ವಿಷ್ಣು ಸಹಸ್ರನಾಮದಲ್ಲಿ ಬಂದಿರುವ ಎಲ್ಲ ನಾಮಗಳು ಪರಮಾತ್ಮನ ತತ್ವವನ್ನು ತುಂಬಿದ ಶಕ್ತಿಯುತವಾದ ಜ್ಞಾನ ಸಂಪತ್ತುಳ್ಳ ಮೋಕ್ಷಾನಂದ ಸಿಗುವ ಅಕ್ಷರ ಶಬ್ದಗಳು. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ನಾಹಂ ಕರ್ತಾ” “ಹರಿ: ಕರ್ತಾ”
ಶ್ರೀ ಗುರುಭ್ಯೋ ನಮಃ ಶ್ರೀಹರಿ ಓಂ
ಶ್ರೀ ವಿಷ್ಣುಸಹಸ್ರನಾಮ ಸ್ತುತಿಯಲ್ಲಿ ವೈಶಂಪಾಯನರು ಜನಮೇಜಯನಿಗೆ ಹೇಳಿರುವ ಯಾರನ್ನು ಸ್ತುತಿಸಬೇಕು ಎಂಬುದನ್ನು (ಪರಮಂ ಯೋ ಮಹತ್ತೇಜ: ಪರಮಂ ಯೋ ಮಹತ್ತಪ:/ಪರಮಂ ಯೋ ಮಹದ್ಬ್ರಹ್ಮ ಪರಮಂ ಯ:ಪರಾಯಣಮ್//) ಯಾರು ಪ್ರಕೃಷ್ಟವಾದ ತೇಜಸ್ಸುವುಳ್ಳವರೋ ಬೃಹದಾಕಾರದ ಚೈತನ್ಯ ರೂಪವಾದ ಹಾಗೂ ಸರ್ವವನ್ನು ಪ್ರಕಾಶಿಸುವರೊ ಯಾರು ಸತ್ಯಾದಿ ಅನವಚ್ಛಿನ್ನವಾದ ಐಶ್ವರ್ಯವುಳ್ಳ ಮಹದ್ಬ್ರಹ್ಮ ವಾಗಿರುವರೋ ಎಲ್ಲ ಲೋಕಗಳನ್ನು ಧರಿಸಿರುವರೋ ಭಯವಿಲ್ಲದೆ ಸ್ವಸ್ವತಂತ್ರನಾಗಿ ಪರಮಾಶ್ರಯವಾಗಿರುವ ಸರ್ವೋತ್ತಮ ಶ್ರೀಹರಿಯ ಮಹಿಮೆ ಅಪಾರ ಗುಣಗಳಿಂದ ಕೂಡಿದ ಅಪ್ರತಿಮಲ್ಲನ ಮತ್ತು ಅವನ ಪರಿವಾರ ಹಾಗೂ ಸ್ತುತಿಸುವ ರೀತಿ ಸಿಗುವ ಫಲ ಎಲ್ಲವನ್ನೊಳಗೊಂಡ ಶ್ರೀ ಹರಿಯ ಕಥಾ.ಇದು ಶಾಶ್ವತವಾದ ಇಂದು, ಮುಂದು ಯಾವತ್ತೂ ಅಮೃತದಂತೆ ಶುದ್ಧವಾಗಿರುವ ಸಾರ.ಹರಿಕಥಾಮೃತಸಾರ ಜೀವನದ ಅತ್ಯಮೂಲ್ಯವಾದ ಉಸಿರು. ಪರಮಾತ್ಮನ ಅಧಿಷ್ಠಾನವನ್ನು ಮರೆಯದೆ ಯಾವದೂ ಕ್ರಿಯೆ ಮಾಡಿದ್ದಲ್ಲಿ ಅಕಸ್ಮಾತ್ ಪಾಪಕ್ರಿಯೆ ಆಗಿದ್ದರೆ ಕ್ಷಮಿಸಿ ನಮ್ಮನ್ನು ಸರಿ ಮಾರ್ಗಕ್ಕೆ ಕಳಿಸುವದಂತೂ ನಿಜ.ಕ್ಷಮ:, ಕ್ಷಾಮ:ಸಮೀಹನ:ಈ ಮೂರು ನಾಮಗಳು ವಿಷ್ಣು ಸಹಸ್ರನಾಮದಲ್ಲಿ ಬಂದಿವೆ.
ಕ್ಷಮ:ಸರ್ವ ಕಾರ್ಯ ಸಮರ್ಥ. ಕ್ಷಾಮ:ಲಯದಲ್ಲ ಸರ್ವಧಾರಕ ಹಾಗೂ ಸಮೀಹನ ಅಂದರೆ ಯೋಗ್ಯವಾದಂತಹ ಸತ್ಯ ಸಂಕಲ್ಪ ಮಾಡುವವನು. ವಿಶ್ವವನ್ನು ತುಂಬಿ ಪ್ರೇರಣೆ ಮಾಡುವವನಾದ್ದರಿಂದ ವಿಷ್ಣು ಎಂದು ಕರೆಯುವರು. ವಿಷ್ಣು ಸಹಸ್ರನಾಮದಲ್ಲಿ ಬಂದಿರುವ ಎಲ್ಲ ನಾಮಗಳು ಪರಮಾತ್ಮನ ತತ್ವವನ್ನು ತುಂಬಿದ ಶಕ್ತಿಯುತವಾದ ಜ್ಞಾನ ಸಂಪತ್ತುಳ್ಳ ಮೋಕ್ಷಾನಂದ ಸಿಗುವ ಅಕ್ಷರ ಶಬ್ದಗಳು. ಈ ನಾಮಸ್ತೋತ್ರವನ್ನು ನಾವು ಎಷ್ಟು ಸಾರೆ ಪಠಣ ಮಾಡಿದ್ದೇವೆ ಅನ್ನುವುದಕ್ಕಿಂತ ನಾನು ಯಾರು? ಏನು ಪಠಣ ಮಾಡುತ್ತಿದ್ದೇನೆ. ಆ ನಾಮಗಳಿಗೆ ನನಗೆ ಏನು ಸಂಬಂಧ ಈ ಚಿಂತನೆಯಿಂದ ಪರಮಾತ್ಮನ ಅನುಸಂಧಾನ ಮಾಡಿ ಪಠಣ ಮಾಡಿದರೆ ಲೋಕ ಕಲ್ಯಾಣಕ್ಕಾಗಿ ಮಾಡಿದ ಯಜ್ಞದ ಫಲ ದೊರಕುವುದು. ಪರಮಾತ್ಮನ ಅಧಿಷ್ಠಾನವನ್ನು ಮರೆಯಬಾರದು.

ಯಾವ ಕರ್ಮ ಮಾಡಿದರೂ ವಾಯುದ್ವಾರ ಪರಮಾತ್ಮನಿಗೆ ಅರ್ಪಿಸಬೇಕು.ಅದಕ್ಕೆ ಪರಮಾತ್ಮನು ಪವನಪಿತ ಎಂದು ಕರೆಯುತ್ತಾರೆ.ಮನೋನಿಗ್ರಹಕ್ಕೆ ಶಿವನದ್ವಾರ ಹೋಗಬೇಕು.ಮಹಾಭಾರತದಲ್ಲಿ ಕೃಷ್ಣನು ಅರ್ಜುನನಿಗೆ ಶಿವನಿಂದಲೆ ಶಸ್ತ್ರ ಕೊಡಿಸಿರುವನು. ಹೀಗೆ ಎಲ್ಲ ದೇವತೆಗಳಲ್ಲಿ ನೆಲೆಸಿದ್ದು ಅವರಿಗೆ ಪ್ರೇರಕನಾಗಿ ವಿಶ್ವವನ್ನು ಸರ್ವರನ್ನು ಪಾಲಿಸುವನು.
ಒಂದು ವೃಕ್ಷದ ಬೇರಿಗೆ ನೀರು ಹಾಕಿದರೆ ಅದರ ಎಲ್ಲ ಟೊಂಗೆಗಳು ಫಲ ಪುಷ್ಪ ಪತ್ರದಿಂದ ಸಮೃದ್ಧವಾಗಿ ನಿಂತು ನಿಸ್ವಾರ್ಥದಿಂದ ಪಶು ಪಕ್ಷಿ ಮಾನವ ಮೊದಲಾದ ಎಲ್ಲ ಜೀವಿಗಳಿಗೂ ಸಹಾಯ ಮಾಡುತ್ತವೆ.ಪರಮಾತ್ಮನು ಒಬ್ಬನೇ ಅನೇಕ ಕಾರ್ಯಗಳನ್ನು ಏಕ ಕಾಲಕ್ಕೆ ಯಾರಿಗೂ ತಿಳಿಯದಂತೆ ಅಗೋಚರನಾಗಿ ಮಾಡುವನು.ಕಲ್ಪನೆಗೂ ಅಸಾಧ್ಯವಾದ ಚಿತ್ರ ವಿಚಿತ್ರ ಹರಿಯ ಅದ್ಭುತ ಮಹಮೆಯು. ಅದರಂತೆ ಪರಮಾತ್ಮನ ಅಕ್ಷರನಾಮಗಳ ಮಹಿಯು ಕಣ್ಣಿಗೆ ಕಾಣದಂತೆ ಅನುಗ್ರಹ ಫಲ ಕೊಡುತ್ತವೆ. ಹಸು ತಾನು ಹುಲ್ಲನ್ನು ತಿಂದು ಪರರಿಗೆ ಹಾಲನ್ನು ಕೊಡುವದು. ಇದು ಕೂಡ ನಿಸ್ವಾರ್ಥ ಸೇವೆ ಅಲ್ವಾ?ಆ ಹಾಲಿನಲ್ಲಿ “ವಿಶದ”ಎಂಬ ರಸವತ್ತಾದ ಗುಣವಿರುವದು ಇದು ಭಕ್ತಿ ಜ್ಞಾನ ತುಂಬಿದ ದಾಸತ್ವದ ಗುಣ ಹೊಂದಿರುವದು. ಕಣ್ಣಿಗೆ ಕಾಣದಂತೆ ಹಾಲಿನಲ್ಲಿ ಮೊಸರು, ಬೆಣ್ಣೆ ತುಪ್ಪ ಎಲ್ಲವೂ ಅಡಗಿವೆ.ಅದನ್ನು ತತ್ವ ಬದ್ಧವಾಗಿ ಕ್ರಿಯಾನುಕ್ರಮಣಿಕವಾಗಿ ಮಾಡಿದರೆ ಸಿಗುವುದು.ಇದರಲ್ಲಿ ಪರಮಾತ್ಮನ ಕರುಣೆಯನ್ನು ಸನ್ನಿಧಾನವನ್ನು ಯೋಚಿಸದೆ ಉಪಯೋಗಿಸುತ್ತೇವೆ.ಬೆಣ್ಣೆಯಲ್ಲಿ ವಾಯುದೇವರ ಸನ್ನಿಧಾನ ಇರುವದು. ಅದಕ್ಕೆ ಬೆಣ್ಣಿಗೆ ನವನೀತ ಎನ್ನುವರು.ದ್ವಾಪರಯುಗದಲ್ಲಿ ಕೃಷ್ಣನಿಗೆ ನವನೀತ ಚೋರ ಎನಿಸಿರುವನು. ಗೋಪಿಯರ ಮನೆಯಲ್ಲಿ ನವನೀತ ಚೋರನಾಗಿದ್ದನು. ನವನೀತ ಎಂದರೆ ಭಕ್ತಿ ಕಾರಣ ಕಲಿಯುಗದಲಿ ಭಕ್ತಿಯನ್ನು ಮಾತ್ರ ಸ್ವೀಕಾರ ಮಾಡುವನು.
ದಾಸ ಸಾಹಿತ್ಯವು ಧನ ಶ್ರೀ ಮಂತಿಕೆಯಿದ್ದರೂ ಇರದಿದ್ದರೂ ತತ್ವ ಶ್ರೀಮಂತಿಕೆಯಿಂದ ಬುದ್ಧಿ ವಿಕಾಸಕ್ಕೆ ಕಾರಣವಾಗುವ ಅಪೂರ್ವತೆ ಮಾಡಿಕೊಡುವುದು.ಹಾಗೂಧನಕ್ಕಾಗಿ, ಮಾಡುವ ಪ್ರಯತ್ನವನ್ನು ಕೂಡ ಸಾಧನಕ್ಕಾಗಿ ಕಳಿಸುವ ಮಾರ್ಗವನ್ನು ತೋರಿಸಿ ಜೀವನವನ್ನು ಸಾರ್ಥಕಗೊಳಿಸುವದು. ದೈವ ಭಕ್ತಿಯ ಗುಂಗಿನಲ್ಲಿ ಸಮಾಜವಿಮುಖರಾದವರನ್ನು ಸಮಾಜಮುಖರನ್ನಾಗಿ ಮಾಡುವುದು.ಲೌಕಿಕ ಸೆಳೆತದಿಂದ ದೈವವಿಮುಖರಾದವರನ್ನು ದೈವಸುಮುಖರನ್ನಾಗಿ ಮಾಡುವುದು.ಲಕ್ಷ್ಮೀ ಎಂದರೆ ಧನ ಸಂಪತ್ತು ಒಂದೇ ಅಲ್ಲ ಧನ ಬರಬೇಕಾದರೂ ಜ್ಞಾನ ರೂಪವಾಗಿ ಇರಬೇಕು.ಇದು ವಿಷ್ಣು ಸಹಸ್ರನಾಮದಲ್ಲಿ ಬಂದ ಶ್ರೀ ವತ್ಸವಕ್ಷ: ಶ್ರೀವಾಸ: ಶ್ರೀ ಪತಿ: ಶ್ರೀಮತಾಂ ವರ: ಲಕ್ಷ್ಮೀ ವಾಯುದೇವರ ಕರುಣೆಯ ಚಿಹ್ನೆಯನ್ನು ವಕ್ಷಸ್ಥಳದಲ್ಲಿ ಧರಿಸಿದ ಜ್ಞಾನ ಸ್ವರೂಪನು.ಲಕ್ಷ್ಮೀಯವಾಸಸ್ಥಾನ ಆಗಿರುವನು.ಲಕ್ಷ್ಮೀಪತಿ ಎನಿಸಿರುವನು ಋಗ್ ಋಜು ಸಾಮರೂಪವಾದ ಶ್ರೀ ಸಂಪತ್ತು ಇರುವ ಬ್ರಹ್ಮ ವಾಯು ಮೊದಲಾದ ಶ್ರೀ ಸಂಪನ್ನರಲ್ಲೆಲ್ಲ ವಿಷ್ಣು ಪ್ರಧಾನನು ಅವನಿಗೆ ಸರಿಸಮಾನರು ಯಾರೂ ಇಲ್ಲ ಸರ್ವರೊಳಗೆ ಉತ್ತಮನು.ಅದ್ಭುತ ಮಹಿಮೆಯುಳ್ಳ ಶ್ರೀ ಹರಿಯ ಕಥೆಯನ್ನು ಭಕ್ತಿಯಿಂದ ಶ್ರವಣ ಮನನ ಮಾಡುತ್ತಿದ್ದರೆ ಪರಮಾತ್ಮನು ಶ್ರೀ ಸಂಪನ್ನ ಜ್ಞಾನವನ್ನು ಕೊಟ್ಟು ಭಕ್ತರನ್ನಾಗಿ ಸ್ವೀಕರಿಸುತ್ತಾನೆ.
ಒಂದು ಮಾತಂತೂ ನಿಜ.ಮಾನವರ ಅಸ್ತಿತ್ವವು ಸಾವಿನಲ್ಲೆ ಇರುವುದು.ಆತ್ಮಕ್ಕೆ ಅಂಟಿದ ಕರ್ಮ ಜನ್ಮಾಂತರಕ್ಕೆ ಅನುಭವಿಸಲೇಬೇಕು.ಆದರೆ ಪರಮಾತ್ಮನ ಅಸ್ತಿತ್ವವು ಅಪರಿಮಿತ. ಶಾಶ್ವತ ಕೊನೆ ಮೊದಲು ಇಲ್ಲದ ನಿರಂತರ ವಿಶಾಲವಾದ ವ್ಯಾಪ್ತನಾದ ಪರಬ್ರಹ್ಮ ಸ್ವರೂಪ ಪರಮಾತ್ಮ. ಹರಿಕಥಾಮೃತಸಾರವು ದಾಸ ಸಾಹಿತ್ಯದ ಮೇರು ಕೃತಿ.ಇದರಲ್ಲಿ ಅಧ್ಯಾತ್ಮಿಕ ವಿಷಯಗಳ ವಿಶದ ಎಂಬ ರಸವತ್ತಾದ ಗುಣ ಇರುವುದು. ಕೃತಿಯಲ್ಲಿ ಬರುವ ಕೆಲವು ವಿಷಯಗಳನ್ನು ಮಾತ್ರ ಶ್ರೀ ಹರಿಯು ನಿಂತು ಬರಿಯಿಸಿದ ಅಕ್ಷರಗಳನ್ನು ದಾಸರ ಹಾಗೂ ಗುರು ಹಿರಿಯರ ಅನುಗ್ರಹದಿಂದ ಈ ಎಲ್ಲ ಅಕ್ಷರ ಸಮೂಹಗಳನ್ನು ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ಪ್ರೀತ್ಯರ್ಥಮ್ ಶ್ರೀ ಕೃಷ್ಣಾರ್ಪಣ ಮಸ್ತು.
ಎಲ್ಲರಿಗೂ ಶ್ರೀಹರಿಯ ಮತ್ತು ಅವನ ಪರಿವಾರದ ಜ್ಞಾನಾನಂದ ಅನುಗ್ರಹ ಸಿಗಲಿ.
ಸರ್ವ ಕಾರ್ಯ ಸಮರ್ಥ ಕ್ಷಮ:
ಸರ್ವ ಧಾರಕ ಲಯದ ಕ್ಷಾಮ:
ಸಮೀಹನ:ಸತ್ಯ ಸಂಕಲ್ಪ ಧರ್ಮ:
ಮನದಿ ನಿಲ್ಲು ನಿನಗೆ ನಮ್ಮ
ಕೃಷ್ಣಾ ಎಲ್ಲೆಲ್ಲೂ ನೀನೆ ತುಂಬಿರುವಿ
ವಿಷ್ಣು ನೀ ವೈಕುಂಠದಲ್ಲಿರುವಿ
ಜಿಷ್ಣು ನೀ ಪ್ರಕೃತಿಯಲ್ಲಿರುವಿ
ಸಹಿಷ್ಣುವೆ ಮನದಿ ಏಕೆ ನಿಲ್ಲದಿರುವಿ
ಕೃಷಿ ಸಿರಿಯಲಿ ನೀನೆ ತುಂಬಿರುವಿ
ಖುಷಿ ಪರಿಯಲಿ ನೀ ಕಾಣದಿರುವಿ
ಋಷಿ ಮುನಿಗಳಿಗೆ ನೀ ಕಾಣುವಿ
ಮನ್ನಿಸು ನೀನೆ ಸರ್ವ ಗತಿಯಿರುವಿ
ಮಾತರಿಶ್ವಾಂತರ್ಗತ ಶ್ರೀಹರಿ
ಇಂತು ಮನದಲಿ ತುಂಬಿ ಹರಿ
ಅಂತಕಂತ ಚಿಂತನೆಯ ಸಿರಿ
ಇನಿತು ನಾ ಕೇಳುವೆ ನರಹರಿ
ಮಂಗಲಂ
ಮೀನಾತ್ಮನಾಗಿ ದೀನಾತ್ಮ ಜನಗಳಿಗೆ
ಜ್ಞಾನಾರ್ಥ ನೀಡಿರುವ ಪರಮಾತ್ಮಗೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ
ಕೂರ್ಮಾತ್ಮನಾಗಿ ಜಯಸಿದ ದಿವಿಜರಿಗೆ
ಪವಿತ್ರಾತ್ಮ ಎನಿಸಿದ ಪರಮಾತ್ಮಗೆ
ವರಹಾತ್ಮನಾಗಿ ಭೂಮಿಯ ಪಾಲಿಸಿದ
ಪೂತಾತ್ಮ ಎನಿಸಿದ ಪರಮಾತ್ಮಗೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ
ನರಮೃಗಾತ್ಮನಾಗಿ ಭಕ್ತಿ ಛಲಕೆ
ಕರುಣಾತ್ಮ ಎನಿಸಿದ ಪರಮಾತ್ಮಗೆ
ವಾಮನಾತ್ಮನಾಗಿ ಅಹಂ ಇಳಿಸಿದ
ಧರ್ಮಾತ್ಮ ಎನಿಸಿದ ಪರಮಾತ್ಮಗೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ
ಪರುಶುರಾಮಾತ್ಮನಾಗಿ ಕೋಪದ ಬಲಿಗೆ
ಸತ್ಯಾತ್ಮ ಎನಿಸಿದ ಪರಮಾತ್ಮಗೆ
ರಾಮಾತ್ಮನಾಗಿ ಆದರ್ಶ ತೋರಿದ
ಅಂತರಾತ್ಮ ಎನಿಸಿದ ಪರಮಾತ್ಮಗೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ
ಕೃಷ್ಣಾತ್ಮನಾಗಿ ಪರಮಾತ್ಮ ತೋರಿದ
ವೇದಾತ್ಮ ಎನಿಸಿದ ಪರಮಾತ್ಮಗೆ
ಮಾತರಿಶ್ವಾಂತರ್ಗತ ಶ್ರೀಹರಿ ಬುದ್ಧಗೆ
ಅಂತರಂಗದಿ ನಿಂತ ಕಲ್ಕಿ ಅವತಾರಗೆ
ಜಯ ಮಂಗಳಂ ನಿತ್ಯ ಶುಭ ಮಂಗಳಂ
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಹರಿ ಕಥಾಮೃತಸಾರ (ಭಾಗ – ೧)
- ಹರಿ ಕಥಾಮೃತಸಾರ (ಭಾಗ – ೨)
- ಹರಿ ಕಥಾಮೃತಸಾರ (ಭಾಗ – ೩)
- ಹರಿ ಕಥಾಮೃತಸಾರ (ಭಾಗ – ೪)
- ಹರಿ ಕಥಾಮೃತಸಾರ (ಭಾಗ – ೫)
- ಹರಿ ಕಥಾಮೃತಸಾರ (ಭಾಗ – ೬)
- ಹರಿ ಕಥಾಮೃತಸಾರ (ಭಾಗ – ೭)
- ಹರಿ ಕಥಾಮೃತಸಾರ (ಭಾಗ – ೮)
- ಹರಿ ಕಥಾಮೃತಸಾರ (ಭಾಗ – ೯)
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
