ಅಲಾಸ್ಕಾ ಡೈರಿ (ಭಾಗ – ೩)

ಅಲಾಸ್ಕಾ ಪರ್ವತ ಶ್ರೇಣಿಗಳಿಂದ ಹಿಮಗಲ್ಲುಗಳು ಕರಗಿ ಹರಿವ ನದಿಯೇ ಸಾವೇಜ್ ನದಿ. ಇದು ದೆನಾಲಿಯ ಬಹು ಮುಖ್ಯವಾದ ವೀಕ್ಷಣಾ ಸ್ಥಳವಾಗಿದೆ. ಈ ಅಲಾಸ್ಕಾ ಅನುಭವದ ಕುರಿತು ಡಾ. ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಸಾವೇಜ್ ನದಿಯ ದಡದಲ್ಲಿ ಸಾವಿನ ಅನುಭವ

ದೆನಾಲಿಯ ಗಡಿಯನ್ನು ಮುಟ್ಟುತ್ತಿದ್ದಂತೆ ನಮಗೆ ಎದುರಾದದ್ದು ಸಾವೇಜ್ ನದಿ. ಇದಕ್ಕೆ ಹಾಗೆ ಹೆಸರು ಯಾಕೆ ಬಂತೋ ತಿಳಿಯದು. ಪಕ್ಕದಲ್ಲೇ ನಿಂತಿದ್ದ ಪರಂಗಿ ಮಹಿಳೆ “ಎಷ್ಟು ಚೆಂದ ಅಲ್ಲವಾ?” ಎಂದು ನದಿಯನ್ನು ತೋರಿಸಿ ಮುಗುಳ್ನಕ್ಕಳು. ಆಗ ಅವಳಿಗೆ ಇದು ‘ಸಾವೇಜ್ ‘ಯಾಕಿರಬಹುದು ಎಂದು ಕೇಳಿದೆ. ವಸಂತ ಕಾಲದಲ್ಲಿ ಇದು ಬಹಳ ಜೋರಾಗಿ ಶಬ್ದಮಾಡುತ್ತಾ ಸೊಕ್ಕಿ ಹರಿಯುವುದಂತೆ. ಅದೇ ಕಾರಣವಿರಬಹುದು ಎಂದಳು. ಈಗಂತೂ ಅದು ಸಣ್ಣಗೆ ಬಾಗಿ ಬಳುಕಿ ಜುಳು ಜುಳು ಶಬ್ದ ಮಾಡುತ್ತಾ ವಯ್ಯಾರದಿಂದ ಹರಿಯುತ್ತಿತ್ತು.

ದೆನಾಲಿಯ ಬಳಿ, ಅಲಾಸ್ಕಾ ಪರ್ವತ ಶ್ರೇಣಿಗಳಿಂದ ಹಿಮಗಲ್ಲುಗಳು ಕರಗಿ ಹರಿವ ಈ ನದಿಯ ಉದ್ದ 27 ಮೈಲಿಗಳು. ಒಂದರೊಳಗೊಂದು ಹೆಣೆದುಕೊಂಡ ಅನೇಕ ಧಾರೆಗಳು ಸಾವೇಜ್ ನದಿಯಾಗಿ ಹರಿಯುವುದರಿಂದ ಇದಕ್ಕೆ ‘braided river’ ಎಂದೂ ಹೆಸರಿದೆ. ನದಿಯ ತೀರದ ಒಂದು ಫಲಕದಲ್ಲಿ ‘braided river ಎಂದೇ ಬರೆದಿದ್ದಾರೆ. ಈ ನದಿಯ ಉದ್ದಕ್ಕೂ ೨ ಮೈಲಿಯ ಒಂದು ಒರಟಾದ ಚಾರಣ ಹಾದಿಯೂ ಉಂಟು. ಮದ್ಯೆ ಒಂದು ಸೇತುವೆ ಕಟ್ಟಿರುವುದರಿಂದ ಚಾರಣಿಗರು ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಿ ನದಿಗೆ ಒಂದು ಪ್ರದಕ್ಷಿಣೆ ಬರಬಹುದು. ಇದು ದೆನಾಲಿಯ ಬಹು ಮುಖ್ಯವಾದ ವೀಕ್ಷಣಾ ಸ್ಥಳ.

ಇಳಿ ಸಂಜೆಯಲ್ಲಿ ಸು. ಏಳೂವರೆ ಗಂಟೆಗೆ (ಇಲ್ಲಿ ಸೂರ್ಯಾಸ್ತ ೯ ಗಂಟೆಗೆ) ನಾವು ಸಾವೇಜ್ ನದಿಯ ತೀರವನ್ನು ತಲಪಿದೆವು. ಮೋಡ ಕವಿದು ಮಳೆ ಹನಿಯುತ್ತಿದ್ದುದರಿಂದ ಕತ್ತಲ ಅನುಭವವಾಗುತಿತ್ತು. ಮಗ ಸೊಸೆ ಇಬ್ಬರೂ ನದಿ ಪ್ರದಕ್ಷಿಣೆಗೆ ಹೊರಟರು. ಮಳೆ ಬರುತ್ತಿದ್ದುದರಿಂದ ನಾವು ಸ್ವಲ್ಪ ದೂರವಷ್ಟೇ ಚಾರಣ ಮಾಡಿ ಶೌಚಾಲಯದ ಒಂದು ಮಾಡಿನ ಕೆಳಗೆ ನಿಂತೆವು. ಸುಮಾರು ಒಂದು ತಾಸು ಹಾಗೆಯೇ ಕಳೆದೆವು. ಪಾರ್ಕಿಂಗ್ ಪ್ರದೇಶದ ವಾಹನಗಳೆಲ್ಲಾ ಒಂದೊಂದಾಗಿ ಖಾಲಿಯಾಗತೊಡಗಿದವು. ಮಗ ಸೊಸೆಯ ಸುಳಿವೇ ಇಲ್ಲ.

ಎಲ್ಲಾ ಕಡೆಯೂ ಕರಡಿಯಿಂದ ರಕ್ಷಿಸಿಕೊಳ್ಳಬೇಕಾದ ಉಪಾಯಗಳ ಎಚ್ಚರಿಕೆಯ ಫಲಕಗಳು. “ಕರಡಿಯೇನಾದರೂ ಎದುರಾದರೆ ಬೆನ್ನು ತಿರುಗಸಿ ಓಡಬೇಡಿ, ಆಹಾರ ಪದಾರ್ಥಗಳನ್ನು ಎಸೆಯಬೇಡಿ. ನಿಮ್ಮ ಉಡುಪಿಗೆ ಹತ್ತಿದ ಆಹಾರದ ವಾಸನೆಗೂ ಆಕರ್ಷಿತವಾಗಿ ಅವು ಬರಬಹುದು, ಉಡುಪು ಸ್ವಚ್ಛವಾಗಿರಲಿ” ಹೀಗೆ ಅನೇಕ ಎಚ್ಚರಿಕೆಗಳು. ಕೆಲವು ಚಾರಣಿಗರು ಹಸುವಿನ ಕೊರಳಿಗೆ ಕಟ್ಟುವ ಗಂಟೆಗಳನ್ನು ಇಟ್ಟುಕೊಂಡು ಸದ್ದು ಮಾಡುತ್ತಾ ನಡೆಯುತ್ತಾರೆ, ಗುಂಪಿನಲ್ಲಿ ಜೋರಾಗಿ ಹರಟೆ ಹೊಡೆಯುತ್ತಲೋ ಇಲ್ಲವೇ ಹಾಡುಗಳನ್ನು ಕೇಳುತ್ತಲೋ ನಡೆಯುತ್ತಾರೆ. ಹೀಗಾಗಿ ಕರಡಿಗಳಿಗೆ ಅಪಾಯದ ಸೂಚನೆ ಮುನ್ನವೇ ದೊರೆತು ಅವು ಪರಾರಿಯಾಗುತ್ತವಂತೆ. ಇಲ್ಲದಿದ್ದರೆ ನೇರವಾಗಿ ಮನುಷ್ಯ ಎದುರಾದರೆ ಬೆಚ್ಚಿ ಬಿದ್ದು ಅವಕ್ಕೆ ನಾವು ಆಹಾರವಲ್ಲದಿದ್ದರೂ ನಮ್ಮ ಮೇಲೆ ಆಕ್ರಮಣ ಮಾಡುತ್ತವಂತೆ.

‘ಬೇರ್ ಸ್ಪ್ರೇ’ ಸಿಗುತ್ತದೆ ಎಂದು ಎಲ್ಲ ಚಾರಣ ಸ್ಥಳಗಳಲ್ಲೂ ಫಲಕಗಳನ್ನು ಹಾಕಿರುತ್ತಾರೆ. ಅದಕ್ಕೆ ಎರಚಿ ನಾವು ಪಾರಾಗಬಹುದು. ಇಲ್ಲಿನ ಕರಡಿ ನಮ್ಮ ಊರಗಳಲ್ಲಿ ಕಾಣುವ ಕಪ್ಪುಕರಡಿಗಳಲ್ಲ. ಕಂದು ಬಣ್ಣದ ದೈತ್ಯ, ಭಯಾನಕ ಕರಡಿಗಳು. (Grizzly bears ) ಐದು ಮೈಲುಗಳಾಚೆಗೂ ನಮ್ಮನ್ನು ಗುರುತು ಹಿಡಿದು ಹಿಂಬಾಲಿಸಿ ಬರುತ್ತವಂತೆ.
ಅಲಾಸ್ಕಾದಲ್ಲಿ ಕರಡಿಗಳ ಬಗ್ಗೆ ದೊರೆತ ಜ್ಞಾನ, ಭಯವನ್ನೇ ಹೆಚ್ಚಿಸುವಂತಿತ್ತು. ಕವಿಯುತ್ತಿದ್ದ ಕತ್ತಲೆ ಅದನ್ನೂ ಇನ್ನೂ ತೀವ್ರಗೊಳಿಸಿತು.

ಮಳೆ ಬೇರೆ ಜೋರಾಯಿತು. ಸುತ್ತ ‘ಅಬೋ’ ಎನ್ನುವ ಕಾಡು! ಕುಳಿತುಕೊಳ್ಳಲು ಇದ್ದ ಬೆಂಚುಗಳೆಲ್ಲ ಒದ್ದೆಯಾಗಿದ್ದವು. ನಿಂತು ಕಾಲುಗಳು ಸೋಲತೊಡಗಿದವು. ಚಳಿ ಹೆಚ್ಚಾದುದರಿಂದ ಕಾಲು ಸೆಳೆತ ಬೇರೆ! ಕಾರಿನ ಕೀ ನಮ್ಮ ಬಳಿ ಇದ್ದಿದ್ದರೆ ನಾವು ಅಲ್ಲಿಯಾದೂ ಸುರಕ್ಷಿತವಾಗಿ ಕುಳಿತುಕೊಳ್ಳಬಹುದಿತ್ತು. ಮಕ್ಕಳ ಸುಳಿವೇ ಇಲ್ಲ. ಫೋನ್ ಮಾಡಲು ನೆಟ್ ವರ್ಕ್ ಇಲ್ಲ. ಕರಡಿಯ ಭಯ ಹೆಚ್ಚಾಗ ತೊಡಗಿತು. ಅಕಸ್ಮಾತ್ತಾಗಿ ಅವರಿಗೇನಾದರೂ ಅಪಾಯವಾದರೆ ಏನು ಮಾಡುವುದು, ಎಲ್ಲಿಗೆ ಹೋಗುವುದು? ನಮ್ಮನ್ನಾದರೂ ಕರಡಿ ಬಂದು ತಿಂದಕೊಂಡು ಹೋಗಲಿ! ಸದ್ಯ ಮಕ್ಕಳು ಸುಖವಾಗಿ ಬಂದರೆ ಸಾಕು. ದೂರದಲ್ಲಿ ಸೇತುವೆಯ ಮೇಲೆ ಒಂದು‌ ಮನೆ -ಟೋಲ್ಗೇಟ್ ಕಾಣಿಸುತ್ತಿತ್ತು. ಮಕ್ಕಳು ಬರಲು ಇನ್ನೂ ತಡವಾದರೆ ಅಲ್ಲಿಗೇ ಹೋಗುವುದು ಲೇಸು ಎನಿಸಿತು. ಜೀವಭಯ, ವ್ಯಾಮೋಹಕ್ಕೆ ಎಷ್ಟೆಲ್ಲ ಆತಂಕಗಳು.

ಈ ಮಕ್ಕಳ ಸಾಹಸ ಪ್ರವೃತ್ತಿಗೆ ಹೆಮ್ಮೆ ಪಡಬೇಕೋ? ಹೆದರಬೇಕೋ? ನಾನಂತೂ ಬೈದುಕೊಳ್ಳುತ್ತಲೇ ಇದ್ದೆ. ಅಷ್ಟರಲ್ಲಿ ದೂರದಲ್ಲಿ ಮಗ ಸೊಸೆ ಬರುತ್ತಿರುವುದು ಕಾಣಿಸಿತು, ಬದುಕಿದೆಯಾ ಬಡ ಜೀವವೇ! ಎನ್ನುತ್ತಾ ಕಾರಿನೊಳಗೆ ಅವಸರವಾಗಿ ತೂರಿಕೊಂಡೆವು.

ಟೆಡ್ಡಿ ಬೇರ್ ಗಳೆಂದರೆ ಮಕ್ಕಳ ಭಾವಲೋಕದ ಅವಿಭಾಜ್ಯ ಅಂಗ. ಅವುಗಳನ್ನು ಅಪ್ಪಿ ಮುದ್ದಾಡಿ ಮಲಗುವಾಗ ಮಗ್ಗುಲಲ್ಲಿಯೇ ಇರಿಸಿಕೊಂಡು ಮಕ್ಕಳು ಮಲಗುತ್ತವೆ. ಮಾರುಕಟ್ಟೆಯಲ್ಲಂತೂ ಇವಕ್ಕೆ ಭಾರೀ ಬೇಡಿಕೆ. ಮಕ್ಕಳ ಇಂತಹ ಮುದ್ದಾದ ಪ್ರಾಣಿಯ ಕಲ್ಪನೆಯೇ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಬಹುದೆಂದು ಗೊತ್ತಾದದ್ದೇ ನನಗೆ ದೆನಾಲಿ ಈ ಸಾವೇಜ್ ನದಿಯ ಬಳಿ.

ಹಾಗೆ ಕರಡಿ ಅಲಾಸ್ಕಾದ ಎಲ್ಲೆಡೆಯೂ ನಾಮಾಂಕಿತ ಪ್ರಾಣಿ. ಮನೆ, ಆಫೀಸುಗಳ ಮೇಲೂ ಇವುಗಳದೇ ಚಿತ್ರ, ಕಲಾಕೃತಿಗಳ ಅಂಗಡಿಗಳಲ್ಲಿಯೂ ಇವುಗಳದೇ ರಾಜ್ಯಭಾರ. ಇವು ಕೆಂಪು (ಸಾಲ್ಮ್) ಮೀನುಗಳನ್ನು ಬೇಸಿಗೆ ಕಾಲದಲ್ಲಿ ಹೊಟ್ಟೆ ತುಂಬಾ ಉಂಡು ಶಿಶಿರ ಸುಪ್ತಿಗೆ ( ಹೈಬರ್ನೇಷನ್ನಿಗೆ) ತೆರಳುತ್ತವಂತೆ. ಮಂಜು ಮುಸುಕಲು ಪ್ರಾರಂಭವಾಯಿತೆಂದರೆ ಇನ್ನು ಮತ್ತೊಂದು ಬೇಸಿಗೆಗೇ ಅವಕ್ಕೆ ಆಹಾರ ಸಿಗುವುದಂತೆ.

ದೂರದಿಂದ ಕರಡಿ ತುಂಬಾ ಚೆಂದ. ತುಪ್ಪಟದ ಬೊಂಬೆಗಳಂತೂ ( fur toys) ಇನ್ನೂ ಚೆಂದ. ಆದರ ಅವು ಹತ್ತಿರ ಬಂದರೆ? ಸಾವೇಜ್ ನದಿಯ ದಡದಲ್ಲಿ ಸಾವಿನ ಭಯ ನಮ್ಮನ್ನು ನಡುಗಿಸಿದ್ದಂತೂ ಸುಳ್ಳಲ್ಲ.

• ಅದೃಷ್ಟವಶಾತ್ ನಾವು ಕರಡಿಯ ಕಣ್ಣಿಗೆ ಬೀಳದೇ ಇದ್ದುದರಿಂದ ಅವುಗಳ ಪಟವನ್ನು ಗೂಗಲ್ ನಿಂದ ಕದ್ದು ಹಾಕಿದ್ದೇನೆ. ಕಪ್ಪು ಕರಡಿಯ ಒಂದು ಪಟ ಮಾತ್ರ ರಘುನಾಥ್ ಅವರು ನ್ಯಾಷನಲ್ ಪಾರ್ಕಿನಲ್ಲಿ ತೆಗೆದದ್ದು.

ಹಿಂದಿನ ಸಂಚಿಕೆಗಳು :


  • ಡಾ. ಗಿರಿಜಾ ಶಾಸ್ತ್ರಿ – ಲೇಖಕರು, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading