ಕಾಶಿ ಹಿಂದುಗಳಿಗಷ್ಟs ಅಲ್ಲ , ಜೈನ ಮತ್ತ ಬೌದ್ಧ ಧರ್ಮೀಯರಿಗೂ ಪವಿತ್ರ ಕ್ಷೇತ್ರ. ಈ ಕ್ಷೇತ್ರ ಒಂದ ಕೌತುಕ. ಅವಿನಾಶಿ ವಿಶ್ವನಾಥನ ದಿವ್ಯ ದರ್ಶನ ಕಾಶಿಯಲ್ಲಿ ಮುಖ್ಯವಾದದ್ದು. ಆದರೆ ಅಲ್ಲಿ ಗುದ್ದಾಡಿ ಹೋಗಿ ದೇವರ ಮುಂದೆ ನಿಂತರೆ ಐದ ಸೆಕೆಂಡಕ್ಕಿಂತಾ ಹೆಚ್ಚ ನಿಲ್ಲಕ್ಕೂ ಅಲ್ಲಿ ಸಿಬ್ಬಂದಿಗಳು ಬರುವುದಿಲ್ಲ. ನೂತನ ಕುಲಕರ್ಣಿ ಅವರು ಕಾಶಿ ಅವಿನಾಶಿ ವಿಶ್ವನಾಥನ ದಿವ್ಯ ದರ್ಶನದ ಅನುಭವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಪೂರ್ತಿಯಾಗಿ ಓದಿ…
ಕಾಶಿ, ವಾರಾಣಸಿ, ಬನಾರಸ. ಒಂದೊಂದ ಹೆಸರನ್ಯಾಗೂ ಪುಳಕದ ಅನುಭವ . ನೆನದ್ರ ಸಾಕ ಪುನೀತ ಅದಂಥ ಪುಣ್ಯ ಭಾವ . ಒಂದ ಕ್ಷೇತ್ರಕ್ಕ ಮೂರು ಹೆಸರು , ಮೂರೂ ಹೆಸರಗೋಳು ಕಾಶಿಯ ವಿಭಿನ್ನ ಮುಖಗೋಳನ್ನ ಪ್ರತಿನಿಧಿಸತಾವ. ಪುರಾಣ , ಪುಣ್ಯಕಥಿ, ಪ್ರವಚನ , ಶಾಸ್ತ್ರ ಗ್ರಂಥಗೋಳು ಉಲ್ಲೇಖ ಮಾಡೋ ” ಕಾಶಿ” ಆಧ್ಯಾತ್ಮದ ಮುಖ ಪರಿಚಯ ಮಾಡಿಕೊಡತದ.
“ವಾರಾಣಸಿ” ಅನ್ನೋ ಹೆಸರು ವಾರಣಾ ಮತ್ತ ಅಸ್ಸಿ ನದಿಗೋಳ ನಡುವ ಹಬ್ಬಿ ಬೆಳದ ನಗರದ ಭೌಗೋಳಿಕ ಮುಖ ಪ್ರತಿನಿಧಿಸತದ.ಇನ್ನೂ ” ಬನಾರಸ” ಇದು ಆ ನಗರದ ಸಾಂಸ್ಕೃತಿಕ ಮುಖದ ಪ್ರತೀಕ. ಇಲ್ಲಿನ ಸಾಹಿತ್ಯ, ಸಂಗೀತ, ಹಸ್ತಕಲೆ, ಬನಾರಸಿ ರೇಶ್ಮೆ ಸೀರೆ, ಚಾಟ, ಲಸ್ಸಿ, ಕೇಶರ ದೂಧ, ಮಲೈಯಾ, ಕುಲ್ಹಡ ಚಾಯ್, ಪಾನ್, ಹೆಜ್ಜಿ ಹೆಜ್ಜಿಗೆ ಸಿಗೋ ಗುಡಿ ಗುಂಡಾರ, ಪಾವನ ಗಂಗೆ ಇವೆಲ್ಲಾ ಅವರವರ ಇಚ್ಛೆಗನುಸಾರ ಬನಾ ಬನಾ ರಸಾನುಭೂತಿ ಕೊಡುವ ಬನಾರಸ.

ಈ ಭೂಮಿಯ ಮೇಲೆ ಅನಾದಿ ಕಾಲದಿಂದಲೂ ಜನ ವಸತಿಯಿಂದ ಜೀವಂತ ಇರೋ ಕೆಲವೇ ಕೆಲವು ಶಹರಗಳೊಳಗ ನಮ್ಮ ರಮ್ಯ ಕಾಶಿಯೂ ಒಂದು ಅಂದ್ರ ಹೃದಯಾ ಹೆಮ್ಮಿಯಿಂದ ಹಿಗ್ಗಿ ಹೂ ಹಂದರ ಅಗ್ತದ. ಬನಾರಸದ ಬಝಾರದಾಗ ಸುಮ್ನ ಅಡ್ಡಾಡೋದs ಒಂದ ಮಧುರ ಅನುಭವ. ಹೂ ಹಣ್ಣು , ಬೆಲ್ಪತ್ರಿ , ಕುಂಕುಮ , ಭಸ್ಮ , ಕೆಂಪು ಕೇಸರಿ ಪೂಜಾ ವಸ್ತ್ರ , ಗಂಗಾ ಗಿಂಡಿ , ಸಣ್ಣ ಪುಟ್ಟ ದೊಡ್ಡ ಶಿವಲಿಂಗ, ನೂರಾರ ದೇವರ ಫೋಟೋ, ಘಂಟಿ,ಡಮರು, ತ್ರಿಶೂಲ, ರುದ್ರಾಕ್ಷ, ಜಪಮಾಲಿ, ಶಂಖ, ಪ್ರಸಾದ ಪಾಕೀಟು ಇವನ್ನಲ್ಲಾ ಖರೀದಿ ಮಾಡಲಿಕತ್ತಂಥಾ ಯಾತ್ರಾರ್ಥಿಗಣದಿಂದ ತುಂಬಿ ತುಳಕೋ ಅಂಗಡಿಗೋಳು, “ಬೆಹೆನಜಿ, ವಿಶ್ವನಾಥ ಬಾಬಾಕ ದರ್ಸನ ಹೋ ಗಯಾ ಕ್ಯಾ? ನಹೀಂ ತೋ ಹಮ್ ಕರಾಯೇಂಗೆ ಸುಗಮ ದರ್ಸನ” ಅಂತ ಗಂಟಬೀಳೋ ಪಾಂಡಾಗಳು, “ಅಸಲೀ ಬನಾರಸಿ ಸಾಡಿ ನಮ್ಮ ಅಂಗಡ್ಯಾಗs ಸಿಗತಾವ ಬರ್ರಿ ಬರ್ರಿ” ಅಂತ ಬೆನ್ನ ಹತ್ತೋ ದಲ್ಲಾಳಿಗೋಳು, ದೊಡ್ಡ ಹಿತ್ತಾಳಿ ಭಾಂಡ್ಯಾಗ ಹಾಲ ಕುದಿಸಿಕೋತ ಕುತ್ತ ವ್ಯಾಪಾರಿಗೋಳು (ಅವರು ಯಾರನೂ ಕರದ ಕಾಡಾಂಗಿಲ್ಲ, ಅವ್ರಿಗೆ ಗೊತ್ತ ಈ ಯಾತ್ರಿಮಂದಿ ತಿರಗಿ ತಿರಗಿ ಸುಸ್ತಾಗಿ ಹಾಲೋ ಚಹಾನೋ ಕುಡಿಲಿಕ್ಕೆ ಬಂದs ಬರ್ತಾರಂತ).

ಚಾಟ, ಜಲೇಬಿ, ರಬಡಿ, ಪಾನ ಬೀಡಾ ದುಕಾನಗೋಳು, ಐದಾರ ಮಂದಿನ್ನ ಹೊತ್ತಗೊಂಡ ಟುರ್ರ ಅಂತ ಹೆಂಗ ಬಂತ ಹಂಗ ಓಡಾಡೋ ಟುಕ್ ಟುಕಗೋಳು, ಹಿಂತಾದ್ರಾಗ ಇಬ್ರ ಮೂರ ಮಂದಿನ್ನ ಕೂಡಿಸಿಕೊಂಡ ತುಳಿಲಾರದ ತುಳಕೊಂಡ ಹೋಗೋ ಸೈಕಲ್ ರಿಕ್ಷಾವಾಲಾಗೋಳು, ಎಲ್ಲಿಂದ ಬಂದ್ವಿ, ಎಲ್ಲೆ ಹೊಂಟೇವಿ ಅನ್ನೋ ಖಬರಗೆಡಸೋ ಚಕ್ರವ್ಯೂಹ ಗಲ್ಲಿಗೋಳು, ಗಲ್ಲಿ ಎರಡೂ ಬಾಜುಕ್ಕ ಹೊಲಸ ನೀರ ಹರ್ಯೋ ಗಟಾರಗೋಳು, ಹೋಗೋ ಬರೋ ಹಾದಿಹೋಕರು ಪಾನ ತಿಂದ ಪಿಚ್ ಅಂತ ಉಗಳೋ ಕೆಂಪರಸಾ ತುಂಬಿದ ರಸ್ತೆಗೋಳು, ಯಾವದs ಸಂಕೋಚ, ನಾಚಿಕಿ ಇಲ್ಲದನ ಗಲ್ಲಿ ಖೂಟಿಗೋ, ಗ್ವಾಡಿಗೋ ಮಾರಿ ಮಾಡಿ ಮೂತ್ರ ವಿಸರ್ಜಿಸೋ ಕೆಲವು ಅನಾಗರಿಕರು, “ಹರ ಹರ ಮಹಾದೇವ”,”ಜೈ ಮಾ ಗಂಗಾ ಕಿ” ಅಂತ ಉದ್ಘೋಷ ಮಾಡಕೋತ ಉತ್ಸಾಹದಿಂದ ಗುಡಿಗೆ ಹೊಂಟ ಭಕ್ತಾದಿಗಳು, ಹೊಂಟಾವ್ರನ್ನ ತಡದ ನಿಂದ್ರಿಸಿ, ಹಣಿ ತುಂಬ ಚಂದನ ಬಳದ, ಮ್ಯಾಲ ” ಜೈ ಭೋಲೇನಾಥ “ಅಂತೋ “ಹರ ಹರ ಮಹಾದೇವ” ಅಂತೋ ಕುಂಕುಮದಲೆ ಮಾರ್ಕ್ ಮಾಡಿ ಅಷ್ಟಿಷ್ಟು ಗಳಸೋ ಹೆಂಗಸರು, ಮಕ್ಕಳು, ಗಿರಾಕಿಗೋಳಿಂದ ಗಿಜಿಗಿಜಿಗುಟ್ಟೋ ಹೊಟೇಲಗಳು. ಓಹೋಹೋ ಏನೇನ ಅದ ಏನೇನ ಇಲ್ಲಾ ಈ ಶಿವನಗರಿಯೊಳಗ !
ಕಾಶಿಗೆ ಬರೋ ಮುಖ್ಯಾತಿ ಮುಖ್ಯ ಉದ್ದೇಶ ಅವಿನಾಶಿ ವಿಶ್ವನಾಥನ ದಿವ್ಯ ದರ್ಶನ. ಬೆಳ್ಳಬೆಳಿಗ್ಗೆ ಎದ್ದು, ಸ್ನಾನ ಕರ್ಮಾದಿ ಮುಗಿಸಿ, ಭಕ್ತಿಭಾವ ಉಟ್ಟು ತೊಟ್ಟು, ಗುಡೀ ಕಡೆ ಗಡಿಬಿಡಿಯಿಂದ ನಡದ ಹೋಗೋ ಭಾವಿಕರನ್ನ ನೋಡೋದ ಸೈತ ಈ ಕಂಗಳ ಭಾಗ್ಯ. ಕೆಲವ್ರು ಜನರಲ್ ಸರತಿಯೊಳಗ ಸೇರಿಕೊಂಡ್ರ ಇನ್ನ ಕೆಲವ್ರು ಸುಗಮ ದರ್ಶನದ ಪಾಸ್ ತೊಗೊಂಡು ಮತ್ತೊಂದ ಲೈನನ್ಯಾಗ ನಿಲ್ಲತಾರ. ಇನ್ನ ಸ್ವಲ್ಪ ಮಂದಿ ಸ್ಪೇಷಲ್ ದರ್ಶನನೋ, ಸ್ಪರ್ಶ ದರ್ಶನನೋ ಅಂತ ಹೆಚ್ಚ ರೊಕ್ಕಾ ಕೊಟ್ಟ ಸರತಿ ಗಿರತಿ ಏನಿಲ್ಲದ ಅಡ್ಡ ದಾರಿಲೆ ಡೈರೆಕ್ಟ್ ದೇವರ ಮಾರೀ ಮುಂದs ಹೋಗಿ ನಿಂದರತಾರ.

ಹೆಂಗ ಹೋದ್ರೂ ಐದ ಸೆಕೆಂಡಕ್ಕಿಂತಾ ಹೆಚ್ಚ ನಿಲ್ಲಗೊಡೂದಿಲ್ಲ ಮಂದಿರದ ಸಿಬ್ಬಂದಿ. ವಿಶ್ವೇಶ್ವರನ ದಿವ್ಯ ದರ್ಶನದ ಒಂದು ಕ್ಷಣ ಸಾಕು, ಜನ್ಮ ಜನ್ಮಾಂತರದ ಪಾಪ ನಶಿಸಿ, ಜೀವನ ಪಾವನ ಆತು ಅನ್ನೋ ಪುಣ್ಯ ಭಾವ ಮೈ ಮನಸ್ಸಿನೊಳಗ ಹೂವಿನ್ಹಂಗ ಅರಳೋದ ಮಾತ್ರ ಸುಳ್ಳಲ್ಲ ; ವಿಶ್ವನಾಥನಾಣಿ, ಮುಖ್ಯ ಕೆಲಸಾತ ಅಂದ್ರ ಮುಂದ ನಿವಾಂತಾಗಿ ಪ್ರಾಕಾರದಾಗ ಇದ್ದ ಮಾತಾ ಅನ್ನ ಪೂರ್ಣೇಶ್ವರಿ, ಲಕ್ಷ್ಮೀ ನಾರಾಯಣ ಮಂದಿರ, ಪ್ರಾಕಾರದ ಹೊರಗಿದ್ದ ವಿಶಾಲಾಕ್ಷಿ ಮಂದಿರ ದರ್ಶಿಸಿ ಧನ್ಯ ಆಗತೇವಿ. ಗುಡಿ ಆವಾರದಾಗಿನ ದೊಡ್ಡ ನಂದಿ ಈ ಕಡೆ ಶಿವನ್ನ ಬಿಟ್ಟ ಆ ಕಡೆ ಗ್ಯಾನವಾಪಿ ಮಸೀದಿಯ ಗ್ವಾಡಿಕಡೆ ಮಾರಿ ಮಾಡಿ ಕೂತದ್ದು ಸ್ಪಷ್ಟ ತಿಳಿತದ.
ಅಂತೂ ಭೋಲೇ ಬಾಬಾನ ದರ್ಶನ ಮಾಡಿದ ತೃಪ್ತಿಯಿಂದ ಹೊರಗ ಬಂದು ಹಸದ ಹೊಟ್ಟಿ ತುಂಬಲಿಕ್ಕಂತ ಹೊಟೇಲ್ ಹೊಕ್ಕೆವು. ಈಗಂತೂ ಸಾಕಷ್ಟು ರೆಸ್ಟೊರಂಟಗೋಳು , ಫುಡ್ ಸೆಂಟರಗೋಳು, ಈಟಿಂಗ್ ಜೊಯಿಂಟಗೋಳು ಅಲ್ಲದs ಬಿಸಿ ಹಾಲು, ಚಹಾ, ಲಸ್ಸಿ ಮಾರೋ ಗೂಡಂಗಡಿಗೋಳು ಊರ ತುಂಬಾ ಆಗಿಬಿಟ್ಟಾವ. ತಿಂದ ಘಟ್ಟಿ ಆದ ಮ್ಯಾಲ ನಾವು ಕಾಶಿಯ ಇಕ್ಕಟ್ಟಿನ ಗಲ್ಲಿಗೋಳೊಳಗ ಅಡ್ಡಾಡಲಿಕ್ಕೆ ಹೊಂಟೆವಿ.
ಉದ್ದಾನ ಉದ್ದ , ಇಕ್ಕಟ್ಟ ಗಲ್ಲಿಗೋಳು ಅಲ್ಲಿ ಹೊಳ್ಳಿ , ಇಲ್ಲಿ ತಿರಗಿ ಮುಗಿಯೋದs ಇಲ್ಲೇನೋ ಅನ್ನೋಹಂಗ ಮುಂದ ಮುಂದ ಹೋಗ್ತಾನs ಇರ್ತಾವ. ಹಾದೀ ಎರಡೂ ಕಡೆ ಸಣ್ಣ ದೊಡ್ಡ ಅಂಗಡಿ, ಮನಿ, ವಠಾರ, ವಾಡೆ ಅಂತ ಒತ್ತೊತ್ತಿ ಕಟ್ಟಿದ ಕಟ್ಟಡಗೋಳು. ಅದರಾಗ ನಡನಡುವ ಗುಡಿ ಗುಂಡಾರಗೋಳು ಕಾಣಸತಾವ. ಅಲ್ಲಲ್ಲಿ ಭಾರತದ ಬ್ಯಾರೆ ಬ್ಯಾರೆ ಭಾಗಗಳ ಮಠ ಮಂದಿರದಾವ್ರು ತಮ್ಮ ತಮ್ಮ ಜನರ ಅನುಕೂಲಕ್ಕಂತ ಕಟ್ಟಿಸಿದ ಧರ್ಮಸಾಲಿ, ಧಾರ್ಮಿಕ ಕೇಂದ್ರಗೋಳೂ ಸಾಕಷ್ಟ ಅವ. ನಾವೂ ನಡಕೋತ ನಡಕೋತ ಕಿಲೋ ಮೀಟರಗಟ್ಟಲೇ ಮುಂದ ಹೋಗಿಬಿಟ್ಟಿದ್ವಿ. ವಾಪಸ್ ವಿಶ್ವನಾಥನ ಮಂದಿರದ ಹತ್ರ ಬರಬೇಕಂದ್ರ ನಮಗ ದೋಣಿ ಹತ್ತ ಬೇಕಾತು. ಕಾಶಿ ಅಂದ್ರ ಮಂದಿರಗಳ ಊರು. ಯಾವದ ನೋಡೋದ ,ಯಾವದ ಬಿಡೋದ ತಿಳ್ಯಾಂಗಿಲ್ಲ. ಸಂಕಟ ಮೋಚನ ಹನುಮಾನ ಮಂದಿರ ಅಗದೀ ಶಾಂತಿ ಕೊಡೋ ಗುಡಿ. ಯಾವದs ಗದ್ದಲಾ, ಗಡಬಡಿ ಇಲ್ಲ. ಭಕ್ತಾದಿಗಳು ಇಲ್ಲಿ ಬಂದು, ನಿವಾಂತ ಕೂತು , ಹನುಮಾನ ಚಾಲೀಸಾ ಓದತಾರ. ಕೆಲವರು ಭಜನಿ ಮಾಡತಿರತಾರ. ಗುಡಿ ಗ್ವಾಡಿ ಮ್ಯಾಲ ಬರದ “ಶ್ರೀ ರಾಮ ,ಜಯರಾಮ ಜಯಜಯ ರಾಮ” ಅಕ್ಷರಗೋಳ ಮ್ಯಾಲ ಬೆರಳಿನಿಂದ ತೀಡಿ ,ತಾವೂ ರಾಮನಾಮ ಬರದ ಆನಂದ ಅನುಭವಿಸತಾರ. ಅಲ್ಲೇ ಹತ್ತರದಾಗ ಇದ್ದ ಮಾನಸ ಮಂದಿರದ್ದು ಬ್ಯಾರೇನs ಛಂದ. ಅದು ಇತ್ತಿತ್ತಲಾಗ ಕಟ್ಟಿದ ಶ್ರೀ ರಾಮ ಮಂದಿರ. ಇಡೀ ತುಲಸೀ ರಾಮಾಯಣ ಕಾವ್ಯ ಗುಡಿಯ ಗ್ವಾಡಿ ತುಂಬ ಛಂದಾಗಿ ಕೆತ್ತಿ ಬರೆದ ವಿಶೇಷ ಮಂದಿರ ಇದು. ಕಾಲ ಭೈರವ , ಕೌಡೀ ಮಾತಾ ಹಾಗೂ ಭಾರತ ಮಾತಾ ಮಂದಿರಗಳು ಭಾವಿಕರು ಭೇಟಿ ನೀಡೋ ಇನ್ನಿತರ ಗುಡಿಗೋಳು. ಬನಾರಸ ಹಿಂದು ವಿಶ್ವ ವಿದ್ಯಾಲಯ , ಕಾಶಿ ವಿದ್ಯಾಪೀಠ ಇವು ಜ್ಞಾನ ದೇಗುಲಗೋಳಂತ ಬ್ಯಾರೇ ಹೇಳಬೇಕಾಗೇ ಇಲ್ಲ.
ಕಾಶಿಗೆ ಬರೋ ಎರಡನೇ ಮುಖ್ಯ ಉದ್ದೇಶ ಅಂದ್ರ, ತೀರಿ ಹೋದ ಕುಲದ ಹಿರಿಯರಿಗೆ ಸದ್ಗತಿ ಸಿಗಲಿ ಅಂತ ಶ್ರಾದ್ಧ ಕರ್ಮ ಮಾಡೋದು. ಗಂಗಾನದಿಯ ಘಾಟಗೋಳ ಮ್ಯಾಲs ಅಲ್ಲಲ್ಲಿ ಭಟ್ಟರು, ಭಡಜಿಗೋಳು, ಪಂಡಿತರು ಸಿಕ್ಕsಸಿಗತಾರ. ಅಲ್ಲದs ತಲೆಮಾರಗಳಿಂದ ಕಾಶಿಯೊಳಗ ವಾಸ ಇದ್ದ ಎಷ್ಟೋ ಆಚಾರ್ಯರು, ಪುರೋಹಿತರು ಇಂಥ ಎಲ್ಲಾ ಧಾರ್ಮಿಕ ಕ್ರಿಯಾ ಕರ್ಮಗಳನ್ನ ಅಚ್ಚಕಟ್ಟಾಗಿ ಮಾಡಿಸತಾರ.

ಶ್ರಾದ್ಧ ಮಾಡೋ ಯಜಮಾನರ, ಅವರ ಹೆಂಡತಿಯ, ಮೂರ ತಲಿಮಾರಿನ ಹಿರಿಯರ, ಒಬ್ಬೊಬ್ಬರ ಹೆಸರ ತೊಗೊಂಡು, ಪಿಂಡ ಮಾಡಿಸಿ ಪೂಜಿ ಮಾಡಿಸತಾರ. ಅಷ್ಟಲ್ಲದs ಮರೆಯಾದ ಇತರ ಬಂಧು ಬಳಗದವರ, ಮನಿ ಪುರೋಹಿತರ, ಗೆಳಯರ, ಮನ್ಯಾಗ ಸಾಕಿದ್ದ ಪ್ರಾಣಿ ಪಕ್ಷಿಗೋಳ ಹೆಸರಲೆ ಸೈತ ಪಿಂಡ ಬಿಟ್ಟು, ಮುಕ್ತಿ ಕೊಡಸತಾರ. ಎಲ್ಲಾ ಮುಗದ ಮ್ಯಾಲ, ಪಿಂಡಗೋಳನ್ನೆಲ್ಲಾ ಸೇರಿಸಿ, ಗಂಗಾ ನದಿಗೆ ಅರ್ಪಿಸಿ ಬರಲಿಕ್ಕೆ ಹೋಗಬೇಕು. ದೋಣಿಯೊಳಗ ಕೂತು ಸ್ವಲ್ಪ ದೂರ ನದಿಯೊಳಗ ಹೋಗಿ, ಪಿಂಡಗೋಳನ್ನ ಬಿಡಬೇಕಾದ್ರ ಹೃದಯ ಏಕಕಾಲದಾಗ ಭಾರನೂ ಆಗ್ತದ, ಹಗರನೂ ಅನಸ್ತದ. ಅದೊಂದು ತೃಪ್ತ ಭಗೀರಥ ಭಾವ! “ಮುಕ್ತರಾದರು ಎನ್ನ ನೂರೊಂದು ಕುಲದವರು, ಮುಕ್ತಿಮಾರ್ಗಕ ಯೋಗ್ಯ ನಾನಾದೆನೋ” ಎನ್ನುವ ಕನಕದಾಸರ ಪದದ ಸಾಲುಗಳು ಮನಸ್ಸಿನ್ಯಾಗ ಅನುರಣಿಸಿದವು.
ಘಾಟ ನಹೀಂ ದೇಖಾ ತೋ ಬನಾರಸ ಕ್ಯಾ ದೇಖಾ? ಕಾಶಿಯ ಸೌಂದರ್ಯಕ್ಕ , ರಮಣೀಯತನಕ್ಕ ವಿಶೇಷ ಮೆರಗ ಬಂದಿರೋದs ಗಂಗಾನದಿ ದಂಡಿಗುಂಟ ಹಾರ ಪೋಣಿಸಿಧಂಗ ಇರೋ ಘಾಟಗೋಳು. ಸುಮಾರು ಎಂಬತ್ತರ ಆಸಪಾಸನ್ಯಾಗ ಅವ ಘಾಟಗೋಳ ಸಂಖ್ಯಾ. ಕೆಲವಕ್ಕ ಪೌರಾಣಿಕ ಮತ್ತ ಕೆಲವಕ್ಕ ಐತಿಹಾಸಿಕ ಹಿನ್ನೆಲೆ ಅವ. ಬ್ರಹ್ಮದೇವರು ಹತ್ತು ಅಶ್ವಮೇಧ ಯಾಗ ಮಾಡಿದ ತಟಕ್ಕ ದಶಾಶ್ವಮೇಧ ಘಾಟ ಅನ್ನೋ ಹೆಸರು. ಅತೀ ಪ್ರಖ್ಯಾತ ಗಂಗಾರತಿ ಇದs ಘಾಟದ ಮ್ಯಾಗ ನಡಿತದ.ಸಂಜಿ ಆಗೋದs ತಡಾ ,ಎಲ್ಲಾ ಜನರು ಸಾವಿರ ಸಾವಿರ ಸಂಖ್ಯಾದಾಗ ದಶಾಶ್ವಮೇಧ ಘಾಟದಾಗ ಜಮಾಸಿಬಿಡತಾರ. ಮತ್ತೂ ಸಾವಿರಾರ ಜನರು ದೋಣಿಯೊಳಗ ಕೂತು ಗಂಗಾರತಿ ನೋಡೋದಕ್ಕ ಉತ್ಸುಕರಿರತಾರ. ನಿಧಾನಕ್ಕ ಆರತಿ ಸುರು ಆತಂದ್ರ ಸಾಕು , ಭಕ್ತರೆಲ್ಲಾ ರೋಮಾಂಚಿತರಾಗಿ “ಹರ ಹರ ಗಂಗೆ” ,”ಹರ ಹರ ಮಹಾದೇವ” ಅಂತ ಒಕ್ಕೊರಲಿನಿಂದ ಉದ್ಘೋಷ ಮಾಡತಾರ. ಶಂಖದ “ಭೂಂ”ನಾದ ಭೂಮ್ಯಾಕಾಶ ವ್ಯಾಪಿಸಿ ಬಿಡತದ. ತಾಯಿ ಗಂಗೆಗೆ ಧೂಪ, ವಸ್ತ್ರ, ಚಾಮರ, ದೀಪದಾರತಿ ಮಾಡುವಾಗ ಎಲ್ಲರ ಮೈ ಮನಗಳೊಳಗ ಮಿಂಚಿನ ಸಂಚಾರ! ದೇಶ, ವೇಶ, ಭಾಷೆ, ಜಾತಿ, ಧರ್ಮ ಮೀರಿದ ಭಕ್ತಿಯ ಭಾವವೊಂದು ನಮ್ಮೆಲ್ಲರನ್ನೂ ಬಂಧಿಸಿಬಿಡತದ. ಬನಾರಸ ಅಂದ್ರ ಭಾರತದ ಭಾವಾತ್ಮ!
ಅಸ್ಸೀ ಘಾಟ ( ಇಲ್ಲೇ ತುಲಸೀದಾಸರು ರಾಮಚರಿತ ಮಾನಸ ಗ್ರಂಥ ಬರದು ಮುಗಿಸಿದ್ರು ಅಂತ ನಂಬಿಕಿ), ಅಹಿಲ್ಯಾ ಘಾಟ, ಕೇದಾರ ಘಾಟ, ಪಂಚಗಂಗಾ, ಲಲಿತಾ, ಜೈನ, ತಥಾಗತ, ದರಭಂಗಾ, ತುಲಸೀ, ಕೇಶವ, ನಾರದಘಾಟ ( ಇಲ್ಲೆ ಗಂಡ-ಹೆಂಡತಿಯಾಗಲಿ, ಅಣ್ಣ-ತಮ್ಮ, ಅಕ್ಕ-ತಂಗಿ ಇತ್ಯಾದಿ ಯಾರೇ ಆಗಲಿ ಏಕಕಾಲದಾಗ ಸ್ನಾನ ಮಾಡಿದ್ರ ಅವರೊಳಗ ಝಗಳ ಆಗತದ ಅಂತ ಪ್ರತೀತಿ. ಅದಕ್ಕ ನಾರದ ಘಾಟದಾಗ ಸ್ನಾನಾ ಮಾಡೋದ ಕಡಿಮಿ.)…ಇತ್ಯಾದಿ ಅದೆಷ್ಟೋ ಘಾಟಗಳವ. ಮಣಿಕರ್ಣಿಕಾ ಮತ್ತ ಹರಿಶ್ಚಂದ್ರ ಘಾಟಗೋಳಂತೂ ದಹನ ಸಂಸ್ಕಾರ, ಅಪರ ಕರ್ಮಗಳಿಗೆ ಪ್ರಸಿದ್ಧ . ದಿನದ ಯಾವದs ಹೊತ್ತಿನ್ಯಾಗೂ ಒಂದಲ್ಲಾ ಒಂದು ಶವ ಸಂಸ್ಕಾರ ನಡದs ಇರತದ. ಸದಾ ಉರಿಯೋ ಚಿತೆ ! ಇಲ್ಲೆ ಅಳೋದು ಕರೆಯೋದು, ಶೋಕ ಮಾಡೋದು ಇಲ್ಲ. ಕಾಶಿಯೊಳಗ ಮರಣ ಮಹಾ ನವಮಿ.

ಕಾಶಿಯ ಈ ಘಟ್ಟಗಳೊಳಗ ದೇಹಾಂತವಾದ್ರ ಜನ್ಮ ಮರಣದ ಚಕ್ರದಿಂದ ಬಿಡಿಸಿಕೊಂಡು ಆತ್ಮ ಮುಕ್ತ ಆಗತದ ಅನ್ನೋದು ನಮ್ಮ ಹಿಂದು ಧರ್ಮದಾವ್ರ ಘಟ್ಟಿ ವಿಶ್ವಾಸ. ( ಕಾಶಿಯೊಳಗ ಸತ್ರ , ಪುನರ್ಜನ್ಮ ಇಲ್ಲ. ಅದಕ್ಕ ಇಲ್ಲೆ ಕಾಗಿಗೋಳು ಇಲ್ಲ. ಕಾಗಿ ಪುನರ್ಜನ್ಮದ ಸಂಕೇತ. ಹಿಂಗಂತ ಅಲ್ಲಿನ ಪಂಡಿತರೊಬ್ಬರು ನಮಗ ಹೇಳಿದ್ರು.). ಇಲ್ಲಿನ ಹಲವಾರ ಘಾಟಗೋಳ ಮ್ಯಾಲ ಪಿಂಡದಾನ, ಶ್ರಾದ್ಧ ಕರ್ಮ, ಅಸ್ತಿ ವಿಸರ್ಜನ ಅಲ್ಲದನ ನದೀ ಪೂಜಿ, ರಾಮೇಶ್ವರದಿಂದ ತಂದ ಉಸಕಿನ ಪೂಜಿ, ಧ್ಯಾನ, ಯೋಗ, ಗ್ರಂಥ ಪಠಣ. ನಡದs ಇರ್ತಾವ. ಈ ಎಲ್ಲಾ ನಮೂನೆ ಚಟುವಟಿಕೆಗಳನ್ನ ಕೌತುಕದಿಂದ ನೋಡಕೋತ ಘಾಟದ ಮೆಟ್ಟಲ ಮ್ಯಾಗ ಕೂತ ಪ್ರವಾಸಿಗರ ಸಂಖ್ಯಾನೂ ಕಡಿಮಿಯಿಲ್ಲ. ಘಾಟ ದರ್ಶನ ಮಾಡಲಿಕ್ಕಂತ ದೋಣಿಯೊಳಗ ಹತ್ತಾವ್ರು, ಇಳ್ಯಾವ್ರ ಗದ್ದಲಾ, ಚಹಾ ಮಾರಾವ್ರು, ನದ್ಯಾಗ ಬಿಡಲಿಕ್ಕೆ ದೀಪಾ ತೊಗೋಳ್ರಿ ಅಂತ ಬರಾವ್ರು, ಹಣ್ಣ ಹಂಪಲಾ, ಕುರಕಲ ತಿಂಡಿ ಮಾರಾವ್ರು, ಫುಗ್ಗಾ, ಪೀಪೀ, ಡಮರು ಇತ್ಯಾದಿ ಆಟದ ಸಾಮಾನ ಮಾರಾವ್ರು. ಓಹೋಹೋ ಅಲ್ಲೊಂದ ಸಣ್ಣ ಜಗತ್ತs ನೋಡಬಹುದು.
ಕಾಶಿ ಹಿಂದುಗಳಿಗಷ್ಟs ಅಲ್ಲ , ಜೈನ ಮತ್ತ ಬೌದ್ಧ ಧರ್ಮೀಯರಿಗೂ ಪವಿತ್ರ ಕ್ಷೇತ್ರ. ಜೈನ ತೀರ್ಥಂಕರರಾದ ಪಾರ್ಶ್ವನಾಥ , ಸುಪಾರ್ಶ್ವನಾಥ, ಚಂದ್ರಪ್ರಭ ಮತ್ತ ಶ್ರೇಯಾಂಸನಾಥರ ಜನ್ಮಸ್ಥಳನೂ ಹೌದು. ಶ್ರೇಯಾಂಸನಾಥ ತೀರ್ಥಂಕರರಿಂದನs ಸಾರನಾಥ ಅನ್ನೋ ಹೆಸರಿನ ಊರು ಪ್ರಸಿದ್ಧಾಗೇದ. ಭಗವಾನ ಬುದ್ಧರು ಜ್ಞಾನೋದಯದ ನಂತರ ಮದಲನೇ ಉಪದೇಶ ಕೊಟ್ಟ ಪಾವನ ಸ್ಥಾನನೂ ಸಾರನಾಥನ. ಇಲ್ಲೇ ಮಟ್ಟ ಮದಲನೆ ಬೌದ್ಧ ಸಂಘದ ನಿರ್ಮಾಣ ಆತಂತ. ಧಮೇಕ ಸ್ತೂಪ , ಚೌಖಂಡಿ ಸ್ತೂಪ , ಅಶೋಕಸ್ಥಂಬ (ನಮ್ಮ ಭಾರತದ ರಾಷ್ಟ್ರೀಯ ಲಾಂಛನ), ಅದ್ಭುತ ಬೌದ್ಧ ಮಂದಿರಗೋಳು ಅಲ್ಲದs ಸಾರನಾಥ ಸಂಗ್ರಹಾಲಯ ಎಲ್ಲಾ ಒಂದಕ್ಕಿಂತ ಒಂದು ಛಂದದ ಪ್ರೇಕ್ಷಣೀಯ ಧಾರ್ಮಿಕ ಜಾಗಗೋಳು. ಭಗವಾನ ಶ್ರೇಯಾಂಸನಾಥರ ಬಸದಿನೂ ಭಾವಿಕರು ಭೇಟಿ ಮಾಡೋ ಪುಣ್ಯಸ್ಥಾನ (ಇದು ಕಾಶಿಯಿಂದ ಎಂಟ್ಹತ್ತು ಕಿಲೋ ಮೀಟರ್ ದೂರ ಅದ).
ಕಾಶಿ ಅನ್ರಿ , ಬನಾರಸ ಅನ್ರಿ ಇಲ್ಲಾ ವಾರಾಣಸಿ ಅನ್ರಿ ; ಈ ಕ್ಷೇತ್ರನs ಒಂದ ಕೌತುಕ! ಇಲ್ಲೆ ಗದ್ದಲ ಅದ ; ಶಾಂತಿ ಕೊಡತದ. ಹೊಲಸ ಅದ ; ಸ್ವಚ್ಛ ಮಾಡತದ. ಕತ್ತಲಿ ಅದ ; ಬೆಳಕಿಗೆ ಒಯ್ಯತದ. ಜೀವನ ಅದ ; ಮುಕ್ತ ಮಾಡತದ. ಜಗತ್ತಿನ್ಯಾಗ ಭಾರತದಂಥಾ ದೇಶ ಇಲ್ಲ , ಕಾಶಿಯಂಥಾ ಕ್ಷೇತ್ರ ಇಲ್ಲ , ಭಾಗೀರಥಿಯಂಥಾ ನದಿ ಇಲ್ಲ , ಭಾರತೀಯರಂಥಾ ಭಾಗ್ಯ ಇಲ್ಲ!!
” ವಾರಾಣಸಿ ಪುರಪತಿಂ ಭಜೇ ವಿಶ್ವನಾಥಂ!”
- ನೂತನ ಕುಲಕರ್ಣಿ
