ಲೇಖಕರಾದ ಜಯಲಕ್ಷ್ಮಿ ಪಾಟೀಲ್ ಅವರ ಮೊದಲ ಕಾದಂಬರಿ ‘ಮುಕ್ಕು ಚುಕ್ಕಿಯ ಕಾಳು’ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮುಕ್ಕು ಚಿಕ್ಕಿಯ ಕಾಳು
ಲೇಖಕರು : ಜಯಲಕ್ಷ್ಮಿ ಪಾಟೀಲ್
ಪ್ರಕಾಶನ : ಅಂಕಿತ ಪ್ರಕಾಶನ
ಬಹುಮುಖಿ ಪ್ರತಿಭಾವಂತ ಜಯಲಕ್ಷ್ಮಿ ಪಾಟೀಲ್ ರ ಮೊದಲ ಕಾದಂಬರಿ ಮುಕ್ಕು ಚುಕ್ಕಿಯ ಕಾಳು. ಇದಕ್ಕೆ ನಾಲ್ಕು ಆಯಾಮಗಳು ಇವೆ.
ಒಂದು: ವೈಯಕ್ತಿಕ ಸ್ತರ.
ಎರಡು: ಕೌಟುಂಬಿಕ ಸ್ತರ.
ಮೂರು: ಪ್ರಾದೇಶಿಕ ಸಂಸ್ಕೃತಿಯ ಸ್ತರ ಮತ್ತು ಸಂನಿವೇಶ ನಿರ್ಮಾಣ.
ಮೊದಲನೆಯ ಸ್ತರ ವೈಯಕ್ತಿಕ: ಇದು ಮೌನೇಶನೆಂಬ ವಿಶೇಷ ಚೇತನದ ವ್ಯಕ್ತಿವಿಕಾಸದಲ್ಲಿ ಇದನ್ನು ಗುರುತಿಸಬಹುದು. ಯಾವ ಕೌಟುಂಬಿಕ ಹಿನ್ನೆಲೆ ಇಲ್ಲದಿದ್ದರೂ ತನ್ನ ವಿಶೇಷ ಚೇತನದ ಫಲವಾಗಿ ಉಂಟಾದ ಅಂತರಮುಖತೆ, ಚಿತ್ರ ಕಲೆಯ ಕಡೆಗೆ ಅವನ ಒಲವರ ಬೆಳೆಯುತ್ತದೆ .ಅದರ ಪರಿಣಾಮವಾಗಿ ಅವನು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದ ವ್ಯಕ್ತಿಯಾಗಿ ಬೆಳೆಯುತ್ತಾನೆ. ಇದಕ್ಕೆ ಅವರ ಶಾಲೆ ಚಿತ್ರ ಕಲೆಯ ಶಿಕ್ಷಕರು ಇವನಲ್ಲಿದ್ದ ಕಲಾಸಕ್ತಿಯನ್ನು ಗುರುತಿಸಿ ಪೋಷಕ ಪಾತ್ರ ವಹಿಸಿದರು. ಅವನು ಮೆಟ್ರಿಕ್ ಮುಗಿಸಿ ಮುಂದೇನು ಎಂದು ಕಣ್ಣು ಕಣ್ಣು ಬಿಡುತ್ತಿರುವಾಗ ಧಾರವಾಡದ ಚಿತ್ರ ಕಲಾ ಕಾಲೇಜ್ ನಲ್ಲಿ ಪ್ರವೇಶ ಪಡೆಯಲು ಅನುವು ಮಾಡಿಕೊಡುತ್ತಾರೆ. ಅಲ್ಲಿ ಪಡೆದ ಶಿಕ್ಷಣ ಅವನ ಪ್ರಗತಿಗೆ ನಾಂದಿ ಹಾಡುತ್ತದೆ. ಪತ್ರಿಕೆಯಲ್ಲಿ ಅವನು ಚಿತ್ರ ಕಲೆಯನ್ನು ಕುರಿತು ಬರೆದ ಬರಹಗಳು ಅವನಿಗೆ ಕಲಾಲೋಕದಲ್ಲಿ ಒಂದು ಸ್ಥಾನವನ್ನು ಕಲ್ಪಿಸಿಕೊಡುತ್ತದೆ. ಅಲ್ಲಿ ಅವನ ವಿದ್ಯಾಭ್ಯಾಸ ಮುಗಿಸಿದಾಗ , ಮುಂಬಯಿ ಕಲಾ ಕಾಲೇಜ್ ನಲ್ಲಿ ಅಧ್ಯಾಪನ ವೃತ್ತಿ ದೊರೆಯುವುದು. ಅಲ್ಲಿಂದ ಅವನದು ಏರುಗತಿಯ ನಡಿಗೆ. ಇಷ್ಟಾದರೂ ಅವನು ತನ್ನ ಬೇರುಗಳನ್ನು ಮರೆಯದೆ , ಸದಾಕಾಲವೂ ತನ್ನ ನಡಿಗೆಯನ್ನು ರೂಪಿಸಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುವುದು, ಅವನ ವ್ಯಕ್ತಿತ್ವದ ಹಿರಿಮೆಯ ದ್ಯೋತಕವಾಗಿದೆ.ಇದನ್ನು ಅವನು ತನ್ನ ಗುರುಗಳ ಜತೆಗೆ, ಮನೆಯವರಾದ ತಂದೆ ತಾಯಿಗಳ ಜತೆಗೆ , ಒಲಿದ ಮಡದಿಯ ಜತೆಗೆ ಇರಿಸಿಕೊಂಡ ಅಂತಃಕರಣದ ಸಂಬಂಧಗಳಲ್ಲಿ ಕಾಣಬಹುದು.

ತನ್ನಲ್ಲಿ ತನ್ನ ವಿಶೇಷ ಚೇತನದಿಂದಾಗಿ ಉಂಟಾದ ಕೀಳರಿಮೆಯನ್ನು ಅಂತಿಮವಾಗಿ ಗೆಲ್ಲುವ ಮೂಲಕ ತನ್ನ ಆತ್ಮವಿಶ್ವಾಸವನ್ನು ಗಳಿಸಿ ಅಸ್ಮಿತೆಯನ್ನು ಸ್ಥಾಪಿಸುವುದರೊಂದಿಗೆ ಕಾದಂಬರಿಯನ್ನು ಕೊನೆಗೊಳಿಸಿರುವುದು ಅವನ ವ್ಯಕ್ತಿತ್ವದ ವಿಕಾಸಕ್ಕೆ ಲೇಖಕಿ ಕೊಟ್ಟ ಪ್ರಾಮುಖ್ಯತೆಗೆ ನಿದರ್ಶನವಾಗಿದೆ .
ಎರಡನೆಯದು: ಕೌಟುಂಬಿಕ ಸ್ತರ: ಕಾಮಾಕ್ಷಿ ಮತ್ತು ಶಂಕರ ದಂಪತಿಗಳಿಗೆ ಹುಟ್ಟಿದ ಮಗು ಮೌನೇಶ.ಅವರದು ಬಡ ಕುಟುಂಬವಾದ್ದರಿಂದ, ಮಗನ ಸೀಳುದುಟಿ ಅವರನ್ನು ಹೈರಾಣಾಗಿಸುತ್ತದೆ. ಅದಕ್ಕೆ ಶಸ್ತ್ರ ಚಿಕಿತ್ಸೆ ನೀಡಲು ಬೇಕಾದ ಹಣ ಹೊಂದಿಸಲು ಇಬ್ಬರೂ ಶಕ್ತಿ ಮೀರಿ ದುಡಿದು ಕಾಸಿಗೆ ಕಾಸು ಗಂಟಿಕ್ಕಿ , ಶಸ್ತ್ರ ಚಿಕಿತ್ಸೆ ಮಾಡಿಸುವಲ್ಲಿ ಯಶಸ್ವಿಯಾಗುತ್ತಾರೆ.ಹೊಲಿಗೆ ಹಾಕಿದರೂ ಗೆರೆ ಉಳಿದೆ ಬಿಡುತ್ತದೆ. ಈ ಗೆರೆಯ ಕೀಳಿರೆಮೆಯ ದಾಟಲು ಮೌನೇಶ ಚಿತ್ರ ಕಲೆಯ ಗೆರೆಗಳ ಕೈಹಿಡಿದು ಮುನ್ನಡೆಯುತ್ತಾನೆ. ಮಗನ ಸಾಧನೆ ಏನೆಂದು ಅರಿಯದಷ್ಟು ಮುಗ್ದರಾದ ಅವರಿಗೆ ತಿಳಿಯದಿದ್ದರೂ ಸಂಭ್ರಮಿಸುತ್ತಾರೆ.
ಶಂಕರನಿಗೆ ಇದ್ದ ಒಬ್ಬಳೆ ತಂಗಿ ಭಾಗೀರಥಿ, ತನ್ನ ಮಗಳು ಶೈಲಾಳನ್ನು ಕೊಟ್ಟು ಮದುವೆ ಮಾಡಿ ,ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲು ಪ್ರಯತ್ನಮಾಡಿ, ಗಂಡನ ಮನವೊಲಿಸುವುದರಲ್ಲಿ ಸಫಲವಾಗುತ್ತಾಳೆ. ಹೀಗಾಗಿ ಅವರ ಕೌಟುಂಬಿಕ ಬಾಂಧವ್ಯ ಮತ್ತಷ್ಟು ಭದ್ರವಾಗುತ್ತದೆ. ಮದುವೆ ನಂತರ ಮುಂಬಯಿಗೆ ಬಂದ ಯುವ ದಂಪತಿಗಳು ಪರಸ್ಪರ ಒಲಿದು , ಶೈಲಾ ಬಸಿರಾದಾಗ ಅತ್ತೆ ತಾಯಿ ಇಬ್ಬರೂ ಸಂಭ್ರಮಿಸುತ್ತಾರೆ. ಅವಳಿಗೆ ಕಳ್ಳಕುಬುಸ ಮಾಡಲು ಅವರು ಮುಂಬಯಿಗೆ ಪ್ರಥಮ ಬಾರಿಗೆ ದಾವಿಸಿ ಬಂದು ಸಂಭ್ರಮಿಸುತ್ತಾರೆ. ಅದು ಅವರನ್ನು ಮತ್ತಷ್ಟು ಬೆಸೆಯಲು ಕಾರಣವಾಗುತ್ತದೆ.ಮುಂದೆ ಅವಳಿಗೆ ಏಳನೇ ತಿಂಗಳ ನಂತರ ಊರಿಗೆ ಕರೆದುಕೊಂಡು ಹೋಗಿ ಬಿಡುತ್ತಾನೆ. ತಾಯಿಯ ನಿಗಾದಲ್ಲಿ ಅವಳು ಯಾವುದೇ ಊನವಿಲ್ಲದ ,ಹೆಣ್ಣು ಮಗುವಿನ ತಾಯಿಯಾದಾಗ ಎಲ್ಲರಿಗೂ ಸಮಾಧಾನ ಸಂಭ್ರಮಗಳನ್ನು ತರುತ್ತವೆ.

ಪ್ರಾದೇಶಿಕ ಸಂಸ್ಕೃತಿಯ ಅಭಿವ್ಯಕ್ತಿ ಇಲ್ಲಿ ಮೂರು ನೆಲೆಗಳಲ್ಲಿ ಹಾಸುಹೊಕ್ಕಾಗಿ ಬಂದಿದೆ. ಅ: ಭಾಷಿಕ ನೆಲೆ: ಉತ್ತರ ಕರ್ನಾಟಕದ ಭಾಷೆಯ ಘಮಲನ್ನು ಇಲ್ಲಿನ ಪಾತ್ರಗಳು ಆಡುವ ಭಾಷೆಯಲ್ಲಿ ಕಾಣಬಹುದು ಮುತ್ತ್ಯಾ, ಆಹೇರಿ, ಇತ್ಯಾದಿ. ಆ: ಆಹಾರ: ಜ್ವಾಳದ ರೊಟ್ಟಿ, ಸಜ್ಜೆ ರೊಟ್ಟಿ, ಸೇಂಗಾ ಚಟ್ನಿ, ಪುಂಡಿ ಪಲ್ಲೆ ಇತ್ಯಾದಿ. ಇ: ಪದ್ಧತಿ: ಕಳ್ಳ ಕುಬುಸ ತುಂಬಿಸೋದು, ಐದು ನೀರು.
ಪ್ರಥಮ ಕಾದಂಬರಿಯಲ್ಲಿ ಲೇಖಕಿಯ ಸಾಧನೆ ಅಭಿನಂದನಾರ್ಹ. ಲೇಖಕಿಯರ ಮಾತಿನಲ್ಲಿ ನನ್ನನ್ನು ಸಂಗಾತಿಯ ಜತೆಗೆ.ಇಲ್ಲಿನ ನಮ್ಮ ಹಲವು ಗೆಳೆಯರನ್ನು ನೆನಪು ಮಾಡಿಕೊಂಡಿರುವ ಅವರ ಸೌಜನ್ಯಕ್ಕೆ ಋಣಿ. ಇದನ್ನು ಪ್ರಕಟಿಸಿದ ಅಂಕಿತ ಪ್ರಕಾಶನದ ಸಹಪಾಠಿ ಗೆಳೆಯರಾದ ಪ್ರಕಾಶ್ ಮತ್ತು ಪ್ರಭಾ ದಂಪತಿಗಳಿಗೆ ಕೂಡ ಅಭಿನಂದನ. ಬಿಜಾಪುರದ ಬೇರುಗಳು, ಮುಂಬಯಿನಲ್ಲಿ ಕಾಂಡವಾಗಿ ಬೆಳೆದು ,ಬೆಂಗಳೂರಿನಲ್ಲಿ ಟಿಸಿಲೊಡೆಯುತ್ತಿರುವ ಜಯಲಕ್ಷ್ಮಿ ಪಾಟೀಲ್ ಎಂಬ ಬಹುಮುಖಿಗೆ ಅಭಿನಂದನೆಗಳು.ಅವರು ನಾವು ಮುಂಬಯಿನಲ್ಲಿ ನಡೆಸಿದ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದಾಗ ಬಂದು ಸ್ವೀಕರಿಸಿದ ಚಿತ್ರ ಇನ್ನೂ ಕಣ್ಮುಂದೆ ಇದೆ. ಶುಭಾಶಯ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
