ಭದ್ರೆಯ ನೀರು ಹರಿದು ಬಂತು, ಬಯಲುಸೀಮೆಗೆ ಗಂಗೆಯಾಯಿತು…ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪುರಸ್ಕೃತ ಟಿ .ಪಿ. ಉಮೇಶ್ ಅವರು ಬರೆದ ಒಂದು ಕವನ ಓದುಗರ ಮುಂದೆ, ತಪ್ಪದೆ ಓದಿ…
ಭದ್ರೆಯ ನೀರು ಹರಿದು ಬಂತು
ಬಯಲುಸೀಮೆಯ ಮಡಿಲಿಗೆ!
ದಶಕಗಳ ಹೋರಾಟದ ಫಲವಾಗಿ
ರೈತರ ಬದುಕಿಗೆ ಹೊಸ ಬೆಳಕಾಗಿ!
ಬಿರುಕು ಬಿಟ್ಟ ಭೂಮಿ ಎದೆಯಲ್ಲಿ
ಹಸಿರಿನ ಹಾಡು ಮೂಡಿತು!
ಬಿಸಿಲ ಬೇಗೆ ಬಯಲಿನ ನಡುವೆ
ಜೀವದ ಜಲಧಿ ಹರಿಯಿತು!
ಒಣಗಿ ಬೆಂದ ಕೆರೆಗಳ ಕಣ್ಗಳಲ್ಲಿ
ನೀರಿನ ಝೇಂಕಾರ ತುಂಬಿತು!
ಬರದ ಉರಿಯಲ್ಲಿ ಬೆಂದ ಮಣ್ಣಿಗೆ
ತಂಪಿನ ಅಪ್ಪುಗೆಯು ಸಿಕ್ಕಿತು!
ಒಣಗಿದ ಹೊಲದ ಒಡಲೊಳಗೀಗ
ಬಿತ್ತನೆಯ ಕನಸುಗಳು ತುಂಬಿದೆ!
ರೈತರ ಮೈಮನಗಳಲ್ಲಿ ಉಳುಮೆಯ
ಹೊಸತು ಭರವಸೆಯ ಹಾಡಿದೆ!
ಸಿರಿಧಾನ್ಯ ಹೊಲಗಳು ನಲಿಯಲಿ
ಜೋಳ ರಾಗಿ ತೆನೆ ತಲೆದೂಗಲಿ!
ಕಾಳಿನ ಕಣಜ ತುಂಬಿ ತುಳುಕಲಿ
ರೈತರ ಮನ ಮನೆ ಹೊನ್ನಾಗಲಿ!
ತಾಯಿಯ ಮಡಿಲಿನ ಮಗುವಂತೆ
ಭೂಮಿಗೆ ನೀರು ಬಂದಿತು!
ಮೃತ್ಯುಮುಖದ ಬದುಕಿನ ನಡುವೆ
ಜೀವ ಜಲಗೀತೆ ಮತ್ತೆ ಹಾಡಿತು!
ಕೆರೆಯ ಕನ್ನಡಿ ಆಕಾಶವ ತೋರಲಿ
ಕೊಳದ ದಡಗಳು ಹಬ್ಬವಾಗಲಿ!
ಬಾವಿಗಳ ತಳದ ಕತ್ತಲೆಯು ಕಳೆದು
ನೀರಿನ ಭೋರ್ಗರೆತ ಮೊಳಗಲಿ!
ನೀರಿನ ಹನಿಯಿದು ಕೇವಲ ನೀರಲ್ಲ
ರೈತರ ದಿನ ಬದುಕಿನ ಉಸಿರು!
ಬಯಲುಸೀಮೆಯ ಮಣ್ಣಿಗೆ ದೊರೆತ
ಭವಿಷ್ಯದ ಹೊಸಹೆಜ್ಜೆ ಗುರುತು!
ಕರುಳಿನ ಕಣ್ಣೀರಿನ ಪ್ರಾರ್ಥನೆ
ಇಂದು ಗೆಲುವಾಗಿ ಮರಳಿದೆ!
ದಶಕಗಳ ಧ್ವನಿ ಒಂದಾಗಿ ಸೇರಿ
ರೈತಗೀತೆಯಾಗಿ ಮೊಳಗಿದೆ!
ಇದು ಕೇವಲ ಕಾಲುವೆಯಲ್ಲ
ಕಾಲವ ಬದಲಿಸುವ ಸಾಕ್ಷಿಯಿದು!
ಇದು ಕೇವಲ ನೀರ ಹರಿವಲ್ಲ
ಸಾವಿರಾರು ಹಳ್ಳಿಗರ ನಾಡಿಯಿದು!
ಭದ್ರೆಯ ನೀರು ಹರಿದು ಬಂತು
ಬಯಲುಸೀಮೆಗೆ ಗಂಗೆಯಾಯಿತು!
ಬರದ ನಾಡ ಮಣ್ಣಿನ ಮಡಿಲಲ್ಲಿ
ಹೊಸಯುಗ ಉದಯವಾಯಿತು!
- ಟಿ.ಪಿ.ಉಮೇಶ್, ಚಿತ್ರದುರ್ಗ.
