಸೇರದೇ ಒಂಟಿಯಾಗಿರಲು ಇಷ್ಟಪಡುತ್ತಾರೆ. ಹಿಡಿದು ಮುಟ್ಟಿದ್ದಕ್ಕೆಲ್ಲಾ ಸಿಟ್ಟು ಮಾಡುತ್ತಾರೆ. ಇದರಿಂದ ಅವರ ಶಾಲಾ ಚಟುವಟಿಕೆಯ ಮೇಲೂ ಪರಿಣಾಮ ಬೀರುವುದರಿಂದ ಪಾಠದ ಕಡೆ ಗಮನ ಹರಿಸಲಾಗದೇ ಅವರ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಉಂಟಾಗುತ್ತದೆ. ಕೆಲವು ಮಕ್ಕಳಲ್ಲಿ ನಿದ್ದೆಯಲ್ಲಿ ಮೂತ್ರ ಮಾಡುವ ಸಮಸ್ಯೆಯೂ ಕಂಡು ಬರಬಹುದು. ಅವರ ವಯಸ್ಸಿಗೂ ಮೀರಿದ ಲೈಂಗಿಕ ಕ್ರಿಯೆಗಳ ಬಗ್ಗೆ ಅವರಿಗೆ ಇದರಿಂದ ಮನವರಿಕೆ ಆಗುತ್ತದೆ.

ಲೈಂಗಿಕ ಕಿರುಕುಳದಿಂದ ಆ ಮಗು ಗರ್ಭವತಿಯಾಗಬಹುದು, ಅದು ಸರಿಯಾಗಿ ತಿಳಿಯದೇ ಮುಂದೆ ಗರ್ಭಪಾತ ಮಾಡಿಸುವ ಅವಧಿಯೂ ಮೀರಿ ಹೋಗಿ ಚಿಕ್ಕವಯಸ್ಸಿನಲ್ಲೇ ಮಗುವನ್ನು ಹೆರುವಂತಹ ಪರಿಸ್ಥಿತಿಯೂ ಬರಬಹುದು. ಇವೆಲ್ಲವುಗಳಿಂದ ಮಗು ತನ್ನ ಬಗ್ಗೆಯೇ ನಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳಬಹುದು. ಮಗುವಿಗೆ ತಾನು ಬದುಕುವುದೇ ವ್ಯರ್ಥ ಎಂಬ ಭಾವನೆಯೂ ಬರಬಹುದು. ಯಾವ ವ್ಯಕ್ತಿಯನ್ನು ನೋಡಿದರೂಅನುಮಾನಿಸಬಹುದು. ಗಂಡಸರ ಬಗ್ಗೆ ತಿರಸ್ಕಾರ ಮೂಡಬಹುದು. ಇಡೀ ಜೀವನ ಸಂಬಂಧಗಳನ್ನು ನಂಬದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಎಷ್ಟೋ ಮಕ್ಕಳು ಯಾರಿಗೂ ಹೇಳಲಾಗದೇ ಮಾನಸಿಕವಾಗಿ ಕುಗ್ಗಿ ಹೋಗಿ ಆತ್ಮಹತ್ಯೆಗೂ ಪ್ರಯತ್ನಿಸಬಹುದು.

ಪರಿಹಾರಗಳು :

  • ಮೊದಲನೆಯದಾಗಿ ಮಕ್ಕಳಿಗೆ ಸ್ಪರ್ಶದ ಬಗ್ಗೆ ತಿಳಿಸಬೇಕು. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದೆಂದು.(ಉತ್ತಮ ಸ್ಪರ್ಶ, ಕೆಟ್ಟ ಸ್ಪರ್ಶ)
  • ಲೈಂಗಿಕ ವಿಷಯಗಳ ಬಗ್ಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಯಾಕೆ ಎನ್ನುವ ಬದಲು ಕೆಲವೊಂದು ವಿಚಾರಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು.
  • ಮಕ್ಕಳು ಏನಾದರೂ ಹೇಳಲು ಬಂದರೆ, ತಂದೆ-ತಾಯಿ ಮೊದಲು ಅದನ್ನು ಕೇಳಿಸಿಕೊಳ್ಳಬೇಕು. ಅವರ ಸಮಸ್ಯೆಯನ್ನು ಪರಿಹರಿಸಬೇಕು. ಅವರಿಗೆ ನಿಮ್ಮ ಜೊತೆ ನಾವಿದ್ದೇವೆಂಬ ಭರವಸೆ ನೀಡಬೇಕು.
  • ಎಲ್ಲವುದಕ್ಕೂ ಮೊದಲು ಚಿಕ್ಕಮಕ್ಕಳನ್ನು ಒಬ್ಬಂಟಿಯಾಗಿ ಬಿಡಬಾರದು ಮತ್ತು ಎಷ್ಟೇ ನಂಬಿಕಸ್ಥರಾದರೂ ಅವರೊಂದಿಗೂ ಸಹ ಮಕ್ಕಳನ್ನು ಕಳಿಸಬಾರದು. ಒಂದು ವಯಸ್ಸು ಬಂದು, ಅವರಿಗೆ ತಿಳುವಳಿಕೆ ಮೂಡಿ ಅವರನ್ನು ಅವರು ಇಂತಹ ತೊಂದರೆಯಿಂದ ರಕ್ಷಣೆ ಮಾಡಿಕೊಳ್ಳುವವರೆಗೆ ಜೊತೆಯಿದ್ದು ಕಾಪಾಡಬೇಕು.
  • ಒಂದು ವೇಳೆ ಮಕ್ಕಳು ಈ ರೀತಿಯ ಕಿರುಕುಳಕ್ಕೆ ಒಳಗಾಗಿದ್ದರೆ ಮತ್ತೆ ಮತ್ತೆ ಅದೇ ವಿಷಯ ಕೇಳಿ ಇನ್ನೇನಾಯ್ತು ಎಂದು ಒತ್ತಡ ಹೇರಬಾರದು.
  • ಬೇರೆಯವರ ಮೇಲಿನ ನಂಬಿಕೆಗಿಂತ ಹೆಚ್ಚಾಗಿ ನಮ್ಮ ಮಕ್ಕಳು ಹೇಳಿದ್ದನ್ನು ನಂಬಬೇಕು. ಏಕೆಂದರೆ, ಮಕ್ಕಳು ತಂದೆ-ತಾಯಿಯ ಬಳಿ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳುವಂತಹ ವಾತಾವರಣವನ್ನು ಮನೆಯಲ್ಲಿ ಕಲ್ಪಿಸಿಕೊಡುವುದು ಅತೀ ಮುಖ್ಯ.
  • ಏನಾದರೂ ಹೇಳಲು ಬಂದಾಗ ಬೈಯ್ಯುವುದು, ಅವರು ಹಾಗಲ್ಲ, ಇವರು ಹಾಗಲ್ಲ ಎಂದು ಮಕ್ಕಳ ಬಾಯಿ ಮುಚ್ಚಿಸಿದರೆ ಅಥವಾ ಯಾರ ಮುಂದಾದರೂ ಹೇಳಿದರೆ ಮರ್ಯಾದೆ ಹೋಗುತ್ತೆ ಸುಮ್ಮನಿರು ಎಂದರೆ ಆ ಮಕ್ಕಳು ಯಾರೊಂದಿಗೂ ಹೇಳಿಕೊಳ್ಳಲಾಗದೇ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.
  • ಚಿಕ್ಕವರಿರುವಾಗಲೇ ಅವರ ದೇಹದ ಅಂಗಗಳ ಬಗ್ಗೆ ತಿಳಿಸಿ ಹೇಳಬೇಕು. ಯಾವ ಅಂಗ ತೋರಿಸಬಾರದೆಂಬ ಅರಿವನ್ನು ಮೂಡಿಸಬೇಕು. ತಂದೆ-ತಾಯಿ ವೈದ್ಯರಿಗೆ ಮಾತ್ರ ಅವರ ಖಾಸಗಿ ಅಂಗಗಳನ್ನು ನೋಡುವ ಅವಕಾಶ ಎಂಬುದನ್ನು ಮನದಟ್ಟು ಮಾಡಬೇಕು.(ಅದೂ ಸಹ ಅನಾರೋಗ್ಯ ಉಂಟಾದ ಸಂದರ್ಭಗಳಲ್ಲಿ ತಂದೆ-ತಾಯಿ ಜೊತೆಗಿರುವಾಗ ಮಾತ್ರ ವೈದ್ಯರು ಪರೀಕ್ಷಿಸುವ ಸಲುವಾಗಿ).
  • ಬೇರೆ ಯಾರಿಗೂ ಖಾಸಗಿ ಅಂಗಗಳನ್ನು ಮುಟ್ಟಲು ಬಿಡಬಾರದೆಂಬ ತಿಳುವಳಿಕೆ ನೀಡಬೇಕು. ಜೊತೆಗೆ ನೀವೂ ಸಹ ಬೇರೆಯವರೊಂದಿಗೆ ಈ ರೀತಿ ವರ್ತಿಸಬಾರದೆಂದು ಎಚ್ಚರಿಸಬೇಕು.
  • ಬೇರೆಯವರು ನಿಮ್ಮ ದೇಹದ ಖಾಸಗಿ ಭಾಗಗಳ ಚಿತ್ರ ತೆಗೆಯಲು ಬಿಡಬಾರದು ಎಂಬ ತಿಳುವಳಿಕೆಯನ್ನು ಮುಖ್ಯವಾಗಿ ಮಕ್ಕಳಿಗೆ ನೀಡಬೇಕು.
  • ಕೆಲವೊಂದನ್ನು ಮಕ್ಕಳಿಗೆ ಅವರಿಗೆ ಮುಜುಗರವುಂಟಾಗುವ ಸಂದರ್ಭ ಬಂದಾಗ ನೇರವಾಗಿ ತಿರಸ್ಕರಿಸುವಂತಹ ಅಂದರೆ ಇಲ್ಲ, ಆಗಲ್ಲ, ಬೇಡ, ಮುಟ್ಟಬೇಡ ಇಂತಹ ಕೆಲವು ಪದಗಳಿಂದ ವಿರೋಧಿಸಲು ಕಲಿಸಿಕೊಡಬೇಕು. ಏಕೆಂದರೆ, ಪರಿಚಯವಿರುವವರು, ಒಡಹುಟ್ಟಿದವರು ಆದರೂ ಅವರಿಂದ ಈ ರೀತಿಯ ತೊಂದರೆಯಾದಾಗ ಅದನ್ನು ವಿರೋಧಿಸುವ ಗುಣ ಅವರಲ್ಲಿ ಬರಬೇಕು. ಇನ್ನೂ ಕೆಲವೊಮ್ಮೆ ಜಾಣ್ಮೆಯಿಂದ ತಾನು ಟಾಯ್ಲೆಟ್ಗೆ ಹೋಗಬೇಕು ಈ ರೀತಿ ಏನಾದರೂ ಹೇಳಿ ತಕ್ಷಣಕ್ಕೆ ಅವರು ಅಲ್ಲಿಂದ ಬಚಾವಾಗಬಹುದು ಎಂಬುದನ್ನೂ ತಿಳಿಸಿರಬೇಕು.
  • ನಾಲ್ಕು ಜನರ ಜೊತೆಗಿರುವಾಗ ಸ್ವಲ್ಪ ದೊಡ್ಡ ಮಕ್ಕಳಾದರೆ ಏನಾದರೂ ಕೋಡ್ ವರ್ಡ್ ಹೇಳುವುದರ ಮೂಲಕ ನಾವು ಈ ತರದ ತೊಂದರೆಗೆ ಒಳಗಾಗುತ್ತಿದ್ದೇವೆಂಬ ಸೂಚನೆಯನ್ನು ತಂದೆ-ತಾಯಿಗೆ ನೀಡಬಹುದು. ಇದನ್ನೆಲ್ಲಾ ಮೊದಲೇ ತಂದೆ ತಾಯಿ, ಮಕ್ಕಳು ಚರ್ಚೆ ಮಾಡಿ ನಿರ್ಧರಿಸಿರಬೇಕು.

ಎಷ್ಟೇ ಆದರೂ ಅವರು ನಮ್ಮ ಮಕ್ಕಳು. ಅರಿಯದ ವಯಸ್ಸಲ್ಲಿ ಅವರ ಜೊತೆಗಿದ್ದು ಕಾಪಾಡುವುದು ನಮ್ಮ ಜವಾಬ್ದಾರಿ.

ಹಿಂದಿನ ಸಂಚಿಕೆಗಳು :

  • ಅಂಗೈಯಲ್ಲಿ ಪ್ರಪಂಚ (ಭಾಗ-೧)

  •  ಮಂಗಳ ಎಂ ನಾಡಿಗ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW