ಅಲಾಸ್ಕಾ ಡೈರಿ (ಭಾಗ – ೫)

‘ಬೆಲೂಗ’ ಇದು ರಷಿಯನ್ ಭಾಷೆಯ bylyj ಪದದಿಂದ ಬಂದಿದೆಯಂತೆ. ಅದರ ಅರ್ಥ ‘ಬಿಳಿ’ ಎಂದು. ದೆನಾಲಿಯಿಂದ ಸುಮಾರು ೧೨೦ ಮೈಲಿಗಳ ದೂರದಲ್ಲಿ ಫೇರ್ ಬ್ಯಾಂಕ್ಸ್ ಎನ್ನುವ ಸಣ್ಣ ಪಟ್ಟಣವಿದೆ. ಡಾ. ಗಿರಿಜಾ ಶಾಸ್ತ್ರಿ ಅವರು ಪ್ರವಾಸ ಕಥನದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೆಲೂಗಾ ಪಾಯಿಂಟ್

ಆ್ಯಂಖರೇಜ್ ನಿಂದ ಸೀವಾರ್ಡ್ ಗೆ ಸಾಗುವ ದಾರಿಯಲ್ಲಿ ಸಿಗುವ ಸ್ಥಳವೇ ‘ಬೆಲೂಗಾ’ ಪಾಯಿಂಟ್. ಆ್ಯಂಖರೇಜ್ ನಿಂದ ಸೀವಾರ್ಡ್ ವರೆಗೆ ಹಬ್ಬಿರುವ ಬೆಟ್ಟಗಳಿಗೆ ‘ಚುಗಾಚ್’ ಎಂದು ಹೆಸರು. ಬೆಲೂಗಾ ಇದರ ನಡುವೆ ಬರುತ್ತದೆ. ಅಲಾಸ್ಕಾ ಪ್ರವಾಸದಲ್ಲಿ ನಮಗೆ ಕಂಡದ್ದೆಲ್ಲ ಹೀಗೆ ಒಂದಲ್ಲ ಒಂದು ಪರ್ವತಮಾಲೆಗಳೇ!

‘ಬೆಲೂಗಾ’ ನದಿಯೊಂದರಿಂದ ( Turnagain arm) ಉದ್ಭವವಾಗಿ ಮೇಲೆದ್ದು ಕಾಣುವ ಬಂಡೆಗಳಿಂದ ಕೂಡಿದ ಪ್ರದೇಶ. ‘ಬೆಲೂಗ’ ಇದು ರಷಿಯನ್ ಭಾಷೆಯ bylyj ಪದದಿಂದ ಬಂದಿದೆಯಂತೆ. ಅದರ ಅರ್ಥ ‘ಬಿಳಿ’ ಎಂದು. ನಮ್ಮ ಕನ್ನಡದ ‘ಬಿಳಿ’ ಶಬ್ದಕ್ಕೆ‌ ಎಷ್ಟು ಹತ್ತಿರ! ಎಲ್ಲಿಯ ರಷ್ಯಾ‌ ? ಎಲ್ಲಿಯ ಅಮೇರಿಕಾ? ಎಂದು‌ ಆಶ್ಚರ್ಯವಾಗಬಹುದು. ಅಲಾಸ್ಕಾ ಮೂಲತಃ ರಷ್ಯಾದೇಶದ ಭಾಗವಾಗಿದ್ದು ಆನಂತರ ಅಮೇರಿಕಾ ಅದನ್ನು ಕೊಂಡುಕೊಂಡು ತನ್ನ ಪರಿಧಿಗೆ ಸೇರಿಸಿಕೊಂಡಿತು. ( 1867 ರಲ್ಲಿ 5.7 ಮಿಲಿಯ ಡಾಲರ್) ಹೀಗಾಗಿಯೇ ಬಹುಶಃ ಇರಬಹುದು ಈ ಪ್ರದೇಶದ ಹೆಸರುಗಳು ಇಂಗ್ಲಿಷಿನ ಹೆಸರುಗಳಂತೆ ಇಲ್ಲದಿರುವುದು.

ಇಲ್ಲಿನ ಒಂದು ಜಾತಿಯ ತಿಮಿಂಗಿಲವು (Catecean) ಪ್ರೌಢಾವಸ್ಥೆಗೆ ಬರುವ ಕಾಲಕ್ಕೆ ಸಂಪೂರ್ಣ ಬಿಳಿ ಬಣ್ಣಕ್ಕೆ ತಿರುಗುತ್ತದಂತೆ. ಅಂತಹ ಬಿಳಿ ತಿಮಿಂಗಿಲಗಳು ಇಲ್ಲಿ ವಾಸಿಸುವುದರಿಂದ ಈ ಪ್ರದೇಶಕ್ಕೆ ಆ ಹೆಸರು ಬ‌ಂದಿರಬಹುದು. ಅಡ್ಡಾದಿಡ್ಡಿ ಮೈಬೆಳೆಸಿಕೊಂಡು ಕೊಬ್ಬಿದವರಿಗೂ ‘ಬೆಲೂಗಾ’ಎಂದು ಅಪಹಾಸ್ಯ ಮಾಡುವ ಪರಿಪಾಠವಿದೆಯಂತೆ ಇಲ್ಲಿಯ ಜನರಲ್ಲಿ.
ಜುಲೈ ಮಧ್ಯದಿಂದ ಆಗಸ್ಟ್ ಕೊನೆಯವರೆಗೆ ಇವುಗಳನ್ನು ಕಾಣಲು ಪ್ರಶಸ್ತವಾದ ಸಮಯ. ನಾವು ಆಗಸ್ಟ್ ಕೊನೆಯಲ್ಲೇ ಅಲ್ಲಿ ಹೋಗಿದ್ದರೂ ನಮಗೆ ಬಿಳಿಯ ತಿಮಿಂಗಿಲಗಳಾಗಲೀ ಅದೇ ಕಾಲದಲ್ಲಿ ಕಂಡು ಬರುವ ಕರಡಿಗಳಿಗೆ ಪ್ರಿಯವಾದ ಕೆಂಪು ಮೀನುಗಳಾಗಲೀ ( Salmon) ದರ್ಶನ ಕೊಡಲಿಲ್ಲ.

ಸುಂದರ ಸಂಜೆ, ಸ್ವರ್ಗ ಸದೃಶ ಹಿನ್ನೆಲೆಯಲ್ಲಿ ನಮ್ಮ ನಮ್ಮ ಫೋಟೋ ತೆಗೆಸಿಕೊಂಡು, ನಮ್ಮ ಅಹಮ್ಮಿನ ಬಲೂನನ್ನು ಬಿಳಿತಿಮಿಂಗಿಲಗಳಂತೆ ಊದಿಸಿಕೊಂಡು, ಸೀವಾರ್ಡ್ ಕಡೆಗೆ ಗಾಡಿ ಓಡಿಸಿದೆವು.

ಫೇರ್ ಬ್ಯಾಂಕ್ಸ್ ಮತ್ತು ಅರೋರಾ

ದೆನಾಲಿಯಿಂದ ಸು. ೧೨೦ ಮೈಲಿಗಳ ದೂರದಲ್ಲಿ ಫೇರ್ ಬ್ಯಾಂಕ್ಸ್ ಎನ್ನುವ ಸಣ್ಣ ಪಟ್ಟಣವಿದೆ. ನಾವು ದೆನಾಲಿಯಿಂದ ಗುರುವಾರ ಸಂಜೆ ಹೊರಟು ರಾತ್ರಿಯವೇಳೆಗೆ ಫೇರ್ ಬ್ಯಾಂಕ್ಸ್ ತಲಪಿದೆವು. Northern lights ‘ಅರೋರಾ’ ವನ್ನು ನೋಡಲೆಂದೇ ಇಲ್ಲಿಗೆ ಬಂದೆವು. ಅದಕ್ಕೆಂದೇ ಇಲ್ಲಿ ಗುರುವಾರ ಮತ್ತು ಶುಕ್ರವಾರ ರಾತ್ರಿ ತಂಗಿದ್ದೆವು. ಎತ್ತರದ ಫ್ರದೇಶದಲ್ಲಿ ಒಂದು ವಿಶಾಲವಾದ ಮನೆಯೊಳಗೆ ನಮ್ಮ ವಾಸ್ತವ್ಯ. ಅದರೊಳಗೆ ಹೊಕ್ಕರೆ ಒಂದು ಸ್ಟ್ಯಾಂಡಿನ ಮೇಲೆ ದೊಡ್ಡ ಬೈನಾಕ್ಯುಲರ್ ಇಟ್ಟಿದ್ದರು. ಅದನ್ನು ನೋಡಿಯೇ’ ಓಹ್ ಅರೋರಾ’ ಇನ್ನು ಕಣ್ಣಿಗೆ ಸಿಕ್ಕೇ ಬಿಟ್ಟಿತು ಎನ್ನುವ ಖುಷಿ.

ಅದು ಕಾಣಿಸುವುದು ದಟ್ಟ ಕತ್ತಲು ಕವಿದ ಮೇಲೆ . ರಾತ್ರಿ ಸುಮಾರು ೧೧.೩೦ ಯಿಂದ ಮೂರರವರೆಗೆ. ನಾವಿದ್ದ ಮನೆಗೆ ದೊಡ್ಡ ದೊಡ್ಡ ಗಾಜಿನ ಕಿಟಕಿಗಳು. ಅಲ್ಲಿಂದಲೇ ಅರೋರಾ ನೋಡಬಹುದು ಎಂದು ಬರೆದಿದ್ದರು. ನಾನಂತೂ ಹನ್ನೆರೆಡು ಗಂಟೆಯಿಂದ ಮೂರು ನಾಲ್ಕು ಬಾರಿ ಎದ್ದು ಮನೆಯ ಹಿತ್ತಲಿನ ಕಡೆ ನೋಡುತ್ತಲೇ ಇದ್ದೆ. ಇಲ್ಲ. ನಮ್ಮ ದುರದೃಷ್ಟಕ್ಕೆ ನಾವಿದ್ದ ಎರಡುದಿನವೂ ಮಳೆ ಮೋಡಕವಿದ ವಾತಾವರಣ. ಅರೋರಾ ಕಾಣಿಸಲೇ ಇಲ್ಲ.

ಅರೋರಾ: ಉತ್ತರ ಧ್ರುವದ ಸಮೀಪ ಅಲೆಗಳೋಪಾದಿಯಲ್ಲಿ ಮಿನುಗುತ್ತಾ ನರ್ತಿಸುತ್ತಾ ವಕ್ರಗತಿಯಲ್ಲಿ ಚಲಿಸುವ ಸಹಜವಾದ ಮತ್ತು ವಿಶೇಷವಾಗಿ ಕಂಗೊಳಿಸುವ ಬೆಳಕು.
ಸೂರ್ಯನಿಂದ ಪ್ರವಾಹೋಪಾದಿಯಲ್ಲಿ ನಿರಂತರವಾಗಿ ಕಣಗಳು ಬಿಡುಗಡೆಯಾಗುತ್ತವೆ. ಇದನ್ನು ಸೋಲಾರ್ ವಿಂಡ್ ಎಂದೂ ಕರೆಯುತ್ತಾರೆ. ಭೂಮಿಯ ಮ್ಯಾಗ್ನೆಟಿಕ್ ವಲಯವು ಇವುಗಳನ್ನು ಬಂಧಿಸಿ ಧ್ರುವಗಳ ಕಡೆಗೆ ಸಾಗಲುನಿರ್ದೇಶಿಸುತ್ತದೆ. ಇವು ವಾಯುಮಂಡಲದ ಆಮ್ಲಜನ ಮತ್ತು ನೈಟ್ರೋಜ್ ಗಳೊಡನೆ ಘರ್ಷಿಸಿದಾಗ ಒಂದುರೀತಿಯ ಬೆಳಕನ್ನು ಬಿಡುಗಡೆ ಮಾಡುತ್ತವೆ. ಹೀಗೆ ಸೂರ್ಯನಿಂದ ಬಿಡುಗಡೆಯಾದ ಕಣಗಳು ಭೂಮಿಯ ವಾಯುಮಂಡಲದ ಘರ್ಷಣೆಗೆ ಒಳಗಾದಾಗ ಹುಟ್ಟಿ ಬರುವ ಬೆಳಕೇ ಅರೋರಾ. ಹಸಿರು ಕೆನ್ನೀಲಿ, ಗುಲಾಬಿ, ಮುಂತಾದ ಬಣ್ಣಗಳ ಬೆಳಕಿನ ಟೇಪುಗಳು ಅಲೆ ಅಲೆಯಾಗಿ ಚಲಿಸುತ್ತಾ ಒಂದು ವಿನ್ಯಾಸವನ್ನು ರಚಿಸುತ್ತವೆ. ಇದು ಉತ್ತರ ಧ್ರುವಕ್ಕೆ ಸಮೀಪ ಇರುವ ಪ್ರದೇಶಗಳಲ್ಲಿ ಕಂಡು ಬರುತ್ತದಂತೆ.

 

ಇಂತಹ ಒಂದು ಅದ್ಭುತವನ್ನು ಕಾಣಲು ಆಗಸಕ್ಕೆ ಕಣ್ಣಕೂಡಿಸಿ ಕಾದದ್ದಷ್ಟೇ. ಉತ್ತರದ ಬೆಳಕು ಕಾಣಲೇ ಇಲ್ಲ. ಹ್ಯಾಪ್ ಮೋರೆ ಹಾಕಿಕೊಂಡು ನಾವು, ಮಾರನೆಯ ಬೆಳಿಗ್ಗೆ ರೆಂಟಲ್ ಕಾರನ್ನು ಮರಳಿಸಿ, ಸಿಯಾಟಲ್ ವಿಮಾನ ಏರಿದೆವು.

ಹಿಂದಿನ ಸಂಚಿಕೆಗಳು :


  • ಡಾ. ಗಿರಿಜಾ ಶಾಸ್ತ್ರಿ – ಲೇಖಕರು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading