‘ನಾಕೊಂದ್ಲ ನಾಕು’ ಕೃತಿ ಪರಿಚಯ

“ನಾಕೊಂದ್ಲ ನಾಕು” ಇದು ಲೇಖಕಿ, ಕತೆಗಾರ್ತಿ ನಳಿನಿ ಟಿ. ಭೀಮಪ್ಪರವರ ಲಲಿತ ಪ್ರಬಂಧಗಳ ಸಂಗ್ರಹ. ಸಣ್ಣ ಕಥೆಗಳನ್ನು ಬರೆಯುವಲ್ಲಿ ಹೆಸರು ಮಾಡಿರುವ ಇವರು ಲಲಿತಪ್ರಬಂಧಗಳನ್ನು ಬರೆಯುವಲ್ಲೂ ಸಿದ್ಧಹಸ್ತರು. ಈ ಕೃತಿಯ ಕುರಿತು ಲೇಖಕರಾದ ಕಲ್ಪನಾ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ನಾಕೊಂದ್ಲ ನಾಕು
ಲೇಖಕರು : ನಳಿನಿ ಟಿ. ಭೀಮಪ್ಪ
ಬೆಲೆ: 195/-
ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್‌, ಬೆಂಗಳೂರು.

“ನಾಕೊಂದ್ಲ ನಾಕು” ಇದು ಲೇಖಕಿ, ಕತೆಗಾರ್ತಿ ನಳಿನಿ ಟಿ. ಭೀಮಪ್ಪರವರ ಲಲಿತ ಪ್ರಬಂಧಗಳ ಸಂಗ್ರಹ. ಸಣ್ಣ ಕಥೆಗಳನ್ನು ಬರೆಯುವಲ್ಲಿ ಹೆಸರು ಮಾಡಿರುವ ಇವರು ಲಲಿತಪ್ರಬಂಧಗಳನ್ನು ಬರೆಯುವಲ್ಲೂ ಸಿದ್ಧಹಸ್ತರು.

“ನಾಕೊಂದ್ಲನಾಕು” ನಳಿನಿಯವರ ನಾಲ್ಕನೇ ಲಲಿತಪ್ರಬಂಧ ಸಂಕಲನ ಎಂಬುದು ಸಂತಸದ ಸಂಗತಿ. ಇದಕ್ಕೆ ಲೇಖಕಿ ಶ್ರೀಮತಿ ಸುಮಾ ರಮೇಶ್‌ ಅವರ ಮುನ್ನುಡಿಯ ತೋರಣವಿದೆ.
ಕನ್ನಡದಲ್ಲಿ ಈ ಲಲಿತಪ್ರಬಂಧಗಳು ಸಾಹಿತ್ಯದ ಉಳಿದ ಪ್ರಕಾರಗಳಿಗಿಂತ ಭಿನ್ನವಾಗಿರುವುದು ಅವುಗಳಲ್ಲಿ ಉಪಯೋಗಿಸುವ ಭಾಷೆ ಭಾವಗಳ ಲಾಲಿತ್ಯದಿಂದ ಎನ್ನಬಹುದು. ಸತ್ಯ ಸಂಗತಿಗಳನ್ನು ಅಥವಾ ಗಂಭೀರ ವಿಷಯಗಳನ್ನೇ ಹಾಸ್ಯಮಯ ದೃಷ್ಟಿಯಿಂದ ನೋಡುವುದು ಅಥವಾ ಸತ್ಯಕ್ಕೇ ಕಲ್ಪನೆಗಳನ್ನು ಸೇರಿಸಿ ಸತ್ಯವೇ ಎನ್ನುವಂತೆ ಬಿಂಬಿಸಿ ಬರೆಯುವ ಕಲೆ ಎಲ್ಲರಿಗೂ ಸಿದ್ದಿಸುವುದಿಲ್ಲ. ಅವು ದಿನನಿತ್ಯದ ಜೀವನದಲ್ಲಿ ನಮ್ಮ ನಿಮ್ಮೆಲ್ಲರ ನಡುವೆ ಬಂದು ಹೋಗುವ ವಿಷಯಗಳೇ ಆಗಿರುತ್ತವೆ. ಆದರೆ ನಾವು ಅದನ್ನು ತೀರಾ ಗಂಭೀರವಾಗಿ ತೆಗೆದುಕೊಂಡು ಅದು ನಮಗೊಬ್ಬರಿಗೇ ಬಂದ ಸಮಸ್ಯೆ ಎಂಬಂತೆ ವರ್ತಿಸುತ್ತೇವೆ. ತಲೆಯಮೇಲೊಂದು ಭಾರವಾದ ವಸ್ತುವನ್ನು ಇಟ್ಟುಕೊಂಡು ಹೊರಲಾರದೇ ಹೊರುತ್ತಿದ್ದೇವೆ ಎನ್ನುವಂತೆ ಹಲುಬುತ್ತೇವೆ. ಇದನ್ನೇ ನಾವು ಹಾಸ್ಯಮಯವಾಗಿ ತೆಗೆದುಕೊಂಡಾಗ ನಮ್ಮ ವರ್ತನೆಗಳೇ ಬದಲಾಗಿ ಮನಸ್ಸು ತಿಳಿಯಾಗಿರುತ್ತದೆ.

ಲಲಿತ ಪ್ರಬಂಧಗಳು ನಮ್ಮ ಅನುಭವಗಳನ್ನು ಓದುಗರಿಗೆ ನೇರವಾಗಿ ವರದಿ ಮಾಡದೇ ಹಾಸ್ಯಮಯವಾಗಿ ಅಥವಾ ರಸವತ್ತಾಗಿ ಬರೆದು ತನ್ಮೂಲಕ ಸಮಾಜದ ಓರೆಕೋರೆಗಳನ್ನು ಬಿಂಬಿಸುತ್ತವೆ. ಕನ್ನಡದ ಮಹಿಳೆಯರಲ್ಲಿ ಲಲಿತ ಪ್ರಬಂಧಗಳನ್ನು ಬರೆಯುವವರಲ್ಲಿ ತುಂಬಾ ಹೆಸರು ಮಾಡಿದವರು ಹಿರಿಯ ಲೇಖಕಿ ಭುವನೇಶ್ವರಿ ಹೆಗಡೆಯವರು. ಭಾಗೀರಥಿ ಹೆಗಡೆ, ಮಾಲತಿ ಪಟ್ಟಣಶಟ್ಟಿ ಮುಂತಾದವರೂ ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುಚಿತ್ರಾ ಹೆಗಡೆ, ಕವಿತಾ ಹೆಗಡೆ ಅಭಯಂ, ಸಹನಾ ಕಾಂತಬೈಲು, ಮಾಲತಿ ಹೆಗಡೆ, ಸುಮಾ ರಮೇಶ್‌ ಮುಂತಾದವರ ಜೊತೆ ನಳಿನಿ ಭೀಮಪ್ಪರವರು ಮುಂಚೂಣಿಯಲ್ಲಿ ಇದ್ದಾರೆ.

ಈ ಸಂಕಲನದಲ್ಲಿ ನಳಿನಿಯವರು ಬರವಣೆಗೆಗೆ ಆಯ್ಕೆ ಮಾಡಿಕೊಂಡ ವಿಷಯಗಳು ನಮ್ಮ ನಿತ್ಯದ ಬದುಕಿನಲ್ಲಿ ನೋಡಿದ ಅನುಭವಿಸಿದ ಘಟನೆಗಳೇ. ಇನ್ನು ಕೆಲವು ನಮ್ಮ ಶರೀರದ ಸೊಂಟ, ಕಿವಿ, ಉಗುರುಗಳಂತಹ ಅಂಗಾಂಗಳು. ಅಯ್ಯ.. ಇದ್ರಲ್ಲಿ ಅಂಥದ್ದೇನಿದೆ!? ಎಂದುಕೊಳ್ಳಬಹುದು. ಈ ಸಾದಾ ಸೀದಾ ಚಿಕ್ಕ ಚಿಕ್ಕ ವಿಷಯಗಳೇ ನಳಿನಿಯವರ ಕೈ ಬರಹದಲ್ಲಿ ವಿಶೇಷವಾಗಿ ಕಾಣಿಸುತ್ತವೆ. ಇವರ ಬರವಣಿಗೆಯ ಚಾಣಾಕ್ಷತನಕ್ಕೆ ನಾವು ತಲೆದೂಗಲೇಬೇಕು. ಗಂಭೀರ ವಿಷಯಗಳೂ ತಿಳಿಯಾದಂತೆ ಭಾಸವಾಗಿ ತುಟಿಗಳು ಬೇಡವೆಂದರೂ ಹೂ ಅರಳಿದಂತೆ ಅರಳುತ್ತವೆ. ಒಬ್ಬರೇ ಕುಳಿತು ಓದುವಾಗಲಂತೂ ಯಾರಾದರೂ ನೋಡಿದರೆ ಅರೆ! ಇಷ್ಟೊತ್ತು ಸರಿಯಾಗಿ ಇದ್ದವಳಿಗೆ ಇದ್ದಕ್ಕಿದ್ದಂತೆ ಏನಾಯ್ತು.. ?ಎಂದು ಅನುಮಾನದಿಂದ ನೋಡಿದರೆ ಆಶ್ಚರ್ಯವಂತೂ ಇಲ್ಲ.

ನಳಿನಿಯವರಿಗೆ ಕಣ್ಣಿಗೆ ಕಂಡದ್ದೆಲ್ಲವೂ ಹಾಸ್ಯವೇ. ಚಿಕ್ಕ ಚಿಕ್ಕ ವಿಷಯಗಳಲ್ಲೂ ಹಾಸ್ಯಮಯ ಸನ್ನಿವೇಷವನ್ನು ಸೃಷ್ಟಿಸುತ್ತಾರೆ. ಇಲ್ಲಿ ಮೊದಲ ಉದಾಹರಣೆಯೇ “ನಿದ್ದೆ ಬಸ್ಸು”. ನಾವು ನೀವು ಬೆಂಗಳೂರಿಗೋ ಇನ್ನೆಲ್ಲಿಗೋ ಹೋಗಿಬರುವ ಸ್ಲೀಪಿಂಗ್‌ ಕೋಚ್‌ ಬಸ್ಸು. ನಮಗೆ ನಿಮಗೆ ಆಗುವ ಅನುಭವವೇ ನಳಿನಿಯವರಿಗೆ ಆಗಿದ್ದು. ಆದರೆ ಅವರ ಬರವಣಿಗೆಯನ್ನು ಓದಿದಾಗ ನಮಗಾಗುವ ಅನುಭವವೇ ಬೇರೆ. ನಮ್ಮ ಬಗ್ಗೆ ಅತಿಯಾಗಿ ಕಾಳಜಿ ಮಾಡುವ ಗಂಡ, ಅಪ್ಪ ಅಮ್ಮಂದಿರು, ಲೈಟ್‌ ಆಫ್‌ ಮಾಡಿದ ಮೇಲೆ ಮಿಣಿ ಮಿಣಿ ಬೆಳಕಿನ ಮೊಬೈಲಿನಲ್ಲಿ ಟೈಂ ಪಾಸ್‌ ಮಾಡುವವರು, ಇನ್ನು ಮಧ್ಯದಲ್ಲಿ ಶೌಚಾಲಯಕ್ಕೆ ಹೋಗುವ ಸಮಸ್ಯೆಗಳು ಇಂಥಹ ಕಿರಿಕಿರಿ ಎನಿಸುವ ಸಮಸ್ಯೆಗಳೆಲ್ಲವೂ ಹಾಸ್ಯವಾಗಿವೆ. ರಾತ್ರಿ ಈ ಬಸ್ಸನ್ನು ಹತ್ತಿದ ಮೇಲೆ ಹಾವು ಡೊಂಬದೊಳಗೆ (ಗುಂದಿನೊಳಗೆ) ಸೇರಿಕೊಂಡಂತೆ. ಸೀಟಿನೊಳಗೆ ಕುಳಿತು ಕರ್ಟನ್‌ ಎಳೆದರೆ ಮುಗಿಯಿತು ಕಿಷ್ಕಿಂದೆಯೇ… ಬಹುತೇಕರು ಬೀಚಿನಲ್ಲಿ ಸನ್ಬಾತ್‌ ಗಾಗಿ ಒರಗು ಕುರ್ಚಿಯಲ್ಲಿ ಕುಳಿತಂತೆ ಕುಳಿತುಕೊಳ್ಳುವುದು.. ಇವೆಲ್ಲ ಹೋಲಿಕೆಯನ್ನು ಓದಿದಾಗ ಎಂಥಹ ಗಂಭೀರವದನನಿಗೂ ನಗು ಬಾರದೇ ಇರದು.

ʻಚಲ್ಲಣದ ತಲ್ಲಣಗಳುʼ ಪ್ರಬಂಧದಲ್ಲಿ ಹಿಂದೆಲ್ಲ ದರಿದ್ರ ಎಂದು ಕರಯಲ್ಪಟ್ಟ ಹರಿದ ಅಂಗಿ ಪ್ಯಾಂಟುಗಳು ಈಗಿನ ಹುಡುಗ ಹುಡುಗಿಯರ ಫ್ಯಾಷನ್‌ ಆಗಿ ಬದಲಾದ ಬಗೆಯನ್ನು ಹೇಳುವಾಗ ಬಟ್ಟೆಯ ಇತಿಹಾಸವನ್ನೇ ಸಾರುತ್ತವೆ.

“ತೊಳೆಯಿರಿ ತೊಳೆಯಿರಿ” ಪ್ರಬಂಧದಲ್ಲಂತೂ ಬಟ್ಟೆ ಒಗೆಯುವ ಕೆಲಸದ ಬಗ್ಗೆ ತುಂಬಾ ಅಂದವಾಗಿ ವರ್ಣಿಸಿದ್ದಾರೆ. ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಮನೆ ಸ್ವಚ್ಛ ಮಾಡುವುದು ಈ ಕೆಲಸಗಳ ಬಗ್ಗೆ ಮಹಿಳೆಯಿಗಿಂತ ಜಾಸ್ತಿಯಾಗಿ ಇನ್ಯಾರೂ ಹೇಳುವುದಕ್ಕೆ ಸಾಧ್ಯವಿಲ್ಲ. ಆದಿವಾಸಿಗಳ ಕಾಲದಲ್ಲೇ ಹೆಣ್ಣುಮಕ್ಕಳು ಆರಾಮವಾಗಿದ್ರು. ದಿನಕ್ಕೆ ಮೂರು ಹೊತ್ತು ಇಪ್ಪತ್ತಾರು ತರಹದ ಅಡುಗೆ ಗಿಡುಗೆ ಮಾಡೋ ಜಂಜಾಟವಿರಲಿಲ್ಲ. ಸಿಕ್ಕ ಸಿಕ್ಕ ಗಡ್ಡೆ ಗೆಣಸು ನಾರು ಬೇರು ತಿಂದು ಬದುಕಿದ್ದರು. ಬಟ್ಟೆ ತೊಳೆಯುವ ಕೆಲಸವೂ ಇರಲಿಲ್ಲ. ಸೊಪ್ಪು, ಎಲೆಗಳನ್ನೇ ಸುತ್ತಿಕೊಳ್ಳುತ್ತಿದ್ದರು ಎನ್ನುವಾಗ ಅಂದಿನ ಬದುಕಿಗೂ ಬದಲಾದ ಇಂದಿನ ಜೀವನ ಶೈಲಿಗೂ ಅಜಗಜಾಂತರ ವ್ಯತ್ಯಾಸವನ್ನು ಕಾಣುತ್ತೇವೆ. ಈ ಬಟ್ಟೆಯೂ ಯೂಸ್‌ ಆಂಡ ತ್ರೋ ಇದ್ದರೆ..!! ಎಂದು ಹೇಳುವಾಗ ಯಾರಿಗಾದರೂ ಒಮ್ಮೆ ನಗು ಬರಲೇ ಬೇಕು. ಇದು ವಾಸ್ತವ ಕೂಡ. ನಾವು ಮಾಡುವ ಅಜಾಗರೂಕತೆಯನ್ನು ಹೇಳುವ ಡೀ..ಡೀ..ಡಿಕ್ಕಿ, ತುರಿಕೆಯಲ್ಲಿ ಇರೋ ಸುಖ, ಇಂಥವುಗಳ ಜೊತೆ ನಿಂಬೆ, ಟೊಮೇಟೋದಂತಹ ತರಕಾರಿಗಳು, ಪೋಟೋ ಶೂಟ್‌, ನಾಣ್ಯಗಳು, ಪಾರ್ಕಿಂಗ್‌, ಗುಂಡುಪ್ರಿಯರು, ಇಂಡಿಯನ್ನಾ ವೆಸ್ಟರ್ನಾ, ಮದುವೆಗಳು, ಸೀರೆ ವಿಲೇವಾರಿ, ಎಲ್ಲವೂ ನಿತ್ಯದ ಪರಿಪಾಟಲುಗಳೇ ಆದರೂ ಉತ್ತರಕರ್ನಾಟಕದ ಭಾಷೆಯ ಶೈಲಿಯಲ್ಲಿ ಬರೆದಿದ್ದು ಇದರ ಅಂದವನ್ನು ಮತ್ತಷ್ಟು ಇಮ್ಮಡಿಸಿವೆ. ಇನ್ನು ಪ್ರೀತಿ ವಿಶ್ವಾಸ, ಒಗ್ಗಟ್ಟು ಸಹಾಯ ಸಹಕಾರಗಳಂತಹ ಗುಣಗಳನ್ನು ಸಾರುವ ಕೌಟುಂಬಿಕ ಸಂಬಂಧಗಳು ಹಿಂದೆ ಹೇಗಿದ್ದವು ಇಂದು ಹೇಗಿದೆ ಎಂದು ಬಿಂಬಿಸುವ “ಅಮ್ಮಾ ..ಯಾರೋ ಬಂದ್ರು!!” ಪ್ರಬಂಧವಂತೂ ಅದ್ಬುತವಾಗಿ ಮೂಡಿಬಂದಿದೆ. ಇಂಥಹ ಗಂಭೀರ ವಿಷಯವನ್ನೂ ಹಾಸ್ಯಮಯವಾಗಿ ಚಿತ್ರಿಸುವಲ್ಲಿ ಲೇಖಕಿಯ ಬುದಿವಂತಿಕೆ ಅಚ್ಚುಕಟ್ಟುತನವನ್ನು ಕಾಣಬಹುದು. ಇನ್ನು ಸಂಕಲನದ ಶೀರ್ಷಿಕೆಯಾದ ʻನಾಕೊಂದ್ಲ ನಾಕುʼ ಪ್ರಬಂಧದಲ್ಲಂತೂ ನಾಲ್ಕು ಎನ್ನುವ ಶಬ್ದ ನಮಗೆ ಅರಿವಿಲ್ಲದೇ ಯಾವ ಯಾವ ಸಂದರ್ಭದಲ್ಲಿ ಹೇಗೆಲ್ಲಾ ಬಳಕೆಯಾಗಿರುತ್ತವೆ ಎಂಬುದನ್ನು ಓದಿದಾಗ ಲೇಖಕಿಯ ಸೂಕ್ಷ್ಮತೆ ಎದ್ದು ಕಾಣುತ್ತದೆ. ಇಂಥಹ ಕಲೆ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ.

ಇನ್ನೊಂದು ಅತಿ ಮುಖ್ಯ ಪ್ರಬಂಧ “ಮೊಬೈಲ್‌ ಕೂಸ”ನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದರ ಬಗ್ಗೆ ಹೇಳದೇ ಇದ್ದರೆ ಶೋಭೆ ಎನಿಸದು. ಕಂಕುಳಾಗಿನ ಕೂಸು ಕಾಯುವುದು ಕೈಯ್ಯಾಗಿನ ಮೊಬೈಲ್‌ ಕಾಯುವುದು ಎರಡೂ ಒಂದೇ. ಕೂಸು ಕಳೆದರೂ ಸಿಕ್ಕೀತು.. ಮೊಬೈಲ್‌ ಕಳೆದುಕೊಂಡರೆ ಸಿಗುವ ಅವಕಾಶ ಕಡಿಮೆ ಎನ್ನುವ ಅವರ ಮಾತು ನೂರಕ್ಕೆ ನೂರು ಸತ್ಯ. ನಮ್ಮ ಬದುಕಿನಲ್ಲಿ ಈ ಮೊಬೈಲು ನಮ್ಮ ಮಕ್ಕಳಿಗಿಂತಲೂ ಜಾಸ್ತಿಯೇ ಎನಿಸುವಷ್ಟು ಅವಲಂಬಿತವಾಗಿವೆ. ಮೊಬೈಲ್‌ ಇಲ್ಲದೇ ಬದುಕೇ ಇಲ್ಲ ಎನ್ನುವ ಪರಸ್ಥಿತಿಗೆ ಬಂದು ತಲುಪಿದ್ದೇವೆ. ಇಲ್ಲಿ ನಾವು ಶಿಶು ಮಕ್ಕಳಿಗೆ ಕಾಳಜಿ ಮಾಡಿದಂತೆ ಮೊಬೈಲಿಗೆ ಕಾಳಜಿ ಮಾಡುವುದನ್ನು ಲೇಖಕಿ ಎಷ್ಟು ಚೆಂದವಾಗಿ ವರ್ಣಿಸಿದ್ದಾರೆ. ಹೊತ್ತು ಹೊತ್ತಿಗೆ ಕೂಸಿಗೆ ತಿನ್ನಿಸುವಂತೆ ಮೊಬೈಲಿಗೆ ಚಾರ್ಜ ಮಾಡುವುದು, ಕೂಸಿನ ತಲೆಗೆ ಸದಾ ಕುಂಚಿಗೆ, ಮೈಗೆ ಬೆಚ್ಚನೆಯ ಸ್ವೇಟರ್‌ ಹಾಕುವ ಹಾಗೆ ಮುಂದೆ ಸ್ಕ್ರೀನ್ಗಾರ್ಡ, ಹಿಂಬದಿ ಕವರ್‌ ಹಾಕಿರಲೇಬೇಕು. ಎಲ್ಲಾದರೂ ಹೋಗುವಾಗ ಮಗುವಿಗೆಂದು ಹಾಲು, ನೀರು, ಡೈಪರ್‌ ಟೊಪ್ಪಿ, ಸ್ವೇಟರ್‌ ಅಂಗಿ ಎಂದು ಪ್ಯಾಕ್‌ ಮಾಡಿ ಬ್ಯಾಗ್‌ ತುಬಿಸುವಂತೆ, ಮೊಬೈಲ್‌ ಚಾರ್ಜರ್‌, ಈಯರ್‌ ಪೋನ್‌, ಪವರ್‌ ಬ್ಯಾಂಕ್‌, ಕನೆಕ್ಟಿಂಗ್‌ ವಯರ್‌ ಎಂದು ತುಂಬಿಕೊಳ್ಳಲೇ ಬೇಕು ಎನ್ನುವಾಗ ಈ ಮೊಬೈಲ್‌ ನಮ್ಮ ಕೂಸಿಗಿಂತ ಪುಣ್ಯ ಮಾಡಿದೆ ಎನಿಸದೇ ಇರದು.

ನಳಿನಿಯವರ ಪ್ರಬಂಧಗಳು ಒಂದೇ ದೃಷ್ಟಾಂತದಲ್ಲಿ ಶುರುವಾಗಿ ಅಲ್ಲೇ ಹಿಂದೆ ಮುಂದೆ ಹೋಗಿ ಕೊನೆಗೊಳ್ಳುವುದಿಲ್ಲ. ಬದಲಾಗಿ ಆದಿ ವಾಸಿಗಳಿಂದ ಹಿಡಿದು ಪುರಾಣ ಪುಣ್ಯಕತೆಗಳೂ ಸೇರಿಕೊಂಡು ಆಧುನಿಕ ಯಂತ್ರ ತಂತ್ರ ವ್ಯವಸ್ಥೆ ಅವ್ಯವಸ್ಥೆ ಪರಿಪಾಟಲದವರೆಗೂ ಮುಂದುವರೆಯುತ್ತವೆ. ಇವರು ಪ್ರತೀ ಹಂತದಲ್ಲೂ ಪದಗಳ ಜೊತೆ ಸಾಲುಗಳ ಜೊತೆ ಸರಸವಾಡುವುದು ನಮಗೆ ಕಚಗುಳಿಯಿಟ್ಟಂತಾಗುತ್ತವೆ. ಓದುಗನಿಗೆ ಸ್ವಲ್ಪವೂ ಬೋರ್‌ ಅಂತ ಅನಿಸುವುದೇ ಇಲ್ಲ.

ಇವತ್ತಿನ ದಿವಸ ಎಷ್ಟೋ ಜನರು ತಮ್ಮ ನಿತ್ಯದ ಜೀವನದಲ್ಲಿ ನಗುವುದನ್ನೇ ಮರೆತಿದ್ದಾರೆ. ಅದಕ್ಕೆ ಕಾರಣಗಳು ಏನೇ ಇರಬಹುದು. ಇನ್ನು ಕೆಲವರು ಉದ್ದೇಶಪೂರ್ವಕವಾಗಿ ನಗುವುದಕ್ಕೆಂದೇ ಲಾಫಿಂಗ್‌ ಕ್ಲಾಸುಗಳಿಗೆ ಹೋಗುವವರಿದ್ದಾರೆ. ಇದನ್ನು ಯೋಗದಲ್ಲೂ ಕೂಡ ವ್ಯಾಯಾಮದ ಒಂದು ಬಗೆಯಾಗಿ ಯೋಗಾ ಕ್ಲಾಸುಗಳಲ್ಲೂ ಕಲಿಸುತ್ತಾರೆ. ಬಹುಶ: ಇಂಥಹ ಲಲಿತ ಪ್ರಬಂಧಗಳು, ಹಾಸ್ಯ ಬರಹಗಳನ್ನು ಓದಿದರೆ ಜನರಿಗೆ ಲಾಫಿಂಗ್‌ ಕ್ಲಾಸುಗಳಿಗೆ ಹೋಗುವ ಅವಶ್ಯಕತೆಯೇ ಇರುವುದಿಲ್ಲ.

ನಗು ನಮ್ಮ ದೇಹಕ್ಕೆ ಟಾನಿಕ್‌ ಇದ್ದಂತೆ. ಒಳ್ಳೆಯ ಹಾರ್ಮೋನುಗಳು ಬಿಡುಗಡೆಯಾಗುತ್ತವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ದಿನವೂ ಇಂಥಹ ಒಂದು ಹಾಸ್ಯ ಬರಹ ಓದಿದರೆ ನಮಗೆ ಯಾವ ಕ್ಲಾಸುಗಳೂ ಬೇಡ ಎಂದು ನನ್ನ ಅನಿಸಿಕೆ.

ನಳಿನಿಯವರ ಪುಸ್ತಕದಲ್ಲಿರುವ ಮನಸ್ಸಿಗೆ ಮುದ ಕೊಡುವ ವಿವಿಧ ವಿನೋದಾವಳಿಗಳನ್ನು ಎಲ್ಲರೂ ಓದಿ ಮನಸಾರೆ ಆನಂದಿಸಿ. ಇವರು ಇನ್ನಷ್ಟು ಬರಹಗಳು ಬರೆದು ನಮ್ಮ ನಿಮ್ಮೆಲ್ಲರ ಓದಿಗೆ ದಕ್ಕುವಂತಾಗಲಿ. ಕನ್ನಡ ಸಾರಸ್ವತ ಲೋಕವನ್ನು ಇನ್ನಷ್ಟು ಶ್ರೀಮಂತಗೊಳಿಸಲೆಂದು ಪ್ರೀತಿಯಿಂದ ಹಾರೈಸುತ್ತೇನೆ.


  • ಕಲ್ಪನಾ ಹೆಗಡೆ ಸೋಮನಳ್ಳಿ

Leave a Reply

Home
Search
Menu
Recent
About
×