ನಂಬಿಕೆಯ ದೋಣಿ ಮೇಲೆ ಸಾಗುತ್ತಿರುವ ಹೃದಯ

ಜೀವನ ಎಂಬುದು ಒಂದು ಸುಧೀರ್ಘವಾದ ಸಾಗರ. ಆ ಅಲೆಗಳ ನಡುವೆ ನಮ್ಮ ಪ್ರೀತಿಯ ದೋಣಿ ಅಲುಗಾಡದಂತೆ ಕಾಯುತ್ತಿರುವುದು, ನಾವು ಪರಸ್ಪರ ಇಟ್ಟಿರುವ ಅಚಲವಾದ ವಿಶ್ವಾಸ. ಲೇಖಕರಾದ ಸಿದ್ದೇಶ್ ಸಿದ್ದನ ಮಠ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…

ಪ್ರಿಯ ಗೆಳತಿ…

ನಂಬಿಕೆಯ ದೋಣಿ ಮೇಲೆ ಸಾಗುತ್ತಿರುವ ಈ ನನ್ನ ಹೃದಯಕ್ಕೆ ಆ ದೋಣಿಯ ಯಜಮಾನಿ ನೀನೇ ಎನ್ನುವುದಕ್ಕಿಂತ ದೊಡ್ಡ ನೆಮ್ಮದಿ ಮತ್ತೊಂದಿಲ್ಲ ಕಣೇ. ನಮ್ಮಿಬ್ಬರ ಪಯಣ ಶುರುವಾದ ದಿನದಿಂದಲೂ ನನಗೆ ನಿನ್ನ ಮೇಲೆ ನಿನಗೆ ನನ್ನ ಮೇಲಿರುವ ಆ ನಂಬಿಕೆಯೇ ನಮಗೆ ದಾರಿದೀಪ. ಬದುಕಿನ ಕಡಲಿನಲ್ಲಿ ಎಷ್ಟೇ ಏರುಳಿತದ ಅಲೆಗಳು ಇದ್ದರೂ ಬಿರುಗಾಳಿ ಬೀಸಿದರು ನಿನ್ನ ಪ್ರೀತಿಯ ಅಂಬು ಹಿಡಿದು ನೀನು ಜೊತೆಗಿರುವಾಗ ಈ ದೋಣಿ ಎಂದಿಗೂ ದಾರಿ ತಪ್ಪಲಾರದು ಎಂಬ ಧೈರ್ಯ ನನಗಿದೆ.

ನನ್ನ ಪ್ರತಿ ಉಸಿರಿನಲ್ಲೂ ಪ್ರತಿ ಯೋಚನೆಯಲ್ಲೂ ನಿನ್ನದೇ ನೆರಳು, ಈ ಹೃದಯ ಕೇವಲ ಬಡೆದುಕೊಳ್ಳುತ್ತಿಲ್ಲ; ನಿನ್ನ ಮೇಲಿಟ್ಟಿರುವ ಅಚಲವಾದ ನಂಬಿಕೆಯಲ್ಲಿ ಪ್ರತಿಕ್ಷಣ ಜೀವಿಸುತ್ತಿದೆ. ಪರಿಸ್ಥಿತಿಗಳು ಹೇಗೆ ಇದ್ದರೂ ನಿನ್ನ ಕೈ ಹಿಡಿದು ಮುನ್ನಡೆಯುವ ನನ್ನ ಈ ನಂಬಿಕೆಯ ದೋಣಿ ಎಂದಿಗೂ ದಡ ಸೇರಿಯೇ ತೀರುತ್ತದೆ.

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ,ನನ್ನ ಬಿಟ್ಟು ನಿನ್ನಾ
ಜೀವನ ಸಾಗದು
ಜೀವನ ಸಾಗದು…

ನಿನ್ನ ಕಣ್ಣುಗಳಲ್ಲಿ ನನಗೆ ಕಾಣುವ ಆ ಭರವಸೆ ಇದೆಯಲ್ಲ ಅದು ಜಗತ್ತಿನ ಯಾವುದೇ ಚಂಡಮಾರುತವನ್ನಾದರೂ ಎದುರಿಸುವ ಶಕ್ತಿಯನ್ನು ನನಗೆ ನೀಡುತ್ತದೆ. ಜೀವನ ಎಂಬುದು ಒಂದು ಸುಧೀರ್ಘವಾದ ಸಾಗರ. ಇಲ್ಲಿ ಸುಖ-ದುಃಖಗಳ ಅಲೆಗಳು ಸಹಜ. ಆದರೆ ಆ ಅಲೆಗಳ ನಡುವೆ ನಮ್ಮ ಪ್ರೀತಿಯ ದೋಣಿ ಅಲುಗಾಡದಂತೆ ಕಾಯುತ್ತಿರುವುದು ನಾವು ಪರಸ್ಪರ ಇಟ್ಟಿರುವ ಅಚಲವಾದ ವಿಶ್ವಾಸ. ಕೆಲವೊಮ್ಮೆ ನನಗೆ ಆಶ್ಚರ್ಯವಾಗುತ್ತದೆ. ಇಷ್ಟು ವಿಶಾಲವಾದ ಜಗತ್ತಿನಲ್ಲಿ ನನ್ನ ಹೃದಯ ನಿನ್ನನ್ನು ಏಕೆ ಆರಿಸಿಕೊಂಡಿತು ಎಂಬುದು.

ಬಹುಶಃ ವಿಧಿ ಬರಹದಲ್ಲೇ ನಮ್ಮಿಬ್ಬರ ಆತ್ಮಗಳು ಒಂದಾಗಬೇಕೆಂದು ಬರೆದಿತ್ತೇನೋ… ನಿನ್ನ ಮೌನದಲ್ಲೂ ನನಗೆ ನನ್ನ ಹೆಸರೇ ಕೇಳಿಸುತ್ತದೆ. ನಿನ್ನ ಮುಗುಳುನಗೆಯಲ್ಲಿ ನನ್ನ ಇಡೀ ದಿನದ ಆಯಾಸವೆಲ್ಲಾ ಮರೆತು ಹೋಗುತ್ತದೆ.

ಪ್ರೀತಿ ಮಾಡುವುದು ಸುಲಭ. ಆದರೆ ಆ ಪ್ರೀತಿಯಲ್ಲಿ ನಂಬಿಕೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ತಪಸ್ಸಿನಂತೆ. ಆ ತಪಸ್ಸನ್ನು ನಾನು ನಿನ್ನೊಂದಿಗೆ ಪ್ರತಿದಿನ ಆಚರಿಸುತ್ತಿದ್ದೇನೆ.

ಪ್ರೀತಿ ಮಾಡು ತಪ್ಪೇನಿಲ್ಲ ಅಂತ ಎಲ್ಲ ಹೇಳ್ತಾರಲ್ಲ
ಯಾರ ಮಾತು ಕೇಳಿ ನೀ ಪ್ರೀತಿ ಮಾಡಿದೆ ?
ಮನಸ ಮಾತು ಕೇಳಿ, ನಾ ಪ್ರೀತಿ ಮಾಡಿದೆ.

ನಿನ್ನ ಈ ಪ್ರೀತಿ ಮತ್ತು ನಂಬಿಕೆಯನ್ನು ನನ್ನ ಕೊನೆಯ ಉಸಿರಿರೋವರೆಗೂ ಕಣ್ಣಿನ ರೆಪ್ಪೆಯಂತೆ ಕಾಪಾಡಿಕೊಳ್ಳುತ್ತೇನೆ . ನೆನಪಿರಲಿ ಈ ಹೃದಯದ ಪಯಣ ಕೇವಲ ನನ್ನದಲ್ಲ ಇದು ನಮ್ಮಿಬ್ಬರ ನಂಬಿಕೆಯ ಹೆಜ್ಜೆಯ ಗುರುತುಗಳು. ನಾವು ಜೊತೆಯಾಗಿ ಕಳೆದ ಆ ಸುಂದರ ಕ್ಷಣಗಳು ಆಡಿದ ಮಾತುಗಳು ಹಂಚಿಕೊಂಡ ಕನಸುಗಳು. ಇವೆಲ್ಲವೂ ನನ್ನ ಬದುಕಿನ ಅತ್ಯಂತ ಅಮೂಲ್ಯವಾದ ಆಸ್ತಿಗಳು. ದುಡ್ಡಿನಿಂದ ಕೊಳ್ಳಲಾಗದ ನೆಮ್ಮದಿಯನ್ನು ನೀನು ನನಗೆ ನೀಡಿದ್ದೀಯಾ ನಿನ್ನ ಒಡನಾಟದಲ್ಲಿ ನನಗೆ ಸಿಗುವ ಆ ಪ್ರೀತಿಯ ಆಳವನ್ನು ಅಳೆಯಲು ಜಗತ್ತಿನ ಯಾವುದೇ ಮಾಪಕಕ್ಕೂ ಸಾಧ್ಯವಿಲ್ಲ.

ಕೆಲವೊಮ್ಮೆ ನಮ್ಮ ನಡುವೆ ಸಣ್ಣ ಪುಟ್ಟ ಮುನಿಸುಗಳು, ಬೇಸರಗಳು ಬರುವುದು ಸಹಜ. ಆದರೆ ಆ ಪ್ರತಿಯೊಂದು ಮುನಿಸಿನ ನಂತರವೂ ನಮ್ಮ ನಡುವಿನ ಪ್ರೀತಿ ಮತ್ತಷ್ಟು ಗಟ್ಟಿಯಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಏಕೆಂದರೆ ನಮ್ಮ ಸಿಟ್ಟಿನ ಹಿಂದೆಯೂ ಪರಸ್ಪರ ಕಳೆದುಕೊಳ್ಳಬಾರದು ಎಂಬ ಹಟ ಮತ್ತು ಅತಿಯಾದ ಪ್ರೀತಿ ಅಡಗಿರುತ್ತದೆ. ನಿನ್ನ ಮುಖದಲ್ಲಿ ಬೇಸರ ಕಂಡಾಗ ನನ್ನ ಇಡೀ ಜಗತ್ತೇ ಸ್ತಬ್ಧವಾದಂತೆ ಭಾಸವಾಗುತ್ತದೆ. ನಿನ್ನ ಕಣ್ಣಿನ ಒಂದು ಹನಿ ಕಣ್ಣೀರು ನನ್ನ ಎದೆಯನ್ನು ಸೀಳಿದಂತೆ ನೋವುಂಟು ಮಾಡುತ್ತದೆ. ಅದಕ್ಕಾಗಿ ಹೇಳುತ್ತಿದ್ದೇನೆ ನೀನು ಸದಾ ನಗು ನಗುತಿರಬೇಕು.

ನಾವು ಕಟ್ಟಲಿರುವ ಭವಿಷ್ಯದ ಕನಸುಗಳ ಅರಮನೆಗೆ ಈ ನಂಬಿಕೆಯೇ ಬಲವಾದ ಅಡಿಪಾಯ. ಇಬ್ಬರು ಜೊತೆಯಾಗಿ ಸಾಗಬೇಕಾದ ದಾರಿ ಇನ್ನೂ ತುಂಬಾ ದೂರವಿದೆ. ಆದರೆ ಮುಳ್ಳುಗಳಿರಬಹುದು; ಕಲ್ಲುಗಳಿರಬಹುದು ಆದರೆ ನಿನ್ನ ಕೈ ನನ್ನ ಕೈ ಒಳಗಿರುವಾಗ ನನಗೆ ಯಾವುದೇ ದಾರಿಯು ಕಠಿಣ ಎನಿಸುವುದಿಲ್ಲ. ನಿನ್ನ ಹೆಜ್ಜೆಗೆ ಹೆಜ್ಜೆಯನಿಟ್ಟು, ನಿನ್ನ ನೆರಳಾಗಿ ನಿನ್ನನ್ನು ಮುನ್ನಡೆಸುವುದೇ ನನ್ನ ಬದುಕಿನ ಏಕೈಕ ಆಸೆ .ಪ್ರೀತಿ ಎಂದರೆ ಕೇವಲ ಹತ್ತಿರವಿರುವುದಲ್ಲ ದೂರವಿದ್ದರೂ ಪರಸ್ಪರ ಹೃದಯದ ಬಡಿತವನ್ನು ಅರ್ಥ ಮಾಡಿಕೊಳ್ಳುವುದು. ನಿನ್ನಿಂದ ದೂರವಿರುವ ಪ್ರತಿಯೊಂದು ಕ್ಷಣವು ನನಗೆ ಯುಗದಂತೆ ಭಾಸವಾಗುತ್ತದೆ. ಆದರೂ ನಿನ್ನ ನೆನಪುಗಳು ನನ್ನನ್ನು ಒಂಟಿಯಾಗಲು ಬಿಡುವುದಿಲ್ಲ

ಈ ಜಗತ್ತು ನಿಂತಿರುವುದೇ ನಂಬಿಕೆಯ ಮೇಲೆ. ಇಂದು ಸಿಗುತ್ತಿರುವ ಜೀವವಾಯು ನಾಳೆಯೂ ಸಿಗುತ್ತದೆ ಎನ್ನುವ ನಂಬಿಕೆ. ಇಂದು ಸಿಗುತ್ತಿರುವ ಜೀವಜಲ ನಾಳೆಯೂ ಸಿಗುತ್ತದೆ ಎನ್ನುವ ನಂಬಿಕೆ. ಇಂದು ಬೆಳಕು ಕೊಡುವ ಸೂರ್ಯ ನಾಳೆಯೂ ಬೆಳಕು ಕೊಡುವನೆಂದು, ಇಂದು ಕವಿದ ಕತ್ತಲ ಕಾರ್ಮೋಡ ಬೆಳಗಿನ ಜಾವ ಸರಿದು ಹಾಲ್ನೊರೆಯಂತಹ ಬೆಳಕು ಬರುವುದೆಂದು ಹೀಗೆ ಜೀವನದಲ್ಲಿ ಅಪನಂಬಿಕೆಗಿಂತ ನಂಬಿಕೆಯ ಮೇಲೆ ಬದುಕನ್ನು ಕಟ್ಟಿಕೊಳ್ಳುತ್ತಾ ಸಾಗುತ್ತೇವೆ ಎಲ್ಲೋ ಒಂದು ಕಡೆ ಈ ನಮ್ಮ ಮುದ್ದು ಮನಸ್ಸು ಪಿಸುಗುಟ್ಟುತ್ತಿರುತ್ತದೆ.

ಈ ಮನಸ್ಸು ಸದಾ ನಿನ್ನ ಸುತ್ತಲೇ ಗಿರಕಿ ಹೊಡೆಯುತ್ತಾ ಇರುತ್ತದೆ ನನ್ನವಳು ನನ್ನ ಕೈಬಿಡುವುದಿಲ್ಲವೆಂದು, ಸಾರಿ ಸಾರಿ ಹೇಳುತ್ತಿರುತ್ತದೆ. ಸದಾ ಕಾಲ ಮನಸ್ಸು ನಿನ್ನ ಸುಖ ಶಾಂತಿ ಹಾಗೂ ಸಮೃದ್ಧಿಗಾಗಿ ಪರಿತಪಿಸುತ್ತಿರುತ್ತದೆ. ನಿನ್ನ ಮುಗುಳ್ನಗೆ ನನ್ನ ದೋಣಿಗೆ ಬೀಸುವ ತಂಗಾಳಿ. ನಿನ್ನ ಮುಖದ ಮೇಲಿನ ಆ ನಗು ಎಂದಿಗೂ ಮಾಸದಿರಲಿ. ನಮ್ಮ ಪ್ರೀತಿಯ ಪಯಣ ಹೀಗೆಯೇ ಅನಂತದವರೆಗೆ ಸಾಗುತ್ತಿರಲಿ….

ಮತ್ತೆ ಸಿಗುವೆ…. ಓ ಮುದ್ದು ಮನಸೇ…


  • ಸಿದ್ದೇಶ್ ಸಿದ್ದನ ಮಠ – ಸಹಾಯಕ ಸಂಚಾರ ಅಧೀಕ್ಷಕರು, ಲೇಖಕರು, ದಾವಣಗೆರೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading