ಆತ್ಮಶುದ್ಧಿಗೆ ಅಧ್ಯಾತ್ಮಿಕ ಚಿಂತನೆ ಬೇಕು ಎಂದು ಶ್ರೀಕೃಷ್ಣನೇ ತಿಳಿಸಿರುವನು. ಕಾರಣ ಶ್ರೀ ಹರಿಯ ಕಥಾ ಶ್ರವಣ ಅದರಲ್ಲಿಯ ಅಮೃತಸಾರವನ್ನು ಪಾನ ಮಾಡಬೇಕೆಂದು ಶ್ರೀ ಜಗನ್ನಾಥದಾಸರು ಸುಂದರ ದೃಷ್ಟಾಂತದಿಂದ ತಿಳಿಸಿದ್ದಾರೆ. ಲೇಖಕರಾದ ಸಂಧ್ಯಾ ಟಿ ಅವರು ಹರಿ ಕಥಾಮೃತಸಾರ ಮಹತ್ವವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
//ನಾಹಂ ಕರ್ತಾ ಹರಿ: ಕರ್ತಾ//
ಶ್ರೀ ಗುರುಭ್ಯೋ ನಮಃ ಶ್ರೀ ಹರಿಯೆ ನಮಃ
ಹಿಂದಿನ ಸಂಚಿಕೆಯಲ್ಲಿ ಸಾಂಶರು, ದೀಪ, ಅನುಸಂಧಾನ ಹಾಗೂ ನಾಮಗಳ ಮಹತ್ವ ತಿಳಿದಿದ್ದಾಗಿದೆ. ಹರಿಕಥಾ ಎಂಬುವುದು ಸುಮ್ಮನೆ ಹೇಳುವ ಕಥಾ ಅಲ್ಲ. ನಿತ್ಯವೂ ನಿರಂತರವೂ ನಡೆಯುವ ಸನಾತನದಿಂದ “ಹರಿ” ದು ಬಂದಿರುವ ಅಮೃತ ಸಾರವು ನಾವು ಕೆಲವು ದಿನಗಳಿದ್ದು ಹೋಗಲು ಬಂದಿರುವ ಬಾಡಿಗೆದಾರರು. ನಾವು ಹೋದ ಮೇಲೆ ಕಥೆಯಾಗುತ್ತೇವೆ. ನಮ್ಮ ಕಥೆ ಕೆಲವು ದಿನ ಮಾತ್ರ ಮರೆಯುವ ಕಥೆ ನಮ್ಮದು. ಇದನ್ನು ಭಗವದ್ಗೀತೆಯಲ್ಲಿ ಅರ್ಜುನನು ಮಾನಸಿಕವಾಗಿ ಗೊಂದಲದಲ್ಲಿರುವಾಗ ಶ್ರೀ ಕೃಷ್ಣನು ಅರ್ಜುನನಿಗೆ ಹೇಳಿರುವನು.
ಯಾವುದರಿಂದ ಈ ಸಂಪೂರ್ಣ ದೃಶ್ಯ, ಜಗತ್ತು ವ್ಯಾಪ್ತವಾಗಿದೆಯೋ ಅದನ್ನು ನಾಶರಹಿತವೆಂದು ತಿಳಿ. ಅವಿನಾಶಿಯ ವಿನಾಶವನ್ನು ಯಾರೂ ಮಾಡಲಾರರು. ಎಲ್ಲ ಜೀವಿಗಳಲ್ಲಿ ನನ್ನ ಅಂಶವನ್ನು ಇಟ್ಟು ಜೀವಾತ್ಮ ಎನಿಸಿರುವೆ. ಅಂತಹ ಆತ್ಮಗಳು ಎಂದಿಗೂ ಸಾಯುವುದಿಲ್ಲ. ಆತ್ಮನಿಗೆ ಕವಚವಾಗಿರುವ ಸ್ಥೂಲ ಶರೀರವು ಮಾತ್ರ ನಾಶವಾಗಿ ಮತ್ತೆ ಹೊಸ ಶರೀರದಲ್ಲಿ ನಿತ್ಯನಾದ ಆತ್ಮನು ಸೇರುತ್ತಾನೆ. ಈ ಸಂಸಾರ ಬಂಧನದಲ್ಲಿರುವ ಜೀವಿಗಳಲ್ಲಿ ವಾಸವಾಗಿರುವದರಿಂದ ನಾನು ವಾಸುದೇವನು. ನೀನು ಹಿಂದೆಯೂ ಇದ್ದಿ ಮುಂದೆಯೂ ಇರುತ್ತಿ ಆದರೆ ಹಿಂದಿನ ನೆನಪು ಮಾತ್ರ ಇರುವುದಿಲ್ಲ. ಅವಿನಾಶವಾದ ಅಗೋಚರವಾದ, ಸನಾತನವಾದ, ದೋಷವರ್ಜಿತವಾದ, ವ್ಯಾಪ್ತವಾದ ನಿರಂತರ ಎಚ್ಚರವಾದ ಸದಾ ಕರ್ಮದಲ್ಲಿ ತೊಡಗಿದ ನನಗೆ ಎಲ್ಲವೂ ತಿಳಿದಿರುತ್ತದೆ. ನಿನ್ನ ಮುಂದಿನ ಜನ್ಮವು ಆತ್ಮಶುದ್ಧವಾಗಿರಬೇಕೆಂದರೆ ಧರ್ಮ ಕಾರ್ಯ ಮಾಡಲೇಬೇಕು. ಕಾರಣ ಧರ್ಮ ಯುದ್ಧದಲ್ಲಿ ಹಿಂಸೆ ಪರಿಗಣಿಸುದಿಲ್ಲ.ಅಧರ್ಮ ಯುದ್ಧವು ಹಿಂಸೆಯಾಗಿರುತ್ತದೆ. ಆತ್ಮಶುದ್ಧಿಗೆ ಅಧ್ಯಾತ್ಮಿಕ ಚಿಂತನೆ ಬೇಕು ಎಂದು ಶ್ರೀಕೃಷ್ಣನೇ ತಿಳಿಸಿರುವನು. ಕಾರಣ ಶ್ರೀ ಹರಿಯ ಕಥಾ ಶ್ರವಣ ಅದರಲ್ಲಿಯ ಅಮೃತಸಾರವನ್ನು ಪಾನ ಮಾಡಬೇಕೆಂದು ಶ್ರೀ ಜಗನ್ನಾಥದಾಸರು ಸುಂದರ ದೃಷ್ಟಾಂತದಿಂದ ತಿಳಿಸಿದ್ದಾರೆ.ಕಮಲದ ಹೂವಿನ ಕೆಳಗಿರುವ ಕಪ್ಪೆಗೆ ಅದರ ಸ್ವಾದ ಗೊತ್ತಿರುವುದಿಲ್ಲ.ಆದರೆ ಎಲ್ಲೋ ಇರುವ ದುಂಬಿಯು ಪುನಃ ಪುನಃ ಬಂದು ಹೂವಿನ ಸ್ವಾದಭರಿತ ರಸವನ್ನು ತೆಗೆದುಕೊಂಡು ಉಲ್ಲಾಸದಿಂದ ಇರುತ್ತದೆ. ಅದರಂತೆ ಭವಸಾಗರದ ದುಃಖ ಪರಿಹಾರಕ್ಕಾಗಿ “ಹರಿ”ಸ್ಮರಣೆ ಮಾಡಬೇಕು.

ಮೊದಲು ಪರಮಾತ್ಮನಲ್ಲಿ ಸಂಶಯ ಪಡಬಾರದು. ಆತ್ಮ – ಪರಮಾತ್ಮನ ಸಂಹಿತೆಯ ಎಳೆಯನ್ನು ಮರೆಯಬಾರದು. ನಿತ್ಯ ಎಲ್ಲರೂ ದೇವರ ಪ್ರತಿಮೆಯ ಪೂಜೆ ಮಾಡುವರು. ಪ್ರತಿಮೆಯಲ್ಲಿ ೫೧೩ ಪರಮಾತ್ಮನ ರೂಪಗಳಿವೆ ಎಂದು ಚಿಂತನೆ ಮಾಡಬೇಕು.ಜೊತೆಗೆ ನಮ್ಮ ಶರೀರದಲ್ಲಿರುವ ಪರಮಾತ್ಮನನ್ನು ಚಿಂತನೆ ಮಾಡಬೇಕು.ಅಕ್ಷರಗಳು ಹಾಗೂ ಸಂಖ್ಯೆಗಳು ಅಪೌರುಷೇಯವಾದವುಗಳು. ಅಧ್ಯಾತ್ಮಿಕದಲ್ಲಿ ಅವು ತುಂಬಾ ಮೌಲ್ಯವಾಗಿವೆ.ಅಕ್ಷರಗಳಲ್ಲಿ ಲಕ್ಷ್ಮೀ ಸಹಿತ ನಾರಾಯಣನ ರಹಸ್ಯವಾದ ಶಕ್ತಿ ತುಂಬಿರುವದು.ಸಂಖ್ಯೆಗಳಲ್ಲಿ ಶ್ರೀ ಹರಿಯ ಅದ್ಭುತ ಮಹಮೆಯು ಪರಿವಾರ ಸಹಿತ ತುಂಬಿರುವುದು.
ನೈವೇದ್ಯ ಇದು ಪೂಜೆಯ ಪ್ರಮುಖ ಅಂಗವಾಗಿದೆ. ಪ್ರತಿಮೆಯ ಜಲಾಭಿಷೇಕ ಪುಷ್ಪ ಪತ್ರೆ ಮುಂತಾದವಗಳನ್ನು ಅರ್ಚಿಸಿದಮೇಲೆ ನಮ್ಮಲ್ಲಿರುವ ಕೋಪ ದುರಾಸೆ, ಸಂಶಯವನ್ನು ನಾಶಮಾಡೆಂದು ಪ್ರಾರ್ಥಿಸುತ್ತ ಧೂಪಾರ್ತಿಯನ್ನು ಮಾಡಬೇಕು. ನಂತರ ನೀರಿನಿಂದ ನೆಲದ ಮೇಲೆ ಚೌಕಾಕಾರದ ಮಂಡಲ ಮಾಡಿ. ಅದರ ಮೇಲೆ ನೈವೇದ್ಯದ ತಟ್ಟೆಯನ್ನು ಇಟ್ಟು
ಶುದ್ಧವಾದ ನೀರಿನಿಂದ ಪ್ರೋಕ್ಷಣೆ ಮಾಡಿ ಆಮೇಲೆ ಎರಡು ಹಸ್ತದಿಂದ ನೈವೇದ್ಯದ ಪದಾರ್ಥಗಳ ಮೇಲೆ ಆರು ಮುದ್ರೆಗಳನ್ನು ತೋರಿಸಬೇಕು. (ಧೇನು ಮುದ್ರೆ ಇದರಿಂದ ಅಮೃತ ಪ್ರಾಪ್ತವಾಗುತ್ತದೆ. ಗರುಡ ಮುದ್ರೆಯಿಂದ ವಿಷದ ಅಂಶ ಇದ್ದರೆ ಪರಿಹಾರ ಚಕ್ರ ಮುದ್ರೆಯಿಂದ ದೈತ್ಯಗಣಗಳಿಂದ ರಕ್ಷಣೆ. ಶಂಖ ಮುದ್ರೆಯಿಂದ ಪವಿತ್ರ. ಗದಾ ಮುದ್ರೆಯಿಂದ ದಿಗ್ಬಂಧನ,ಕೊನೆಯ ಮೇರು ಮುದ್ರೆಯಿಂದ ಅಕ್ಷಯವಾಗುವದು ಎಂದು ಅನುಸಂಧಾನ ಮಾಡಬೇಕು. ನಂತರ ಪರಮಾತ್ಮನಿಗೆ ಆಪೋಶನ ನೀಡಿ ಹರಿಯು ನೀಡಿದ್ದನ್ನೆ ಶ್ರೀ ಹರಿಗೆ ಭಕ್ತಿಯಿಂದ ಸಮರ್ಪಿಸಿ ಕೃತಾರ್ಥರಾಗಬೇಕು.ಸಾಧ್ಯವಾದಲ್ಲಿ ನಿತ್ಯ ತಾಂಬೂಲವನ್ನಿಟ್ಟರೆ ಇನ್ನೂ ಶ್ರೇಷ್ಠ.
ಸಾಧ್ಯವಾಗದಿದ್ದರೆ ಹಾಲು, ನೀರು, ಹಣ್ಣು ಬೆಲ್ಲ ತುಪ್ಪ ಮೇಲೆ ತುಳಸಿ ಇಟ್ಟು ಕಣ್ಣು ಮುಚ್ಚಿ ಏಳು ಸಾರೆ ಶ್ರೀ ಕಪಿಲಾಯನಮ: ಐದು ಸಾರೆ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ ಎಂದು ಪ್ರಾರ್ಥಿಸಿ ಯಾವ ಪ್ರತಿಮೆಗೆ ಅರ್ಪಿಸುತ್ತೀರೋ ಆ ನಾಮವನ್ನು ಹೇಳಿ ನೈವೇದ್ಯ ಸಮರ್ಪಣೆ ಮಾಡಬೇಕು.ನಂತರ ಪರಮಾತ್ಮನಲ್ಲಿ ಭಕ್ತಿ ಜ್ಞಾನ ಲೌಕಿಕ ವೈರಾಗ್ಯ,ಆರೋಗ್ಯ ಸಂಪತ್ತನ್ನು ಕೇಳಬೇಕು ಮತ್ತು ಅನಾಯಾಸ ಮರಣಂ, ವಿನಾ ದೈನೇನ ಜೀವನಂ ಅಂತ್ಯಕಾಲೇ ತವ ಸಾನಿಧ್ಯಂ ಕುರುಂ ಮೆ ಪರಮೇಶ್ವರ ಎಂದು ಪ್ರಾರ್ಥಿಸಿ ನಮ್ಮಿಂದ ಏನಾದರೂ ಅಪರಾಧ ಆಗಿದ್ದರೆ ಕ್ಷಮೆ ಇರಲಿ ಎಂದು ಪ್ರಾರ್ಥಿಸಬೇಕು.
ಕ್ಷಮಾಪಣೆ ಸ್ತೋತ್ರ ಹೇಳಿ ಕೊನೆಗೆ ಕಾಯಾ ವಾಚಾ ಮನಸಾ ಮಾಡಿದ ಕರ್ಮಗಳನ್ನು ಶ್ರೀಹರಿಗೆ ಸಮರ್ಪಣೆ ಮಾಡಬೇಕು.
ಶ್ರೀ ಪುರಂದರದಾಸರು ರಚಿಸಿದ ಕೃತಯಂತೆ “ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ”ಎಂಬುದು ಸತ್ಯ.ನಿತ್ಯ ಮಾಡುವ ಕರ್ಮಗಳಲ್ಲಿ ಸತ್ಯ, ಧರ್ಮ, ಪ್ರೀತಿ ತುಂಬಿದ ತುಂಬಿದ ಕಾರ್ಯಗಳು ಶ್ರೇಷ್ಠವಾದವುಗಳು. ಇವು ಧರ್ಮ ಸಾಧನೆ ಎನಿಸುತ್ತವೆ. ದುರಾಸೆ, ದ್ವೇಷ, ಅಹಂಕಾರ ಮುಂತಾದ ಕರ್ಮಗಳಿಗೆ ದಲಿತ ಎನ್ನುವರು.ದ ಎಂದರೆ ದನುಜ ಲಿ ಎಂದರೆ ಲೀಲೆಗಳು (ಕ್ರಿಯೆ) ಅವು ತ ಎಂದರೆ ತಾರಕವಾಗಿರುತ್ತವೆ ಮಾನವನು ದಲಿತನಲ್ಲ ಮಾಡುವ ಕರ್ಮಗಳಿಂದ ದಲಿತನಾಗುವನು.ಇದೆ ಕಾಲನ ತೋಟದಲ್ಲಿ ಹುಟ್ಟುವ ಸ್ವಾತ್ವಿಕ ಅಸ್ವಾತಿಕ ಹೂವುಗಳು.ಕರ್ಮಗಳಲ್ಲಿ ಅನುಸಂಧಾನ, ಕೃತಜ್ಞತೆ ಇರುವುದೇ ಮನುಸ್ಮೃತಿ. ಇವು ಜೀವನದ ಮೌಲ್ಯಗಳು.ಮಾನವನು ತಪ್ಪು ಮಾಡುವುದು ಸಹಜ. ತಿದ್ದಿಕೊಳ್ಳುವುದು ಧರ್ಮ.
ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ದ್ವಂದ್ವ ಜಾತಿಗಳಿರುವವು. ದನುಜನಾಗದೆ ಮನುಜನಾಗುವುದೆ ಮನುಸ್ಮೃತಿ. ಮಹಾಭಾರತ, ರಾಮಾಯಣ, ಭಗವದ್ಗೀತೆ ಅನೇಕ ಪುರಾಣಗಳು ಜನಿಸಿದ್ದು ತಪ್ಪನ್ನು ಒಪ್ಪಿಕೊಂಡು ಮತ್ತೆ ಆಗದಂತೆ ಎಚ್ಚೆತ್ತು ಕೊಳ್ಳಲು. ಇವೆಲ್ಲವುಗಳಿಗೆ ವೇದವು ಮೂಲ. ವೇದವೆಂದರೆ ಲಕ್ಷ್ಮೀ ಸರಸ್ವತಿ ಭಾರತೀ ಪಾರ್ವತಿಯ. ಅಂದರೆ ಜ್ಞಾನ, ವಿದ್ಯೆ, ಭಕ್ತಿ ಸೌಭಾಗ್ಯ ದಿಂದ ಕೂಡಿದ ಕೃತಿ. ಪರಮಾತ್ಮನ ಅವತಾರ ಸಂಭೂತರಾದ ಶ್ರೀ ವೇದವ್ಯಾಸರುರಿಂದ ಬಂದ ಕೃತಿ. ಅದಕ್ಕೆ ಅವು ಅಪೌರೇಷ ಎನಿಸಿವೆ. ಎಲ್ಲರಿಗೂ ವೇದವ್ಯಾಸರು ಮತ್ತು ಗಣಪತಿಯು ಜ್ಞಾನ ಸಂಪತ್ತನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಈ ಸಂಚಿಕೆಯನ್ನು ಮುಗಿಸುತ್ತೇನೆ.
ಚಿತ್ತದಲಿ ನೀ ನಿಂತು ಕ್ರಿಯೆಯ ಮಾಡಿಸು ಶ್ರೀದ:
ನಿತ್ಯದಲಿ ನಿನ್ನ ಸ್ಮರಿಸುವ ಭಾಗ್ಯ ಕೊಡು ಶ್ರೀಶ:
ಸರ್ವರನು ಸಜ್ಜನರನು ಪಾಲಿಸೋ ಶ್ರೀ ಧರ
ಗರ್ವವನು ಸರಿಸಿ ರಕ್ಷಿಸು ಶ್ರೀ ಕರ
ಲೋಕೋದ್ಧಾರನೆ ನೀನು ಲೋಕತ್ರಯಾಶ್ರಯ
ಮುಕ್ತನನ್ನಾಗಿ ಮಾಡು ಶ್ರೀ ವಿಭಾವನ
ನೀತಿ ನಿಯಮ ಕರುಣಿಸು ಶ್ರೀಮಾನ್
ಪ್ರೀತಿ ಶೃದ್ಧೆಯ ತಿಳುಹೋ ಶ್ರೀ ನಿವಾಸ
ಮಾತರಿಶ್ವಾಂತರ್ಗತ ಶ್ರೀಹರಿ ಶ್ರೇಯನೆ
ಆರು ಸಂಪತ್ತುಗಳ ನೀಡೋ ಶ್ರೀನಿಧಿಯೆ
ಶ್ರೀ ಕೃಷ್ಣಾರ್ಪಣ ಮಸ್ತು.
ಹರಿ ಕಥಾಮೃತಸಾರ ಹಿಂದಿನ ಸಂಚಿಕೆಗಳು:
- ಹರಿ ಕಥಾಮೃತಸಾರ (ಭಾಗ – ೧)
- ಹರಿ ಕಥಾಮೃತಸಾರ (ಭಾಗ – ೨)
- ಹರಿ ಕಥಾಮೃತಸಾರ (ಭಾಗ – ೩)
- ಹರಿ ಕಥಾಮೃತಸಾರ (ಭಾಗ – ೪)
- ಹರಿ ಕಥಾಮೃತಸಾರ (ಭಾಗ – ೫)
- ಹರಿ ಕಥಾಮೃತಸಾರ (ಭಾಗ – ೬)
- ಹರಿ ಕಥಾಮೃತಸಾರ (ಭಾಗ – ೭)
- ಹರಿ ಕಥಾಮೃತಸಾರ (ಭಾಗ – ೮)
- ಸಂಧ್ಯಾ ಟಿ – ಲೇಖಕರು, ಕವಿಗಳು, ಬೆಂಗಳೂರು.
