ಹೆಸರಾಂತ ಕಾದಂಬರಿಗಾರ್ತಿ ತ್ರಿವೇಣಿಯವರು ಬಿ.ಎಂ.ಕೃಷ್ಣಸ್ವಾಮಿ ಮತ್ತು ತಂಗಮ್ಮ ದಂಪತಿಗಳ ಮಗಳಾಗಿ 1928 ಸೆಪ್ಟೆಂಬರ್ 1 ರಂದು ಮಂಡ್ಯದಲ್ಲಿ ಜನಿಸಿದರು. ಅವರಿಗೆ ಭಾಗೀರಥಿ ಎಂದು ಹೆಸರಿಟ್ಟು ನಾಮಕರಣ ಮಾಡಲಾಯಿತು. ಬಿ.ಎಂ.ಶ್ರೀಯವರು ತ್ರಿವೇಣಿಯವರ ದೊಡ್ಡಪ್ಪ. ತ್ರಿವೇಣಿಯವರ ಸಾಧನೆಯ ಕುರಿತು ಲೇಖಕರಾದ ಚೇತನ ಭಾರ್ಗವ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮನೋವೈಜ್ಞಾನಿಕ ಸಮಸ್ಯೆಗಳನ್ನು ತಮ್ಮ ಕಾದಂಬರಿಯ ಕಥಾವಸ್ತುವನ್ನಾಗಿ ಆಯ್ದುಕೊಂಡು ಕನ್ನಡದ ಕಥೆ ಕಾದಂಬರಿಗಳಿಗೆ ಹೊಸ ತಿರುವನ್ನು ಕೊಟ್ಟವರು ತ್ರಿವೇಣಿಯವರು. ಇವರು ಆಧುನಿಕ ಕನ್ನಡ ಸಾಹಿತ್ಯದ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬರಹಗಾರ್ತಿ. ತ್ರಿವೇಣಿಯವರು ಮಹಿಳೆಯರ ಧ್ವನಿಗೆ ಪ್ರತಿಧ್ವನಿಯಾಗಿದ್ದರು. ಇವರ ಸರಳ ಸುಲಭ ಹೃದಯಸ್ಪರ್ಶಿ ಭಾಷೆ ಬರಹದ ಮುಖ್ಯ ಆಕರ್ಷಣೆಯಾಗಿತ್ತು. ಸಾಮಾಜಿಕ ಬದ್ಧತೆ ಕಳಕಳಿಯಿಂದ ಕೂಡಿದ್ದ ಇವರ ಕೃತಿಗಳು ಇಂದಿಗೂ ಓದುಗರನ್ನು ಸೆಳೆಯುತ್ತದೆ.
ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿರುವ ತ್ರಿವೇಣಿಯವರು. ಬಿ .ಎಂ. ಕೃಷ್ಣಸ್ವಾಮಿ ಮತ್ತು ತಂಗಮ್ಮ ದಂಪತಿಗಳ ಮಗಳಾಗಿ 1928 ಸೆಪ್ಟೆಂಬರ್ 1 ರಂದು ಮಂಡ್ಯದಲ್ಲಿ ಜನಿಸಿದರು. ಅವರಿಗೆ ಭಾಗಿರಥಿ ಎಂದು ಹೆಸರಿಟ್ಟು ನಾಮಕರಣ ಮಾಡಲಾಯಿತು. ನಂತರ ಇವರಿಗೆ ಅನುಸೂಯ ಎಂಬ ಹೆಸರನಿಟ್ಟು ಶಾಲೆಗೆ ದಾಖಲಿಸಲಾಯಿತು. ಇವರು ಪ್ರಾರಂಭಿಕ ಶಿಕ್ಷಣವನ್ನು ಮಂಡ್ಯದಲ್ಲಿಯೇ ಮುಗಿಸಿದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕವನ್ನು ಪಡೆಯುವುದರ ಮೂಲಕ ಬಿ.ಎ ಪದವಿಯನ್ನು ಪಡೆದುಕೊಂಡರು. ಇವರು ಕೆಲ ಕಾಲ ಮಂಡ್ಯದ ಮಾಧ್ಯಮಿಕ ಶಾಲೆಯಲ್ಲಿ ಅಧ್ಯಾಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ತ್ರಿವೇಣಿಯವರ ಕುಟುಂಬವು ಸಾಹಿತ್ಯದ ಹಿನ್ನೆಲೆಯನ್ನು ಹೊಂದಿದೆ. ಬಿ.ಎಂ.ಶ್ರೀಯವರು ತ್ರಿವೇಣಿಯವರ ದೊಡ್ಡಪ್ಪ. ಹಾಗೆಯೇ ಪ್ರಖ್ಯಾತ ಕಾದಂಬರಿಗಾರ್ತಿಯಾದ ವಾಣಿ (ಬಿ ಎನ್ ಸುಬ್ಬಮ್ಮ) ಯವರು ತ್ರಿವೇಣಿಯವರ ಚಿಕ್ಕಮ್ಮ ಮತ್ತು ಹೆಸರಾಂತ ಕಾದಂಬರಿಗಾರ್ತಿಯಾದ ಆರ್ಯಾಂಬ ಪಟ್ಟಾಭಿ ಯವರು ಇವರ ತಂಗಿ.
ಶಾರದ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶಂಕರ್ ಅವರನ್ನು ತ್ರಿವೇಣಿಯವರು ವಿವಾಹವಾದರು. ಪತಿಯ ಪ್ರೋತ್ಸಾಹದಿಂದ ಸಣ್ಣ ಕಥೆಗಳನ್ನು ಬರೆಯಲು ಆರಂಭಿಸಿ ಕನ್ನಡ ಸಾಹಿತ್ಯ ರಂಗವನ್ನು ಪ್ರವೇಶಿಸಿದರು. ನಂತರದ ದಿನಗಳಲ್ಲಿ ತ್ರಿವೇಣಿ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದರು.
ತ್ರಿವೇಣಿಯವರ ಕಾದಂಬರಿಗಳು ಮಹಿಳೆಯ ಜೀವನ, ಮನಸ್ಸಿನ ತೊಳಲಾಟ, ಕುಟುಂಬ ಸಮಸ್ಯೆಗಳನ್ನು ಆಳವಾಗಿ ಚಿತ್ರಿಸುತ್ತದೆ. ಅವರ ಹೆಚ್ಚಿನ ಕೃತಿಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿದ್ದ ಕಟ್ಟುಪಾಡು, ಕಂದಾಚಾರ, ಮಹಿಳೆಯರಿಗೆ ನಡೆಯುವ ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿಯೆತ್ತಿರುವುದನ್ನು ಕಾಣಬಹುದು.
ಸ್ವಾವಲಂಬಿಯಾಗಿ ಸ್ವತಂತ್ರಳಾಗಿ ಬಾಳಬೇಕೆಂಬ ಆಸೆಯನಿಟ್ಟುಕೊಂಡಿದ್ದ ಹೆಣ್ಣಿನ ಬದುಕು ಪರಾವಲಂಬಿಯಾದರೆ, ಅವಳ ಬಾಳು ಎಷ್ಟು ಅಸಹನೀಯವಾಗುತ್ತದೆ ಎನ್ನುವುದನ್ನು ಚಿತ್ರಿಸಿದ ಕಾದಂಬರಿ “ಅಪಸ್ವರ”. ಇದು ಅವರ ಮೊದಲ ಕಾದಂಬರಿಯಾದರೂ, ವಿಧವೆಯಾಗಿ ಬಡತನದಿಂದ ಬಳಲಿದ ಅನಾಥೆಯೊಬ್ಬಳು ತನ್ನ ವಂಶದ ಕುಡಿಯನ್ನು ಸಾಕಲು ಬದುಕಿನೊಂದಿಗೆ ನಡೆಸುವ ಹೋರಾಟ, ಆ ಹೋರಾಟದ ಬದುಕಿನಲ್ಲಿ ಅವಳಿಗಾಗುವ ಶೋಷಣೆಯನ್ನು ಚಿತ್ರಿಸುವ “ಹೂವು ಹಣ್ಣು” ಕಾದಂಬರಿಯು ಮೊದಲು ಪ್ರಕಟವಾಯಿತು.
ಶರಪಂಜರ, ‘ಬೆಳ್ಳಿಮೋಡ’, ‘ಕೀಲುಗೊಂಬೆ, ‘ಹೃದಯ ಗೀತೆ, ‘ಬೆಕ್ಕಿನಕಣ್ಣು’, ‘ಬಾನುಬೆಳಗಿತು, ‘ಅವಳ ಮನೆ’, ‘ಕಾಶೀಯಾತ್ರೆ, ‘ಹಣ್ಣೆಲೆ ಚಿಗುರಿದಾಗ’, ‘ಹೂವು ಹಣ್ಣು’, ‘ಮುಕ್ತಿ’, ‘ದೂರದ ಬೆಟ್ಟ’, ‘ಅಪಸ್ವರ’, ‘ಅಪಜಯ’, ‘ತಾವರೆ ಕೊಳ’, ‘ಸೋತು ಗೆದ್ದವಳು’, ‘ಕಂಕಣ’, ‘ಮುಚ್ಚಿದ ಬಾಗಿಲು’, ‘ಮೊದಲ ಹೆಜ್ಜೆ’, ‘ವಸಂತಗಾನ’, ‘ಅವಳ ಮಗಳು’ ಸೇರಿದಂತೆ 21 ಕಾದಂಬರಿ ಹಾಗೂ 41 ಸಣ್ಣ ಕಥೆಗಳನ್ನು ಇವರು ರಚಿಸಿದ್ದಾರೆ.

ತ್ರಿವೇಣಿಯವರ ಸಣ್ಣ ಕತೆಗಳ ಸಂಕಲನವಾದ ‘ಸಮಸ್ಯೆಯ ಮಗು’ವಿಗೆ ‘ದೇವರಾಜ ಬಹದ್ದೂರ್ ಪ್ರಶಸ್ತಿ’ ಮತ್ತು ‘ಅವಳ ಮನೆ’ ಕಾದಂಬರಿಗೆ ರಾಜ್ಯ ಪ್ರಶಸ್ತಿ ದೊರಕಿದೆ. ‘ಅಪಸ್ವರ’ ಮತ್ತು ‘ಅಪಜಯ’ ಕಾದಂಬರಿಯನ್ನು ‘ತ್ರಿವೇಣಿ ಸಪ್ತಕ್’ ಎಂಬ ಹೆಸರಿನಲ್ಲಿ ಎಸ್. ಎಮ್. ರಾಮಸ್ವಾಮಿಯವರು ಹಿಂದಿಗೆ ಅನುವಾದ ಮಾಡಿದ್ದಾರೆ. ಮೀರಾ ನರ್ವೆಕರ್ ‘ಶರಪಂಜರ’ವನ್ನು ‘The mad women’ ಎಂಬ ಹೆಸರಿನಲ್ಲಿ ಇಂಗ್ಲೀಷಿಗೆ ಅನುವಾದಿಸಿದ್ದಾರೆ. ‘ಬೆಕ್ಕಿನ ಕಣ್ಣು’ ಕಾದಂಬರಿಯನ್ನು ಶರ್ವಾಣಿಯವರು ತೆಲುಗಿಗೆ ಅನುವಾದಿಸಿದ್ದಾರೆ.
ತ್ರಿವೇಣಿಯವರ ‘ಹಣ್ಣೆಲೆ ಚಿಗುರಿದಾಗ’, ‘ಬೆಳ್ಳಿಮೋಡ’, ‘ಶರಪಂಜರ’, ‘ಮುಕ್ತಿ’, ‘ಹೂವು ಹಣ್ಣು’ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರೇಕ್ಷಕರ ಮನದಲ್ಲಿ ಇಂದಿಗೂ ಅಚ್ಚೊತ್ತಿದೆ.
ತ್ರಿವೇಣಿಯವರು ತಮ್ಮ 35 ನೇ ವಯಸ್ಸಿನಲ್ಲಿ, (ಜುಲೈ 29 1963 ರಲ್ಲಿ) ತಮ್ಮ ಹನ್ನೊಂದು ದಿನದ ಹೆಣ್ಣು ಮಗುವನ್ನು ಹಾಗೂ ಅಪಾರ ಸಂಖ್ಯೆಯ ಸಾಹಿತ್ಯ ಪ್ರೇಮಿಗಳನ್ನು ಬಿಟ್ಟು ಇಹಲೋಕವನ್ನು ತ್ಯಜಿಸಿದರು. ಇದರಿಂದ ಕನ್ನಡ ಸಾಹಿತ್ಯ ಲೋಕವು ಅನರ್ಘ್ಯ ರತ್ನವೊಂದನ್ನು ಕಳೆದುಕೊಂಡು ಬರಿದಾಯಿತು.
ತ್ರಿವೇಣಿ ಅವರು ಕನ್ನಡದ ಮಹಿಳಾ ಕಾದಂಬರಿಗಾರ್ತಿಯರಲ್ಲಿ ಮುಂಚೂಣಿಯ ಸ್ಥಾನವನ್ನು ಪಡೆದವರು. ಆಧುನಿಕ ಕನ್ನಡ ಕಾದಂಬರಿಯ ಬೆಳವಣಿಗೆಯಲ್ಲಿ ಅವರು ನೀಡಿದ ಕೊಡುಗೆ ಅಪ್ರತಿಮ. ಅವರ ಕೃತಿಗಳು ಇಂದಿಗೂ ಓದುಗರ ಮನಸ್ಸನ್ನು ತಟ್ಟುತ್ತವೆ.
- ಚೇತನ ಭಾರ್ಗವ – ಅರಮನೆತೋಟ.
