ದುರ್ಗಾಸ್ತಮಾನದ ಬೆಳಕಿನ ಗರಿ ತ.ರಾ.ಸು ಕೃತಿಗಳು

ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಕಾಶಮಾನವಾಗಿ ಬೆಳಗಬೇಕಾದ ಹೆಸರು ಬರೆದಂತೆ ಬದುಕಿದವರು, ಬರೆಯುತ್ತಾ ಬದುಕಿದವರು, ಕನ್ನಡಕ್ಕೆ ಜ್ಯೋತಿ ಬೆಳಗಲು ಬದುಕಿದವರು ತ.ರಾ.ಸು. ಅವರು. ಅವರ ಕೃತಿಗಳ ಕುರಿತು ಶಿವಕುಮಾರ ಎಂ ಹೊಸಹಳ್ಳಿ ಅವರ ಒಂದು ಪುಟ್ಟ ವಿಹಂಗಮ ನೋಟ, ತಪ್ಪದೆ ಪೂರ್ತಿಯಾಗಿ ಓದಿ… 

ನಾಲ್ಕು ವರ್ಷಗಳ ಹಿಂದೆ ‘ದುರ್ಗಾಸ್ತಮಾನ’ ಕಾದಂಬರಿ ಓದಿದಾಗ ನನಗೆ ಸಾಹಿತ್ಯದಲ್ಲಿ ಹೊಸದೊಂದು ಬೆಳಕು ಕಂಡಂತಾಯಿತು. ಕಾದಂಬರಿ ಓದಿ ಮುಗಿಸಿದ ಕೂಡಲೇ ಚಿತ್ರದುರ್ಗದ ಏಳುಸುತ್ತಿನ ಕೋಟೆಯನ್ನು ನೋಡಬೇಕೆಂಬ ಬಯಕೆ ಹುಟ್ಟಿತು. ಹೆಚ್ಚು ದಿನ ಕಾಯಲಿಲ್ಲ. ವಾರದೊಳಗೇ ಎನ್.ಸಿ. ಮಹೇಶ್ ಸರ್ ಅವರೊಂದಿಗೆ ಕೋಟೆ ನೋಡಲು ಹೊರಟೆ. ಮಹೇಶ್ ಸರ್ ನನಗೆ ಕೋಟೆಯ ಗೈಡ್ ಆಗಿದ್ದು, ಖುಷಿಯನ್ನು ಇನ್ನಷ್ಟು ಹೆಚ್ಚಿಸಿತ್ತು.

ಈಗ ಮತ್ತೆ ಕೋಟೆ ನೋಡಬೇಕೆಂಬ ಮನಸ್ಸಾಗಿದೆ. ಈ ಬಾರಿಯ ಆಲೋಚನೆಗೆ ದುರ್ಗಾಸ್ತಮಾನ ಮಾತ್ರ ಕಾರಣವಲ್ಲ. ಅದರಾಚೆಗೂ, ಚಿತ್ರದುರ್ಗದ ಪಾಳೆಯಗಾರರ ಬದುಕು ಮತ್ತು ಇತಿಹಾಸವನ್ನು ಕಟ್ಟಿಕೊಡುವ ತ.ರಾ.ಸು. ಅವರ ಏಳು ಸಮಗ್ರ ಕಾದಂಬರಿಗಳಿವೆ.

ಈ ಏಳು ಕಾದಂಬರಿಗಳನ್ನು ಓದಬೇಕೆಂಬ ಆಸೆ ಕಳೆದ ನಾಲ್ಕು ವರ್ಷಗಳಿಂದಲೂ ಇತ್ತು. ಆದರೆ ಅದೇನೋ ಅಡತಡೆ. ಸಂದರ್ಭ ಒದಗಲಿಲ್ಲವೋ, ಓದುವುದಕ್ಕೆ ಬೇಕಾದ ತಪೋಬಲದ ಶಿಸ್ತು ನನ್ನಲ್ಲಿ ಮೂಡಲಿಲ್ಲವೋ ತಿಳಿಯದು. ಓದಬೇಕು ಎನ್ನುವ ಆಸೆ ಮಾತ್ರ ಉಳಿದಿತ್ತು. ಮೊನ್ನೆ ಆಗಸ್ಟ್ ತಿಂಗಳ ಮೂರನೇ ವಾರದಲ್ಲಿ ಸಾಹಿತ್ಯ ಅಕಾಡೆಮಿಯಲ್ಲಿ ಪುಸ್ತಕಗಳು ಶೇಕಡ 50 ರಷ್ಟು ರಿಯಾಯಿತಿಯಲ್ಲಿ ಸಿಗುತ್ತವೆ ಎಂದು ತಿಳಿಯಿತು. ಮರುದಿನವೇ ಕಲಾಗ್ರಾಮಕ್ಕೆ ತೆರಳಿ, ಏಳು ಕಾದಂಬರಿಗಳನ್ನು ಒಳಗೊಂಡ ಎರಡು ಸಂಪುಟಗಳನ್ನು ಖರೀದಿಸಿದೆ. ಅಂದಿನಿಂದ ಓದು ಶುರುವಾಯಿತು.

ಓದು ಅನ್ನುವುದು ತೋರ್ಪಡಿಕೆಯಲ್ಲ, ಅದನ್ನು ಕೆಲವರು ಚಟ ಎನ್ನುತ್ತಾರೆ. ಕೆಲವರು ಶಿಸ್ತು ಎನ್ನುತ್ತಾರೆ, ಇನ್ನೂ ಕೆಲವರಿಗೆ ಅದು ಅಭ್ಯಾಸ, ಹವ್ಯಾಸ. ಹೆಸರೇನೇ ಇರಲಿ, ಓದುವ ಮನಸ್ಸು ಇರಬೇಕು. ಹಾಗೆ ಓದಬೇಕು ಎಂಬ ಮನಸ್ಸಿನಿಂದಲೇ ಈ ಏಳು ಕಾದಂಬರಿಗಳನ್ನು ಓದಿ ಮುಗಿಸಿದೆ.

ತ.ರಾ.ಸು. ಅವರ ಬರಹದ ವೈಶಿಷ್ಟ್ಯವೇ ಬೇರೆ. ಅವರು ಇತಿಹಾಸವನ್ನು ಕೇವಲ ಹೇಳುವುದಿಲ್ಲ, ಕಣ್ಣಿಗೆ ಕಟ್ಟುತ್ತಾರೆ. ವೈಭವದ ದೃಶ್ಯಗಳನ್ನು ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುತ್ತಾರೆ. ಪಾತ್ರಗಳು ಕೇವಲ ಕಾದಂಬರಿಯ ಪುಟಗಳಲ್ಲಿರುವ ವ್ಯಕ್ತಿಗಳಾಗಿ ಉಳಿಯುವುದಿಲ್ಲ. ಅವರ ಆಸೆ, ಆತಂಕ, ದ್ವೇಷ, ಪ್ರೀತಿ, ಅಧಿಕಾರದ ಹಂಬಲ, ಬದುಕಿನ ಹೋರಾಟ ಎಲ್ಲವೂ ನಮ್ಮ ಸುತ್ತಲಿನ ಬದುಕಿನ ಭಾಗಗಳಂತೆಯೇ ಕಾಣಿಸುತ್ತವೆ.

ಚಿತ್ರದುರ್ಗದ ಪಾಳೆಯಗಾರರ ಕುರಿತು ಬರೆಯುತ್ತಿದ್ದ ಸಂದರ್ಭದಲ್ಲಿ ಯಾರೋ ತ.ರಾ.ಸು. ಅವರಿಗೆ, “ಇತಿಹಾಸದ ವೈಭವದಲ್ಲಿ ವಾಸ್ತವ ಬದುಕನ್ನು ಮರೆತಿದ್ದಾರೆ” ಎಂದು ಹೇಳಿದ್ದರಂತೆ. ಹಾಗೆ ಹೇಳುವವರಿಗೆ ಬಹುಶಃ ಒಂದು ಸಂಗತಿ ಅರ್ಥವಾಗಿರಲಿಲ್ಲ. ಇತಿಹಾಸವೆನ್ನುವುದು ನಮ್ಮ ವಾಸ್ತವ ಬದುಕಿನಿಂದ ಬೇರ್ಪಟ್ಟದ್ದಲ್ಲ. ಇಂದಿನ ನಮ್ಮ ಬದುಕಿನ ಬೇರುಗಳೇ ನಿನ್ನೆಗಿನ ಇತಿಹಾಸದಲ್ಲಿ ಇವೆ.

ತ.ರಾ.ಸು. ಅವರ ಪಾಳೆಯಗಾರರ ಕಾದಂಬರಿಗಳನ್ನು ಓದುತ್ತಿದ್ದಂತೆ ಈ ಸಂಗತಿ ಮತ್ತೆ ಮತ್ತೆ ಅನುಭವಕ್ಕೆ ಬರುತ್ತದೆ. ಅಲ್ಲಿ ಕಾಣಿಸಿಕೊಳ್ಳುವ ಮನುಷ್ಯರೊಳಗೆ ನಮ್ಮದೇ ಪೂರ್ವಾಗ್ರಹಗಳು ಕಾಣಿಸುತ್ತವೆ, ಅವರ ಬೇಡಿಕೆ-ಬಯಕೆಗಳಲ್ಲಿ ನಮ್ಮದೇ ಆಸೆಗಳು ಕಾಣಿಸುತ್ತವೆ. ಅವರ ಅಧಿಕಾರದ ಹಂಬಲದಲ್ಲಿ ಇಂದಿನ ಮನುಷ್ಯನ ಮುಖವೂ ಕಾಣಿಸುತ್ತದೆ.
ಇತಿಹಾಸವನ್ನು ವರ್ತಮಾನದೊಂದಿಗೆ ಹೀಗೆ ಬೆಸೆದು, ಓದುಗನನ್ನು ಅದರೊಳಗೆ ಎಳೆದುಕೊಂಡು ಹೋಗುವ ರಚನಾ ಕೌಶಲ್ಯ ತ.ರಾ.ಸು. ಅವರಿಗೆ ಸಿದ್ಧಿಸಿತ್ತು. ಅದಕ್ಕಾಗಿಯೇ ಅವರ ಕಾದಂಬರಿಗಳು ಕೇವಲ ಇತಿಹಾಸದ ಕತೆಗಳಾಗಿ ಉಳಿಯುವುದಿಲ್ಲ. ಅವು ಮನುಷ್ಯರ ಬದುಕಿನ ಕತೆಗಳಾಗುತ್ತವೆ.

ಇದು ಕನ್ನಡ ಸಾಹಿತ್ಯಕ್ಕೆದುರ್ಗಾಸ್ತಮಾನದ ಬೆಳಕಿನ ಗರಿ ತ.ರಾ.ಸು ಕೃತಿಗಳು. ಕೊಟ್ಟ ಮತ್ತೊಂದು ಬೆಳಕಿನ ಗರಿ. ದುರ್ಗಾಸ್ತಮಾನ ಓದಿದಾಗಲೇ ಒಮ್ಮೆ ಕೋಟೆ ನೋಡಬೇಕೆಂಬ ಮನಸ್ಸಾಗಿತ್ತು. ಈಗ ಅದರ ಜೊತೆಗೆ ಈ ಏಳು ಕಾದಂಬರಿಗಳನ್ನೂ ಓದಿದ ಮೇಲೆ, ಅದೇ ಕೋಟೆಯನ್ನು ಮತ್ತೊಮ್ಮೆ ನೋಡಬೇಕು ಎನ್ನಿಸುತ್ತಿದೆ. ಈಗ ಕೋಟೆಯ ದಾರಿ ಕೇವಲ ದಾರಿಯಾಗಿ ಕಾಣುವುದಿಲ್ಲ. ಮೆಟ್ಟಿಲುಗಳು ಕೇವಲ ಮೆಟ್ಟಿಲುಗಳಾಗಿ ಕಾಣುವುದಿಲ್ಲ. ಬಂಡೆಕಲ್ಲುಗಳು, ಭತೇರಿಗಳು, ಕೋಟೆಯ ತಿರುವುಗಳು ಎಲ್ಲವೂ ಒಂದೊಂದು ಕಥೆಯನ್ನು ಹೇಳುವಂತೆ ಕಾಣುತ್ತವೆ. ತ.ರಾ.ಸು. ಅವರ ಅಕ್ಷರಗಳಲ್ಲಿ ಓದಿದ ದಾರಿಗಳನ್ನು ಈಗ ಕಣ್ಣಾರೆ ಹುಡುಕಬೇಕೆನಿಸುತ್ತದೆ.

ಏಕನಾಥೇಶ್ವರಿ, ಉತ್ಸವಾಂಬೆ, ಗೋಪಾಲಸ್ವಾಮಿ ಹೊಂಡ, ಸಂಪಿಗೆ ಸಿದ್ಧೇಶ್ವರ ದೇವಾಲಯ ಇವೆಲ್ಲವೂ ಈಗ ಕೇವಲ ಕೋಟೆಯೊಳಗಿನ ಸ್ಥಳಗಳಲ್ಲ. ಅವುಗಳ ಹಿಂದೆ ಒಂದು ಕಾಲವಿದೆ, ಒಂದು ಬದುಕಿದೆ, ಒಂದು ಇತಿಹಾಸವಿದೆ. ಆ ಇತಿಹಾಸವನ್ನು ತ.ರಾ.ಸು. ತಮ್ಮ ಕಾದಂಬರಿಗಳ ಮೂಲಕ ನಮ್ಮೊಳಗೆ ಜೀವಂತವಾಗಿಸಿದ್ದಾರೆ. ತ.ರಾ.ಸು. ಅವರನ್ನು ಓದಿದ ಮೇಲೆ ಚಿತ್ರದುರ್ಗದ ಕೋಟೆಯನ್ನು ನೋಡಬೇಕೆಂಬ ಮನಸ್ಸಾಗುವುದು ಸಹಜ. ಏಕೆಂದರೆ ಅವರ ಅಕ್ಷರಗಳು ಕೋಟೆಯನ್ನು ನಮ್ಮ ಕಣ್ಣಿಗೆ ಮಾತ್ರವಲ್ಲ, ನಮ್ಮ ಕಲ್ಪನೆಗೂ ಕಟ್ಟಿಕೊಡುತ್ತವೆ. ಅದಕ್ಕಾಗಿಯೇ ಈಗ ಮತ್ತೆ ಕೋಟೆ ಕರೆಯುತ್ತಿದೆ.

ಈ ಬಾರಿ ಪ್ರವಾಸಿಗನಾಗಿ ಅಲ್ಲ, ತ.ರಾ.ಸು. ಅವರ ಅಕ್ಷರಗಳೊಂದಿಗೆ ಇತಿಹಾಸದೊಳಗೆ ಮತ್ತೊಮ್ಮೆ ನಡೆದುಬರಲು.


  • ಶಿವಕುಮಾರ ಎಂ ಹೊಸಹಳ್ಳಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading